ಅದ್ಭುತ ಮತ್ತು ಅಪೂರ್ವವಾದ ಈ ಭೂಮಂಡಲ ಆನೇಕ ವೈಚಿತ್ರ್ಯಗಳಿಂದ ಕೂಡಿದ ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿದೆ. ಆದರೆ ಹದಗೆಟ್ಟಿರುವುದು ಕೇವಲ ಮಾನವನಿಂದ ಮಾತ್ರ. ಪ್ರಕೃತಿ ನೀಡುವ ಮೂಲ ಅವಶ್ಯಕತೆಗಳಾದ ನೀರು, ಆಹಾರ, ಗಾಳಿಯನ್ನು ನಂಬಿಕೊಂಡು ಸಕಲ ಚೈತನ್ಯಗಳು ಜೀವನ ನಡೆಸುತ್ತಿವೆ. ಪ್ರಕೃತಿ ಮಾತೆಯೂ ಕೂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ವಸಂಕುಲಗಳನ್ನು ರಕ್ಷಿಸುತ್ತಿದ್ದಾಳೆ. ಆದರೆ ಇಂದೇಕೋ ಆಕೆ ರೌದ್ರಾವತಾರ ತಾಳಿದಂತಿದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ ಚಟುವಟಿಕೆಗಳು ಆಕೆಯ ಸಹನೆಯನ್ನು ಕದಡಿವೆ.
ಆಧುನಿಕತೆಯ ಮೊರೆಹೊಕ್ಕ ಮಾನವ ತಂಗಾಳಿಯ ವೃಕ್ಷಗಳನ್ನು ಕಡಿದು ಗಗನಚುಂಬಿ ಕಟ್ಟಡಗಳ ನಿರ್ಮಾಣ ಮಾಡಿದ. ಕಾರ್ಖಾನೆಗಳನ್ನು ನಿರ್ಮಿಸಿ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸುವ ತವಕದಲ್ಲಿ ಜಲರಾಶಿಯನ್ನು ಹಾಳುಗೆಡವಿದೆ.ಸುತ್ತಲಿನ ನೆಲವನ್ನು ಮರುಭೂಮಿ ಮಾಡಲು ಹೊರಟ. ತತ್ಪರಿಣಾಮವಾಗಿ ಇಂದು ಪ್ರಾಣವಾಯುವಿನ ಕೊರತೆಯನ್ನೂ ಅನುಭವಿಸುವಂತಾಯಿತು. ಹುಟ್ಟಿಗೆ ಸಂಭ್ರಮಿಸುವ ನಾವು ಕಿರಿಹಿರಿಯರು ಸತ್ತಾಗ ಅವರಿಗೆ ವಿಧಿ ವಿಧಾನಗಳ ಮೂಲಕ ಶವಸಂಸ್ಕಾರ ಮಾಡಲೂ ಸ್ಥಳದ ಕೊರತೆ. ಹೀಗೆ ಉಂಟಾದ ಸಮಸ್ಯೆಗಳು ಒಂದೇ ಎರಡೇ ? ಇಂದು ಇಡೀ ಜಗತ್ತನ್ನು ಕೊರೋನ ಮಹಾಮಾರಿ ಆಲಂಗಿಸಿದೆ. ಅಲ್ಪ ಸ್ವಲ್ಪ ಇಳಿಮುಖವಾಗಿರುವ ಈ ಸೋಂಕು ವರುಷ ದಾಟಿದಂತೆ ರೂಪಾಂತರಗೊಂಡು ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದೆ. ಇದು ವೈರಸ್ ನಿಂದ ಉಂಟಾದರೂ ಒಬ್ಬರಿಂದ ಒಬ್ಬರಿಗೆ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ವೈರಸ್ ಗೆ ಇನ್ನೊಂದು ಜೀವಿಯ ದೇಹದ ಒಳಗೆ ಮಾತ್ರ ಇರುವಿಕೆ ತೋರ್ಪಡಿಸುವ ಸಾಮರ್ಥ್ಯವಿದೆ.
ಜನಸಾಮಾನ್ಯರು ಕೇವಲ ಮೂರು ಮುಖ್ಯ ಅಂಶಗಳನ್ನು ಪಾಲಿಸುವಲ್ಲಿ ಎಡವಿದ್ದು ಎರಡನೇ ಅಲೆಯ ತೀವ್ರತೆಯನ್ನು ಎದುರಿಸುವಂತಾಯಿತು. ಮಾಸ್ಕ್ ನ್ನು ಬಾಯಿ ಮತ್ತು ಮೂಗಿಗೆ ಬಿಟ್ಟು ಗದ್ದಕ್ಕೆ ಹಾಕಿಕೊಳ್ಳುವ ಪರಿಪಾಠವಿದೆ. ಇದರಿಂದ ಮಾಸ್ಕ್ ನಲ್ಲಿ ಬೆವರು ತುಂಬಿ ತೊಂದರೆಯೇ ಹೆಚ್ಚು. ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅನಾವಶ್ಯಕವಾಗಿ ಬೇಕಾಬಿಟ್ಟಿ ತಿರುಗಾಡುತ್ತಾರೆ. ಇನ್ನು ಎಷ್ಟೋ ಮಂದಿ ಕೈ ಸ್ವಚ್ಛ ಮಾಡುವ ಇರಾದೆಯನ್ನು ಹೊಂದಿರುವುದಿಲ್ಲ. ಇಲ್ಲಿ ಒಬ್ಬರನ್ನೊಬ್ಬರು ದೂರಿ ಪ್ರಯೋಜನವಿಲ್ಲ. ಪ್ರತಿ ವ್ಯಕ್ತಿಯ ಪಾತ್ರವೂ ಬಹಳ ಮುಖ್ಯ.
ಹಿಂದಿನ ವರ್ಷದ ಲಾಕ್ ಡೌನ್ ನಲ್ಲಿ ಎಷ್ಟೋ ಕಷ್ಟ ನಷ್ಟಗಳು ಸಂಭವಿಸಿದವು. ಕೂಲಿ ಕಾರ್ಮಿಕರು, ಜನಸಾಮಾನ್ಯರು, ಉದ್ಯೋಗಕ್ಕಾಗಿ ವಲಸೆ ಬಂದವರೂ ಕೂಡ ಹೊತ್ತಿನ ಊಟಕ್ಕಾಗಿ ಪರದಾಡಿದ್ದಾಯಿತು. ವೈದ್ಯರು, ದಾದಿಯರು, ಶಿಕ್ಷಕರು ಸೇರಿದಂತೆ ಕೊರೋನ ವಾರಿಯರ್ಸ್ ಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಇಡೀ ವಿಶ್ವವೇ ಸ್ತಬ್ಧವಾಯಿತು. ಕಣ್ಣಿಗೆ ಕಾಣದ ಅತಿ ಸೂಕ್ಷ್ಮ ಜೀವಿ ಕೊರೋನ ವೈರಸ್ ನ ಸೋಂಕು ಮನುಕುಲವನ್ನು ನಶಿಸುವ ಪಣ ತೊಟ್ಟಂತಿದೆ. ಅದ್ಭುತವಾಗಿ ಯೋಚಿಸಬಲ್ಲ ಮಾನವ ಸಕಲ ಜೀವರಾಶಿಗಳಿಗಿಂತ ತಾನೇ ಮಿಗಿಲು ಎಂದು ಗರ್ವದಿಂದ ಸ್ವೇಚ್ಚೆಯಾಗಿ ವರ್ತಿಸುತ್ತಿದ್ದ. ಆದರೆ ಈ ಮಾರಣಾಂತಿಕ ಸೋಂಕು ಆತನ ಜಂಘಾಬಲವನ್ನೇ ಉಡುಗಿಸಿಬಿಟ್ಟಿದೆ. ಬದಲಾದ ಸಮಯದ ವ್ಯಾಪಾರ ವಹಿವಾಟು, ಕೆಲಸವಿಲ್ಲದೆ ಜನರ ಪರದಾಟ, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ, ಸಮಾರಂಭದಲ್ಲಿ ಸಂತೋಷದಿಂದ ಭಾಗವಹಿಸುವಾಗ ಭಯದ ವಾತಾವರಣ ಎಲ್ಲವೂ ಈ ಸೋಂಕಿನ ಭಯಾನಕ ಪರಿಣಾಮವಾಗಿದೆ. ಇಷ್ಟೆಲ್ಲ ಸಂದಿಗ್ಧ ಪರಿಸ್ಥಿತಿಗಳು ಬಂದೊರಗಿದರೂ ನಾವು ಎಚ್ಚೆತ್ತುಕೊಂಡಿಲ್ಲ. ಎಲ್ಲವೂ ಕಾಂಚಾಣಮಯ. ಹಣಕ್ಕಾಗಿ ಅನ್ಯಾಯ ಅನಾಚಾರಗಳು ತಲೆ ಎತ್ತಿ ನಿಂತಿರುವುದು ಬಹಳ ಖೇದಕರ ಸಂಗತಿ. ತಾನು ತನ್ನಿಂದಲೇ ಎನ್ನುವ ಮಾನವನ ಅಹಂಭಾವ ಪ್ರಕೃತಿಯ ಮುಂದೆ ಸೊನ್ನೆಯಾಯಿತೇ? ಗಮನಿಸಿದಾಗ ಪ್ರಕೃತಿ ಮಾತೆಯ ಕೋಪವು ಜ್ವಾಲಾಮುಖಿಯಾಗಿ ಹೊರಹೊಮ್ಮಿದೆ ಎಂದೆನಿಸುತ್ತದೆ.
ಇನ್ನು ಕೊರೋನದ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಿದಾಗ ಪರಿಸರದಲ್ಲಿ ಮಾಲಿನ್ಯಗಳು ಸ್ವಲ್ಪ ಮಟ್ಟಿಗೆ ಮುಕ್ತವಾಗಿ ಸಸ್ಯರಾಶಿ, ವನಕುಸುಮಗಳು ಉಸಿರಾಡುತ್ತಿವೆ. ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಹಿಂದೆ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ, ಉಪನಯನ, ಹುಟ್ಟುಹಬ್ಬ ಮುಂತಾದ ಸಭೆ ಸಮಾರಂಭಗಳು ಇಂದು ತುಂಬಾ ಸರಳವಾಗಿ ಸಮಾರೋಪಗೊಳ್ಳುತ್ತಿರುವುದರಿಂದ ಆರ್ಥಿಕ ಮುಗ್ಗಟ್ಟು ಕಡಿಮೆಯಾಗಿದೆ. ಆಹಾರ ಕೊರತೆಯಿಂದ ಹೊರಬರಲು ಸ್ವಲ್ಪಮಟ್ಟಿಗಾದರೂ ಸಾಧ್ಯ ಎಂದೆನಿಸುತ್ತದೆ. ಅತ್ಯಂತ ಸರಳ ಜೀವನವನ್ನು ಮತ್ತೊಮ್ಮೆ ನೆನಪಿಸಿದೆ. ಹಣದ ಬೆನ್ನೇರಿ ಕೃಷಿಯನ್ನು ಹಾಳು ಮಾಡಿ ಪಟ್ಟಣದತ್ತ ಮುಖ ಮಾಡಿದವರು ಪುನಃ ಕೃಷಿದೇಗುಲಕ್ಕೆ ಮರಳಿ ಬಂದಿದ್ದಾರೆ. ಜೊತೆಗೆ ಜನರು ಸೇರುವುದನ್ನು ಮಿತಿಗೊಳಿಸಿದ್ದರಿಂದ ಸೋಂಕಿನ ಸರಪಳಿಯನ್ನು ತುಂಡರಿಸಬಹುದು.
ಮತ್ತೆ ನಮ್ಮ ಮುಂದಿನ ಜವಾಬ್ದಾರಿಯನ್ನು ಆಲೋಚಿಸುವುದಾದರೆ ನಾವೆಲ್ಲರೂ ಜಾಗೃತರಾಗುವುದು ಅತೀ ಜರೂರು. ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ದೇಶಕ್ಕೆ ಪರಿಸ್ಥಿತಿ ಸಮತೋಲನದ ಅವಶ್ಯಕತೆಯಲ್ಲಿ ಪ್ರತಿ ವ್ಯಕ್ತಿ ಪಾತ್ರ ಬಹು ಮುಖ್ಯ. ಪ್ರತಿಯೊಬ್ಬರ ಆರ್ಥಿಕತೆಯನ್ನು ಸುಧಾರಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ. ಜನಾರೋಗ್ಯದ ಹಿತ ದೃಷ್ಟಿಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಲು ಅಣಿಯಾಗೋಣ. ನಮ್ಮ ಗುರಿ ಕೊರೋನವನ್ನು ಓಡಿಸುವುದೇ ವಿನಃ ಕೊರೋನ ಪೀಡಿತರನ್ನು ಅಸ್ಪೃಶ್ಯರಂತೆ ನೋಡುವುದಲ್ಲ. ಜೊತೆಗೆ ನಮ್ಮ ದೈನಂದಿನ ಜೀವನದ ರೀತಿ ರಿವಾಜುಗಳಿಗೆ ನಾವೇ ಚೌಕಟ್ಟನ್ನು ಹಾಕಿಕೊಳ್ಳೋಣ. ನಮ್ಮ ಅಡುಗೆ ಮನೆ ಉತ್ತಮ ಔಷಧಾಲಯವೂ ಹೌದು ಎಂಬುದನ್ನು ನಾವು ಅರಿಯೋಣ. ಅಲ್ಲಿಯೇ ನಾವು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ, ತಂಬುಳಿ, ಗೊಜ್ಜು ಹೀಗೆ ವಿವಿಧ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಬಳಸುತ್ತ, ಇತರರನ್ನು ಬಳಸುವಂತೆ ಪ್ರೇರೇಪಿಸೋಣ. ನುರಿತ ತಜ್ಞರ ಅಭಿಪ್ರಾಯಗಳು, ವೈದ್ಯರ ಸಲಹೆ ಸೂಚನೆಗಳನ್ನು ಅನುಸರಿಸೋಣ. ಸರ್ಕಾರವು ಉಚಿತವಾಗಿ ಕೊಡಮಾಡಿದ ವ್ಯಾಕ್ಸಿನ್ ನ್ನು ಹಾಕಿಸಿಕೊಳ್ಳುವಲ್ಲಿ ಅಸಡ್ಡೆ ತೋರದೆ ಪ್ರತಿಯೊಬ್ಬರೂ ಕೈ ಜೋಡಿಸೋಣ. ಅನಾವಶ್ಯಕವಾಗಿ ಮನೆಯಿಂದ ಹೊರಬರದೆ ವಾರಕ್ಕೊಮ್ಮೆ ಬೇಕಾಗುವ ಸಾಮಾನುಗಳನ್ನು ಮನೆಯಲ್ಲಿ ದಾಸ್ತಾನು ಇಡೋಣ. ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಸಾಬೂನಿನಿಂದ ಆಗಾಗ ಕೈ ತೊಳೆಯೋಣ. ವೈಯಕ್ತಿಕವಾಗಿ ಸ್ವಚ್ಛತೆ ಮತ್ತು ಅರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಜೊತೆಗೆ ‘ಅರೋಗ್ಯವೇ ಭಾಗ್ಯ ‘ ಎಂಬುದು ನಮ್ಮ ಮೂಲ ಮಂತ್ರವಾಗಲಿ. ಕುದಿಸಿದ ನೀರಿಗೆ ‘ಗಿಡಮೂಲಿಕೆಗಳ ರಾಣಿ’ ಎನಿಸಿದ ತುಳಸಿ ಎಲೆಗಳನ್ನು ಹಾಕಿ ಅದನ್ನೇ ಕುಡಿಯಲು ಬಳಸೋಣ. ಏಕೆಂದರೆ ತುಳಸಿ ಎಲೆಗಳು ರೋಗ ನಿರೋಧಕ ಶಕ್ತಿ ಹೊಂದಿದ್ದು ಹೆಚ್ಚಿನ ರೋಗಗಳಿಗೆ ರಾಮಬಾಣವಾಗಿದೆ. ಮಾಧ್ಯಮ ಮಿತ್ರರು ಟಿ.ವಿ ಯಲ್ಲಿ ಕೊರೋನ ಸೋಂಕಿತರ ಕಷ್ಟ ಕಾರ್ಪಣ್ಯಗಳು, ಅವರ ಅಂಕಿ ಅಂಶಗಳನ್ನು ಬಿತ್ತರಿಸುವ ಜೊತೆಗೆ ವೀಕ್ಷಕರು ಮತ್ತು ಸೋಂಕಿತರಿಗೆ ಆದಷ್ಟು ಸಕಾರಾತ್ಮಕವಾಗಿ ಆತ್ಮಬಲವನ್ನು ತುಂಬುವ ಉತ್ತಮವಾದ ಚರ್ಚೆ ಮತ್ತು ಸಲಹೆಗಳನ್ನು ನೀಡುವುದು ಒಳಿತು ಮತ್ತು ಆವಶ್ಯಕವೂ ಹೌದು. ಹಾಗೆಯೇ ಕೊರೋನ ರೋಗಿಗಳ ಕುರಿತು ಆಗುತ್ತಿರುವ ಅನ್ಯಾಯಗಳನ್ನು ತಡೆಹಿಡಿಯುವುದು ಸರ್ಕಾರ ಮತ್ತು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಆಗಿದೆ.
ಕಷ್ಟ ಪಡದೇ ಎಂದಿಗೂ ಸುಖ ಸಿಗಲಾರದು. ಆಡಂಬರ, ಆತ್ಮ ಪ್ರತಿಷ್ಠೆ, ವಿಜೃಂಭಣೆಯಿಂದ ರೂಢಿಸಿಕೊಂಡ ನಮ್ಮ ಜೀವನ ಶೈಲಿಯನ್ನು ಸ್ವಲ್ಪ ಬದಲಿಸೋಣ. ಸ್ವಚ್ಛತೆಯ ನಿಯಮಗಳನ್ನು ಪಾಲಿಸದಿದ್ದರೆ ವೈರಸ್ ನ್ನು ನಾಶಪಡಿಸುವುದು ತುಂಬಾ ಕಷ್ಟ. ಎಲ್ಲರೂ ಪರಿಸರ ಸ್ನೇಹಿಗಳಾಗೋಣ. ಭೂಮಿತಾಯಿ ಕೋಪಕ್ಕೆ ಗುರಿಯಾದ ನಾವು ಅವಳೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ಅವಳ ಶಾಂತತೆಗಾಗಿ ಪ್ರಯತ್ನಿಸೋಣ. ಪಟ್ಟಣವಾಗಲಿ ಹಳ್ಳಿಯಾಗಲಿ ಪ್ರತಿ ಮನೆಯಲ್ಲಿ ಹಸಿರು ಗಿಡಗಳ ತೋರಣವಿರಲಿ. ನಾವೆಲ್ಲರೂ ಪ್ರಕೃತಿಯೊಂದಿಗೆ ಪರಸ್ಪರ ಸಹಕಾರ ತತ್ವವನ್ನು ಪಾಲಿಸೋಣ. ಆಗಮಾತ್ರ ತೀವೃತರವಾದ ಕೊರೋನ ವೈರಾಣುವಿನ ಈ ಅಲೆಯಿಂದ ಮುಕ್ತಿ ಸಾಧ್ಯ. ಹಾಗೆಯೇ ಕೊರೋನ ಮುಕ್ತ ಜೀವನ ನಮ್ಮದಾಗಲಿ ಎಂದು ಆಶಿಸೋಣ.
”ಲೋಕಾಃ ಸಮಸ್ತಾಃ ಸುಖಿನೋ ಭವಂತು”
-ಗಾಯತ್ರಿ ನಾರಾಯಣ ಅಡಿಗ