(ವಾಸ್ತವಿಕ ನೆಲೆಗಟ್ಟಿನ ನೋಟ)
ಈ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಹಾಗೂ ನಿರ್ಲಕ್ಷಿತ ಸಮಸ್ಯೆಯೆಂದರೆ ವಾತಾವರಣ ಬದಲಾವಣೆ ಅಥವಾ ಹವಾಮಾನ ವೈಪರೀತ್ಯ. 18ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಎಣೆಯಿಲ್ಲದ ಅರಣ್ಯ ನಾಶ ಇದಕ್ಕೆ ಮೂಲ ಕಾರಣ. ಇದಕ್ಕೆ ಮನುಷ್ಯನೇ ನೇರ ಕಾರಣವಾಗಿದ್ದಾನೆ ಎನ್ನುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸತ್ಯ. ಪ್ರಪಂಚದ ಬಹುಪಾಲು ಜನ “ಹವಾಮಾನ ವೈಪರೀತ್ಯ”ದ ಹಾಗೂ ಅದರ ಫಲಿತಾಂಶದ ಕುರಿತು ಅವಜ್ಞೆ ಹೊಂದಿದ್ದಾರೆ. ಸಾಮೂಹಿಕವಾಗಿ ನಿರ್ಮಿಸಿದ ಈ ಸಮಸ್ಯೆಯನ್ನು ಒಬ್ಬರಿಂದ ಪರಿಹರಿಸಲು ಸಾಧ್ಯವಿಲ್ಲ. ಇಡೀ ಭೂಮಿಯ ಆರೋಗ್ಯದ ದೃಷ್ಟಿಯಿಂದ ಈ ಸಮಸ್ಯೆಯ ಪರಿಹಾರೋಪಾಯಕ್ಕಾಗಿ ಇಡೀ ಜಗತ್ತಿನ ಜನಕೋಟಿ ಒಗ್ಗಟ್ಟಾಗಿ ಶ್ರಮಿಸಬೇಕಾಗುತ್ತದೆ. ಹಾಗೂ ಇದಕ್ಕಾಗಿ ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳಲ್ಲಿ, ಕೃಷಿಕರಲ್ಲಿ, ಕೂಲಿಕಾರ್ಮಿಕರಲ್ಲಿ, ಅಧಿಕಾರಿಗಳಲ್ಲಿ, ರಾಜಕಾರಣದ ಶಕ್ತಿಕೇಂದ್ರದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ, ವ್ಯವಹಾರಸ್ಥರಲ್ಲಿ, ಹೂಡಿಕೆದಾರರಲ್ಲಿ, ಹೀಗೆ ಸಮಾಜದ ಪ್ರತಿಯೊಂದು ಕ್ಷೇತ್ರದವರಿಗೂ ಭೂಬಿಸಿಯೇರಿಕೆಯ ಪರಿಣಾಮಗಳ ಅರಿವಾಗಬೇಕು. ಈ ಭೂಮಿಯ ಪ್ರತಿಯೊಂದು ಸಸ್ಯ ಹಾಗೂ ಪ್ರಾಣಿಸಂಪತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಸಮಸ್ಯೆಯಲ್ಲಿ ಸುಳಿಯಲ್ಲಿ ಅನಿವಾರ್ಯವಾಗಿ ಸಿಲುಕಿಕೊಂಡಿವೆ. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಅರಣ್ಯಗಳನ್ನು ರಾಜಭೂಮಿಗಳೆಂದು ಪರಿಗಣಿಸಿ, ಸಂರಕ್ಷಿತ ಪ್ರದೇಶಗಳೆಂದು ಘೋಷಿಸಿ, ವಾಣಿಜ್ಯ ಬಳಕೆಯ ದೃಷ್ಟಿಯಿಂದ ಅರಣ್ಯಗಳನ್ನು ನಿರ್ವಹಿಸಲಾಗುತ್ತಿತ್ತು. ಸ್ವಾತಂತ್ರ್ಯನಂತರ ಅರಣ್ಯಗಳ ಮೇಲೆ ಸರ್ಕಾರದ ಪ್ರಭುತ್ವವನ್ನು ಹೆಚ್ಚು ಮಾಡುವ ಎರಡನೇ ಹಂತದ ಕಾರ್ಯಕ್ರಮವಾದ “ಸಂರಕ್ಷಿತ ಪ್ರದೇಶ ಜಾಲ” ಕಲ್ಪನೆ ಮೂಲ ಅರಣ್ಯವಾಸಿ ಸಮುದಾಯದ ಪಾರಂಪಾರಿಕ ಹಕ್ಕುಗಳನ್ನು ನಾಶ ಮಾಡಿದವು. ಸಾವಿರಾರು ವರ್ಷಗಳಿಂದ ಅರಣ್ಯದಲ್ಲಿ ನೆಲೆಸಿದ್ದ ಸಮುದಾಯಗಳನ್ನು ಅರಣ್ಯ ಅತಿಕ್ರಮಣಕಾರರು ಎಂದು ಪರಿಗಣಿಸಿದ್ದರಿಂದ, ಅವರಲ್ಲಿ ತೀವ್ರ ಅಸಮಾಧಾನ ಮತ್ತು ಪರಕೀಯ ಮನೋಭಾವ ಬೆಳೆಯಲು ಕಾರಣವಾಯಿತು. ಇದರಿಂದಾಗಿ ಅರಣ್ಯ ಭೂಮಿಯ ಮೇಲಿನ ಹಕ್ಕಿನ ಕುರಿತಂತೆ ಗಂಭೀರವಾದ ವಿವಾದಗಳು ಪ್ರಾರಂಭವಾಗಿ ತೀವ್ರ ಸ್ವರೂಪವನ್ನು ಪಡೆದವು. ಕಾಡು ಹಾಗೂ ಅಲ್ಲಿನ ಸಂಪನ್ಮೂಲಗಳು ನಶಿಸಿದಂತೆ, ಇವುಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವಲ್ಲಿ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಪದ್ಧತಿ ಮತ್ತು ಅವರ ಭಾಗವಹಿಸುವಿಕೆ ಅತಿಮುಖ್ಯವೆಂದು ಮನಗಂಡು ಕೇಂದ್ರ ಸರ್ಕಾರವು 2006ರಲ್ಲಿ ಅರಣ್ಯ ಹಕ್ಕುಗಳ ಮಾನ್ಯತೆ ಕಾಯಿದೆಯನ್ನು ಜಾರಿಗೆ ತಂದಿತು. ದೇಶದ ಅತಿಮುಖ್ಯ ಅರಣ್ಯಪ್ರದೇಶಗಳ ಅಧಿಕೃತ ರಾಯಭಾರಿಗಳಾದ ಬುಡಕಟ್ಟು ಸಮುದಾಯಗಳ ಸಮಗ್ರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಈ ಕಾಯಿದೆಯ ಮಹೋನ್ನತ ಉದ್ದೇಶ ಪ್ರಶ್ನಾತೀತವಾದದು ಎಂಬುದರಲ್ಲಿ ಎರಡು ಮಾತಿಲ್ಲವಾದರೂ, ಕಾಯಿದೆಯ ಅನುಷ್ಠಾನಗೊಳಿಸುವಲ್ಲಿನ ದುರುದ್ಧೇಶಗಳು ಪಾರಿಸಾರಿಕವಾಗಿ ವ್ಯತಿರಿಕ್ತ ಪರಿಣಾಮವನ್ನು ಹೇಗೆ ಬೀರುತ್ತಿವೆ ಎಂಬುದನ್ನು ಕೊಂಚ ವಿವರವಾಗಿ ನೋಡೋಣ.
ಸಾಗರ ತಾಲ್ಲೂಕು ಜೀವಿವೈವಿಧ್ಯಗಳ ಆಗರವಾದ ನಾಡು. ಜೊತೆಗೆ ಜಲವಿದ್ಯುತ್ ಯೋಜನೆಗಾಗಿ ಅಮೂಲ್ಯ ಅರಣ್ಯಸಂಪತ್ತನ್ನು ಕಳೆದುಕೊಂಡು ಬರಡು ಸ್ಥಿತಿಗೆ ತಲುಪಿದ ನಾಡೂ ಹೌದು. ನಗರ ಪ್ರದೇಶ ಸೇರಿದಂತೆ ಸಾಗರ ತಾಲ್ಲೂಕಿನ ಜನಸಂಖ್ಯೆ 2.5 ಲಕ್ಷ ಮೀರುತ್ತದೆ. ಬಯಲುಸೀಮೆ ಪ್ರದೇಶಗಳಿಗೆ ಹೋಲಿಸಿದಲ್ಲಿ ಸಾಗರ ತಾಲ್ಲೂಕು ನೈಸರ್ಗಿಕವಾಗಿ ಸಂಪದ್ಬರಿತ ಪ್ರದೇಶವೂ ಹೌದು. ಆದರೆ, ಸ್ವಾತಂತ್ರ್ಯನಂತರದ ಆದ ಜನಸಂಖ್ಯಾ ಸ್ಪೋಟ, ಹಸಿರುಕ್ರಾಂತಿ, ಜಲವಿದ್ಯುತ್ ಯೋಜನೆಗಳು ಇಲ್ಲಿನ ಒಟ್ಟಾರೆ ಜೀವಿವೈವಿಧ್ಯವನ್ನು ಸಂಕಷ್ಟಕ್ಕೀಡು ಮಾಡಿವೆ. ಹಿಂದಿನ ಶತಮಾನದ 60-70ನೇ ದಶಕದ ಜಮೀದ್ದಾರಿ ವಿರುದ್ಧದ ಹೋರಾಟದಿಂದ ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದು ಬಹಳಷ್ಟು ಗೇಣಿ ರೈತರು ಜಮೀನಿನ ಮಾಲಿಕತ್ವವನ್ನು ಪಡೆದದ್ದು ಈಗ ಇತಿಹಾಸ. ಹೀಗೆ ಜಮೀನಿನ ಮಾಲೀಕತ್ವವನ್ನು ಪಡೆದ ಕುಟುಂಬಗಳು ಕ್ರಮೇಣ ತಮ್ಮ-ತಮ್ಮ ಜಮೀನುಗಳನ್ನು ವಿಭಾಗಮಾಡಿಕೊಳ್ಳುತ್ತಾ ಸಾಗಿದ್ದರಿಂದ ಮುಂದಿನ ತಲೆಮಾರಿಗೆ ಅತಿಚಿಕ್ಕ ಹಿಡುವಳಿ ಭೂಮಿ ಲಭ್ಯವಾಯಿತು. ಹೆಚ್ಚಿನ ತುಂಡುಜಮೀನುಗಳು ಮಳೆಯಾಶ್ರಿತ ಜಮೀನುಗಳಾಗಿದ್ದರಿಂದ ಕೃಷಿ ಕಾಯಕ ಮಾಡುವುದು ಲಾಭದಾಯಕವಾಗಿರಲಿಲ್ಲ. ಇದರಿಂದ ರೈತರಿಗೆ ತಮ್ಮ ಕೃಷಿಭೂಮಿಯನ್ನು ವಿಸ್ತರಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು, ಇದಕ್ಕೆ ಬಲಿಯಾದದ್ದು ಮಾತ್ರ ಸಾಗರ ತಾಲ್ಲೂಕಿನ ಮಳೆಕಾಡು ಪ್ರದೇಶಗಳು.
ಸಾಗರ ತಾಲ್ಲೂಕು 69 ಸಾವಿರ ಹೆಕ್ಟೆರ್ ಅರಣ್ಯ ಪ್ರದೇಶವನ್ನು ಹೊಂದಿತ್ತು. ತುಂಡುಭೂಮಿ ಮಾಲೀಕರು ತಮ್ಮ ಕೃಷಿ ಪ್ರದೇಶವನ್ನು ವಿಸ್ತರಿಸಿಕೊಳ್ಳುತ್ತಾ ಮಳೆಕಾಡುಗಳನ್ನು ಸವರುತ್ತಾ ಸಾಗಿದರು. ಕೃಷಿಕರಿಗೆ ಕೃಷಿಭೂಮಿಯ ಮೇಲಿನ ಹಕ್ಕನ್ನು ನೀಡುವ ಬಗರ್‍ಹುಕುಂ ಕಾಯ್ದೆಯನ್ನು ಸರ್ಕಾರ 1989-90ರಲ್ಲಿ ಜಾರಿಗೊಳಿಸಿತು. ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ಪ್ರದೇಶವನ್ನು ಸಾಗುವಳಿ ಮಾಡಿದ ರೈತನ ಹಕ್ಕಿನ ಜಮೀನನ್ನಾಗಿ ಪರಿವರ್ತಿಸುವ ಕಾನೂನು ಇದಾಗಿತ್ತು. ರಾಜ್ಯ ಸರ್ಕಾರದ ಈ ಕಾಯ್ದೆಯಲ್ಲಿದ್ದ ಲೋಪವೆಂದರೆ, ಯಾವ ರೈತ ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾನೋ ಆ ಜಮೀನಿನ 1 ಎಕರೆ ಪ್ರದೇಶದಲ್ಲಿ 4 ಮರಗಳಿಗಿಂತ ಹೆಚ್ಚಿನ ಮರಗಳು ಇರಬಾರದು ಎಂಬ ಅಂಶ. ಇದರಿಂದ ರೈತನಿಗೆ ಮರಗಳ ಸಂಖ್ಯೆಯನ್ನು ಕಡಿಮೆ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಅರಣ್ಯ ಇಲಾಖೆಯ ದಾಖಲೆಯ ಪ್ರಕಾರ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗಿಲ್ಲದಿದ್ದರೂ, ವಾಸ್ತವಿಕವಾಗಿ ಸಾವಿರಾರು ಹೆಕ್ಟರ್ ಅರಣ್ಯಪ್ರದೇಶಗಳು ಕೃಷಿಭೂಮಿಯಾಗಿ ಪರಿವರ್ತಿತವಾಯಿತು. ವಾಡಿಕೆಯ ಮಳೆ ಪ್ರಮಾಣ ಕುಸಿಯುತ್ತಾ ಹೋಯಿತು. ಇಲ್ಲಿ ಭೂಮಿಯ ಧಾರಣ ಶಕ್ತಿಯ ಬಗ್ಗೆ ಕೊಂಚ ಬೆಳಕು ಚೆಲ್ಲುವುದು ವಿಹಿತ.
2008ರಲ್ಲಿ ತಜ್ಞರು ನಡೆಸಿದ ಲೆಕ್ಕಾಚಾರದ ಪ್ರಕಾರ ಭೂಮಿಯ ಮೇಲಿನ ತಲಾ ವ್ಯಕ್ತಿಗೆ ಲಭ್ಯವಿರುವ ಭೂಭಾಗದ ಪ್ರಮಾಣ 2.1 ಗ್ಲೋಬಲ್ ಹೆಕ್ಟೆರ್. ಆದರೆ ಈಗ ಪ್ರತಿ ವ್ಯಕ್ತಿ ಉಪಯೋಗಿಸುತ್ತಿರುವ ತಲಾವಾರು ಪ್ರಮಾಣ 2.7 ಗ್ಲೋಬಲ್ ಹೆಕ್ಟೆರ್. ಅಂದರೆ ಲಭ್ಯವಿರುವುದಕ್ಕಿಂತ ಶೇ.30%ರಷ್ಟು ಹೆಚ್ಚು ಪ್ರಮಾಣವನ್ನು ಅನುಭವಿಸುತ್ತಿದ್ದಾನೆ. ಹಾಗಾದರೆ ಈ ಹೆಚ್ಚಿನ ಪ್ರಮಾಣವನ್ನು ಸರಿಪಡಿಸುವುದು ಹೇಗೆ? ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ, ಜನಸಂಖ್ಯೆ ಈಗಿನ ಪ್ರಮಾಣದಲ್ಲೇ ಏರಿಕೆಯಾಗುತ್ತಿದ್ದಲ್ಲಿ ತಾನು ಬಳಸುತ್ತಿರುವ ಅರಣ್ಯ ಹಾಗೂ ನಿಸರ್ಗ ಸಂಪತ್ತು ಸರಿದೂಗಿಸಿಕೊಳ್ಳಲು 2050ರ ಹೊತ್ತಿಗೆ ಇನ್ನೂ ಎರಡು ಭೂಮಿ ಬೇಕಾಗುತ್ತದೆ. ಹೊಸ ಎರಡು ಭೂಮಿಯನ್ನು ಎಲ್ಲಿಂದ ತರೋಣ?
ಸಾಗರ ತಾಲ್ಲೂಕಿನ ಅಳಿದುಳಿದ ಮಳೆಕಾಡಿಗೆ ಅರಣ್ಯಹಕ್ಕು ಮಾನ್ಯತೆ ಕಾಯ್ದೆಯೊಂದು ಶಾಪವಾಗಿ ಪರಿಣಮಿಸಲು ಹೊರಟಿದೆ. ಈ ಮೇಲೆ ಹೇಳಿದಂತೆ, ಅರಣ್ಯಹಕ್ಕು ಮಾನ್ಯತೆ ಕಾಯ್ದೆ 2006 ರಚನೆಯಾಗಿದ್ದು, ನೂರಾರು ವರ್ಷಗಳಿಂದ ಕಾಡಿನಲ್ಲೇ ವಾಸ ಮಾಡುತ್ತಿದ್ದರೂ ಯಾವುದೇ ಭೂಮಿಯ ಹಕ್ಕನ್ನು ಪಡೆಯದೆ ಇರುವ ವನವಾಸಿಗಳ ಹಿತ ಕಾಯುವುದಾಗಿತ್ತು. ಅರಣ್ಯವೂ ಸಂರಕ್ಷಣೆಯಾಗಬೇಕು ಜೊತೆಗೆ ವನವಾಸಿಗಳ ಬದುಕು ಹಸನಾಗಬೇಕೆಂಬುದು ಈ ಕಾಯ್ದೆಯ ಮೂಲ ಉದ್ಧೇಶ. ಈ ಉದ್ಧೇಶವನ್ನು ಕಾಪಿಡಲು ಕಾಯ್ದೆಯಲ್ಲಿ ಹಲವು ಹಂತದ ನಿಯಮಗಳನ್ನು ರೂಪಿಸಲಾಗಿದೆ. ವಾಸ್ತವವಾಗಿ ಅರಣ್ಯದಲ್ಲೇ ವಾಸವಿರುವ ವನವಾಸಿಗಳು ಕಾಡಿನ ಕಿರುಸಂಪತ್ತನ್ನೇ ಅವಲಂಬಿಸಿ ಬದುಕುತ್ತಾರೆ. ಅರಣ್ಯ ರಕ್ಷಣೆ ನೆಪದಲ್ಲಿ ಅವರನ್ನು ಕಾಡಿನಿಂದ ಹೊರಹಾಕುವ ಕ್ರಿಯೆಗೆ ತಡೆ ಹಾಕಲು ಈ ಕಾಯ್ದೆ ಸಹಕಾರಿಯಾಗಿದೆ. “ಕಾಯ್ದೆಯ ಪ್ರಕಾರ ಅರಣ್ಯದಲ್ಲಿ ವಾಸಿಸುವ ಅಥವಾ ಅರಣ್ಯ ಜಮೀನುಗಳ ಮೇಲೆ ಅವಲಂಬಿತವಾಗಿರುವ ಬುಡಕಟ್ಟು ಸದಸ್ಯರು/ಅನುಸೂಚಿತ ಬುಡಕಟ್ಟು ಸದಸ್ಯರು ದಿನಾಂಕ:13/12/2005ಕ್ಕಿಂತಲೂ ಮೊದಲು ಅರಣ್ಯದಲ್ಲಿ ವಾಸಿಸುತ್ತಿರಬೇಕು. ಇತರೆ ಪಾರಂಪಾರಿಕ ಅರಣ್ಯವಾಸಿಗಳು 13/12/2005ಕ್ಕಿಂತಲೂ ಮುಂಚೆ ಮೂರು ತಲೆಮಾರಿನವರೆಗೆ (3 * 25 = 75 ವರ್ಷ) ಪ್ರಧಾನವಾಗಿ ಅರಣ್ಯದಲ್ಲಿ ವಾಸಿಸುತ್ತಿರಬೇಕು ಮತ್ತು ವಾಸ್ತವಿಕ ಜೀವನೋಪಾಯಕ್ಕಾಗಿ ಅರಣ್ಯದ ಅಥವಾ ಅರಣ್ಯದ ಜಮೀನಿನ ಮೇಲೆ ಅವಲಂಬಿತರಾಗಿರಬೇಕಾಗುತ್ತದೆ. ಇದಕ್ಕಾಗಿ ಹಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ”.
1. ಅರಣ್ಯ ಹಕ್ಕುಗಳನ್ನು ಇತ್ಯರ್ಥ ಪಡಿಸಲು ಗ್ರಾಮಪಂಚಾಯ್ತಿಯು ಗ್ರಾಮಸಭೆಗಳನ್ನು ಕರೆಯತಕ್ಕದ್ದು ಮತ್ತು ಅದರ ಪ್ರಥಮ ಸಭೆಯಲ್ಲಿ 10 ರಿಂದ 15 ವ್ಯಕ್ತಿಗಳನ್ನು ಅರಣ್ಯ ಹಕ್ಕುಗಳ ಸಮಿತಿಯ ಸದಸ್ಯರನ್ನಾಗಿ ಚುನಾಯಿಸತಕ್ಕದ್ದು.
2. ಅರಣ್ಯ ಹಕ್ಕು ಸಮಿತಿಯು ಸಂಬಂಧಪಟ್ಟ ಅರ್ಜಿದಾರನಿಗೆ ಮತ್ತು ಅರಣ್ಯ ಇಲಾಖೆಗೆ ಸೂಚನೆ ನೀಡಿದ ತರುವಾಯ ನಿವೇಶನ ಸ್ಥಳಕ್ಕೆ ಭೇಟಿ ನೀಡಿ ಸದರಿ ಸ್ಥಳದ ಮೇಲೆನ ಕ್ಲೇಮಿನ ಸ್ವರೂಪ, ವ್ಯಾಪ್ತಿ ಮತ್ತು ಸಾಕ್ಷ್ಯವನ್ನು ಖುದ್ದಾಗಿ ಪರಿಶೀಲಿಸತಕ್ಕದ್ದು.
3. ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಸಮಯದಲ್ಲಿ ಗ್ರಾಮ ಸಭೆ/ಅರಣ್ಯ ಹಕ್ಕು ಸಮಿತಿ, ಉಪವಿಭಾಗ ಮಟ್ಟದ ಸಮಿತಿ ಮತ್ತು ಜಿಲ್ಲಾಮಟ್ಟದ ಸಮಿತಿಗಳಿಗೆ ಅರಣ್ಯ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವುದಲ್ಲದೆ ತಪ್ಪು ಕ್ಲೇಮುಗಳಿದ್ದಲ್ಲಿ ವಿವಿಧ ಹಂತದ ಸಮಿತಿಗಳ ಗಮನಕ್ಕೆ ಲಿಖಿತ ರೂಪದಲ್ಲಿ ತರಬೇಕಾಗುತ್ತದೆ. ಇದರಲ್ಲಿ ಮುಖ್ಯವಾದದು.
• ಅರಣ್ಯಾಧಿಕಾರಿಗಳು ಖುದ್ದಾಗಿ ಸ್ಥಳವನ್ನು ಪರಿಶೀಲಿಸಿ ತಮ್ಮ ನಿಖರವಾದ ಅಭಿಪ್ರಾಯವನ್ನು ಗ್ರಾಮಸಭೆ/ಅರಣ್ಯ ಹಕ್ಕು ಸಮಿತಿಗೆ ನೀಡುವುದು. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸ್ಥಳದ ಪರಿಸ್ಥಿತಿ ಮತ್ತು ಲಭ್ಯವಿರುವ ಎಲ್ಲಾ ರೀತಿಯ ದಾಖಲಾತಿಗಳು, ನಕ್ಷೆಗಳು, ಸೆಟಲೈಟ್ ನಕ್ಷೆಗಳು ಹಾಗೂ ಇನ್ನಿತರೆ ದಾಖಲಾತಿಗಳನ್ನು ಪರಿಶೀಲಿಸಿದ ನಂತರವಷ್ಟೇ ಲಿಖಿತ ಅಭಿಪ್ರಾಯ ನೀಡುವುದು.
• ಹಿರಿಯರ ಹೇಳಿಕೆಗಳನ್ನು ಪರಿಗಣಿಸುವಾಗ ಸದರಿ ಹಿರಿಯರು 75 ವರ್ಷಕ್ಕೂ ಮೇಲ್ಪಟ್ಟಿನ ವಯಸ್ಸಿನವರಾಗಿದ್ದು, ಮಾನಸಿಕವಾಗಿ ಸ್ವಸ್ಥರಾಗಿರುವ ಬಗ್ಗೆ ದೃಢಪಡಿಸಿಕೊಳ್ಳುವುದು. ಸದರಿ ಹಿರಿಯರು 75 ವರ್ಷಕ್ಕೂ ಮೇಲ್ಪಟ್ಟು ವ್ಯಕ್ತಿಯೊಬ್ಬರು ವಾಸಿಸುತ್ತಿದ್ದರು ಎಂದು ಖಚಿತವಾಗಿ ಹೇಳಬೇಕಾದಲ್ಲಿ ಸದರಿ ಹಿರಿಯರಿಗೆ ಬುದ್ಧಿ ಬಂದ ನಂತರ 75 ವರ್ಷಗಳಷ್ಟು ವಯಸ್ಸಾಗಿದೆಯೇ (ದಿನಾಂಕ:13/12/2005ರಂದು) ಎಂಬುದನ್ನು ಕಡ್ಡಾಯವಾಗಿ ದೃಢಪಡಿಸಿಕೊಳ್ಳವುದು.
• ಅರಣ್ಯ ಹಕ್ಕುಗಳ ಸಮಿತಿಯು ಕ್ಲೇಮುದಾರರ ಅರ್ಜಿಗಳನ್ನು ಪರಿಶೀಲಿಸುವಾಗ ಹಾಗೂ ಸ್ಥಳ ತನಿಖೆ ಮಾಡುವಾಗ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರತಕ್ಕದ್ದು.
• ಅರಣ್ಯ ಮತ್ತು ಜೈವಿಕ ವೈವಿಧ್ಯ ಸಂರಕ್ಷಣೆಗಾಗಿ ಗ್ರಾಮಸಭೆಗೆ ಇರುವ ಕರ್ತವ್ಯಗಳ ಬಗ್ಗೆ ಮತ್ತು ಅರಣ್ಯ ಹಕ್ಕುಗಳ ಧಾರಕರ ಮತ್ತು ಇತರರ ಕರ್ತವ್ಯಗಳ ಬಗ್ಗೆ ಪ್ರತಿಯೊಂದು ಗ್ರಾಮಸಭೆಗೆ ಮಾಹಿತಿಯನ್ನು ಒದಗಿಸತಕ್ಕದ್ದು.
• ಬಾವಿಗಳು, ಸ್ಮಶಾನಗಳು, ಪವಿತ್ರ ಸ್ಥಳಗಳಂತಹ ಪ್ರಾಚೀನತೆಯನ್ನು ರುಜುವಾತು ಪಡಿಸುವ ಪಾರಂಪಾರಿಕ ರಚನೆಗಳನ್ನೂ ಸಾಕ್ಷ್ಯಗಳೆಂದು ಪರಿಗಣಿಸಬಹುದು.
ಸಾಗರ ತಾಲ್ಲೂಕಿನಲ್ಲಿ ಬುಡಕಟ್ಟು ಪಂಗಡಕ್ಕೆ ಸೇರಿರುವ 3179 ಜನರಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 1 ಲಕ್ಷದ 70 ಸಾವಿರ ಅರ್ಜಿಗಳು ಅರಣ್ಯಹಕ್ಕು ಮಾನ್ಯತೆ ಕಾಯ್ದೆಯಡಿ ಸಲ್ಲಿಕೆಯಾಗಿದ್ದು, ಇದರಲ್ಲಿ 95% ಅರ್ಜಿಗಳು ಮಾನದಂಡಕ್ಕೆ ಅನುಗುಣವಾಗಿರುವುದಿಲ್ಲ. ಈಗಾಗಲೇ ಭೂಮಿಯನ್ನು ಹೊಂದಿರುವ ಕುಟುಂಬಗಳ ಸದಸ್ಯರೂ ಈ ಕಾಯ್ದೆಯ ಅಡಿಯಲ್ಲಿ ಅರಣ್ಯಭೂಮಿಯ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವಾಗ ಮೇಲೆ ಹೇಳಿದ ನಿಯಮಗಳನ್ನು ಪಾಲಿಸಿ, ಕೇಂದ್ರ ಸರ್ಕಾರ ನಿಯಮಿಸಿದ ಕಾನೂನಿಗನುಗುಣವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ 24 ಅರ್ಜಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಮಾನ್ಯತೆ ನೀಡಲಾಗಿದ್ದು, ಅಕ್ಟೋಬರ್ 3ರಂದು ಮುಖ್ಯಮಂತ್ರಿಗಳು ಹಕ್ಕುಪತ್ರಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಇನ್ನುಳಿದ 1 ಲಕ್ಷ 69 ಸಾವಿರ ಚಿಲ್ಲರೆ ಅರ್ಜಿಗಳನ್ನು ಆದಷ್ಟು ತ್ವರಿತವಾಗಿ ವಿತರಿಸಲು ಆದೇಶವನ್ನು ನೀಡಿದ್ದಾರೆ. ಸಾಗರದಲ್ಲಿ ಮುಂದುವರೆದ ಹಾಗೂ ಮುಂದುವರೆಯುತ್ತಿರುವ ಜನಾಂಗಗಳ ರೈತರು ಅರಣ್ಯ ಹಕ್ಕಿನ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಅರಣ್ಯ ಇಲಾಖೆಯಿಂದ ಕಡತ ಕಂದಾಯ ಇಲಾಖೆಗೆ ಹೋದ ನಂತರದಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ 75 ವರ್ಷಗಳ ಹಿಂದಿನಿಂದಲೂ ಅಲ್ಲೇ ವಾಸಿಸುತ್ತಾ, ಜಮೀನು ಮಾಡಿಕೊಂಡಿದ್ದಾನೆ ಎಂದು ಧೃಡೀಕರಿಸಬೇಕಾಗುತ್ತದೆ. ಇದಕ್ಕಾಗಿ ಆ ಊರಿಯ ಹಿರಿಯರ ಸಹಕಾರವನ್ನು ಪಡೆಯಬೇಕು ಎಂಬುದನ್ನು ಕಾಯ್ದೆಯಲ್ಲಿ ಹೇಳಲಾಗಿದೆ. ಈ ಕಾಯ್ದೆಯ ಪ್ರಕಾರ (13/12/2005ಕ್ಕೆ 75 ವರ್ಷ ಪೂರೈಸಿರುವ + ಬುದ್ಧಿ ಬಂದ ನಂತರ ಅಂದರೆ 12 ವರ್ಷಗಳು) ಅಂದರೆ 97 ವರ್ಷದ ಹಿರಿಯ ಮಾತ್ರ ಸಾಕ್ಷಿ ಹೇಳಲು ಅರ್ಹರಾಗಿರುತ್ತಾನೆ. ಇಲ್ಲವೇ ವ್ಯವಸಾಯ ಮಾಡುತ್ತಿರುವ ಜಮೀನಿನ ಆಸುಪಾಸು ನಾಗರಬನವೋ, ಚೌಡಿಕಟ್ಟೆಯೋ, ವೀರಗಲ್ಲೋ ಇದ್ದು, ಅದನ್ನು ಸದರಿ ಹಕ್ಕುದಾರ ಪೂಜಿಸುತ್ತಿರಬೇಕು ಎಂಬ ಎರಡನೇ ಸಾಕ್ಷ್ಯವನ್ನು ಮಾನ್ಯ ಮಾಡಲಾಗುವುದು. ವಿಶ್ವವಿಖ್ಯಾತ ಜೋಗದ ಹತ್ತಿರವಿರುವ ಕಾರ್ಗಲ್ ಸುತ್ತಮುತ್ತಲಿನ ಅರ್ಜಿದಾರರು ಜೋಗಜಲಪಾತವನ್ನು ಸಾಕ್ಷಿಯಾಗಿ ಪರಿಗಣಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅಂತೆಯೇ ಮೊದಲನೇ ಸಾಕ್ಷಿಯಾಗಿ ಪರಿಗಣಿಸಲ್ಪಡುವ 97 ವರ್ಷದ ಹಿರಿಯರ ವಯಸ್ಸನ್ನು ಹಾಗೂ ಆತ ಮಾನಸಿಕವಾಗಿ ಸ್ವಸ್ಥನಾಗಿದ್ದಾನೆ ಎಂದು ದೃಢೀಕರಿಸಲು ಯಾವುದೇ ಮಾನದಂಡವಿಲ್ಲ. ಆಗಿನ ಕಾಲದಲ್ಲಿ ಜನನ ಪ್ರಮಾಣ ಪತ್ರದ ಕಲ್ಪನೆಯಿರಲಿಲ್ಲ. ಈಗಲೂ ಎಷ್ಟೋ ಜನಕ್ಕೆ ತಮ್ಮ ನಿಜವಾದ ವಯಸ್ಸು ಗೊತ್ತಿಲ್ಲ. ಇನ್ನು ಹೆಚ್ಚೆಂದರೆ, ವೋಟರ್ ಐಡಿಯಲ್ಲಿ ದಾಖಲಾಗಿರುವ ವಯಸ್ಸನ್ನು ಪರಿಗಣಿಸಬಹುದು ಎಂಬುದು ಒಂದು ಅಂಶವಾಗಿದೆ. ಆದರೆ, ಇದು ವೈಜ್ಞಾನಿಕ ರೀತಿಯ ಮಾದರಿಯಲ್ಲ. ವೋಟರ್ ಐಡಿ ತಯಾರಿಸುವಾಗ ಸದರಿ ವ್ಯಕ್ತಿ ಹೇಳಿದ ಅಂದಾಜು ವಯಸ್ಸನ್ನೇ ಪರಿಗಣಿಸುವ ಪರಿಪಾಠ ಭಾರತಾದ್ಯಂತ ಇದೆ.
ಸಾಗರ ತಾಲ್ಲೂಕಿನಲ್ಲಿ 15500 ಅರ್ಜಿಗಳು ಈ ಕಾಯಿದೆಯ ಅಡಿಯಲ್ಲಿ ಸಲ್ಲಿಸಲ್ಪಟ್ಟಿವೆ (ಇದರಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಅರ್ಜಿಗಳು ಬರೀ 617 ಮಾತ್ರ). ಎಲ್ಲಾ 15500 ಅರ್ಜಿಗಳನ್ನು ಮಾನ್ಯ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಮಾನ್ಯ ಮಾಡುತ್ತಾ ಹೋದಲ್ಲಿ ತಾಲ್ಲೂಕಿನ ಬಹುತೇಕ ಅರಣ್ಯ ಪ್ರದೇಶ ಖಾಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಕುಟುಂಬದ ಅನೇಕ ಸದಸ್ಯರು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಒಂದು ಕುಟುಂಬಕ್ಕೆ ಕನಿಷ್ಟ 5 ಎಕರೆ ಅರಣ್ಯ ಜಮೀನು ಮಂಜೂರು ಮಾಡಿದರೂ 15500 ಸಾವಿರ * 5 ಎಕರೆಯಂತೆ = 77500 ಎಕರೆ ಅರಣ್ಯಪ್ರದೇಶವು ಕೃಷಿಭೂಮಿಯಾಗಿ ಪರಿವರ್ತಿತವಾಗುತ್ತದೆ.
ಇದುವರೆಗೆ ಪರಿಶಿಷ್ಟ ವರ್ಗದ ಜನರಿಗೆ 10 ಒಟ್ಟು 3.04 ಎಕರೆ ಜಮೀನನ್ನು ಅರಣ್ಯಹಕ್ಕು ಮಾನ್ಯತೆ ಕಾಯ್ದೆಯಡಿ ನೀಡಲಾಗಿದೆ. ವಾಸ್ತವವಾಗಿ ಆ ಪ್ರದೇಶದಲ್ಲಿ ಸುಮಾರು 250 ಮರಗಳನ್ನು ಕಡಿದುರುಳಿಸಿದ್ದು ಸಮೀಕ್ಷೆಯಲ್ಲಿ ಕಂಡುಬಂದಿದೆ. ತಾಲ್ಲೂಕಿನಲ್ಲಿ ಪರಿಶಿಷ್ಟ ಪಂಗಡ ಸಂಖ್ಯೆಯು 19308 ಹಾಗೂ ಎಸ್.ಟಿಗಳ ಸಂಖ್ಯೆ 3971 ಇರುತ್ತದೆ ಹಾಗೂ ಇದುವರೆಗೆ ಇವರಿಂದ ಸಲ್ಲಿಕೆಯಾಗಿ, ವಿತರಣೆ ಹಂತದಲ್ಲಿರುವ ಅರ್ಜಿಗಳ ಸಂಖ್ಯೆ ಬರೀ 12. ಇತರೆ ಅರ್ಜಿಗಳ ಸಂಖ್ಯೆ 546. ಎಸ್.ಟಿ.ಗಳನ್ನು ಹೊರತು ಪಡಿಸಿ ಇನ್ನಿತರ ಎಲ್ಲಾ ಜಾತಿ-ಪಂಗಡಗಳ ಅರ್ಜಿಗಳು ಕಾಯ್ದೆಯ ಇತರೆ ಕಾಲಂನಲ್ಲಿ ಕಂಡು ಬರುತ್ತದೆ. ಅಂದರೆ 546 ಅರ್ಜಿಗಳ ಸಿಂಹಪಾಲು, ಈಗಾಗಲೇ ಜಮೀನು ಹೊಂದಿರುವ, ಸಾಗುವಳಿ ಮಾಡುತ್ತಿರುವ ಕುಟುಂಬಗಳಿಂದಲೇ ಸಲ್ಲಿಕೆಯಾದ ಅರ್ಜಿಗಳೆಂದು ದಾಖಲೆಗಳು ಹೇಳುತ್ತವೆ. ತಾಲ್ಲೂಕಿನ ಬಹುಸಂಖ್ಯಾತ ವರ್ಗಗಳೆಂದರೆ, ಈಡಿಗರು, ಹವ್ಯಕ ಬ್ರಾಹ್ಮಣರು ಹಾಗೂ ಲಿಂಗಾಯತರು. ಇವರಲ್ಲಿ ಬಹುತೇಕ ಕುಟುಂಬಗಳು ಸಾಗುವಳಿ ಜಮೀನು ಹೊಂದಿರುತ್ತಾರೆ. ಈ ಹಂತದಲ್ಲೇ ಕಾಯ್ದೆಯ ದುರುಪಯೋಗವಾಗುತ್ತಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.
ಸಾಗರ ತಾಲ್ಲೂಕಿನಲ್ಲಿ ಆಗುತ್ತಿರುವುದೇನೆಂದರೆ, ಅರಣ್ಯಹಕ್ಕು ಕಾಯ್ದೆಯ ಆಶಯಗಳಿಗೆ ವ್ಯತಿರಿಕ್ತವಾಗಿ ರಿಯಲ್ ಎಸ್ಟೇಟ್ ತರಹದ ಮನೋಭಾವ ಹೊಂದಿರುವ ವ್ಯಕ್ತಿಗಳು, ಅರ್ಹರಲ್ಲದವರಿಗೂ ಜಮೀನು ಮಂಜೂರು ಮಾಡಿಸುವ ಆಸೆ ಹುಟ್ಟಿಸುತ್ತಿದ್ದಾರೆ. ಅರಣ್ಯ ಪ್ರದೇಶದ ಮರಗಳನ್ನು ತೆರವು ಮಾಡಿಸುವ ಕೆಲಸದಲ್ಲಿ ವ್ಯಾಪಕವಾಗಿ ತೊಡಗಿದ್ದಾರೆ. ಅಧಿಕಾರಿಗಳು ಸ್ಥಳಪರೀಶಿಲನಗೆ ಬಂದಾಗ ಸಾಗುವಳಿ ಮಾಡುವ ಜಮೀನಿನಲ್ಲಿ ನೈಸರ್ಗಿಕ ಮರಗಳು ಇರಬಾರದು ಎಂದು ಸಲಹೆಗಳನ್ನು ನೀಡಲಾಗುತ್ತಿದೆ. ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಯಂತ್ರಗಳನ್ನು ಬಳಸಿ ಹತ್ತಿಪ್ಪತು ವರ್ಷ ವಯಸ್ಸಾದ ಅಡಕೆ-ತೆಂಗಿನ ಮರಗಳನ್ನು ಬೇರೆಡೆಯಿಂದ ಕಿತ್ತು ತಂದು ಜಮೀನು ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಲೇಖಕ ಗಮನಿಸಿದ ಅಂಶವಾಗಿದೆ.
[…] ಇಲ್ಲಿಯವರೆಗೆ […]