ಓದುವ ಹಕೀಕತ್ತಿಗೆ ನೂಕಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಅಜ್ಜ ನೆಟ್ಟ ಹಲಸಿನ ಮರ”: ಎಂ. ಜವರಾಜ್

ಕನ್ನಡದ ಪ್ರಗತಿಶೀಲ, ನವ್ಯ, ಬಂಡಾಯ ಸಾಹಿತ್ಯಗಳ ನಾನಾ ಸ್ತರಗಳ ಪ್ರಭಾವಗಳ ಪ್ರಗತಿಪರ ಚಿಂತನಶೀಲ ಲೇಖಕ ವ್ಯಾಸರಾಯ ಬಲ್ಲಾಳರು “ನಾನು ಒಂದು ಕಥೆಯೊ ಕಾದಂಬರಿಯೊ ಬರೆಯಲು ಆತುರ ತೋರುವುದಿಲ್ಲ. ಅದು ಒಳಗೆ ಗುದ್ದಿದಾಗ ಬರೆಯಲು ತೊಡಗುವೆ. ಹಾಗೆ ಸಮಯದ ಹೊಂದಾಣಿಕೆಯೂ ಇರಬೇಕು. ಈ ಮುಂಬಯಿ ಜೀವನ ವಿಧಾನಕ್ಕು ಬೆಂಗಳೂರಿನ ಜೀವನಕ್ಕು ವ್ಯತ್ಯಾಸ ಇದೆ. ಬೆಂಗಳೂರಿನ ಜೀವನ ವಿಧಾನಕ್ಕು ಉಡುಪಿಯ ಜೀವನಕ್ಕು ವ್ಯತ್ಯಾಸ ಇದೆ. ಜೊತೆಗೆ ಉಡುಪಿಯ ಜೀವನ ವಿಧಾನಕ್ಕು ಅಂಬಲಪಾಡಿಯ ಜೀವನಕ್ಕು ವ್ಯತ್ಯಾಸವಿದೆ. ಹೀಗೆ ನಾನು ಇಲ್ಲೆಲ್ಲ ಸುತ್ತಾಡಿದ ಮೇಲೆ ಇವೆಲ್ಲವೂ ಸುಮ್ಮ ಸುಮ್ಮನೆ ಸುಳಿದಾಡುವುದಿಲ್ಲ. ಅವು ಒದ್ದು ಗುದ್ದುತ್ತವೆ. ಅವು ಗುದ್ದಿದಾಗ ನನಗೆ ಎಚ್ಚರವಾಗುತ್ತದೆ. ಆ ಎಚ್ಚರವೇ ಈ ಕಾದಂಬರಿಯೋ ಕಥೆಯೋ ಆಗಿ ರೂಪ ಪಡೆಯುತ್ತವೆ. ಅವು ಗ್ರಾಮೀಣವೊ, ನಗರವೊ, ಸ್ಲಂ ಪರಿಸರವೊ ಸನ್ನಿವೇಶಗಳು ಪಾತ್ರಗಳು ವಿಸ್ತರಿಸಿಕೊಂಡಂತೆಲ್ಲ ಹಿಗ್ಗುತ್ತವೆ. ಇದು ನನ್ನ ಅನುಭವವಷ್ಟೆ; ಎಲ್ಲರಿಗೂ ಎಲ್ಲ ರಚನಕಾರರಿಗೂ ಹೀಗೆ ಆಗಬೇಕಾಗಿಲ್ಲ” ಎಂದು ತಮ್ಮ ‘ಬಂಡಾಯ’ ಕೃತಿಯ ಕುರಿತು ಜಿ.ಎಸ್.ಅಮೂರ, ಗೌರೀಶ ಕಾಯ್ಕಿಣಿ, ಕುರ್ತಕೋಟಿಯವರ “ವಿಸ್ತೃತವಾದ ವಿಭಿನ್ನ ಪ್ರಾದೇಶಿಕತೆ, ಭಾಷೆ, ಪಾತ್ರ, ಪರಿಸರ ನಿಮ್ಮ ಕಾದಂಬರಿಯ ವೈಶಿಷ್ಟ್ಯ. ಹೀಗೆ ಒಂದೆ ಕೃತಿಯಲ್ಲಿ ಅದೇಗೆ ಒಗ್ಗೂಡಿಸಿ ಇಷ್ಟನ್ನು ಮೇಳೈಸಿ ತರುತ್ತೀರಿ. ಇದು ನಿಮಗೆ ದುಬಾರಿ, ಅತ್ಯಂತ ಕ್ಲಿಷ್ಟ ಅನಿಸಲಿಲ್ಲವೇ?” ಅನ್ನುವ ಕ್ಲಿಷ್ಟ ಪ್ರಶ್ನೆಗಳಿಗೆ ನೀಡಿದ ಉತ್ತರವಿದು.

ಅಂದರೆ ಒಂದು ಕಥೆಯೋ ಕಾದಂಬರಿಯೋ ಅದರ ಭಾಷೆ ಮತ್ತು ಕಥೆ ನಡೆಯುವ ಪ್ರಾದೇಶಿಕ ಎಲ್ಲೆ ಲೇಖಕನ ಜೀವನ ವಿಧಾನವನ್ನು ಸೂಚ್ಯವಾಗಿ ತೆರೆದಿಡುತ್ತದೆ ಎಂಬುದು ವ್ಯಾಸರಾಯ ಬಲ್ಲಾಳರ ಮಾತಿನ ತಾತ್ಪರ್ಯ ಅನ್ನಬಹುದು! ಕನ್ನಡದ ಬಹುತೇಕ ಲೇಖಕರ ವಿಶಿಷ್ಟ ಕೃತಿಗಳೂ ಬಲ್ಲಾಳರ ಮಾತಿನ ತಾತ್ಪರ್ಯದ ಮೂಲ ಸೆಲೆಯೂ ಆಗಿದೆ.

ಬಲ್ಲಾಳರ ಈ ಮಾತಿನ ತಾತ್ಪರ್ಯ ನಾನಿಲ್ಲಿ ಕಾಣಿಸಲು, “ಸತೀಶ್ ಶೆಟ್ಟಿ ಅವರ ಎಲ್ಲಾ ಕತೆಗಳು ಗ್ರಾಮೀಣ ಸೊಗಡಿನಿಂದ ಕೂಡಿವೆ. ತುಂಬಾ ವರ್ಷಗಳಿಂದ ಬೆಂಗಳೂರಿನಂತ ನಗರದಲ್ಲಿ ವಾಸವಿರುವುದರಿಂದ ಮುಂದೆ ನಗರ ಪ್ರದೇಶದ ಕಥಾ ಹಂದರವನ್ನುಳ್ಳ ಕತೆಗಳೂ ಮೂಡಿ ಬರಲಿ ಎಂದು ‘ಅಜ್ಜ ನೆಟ್ಟ ಹಲಸಿನ ಮರ’ ಕಥಾ ಸಂಕಲನ ಕುರಿತು ‘ಪಂಜು ಅಂತರ್ಜಾಲ ಪತ್ರಿಕೆ’ ಸಂಪಾದಕ ಡಾ.ನಟರಾಜು ಎಸ್.ಎಂ‌. ತಮ್ಮ ಹಿನ್ನುಡಿಯಲ್ಲಿ ದಾಖಲಿಸಿರುವುದರ ಮಾತಿಗೆ ಪೂರಕವಾಗಿ ಓದುಗನ ಗ್ರಹಿಕೆಯ ಇಚ್ಛಾಸಕ್ತಿಯನ್ನೂ ಗಣಿಸಬೇಕೆ? ಅಥವಾ ಲೇಖಕನೊಬ್ಬ ತನ್ನ ಅನುಭವನ್ನು ಹೀಗೆ ವಿಂಗಡಿಸಿ ಅಥವಾ ಪ್ರತ್ಯೇಕಿಸಿ ತನ್ನ ಸಾಹಿತ್ಯ ರಚನೆಗೆ ಒತ್ತು ಕೊಡಬೇಕೆ? ಎಂಬ ಜಿಜ್ಞಾಸೆಯೊಂದಿಗೆ ಸತೀಶ್ ಶೆಟ್ಟಿ ವಕ್ವಾಡಿ ಅವರ ‘ಅಜ್ಜ ನೆಟ್ಟ ಹಲಸಿನ ಮರ’ ಕೃತಿಯನ್ನು ತಲಸ್ಪರ್ಶಿ ನೋಡಬೇಕಿದೆ.

ಸತೀಶ್‌ ಶೆಟ್ಟಿ ವಕ್ವಾಡಿ

ಈ ಕಥಾ ಸಂಕಲನದಲ್ಲಿನ ಎಲ್ಲ ಕಥೆಗಳು ತುಂಬಾ ಆಪ್ತವಾಗಿವೆ. ಈ ಸಂಕಲನದ ಅಜ್ಜ ನೆಟ್ಟ ಹಲಸಿನ ಮರ, ಬಣ್ಣದ ನೆರಳು, ದಾಳ, ದೇವರ ಕೆಲಸ, ಜೀರ್ಣೋದ್ಧಾರ, ಕಾಣೆಯಾದವರು, ನೇಣುಗಂಬ, ಪುನೀತಭಾವ, ಸೇತುವೆ, ಶಾಪ ಎಂಬ ಹತ್ತು ಕಥೆಗಳ ಆರಂಭಿಕ ಕಥಾ ಪ್ರವೇಶ, ಪ್ರಭುಶಂಕರರ ‘ಪ್ರೇಮಭಿಕ್ಷು’ ಕಾದಂಬರಿಯಲ್ಲಿ ಬರುವ ಸನ್ನಿವೇಶದ ವರ್ಣನೆಯ ಕಾವ್ಯಾತ್ಮಕ ರೂಪವನ್ನು ಹೊಂದಿವೆ. ಹಾಗೆ ಓದುಗರಿಗೆ ಸುಲಲಿತವಾಗಿ ದಕ್ಕುವ ಹಾಗೆ ತಡೆರಹಿತವಾಗಿ ಸರಳವಾಗಿ ಓದಿಸಿಕೊಂಡು ಹೋಗುವ ಅಪರೂಪದ ಭಾಷಾ ಪ್ರಯೋಗ ಈ ಎಲ್ಲ ಕಥೆಗಳ ವಿಶಿಷ್ಟ ಲಕ್ಷಣ ಅನ್ನಬಹುದಾದರು ಇಲ್ಲಿ ತಂತ್ರಕ್ಕಿಂತಲು ಕಥೆ ಪ್ರಧಾನವಾಗಿ ನೇರ ನಿರೂಪಣೆಯನ್ನೇ ಅವಲಂಭಿಸಿರುವ ವಿಜಯ ಸಾಸನೂರ ಅವರ ‘ಅರಣ್ಯ ಪರ್ವ’ ಕಥೆಗಳ ಜನಪ್ರಿಯ ಧಾಟಿಯಲ್ಲಿವೆ.

ಈ ನೇರ ನಿರೂಪಣಾ ಧಾಟಿ ವೈಶಿಷ್ಟ್ಯತೆಗೆ , “ಯಾವುದೇ ಚೌಕಟ್ಟು ಮತ್ತು ಕಟ್ಟುಪಾಡುಗಳ ಒಳಗೆ ಕುಳಿತು ಕತೆ ಬರೆಯುವ ಜಾಯಮಾನ ನನ್ನದಲ್ಲ ಮನಸ್ಸು ಹೇಗೆ ಹರಿಯುತ್ತೊ ಹಾಗೆ ನಾನು ಕತೆಯನ್ನು ಬೆಳೆಸುತ್ತಾ ಹೋಗುತ್ತೇನೆ. ಕಾಲ್ಪನಿಕ ವಸ್ತು, ಘಟನೆ, ಪಾತ್ರಗಳ ಜೊತೆಗೆ ನನ್ನ ಜೀವನಾನುಭವವನ್ನು ನಿರೂಪಣೆಗೆ ಬಳಸಿಯೇ ನನ್ನ ಕತೆಗಳು ರೂಪಿತವಾಗಿದ್ದು” ಎಂದು ಸತೀಶ್ ಶೆಟ್ಟಿ ವಕ್ವಾಡಿ ತಮ್ಮ ಜನಪ್ರಿಯ ಧಾಟಿಗೆ ಪೂರಕವಾಗಿ ಕಥೆ ಕಟ್ಟುವ ಜಾಡನ್ನು ಬಿಡಿಸಿಟ್ಟಿರುವ ಮೂಲದಲ್ಲಿದೆ.

ಇಲ್ಲಿನ ಕಥೆಗಳ ಒಳ ಪ್ರವೇಶಿಸಿ ಓದುತ್ತಾ ಹೋದಂತೆಲ್ಲ ಜನಪ್ರಿಯ ಕಥಾ ಜಾಡೊಂದು ಓದುಗನಿಗೆ ದಾರಿ ಮಾಡಿಕೊಡುತ್ತಾ ಇಷ್ಟು ಬೇಗ ಕಥಾ ದಾರಿ ಮುಗಿತಾ ಅನ್ನಿಸಿ ಬೆರಗು ಹುಟ್ಟಿಸುತ್ತವೆ.

ವಿಶ್ಲೇಷಕ ಜಿ.ರಾಜಶೇಖರ ಅವರು ಬೊಳುವಾರು ಮಹಮದ್ ಕುಂಞ ಅವರ ‘ದೇವರುಗಳ ರಾಜ್ಯದಲ್ಲಿ’ ಕಥಾ ಸಂಕಲನಕ್ಕೆ ಬರೆದಿರುವ ಮುನ್ನುಡಿಯಲ್ಲಿ “ಜನಪ್ರಿಯತೆ ಎಂದೂ ಸಾಹಿತ್ಯದ ಮಾನದಂಡವಾಗಲಾರದಾದರೂ ಬೊಳುವಾರರು ಈಗ ಕಥೆಗಳನ್ನು ಬರೆಯುತ್ತಿರುವ ಸಂದರ್ಭಕ್ಕೆ ವಿಶಿಷ್ಟವಾದ ಕೆಲವು ಕಾರಣಗಳಿಗೋಸ್ಕರ ನಾನು ಅವರ ಜನಪ್ರಿಯತೆಗೆ ಸಂತೋಷ ಪಡುತ್ತೇನೆ. ಜನಪ್ರಿಯ ಸಾಹಿತ್ಯದ ನಿಲುವುಗಳು, ಹೆಚ್ಚಿನ ಸಂದರ್ಭದಲ್ಲಿ ಪೂರ್ವನಿಶ್ಚಿತವಾದ, ಪಟ್ಟಭದ್ರ ವ್ಯವಸ್ಥೆಯಿಂದ ಅಂಗೀಕೃತವಾದ ನಿಲುವುಗಳೇ ಆಗಿರುತ್ತವೆ” ಎಂದು ಜನಪ್ರಿಯ ಮಾದರಿಯ ಒಂದು ಸ್ಥೂಲಗುಚ್ಛವನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಹಾಗೆ “ಗಿರಾಕಿಗಳಿಗೆ ಸೋಪು ಮಾರಲು ಕೂತವನಿಗೆ ಭಾಷೆಯ ಹಂಗಿಲ್ಲ. ಹೆಚ್ಚು ಜನರನ್ನು ಒಲಿಸಿಕೊಂಡು, ಹೆಚ್ಚು ಸೋಪು ಮಾರಾಟ ಮಾಡಲು ಭಾಷೆಗಿಂತ ಉತ್ತಮವಾದ ಅಗ್ಗವಾದ ಸಾಧನವೊಂದು ದೊರೆತರೆ ಆತ ಭಾಷೆಗೆ ವಿದಾಯ ಹೇಳುತ್ತಾನೆ. ಹಾಗಾಗಿ ಜನಪ್ರಿಯ ಸಾಹಿತ್ಯಕ್ಕೂ ಭಾಷೆ ಒಂದು ಜಡ ವಾಹಕ. ಪೂರ್ವನಿಶ್ಚಿತ ನಿಲುವುಗಳನ್ನೂ ‘ಅನುಭವ’ ಗಳನ್ನೂ ಹೆಚ್ಚು ತಾಪತ್ರಯವಿಲ್ಲದೆ ಓದುಗರಿಗೆ ರವಾನಿಸುವ ಕೊಳವೆ” ಎಂದು ಜನಪ್ರಿಯ ಭಾಷಾ ಸಾಹಿತ್ಯದ ಮಿತಿಗಳ ಆಳ ಅಗಲವನ್ನು ಬೊಳುವಾರರ ಕಥಾ ಸಂದರ್ಭದಲ್ಲಿ ಎಚ್ಚರಿಸುತ್ತಾರೆ. ಜಿ.ರಾಜಶೇಖರರ ಈ ಎಚ್ಚರದ ಚಾಟಿ, ಹೊಸದಾಗಿ ಕಥಾ ಲೋಕಕ್ಕೆ ಪ್ರವೇಶಿಸಿ ಕಥೆ ಕಟ್ಟುವ ಕಥೆಗಾರರಿಗೆ ಬೆರಗು ಹುಟ್ಟಿಸುವಂತೆ, ಸತೀಶ್ ಶೆಟ್ಟಿ ವಕ್ವಾಡಿ ಅವರ ಕಥಾ ಲೋಕದ ಪ್ರವೇಶದ ಕಥೆಗಳ ಆಳ ಅಗಲವನ್ನು ಅಳತೆಗೋಲಿಗಿಟ್ಟು ನೋಡಿದರೆ ಅದೆ ಬೆರಗು ಆವರಿಸುತ್ತದೆ.

ಇಂಥ ಬೆರಗಿನ ಕಥೆಗಳು ಆಧುನೀಕರಣಗೊಂಡ ಸಾಮಾಜಿಕ ವ್ಯವಸ್ಥೆ, ಒಂದು ಮಟ್ಟದ ಜೀವನ ವಿಧಾನವನ್ನೇ ಬದಲಾಯಿಸಿ ತನ್ನ ಮಗ್ಗುಲಲ್ಲಿ ಇಟ್ಟುಕೊಂಡು ಆಟವಾಡುವಂತೆ ಕಾಣುತ್ತ, ಕೆಲವು ಮಿತಿಗಳ ನಡುವೆಯೂ ಇಲ್ಲಿನ ಕಥೆಗಳ ವಸ್ತು ವೈವಿಧ್ಯೆತೆ ಕಥೆಗಾರನ ತನ್ನ ವಿಭಿನ್ನ ಕಥಾ ನಿರೂಪಣಾ ಶೈಲಿಯಿಂದಲೇ ಗಮನ ಸೆಳೆಯುತ್ತವೆ.

ಈ ಸಂಕಲನದಲ್ಲಿನ ಹತ್ತೂ ಕಥೆಗಳು ತಲೆಮಾರಿನ ತಳಮಳವನ್ನು ಹೇಳುತ್ತವೆ. ಹಾಗು ಪ್ರತಿ ತಲೆಮಾರನ್ನು ಪ್ರತಿನಿಧಿಸುವ ಜೀವಂತ ಸಾಕ್ಷ್ಯಗಳಾಗುತ್ತವೆ.

ಇಲ್ಲಿನ ‘ಅಜ್ಜ ನೆಟ್ಟ ಹಲಸಿನ ಮರ’ ಈ ಸಂಕಲನದ ಮೊದಲ ಕಥೆ. ನ್ಯಾಷನಲ್ ಹೈವೆ ಕಾಮಗಾರಿಗಾಗಿ ತುತ್ತಾಗುವ ಮೊದಲು ತನಗಾಗಿ ತನ್ನ ಅಜ್ಜ ನೆಟ್ಟ ಹಲಸಿನ ಮರವನ್ನು ಉಳಿಸಿಕೊಳ್ಳುವ ಉಮೇದಿನಲ್ಲಿ ದೇಶ, ಗಡಿ, ಭಾಷೆಯ ಎಲ್ಲ ಅಳತೆಗಳನ್ನು ಮೀರಿ ಕಥೆ ಭಾವನಾತ್ಮಕವಾದ ಜಾಡಿನಲ್ಲಿ ಓದುಗನನ್ನು ಹಿಡಿದಿಡುತ್ತದೆ. ತನ್ನದೇ ಆದ ಪಥದತ್ತ ಮುಖ ಮಾಡಿ ದಾಟಿ ಹೋದ ಅನುಭವ ನೀಡುತ್ತದೆ. ಹಾಗೆ ಕಥೆಯ ಕೊನೆಗೆ, ಜಗತ್ತು ಆಧುನಿಕತೆಯ ಕಡು ವ್ಯಾಮೋಹಕ್ಕೆ ಸಿಲುಕಿದ ಪರಿಯನ್ನು ‘ಪರಿವರ್ತನೆ’ ನೆವದಲ್ಲಿ ಇಲ್ಲಿನ ಕಥಾ ನಾಯಕ ನವೀನ ಬೆರಗುಗೊಳ್ಳುತ್ತಾನೆ. ಇದು ಕಥೆಗಾರನ ಕಥಾ ಕುಶಲತೆಯ ಪರಿಣಾಮದಲ್ಲಿ ಈ ಕಥಾ ನಾಯಕ ಕಾನೂನು ಹೋರಾಟದ ತಾರ್ಕಿಕ ಅಂತ್ಯ ಕಾಣುವ ಮೊದಲೇ ಆಧುನಿಕತೆಯನ್ನು ತಣ್ಣಗೆ ಒಪ್ಪುವ ಆತ್ಮತೃಪ್ತಿಯನ್ನು ಹೊಂದಿ ಕಥೆ ವ್ಯವಸ್ಥೆ ಒಂದು ಮಗ್ಗುಲಿಗೆ ಹೊರಳಿ ಕೊನೆಗೊಳ್ಳುತ್ತದೆ.

ಧರ್ಮಕಾರಣವು ಪ್ರತಿಷ್ಠೆ ರೂಪ ಪಡೆದು ಬೇರು ಬಿಡುತ್ತಿರುವ ದುರಿತ ಕಾಲವಿದು. ಅವು ಕಾಲದಿಂದ ಕಾಲಕ್ಕೆ ರಂಗುರಂಗಿನ ಬಣ್ಣ ಬಳಿದುಕೊಂಡು ಹಿಕ್ಮತ್ತಿನಲ್ಲಿ ತಣ್ಣಗೆ ಆವರಿಸುವ ಗುಣವನ್ನು ವಕ್ವಾಡಿ ಅವರು ‘ಬಣ್ಣದ ನೆರಳು’ ಕಥೆಯಲ್ಲಿ ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದಾರೆ.

ಶಾಲಿನಿ ಶ್ರೀಮಂತ ಕ್ರಿಶ್ಚಿಯನ್ ಧರ್ಮದ ಗಂಡನ್ನು ಪ್ರೇಮಿಸುತ್ತಾಳೆ. ಇದು ತಂದೆ ನರಸಿಂಹನಿಗೆ ತಿಳಿಯುವ ಮೂಲಕ ಅವನೊಳಗೆ ಸ್ವಾಭಿಮಾನ ಮತ್ತು ಪ್ರತಿಷ್ಠೆಯ ‘ಧರ್ಮಯುದ್ಧ’ ವೇ ನಡೆಯುತ್ತದೆ. ಅದು ಅವನನ್ನು ಎಡಬಿಡದೆ ಕಾಡುತ್ತ ಕುಕ್ಕುತ್ತ ನಿದ್ರಾಹೀನನಾಗಿಸುತ್ತದೆ.

ಇಲ್ಲಿ ಶಾಲಿನಿಯ ಮೂಲಕ ಕಥೆಯ ಕೇಂದ್ರ ಅವಳ ಅಪ್ಪ, ಅಮ್ಮ, ಅಣ್ಣನ ಒಳ ಆಸೆ – ಒಟ್ಟು ಅವರ ಕುಟುಂಬದ ಒಂದಿಡೀ ಸಮಸ್ಯೆ ಶಮನದ ಪಾತ್ರ ವಹಿಸುತ್ತದೆ. ಆ ಪಾತ್ರದ ಕಾರಣ ಧರ್ಮ ಮತ್ತು ಪ್ರೇಮದ ನಡುವೆ ಒಂದು ವ್ಯವಹಾರಿಕ ಲೇಪವೂ ಬೆಸೆದುಕೊಳ್ಳುತ್ತದೆ. ಈ ವ್ಯಾವಹಾರಿಕ ಲೇಪದಿಂದ ತನ್ನ ಕುಟುಂಬದೊಳಗೇ ನರಸಿಂಹ ಅಸ್ಸಹಾಯಕನಾಗುತ್ತಾನೆ. ಅವನ ಅಸ್ಸಹಾಯಕತೆ ಮಗಳ ಅಂತರ್ಧಮೀಯ ಗಂಡಿನೊಂದಿಗಿನ ಮದುವೆಗು ಮುನ್ನವೇ ಅಲ್ಲಿಂದ ದೂರ ಸರಿಯುತ್ತಾನೆ. ಇಲ್ಲಿ ನರಸಿಂಹನ ಪಾತ್ರದಲ್ಲಿ ಅನ್ಯಧರ್ಮ ನಿರಾಕಾರಣದ ಚಿತ್ರಣವನ್ನು ವಕ್ವಾಡಿ ಬಲು ಸೊಗಸಾಗಿ ನಿರೂಪಿಸಿ ಆ ಪಾತ್ರಕ್ಕೆ ತೂಕದ ನ್ಯಾಯ ಒದಗಿಸಿ ‘ಬಣ್ಣದ ನೆರಳಿ’ನಲ್ಲಿ ಪರಿಣಾಮಕಾರಿಯಾದ ಗಂಭೀರ ರೇಖಾಚಿತ್ರ ಬಿಡಿಸಿಟ್ಟಿದ್ದಾರೆ.

ರಾಜಕಾರಣದಲ್ಲಿ ಒಂದು ಮಾತಿದೆ-‘ಇಲ್ಲಿ ಯಾರು ಶತ್ರುಗಳೂ ಅಲ್ಲ, ಇಲ್ಲಿ ಯಾರು ಮಿತ್ರರೂ ಅಲ್ಲ!’ ಎಂದು. ಅದು ಅವಕಾಶವಾದಿ ನೆಲೆಯಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಸಾವಕಾಶವಾಗಿ ನಡೆದುಕೊಂಡು ಹೋಗುತ್ತದೆ. ಇಲ್ಲಿ ಬೆಳಕಿಗೆ ಅವಕಾಶವೇ ಇಲ್ಲ ಬರೀ ಕತ್ತಲು! ಕತ್ತಲಿನ ಪ್ರಪಂಚದಲ್ಲಿ ಏನು ಬೇಕಾದರು ಜರುಗಬಹುದು! ಹಾಗೆ, ಆ ಕತ್ತಲೊಳಗೆ ಬೆಳಕಿನ ಚಿತ್ರ ಚಿತ್ತಾರಗಳು ಕಣ್ಣಿಗೆ ಹಬ್ಬ ಒದಗಿಸುತ್ತದೆ. ಇದು ಹಸಿದ ಕತ್ತೆಯ ಮೂತಿಗೆ ಉದ್ದದ ಕಡ್ಡಿ ಸಿಕ್ಕಿಸಿ ಅದರ ಬಾಯಿಗೆ ಎಟುಕದ ರೀತಿಯಲ್ಲಿ ಹುಲ್ಲು ಕಟ್ಟಿ ಬಿಟ್ಟಂತೆ, ಆ ಹುಲ್ಲು ತಿಂದು ಹಸಿವು ನೀಗಿಸಿಕೊಳಲು ಹಸಿದ ಹೊಟ್ಟೆಯಲ್ಲೆ ಕತ್ತೆ ಹುಲ್ಲು ನೋಡುತ್ತ ನಾಲಿಗೆ ಚಾಚುತ್ತ ಓಡುವ ರೀತಿಯಲ್ಲಿ ಇಲ್ಲಿನ ‘ದಾಳ’ ಕಥೆಯೊಳಗೊಂದು ರಾಜಕೀಯ ದಾಳ ಉರುಳಿ ಸ್ಥಿತ್ಯಂತರಗೊಂಡು ಪಲ್ಲಟವೊಂದು ಜರುತ್ತದೆ. ಹಾಗೆ, ಹುಲ್ಲಿನ ಆಸೆಗೆ ಬಿದ್ದ ಹಸಿದ ಕತ್ತೆಯಂತೆ ನರಹರಿ ಒಳಬೈಲುವಿನ ರಾಜಕೀಯ ಚಿತ್ರಣವು ನಿರೂಪಿತಗೊಂಡಿದೆ.

ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ರಾಜಕೀಯವಾದ ವಸ್ತು ವಿಷಯವಿರುವ ‘ದಾಳ’ ದೊಳಗೆ ಒಂದು ಕಾಲ್ಪನಿಕ ರಾಜಕೀಯ ಪಕ್ಷ ಮತ್ತು ಸನ್ನವೇಶವನ್ನು ತಂದು ಪ್ರಸ್ತುತ ರಾಜಕಾರಣದ ಒಳ ಹುನ್ನಾರಗಳನ್ನು ಬಿಚ್ಚಿಡುತ್ತಾರೆ.

ಕೆಲ ವರ್ಷಗಳ ಹಿಂದೆ ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ತನ್ನ ಚಿತ್ರವೊಂದರಲ್ಲಿ ‘ಲಿಂಗೇಶ್ ಪತ್ರಿಕೆ’ ಮತ್ತು ‘ಲಿಂಗೇಶ್’ ತರಹದ ಪಾತ್ರ ಸೃಷ್ಟಿಸಿದ್ದ. ಅದನ್ನು ಗಮನಿಸಿದ ‘ಪತ್ರಿಕೆ’ ಬಳಗ “ವರ್ತಮಾನದ ಸಂಗತಿಗಳನ್ನು ನೇರವಾಗಿಯೇ ಹೇಳಿದ್ದರೆ ನಾವೇನು ಮೊಕದ್ದಮೆ ಹೂಡುತ್ತಿರಲಿಲ್ಲ. ಬದಲಿಗೆ ಆತನ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟುತ್ತಿತ್ತು. ವಾಸ್ತವ ನೆಲೆಗಟ್ಟಿನಲ್ಲಿ ಹೇಳಬಹುದಾದದನ್ನು ಅವಾಸ್ತವಿಕವಾಗಿ ಪರದೆಗೆ ತರುವುದೆಂದರೆ ನಿರ್ದೇಶಕನ ಸೃಜನಶೀಲತೆ ಮೇಲೆ ಯಾವ ಕುತೂಹಲವೂ ಉಳಿದಿರಲಾರದು ” ಎಂದಿತ್ತು. ಹಾಗಾಗಿ ವಕ್ವಾಡಿ ತಮ್ಮ ‘ದಾಳ’ವನ್ನು ಕಾಲ್ಪನಿಕ ಪಕ್ಷಗಳಿಂದ ವಿಮುಕ್ತಿಗೊಳಿಸಿ ದಾಳಗಳ ಮೇಲೆ ದಾಳ ಉರುಳಿಸಿ ತಮ್ಮ ಅಸ್ತಿತ್ವ ಕಾಯ್ದಿರಿಸಿಕೊಳ್ಳಲು ಹೆಣಗಾಡುತ್ತಿರುವ ಪ್ರಸ್ತುತ ಬಿಜೆಪಿ ಕಾಂಗ್ರೆಸ್ಸು ಜೆಡಿಎಸ್ಸು ಎಸ್ಡಿಪಿಐ ಬಿಎಸ್ಪಿ ತರಹದ ಪಕ್ಷಗಳನ್ನು ಕಥೆಯೊಳಗೆ ತೂರಿಸಿ ನಿರೂಪಿಸಿದ್ದರೆ ಕಥೆಗೊಂದು ಗಟ್ಟಿತನ ಪ್ರಾಪ್ತವಾಗುತ್ತಿತ್ತು. ಹಾಗು ವರ್ತಮಾನದ ರಾಜಕೀಯ ತಲ್ಲಣಗಳಿಗೂ ಸಾಕ್ಷಿಯಾಗಿ ವಾಸ್ತವಿಕ ರಾಜಕಾರಣದ ಮೇಲೂ ‘ದಾಳ’ದ ಪ್ರಭಾವ ಸ್ಪಷ್ಟವಾಗಿ ಇರುತ್ತಿತ್ತು ಎಂಬುದು ಕಥೆ ಓದಿದ ಯಾರಿಗಾದಾರೂ ಅನಿಸದೆ ಇರದು.

‘ದೇವರ ಕೆಲಸ’ ಹೆಣ್ಣಿನ ಮೇಲೆ ಚಿತ್ರಿತವಾಗಿರುವ ವಿವಿಧ ಆಯಾಮಗಳನ್ನು ಹೊಂದಿರುವ ಕಥೆ. ಹಾಗೆ ಈ ಕಥೆ ಇಡೀ ಸಂಕಲನದಲ್ಲೆ ಬಿಗಿ ನಿರೂಪಣೆ ಹೊಂದಿರುವ ಗಟ್ಟಿ ಕಥೆ. ಕಥೆಗಾರ ವಕ್ವಾಡಿ ಈ ಕಥೆ ರಚನೆಯಲ್ಲಿ ತಮ್ಮ ಸೃಜನಶೀಲತೆಯನ್ನೇ ಒರೆಗೆ ಹಚ್ಚಿದ್ದಾರೆ. ಹಾಗೆ ನುರಿತ ಕಥೆಗಾರನೊಬ್ಬನ ಕಥಾ ಕುಶಲತೆಗೆ ಈ ಕಥೆ ಕಟ್ಟುವಿಕೆಯಲ್ಲಿ ವ್ಯಕ್ತವಾಗಿದೆ. ಅಷ್ಟು ಅಚ್ಚುಕಟ್ಟುತನ ಈ ಕಥಾ ಹಂದರದಲ್ಲಿದೆ ಎನ್ನಬಹುದು.

ಇಲ್ಲಿನ ಬಸ್ವನೇ ಕಥೆಯ ಕೇಂದ್ರ. ಹಾಗೆ ಅವನ ಹುಟ್ಟಿನ ಮೂಲವೂ ಅದಕ್ಕಿಂತ ಪ್ರಧಾನ ಕೇಂದ್ರ. ಇವೆರಡು ಪ್ರಧಾನ ಕೇಂದ್ರಗಳ ಸುತ್ತ ಸುತ್ತುವ ಕೊಜೆ ಯಾನೆ ಹೇಲು ಗೋವಿಂದ ಶೆಟ್ಟರು ಸತ್ಯಗಳನ್ನು ಸುಳ್ಳಾಗಿಸಿ ಅಸತ್ಯಗಳನ್ನು ಸತ್ಯವಾಗಿಸಿ ಮುಖ್ಯವಾಹಿನಿಯಲ್ಲಿ ಮುಖ್ಯವಾಗಿರುವ ಇನ್ನೊಂದು ಶಕ್ತಿ ಕೇಂದ್ರ.

ಹೀಗೆ ಕೇಂದ್ರಗಳೇ ಪ್ರಧಾನವಾಗಿ ಚಿತ್ರಿತವಾಗಿರುವ ‘ದೇವರ ಕೆಲಸ’ ದಲ್ಲಿ ಬಸ್ವ ತನ್ನ ಅವ್ವನನ್ನು ಉಳಿಸಲು ಮಾಡುವ ಒಂದು ತಪ್ಪು ಪ್ರಧಾನವಾಗಿ ಬಿಂಬಿತವಾಗುವಷ್ಟು ಕೊಜೆ ಯಾನೆ ಹೇಲು ಗೋವಿಂದ ಶೆಟ್ಟರ ತಪ್ಪುಗಳು ಬಿಂಬಿತವಾಗುವುದಿಲ್ಲ. ಬದಲಿಗೆ ಆತನ ಪ್ರಭಾವಿತನದಲ್ಲೆ ಆತನ ತಪ್ಪುಗಳು ನೇಪಥ್ಯಕ್ಕೆ ಸರಿದು, ಸದರಿ ತಪ್ಪಗಳು ಒಳಗೊಳಗೆ ಬೇರು ಬಿಡುತ್ತ ಊರ ಬೀದಿ ಮಣ್ಣಿನ ಕಣಕಣದಲ್ಲು ವ್ಯಾಪಿಸುತ್ತಿದ್ದರು ಪ್ರಶ್ನಿಸಲಾರದ ಹಕೀಕತ್ತು!

ಈ ಹಕ್ಕೀಕತ್ತಿನ ನಡುವೆ ಕೆಲ ವರ್ಷಗಳ ನಂತರ ಬೆಳಗಿನ ಮಬ್ಬಿನಲಿ ಮಹಾಲಿಂಗೇಶ್ವರ ಗುಡಿಯಲ್ಲಿ ಬಸ್ವ ಕಾಣಿಸಿಕೊಳ್ಳುವಲ್ಲಿ ಕಥೆ ತನ್ನ ರೆಕ್ಕೆ ಬಿಚ್ಚಿಕೊಂಡು ತನ್ನ ಆರಂಭಿಕ ಖಾತೆ ತೆರೆಯುತ್ತದೆ. ಬಸ್ವನನ್ನು ಕಂಡ ಪರಿಚಾರಕ ರಾಮಣ್ಣಯ್ಯ, ಅವನನ್ನು ಕೊಂದು ಹಾಕುವಷ್ಟು ರೋಷ ಹೊರ ಹಾಕುತ್ತಾನೆ. ಕೊನೆಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆಯುತ್ತಾನೆ. ರಾಮಣ್ಣಯ್ಯನ ಪ್ರಶ್ನೆಗಳು ನರಳಿದಂತೆಲ್ಲ ಬಸ್ವನ ಉತ್ತರಗಳು ಮೂಕವಾಗಿ ಮರುಗುತ್ತವೆ. ಆ ಮರುಗುವ ಉತ್ತರಗಳಿಗೆ ‘ಅಲ್ಲ ಬಸ್ವ, ನೀನ್ ಈ ದೇವರ ದುಡ್ಡ್ ತಕೊಂಡೊಯಿ ಎಂತ ಮಾಡ್ದೆ, ನೀನ್ ಅಬ್ಬಿ ಕಾಯ್ಲಿ ಗುಣ ಮಾಡಿದೆ. ಅಬ್ಬಿ ಯಾರ್? ಅವ್ಳು ದೇವ್ರ ಅಲ್ದನಾ. ಕಣ್ಣಿಗ್ ಕಾಣೋ ಒಂದೇ ದೇವ್ರ ಅಂದ್ರೆ ಅಬ್ಬಿ ಅಲ್ದನ. ದೇವ್ರ ದುಡ್ಡನ್ನ ದೇವ್ರ ಕೆಲ್ಸಕ್ಕೆ ಬಳ್ಸಿದ್ದೀಯ್ಯ. ಇನ್ ವಾಪಸ್ ಕೊಡೋಕೆ ಎಂತ ಉಳ್ದಿತ್ತ್.’ ಎಂದು ಮಮ್ಮಲ ಮರುಗುತ್ತ ಹೇಳುವ ರಾಮಣ್ಣಯ್ಯನ ಪಾತ್ರ ಮತ್ತು ಸನ್ನಿವೇಶವನ್ನು ಗಾಢವಾಗಿ ಚಿತ್ರಿಸುವ ಕಥೆಗಾರ ವಕ್ವಾಡಿ, ದೇವರ ಕೆಲಸವೆಂದರೆ ಬಸ್ವನ ಅವ್ವನಲ್ಲಿ ದೇವರು ಕಂಡ ಪರಿ ಮತ್ತು ಬಸ್ವನೊಳಗಿನ ಅಳುಕನ್ನು, ಅದುವರೆಗೂ ಕಾಡುತ್ತಿದ್ದ ಪಾಪಪ್ರಜ್ಞೆಯನ್ನು ರಾಮಣ್ಣಯ್ಯನ ಒಂದೇ ಒಂದು ಮಾತಿನ ಮೂಲಕ ನಾಶ ಮಾಡಿ ‘ದೇವರ ಕೆಲಸ’ದ ಸಾಕಾರವನ್ನು ನಿಜಾರ್ಥದಲ್ಲಿ ದಾಖಲಿಸುತ್ತಾರೆ.

ಹಾಗೆ ಈ ಕಥೆಯ ಕೊನೆಯಲ್ಲಿ “ಆತ ಹೋದ ದಿಕ್ಕನ್ನೇ ನೋಡುತ್ತಾ ನಿಂತಿದ್ದ ರಾಮಣ್ಣಯ್ಯನನ್ನು ಎಚ್ಚರಿಸಿದ್ದು ದೇವಸ್ಥಾನದ ಒಳಗೆ ರಿಂಗಣಿಸಿದ ದೂರವಾಣಿ. ಫೋನ್ ಕಿವಿಗೊತ್ತಿಕೊಂಡು ಹಲೋ ಅಂದವನಿಗೆ ಆ ಕಡೆಯಿಂದ ಕೇಳಿಸಿದ್ದು ಅನಂತಯ್ಯನ ಮೊಮ್ಮಗಳು ಪ್ರಿಯಂವದೆಯ ಧ್ವನಿ. ‘ರಾಮಣ್ಣಜ್ಜಯ್ಯ, ನಮ್ ಅಜ್ಜನ ಸ್ಕೂಟರ್ ಹಾಳಾಗಿದೆಯಂತೆ. ಅದ್ಕೆ ಸೈಕಲ್ಲಲ್ಲೆ ಬರ್ತಾರಂತೆ. ಸ್ವಲ್ಪ ಲೇಟಾಗುತ್ತೆ ಅಂತೇ. ಬಾಯ್’ ಅಂತ ಹೇಳಿ ಆ ಚಿಕ್ಕ ಹುಡುಗಿ ಫೋನ್ ಕಟ್ ಮಾಡಿದ್ದಳು”

ತನ್ನ ಹೆಸರಿನ ಮುಂದೆ ಇನ್ನೊಂದು ಪದ ಸೇರ್ಪಡೆಯಾಗಿದ್ದದನ್ನು ನೋಡಿ ರಾಮಣ್ಣಯ್ಯ ಯಾನೆ ರಾಮಣ್ಣಯ್ಯಜ್ಹ ತನ್ನಲ್ಲೇ ನಸುನಕ್ಕು ದೇವರ ಮೂರ್ತಿಯತ್ತ ನೋಡಿದ. ಮಹಾಲಿಂಗೇಶ್ವರನ ಮುಖದಲ್ಲೂ ಕಾಂತಿಯುತ ಮಂದಹಾಸ ಮೇಳೈಸಿತ್ತು ಎಂಬುದರೊಳಗೆ ರಾಮಣ್ಣಯ್ಯ ಖುಷಿಯ ಉತ್ತುಂಗದಲಿ ಏರುವಂತೆ ಮಾಡುತ್ತದೆ. ಅದು ‘ರಾಮಣ್ಣಯ್ಯಜ್ಜ’ ನಾದ ಸ್ಥಿತಿ. ಆ ಸ್ಥಿತಿಯೊಳಗೆ ಆ ಮಹಾಲಿಂಗೇಶ್ವರನೂ ಮಂದಹಾಸ ಚೆಲ್ಲಿದ ಚಿತ್ರವನ್ನು ಕಥೆಗಾರ ವಕ್ವಾಡಿ ಬಹಳ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.

ಇದು ದೇವನೂರ ಮಹಾದೇವ ಅವರ ‘ಮಾರಿಕೊಂಡವರು’ ಕಥೆಯ “ಲಕ್ಷ್ಮಿ ಎದ್ದು ಚಣಹೊತ್ತು ಸುಧಾರಿಸಿಕೊಂಡರೂ ಮಂಕು ಆರಲಿಲ್ಲ. ರಾತ್ರಿಯ ನೆಪ್ಪು ಚುರುಗುಟ್ಟಿಸಲು ತೊಲೆ ಕಡೆ ಕಣ್ಣೋಡಿದಾಗ ಮಚ್ಚು ಅಲ್ಲೆ ಇತ್ತು. ಹೇಗೇಗೊ ಆಗಿ ಹೊರಕ್ಕೆ ಬಗ್ಗಿ ನೋಡಿದಳು. ಬೀರ ಆಗಲೇ ಎದ್ದು ಹೊರಗೆ ಯಾರ ಜೊತೆಯಲ್ಲೊ ಮಾತಾಡುತ್ತಿದ್ದನು. ಸದ್ದು ಮಾಡದೆ ಬಾಗಿಲ ಬಳಿ ಬಂದು ನೆರಕೆ ಕಿಂಡಿಗೆ ಕಣ್ಣು ಹಾಕಿದಾಗ ಅಚ್ಚರಿ ಆಯ್ತು. ಕಿಟ್ಟಪ್ಪ ನಿಂತಿದ್ದರು. ಯಾತಕ್ಕೊ ಕಿಟ್ಟಪ್ಪ ನಕ್ಕ, ಬೀರನೂ ನಕ್ಕ” ನಿರೂಪಣೆ ಕಟ್ಟಿಕೊಡುವ ಒಡಲಾಳದ ಒಳಾರ್ಥಗಳ ಹೂರಣದಷ್ಟೆ ”ದೇವರ ಕೆಲಸ’ ದ ರಾಮಣ್ಣಯ್ಯಜ್ಜನ ನಸುನಗುವಿನ ಒಡಲಾಳದೊಳಗೆ ಗಂಭೀರ ಧ್ವನಿಯೊಂದು ಧ್ವನಿಸುತ್ತದೆ.

ವಕ್ವಾಡಿ ಅವರ ಬಹುತೇಕ ಕಥೆಗಳಲ್ಲಿ ಸಿನಿಮೀಯ ಶೈಲಿಯ ಕೆಲ ಸನ್ನಿವೇಶಗಳ ಪ್ರಭಾವಳಿ ಇರುವುದು ಈ ಸಂಕಲನ ಓದುವ ಓದುಗನಿಗೆ ಅರಿವಾಗುತ್ತಾ ಹೋಗುತ್ತದೆ. ಒಂದು ಕಥೆ ಜರುಗುವುದು ಒಂದು ಘಟನೆಯ ಸುತ್ತ. ಆ ಘಟನೆಗೆ ಏನಾದರು ಕಾರಣ ಇರಲೇಬೇಕು.

ಹಾಗೆ ಈ ವಿಶ್ಲೇಷಣೆಯ ಆರಂಭದಲ್ಲಿ ಕಾಣಿಸಿರುವಂತೆ ವಕ್ವಾಡಿ ಅವರ ಕಥೆಗಳಲ್ಲಿ ವಿಜಯ ಸಾಸನೂರರ ‘ಅರಣ್ಯ ಪರ್ವ’ ಕಥಾ ಸಂಕಲನದ ಪ್ರಭಾವಳಿ ಎದ್ದು ಕಾಣುತ್ತದೆ. ಈ ಪ್ರಭಾವಳಿ ಕಾಕತಳಿಯವೂ ಇರಬಹುದು. ಹಾಗಾಗಿ ‘ಅರಣ್ಯ ಪರ್ವ’ ಸಂಕಲನದ ‘ರಾವಣ’ ಕಥೆಗೆ ಪೂರಕವಾಗಿ ವಕ್ವಾಡಿ ಅವರ ಇಲ್ಲಿನ ‘ಕಾಣೆಯಾದವರು’ ಕಥೆ ಸಾಗುತ್ತದೆ.

ಈ ಎರಡಕ್ಕು ಒಂದು ವ್ಯತ್ಯಾಸವೆಂದರೆ ‘ರಾವಣ’ ಕಥೆಯಲ್ಲಿ ರೇವಣ್ಣ ಮತ್ತು ಅವನ ಶಕುನಿ ಮಾವನ ಕೊಲೆಯ ಸುತ್ತ ಸುತ್ತುತ್ತ ಆ ಕೊಲೆಯನ್ನು ಬೇಧಿಸುತ್ತ ಕಥೆ ಸಾಗಿದರೆ ವಕ್ವಾಡಿ ಅವರ ‘ಕಾಣೆಯಾದವರು’ ಕಥೆ ಕನ್ನಡ ಮೇಷ್ಟ್ರು ನಾಗೇಶ ಅಕಸ್ಮಾತ್ ಕಾಣೆಯಾದ ಬಗೆಯ ಸುತ್ತ ವಿವಿಧ ಆಯಾಮ ಪಡೆದುಕೊಂಡು ಕಥೆ ಬೆಳೆಯುತ್ತಾ ಸಾಗುತ್ತದೆ.

ಅವನು ಕಾಣೆಯಾದುದಕ್ಕೆ ಅನೇಕ ಸ್ತರದಲ್ಲಿ ಗುಮಾನಿ ಹುಟ್ಟುತ್ತದೆ. ಆತ ಪ್ರಗತಿಪರವಾದ ನಿಲುವುಗಳನ್ನು ಹೊಂದಿದ್ದ. ನಕ್ಸಲ್ ಪರವಾದ ಧ್ವನಿಯೂ ಅವನ ಬರಹಗಳಿಂದಲೂ ಗುರುತಿಸಿಕೊಂಡಿದ್ದ. ಆದರೆ ವೈಯಕ್ತಿಕವಾಗಿ, ತನ್ನ ಖಾಸಗಿ ಬದುಕಿನಲ್ಲಿ ಒಂದು ಅಚಲವಾದ ಅಷ್ಟೇ ನಿಖರವಾದ ನಿಲುವು ತೆಗೆದುಕೊಳ್ಳುವಲ್ಲಿ ಅಸ್ಪಷ್ಟನಾಗಿದ್ದ. ಈ ಗುಮಾನಿ ಅವನು ಕಾಣೆಯಾದ ಬಗೆಯನ್ನು ಬೇಧಿಸುವಲ್ಲಿ ವಿಫಲವಾಗುವ ಹೊತ್ತಿಗೆ, ಈಗಾಗಲೇ ಒಂದು ಘಟನೆ ನಿಮಿತ್ತ ಊರು ಬಿಟ್ಟು ಹೋದ ನಾಗೇಶನ ಮಿತ್ರ ಸುಮಂತನ ಸುತ್ತಲು ತಿರುಗುತ್ತದೆ. ಅದು ಅವನ ಜೀವನದಲ್ಲಿ ಬಾಲ್ಯದಲ್ಲಿ ನಡೆದು ಹೋದ ಒಂದು ಘಟನೆ ಮರುಕಳಿಸುವ ಮೂಲಕ ಅವನೊಳಗೇ ಒಂದು ಅನುಮಾನವಾಗಿ ಸುತ್ತಿಕೊಳ್ಳತ್ತದೆ. ಹಾಗೆ ತಾನು ಖುಷಿಗೊ ಚೇಷ್ಟೆಗೊ ನಾಗೇಶನಿಗೆ ಬರೆದ ಕಾಗದವೊಂದು ನಾಗೇಶ ಕಾಣೆಯಾದ ಬಗ್ಗೆ ಒಂದು ಅಸ್ಪಷ್ಟ ಗುಮಾನಿ ಹುಟ್ಟು ಹಾಕುತ್ತದೆ. ಹಾಗೆ ಒಂದು ನಿಖರ ಉದ್ದೇಶ ಇಟ್ಟುಕೊಂಡು ಊರಿಗೆ ಮರಳಿ ಬರುತ್ತಿದ್ದ ಸುಮಂತ ನಾಗೇಶನ ನಾಪತ್ತೆ ವಿಚಾರದಿಂದ ವಿಚಲಿತಗೊಂಡು ವಿಮುಖನಾಗಿ ಮುಂಬೈಗೆ ಹಿಂದಿರುಗುವಲ್ಲಿ ಕಥೆಗೆ ತೆರೆ ಬೀಳುತ್ತದೆ.

ಸಾಸನೂರರ ‘ರಾವಣ’ ಕಥೆ, ಅದಾಗಲೇ ನಡೆದಿರುವ ಕೊಲೆಗೆ ಕಾರಣ ಮತ್ತು ಕೊಲೆಗಾರರ ಸಂಚನ್ನು ಬೇಧಿಸಿ ತಾರ್ಕಿಕ ಅಂತ್ಯ ಕಾಣ ಸಿಕ್ಕರೆ, ವಕ್ವಾಡಿ ಅವರ ‘ಕಾಣೆಯಾದವರು’ ಕಥೆ ಗುಮಾನಿ ಮೇಲೆ ಗುಮಾನಿ ಹುಟ್ಟಿಸುತ್ತಾ ಇಲ್ಲಿ ಸುಮಂತ ಊರು ಬಿಟ್ಟು ಹೋದ ಬಗ್ಗೆ‌ ಸಿಗುವ ಸ್ಪಷ್ಟತೆ, ನಾಗೇಶನ ನಾಪತ್ತೆಗೆ ಸಿಗದೆ ಅದು ಓದುಗನಿಗೆ ಕಥೆಯ ನಿರೂಪಣೆಯೊಳಗೆ ಸಿಗುವ ಕೆಲವು ಸಾಂದರ್ಭಿಕ ಘಟನಾವಳಿಗಳನ್ನು ಆಧರಿಸಿ ಇದು ಹೀಗೆ ಆಗಿರಬಹುದೇ? ಎಂಬ ಒಂದು ಅನುಮಾನಿತವಾದ ಅತಾರ್ಕಿಕ ಚಿತ್ರಣವೊಂದು ಮೂಡಿ ನಿಲ್ಲುತ್ತದೆ.

ಜೀರ್ಣೋದ್ಧಾರ, ಪುನೀತಭಾವ ಕಥೆಗಳು ಆಧುನಿಕಗೊಂಡ ತಲೆಮಾರುಗಳ ನಡುವಿನ ಒಂದು ಲಾಭದಾಯಕ ಮನಸ್ಥಿತಿಯನ್ನು ನಿರೂಪಿಸುತ್ತವೆ.

ಏಳು ತಲೆಮಾರನ್ನು ದಾಟಿ ತನ್ನ ಅಸ್ತಿತ್ವ ಉಳಿಸಿಕೊಂಡ ಒಂದು ದೇವಾಲಯದ ಜೀರ್ಣೋದ್ಧಾರ ಕಾರ್ಯದ ನೆಪದಲ್ಲಿ ರಾಜಕಾರಣದ ಹಲವು ಭ್ರಷ್ಟ ಮುಖಗಳು ಗೋಚರಿಸುತ್ತವೆ.

ತಲೆಮಾರಿನಿಂದ ತಲೆಮಾರಿಗೆ ದೇವರು, ಧರ್ಮ, ಆಚಾರ-ವಿಚಾರ, ಸಾಂಪ್ರದಾಯಿಕ ನಡಾವಳಿಯಿಂದ ಸುಸಂಸ್ಕೃತವಾಗಿ ನಡೆದುಕೊಂಡು ಬಂದ ಕುಟುಂಬವೊಂದು ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಪ್ರಾಮಾಣಿಕತೆ ಪ್ರದರ್ಶಿಸದೆ ಭ್ರಷ್ಟ ರಾಜಕಾರಣದ ಹಿಕಮತ್ತಿನಲ್ಲಿ ತೂರಿಕೊಂಡು ಅದುವರೆಗೂ ಮಾಡದ ಅನಾಚಾರ ಮತ್ತು ವಂಚನೆಯನ್ನು ಪೋಷಿಸುವ ಸನ್ನಿವೇಶವೂ ಜರುಗುತ್ತದೆ.

ಆದರೆ ಇಲ್ಲೊಂದು ವ್ಯಾವಹಾರಿಕ ಚಮತ್ಕಾರ ನಡೆದು ಹೋಗುತ್ತದೆ. ನಂಬಿಕಸ್ಥನಂತೆ ಜೊತೆಗಿದ್ದೇ, ರಾಜಕಾರಣದ ಮೂಲಕ ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ರಾಮಚಂದ್ರ ಉಪಾಧ್ಯರ ಮನೆಯ ತಿಜೋರಿ ಸೇರಿದ್ದ ಹಣದ ಗಂಟಿನೊಂದಿಗೆ ರಾತ್ರೊರಾತ್ರಿ ನಾಪತ್ತೆಯಾಗುವ ಮಗನ ವಿಚಾರದಿಂದ ಉಪಾಧ್ಯರು ವಿಚಲಿತರಾಗುತ್ತಾರೆ. ಕಣ್ಣು ಮುಚ್ಚುವ ಮುನ್ನ ದೇವರಮೂರ್ತಿಯತ್ತ ನೋಡಿದಾಗ ಅನಂತಪದ್ಮನಾಭನ ಮುಖದಲ್ಲಿ ಮಂದಹಾಸ ಇರುತ್ತದೆ. ಆ ಮಂದಹಾಸ ಕಟ್ಟಿ ಕೊಡುವ ದೃಶ್ಯಾವಳಿಗಳು, ಏಳು ಶತಮಾನಗಳಿಂದ ತನಗೆ ನಡೆದುಕೊಂಡು ಪೂಜಿಸಿಕೊಂಡು ಬಂದ ಕುಟುಂಬವೊಂದು ತನ್ನ ಗುಡಿಯ ಜೀರ್ಣೋದ್ಧಾರದ ನೆಪ ಮುಂದಿಟ್ಟು ಭ್ರಷ್ಟಕೂಪದಲ್ಲಿ ಸೇರಿ ಅದರ ಪ್ರಾಯಶ್ಚಿತ್ತಕ್ಕೆ ಅವಸಾನವಾಗುತ್ತಿರುವುದರ ಸೂಚಕವು ವ್ಯಂಗ್ಯದ ರೂಪಕದಲ್ಲಿ ವ್ಯಕ್ತವಾಗಿದೆ.

ಕೃಷಿಯನ್ನೆ ನಂಬಿ ಬದುಕು ಮಾಡಿಕೊಂಡ ಸಂಜು ಶೆಟ್ರುವಿಗೆ ನಗರ ಜೀವನಕ್ಕೆ ಒಗ್ಗಿ ಹೋದ ಮಕ್ಕಳ ಬೇಡಿಕೆಗೆ ಕುದ್ದು ಹೋಗುವ ಬಗೆಯನ್ನು ‘ಪುನೀತಭಾವ’ ಹೇಳುತ್ತದೆ. ಆಧುನಿಕಗೊಂಡ ಈ ಸಾಮಾಜಿಕ ವ್ಯವಸ್ಥೆಯಲ್ಲಿ ವ್ಯಾವಹಾರಿಕ ಮನಸ್ಥಿತಿಯೇ ಪ್ರಧಾನವಾಗಿ ಕಾಣುವ ಚಿತ್ರಣವಿದೆ.

ತನ್ನ ದೊಡ್ಡಪ್ಪ ಸಂಜು ಶೆಟ್ರುವಿನ ಇಂಗಿತವನ್ನರಿತ ದೊಡ್ಡ ಉದ್ಯಮಿ ಪುನೀತ, ಆ ಕೃಷಿಭೂಮಿಯನ್ನು ತಾನೆ ಕೊಳ್ಳುವ ಮೂಲಕ ಏಕಕಾಲಕ್ಕೆ ಅಪ್ಪ ಮಕ್ಕಳ ನಡುವಿನ ಸಮಸ್ಯೆ ಮೇಲ್ನೋಟದ ಹಂತದಲ್ಲಿ ಬಗೆ ಹರಿದಂತೆ ಕಾಣುತ್ತದೆ. ಹಾಗೆ ಸಂಜು ಶೆಟ್ರು ಮತ್ತು ಅವರ ಮಕ್ಕಳು ತಮ್ಮ ಆಸೆ ಈಡೇರಿದ ತೃಪ್ತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಪುನೀತನ ದೂರದ ವ್ಯಾವಹಾರಿಕ ಜಾಣ್ಮೆಯೊಂದು ಕಥನತಂತ್ರದ ಭಾಗವಾಗಿದೆ. ಇದರೊಟ್ಟಿಗೆ ಪುನೀತನ ಮಾತಿಗೆ ಮರುಳಾಗಿ ತನ್ನ ಜೀವಕ್ಕೆ ಜೀವವಾಗಿದ್ದ ಕೃಷಿಭೂಮಿಯನ್ನು ತಮಗರಿವಿಲ್ಲದೇ ಕಳೆದುಕೊಳ್ಳುವ ಸಂಜುಶೆಟ್ರು ಬಂಡವಾಳಶಾಹಿ ವ್ಯವಸ್ಥೆಗೆ ಸಿಲುಕುವ ಹುನ್ನಾರವೇ ‘ಪುನೀತಭಾವ’ದ ಪ್ರಧಾನ ಕಥಾವಸ್ತು. ಇದು ಬಂಡವಾಳಶಾಹಿ ಮನಸ್ಸುಗಳು ತಮ್ಮ ವ್ಯಾಪ್ತಿಯ ವಿಸ್ತರಣೆಯನ್ನು ತಣ್ಣಗೆ ವ್ಯಾಪಿಸಿಕೊಂಡು ದುಡಿಯುವ ವರ್ಗವನ್ನು ದುಡಿತದ ಕೈಗಳನ್ನು ಕಟ್ಟಿ ಹಾಕಿ ಹೇಗೆ ವಶಕ್ಕೆ ಒಳಪಡಿಸಿಕೊಳ್ಳುತ್ತವೆ ಎಂಬುದನ್ನು ಸೂಚ್ಯವಾಗಿ ನಿರೂಪಿಸಿದ್ದಾರೆ.

“ಅಬ್ಬಾ ಅದೆಂತಹ ಕನಸು! ಸತ್ತೇ ಹೋಗುವಂತ ಅನುಭೂತಿ.. ಸಾವೆಂಬ ಯೋಚನೆಯೇ ಇಡೀ ದೇಹವನ್ನು ಕಂಪಿಸುವಂತೆ ಮಾಡಿತ್ತು. ಏನು ಆಗಿಲ್ಲ ಅನ್ನೋ ಖಾತರಿ ಆತನಿಗೆ ಮತ್ತೆ ಮರುಜನ್ಮ ಬಂದಂತೆ ಮನಸ್ಸ ತುಂಬೆಲ್ಲ ರೋಮಾಂಚನದ ವರ್ಷಧಾರೆ ಹರಿಸಿತ್ತು. ಪಕ್ಕದಲ್ಲೇ ಇದ್ದ ಒಂದು ಬಾಟಲಿ ನೀರನ್ನು ಒಂದೇ ಗುಟುಕಿಗೆ ಖಾಲಿ ಮಾಡಿದ”

ಇದು ‘ನೇಣುಗಂಬ’ ಕಥೆಯ ಕೊನೆಯಲ್ಲಿ ಕಥೆಗಾರ ವಕ್ವಾಡಿ ಕಟ್ಟಿಕೊಟ್ಟಿರುವ ಒಂದು ಸನ್ನಿವೇಶದ ಚಿತ್ರಣ. ಬಹುಶಃ ಇಡೀ ಕಥೆಯ ಹೂರಣದಂತೆ ಇಲ್ಲಿನ ಸಾಲುಗಳು ಧ್ವನಿಸುತ್ತವೆ. ಇದೊಂದು ಸಂಪೂರ್ಣ ಕಲ್ಪಿತ ಕಥೆ. ಈ ಕಲ್ಪಿತ ಕಥೆಯೊಳಗೊಂದು ಕನಸು. ಈ ಕನಸಿನೊಳಗೊಂದು ಭ್ರಮೆ. ಹೀಗೆ ಕನಸು ಮತ್ತು ಭ್ರಮೆಗಳ ಆಟದಲ್ಲಿ ‘ನೇಣುಗಂಬ’ ಮಾತಾಡುತ್ತದೆ. ಹಾಗೆ ಉರುಳಾಗುವ ಸ್ಪಷ್ಟತೆಯ ಮುಖವೊಂದು ಬಿಚ್ಚಿಕೊಳ್ಳುತ್ತದೆ. ಹರೆಯದ ಆಟದಲ್ಲಿ ಬಸಿರಾಗುವ ವಾಣಿ ಟೀಚರ್ ಹಲವು ಸವಾಲುಗಳ ನಡುವೆಯೂ ತನ್ನ ಕರುಳ ಕುಡಿಯನ್ನು ಒಂದು ಎತ್ತರದ ಸ್ಥಾನಕ್ಕೆ ನಿಲ್ಲಿಸುವುದೆಂದರೆ ಸಾಮಾನ್ಯದ ಮಾತಲ್ಲ. ಅದೇ ಕರುಳ ಕುಡಿ ತನ್ನ ಹುಟ್ಟಿಗೆ ಕಾರಣನಾದವನನ್ನು ತನ್ನ ಜೀವಿತಾವಧಿಯಲ್ಲಿ ನೋಡುವ ಒಳ ಹಂಬಲ. ಈ ನಡುವೆ ಭ್ರಮೆ ಮತ್ತು ಕನಸುಗಳನ್ನು ದಾಟಿ ತನ್ನ ಹೆತ್ತವಳಿಗಾದ ಅನ್ಯಾಯದಂತೆ ಅರುಣನೂ ಕಂಡೂ ಕಾಣದಂತೆ ಬಯಸಿ ಬಂದ ಹೆಣ್ಣಿಗೆ ಮಾಡಿದನೇ? ಈ ಪಾಪಕೃತ್ಯದ ಜೊತೆಗೆ ಜರುಗಿ ಹೋದ ಘಟನೆಯ ಅಳುಕು ಅವನನ್ನು ಬಿಟ್ಟೂ ಬಿಡದೆ ಕನಸಾಗಿ ಬೆಂಬಿಡದೆ ಕಾಡುತ್ತ ಕೊನೆಗೆ ‘ನೇಣುಗಂಬ’ದ ನೆರಳೊಂದು ಹಾದು ಹೋಗುತ್ತದೆ. ಹೀಗೆ ಕಥೆ ಕನಸು ಭ್ರಮೆ ವಾಸ್ತವಗಳ ಸುತ್ತ ವೃತ್ತಾಕಾರವಾಗಿ ತನ್ನ ಪಥದಲ್ಲಿ ಗಿರಗಿರನೆ ಸುತ್ತುತ್ತ ಓದುಗನಲ್ಲಿ ಹಲವು ಪ್ರಶ್ನೆಗಳನ್ನು ಉಳಿಸಿ ಕೊನೆ ಮುಟ್ಟುತ್ತದೆ.

ಅನೈತಿಕ ಸಂಬಂಧದ ಸಂಚಿನ ಭಾಗವೇ ‘ಸೇತುವೆ’

ಈ ಸೇತುವೆಯ ಹಿಂದೆ ರಾಜಕೀಯ ವಾಸನೆ ಇದೆ.

ಇಲ್ಲಿ ಹಲವು ಮುಖಗಳು ಅನಾವರಣಗೊಳ್ಳುತ್ತ ಕಥೆ ಬೆಳೆಯುತ್ತಾ ಹೋಗುತ್ತದೆ. ಪ್ರೇಮ ಕಾಮ ಹಣ ಅಂತಸ್ತು ಅಧಿಕಾರ – ಇವು ಕಥೆಯ ಕೇಂದ್ರದಲ್ಲಿ ತಮ್ಮ ವ್ಯಾವಹಾರಿಕ ಪಟ್ಟುಗಳನ್ನು ಬಿಗಿಗೊಳಿಸುತ್ತ ಹಿಕ್ಮತ್ತು ಪ್ರದರ್ಶಿಸುತ್ತವೆ. ಇದರ ಮೂಲದಲ್ಲಿ ಆಕರ್ಷಣೀಯ ‘ನಯನ’ವಿದೆ. ಈ ‘ನಯನ’ವೇ ‘ಸೇತುವೆ’ಗೆ ಅಡಿಪಾಯದ ಕೊಂಡಿ! ಈ ಕೊಂಡಿಯ ಶಕ್ತಿ ಎಂಥದ್ದೆಂದರೆ ಸಂಬಂಧಗಳೇ ಇಲ್ಲವಾಗಿಸುವ, ಸಾವಿನ ಸೂತಕದಲ್ಲು ಕಾಮದ ಲೇಪ. ವ್ಯಾವಹಾರಿಕತೆಯ ವಿಕಟತನದ ಪ್ರದರ್ಶನ. ಈ ವಿಕಟ ಪ್ರದರ್ಶನದ ‘ಸೇತುವೆ’ಯ ಅಡಿಪಾಯದ ಮಗ್ಗುಲಲ್ಲಿ ಭ್ರಷ್ಟ ವ್ಯವಸ್ಥೆಯೊಂದು ತನ್ನ ಕಬಂಧಬಾಹುಗಳಿಂದ ಬಿಗಿದು ಒಂದರೊಳಗೊಂದು ಬೆಸೆದುಕೊಂಡು ಉಸಿರುಗಟ್ಟಿಸುತ್ತ ಸ್ಥಾಪಿತ ಸಮಾಜದ ಕ್ರೌರ್ಯವನ್ನು ಬಿಚ್ಚಿಡುತ್ತದೆ.

ರಾಜಾರಾಮ ಭಟ್ಟರ ತಂದೆಯ ತಿಥಿ ಊಟಕ್ಕೆ ರಾಮ ಮತ್ತು ಅವನ ಮಗ ಪ್ರತಾಪ ಹೋದಾಗ ಊಟ ಖಾಲಿಯಾಗಿತ್ತು. ಈ ವಿಚಾರ ಗೊತ್ತಾಗಿ ಸರಿಯಾದ ಸಮಯಕ್ಕೆ ಸಿಗದ ಬಸ್ಸಿಗೆ ರಾಮ ಶಾಪ‌ ಹಾಕುತ್ತಾನೆ. ಆದರೆ ಕೊನೆಯಲ್ಲಿ ಉಳಿದದ್ದ ಭಟ್ಟರ ಹೆಂಡತಿಯಿಂದ ಎಲೆಗೆ ಹಾಕಿಸಿಕೊಂಡು ಉಂಡರು ರಾಮನಿಗೆ ಅತೃಪ್ತಿ. ಆಗ ಭಟ್ಟರ ಹೆಂಡತಿ ಕೊಟ್ಟಿಗೆಯಲ್ಲಿ ಎಂಜಲೆಲೆ ಬಗ್ಗೆ ಹೇಳುವ ಮಾತು ರಾಮನಿಗೆ ಸ್ವರ್ಗವೇ ಸಿಕ್ಕಿದ ಅನುಭವವಾಗುತ್ತದೆ.

ಈಗಾಗಲೇ ಭಟ್ಟರ ನೆಂಟರ ಪೈಕಿ ಕೆಲವರಿಗೆ ಶುಗರ್ ಕಾಯಿಲೆ ನಿಮಿತ್ತ ಪಂಕ್ತಿಯಲ್ಲಿ ಉಂಡಷ್ಟು ಉಂಡು ಉಳಿದದ್ದ ಎಲೆಯಲ್ಲೆ ಬಿಟ್ಟಿದ್ದರು. ಕೊಟ್ಟಿಗೆಗೆ ಬಿಸಾಡಿದ್ದ ಎಂಜಲು ಎಲೆಯಲ್ಲಿನ ಲಾಡು ಜುಲೇಬಿ ಕಂಡು ಹಿಗ್ಗಿದ ರಾಮ ಮತ್ತು ಅವನ ಮಗ ಪ್ರತಾಪ ಎಂಜಲೆಲೆಯಲ್ಲಿದ್ದ ಲಾಡು ಜುಲೇಬಿಯನ್ನು ಆಯ್ದು ಆಯ್ದು ಪ್ಲಾಸ್ಟಿಕ್ ಕವರಿಗೆ ಹಾಕಿ ಮಗನ ಕೈಗಿತ್ತು ತಾನು ಎಂಜಲೆಲೆಯನ್ನು ಹೆಡಿಗೆಗೆ ತುಂಬಿಕೊಂಡು ತಿಪ್ಪೆಗುಂಡಿಯತ್ತ ಸಾಗುವ ರಾಮನಿಗೆ ತೃಪ್ತಿ.

ಇದು ‘ಶಾಪ’ ಕಥೆಯ ತತ್ತು ಅನ್ನಕ್ಕಾಗಿ ಆಸೆಗಣ್ಣಿನಿಂದ ದಿನ ವಪ್ಪತ್ತು ಪರಿತಪಿಸಿ ಹಸಿವು ನೀಗಿಸಿಕೊಳ್ಳುವಲ್ಲಿ ತೃಪ್ತತೆ ಪಡುವ ಕುಟುಂಬವೊಂದರ ಧಾರುಣತೆ ಒಂದು ಕಡೆಯಾದರೆ, ಹಸಿವೇ ಇಲ್ಲದವರು ಅದೇ ಅನ್ನವನ್ನು ಚೆಲ್ಲುವ, ಗರ್ವದ ಖುಷಿಯಲ್ಲಿ ತೇಲುವವರದು ಮತ್ತೊಂದು ಕಡೆ!

ಒಂದೊಂದು ಅಗುಳು ಅನ್ನದಲ್ಲು ಅವರವರ ಹೆಸರು ಬರೆದಿರುತ್ತಂತೆ’ ಇದು ಕನ್ನಡ ಚಿತ್ರವೊಂದರಲ್ಲಿ ರಾಜ್ ಕುಮಾರ್ ಆಡುವ ಮಾತಿದು. ಆದರೆ ಅದೇ ಅನ್ನ, ಉಳ್ಳವರಿಗೆ ಶೋಕಿಯ ಭೋಜನವಾಗಿ, ಕಡು ಬಡವನಿಗೆ ಹಸಿವು ನೀಗಿಸುವ ಜೀವವೇ ಆಗಿದೆ. ಸತೀಶ್ ಶೆಟ್ಟಿ ವಕ್ವಾಡಿ ಅನ್ನದ ಮಹತ್ವವನ್ನು, ಕ್ಲಿಷ್ಟಕರ ಮೌಢ್ಯದ ಮೂಲ ಕೃತ್ಯವನ್ನು ‘ಶಾಪ’ ಕಥೆಯಲ್ಲಿ ಸ್ಥೂಲವಾಗಿ ಚಿತ್ರಿಸಿದ್ದಾರೆ.

“ಅಪ್ಪ ನೀನು ಯಾವಾಗ್ಲು ಹೇಳ್ತಿದ್ದಿಯ್ಯಲ್ಲ, ಊಟನಾ ಚೆಲ್ಲಬಾರದು, ದೇವರು ಶಾಪ ಕೊಡ್ತಾನೆ ಅಂತ. ಆದ್ರೆ ಇಲ್ಲಿ ನೋಡು ಇಷ್ಟು ದೊಡ್ಡ ದೊಡ್ಡ ಮನುಷ್ಯರು ಎಷ್ಟೆಲ್ಲ ಚೆಲ್ಲಿಬಿಟ್ಟಿದ್ದಾರೆ. ಅವರಿಗ್ಯಾಕೆ ದೇವರು ಶಾಪ ಕೊಡೋಲ್ಲ” ಎಂಬ ಮಗನ ಕ್ರಿಟಿಕಲ್ ಆದಂತಹ ಪ್ರಶ್ನೆಗೆ ರಾಮ ಬೆರಗಾಗುತ್ತಾನೆ. ಅದುವರೆಗೂ ತನ್ನ ಕೋರಿಕೆಗೆ, ಕೈಕಾಲು ಒತ್ತಿ ಗಂಜಿಗೆ ಗಿಟ್ಟಿಸುವ ಒಡೆಯನ ಅಥವಾ ಆತರದ್ದೇ ಮನಸ್ಥಿತಿಯವರ ಮೇಲಿನ ಆಪಾದಿತವೆನ್ನಿಸುವ ಮಗನ ಆ ಕ್ರಿಟಿಕಲ್ ಪ್ರಶ್ನೆ ರಾಮನನ್ನು ಕೆಣಕಿದಂತಾಗಿ, ಉಣ್ಣಲು ಗತಿಯಿಲ್ಲದ ನಮಗೆ ಒಂದು ಅಗುಳು ಅನ್ನ ಚೆಲ್ಲುವುದು ಶಾಪವಿದ್ದಂತೆ. ಆದರೆ ಸಿವಂತಿಕೆಯ ಈ ಜನಗಳಿಗೆ ಅನ್ನ ಚೆಲ್ಲುವುದೆಂದರೆ ಸಮುದ್ರದ ನೀರನ್ನು ದೇವರಿಗೆ ಅರ್ಘ್ಯ ನೀಡಿದಂತೆ ಎಂಬ ವಿಷಾದಪೂರಿತ ಸ್ವಗತದಲ್ಲಿ ಗುನುಗುನಿಸಿದ್ದನ್ನು “ಅವರೆಲ್ಲ ದೇವರಿಗೆ ಪೂಜೆ ಮಾಡುವರು, ಅವರಿಗೆ ಶಾಪ ಕೊಟ್ಟರೆ ಆಮೇಲೆ ದೇವರಿಗೆ ಪೂಜೆ ಮಾಡುವವರ್ಯಾರು, ಅದಕ್ಕೆ ದೇವರು ಅವರಿಗೆ ಶಾಪ ಕೊಡೊಲ್ಲ” ಎಂಬ ರಾಮನ ಉತ್ತರದಲ್ಲಿ ಆ ಕ್ಷಣಕ್ಕೆ ಮಗನನ್ನು ಸುಮ್ಮನಿರಿಸುವ ಇರಾದೆ ವ್ಯಕ್ತಗೊಳ್ಳುತ್ತದೆ. ಆದರೆ ಇದರೊಳಗು ಹೇಳಲಾಗದ ವ್ಯಕ್ತಪಡಿಸಲಾಗದ ಸಿಟ್ಟು ಮತ್ತು ವೇದನೆ ಇದೆ. ಇದು ಶೂದ್ರಾತಿಶೂದ್ರರನ್ನು ಬ್ರಾಹ್ಮಣ್ಯದ ಬೇರುಗಳು ಚಾಚಿಕೊಂಡು ವ್ಯವಸ್ಥಿತವಾಗಿ ಶೋಷಣೆಗೆ ಗುರಿಪಡಿಸಿ ಈಗಲೂ ಆ ವರ್ಗ ತಮ್ಮ ಸಂಚಿನ ದಟ್ಟ ಕರಾಳ ಛಾಯೆಯನ್ನು ‘ಶಾಪ’ ಸಂಕ್ಷಿಪ್ತವಾಗಿ ಬಿಚ್ಚಿಡುತ್ತದೆ.

ಇದಕ್ಕೆ ಪೂರಕವಾಗಿ ಭಾರತೀಯ ಧಾರ್ಮಿಕತೆ, ಸಾಂಪ್ರದಾಯಿಕ ಮೌಢ್ಯದ ತೆವಲುಗಳನ್ನು ಹೊದ್ದುಕೊಂಡು ಮಲಗಿದೆ ಎನ್ನಬಹುದು.

ರಾಮನ ಮಗ ಪ್ರತಾಪ, ರಾಜಾರಾಮನ ಭಟ್ಟರ ಮನೆಯ ಎಂಜಲೆಲೆಯಲ್ಲಿ ಆಯ್ದು ತಂದ ಲಾಡು ಜುಲೇಬಿಯನ್ನು ಸ್ಕೂಲಲ್ಲಿ ಆಟದ ಹೊತ್ತಲ್ಲಿ ಕೂತು ತಿನ್ನುವಾಗ ಮೇಲ್ವರ್ಗದ ನವೀನನ ಕಣ್ಣಿಗೆ ಬೀಳುತ್ತದೆ. ಅವನಿಗೆ ಕೊಡಲು ಮನಸ್ಸಿಲ್ಲದ ಪ್ರತಾಪ ಅವನನ್ನು ಸಾಗ ಹಾಕಲು ಪ್ರಯತ್ನಿಸಿದರು ಸಹ, ಅವನು ಹೋಗದೆ ಕಸಿದು ಲಾಡು ತಿನ್ನುವಾಗ ಅಕಸ್ಮಾತ್ ಕೆಳಗೆ ಬಿದ್ದು ಮಣ್ಣಾಗುತ್ತದೆ. ಅದು ಮಣ್ಣಾಗಿದೆ ಬೇರೆ ಕೊಡುತ್ತೇನೆ ಬಿಸಾಕು ಅಂದರು ನವೀನ ತನ್ನ ಚೆಡ್ಡಿಗೆ ಲಾಡಿನಲ್ಲಿದ್ದ ಮಣ್ಣು ಒರೆಸಿ ತಿನ್ನುವಾಗ ಪ್ರತಾಪ ತಡೆಯುತ್ತಾನೆ. ಆಗ ನವೀನ “ಇಲ್ಲ ಕಣೊ ತಿನ್ನೊದನ್ನ ಚೆಲ್ಲಬಾರದು. ದೇವರು ಶಾಪ ಹಾಕ್ತಾನೆ. ಆಮೇಲೆ ನಮಗೆ ತಿನ್ನೊದಕ್ಕೆ ಏನು ಕೊಡೊಲ್ಲ ದೇವರು, ಗೊತ್ತಾ ನಿನಗೆ” ಅಂದವನ ಮಾತಿಗೆ ಪ್ರತಾಪ ವ್ಯಂಗ್ಯವಾಗಿ ನಕ್ಕು “ಪೆದ್ದ ನೀನು! ನಿಮಗ್ಯಾಕೆ ದೇವರು ಶಾಪ ಹಾಕ್ತಾನೆ? ನೀವು ದೇವರಿಗೆ ಪೂಜೆ ಮಾಡೋರು. ಶಾಪ ಏನಿದ್ದರು ನಮಗೆ ಮಾತ್ರ. ಸರಿ ತಗೊ ಇನ್ನೊಂದು ಜಿಲೇಬಿ ತಿನ್ನು” ಅನ್ನುವಲ್ಲಿ ಕಥೆ ತನ್ನ ತೆರೆ ಸರಿಸುತ್ತದೆ.

ಹೀಗೆ ತನ್ನ ತೆರೆ ಸರಿಸುವ ಕ್ರಿಯೆಯೊಳಗೊಂದು ಅತಿಯಾದ ಧಾರ್ಮಿಕವಾದವೊಂದು ಅಪಮೌಲ್ಯಗೊಂಡು ಸಾಮಾಜಿಕ ಎಲ್ಲೆಗಳನ್ನು ಮೀರಿದ ಕ್ಲೀಷೆಯಾಗಿ ವಿಭಿನ್ನವಾದ ಮುಖಗಳನ್ನು ಪರಿಚಯಿಸುತ್ತದೆ. ಅದು ಮೇಲ್ವರ್ಗಕ್ಕೆ ಒಂದು ತೆರನಾದ ರಕ್ಷಾ ಕವಚವೂ ವಿಮುಕ್ತಿಯೂ, ಅದೇ ಶೂದ್ರಾತಿಶೂದ್ರ ಎನಿಸುವಂಥ ಕೆಳವರ್ಗ ಅನುಭವಿಸುತ್ತಿರುವ ಹಸಿವಿನ ಸಂಕಟ ವ್ಯಕ್ತವಾಗಿ ಸಹಿಸಲಾರದ ನೋವಿನ ವಿವರವನ್ನು ‘ಶಾಪ’ ಒತ್ತಿ ಹೇಳುತ್ತದೆ.

ಪ್ರಭು ಶಂಕರರ ‘ಪ್ರೇಮಭಿಕ್ಷು’ ಕಾದಂಬರಿಯ ಮೊದಲ ಅಧ್ಯಾಯದ ಆರಂಭ,

“ಅದೊಂದು ಸುಂದರ ಪ್ರಾತಃಕಾಲ. ಶ್ರಾವಸ್ತಿ ನಗರದ ಹೊರಗಿನ ಉಪವನದಲ್ಲಿ ಭಿಕ್ಷುಸಂಘ ಬೀಡುಬಿಟ್ಟಿತ್ತು. ಬೆಳಗಿನ ಮೊದಲ ಕಿರಣಗಳು ಎತ್ತರವಾದ ಮರಗಳ ಕೆಂಪು ಚಿಗುರುಗಳ ಜತೆ ಚೆಲ್ಲಾಟವಾಡುತ್ತಿದ್ದವು. ಅವು ಇನ್ನೂ ಅಲ್ಲೇ ತಂಗಿ ಬಹಳ ಕಾಲ ಆಟದಲ್ಲೇ ತೊಡಗಿರುತ್ತವೋ ಏನೊ. ಆದರೆ ಆ ವನದಲ್ಲೇ ಭಗವಾನ್ ಬುದ್ದದೇವ ಪ್ರಸನ್ನವದನನಾಗಿ ತಿರುಗಾಡುತ್ತಿದ್ದ. ಅದು ತಿಳಿಯಿತೊ ಎಂಬಂತೆ ಹೊಸ ಹೊನ್ನಿನ ಕಿರಣಗಳು ಅಲ್ಲಿಂದ ಬೇಗಬೇಗ ಇಳಿದು ಬಂದವು” ಎಂದು ಬುದ್ದನ ಆಗಮನಕ್ಕೆ ಪೂರಕವಾಗಿ ಪ್ರಕೃತಿ ಸೊಬಗಿನ ವರ್ಣನೆ ಇದೆ.

ಇದು ‘ಪ್ರೇಮಭಿಕ್ಷು’ವಿನ ಮೊದಲ ಅಧ್ಯಾಯಕ್ಕೇ ಸೀಮಿತವಾಗದೆ ಕಾದಂಬರಿಯ ಒಳ ಪ್ರವೇಶವಾಗುತ್ತ, ಬುದ್ದನ ಆಗಮನ, ಬುದ್ದ ಅಂಗುಲಿಮಾಲನನ್ನು ಭೇಟಿಯ ಸನ್ನಿವೇಶ, ರಾಜ ಪ್ರಸೇನಜಿತನ ಆತಂಕದ ಗಳಿಗೆ, ಅಂಗುಲಿಮಾಲನ ಹಿಂದಿನ ಘಟನಾವಳಿಗಳ ಕಾರಣಗಳ ಸನ್ನಿವೇಶ, ಬುದ್ದನ ಉಪನ್ಯಾಸದ ಗಳಿಗೆ – ಹೀಗೆ ಈ ಎಲ್ಲ ಸನ್ನಿವೇಶದಲ್ಲಿ ಪ್ರಭುಶಂಕರರು ಪ್ರಕೃತಿಯ ಸೊಬಗನ್ನು ಮಿಳಿತಗೊಳಿಸಿ ವರ್ಣಿಸುತ್ತ ಓದುಗನ ಮನಸ್ಸು ಅತ್ತಿತ್ತ ಕದಲದಂತೆ ಕಾದಂಬರಿಯನ್ನು ಹೆಣೆದು ಕಟ್ಟಿ ಕೊಟ್ಟಿದ್ದಾರೆ.

ಹೀಗೆ, ಪ್ರಭುಶಂಕರರ ‘ಪ್ರೇಮಭಿಕ್ಷು’ವಿನ ಕಥಾ ನಿರೂಪಣೆಯ ವರ್ಣನೆಯಂತೆ, “ಸೂರ್ಯನ ಬೆಳಗಿನ ಬೆಳಕಿಗೆ ಮಂಜಿನ ಹನಿಗಳ ರಂಗಿನಾಟ ಆಗತಾನೆ ಮುಗಿದಿತ್ತು. ನೇಸರನ ಅಟ್ಟಹಾಸ ಹೆಚ್ಚಾದಂತೆ ಮನೆ ಎದುರಿನ ಹುಲ್ಲು ಹಾಸಿನ ಮೇಲೆ ಬೆಚ್ಚನೆ ಮಲಗಿದ್ದ ಮಂಜಿನ ಹನಿಗಳು ಒಂದೊಂದಾಗಿ ಕಾಣದ ಗೂಡು ಸೇರುವ ತವಕದಲ್ಲಿದ್ದವು. ಅದೂ ಬೇರೆ ಕಾರ್ತಿಕ ಮಾಸ. ಚಳಿರಾಯನ ಒಡ್ಡೋಲಗಕ್ಕೆ ಆಗಷ್ಟೆ ರಂಗಸಜ್ಜಿಕೆಯ ಹೂರಣವಾಗಿತ್ತು. ಮನೆಯ ಕಣದಲ್ಲಿ ರಂಗು ಮೂಡಿಸಿದ್ದ ಭತ್ತದ ತಿರಿ ಮತ್ತು ಹುಲ್ಲಿನ ಕುತ್ತರಿಗಳಿಂದ ಮೂಗಿಗೆ ಅಪ್ಪಳಿಸುತ್ತಿದ್ದ ಭತ್ತದ ಸುವಾಸನೆ ಮನದ ಮೂಲೆಯಲ್ಲಿ ಹೊಂಗಿರಣ ಚಿತ್ತಾರ ಬರೆಸಿದ್ದವು” ಎಂಬ ‘ಅಜ್ಜ ನೆಟ್ಟ ಹಲಸಿನ ಮರ’ ಕಥೆಯ ಆರಂಭಿಕ ಚಿತ್ರ ವರ್ಣನೆ, ಈ ಕಥಾ ಸಂಕಲನದ ಅಷ್ಟೂ ಕಥೆಗಳ ಸಂದರ್ಭದಲ್ಲಿ ಕಥೆಯ ಆರಂಭಿಕ ಸನ್ನಿವೇ ಮತ್ತು ಅದರ ಪಾತ್ರದ ಜೊತೆಗೆ ಪ್ರಕೃತಿ ಸೊಬಗಿನ ವೈಭವವನ್ನು ತುಲನೆ ಮಾಡುತ್ತ ಈ ಎರಡೂ ಕೃತಿಗಳ ಆರಂಭಿಕ ಕಥಾ ನಿರೂಪಣಾ ವರ್ಣನೆ ಒಂದಕ್ಕೊಂದು ಸಾಮ್ಯತೆ ಹೊಂದಿರುವುದನ್ನು ವಿಶೇಷವಾಗಿ ಗುರುತಿಸಬಹುದು.

ಹಾಗೆ, ಈ ಕೃತಿಯಲ್ಲಿ ಭಾಷೆ ಹೆಚ್ಚು ಗಮನ ಸೆಳೆವ ಅಂಶ. ಉಡುಪಿಯ ಕುಂದಾಪುರದ ಕನ್ನಡ ಸೊಗಡು ಕಥೆ ಓದುವ ಯಾರಿಗೇ ಆದರು ಹಿತವಾದ ಅನುಭವ ನೀಡುತ್ತದೆ. ಅದು,

“ನವೀನ ನಿನ್ನೆ ನರಸಿಂಹ ಬಂದಿದ್ದ. ನಿಂಗೆ ಫೋನ್ ಮಾಡ್ದ ಅಂಬ್ರ, ನಾಟ್ ರೀಚ್ ಇತ್ತಂಬ್ರ ಎಷ್ಟೊತ್ತಿಗ್ ಬತ್ತಾ ಕೆಂಡ, ನಾನ್ ಅದಕ್ಕೆ ಅಂವ ಬಪ್ಪುದು ಬೆಳ್ಗತ್, ಅಂದೆ. ಅದ್ಕೆ ಅಂವ ಬೆಳ್ಗೆ ಹತ್ತು ಗ್ಯಾಂಟಿಗೆ ಬತ್ತೆ ನವೀನಗೆ ರೆಡಿಯಾಯಿ ಇಪ್ಪುಗೆ ಹೇಳಿ ಅಂದ. ನೀರ್ ಬಿಸಿ ಮಾಡಿದ್ದೆ. ಹೊಯ್ ಮೀನ್ಕ ಬಾ. ತಿಂಡಿ ರೆಡಿ ಮಾಡ್ತೆ”

“ಅಲ್ಲ ಸದಾಶಿವರೇ, ಈ ನಾಗೇಶನಿಗೇನು ಮರ್ಲ್ ಹಿಡ್ದಿದ್ಯ, ಎಲ್ಲಿಗೆ ಹೋತಿ ಅಂತ ಹ್ವಾಪುಕ್ ಎಂತ ಧಾಡಿಯ? ಪಾಪ ವಯಸ್ಸಾದ ಅಪ್ಪ ಅಬ್ಬಿ ಕಷ್ಟ ಗೊತ್ತಾತಿಯ್ಲ್ಯಾ..”

“ನರಸಿಂಹ ಇವತ್ತು ರಜೆ ಏನು. ಈ ಮಳೆಯಂಗ್ ಹೋಟ್ಲಿಗ್ ಯಾರ್ ಬರ್ತಾರೆ ಹೇಳ್. ರಾತ್ರಿ ಹೊಗೆ ಮೀನು ಬಿಳುದ್ ಗ್ಯಾರಂಟಿ ಕಾಣ್. ಬ್ಯಾಟರಿಗೆ ಚಾರ್ಜ್ ಮಾಡಿ ಇಟ್ಕೋ, ಏಳ್ ಗಂಟೆಗೆ ಬತ್ತಿ, ಮೀನ್ ಹಿಡುಕ್ ಹ್ವಾಪ. ಶ್ಯಾಮ ಆಗ್ಲೇ ಒಂದಗ ಕಾಲ್ ಹೊರಗ್ ಇತ್ತ ಇಟ್ ಕಾಣ್”

“ರಾಮ, ಹೆಚ್ಚಿಗೆ ಎಂತ ಉಳ್ದಿಲ್ಲ ಮಾರಾಯ, ಇವತ್ತು ಭಾನುವಾರ ಅಲ್ದಾನಾ, ಅಂದ್ಕಂಡಿದ್ದಕ್ಕಿಂತ ಜಾಸ್ತಿ ಜನ ಐರಾ, ಸ್ವಲ್ಪ ಹುಳಿ, ಪೈಸ, ಪಲ್ಯ ಇದೆ ಕಾಣ, ಸ್ವಲ್ಪ ಅಡ್ಜಸ್ಟ್ ಮಾಡ್ಕಂಡ್ ಉಣಿ”

ಮೇಲ್ಕಾಣಿಸಿದ ಈ ಭಾಷಾ ಸೊಗಡು ಇಲ್ಲಿನ ಕಥೆಗಳೊಳಗಿನ ಪಾತ್ರಗಳು ಸಂಭಾಷಿಸುವ ಶೈಲಿಯಲ್ಲಿದೆ. ಇದನ್ನು ವಕ್ವಾಡಿ ತಮ್ಮ ಕಥೆಗಳಲ್ಲಿ ಭಾಷೆಗೆ ಲೋಪವಾಗದ ಹಾಗೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ರೀತಿಯಲ್ಲಿದೆ.

ಹೀಗೆ ವಿಭಿನ್ನ ಕಾರಣಗಳಿಂದ ಓದುಗನ ಮನಸ್ಸನ್ನು ಅತ್ತಿತ್ತ ಸರಿಸದೆ ಒಂದೇ ಗುಕ್ಕಿಗೆ ಓದುವ ಹಕೀಕತ್ತಿಗೆ ನೂಕಿ ಗಮನ ಸೆಳೆವ ‘ಅಜ್ಜ ನೆಟ್ಟ ಹಲಸಿನ ಮರ’ ದ ಕಮಟು ವಾಸನೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ವಿಶೇಷ ಕೃತಿ.

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಆರನಕಟ್ಟೆ ರಂಗನಾಥ

ಜವರಾಜ್ ರ ಬರವಣಿಗೆ ಗಂಭೀರವೂ ,ವಿಶ್ಲೇಷಣಾತ್ಮಕವಾಗಿದೆ. ಮತ್ತಷ್ಟು ನಿರೀಕ್ಷಿಸುವೆ

ಆರನಕಟ್ಟೆ ರಂಗನಾಥ

1
0
Would love your thoughts, please comment.x
()
x