“ಮಾಡರ್ನ್ ಲೋಕದ ಮಿನಿಕಥೆಗಳು”: ಪ್ರಸಾದ್ ಕೆ.

 

prasad-naik

ಅವಳಿಗೆ ಮುಂಜಾನೆಯ ಏಳಕ್ಕೆ ಸರಿಯಾಗಿ ಎಚ್ಚರವಾಯಿತು. ಕಣ್ಣುಜ್ಜಿ ಅತ್ತಿತ್ತ ನೋಡಿದರೆ ಅವನಿನ್ನೂ ವಿವಸ್ತ್ರನಾಗಿಯೇ ಬಿದ್ದುಕೊಂಡಿದ್ದ. ಲಗುಬಗೆಯಲ್ಲೇ ಕಾಲನ್ನು ನೀಲಿ ಜೀನ್ಸ್ ಪ್ಯಾಂಟಿನೊಳಗೆ ತೂರಿಸಿ, ಟೀಶರ್ಟೊಂದನ್ನು ಧರಿಸಿ ತನ್ನ ಪುಟ್ಟ ಬ್ಯಾಗಿನೊಂದಿಗೆ ಅವಳು ಹೊರಟುಹೋದಳು. ಹತ್ತರ ಸುಮಾರಿಗೆ ಅವನಿಗೆ ಎಚ್ಚರವಾಯಿತು. ಹೋಟೇಲ್ ರೂಮಿನಲ್ಲಿ ಅವಳ ಪತ್ತೆಯಿರಲಿಲ್ಲ. ಅವಳ ಮೈಬೆವರಿನ, ಉನ್ಮಾದಗಳ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದ. ಛೇ, ನಿನ್ನೆ ರಾತ್ರಿ ಅವಳ ನಂಬರನ್ನಾದರೂ ಕೇಳಬಹುದಿತ್ತು ಎಂದು ಪರಿತಪಿಸಿದ ಆತ. ಹಾಸಿಗೆಯಿಂದೆದ್ದು ಒಳಉಡುಪನ್ನು ಧರಿಸಿ ನೀರಿನ ಬಾಟಲಿಗೆಂದು ಫ್ರಿಡ್ಜ್ ಕಡೆಗೆ ಹೋದರೆ ಫ್ರಿಡ್ಜಿನ ಬಾಗಿಲಿನಲ್ಲೊಂದು ಅಂಟಿಸಿಟ್ಟ ಹಳದಿ ಚೀಟಿಯಿತ್ತು. “ನಿನ್ನೆ ರಾತ್ರಿ ನಡೆದಿದ್ದು ನನಗೂ ಹೊಸದಲ್ಲ, ನಿನಗೂ ಹೊಸದಲ್ಲ. ನನ್ನನ್ನು ಹುಡುಕಿಕೊಂಡು ಮಾತ್ರ ಬರಬೇಡ. ಪ್ರೀತಿ, ಸಂಬಂಧ ಇವೆಲ್ಲಾ ನನ್ನಿಂದಾಗುವ ಮಾತಲ್ಲ'', ಎಂದು ಅದರಲ್ಲಿ ಬರೆದಿತ್ತು. ಅವನೂ ಏನೂ ಆಗಿಲ್ಲವೆಂಬಂತೆ ಆ ಚಚ್ಚೌಕದ ಹಳದಿ ಚೀಟಿಯನ್ನು ಮುರುಟಿ ಕಸದ ಡಬ್ಬಿಗೆಸೆದ. ಪ್ರೇಯಸಿಯ ಗುಡ್ ಮಾನರ್ಿಂಗ್ ಸಂದೇಶವೊಂದು ಅವನ ಮೊಬೈಲಿನಲ್ಲಿ ನಗುತ್ತಿತ್ತು. 

************

“ಅವಳನ್ನು ಮರೀಲೇಬೇಕು ಕಣೋ'' ಎನ್ನುತ್ತಿದ್ದ ಅವನು. ಪಕ್ಕದಲ್ಲಿ ಕುಳಿತು ತಲೆಯಾಡಿಸುತ್ತಿದ್ದಿದ್ದು ಅವನ ಗೆಳೆಯ. ಕುಸುರಿ ಕಲೆಗಾರನಂತೆ ತನ್ನ ಬೆರಳುಗಳನ್ನು ನಾಜೂಕಾಗಿ ಆಡಿಸುತ್ತಾ ಗಾಂಜಾ ತುಂಬಿದ್ದ ಮೋಟುಬೀಡಿಯೊಂದನ್ನು ಅವನ ಕೈಗಿತ್ತು “ಸೇದು ಮಗಾ, ಅವಳನ್ನೇನು, ಜಗತ್ತನ್ನೇ ಮರೀತೀಯಾ ನೋಡು'' ಎಂದ ಗೆಳೆಯ. ಮೊದಲೇ ತಲೆ ಕೆಟ್ಟುಹೋಗಿದ್ದ ಅವನಿಗೆ ಬೀಡಿಯನ್ನು ತುಟಿಗಳ ಮಧ್ಯದಲ್ಲಿಟ್ಟುಕೊಂಡು ದೀರ್ಘವಾಗಿ ಉಸಿರೆಳೆಯುತ್ತಿದ್ದಂತೆಯೇ ತಲೆ ಧಿಮ್ಮೆಂದಿತು. “ಏನೋ ವಿಚಿತ್ರವಾಗಿದೆ ಮಾರಾಯ, ಈ ಮನೆಹಾಳು ಪ್ರೀತಿಯು ನನ್ನಂಥಾ ನನ್ನನ್ನು ನಶೆಗೂ ಇಳಿಸಿಬಿಟ್ಟಿತು ನೋಡು'', ಎಂದು ಮೆಲ್ಲಗೆ ಉಸುರಿದ ಆತ. “ಆ ಮಹಾಶಿವನೇ ಕೈಲಾಸದಲ್ಲಿ ಈ ಸಂಜೀವಿನಿಯನ್ನು ಸೇದುತ್ತಿದ್ದನಂತೆ, ನಿನ್ನದೇನಯ್ಯಾ ಗೊಣಗಾಟ'', ಎಂದ ಗೆಳೆಯ. ಅವನಿಗೂ ಹೌದೆನ್ನಿಸಿತು. ಅಷ್ಟಕ್ಕೂ `ಸೀದಾ-ಸಾದಾ ಸಾಧು ಹುಡುಗ' ಎಂಬ ಬಿರುದು ತನಗೆ ಕೊಟ್ಟಿದ್ದಾದರೂ ಏನು ಎಂದೆನಿಸಿ ಮತ್ತಷ್ಟು ವ್ಯಥೆಯಾಯಿತು. ಈ ಬಾರಿ ಹತಾಶೆಯಿಂದ ಆತ ಮತ್ತಷ್ಟು ದೀರ್ಘವಾಗಿ ಧಮ್ಮೆಳೆದ. ತಲೆಸುತ್ತು ಬಂದಂತಾಯಿತು. ಗೋಡೆಯಲ್ಲಿ ನೇತುಹಾಕಿದ್ದ ರುದ್ರನ ವರ್ಣಚಿತ್ರವು ಇವನನ್ನೇ ನೋಡಿ ನಗುತ್ತಿದೆಯೇನೋ ಅನ್ನುವಂತೆ ಇವನೆಡೆಗೇ ಬಾಗಿತ್ತು. 

************

ಅವನು ಅವಳ ಮೃದುವಾದ ಗೌರವರ್ಣದ ಕೈಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ. ಅವನೋ ಟ್ಯಾಟೂ ಕಲಾವಿದ. ಅವಳಿಗೆ ಹೆಚ್ಚೆಂದರೆ ಹತ್ತೊಂಬತ್ತೋ ಇಪ್ಪತ್ತೋ. ಟ್ಯಾಟೂವೊಂದನ್ನು ಮಾಡಿಕೊಡಬೇಕೆಂದು ಅವಳು ಅವನಿರುವಲ್ಲಿ ಬಂದಿದ್ದಳು. ಆ ಬಿಳಿ ಚರ್ಮದಲ್ಲಿ ಅಚ್ಚೊತ್ತಿದ್ದ ರೇಜರ್ ಬ್ಲೇಡುಗಳ ಹಳೆಯ ತೆಳುಗೆರೆಗಳು ಅವನಿಗೆ ಕಾಣದೇನೂ ಇರಲಿಲ್ಲ. ಅದೆಷ್ಟು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳೋ ಏನೋ ಪಾಪ! ಅವಳನ್ನು ನೋಡುತ್ತಾ ಅವನಿಗೆ ಸಂಕಟವಾಯಿತು. ಅವಳ ಕಣ್ಣುಗಳಲ್ಲಿದ್ದ ದುಃಖದ ಭಾರವು ಹಟಾತ್ತನೆ ಆಯತಪ್ಪಿ ಅವನ ಹೆಗಲಿಗೇ ಬಿದ್ದಂತೆ ಅವನೊಮ್ಮೆ ಕುಗ್ಗಿಹೋದ. “ಗಾಯಗಳನ್ನು ಮರೆಮಾಚುವುದರಿಂದ ಅವುಗಳು ವಾಸಿಯಾಗುವುದಿಲ್ಲ ಹುಡುಗೀ'', ಎಂದು ಮೆಲ್ಲನೆ ಉಸುರಿದ ಅವನು. “ಆದರೆ ಗಾಯಗಳನ್ನು ಮರೆಮಾಚುವುದರಿಂದ ಒಂದು ಕ್ಷಣ ಅವುಗಳು ಇಲ್ಲವೇನೋ ಎಂಬ ಭ್ರಮೆಯಾದರೂ ಮೂಡುತ್ತದಲ್ಲವೇ? ಆ ಕ್ಷಣಿಕ ಭರವಸೆಯೇ ನನಗೆ ಸಾಕು'', ಎಂದಳು ಅವಳು. ಅವನಿಗೆ ಈ ಬಾರಿ ಏನು ಹೇಳಬೇಕೆಂದೇ ತೋಚಲಿಲ್ಲ. ಹಚ್ಚೆಯ ವಿವಿಧ ವಿನ್ಯಾಸಗಳನ್ನು ಹೊಂದಿದ್ದ ಪುಸ್ತಕವೊಂದನ್ನು ಅವಳ ಕೈಗಿಟ್ಟು ಲಗುಬಗೆಯಿಂದಲೇ ಆತ ಹೊರ ನಡೆದಿದ್ದ. ಬಹುಷಃ ಅವನ ಗಾಯಗಳೂ ಹಸಿಯಾಗಿದ್ದವು. 

************

“ಇನ್ನು ಚೆಲ್ಲುಚೆಲ್ಲಾಗಿ ಆಡಬೇಡ, ಮೈಮುಚ್ಚುವಂಥಾ ಬಟ್ಟೆ ಹಾಕು, ಸಿಗರೇಟು ಸೇದಬೇಡ, ಗೆಳೆಯರೊಂದಿಗೆಲ್ಲಾ ಕುಡಿಯಬೇಡ, ಜಾಬ್ ಬಿಟ್ಟುಬಿಡು, ಪಾಟರ್ಿ-ಕ್ಲಬ್ಬು ಏನೂ ಬೇಡ, ಹಿಪ್ಪಿಯಂತಿರಬೇಡ, ಎಲ್ಲಿಗೆ ಹೋದರೂ ಸಂಜೆ ಏಳರ ಮುನ್ನ ಮನೆಗೆ ಬಾ…'', ಅವನು ಹೇಳುತ್ತಾ ಹೋಗಿದ್ದ. ಹೊಸದಾಗಿ ವಿವಾಹವಾದ ಜೋಡಿಯದು. “ಅದ್ಯಾಕೆ?'', ಎಂದು ಕೇಳಿದಳು ಅವಳು. “ಕ್ರೂರಿ, ಕುತಂತ್ರಿ ಸಮಾಜವಿದು. ಇಂಥಾ ಹೆಣ್ಣುಗಳು ಎಲ್ಲಿ ಸಿಗುತ್ತವೆ ಎಂದೇ ಹೊಂಚುಹಾಕುತ್ತಿರುತ್ತಾರೆ ಕೆಲವರು'', ಎಂದು ಗೊಣಗಿದ ಅವನು. “ಆದರೆ ನನ್ನ ಇಂಥಾ ರೂಪವನ್ನು ನೋಡಿಯೇ ನೀನು ಇಷ್ಟಪಟ್ಟಿದ್ದಲ್ಲವೇ?'', ಎಂದು ಮರುಪ್ರಶ್ನೆಯನ್ನೆಸೆದಿದ್ದಳು ಅವಳು. ಈ ಬಾರಿ ಅವನಲ್ಲಿ ಉತ್ತರವಿರಲಿಲ್ಲ. “ಸುಮ್ಮನೆ ವಾದ ಮಾಡಬೇಡ. ಹೆಣ್ಣು ಎಂದರೆ ಹೀಗಿರಬೇಕು'', ಎಂದು ಅಸಮಾಧಾನದಿಂದಲೇ ಆತ ಉತ್ತರಿಸಿದ. “ಹಾಗಿದ್ದರೆ ಗಂಡೆಂಬ ಪ್ರಾಣಿ ಹೇಗಿರಬೇಕು?'', ಥಟ್ಟನೆ ಬಂತು ಅವಳ ಮರುಪ್ರಶ್ನೆ. ಪೆಚ್ಚಾದ ಅವನು ತನಗೆ ಭಾರೀ ತುತರ್ಿನ ಕೆಲಸವಿದೆಯೆಂಬಂತೆ ಸುಮ್ಮನೆ ಎದ್ದು ಹೋದ. “ಗಂಡಸಂತೆ ಗಂಡಸು'', ಎಂದು ತನ್ನಷ್ಟಕ್ಕೇ ಗೊಣಗಿದಳು ಅವಳು. 

************

“ಆಗಿದ್ದು ಆಗಿಹೋಯಿತು. ಇನ್ನೆಷ್ಟು ದಿನ ಅಂತ ಈ ಏಕಾಂಗಿ ಬಾಳು? ನೀನು ನನ್ನೊಂದಿಗೆ ಬಂದುಬಿಡು. ನಿನಗೆ ನಾನು ಬಾಳು ಕೊಡುವೆ'', ಎಂದಿದ್ದ ಆತ. “ಬಾಳು ಕೊಡೋದು ಅಂದ್ರೇನು? ಗಂಡ ಸತ್ತರೂ ಈಗೇನು ನಾನು ಬೀದಿಗೆ ಬಂದಿರುವೆನೇ?'', ಎಂದು ಖಾರವಾಗಿಯೇ ಕೇಳಿದ್ದಳು ಅವಳು. ಅಷ್ಟಕ್ಕೇ ನಿಲ್ಲಿಸದೆ “ನನಗೊಬ್ಬ ಏಳು ವರ್ಷದ ಮಗನೂ ಇದ್ದಾನೆ ಎಂಬುದನ್ನು ಮರೆಯಬೇಡ'' ಎಂದಿದ್ದಳು ಆಕೆ. “ಮಗುವನ್ನು ಎಲ್ಲಾದರೂ ದೂರ ಬಿಡೋಣ. ಎಷ್ಟಾದರೂ ನನ್ನ ರಕ್ತವಲ್ಲವಲ್ಲಾ ಅದು. ಎಲ್ಲದಕ್ಕೂ ಮಗುವನ್ನು ಕುಂಟುನೆಪವಾಗಿ ಮುಂದೆ ತರಬೇಡ'', ಎಂದು ಬುಸುಗುಟ್ಟಿದ ಆತ. “ನೀನೂ ನಿನ್ನ ಹೆತ್ತವರನ್ನು ಬಿಟ್ಟು ನನ್ನ ಹಿಂದೆ ಬಂದು ಬಿಡು ಎಂದು ನಾನು ಹಟಹಿಡಿದರೆ?'', ಎಂದು ಅವಳೂ ಸವಾಲೆಸೆದಿದ್ದಳು. ಆತನ ಮುಖವು ಕಪ್ಪಿಟ್ಟಿತ್ತು. “ಆಯ್ಕೆಗಳೆಂದರೆ ಅಷ್ಟು ಸುಲಭವಲ್ಲ ಗೆಳೆಯಾ. ಎಲ್ಲವನ್ನೂ, ಎಲ್ಲರನ್ನೂ ಜೊತೆಯಲ್ಲೇ ಕರೆದುಕೊಂಡು ಸಾಗಬೇಕಾದ ಅನಿವಾರ್ಯತೆಯು ನನಗೂ ಇದೆ'', ಎಂದಳವಳು. ಈ ಬಾರಿ ತಲೆಯಾಡಿಸುವುದನ್ನು ಬಿಟ್ಟರೆ ಬೇರ್ಯಾವ ಆಯ್ಕೆಗಳೂ ಅವನಿಗಿರಲಿಲ್ಲ. 

************

“ವಿದೇಶಕ್ಕೆ ಹೋಗುವ ಇಷ್ಟೊಳ್ಳೆ ಅವಕಾಶವನ್ನು ಬಿಟ್ಟೆಯಂತೆ?'', ಎಂದು ಅವಳು ತನ್ನ ಗೆಳತಿಯನ್ನು ಕೇಳಿದಳು. “ಆ ದಿನ ಪಾಟರ್ಿಯಲ್ಲಿ ನೋಡಿದ್ಯೇನೇ? ನಾನೂ ಆ ಚೇರ್ಮನ್ ಸಾಹೇಬ್ರೂ ಜೊತೆಯಲ್ಲೇ ಕೂತಿದ್ವಾ? ಮಾತಾಡುತ್ತಲೇ ಇದ್ದರೂ ಅವರ ಕಣ್ಣುಗಳು ನನ್ನ ಎದೆಯನ್ನೇ ಮುಕ್ಕುವಂತಿದ್ದವು. ಮೇಜಿನಡಿಯಲ್ಲಿ ತನ್ನ ಕಾಲಹೆಬ್ಬೆರಳಿನಿಂದ ನನ್ನ ಪಾದವನ್ನೂ, ಕಾಲನ್ನೂ ಸವರುತ್ತಲೇ ಇದ್ದ ಆ ಮುದುಕ. ಈ ಫಾರಿನ್ ಟೂರ್ ಏನೆನ್ನುವುದು ಅಲ್ಲೇ ಅರ್ಥವಾಯ್ತು ನಂಗೆ'', ಗೆಳತಿಯ ನಿಟ್ಟುಸಿರು. “ಇದೆಲ್ಲಾ ಎಲ್ಲಾ ಕಡೆ ಇರೋವಂಥದ್ದೇ. ಫಾರಿನ್ನಿಗೆ ಹೋಗಿ ಸ್ವಲ್ಪ ಮೋಜಾದ್ರೂ ಮಾಡಿ ಬರಬಹುದಾಗಿತ್ತು ನೀನು. ಅಲ್ಲಿ ಯಾವನಿದ್ದಾನೆ ನಿನ್ನ ಮೇಲೆ ಕಣ್ಣಿಟ್ಟಿರೋಕೆ?'', ಮತ್ತೊಬ್ಬಳ ಸಲಹೆ. “ನಾನಾಗಿದ್ರೆ ಹೋಗ್ತಿದ್ನೋ ಏನೋ. ನಂಬಿದೋರನ್ನ ಕೈಬಿಡಲ್ಲ ನಮ್ ಬಾಸ್'', ಮತ್ತೆ ಪರೋಕ್ಷ ಆಮಿಷ. ಈ ಬಾರಿ ಅವಳಿಗೂ ಓಕೆ ಅನ್ನಿಸ್ತು. ಆದರೂ ಗೊಂದಲ. ಆಯ್ತು ನೋಡೋಣ, ಯೋಚಿಸ್ತೀನಿ ಎಂದಳು. “ಎರಡನೇ ಟಿಕೆಟ್ ಕ್ಯಾನ್ಸಲ್ ಮಾಡ್ಬೇಡಿ. ಕೊಂಚ ಕಾದು ನೋಡಿ'', ಎಂದು ಮತ್ತೊಬ್ಬಳ ಮೊಬೈಲಿನಿಂದ ಎಸ್ಸೆಮ್ಮೆಸ್ಸೊಂದು ಬಾಸ್ ಗೆ ರವಾನೆಯಾಯಿತು. ಮುದುಕ ಬಾಸ್ ನಸುನಕ್ಕ.

************  

ನಾನು ಮನೆಗೆ ಬಂದು ಹತ್ತು ನಿಮಿಷವಾದರೂ ಅವಳು ನನ್ನನ್ನು ಮಾತಾಡಿಸಿರಲಿಲ್ಲ. ನಿಶ್ಚಿತಾರ್ಥದ ಹಂತದಲ್ಲೇ ಇಂಥಾ ದರ್ಪ, ಇನ್ನು ಮದುವೆಯಾದ ಮೇಲೆ ಹೇಗೋ ಎಂದು ತನ್ನಲ್ಲೇ ಹೇಳಿಕೊಂಡೆ. ದಿನದ ಅರ್ಧಘಂಟೆಯಾದರೂ ನನಗೆ ಕೊಡು ಎಂದು ಅವಳು ಕೇಳಿದ್ದಳು. ನನಗೋ ಅದು ಬಾಲಿಶ ಬೇಡಿಕೆಯಂತೆ ಕಂಡಿತ್ತು. ಈ ಬಾರಿ ಅವಳ ಕೋಪ ಹೆಚ್ಚೇ ಆಗಿದ್ದರಿಂದ ಮುಖ ಊದಿಸಿಕೊಂಡು ಕುಳಿತಿದ್ದಳು. ಇದು ಸುಮಾರು ಒಂದೆರಡು ವಾರಗಳವರೆಗೂ ಮುಂದುವರಿಯಿತು. ಆದರೆ ಆ ದಿನ ಸಂಜೆ ನಾನು ಮನೆಗೆ ಮರಳಿದಾಗ ಅವಳು ಮನೆಯನ್ನೇ ಬಿಟ್ಟುಹೋಗಿದ್ದಳು. ಕಳಚಿಟ್ಟ ಉಂಗುರ ಮತ್ತು ಚೀಟಿಯೊಂದು ಮೇಜಿನ ಮೇಲೆ ಮಲಗಿತ್ತು. “ಹೆಣ್ಣಿನ ಮನಸ್ಸು ನಿನಗರ್ಥವಾಗುವಂಥದ್ದಲ್ಲ, ಗುಡ್ ಬೈ'' ಎಂದು ಅದರಲ್ಲಿ ಬರೆದಿತ್ತು. ಹೆಣ್ಣು ಎಂದರೆ ನನ್ನ ಜೀವನದಲ್ಲಿದ್ದಿದ್ದು ಅಮ್ಮ ಮಾತ್ರ. ನಂತರ ಬಂದಿದ್ದೇ ಇವಳು. ಅಮ್ಮ ಎಂದಾಕ್ಷಣ ಅಮ್ಮನಿಗೆ ಫೋನ್ ಮಾಡಿ ಎರಡು ತಿಂಗಳಿಗೂ ಹೆಚ್ಚಾಯಿತಲ್ಲಾ ಎಂದು ಥಟ್ಟನೆ ನೆನಪಾಯಿತು ನನಗೆ. ಅವಳೋ ಪಾಪ ಹಳ್ಳಿಯ ಅನಕ್ಷರಸ್ಥ ಹೆಣ್ಣು. ಹಾಗಾಗಿ ಕರೆ ಮಾಡುವುದಿದ್ದರೆ ನಾನೇ ಮಾಡಬೇಕು. ಅವಳು ನಿಸ್ಸಂದೇಹವಾಗಿಯೂ ಸತ್ಯವನ್ನೇ ಹೇಳಿದ್ದಳು ಎಂದು ಆ ಒಂದು ಕ್ಷಣ ನನಗನಿಸಿದ್ದಂತೂ ಹೌದು.  

************ 

ಹೊಸದಾಗಿ ವಿವಾಹವಾದ ಜೋಡಿ. ಹೆತ್ತವರನ್ನು ಬಿಟ್ಟು ಇದೇ ಮೊದಲ ಬಾರಿಗೆ ಗಂಡಹೆಂಡಿರಂತೆ ಹೊಸ ಮನೆಯಲ್ಲಿ ಸಂಸಾರ ಹೂಡಿದ್ದರು. ಸಾಮಾನುಗಳನ್ನು ತಂದಿರಿಸುವುದು, ವ್ಯವಸ್ಥಿತವಾಗಿ ಇಟ್ಟಿದ್ದೆಲ್ಲಾ ಆಯಿತು. ಶಾಸ್ತ್ರಕ್ಕೆಂಬಂತೆ ಹೊಸಮನೆಯಲ್ಲಿ ಹಾಲುಕ್ಕಿಸಿದ್ದೂ ಆಯಿತು. ಆದರೆ ಮಧ್ಯಾಹ್ನದ ಊಟದ ಸಮಯಕ್ಕೇ ನಿಜವಾದ ಸವಾಲು ಎದುರಾಗಿದ್ದು. ಇಬ್ಬರೂ ಅಡಿಗೆಕೋಣೆಗೆ ಬಂದು ಪರಸ್ಪರರ ಮುಖ ನೋಡಿಕೊಂಡಿದ್ದೇ ಆಯಿತು. “ನಂಗೆ ಆಮ್ಲೆಟ್ ಬಿಟ್ರೆ ಇನ್ನೇನೂ ಮಾಡಕ್ಕೆ ಬರಲ್ಲ'', ಎಂದು ಅವಳು ಹೇಳಿದಳು. “ನೂಡಲ್ಸ್ ಒಂದು ನಾನು ಮಾಡಬಲ್ಲೆ ಕಣೇ'', ಎಂದು ಅವನಂದ. ಆಮ್ಲೆಟ್ ತಿನ್ನೋಣ ಅಂದರೆ ಅವನಿಗೆ ಗುರುವಾರದ ರಾಘವೇಂದ್ರಸ್ವಾಮಿಯ ವ್ರತ. ನೂಡಲ್ಸ್ ತಿನ್ನೋಣ ಅಂದ್ರೆ ಅವಳಿಗೆ ಅದೊಂದು ಜಂಕ್-ಫುಡ್, ಡಯಟ್ ಹಾಳಾಗುತ್ತೆ ಅನ್ನೋ ಭಯ. ಅಂದಹಾಗೆ ಇಬ್ಬರೂ ಈವರೆಗೆ ತಿಂದ ತಟ್ಟೆಯನ್ನೂ ತಮ್ಮ ತಮ್ಮ ಮನೆಗಳಲ್ಲಿ ತೊಳೆದವರಲ್ಲ. ಇನ್ನೇನು ಮಾಡುವುದು ಎಂದು ಇಬ್ಬರೂ ಚರ್ಚಿಸಿದರು. ಕೊನೆಗೂ ಅವನು ಹೋಟೇಲೊಂದರ ನಂಬರನ್ನು ಎಲ್ಲಿಂದಲೋ ತೆಗೆದು ಡಯಲ್ ಮಾಡತೊಡಗಿದ: “ಆರ್ಡರ್ ಬರ್ಕೊಳ್ರಪ್ಪಾ… ಆರು ರೋಟಿ, ಜೀರಾ ರೈಸ್, ದಾಲ್ ಮಖ್ನೀ…'' 

************

“ಇರ್ರೆಸ್ಪಾನ್ಸಿಬಲ್ ಗಲರ್್… ಕುಡಿಯೋ ವಯಸ್ಸೇನೇ ಇದು? ನೆಟ್ಟಗೆ ಇಪ್ಪತ್ತೂ ಆಗಲಿಲ್ಲ ನಿನಗೆ. ಹೇಗಾಗಿದೆ ನೋಡು ನನ್ನ ಎಪ್ಪತ್ತು ಲಕ್ಷದ ಕಾರು'', ಅವರು ಕೂಗಾಡುತ್ತಲೇ ಇದ್ದರು. ತಂದೆಯ ಆರ್ಭಟವನ್ನು ಈ ಮಟ್ಟದಲ್ಲಿ ನಿರೀಕ್ಷಿಸಿರದಿದ್ದ ಅವಳ ರೋದನೆಯೂ ಮುಂದುವರಿದಿತ್ತು. ಸದ್ಯಕ್ಕಂತೂ ಅಪ್ಪ ನಾಳೆಯಿಂದ ಕಾರನ್ನೋಡಿಸಲು ಬಿಡುವುದಿಲ್ಲ ಎಂಬುದೇ ಅವಳ ದೊಡ್ಡ ದುಃಖವಾಗಿತ್ತು. ಮೊನ್ನೆ ರಾತ್ರಿ ಪಾಟರ್ಿಯೊಂದರಿಂದ ಮರಳಿಬರುತ್ತಿದ್ದ ಅವಳು ಅದೆಷ್ಟು ಕುಡಿದಿದ್ದಳೆಂದರೆ ಕಾರು ನಿಯಂತ್ರಣವನ್ನೇ ತಪ್ಪಿ ಬಾಲಕನೊಬ್ಬನ ಮೇಲೆ ಹಾದು ಮರವೊಂದಕ್ಕೆ ಅಪ್ಪಳಿಸಿತ್ತು. ಎಪ್ಪತ್ತು ಲಕ್ಷದ ಐಷಾರಾಮಿ ಕಾರು ನಿಮಿಷಮಾತ್ರದೊಳಗೆ ಜುಜುಬಿ ಪ್ಲಾಸ್ಟಿಕ್ ಡಬ್ಬದಂತೆ ನಜ್ಜುಗುಜ್ಜಾಗಿತ್ತು. ಅವಳಿಗೋ ಕಾರು ಕೈತಪ್ಪಿಹೋದ ದುಃಖ. ತಂದೆಗೋ ಮಗಳು ಹಾದಿತಪ್ಪುತ್ತಿರುವ ಚಿಂತೆ. ಅಷ್ಟಕ್ಕೂ ಇವೆಲ್ಲದಕ್ಕೂ ಮುಗಿಲಾದ ದುಃಖವನ್ನು ಸರಕಾರಿ ಆಸ್ಪತ್ರೆಯ ವಾಡರ್ೊಂದರಲ್ಲಿ ಮಲಗಿದ್ದ ಬಾಲಕನೊಬ್ಬನು ಅನುಭವಿಸುತ್ತಿದ್ದ. ಅಪಘಾತದ ಪರಿಣಾಮವಾಗಿ ಅವನ ಎರಡೂ ಕಾಲುಗಳನ್ನು ಕತ್ತರಿಸಲಾಗಿತ್ತು. ನಾಳೆಯಿಂದ ತಾನು ನಡೆಯಲಾರೆನೆಂಬ ಕಟುಸತ್ಯವನ್ನು ಅರಗಿಸಿಕೊಳ್ಳಲು ಆ ಮುಗ್ಧಬಾಲಕ ಇನ್ನೂ ಹರಸಾಹಸಪಡುತ್ತಲೇ ಇದ್ದ. 

************

ಹತ್ತು ವರ್ಷಗಳ ನಂತರ ಅವರಿಬ್ಬರೂ ಮತ್ತೆ ಭೇಟಿಯಾಗಿದ್ದರು. ಹಳೇ ಸ್ನೇಹಿತರು. ಈಗ ಅವನೊಬ್ಬ ದೊಡ್ಡ ಲೇಖಕ. ಅವಳೋ ಶ್ರೀಮಂತ ಮನೆತನವೊಂದರ ಸೊಸೆ. “ನಿನ್ನಲ್ಲೊಬ್ಬ ಬರಹಗಾರನೂ ಇದ್ದ ಎಂದು ನನಗೆ ಗೊತ್ತೇ ಇರಲಿಲ್ಲ'', ಎಂದಳವಳು. “ನಿನಗೆ ಗೊತ್ತಿಲ್ಲದ್ದು ಬೇಕಾದಷ್ಟಿದೆ'', ಎಂದು ಆಕಾಶ ನೋಡುತ್ತಾ ಅವನಂದ. “ಅಂಥದ್ದೇನಿದೆ?'', ಎಂದು ಅವಳು ಕಣ್ಣರಳಿಸಿದಳು. “ನೀನು ನನ್ನ ಜೀವನದಿಂದ ಸುಮ್ಮನೆ ಎದ್ದುಹೋದೆಯಲ್ಲಾ, ದನಿಯಾಗದ ಭಾವಗಳೆಲ್ಲಾ ಕವಿತೆಗಳಾದವು ನೋಡು'', ಎಂದ ಅವನು. ಈ ಮಾತು ಅವಳಿಗೆ ತೀರಾ ಅನಿರೀಕ್ಷಿತ. `ಯಾವತ್ತೂ ಹೇಳಲೇ ಇಲ್ಲ ನೀನು?' ಎಂದು ಕೇಳಬಯಸಿದರೂ ಕೇಳಲಾಗದೆ ಸುಮ್ಮನಾದಳು. ಅವನೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ಕೊನೆಗೂ ಅವಳೇ ಮೌನವನ್ನು ಮುರಿಯಬೇಕಾಯಿತು. “ಹಾಗಿದ್ದರೆ ನಾವಿಬ್ಬರು ಈಗ ಸ್ನೇಹಿತರೇ, ಪ್ರೇಮಿಗಳೇ, ಮಾಜಿಪ್ರೇಮಿಗಳೇ?'', ಎಂದು ಕೇಳಿದಳು ಅವಳು. “ಸಂಬಂಧಕ್ಕೆ ಹೆಸರಿನ ಹಂಗೇಕೆ? ಗಾಳಿಯಂತಿರೋಣ. ಇದ್ದರೂ ಇಲ್ಲದಿದ್ದಂತೆ, ಇಲ್ಲದಿದ್ದರೂ ಇದ್ದಂತೆ'', ಎಂದ ಅವನು. ಆ ಮಾತನ್ನು ಕೇಳಿದ್ದರೆ ಗಾಳಿಯೂ ತಲೆದೂಗುತ್ತಿತ್ತೋ ಏನೋ. 

*************  
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Suresh Banakar
Suresh Banakar
7 years ago

ಕತೆಗಳು ತುಂಬಾ ಚೆನ್ನಾಗಿವೆ. ಸುಲಭವಾಗಿ ಓಡಿಸಿಕೊಂಡು ಹೋಗುತ್ತವೆ. ನಿಮ್ಮ ಆ ಒಂದು ಕೊನೆಯ ಸಾಲು ತುಂಬಾ ಇಷ್ಟವಾಯಿತು. "ಗಾಳಿಯಂತಿರೋಣ. ಇದ್ದರೂ ಇಲ್ಲದಿದ್ದಂತೆ, ಇಲ್ಲದಿದ್ದರೂ ಇದ್ದಂತೆ'', ಎಂದ ಅವನು. ಆ ಮಾತನ್ನು ಕೇಳಿದ್ದರೆ ಗಾಳಿಯೂ ತಲೆದೂಗುತ್ತಿತ್ತೋ ಏನೋ."

Prasad
Prasad
7 years ago
Reply to  Suresh Banakar

ಓದಿ ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದಗಳು ಸುರೇಶ್ ರವರೇ… 

2
0
Would love your thoughts, please comment.x
()
x