ಚುನಾವಣೆ:ಸುಮನ್ ದೇಸಾಯಿ



ಲೊಕಲ ಎಲೆಕ್ಷನ್ ದಿನಗೊಳ ಹತ್ರ ಬರಲಿಕತ್ತಿದ್ವು.ಜಬರದಸ್ತ ಪ್ರಚಾರ ಶೂರು ಆಗಿದ್ವು. ಸಣ್ಣ ಮಕ್ಕಳಿಂದ ಹಿಡದು ಹರೆದ ಹುಡುಗುರು ಸುಧ್ಧಾ ಓಣ್ಯಾಗೆಲ್ಲಾ " ಅಕ್ಕಾ ಅಕ್ಕಾ ಶಾಣ್ಯಾಕಿ… ಪಕ್ಷಕ್ಕ ಓಟ ಹಾಕಾಕಿ, ಮಾಮಾ ಭಾಳ ಶಾಣ್ಯಾಂವಾ… ಪಕ್ಷಕ್ಕ ಓಟ ಹಾಕಾಂವಾ, ಅಂಥೇಳಿ ಒದರಿಕೊತ ಪ್ರಚಾರ ಮಾಡಕೊತ ಅಡ್ಯಾಡಲಿಕತ್ತಿದ್ರು. ಎಲೆಕ್ಷನ್ ಅಂದ್ರ ಎಲ್ಲಾಕಡೆ ಅದೊಂದ ಥರಾ ಲಹರಿನ ಬ್ಯಾರೆ ಇರತದ. ಮನಿ ಮನಿಗೆ ಹೋಗಿ ಪ್ರಚಾರ ಮಾಡೊದು ನಡದಿತ್ತು. ಒಳಗಿಂದೊಳಗ ನಮಗ ಓಟ ಹಾಕ್ರಿ ಅಂಥೇಳಿ ಆಣಿ ಪ್ರಮಾಣಾ ಮಾಡಿಸ್ಕೊಳ್ಳೊದು ನಡದಿತ್ತು.ಇಗಿನಕಾಲದಾಗ ಆಣಿ-ಪ್ರಮಾಣಕ್ಕೆಲ್ಲಾ ಎನ ಅಂಥಾಪರಿ ಕಿಮ್ಮತ್ತ ಇಲ್ಲಾ. ಮಾತ ಕೊಟ್ಟಂಘ ನಡಕೊಳ್ಳೊ ಕಾಲಾ ಎಂದೊ ಸತ್ತ ಹೋಗೆದ. ಇಗೇನಿದ್ರು ತಮ್ಮ ಫಾಯದೆ ನೋಡ್ಕೊಳ್ಳೊಕಾಲಾ ಅಷ್ಟ. ಎಲ್ಲಾರಿಗು ನಿಮಗ ಓಟ ಹಾಕತೇವಿ ಕಾಳಜಿ ಬಿಡ್ರಿ ಅಂಥೇಳಿ ರೊಕ್ಕಾ ಇಸಕೊಂಡ ಆಮ್ಯಾಲೆ ಯಾವದಕ್ಕೊ ಒಂದಕ್ಕ ಒತ್ತಿ ಕಾಡೊದೇವರ ಕಾಟಾ ಕಳಕೊಂಢಂಗ ಮಾಡಿ ಕೈತೊಳ್ಕೊತಾರ. ಒಬ್ಬರ ಹಿಂಬಾಲ ಪ್ರಚಾರ ಮಾಡಕೊತ ಬಾಲಂಗೊಚಿ ಹಂಗ ಅಡ್ಡ್ಯಾಡೊವರನ ಒಳ್ಗೊಳ್ಗ ಇನ್ನೊಂದ ಪಾರ್ಟಿಗೆ ಸಹಾಯ ಮಾಡತಿರ್ತಾರ. ಚಹಾ-ಪಾಣಿ ಒಬ್ಬರ ಖರ್ಚಿನ್ಯಾಗ ಮಾಡೊದು ,ಗೆದ್ದ ಆರಿಸಿಬರಲಿ ಅಂತ ಪ್ರಚಾರ ಮಾಡೊದು ಮತ್ತೊಬ್ಬರ ಸಲುವಾಗಿ. ಈ ಇಲೆಕ್ಷನ್ ಹೊತ್ತಿನ್ಯಾಗನ ಮಂದಿ ತಮ್ಮ ಸಣ್ಣ-ಪುಟ್ಟ ದ್ವೇಷ, ಜಗಳಗೊಳ ಸೇಡ ತಿರಿಸ್ಕೊಳ್ಳವರು ಇರತಾರ. ನನ್ನ ಪ್ರಕಾರ ಊರಾಗ ಯಾರ ನಮ್ಮವರು ನಮ್ಮ ಹಿತೈಷಿಗೊಳ ಇದ್ದಾರಂತ ತಿಳ್ಕೊಕೊಬೇಕಾಗಿದ್ರ ಒಂದ ಸಲಾ ಜರೂರ ಇಲೆಕ್ಷನ್ನಿಗೆ ನಿಂದರಬೇಕು. ನಮ್ಮ ಮುಂದ ನಮ್ಮಂತ ಬಾರಿಸಿ ಮತ್ತೊಬ್ಬರ ಮುಂದ ಅವರಂತ ಬಾರಿಸಿ ಎರಡು ಕಡೆ ಸಾಚಾ ಆಗಿ ತಮ್ಮ ಬ್ಯಾಳಿ ಬೆಯಿಸ್ಕೊಳ್ಳೊವರ ಭಾಳ ಮಂದಿ ಇರತಾರ.

ದಿನಾ ಸಂಜಿಮುಂದ ಒಬರಾದಿಂದ ಒಬ್ಬರ ಬಂದು ಈ ಪ್ರಚಾರ ಮಾಡೋದನ್ನ ನೋಡೊದನ ಒಂದ ರೀತಿ ಟೈಮ್ ಪಾಸ್ ಆಗತಿತ್ತು. ಈ ಸಲಾ ನಮ್ಮ ವಾರ್ಡಿಗೆ ಯಾರ್ಯಾರ ನಿಂತಾರ ಅಂತ ಯಾರನ್ನರ ಕೇಳ್ಬೇಕನ್ನೊದ್ರಾಗ ಎದುರಿಗೆ ಬಾಜು ಮನಿ ಹುಡಗಾ ಪ್ರವೀಣ ಬಂದಾ, ಅವನ್ನ ಕೇಳಿದ್ರಾತಂತ  "  ಪವಣ್ಣಾ ಯಾರ್ಯಾರ ನಿಂತಾರೊ ಈ ಸಲಾ ಅಂತ ಕೇಳಿದೆ" ಅದಕ್ಕ ಆಂವಾ " ಪಾಟೀಲರ ಬಸಪ್ಪ, ಜೈನಾಪೂರ ಖಾಜಪ್ಪ, ಗುರು ಬಸಪ್ಪ ಶಿಂದೆ,ಶಾಂತಪ್ಪ ಶೆಟ್ಟರ್, ಮತ್ತ ಜೋಶಿ ವೇಂಕಣ್ಣಾರ ನಿಂತಾರ ರಿ ವೈನಿಯವರ " ಅಂದ. ಹಂಗಿದ್ರ ಜಬರದಸ್ತ ಕಾಂಪಿಟೇಶನ್ನನ ಅದ ಅನ್ನು  ಅಂದೆ, ಅದಕ್ಕ ಆಂವಾ " ಹೌದರಿ ಅದ್ರ ಗೆಲ್ಲೊದ ಮಾತ್ರಾ ಜೈನಪೂರ ಖಾಜಪ್ಪನ ರಿ , ಅಂದ. ಅದೂ ಖರೆನ ಅನಿಸ್ತು, ಈ ಖಾಜಪ್ಪ ಪ್ಯಾಟ್ಯಾಗಿನಾವಾ ಬ್ಯಾರೆ ವಾರ್ಡಿನಾವಾ, ಅವರ ಜಾತಿ ಮಂದಿಯ ಜನಸಂಖ್ಯಾ ನಮ್ಮ ವಾರ್ಡಿನ್ಯಾಗ ಭಾಳ ಅದ ಅಂತ ಇಲ್ಲೆ ಬಂದ ಇಲೆಕ್ಷನ್ನಿಗೆ ನಿಂತಿದ್ದಾ. ಆಂವಾ ಎಲ್ಲಿಯಾಂವರ ಇರಲಿ ತಮ್ಮ ಜಾತಿಯಾಂವ ಇದ್ರ ಸಾಕ ಗೆದಿಸಿ ಕಳಸೊ ಅಂಥಾ ಒಗ್ಗಟ್ಟು ಅವರಲ್ಲೆ ಅದ. ಅದನ್ನ ಮಾತ್ರ ಮೆಚ್ಚಬೇಕಾದ್ದ ಸಂಗತಿ. ಹೋದ ಸಲಾದ ಇಲೆಕ್ಷನ್ನಿನ್ಯಾಗನು ಹಿಂಗಾ ಆಗಿತ್ತ, ನೇಕಾರ ಓಣ್ಯಾಗಿನ ಹುಸೇನಸಾಬರು ನಿಂತಿದ್ರು.ಬ್ಯಾರೆ ಓಣ್ಯಾಗಿನವರಾಗಿದ್ರು ತಮ್ಮ ಜಾತಿ ಮಂದಿ ಅನ್ನೊ ಅಭಿಮಾನದಿಂದ ಗೆದಿಸಿ ಕಳಸಿದ್ರು. ಮುಂದ ಆಂವಾ ಇತ್ಲಾಕಡೆ ಹಣಿಕಿ ಹಾಕಿ ಸುಧ್ಧಾ ನೋಡಲಿಲ್ಲಾ. ಎನ ಅನುಕೂಲ ಮಾಡಕೊಳ್ಳೊದೆಲ್ಲಾ ತಮ್ಮ ಓಣಿಗೆ ಮಾಡಕೊಂಡಾ,ಅತ್ಲಾಕಡೆ ಹಳಪ್ಯಾಟ್ಯಾಗ ತಮ್ಮ ಬೀಗರ ಓಣ್ಯಾಗಿಷ್ಟ ರಸ್ತೆ ವಾಗತ್ತಿ ಮಾಡಿಸಿಕೊಂಡ ಇತ್ಲಾಕಡೆ ನಮ್ಮ ಓಣಿಗೆ ತಲಿ ಹಾಕದ ಸುಮ್ನ ಕೂತಬಿಟ್ಟಾ.. ಈಗ ೬ ತಿಂಗಳ ಹಿಂದ ಸತ್ತು ಹೋದಾ. ಇಲ್ಲಿಯವರು ಓಟ ಹಾಕಿ ಗೆದಿಸಿ " ಬಕಬಾರಲೆ ಬಿದ್ದ ಓಟ ಕೇಳಾಕ ಬಂದಾ, ಈಗ ಬಾಯಾಗ ಮಣ್ಣ ಹಾಕಿಸಿಕೊಂಡ ಹೋದಾ " ಅಂತ ಹಾರಾಡ್ಕೊತ ಬಾಯಿ ತಕ್ಕೊಂಡು ಕೂತರು.

ಅಲ್ಲಾ ಮತ್ತ ನಮಗ ಹೊತ್ತಿಗೆ ಯಾರ ಆಗತಾರ, ನಮಗ ತ್ರಾಸ ಅದ ಅಂದ್ರ ಯಾರ ನಮಗ ಸಹಾಯ ಮಾಡತಾರ ಅಂಥವರನ್ನ ಆರಿಸಿ ತರಲಾರದ ಹೊರಗಿನವರನ್ನ ಗೆದಿಸಿದ್ರ ಮತ್ತ ಏನಾಗತದ. ಖರೆಅಂದ್ರ ಹೊದಸಲಾ ಹೊರಗಿಂದ ಹುಸೇನಸಾಬರು ನಿಂತಾಗ ನಮ್ಮ ಓಣ್ಯಾಗ ಎಲ್ಲಾ ಹಿರಿಯಾರು ಹಣಮಪ್ಪನ ಗುಡಿಯೊಳಗ ಮಿಟಿಂಗ ಮಾಡಿ ಮಾತಾಡಕೊಂಡ ನಮ್ಮ ಓಣಿ ಪರವಾಗಿ ವೆಂಕಣ್ಣ ಜೋಶಿನ್ನ ಎಲೆಕ್ಷನ್ನಿಗೆ ನಿಂದರಿಸಿ ಆರಿಸಿ ತರೊದಂತ ಒಮ್ಮತದಿಂದ ನಿರ್ಧಾರ ಮಾಡಿದ್ರು. ಇನ್ನೆನ ನಾಮಪತ್ರ ಕೊಡೊ ಕಡಿದಿವಸ ಪರಪ್ಪ ತಾನು ನಿಂದರತೇನಿ ಅಂದು ಯಾರನು ಕೇಳದ ನಾಮಪತ್ರ ಕೋಟ್ಟ ಬಿಟ್ಟಾ.. ಹಿರಿಯಾರ ಅನಿಸ್ಕೊಂಡವರು ವಿಚಾರನು ಮಾಡಲಿಲ್ಲಾ. ಆಮ್ಯಾಲೆ ಗೊತ್ತಾತು ಎಲ್ಲಾ ಒಳಗಿಂದೊಳಗ ರೊಕ್ಕಾ ತಗೊಂಡು ಓಟ ಒಡಸಲಿಕ್ಕೆನ ಪರಪ್ಪನ್ನ ನಿಂದರಿಸಿದ್ರು ಅಂತ. ಅಲ್ಲಾ ಊರಾಗ ಈ ಮಂದಿ ಯಾರರ ಸತ್ರಾಗಲಿ,ಕೆಟ್ರಾಗಲಿ, ಛೊಲೊದಿರಲಿ, ಕೆಟ್ಟದ್ದಿರಲಿ, ಸರಹೊತ್ತ ರಾತ್ರ್ಯಾಗ ಹೋಗಿ ಬಾಗಲಾ ಬಾರಿಸಿ ಸಹಾಯ ಕೇಳೊದು ಜೋಶಿ ವೇಂಕಣ್ಣನ ಹತ್ರನ. ಅಂಥಾದ್ದ ಆಂವಗ ಬೆನ್ನಾಗ ಚೂರಿ ಹಾಕೊ ಕೆಲಸಾ ಮಾಡಿದ್ರು. ಪಾಪ ವೆಂಕಣ್ಣ ಯಾರ ಎನ ಸಹಾಯ ಕೇಳಿದ್ರು ಇಲ್ಲಾ ಅಂತ ಒಂದ ದಿನಾ ಬಾಯಾಗ ಬರಂಗಿಲ್ಲಾ ಬೇಕಂದ್ರ ಮೈಮ್ಯಾಲಿನ ಅರಬಿ ಸುಧ್ಧಾ ತಗದಕೊಟ್ಟ ಬರೊ ಅಂಥಾ ಒಳ್ಳೆ ಮನಷ್ಯಾಗ ಮೊಸಾ ಮಾಡಿದ್ರು ಈ ಮಂದಿ. ಕಡಿಕೆ ಆರಿಸಿ ಬಂದದ್ದ ನೇಕಾರ ಓಣಿ ಹುಸೇನಸಾಬರನ. ಖರೇನು ಅವರಲ್ಲೆ ಭಾಳ ಒಗ್ಗಟ್ಟ ಇರತದ.

ನೋಡಿ ಭಾಳ ಖುಷಿ ಆಗತದ. ತಮ್ಮಲ್ಲಿಯವರು ಯಾರರ ಮುಂದ ಬರತಾರ ಅಂದ್ರ ತಮ್ಮ ಜೀವಾ ಕೊಟ್ಟಾದ್ರು ಸಹಾಯ ಮಾಡತಾರ. ನಾ ರಗಡ ಸಲಾ ನೋಡೆನಿ ಈ ಬಸ್ಸಿನ್ಯಾಗ ಗಂಡಸರು ಹೆಣ್ಣಮಕ್ಕಳ ಸಿಟಿನ್ಯಾಗ ಕೂತವರು  ಬಾಜುಕನ ಮಕ್ಕಳನ ಎತಕೊಂಡ ಹೆಣ್ಣಮಕ್ಕಳ ಇದ್ರು ಕಂಡು ಕಾಣಲಾರಧಂಗ ಸುಮ್ನ ಕೂತಿರತಾರ ಆದ್ರ ತಮ್ಮ ಮಂದಿಯವರ ಯಾರೆ ಹತ್ತಿದ್ರುನು ಪಟ್ಟನ " ಆವೊ ಮಾ. ಯಂಹಾ ಬೈಠೊ ಅಂತ ಜಾಗಾ ಬಿಟ್ಟಕೊಡತಾರ," ಪರಿಚಯಾ ಇಲ್ಲಂದ್ರು ತಮ್ಮ ತಮ್ಮ ಜನಗಳ ಬಗ್ಗೆ ಅವರಿಗಿದ್ದ ಅಭಿಮಾನಾ ನೋಡಿ ಭಾಳ ಸಂತೋಷ ಆಗತದ. ಅವರಲ್ಲೆ ಉಪಪಂಗಡಗೊಳ ಎಷ್ಟ ಇದ್ರು  ತಾವೆಲ್ಲಾ ಒಂದ ಅನ್ನೊ ಭದ್ರವಾದ ಸಂಘಟನಾಶೀಲತೆ ಅದ. ಆದ್ರ ನಮ್ಮಲ್ಲೆ ಹಿಂದು ಅನ್ನೊ ಸಂಘಟನಾ ಹೋಗಲಿ ತಮ್ಮ ತಮ್ಮ ಜಾತಿಗಳೊಳಗನು ಒಗ್ಗಟ್ಟಿರುದಿಲ್ಲಾ. ಒಬ್ಬಾಂವ ಮುಂದ ಬರತಾನ ಅಂದ್ರ ಕಾಲ ಎಳಿಲಿಕ್ಕೆ ಹತ್ತ ಮಂದಿ ತಯಾರಾಗಿತಾರ. ಜೋಶಿ ವೇಂಕಣ್ಣನ ವಿಷಯದಾಗು ಹಿಂಗಾ ಆತು ಸ್ವಂತ ಕಾಕಾ ಅನ್ನಿಸಿಕೊಂಡ ಮನ್ಯಾಗಿನಾಂವ ರಂಗಣ್ಣನ ಮ್ಯಾಲೆ ಮ್ಯಾಲೆ ಮಗಾ ಸಂಬಂಧ ಬಿಡೊದ ಹೆಂಗ ಅಂಥೇಳಿ ಒಳಗಿಂದ ಒಳಗ ಬ್ಯಾರೆಯವರಿಗೆ ಓಟ ಹಾಕ್ರಿ ಅಂತ ಪ್ರಚಾರ ಮಾಡಿ ಹೇಳಲಿಕತ್ತಿದ್ದಾ, ಸಮಾಜದ ಹಿರ್ಯಾರು ಅನ್ನಿಸಿಕೊಂಡ ಕುಲಕರ್ಣಿ ಮಾಸ್ತರು ಸುಧ್ಧಾ ಹೊರಗಿನವರಿಗೆ ಸಪೊರ್ಟ ಮಾಡಲಿಕತ್ತಿದ್ರು.. ಇಂಥವರನ್ನ ನಂಬಿದ್ದ ವೆಂಕಣ್ಣಗ ಸೋಲು ಗ್ಯಾರಂಟಿನ ಇತ್ತು. ಈ ಸಲಾನು ಹಂಗಾ ಆತು ಬ್ಯಾರೆ ಓಣಿಯಾಂವ ಇದ್ರುನು, ಹೋದಸಲಾ ತಮಗೆನು ಫಾಯದೆ ಆಗಿಲ್ಲಂತ ಗೊತ್ತಿದ್ರುನು, ತಮ್ಮ ಜಾತಿಯಾಂವಾ ಅನ್ನೊ ಒಂದ ಅಭಿಮಾನಾ ಮುಂದ ಇಟಗೊಂಡ ಜೈನಾಪೂರ ಖಾಜಪ್ಪಗ ಓಟ ಹಾಕಿ ಗೆದಿಸಿ ಕಳಿಸಿದ್ರು.. ಈಗನು ನಮ್ಮ ಕಿಲ್ಲಾದಾಗ ನೀರಿನ ತ್ರಾಸ ಅದ, ಛಂದಾಗಿ ರಸ್ತೆ ಲೈಟ್ ಇಲ್ಲಾ, ಗಟಾರ ವ್ಯವಸ್ಥೆ ಇಲ್ಲಾ, ಮನಿಮುಂದನ ಹೊಲಸ ನೀರ ಹರಿತದ. ಒಳ್ಳೆದನ್ನ ತಮ್ಮ ಮೂಢತನದಿಂದ ಕಳಕೊಳ್ಳೊ ಜನರನ ನೋಡಿದ್ರ ಅಜ್ಞಾನದ ಪರಮಾವಧಿ ಅನಿಸ್ತದ.ನಾಲ್ಕಮಂದಿಗೆ ಉಪಕಾರ ಮಾಡೊ ಅಂಥಾ ಮನಸಿದ್ದ ಮನಷ್ಯಾ ವೆಂಕಣ್ಣಾ ಆರಿಸಿ ಬಂದಿದ್ರ ಓಣ್ಯಾಗ ನಾಲ್ಕ ಪೂಣ್ಯಾದ ಕೆಲಸಾನರ ಮಾಡತಿದ್ದಾ.

ಎಲ್ಲಿತನಕಾ ಜಾತಿ ಧರ್ಮಾ ಬಾಜುಕ ಸರಿಸಿಟ್ಟು ಮನಷ್ಯಾನ ಯೋಗ್ಯತಾನೋಡಿ ಮುಖಂಡನನ್ನಾಗಿ ಆರಿಸಿತರೊ ಪಧ್ಧತಿ ಬರುದಿಲ್ಲೊ ಅಲ್ಲಿತನಕಾ ಊರು ಓಣಿ ಎನ ಬಂತು ದೇಶಾಸುಧ್ಧಾ ಉಧ್ಧಾರಾಗುದಿಲ್ಲಾ. ಇದ ಮಾತ್ರ ಕಟ್ಟಿಟ್ಟ ಬುತ್ತಿ. ಜಾತಿ ಪಧ್ಧತಿ ಅನ್ನೊದು ಒಂದ Slow poision ಅದ ಅದು ನಮ್ಮ ಸಮಾಜನ ಒಳಗಿಂದೊಳ ಸುಡಲಿಕತ್ತದ. ಈಗ ಎಲ್ಲಾ ಕ್ಷೇತ್ರದೊಳಗು ಅಂದ್ರ ಊದ್ಯೋಗ ಆಗಲಿ, ಶಿಕ್ಷಣ, ಅಥವಾ ಯಾವದೇ ವಿಷಯದಾಗಾಗಲಿ ಈ ಜಾತಿ ಅನ್ನೊದು ಅಡ್ದ ಬರೊದರಿಂದ ಅರ್ಹರಿಗೆ ಬುಧ್ಧಿವಂತರು ಅವಕಾಶದಿಂದ ವಂಚಿತರಾಗಿ ಅಡ್ಡದಾರಿ ಹಿಡದು ಜೀವನಾ ಹಾಳ ಮಾಡಕೊತಾರ ಇಲ್ಲಾಂದ್ರ ಆತ್ಮಹತ್ಯೆ ಮಾಡಕೋತಾರ ಇದರಿಂದ ದೇಶಕ್ಕ ಎಷ್ಟ ದೊಡ್ಡ ನಷ್ಟ ಅನ್ನೊದನ್ನ ಲೆಕ್ಕಾ ಹಾಕಿದ್ರ ನಾವು ಸಾಲಭಾರದಿಂದ ಸೋತು ಪರದೇಶಗಳ ಅಡಿಯಾಳಾಗೊದ್ರಾಗ ಸಂಶಯನ ಇಲ್ಲಾ. ನಮ್ಮ ಹಿಂದುಗಳೊಳಗ ಇದ್ದ ಈ ಆಂತರಿಕ ಭಿನ್ನತೆಯಿಂದನ ನೂರಾರ ವರ್ಷ ಇನ್ನೊಬ್ಬರ ಆಳಾಗಿದ್ವಿ ಅಂದ್ರುನು ಜನಕ್ಕ ತಲಿಗೆ ಬುಧ್ಧಿ ಬಡದಿಲ್ಲಾ. ಇವತ್ತ ಸಮಾಜದಾಗ ನಾ ಮೇಲು ನೀವ ಕೀಳು ಅಂತ ಅನ್ನೊದ್ರಾಗ ಮೂರನೆಯಾಂವಾ ಮನಿ ಲೂಟಿ ಮಾಡಿ ಬೆಂಕಿ ಹಚ್ಚಿ ಹೋದ್ರುನು ತಿಳಿಲಾರದಷ್ಟ ಮೂಢತನಾ ತುಂಬಕೊಂಡದ. ಇಂಥಾ ವಿಚಾರದಾಗ ಎನ ಬರದರನು ಅಷ್ಟ ಯಾರ ಎಷ್ಟ ಭಾಷಣಾ ಮಾಡಿದ್ರುನು ಅಷ್ಟ, ಯಾವದು ಬದಲಾಗಂಗಿಲ್ಲಾ, ಯಾಕಂದ್ರ ಇಂಥಾದೊಂದ ಸಾಮಾಜನ ರೋಗಿಷ್ಟ ಮಾಡಿ ಹಾಳಮಾಡೊ ಅಂಥಾ  ಜಾತಿ ಪಧ್ಧತಿ ಅನ್ನೊ ಕೆಟ್ಟ ವೈರಸ್ ಒಂದ ಜನರ ರಕ್ತದೊಳಗ ವಂಶವಾಹಿ ವರ್ಣತಂತುಗಳಂಘ ಸೇರಿಬಿಟ್ಟಾವ ಹಿಂಗಾಗಿ ವ್ಯವಸ್ಥೆಯೊಳಗ ಒಂದೊಂದ ಒಂದೊಂದ ತಂತುಗಳನ್ನ ಕಳಚಿಕೊತ ಕ್ರಾಂತಿಕಾರಿ ಬದಲಾವಣೆ ಆಗಬೇಕಂದ್ರ  ಯುಗಾಂತ್ಯದ ತನಕಾನ ಆಗತದ ಅನಿಸ್ತದ. ನಮ್ಮ ದೇಶ ತಂತ್ರಜ್ಞಾನದೊಳಗ ಮಾತ್ರ ಮುಂದವರದದ ಆದ್ರ ಜನಗಳ ವಿಚಾರ ಯೋಚನೆಗಳು ಮಾತ್ರ ಇನ್ನೂ ಸಂಕುಚಿತ, ಮೂಢನಂಬಿಕಿಯ ಪಾಯಾದ ಮ್ಯಾಲೆನ ನಿಂತಾವ.

ಯಾರ ಬಾಯಿಲೆ ಕೇಳಿದ್ರು ರಾಜಕೀಯ ಅಂದ್ರ ಇದ ಮತ್ತ ಒಬ್ಬರಕಾಲ ಎಳದನ ಇನ್ನೊಬ್ಬರು ಮ್ಯಾಲೆ ಬರತಾರ. ಈ ದೇಶದಾಗ ಮದ್ಲ ರಾಜಕೀಯದ ಅರ್ಥನ ಎನಂತ ತಿಳಕೊಳ್ಳಾರದ ರಾಜ್ಯಾ ಆಳಲಿಕ್ಕೆ ಹೊಂಟವರನ್ನ  ನೋಡಿ ಅಳಬೇಕೊ, ನಗಬೇಕೊ, ಸಿಟ್ಟಾಗಬೇಕೊ ಎನ ಮಾಡಬೇಕಂತ ತಿಳಿಯಂಗಿಲ್ಲಾ. ಖರೆ ಅರ್ಥದೊಳಗ ಹೇಳಬೇಕಂದ್ರ ರಾಜಕೀಯ ಅಂದ್ರ " ಒಂದ ದೇಶದ ಸರ್ಕಾರದ ಆಂತರಿಕ ಮತ್ತು ಬಾಹ್ಯ ವ್ಯವಹಾರಗಳ ಆಡಳಿತ ಮತ್ತು ಸಾಮಾಜೀಕ ನಿಯಂತ್ರಣ ಮತ್ತ ಆರ್ಥಿಕ ವ್ಯವಹಾರವನ್ನ ನೀತಿ ಮಾರ್ಗದರ್ಶಿಯಿಂದ ನಿಯಂತ್ರಿಸಿ ಆರೋಗ್ಯಕರ ಆಡಳಿತವನ್ನು ವ್ಯವಸ್ಥೆಯನ್ನ ಪ್ರಜೆಗಳಿಗೆ ಒದಗಿಸುವಂತಹ ಒಂದು ಪ್ರಭಾವಿ ಕಲೆ ಅಥವಾ ವಿಜ್ಞಾನ. ಸಮಾಜದೊಳಗ   ವಾಸಿಸಲಿಕತ್ತಂಥಾ  ವ್ಯಕ್ತಿಗಳ ನಡುವಿನ ಸಂಬಂಧದ ಒಟ್ಟು ಸಂಕೀರ್ಣ ಇದರೊಳಗ ಸೇರಿರತದ. ಅದೆಲ್ಲಾ ಹೋಗಿ ಕೊಲೆ,ಕಳ್ಳತನಾ,ಅತ್ಯಾಚಾರ ಮಾಡೊದು ಅಂದ್ರ ರಾಜಕೀಯ ಅಂತ ತಿಳಕೊಂಡ ವ್ಯಕ್ತಿಗಳನ್ನ ನಾವು ಮುಖಂಡರು ನಮ್ಮ ನಾಯಕರು ಅಂತ ಆರಿಸಿ ಗೆದಸತೇವಲ್ಲ ಇನ್ನ ನಾವೆಂಥಾ ಅಸಾಹಯಕರು.

ಯಾವದೇ ಕೊಲೆ ಅತ್ಯಾಚಾರಗೊಳ ನಡಿಲಿ ಅಯ್ಯ ರಾಜಕೀಯ ಅಂದ್ರ ಇವೆಲ್ಲಾ ಇರೊವ ಮತ್ತ ಅಂತಾರ. ಯಾಕ ಇವೆಲ್ಲಾ ಇಲ್ಲದ ರಾಜಕೀಯ ಮಾಡಲಿಕ್ಕೆ ಬರಂಗಿಲ್ಲೆನು? ಅರೆ ರಾಜಕೀಯದಾಗ ಹೆಸರ ಮಾಡಬೇಕಂತಿದ್ರ ಕಾಂಪಿಟೇಶನ್ ಮ್ಯಾಲೆ ಕೊಲೆ,ಕಳ್ಳತನಾ ಮಾಡಸೊಕ್ಕಿಂತಾ, ಅದ ಜಿದ್ದಿಗೆ ಬಿದ್ದು ಸಮಾಜ ಸುಧಾರಣೆ ಕೆಲಸಾ ಮಾಡ್ಲಿ. ಇವತ್ತ ಒಬ್ಬಾಂವ ಓಣಿ ಸುಧಾರಿಸಿದ್ರ , ಇನ್ನೊಬ್ಬಾಂವ ಈಡಿ ಊರ ಸುಧಾರಣೆ ಕೆಲಸಾ ಮಾಡ್ಲಿ. ಅದ ಒಬ್ಬಾಂವ ಹತ್ತ ಮಂದಿ ಕಣ್ಣಿರ ಒರಸಿದ್ರ ,ಮತ್ತೊಬ್ಬಾಂವ ಇಡಿ ಊರಾಗಿನ ನೊಂದ ಮಂದಿಗೆ ನ್ಯಾಯಾ ಕೊಡಸಲಿ. ಒಬ್ಬರ ಮ್ಯಾಲಿನ ಜಿದ್ದಿಗೆ ಒಬ್ಬರು ಜನರ ಮನಸ್ಸಿನ್ಯಾಗ ಜಾಗಾ ಮಾಡಿ ಕೂಡಲಿ, ಆಮ್ಯಾಲೆ ಮಂದಿ ಒಲ್ಲೆ ಅಂದ್ರನು ಕೈ ಹಿಡದ ಎಳಕೊಂಡ ಹೋಗಿ ನಿಂದ್ರಿಸಿ ನಾವ ನಿಮಗ ಓಟ ಹಾಕೊವರ ಅಂಥೇಳಿ ಓಟ ಹಾಕಿ ಗೆದಸತಾರ. ಇದರಿಂದ  ನಂಬಿ ಓಟ ಹಾಕಿದವರಿಗೂನು  ಸುಖಾ ಇರತದ. ಸ್ಮಾಮಾಜೀಕ ಜೀವನದಾಗ ಶಾಂತಿ ಸಮಾಧಾನನು ಇರತದ. ಎಲ್ಲಿತನಕಾ ಈ ಜಾತಿ ಆಧಾರದ ಮ್ಯಾಲೆ ಎಲ್ಲಾ ಕೆಲಸಗೊಳ ನಡಿತಾವ ಅಲ್ಲಿತನಕಾ ಯೊಗ್ಯರದವರು, ಅರ್ಹರಾದವರು ಅವಕಾಶಗಳಿಂದ ವಂಚಿತರಾಗೊದು ಶತಃಸಿಧ್ಧ ಅದ. ಈಗಿನ ಮಂದಿಯಲ್ಲೆ ಹಿಂದ ಮುಂದ ವಿಚಾರ ಮಾಡಲಾರದ, ಹರ್ಷದ ಕೂಳಿನ ಸಲುವಾಗಿ, ವರ್ಷದ ಕೂಳನ್ನ ಕಳಕೊಂಡ್ರ ಅನ್ನೊ ಹಂಗ ತಮ್ಮ ಓಟಗೊಳನ್ನ , ಒಂದ ದಿನದ ಕುಡಿತಕ್ಕ ಕೊಡೊ ರೊಕ್ಕಕ್ಕ ಆಗಲಿ, ಅಥವಾ ಆರು ತಿಂಗಳ ಉಟ್ಟ ಹರಿಯೊ ಸೀರಿಗೆ, ಒಂದ ಹೊತ್ತಿನ ಸಿಹಿ ಊಟಕ್ಕಾಗಲಿ ಮಾರಕೊಳಾರದ, ಜಾತಿ ಅನ್ನೊ ಪ್ರೇತನ್ನ  ಮನಸ್ಸಿನಿಂದ ತಗದ ಹಾಕಿ ತಮಗ ಜೀವನಿಡಿ ಆರಾಮಾಗಿ ಜೀವನಾ ಮಾಡಲಿಕ್ಕೆ ಬೇಕಾದ ಅನುಕೂಲಗಳನ್ನ ಒದಗಿಸಿ ಪ್ರಾಮಾಣಿಕತನದಿಂದ ಆಡಳಿತ ಮಾಡುವಂತಹ ಯೋಗ್ಯ ಮುಖಂಡನ ಆರಿಸಿ ತರೊ ಅಂಥಾ ಮನೋಭಾವನೆ ಮೂಡಬೇಕು ಅಂದ್ರನ ಸಮಾಜದೊಳಗ, ದೇಶದೊಳಗ ಪ್ರಗತಿಯ ಬದಲಾವಣೆ ಸಾಧ್ಯ ಆಗತದ.

ಇವತ್ತ ಒಬ್ಬ  ಯೋಗ್ಯ ಅಲ್ಲಾ ಅಂತ ಗೊತ್ತಿದ್ರು ನಾವು ಅವನ ದುಷ್ಟತನದ ಪ್ರಭಾವಕ್ಕ ಒಳಗಾಗಿ ಅವನ್ನ ಬೆಂಬಲಸಲಿಕ್ಕೆ ಮುಂದಾಗತೇವಿ. ನಮ್ಮ ನಮ್ಮ ಜೀವನಕ್ಕ ಬೇಕಾಧಂಥಾ ಅವಶ್ಯಕತೆಗೊಳನ್ನ ಪೂರೈಸೊ ಸಣ್ಣ ಸಣ್ಣ ವಸ್ತುಗಳನ್ನ ತಗೊಬೇಕಾದ್ರ ನೂರ ಸಲಾ ವಿಚಾರ ಮಾಡತೇವಿ, ಅಂಗಡಿಯವನ ಜೋಡಿ ವಾದಾ ಮಾಡ್ತೇವಿ, ನಡು ಬಾಜಾರದಾಗ ಮಂದಿ ಮಾರಿ ನೋಡಲಾರದ ಯಾರಿಗೂ ಹೆದರಲಾರದ ಜಗಳಾಡತೇವಿ, ಆದ್ರ ಈ ನಮ್ಮನ್ನ ಆಳೊ ನಾಯಕರನ್ನ ಆರಸೊ ಮುಂದ ಯಾಕ ಕುರಿ ಹಂಗ ಸುಮ್ನ ಕೂಡತೇವಿ? ನಮ್ಮೆಲ್ಲರ ಸಂಘಟನೆಯಿಂದ ನಾವು ಅವನ್ನ ಎದುರಿಸ್ಬಹುದು. ಒಬ್ಬ ನಮ್ಮನ್ನ ಹೆದರಸಿ ನಮ್ಮನ್ನ ಓಟ ಕೇಳತಾನಂದ್ರ ಅವನ ಹಿಂದ ಭಾಳ ಅಂದ್ರ ನೂರ ಮಂದಿ ಇರತಾರ ಆದರ ಎಲ್ಲಾರು ಸಂಘಟಿತರಾಗಿ ಪ್ರತಿಭಟಿಸಿದರ ನಮ್ಮ ಬೆನ್ನ ಹಿಂದ ಸಾವಿರ, ಲಕ್ಕ್ಷ ಜನದ ಬಲಾ ಇರತದ ಅನ್ನೊ ಅರಿವು ಮೂಡಬೇಕು. . ಎಲ್ಲಾರು ಒಂದಾಗಿ ಯೋಗ್ಯನಲ್ಲದವನಿಗೆ ನಾವು ಮತದಾನ ಮಾಡುದೇಯಿಲ್ಲ ಅಂತ ಸಂಘಟಿತರಾಗಿ ಘೊಷಣಾ ಮಾಡಿದ್ರ ಯಾರ ಎನ ಮಾಡಲಿಕ್ಕೆ ಸಾಧ್ಯ ಅದ. ಆದರ ನಮ್ಮ ದೇಶದೊಳಗ ಮುಖ್ಯ ಸಂಘಟನೆಯ ಕೊರತೆನ ಭಾಳ ಅದ. ನಮಗ್ಯಾಕ ಬೇಕ ಇಲ್ಲದ ಉಸಾಬರಿ ಅಂಥೇಳಿ ಸುಮ್ನ ಸರಕೊಳ್ಳೊ ಮಂದಿನ ಭಾಳ ಇದ್ದಾರ.

ನಮ್ಮ ದೇಶದ ಎಲ್ಲಾ ಕ್ಷೇತ್ರದೊಳಗ ಮದ್ಲ ಮಿಸಲಾತಿ ಅನ್ನೊ ವ್ಯವಸ್ಥೆಯನ್ನ ತಗದ ಹಾಕಿ, ವ್ಯಕ್ತಿಯ ಯೊಗ್ಯತೆ ಮತ್ತ ಅರ್ಹತೆಯ ಆಧಾರದ ಮ್ಯಾಲೆ ಅವಕಾಶಗಳನ್ನ ಹಂಚೊ ಮಹಾ ಅಭಿಯಾನ ಶೂರು ಆಗ್ಬೇಕು. ನಮ್ಮ ಸುತ್ತಮುತ್ತ ಪರೋಪಕಾರಿಗಳಾದ, ನಿಷ್ಠರಾದ ರಗಡ ಮಂದಿ ಎಲಿಮರಿ ಕಾಯಿಹಂಗ ಇದ್ದಾರ ಅವರನ್ನ ಬೆಳಕಿಗೆ ತಂದು ಅವಕಾಶ ಕಲ್ಪಿಸಿಕೊಡೊ ಅಂಥಾ ಮಹಾಯೋಜನೆ ಆಗಬೇಕು. ನಮ್ಮ ನಮ್ಮ ಸುರಕ್ಷೆಯ ಭಾರ ನಮ್ಮ ನಮ್ಮ ಮ್ಯಾಲೆನ ಇರತದ. ನಮ್ಮೊಳಗ ಇರೊ ನೈತಿಕ ಹೊಣೆಯನ್ನ ತಿಳಕೊಂಡು ನಮ್ಮ ನಮ್ಮ ಜವಾಬ್ದಾರಿಗಳನ್ನ ನಾವ ನಾವ ನಿಭಾಯಿಸ್ಕೊಬೇಕು. ಯಾಕಂದ್ರ ಪ್ರತಿಯೊಂದ ಸಮಯದಾಗು ಶ್ರೀಕೃಷ್ಣನ ಅಥವಾ ರಾಮನ ಅವತಾರ ಎತ್ತಿ ಬರಲಿಕ್ಕೆ ಸಾಧ್ಯ ಇಲ್ಲಾ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
savita
savita
10 years ago

ಯಾವದೇ ಕೊಲೆ ಅತ್ಯಾಚಾರಗೊಳ ನಡಿಲಿ ಅಯ್ಯ ರಾಜಕೀಯ ಅಂದ್ರ ಇವೆಲ್ಲಾ ಇರೊವ ಮತ್ತ ಅಂತಾರ. ಯಾಕ ಇವೆಲ್ಲಾ ಇಲ್ಲದ ರಾಜಕೀಯ ಮಾಡಲಿಕ್ಕೆ ಬರಂಗಿಲ್ಲೆನು? ಮೇಡಂ ಈ ಮಾತು ಸೂಪರ್ ಆಗಿದೆ.

umesh desai
10 years ago

ಇದು ಒಂಥರಾ ಗಂಭೀರವಾದವಿಷಯ ಅದ. ನಿಮ್ಮ ಬರವಣಿಗಿ
ಹೊಸಾದಿಕ್ಕು ಹಿಡದದ ಅನಿಸ್ತು ಗಂಭೀರ ವಿಷಯ ಎತ್ತೀರಿ ಆದ್ರ ನೀವು
ಹೇಳೂಹಂಗ ಮೀಸಲಾತಿ ಅಷ್ಟು ಸುಲಭಅಲ್ಲ..ಅದರ ಮ್ಯಾಲೆನ ರಾಜಕಾರಣ ನಿಂತದ..
 
ನಿಮ್ಮ ಬರವಣಿಗಿ ಹಿಂಗ ಹೊಸಾ ದಾರಿ ಹುಡಕತಿರಲಿ…

K.M.Vishwanath
10 years ago

ಬಹಳ ಛಲೋ ಬರಿತಿರಿ 

3
0
Would love your thoughts, please comment.x
()
x