ಹಿಮಾಲಯವೆಂಬ ಸ್ವರ್ಗ (ಭಾಗ 3): ವೃಂದಾ ಸಂಗಮ್

vranda-sangam

ಇದುವರೆಗೂ ಶಿವನೇ ನಮಗೆ ಕಣ್ಮಾಯ ಮಾಡಿದ್ದನೋ ತಿಳಿಯದು. ಅಲ್ಲಿಯೇ ಸೈಕಲ್ ರಿಕ್ಷಾದಲ್ಲಿ ನಮ್ಮಿಂದ ತಪ್ಪಿಸಿಕೊಂಡ ಅವರೆಲ್ಲರೂ ಕೂಡ ಇದೇ ರೀತಿ ಕಾಯ್ದು ಹುಡುಕಿ, ಇದಿಷ್ಟೂ ಪೂಜೆ ಮುಗಿಸಿಕೊಂಡ ನಿಂತಿದ್ದಾರೆ. ಸರಿ ಎಲ್ಲರೂ ಒಂದಾಗಿ ಕೃಷ್ಣ ಮಠಕ್ಕೆ ಹಿಂದಿರುಗಿದೆವು. ಅಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವವ ಚಿಕ್ಕ ವಯಸ್ಸಿನ ಹುಡುಗ. ವೇದವ್ಯಾಸ, ಅನಂತಪುರ ಜಿಲ್ಲೆಯವನಂತೆ. ನೋಡಲು ಉಡುಪಿ ಮಠದವರಂತೆಯೇ ಇದ್ದ. ತಮಾಷೆಯಾಗಿ ಮಾತಾಡುತ್ತಿದ್ದ. ತೆಲಗು ಕನ್ನಡ ಎರಡೂ ಗೊತ್ತಿತ್ತು. ಅವನು ಬನಾರಸ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಕೊಳಲು ವಿದ್ವತ್ ಕಲಿಯುತ್ತಿದ್ದಾನಂತೆ. ಕೃಷ್ಣ ರವರೂ ಕೊಳಲು ನುಡಿಸುತ್ತಾರೆ ಎಂದೊಡನೆ ತನ್ನ ಕೊಳಲುಗಳ ಚೀಲವನ್ನೇ ಎತ್ತಿಕೊಂಡು ಬಂದ. ಅದರ ಲಾಭ ನಮಗೆ ಯಮನ್ ರಾಗದ ಆಲಾಪ ಜುಗಲ್ಬಂದಿಯಲ್ಲಿ.  ಊಟ ವಿಶ್ರಾಂತಿಯ ನಂತರ ದೋಣಿಯಲ್ಲಿ ವಿಹಾರ ಹೊರಟೆವು.

‘ಗಂಗೆಯಾ ದಡದಲಿ ಹೃದಯದಾ ಸಂಗಮ’ ಎಂದು ಎರಡು ರೇಖೆಗಳು ಸಿನಿಮಾದಲ್ಲಿ ಶ್ರೀನಾಥ ಸರಿತಾ ಯಾವ ಮೆಟ್ಟಿಲುಗಳ ಮೇಲೆ ಎಲ್ಲಿ ಕೂತು ಹಾಡಿದ್ದಾರೋ ಗೊತ್ತಿಲ್ಲ. ಆದರೆ ಗಂಗೆಯ ದಡದ ಗುಂಟ ಮೆಟ್ಟಿಲುಗಳಿವೆ. ಅವೇ ಸ್ನಾನ ಘಟ್ಟಗಳು ಅಂದರೆ ಘಾಟ್. ಕಾಶಿಯಲ್ಲಿ 365 ಕ್ಕೂ ಹೆಚ್ಚು ಘಟ್ಟಗಳಿವೆಯಂತೆ. ದಿನಕ್ಕೊಂದು ಘಟ್ಟದಲ್ಲಿ ಸ್ನಾನ ಮಾಡಿದರೂ ಒಂದು ವರ್ಷಕಾಲ ಕಾಶಿಯಲ್ಲಿರಬೇಕು. ಮಣಿಕರ್ಣಿಕಾ ಘಾಟ್, ಪಂಚಗಂಗಾ ಘಾಟ್, ದಶಾಶ್ವಮೇಧ ಘಾಟ್, ಹರಿಶ್ಚಂದ್ರ ಘಾಟ್, ಅಸ್ಸಿ ಘಾಟ್,

ಸಿಂಧಿಯಾ ಘಾಟ್, ಭೋನ್ಸಲೆ ಘಾಟ್. ಹೀಗೆ ಹಲವು ಸ್ನಾನ ಘಟ್ಟಗಳಿವೆ. ದಶಾಶ್ವಮೇಧ ಘಾಟ್ ನಲ್ಲಿ ಬ್ರಹ್ಮದೇವರು ಹತ್ತು ಅಶ್ವಮೇಧ ಯಾಗಗಳನ್ನು ಮಾಡಿದರು.  ಅಸ್ಸಿ ಘಾಟ್ ನಲ್ಲಿ ಗೋಸ್ವಾಮಿ ತುಳಸಿದಾಸರು ದೇಹತ್ಯಾಗ ಮಾಡಿದರು. ಎನ್ನುತ್ತಾರೆ. ನಾವು ದೋಣಿ ವಿಹಾರದೊಂದಿಗೆ ಸಾಧ್ಯವಾದಷ್ಟೂ ಘಾಟ್ ಗಳ ದರ್ಶನ ಮಾಡಿದೆವು. ಶ್ರೀವಿಷ್ಣುವು ಸುದರ್ಶನ ಚಕ್ರದಿಂದ ಒಂದು ಗುಂಡಿ ತೆಗೆದನಂತೆ. ಆ ಗುಂಡಿಯು ಶಿವನ ತಪಸ್ಸಿನಿಂದ ಉದ್ಭವವಾದ ಬೆವರಿನಿಂದ ತುಂಬ ಹತ್ತಿತಂತೆ. ಶಿವನು ತನ್ನ ತಲೆಯಲ್ಲಾಡಿಸಿದಾಗ ಅವನ ಮಣಿಯುಕ್ತ ಕುಂಡಲವು ಆ ಗುಂಡಿಯೊಳಗೆ ಬಿದ್ದಿತಂತೆ. ಆದ್ದರಿಂದಲೇ ಮಣಿಕರ್ಣಿಕಾ ಎಂದು ಹೆಸರು. ಮಣಿಕರ್ಣಿಕಾ ಘಟ್ಟದಲ್ಲಿ ಮರಣ ಹೊಂದಿ ಅಲ್ಲಿ ದಹನವಾದರೆ ಮುಕ್ತಿ ಪಡೆದು ನೇರ ಸ್ವರ್ಗಕ್ಕೆ ಹೋಗುತ್ತಾರಂತೆ. ಕಾಶಿಯಲ್ಲಿ ದಹನ ಸಂಸ್ಕಾರಗಳ ಬಹಳಷ್ಟು ವಿದ್ಯಮಾನಗಳಿದ್ದರೂ ನನ್ನ ಸಾಂಪ್ರದಾಯಿಕ ಹಾಗು ಧಾರ್ಮಿಕ ನಂಬಿಕೆಗಳ ಕಾರಣ ನಾನು ಇವು ಯಾವುದರ ಬಗ್ಗೆ ತಿಳಿಯಲು ಯತ್ನಿಸಲಿಲ್ಲ.

 ದೋಣಿಯಿಂದ ಒಂದು ಘಟ್ಟದಲ್ಲಿ ಇಳಿದು ಸಣ್ಣ ಓಣಿಗಳನ್ನು ಹಿಡಿದು ಹೊರಟೆವು. ಉದ್ದಕ್ಕೂ ಏರಿನ ರಸ್ತೆಯಿತ್ತು. ಮೊದಲು ನಾವು ಹೋದದ್ದು ಕಾಲಭೈರವನ ಗುಡಿಗೆ. ಇದೊಂದು ತಾಂತ್ರಿಕ ಸಂಪ್ರದಾಯದ ಕಾಲಭೈರವನ ಮೂರ್ತಿಯುಳ್ಳ ಗುಡಿ.   ಅಲ್ಲಿಯೇ ಒಂದು ಘಾಟ್ ನಿಂದ ನಮ್ಮನ್ನು ವಿಶ್ವನಾಥನ ದರ್ಶಕ್ಕೆ ಕರೆದು ಕೊಂಡು ಹೋದರು. ಕಾಶಿಯಲ್ಲಿಯೇ ಅಷ್ಟು ವರ್ಷವಿದ್ದ ಶಶಿಕಲಾ ಅವರಿಗೂ ಬೆಳಿಗ್ಗೆ ನಮ್ಮನ್ನು ಹುಡುಕುವುದು ಸಾಧ್ಯವಾಗದೇ ಅವರು ಬೇಜಾರಿನಿಂದ, ಮನಸ್ಸಿನಲ್ಲಿಯೇ ದೇವರಿಗೆ ನಾನು ಇಷ್ಟು ವರ್ಷ ನಿನ್ನನ್ನು ಆರಾಧಿಸಿದ್ದಕ್ಕೆ ಸರಿಯಾದ ಪ್ರತಿಫಲ ನೀಡಿದ್ದೀ ಬಿಡು. ಎಂದು, ನೀನೇ ನಮ್ಮನ್ನು ಒಟ್ಟಾಗಿ ದರ್ಶನ ಮಾಡಿಸಿದಲ್ಲಿ ನಮಗೂ ತೃಪ್ತಿ, ನಿನ್ನ ಅಸ್ತಿತ್ವಕ್ಕೂ ಒಂದು ಬೆಲೆ, ಎಂದು ಕೊಂಡಿದ್ದರಂತೆ. ಈಗ ತಮ್ಮಾಸೆ ಈಡೇರಿದ ಸಮಾಧಾನದಲ್ಲಿ, ಅವರೂ ತುಂಬಾ ಖುಷಿಯಿಂದ ದರ್ಶನಕ್ಕೆ ಬಂದರು.

ಈಗ ನಿಜವಾಗಲೂ ವಿಶ್ವನಾಥನ ಸಂಪೂರ್ಣ ಗುಡಿ ನೋಡಿದಂತಾಯಿತು. ಈಗ ಅಲ್ಲಿದ್ದುದು ಮೂಲ ಲಿಂಗವಲ್ಲ. ಎಲ್ಲಾ ದೇವಾಲಯಗಳಂತೆಯೇ ಇದೂ ಕೂಡಾ, ಮುಸಲ್ಮಾನರ ದಾಳಿಗೊಳಗಾದಾಗ ಮೂಲ ಲಿಂಗವನ್ನು ಬಾವಿಯಲ್ಲಿ ಹಾಕಿದ್ದಾರಂತೆ. ಪಕ್ಕದಲ್ಲೇ ಬಾವಿಯೂ ಇದೆ.  ಅದನ್ನು ಕೂಡಾ ಅರ್ಧ ಮುಚ್ಚಿದ್ದಾರೆ. ದೇವಾಲಯದ ಗೋಡೆಯ ಹಿಂಬದಿಗೇ ಮಸೀದಿ ಕಟ್ಟಿದ್ದಾರೆ. ದೇವಾಲಯಕ್ಕೆ ತುಂಬಾ ಭದ್ರತೆಯಿದೆ. ದೇವಸ್ಥಾನದ ಯಾವುದೋ ಬಾಗಿಲಿಂದ ಹೊರಟರೆ ಇನ್ಯಾವುದೋ ಗಲ್ಲಿಗೆ ಹೋಗಿ ಸೇರಿಕೊಳ್ಳುತ್ತೇವೆ. ಹೊಸಬರಿಗೆ ಏನು ಮಾಡಿದರೂ ಎಷ್ಟು ಸುತ್ತಾಡಿದರೂ ಈ ಚಕ್ರವ್ಯೂಹ ಬೇಧಿಸಲು ತಿಳಿಯುವುದಿಲ್ಲ. ಬೆಳಿಗ್ಗೆ ನಮಗಾದದ್ದೂ ಹೀಗೇ. ಹೆಚ್ಚು ಕಡಿಮೆ ಪ್ರತಿಯೊಂದು ಗಲ್ಲಿಯಲ್ಲಿಯೂ IIಖಿ ಕೋಚಿಂಗ್ ಕ್ಲಾಸ್ ಗಳಿವೆ. ಈ ದಾರಿ ಅರಿಯಲು IIಖಿ ಬುದ್ಧಿವಂತಿಕೆಯೇ ಬೇಕೇನೋ. ನಾವು ಅಲ್ಲಿ ಹಿತ್ತಾಳೆ ಸಾಮಾನುಗಳನ್ನು ತುಂಬಾ ಖರೀದಿಸಿದೆವು. ನಂತರ ಬಿಂದು ಮಾಧವನ ಘಟ್ಟಕ್ಕೆ ಹೋಗೋಣ ತಾರೇ ಬಿಂದಿಗೆಯಾ ಎನ್ನುತ್ತ ಮಾಧವನ ದರ್ಶನ ಪಡೆದೆವು. ಸಂಜೆ ಸುಮಾರು 6.30 ಗಂಟೆಗೆ ಸರಿಯಾಗಿ ಗಂಗಾನದಿಯ ದಡದ ಸಮೀಪ ಗಂಗಾ ಸೇವಾ ಸಮಿತಿಯ ವತಿಯಿಂದ ಗಂಗಾ ನದಿಗೆ ಆರತಿ ಮಾಡುವರು, ಅದನ್ನು ನೋಡಲು ಎರಡು ಕಣ್ಣುಗಳು ಸಾಲದು. ತುಂಬಾ ಜನ ಆ ಆರತಿ ನೋಡಲು ದೇಶ ವಿದೇಶಗಳಿಂದಲೂ ಜನ ಬಂದಿದ್ದರು. ಆದರೆ ಹರಿದ್ವಾರದ ಗಂಗಾ ಮಂದಿರದ ಆರತಿ ತುಂಬಾ ಪ್ರಸಿದ್ಧ. ಅದರೊಂದಿಗೆ ನಾವು ಅಲಹಾಬಾದ್ ನ ತ್ರಿವೇಣಿ ಸಂಗಮದಲ್ಲಿನ ಆರತಿಯನ್ನೂ ನೋಡಿದೆವು. ಆ ದೋಣಿ ವಿಹಾರದಲ್ಲಿ ನನ್ನ ಅಂಗಡಿಯ ಬೇಸಿನ್ ಲಾಡು ಕರದವಲಕ್ಕಿ ಎರಡೂ ಚನ್ನಾಗಿ ವ್ಯಾಪಾರವಾದವು. ನಮ್ಮ ಗುಂಪಿನಲ್ಲಿ ಗಾಯಕರಾರೂ ಇರಲಿಲ್ಲ. ಸಂಜೆಯ ಶಾಂತ ನದಿಯ ಗುಂಟ ದೋಣಿ ವಿಹಾರದ ಸುಖ ಹೆಚ್ಚಿಸಲು. ನಮಗೇನೋ ಕಳೆದುಕೊಂಡಂತೆ. ದೋಣಿಯಾಟದ ಪೂರ್ಣ ಸುಖ ಸಿಗಲಿಲ್ಲ.

ಒಮ್ಮೆ ಪ್ರವಾಸದ ಪ್ಯಾಕೇಜ್ ಫಿಕ್ಸ್ ಆದಮೇಲೆ ಅದರಂತೆ ನಾವೂ ಕೂಡ ನಡೆದುಕೊಳ್ಳಬೇಕಷ್ಟೆ. ಆದಾಗ್ಯೂ ಒಂದು ಹತ್ತು ಪರ್ಸೆಂಟ್ ಅತ್ತ ಇತ್ತ ಆಗಬಹುದು ಎಂದು ಒಳಮನಸ್ಸಿಗೊಂದಿಷ್ಟು ಮೊದಲೇ ಹೇಳಿಕೊಂಡಿರಬೇಕು. ಉದಾಹರಣೆಗೆ ಟ್ರಾಫಿಕ್ ಜಾಮ್ ಸಮಸ್ಯೆ…. ಕೆಲವೊಮ್ಮೆ ನಾವೇ ಅದನ್ನು ಇದನ್ನು ತಿನ್ನುತ್ತ, ಮೆಚ್ಚುಗೆಯಾದ ಮಾನುಮೆಂಟ್ಸ್ ಗಳನ್ನೋ ಇನ್ನಾವುದನ್ನೋ ತುಸು ಹೆಚ್ಚು ಸಮಯ ತೆಗೆದುಕೊಂಡು ಮೈಮರೆತು ನೋಡುತ್ತಲೋ…. ಇನ್ನೇನನ್ನೋ ಖರೀದಿಸುತ್ತಲೋ… ಸಮಯವನ್ನು ತಿಂದುಬಿಡುತ್ತೇವೆ. ಅದು ನಮ್ಮ ಅರಿವಿಗೆ ಬಂದಾಗ ತುಂಬಾ ಲೇಟ್ ಆಗಿಬಿಟ್ಟಿರುತ್ತದೆ. …ಹೀಗಾಗಿ ಮೊದಲೇ ಮನಸ್ಸಿಗೆ ಇದನ್ನು ಹೇಳಿಕೊಂಡುಬಿಟ್ಟರೆ, ವೃಥಾ ವಾಗ್ವಾದಗಳು.. ಲೊಚಗುಟ್ಟುಗಳು.. ತಲೆಬಿಸಿಗಳು ತಪ್ಪುತ್ತವೆ…,…ಇದನ್ನೊಮ್ಮೆ ಅಭ್ಯಾಸ ಮಾಡಿಕೊಂಡರೆ ಉಳಿದದ್ದೆಲ್ಲ ಗೌಣ. ಪ್ರವಾಸವನ್ನು ಹೆಚ್ಚು ಹೆಚ್ಚು ಆನಂದಿಸುತ್ತ ಸಾಗಬಹುದು….ನಮ್ಮ ಪ್ರವಾಸದ ಪಟ್ಟಿಯಂತೆ ನಾವು ಆ ದಿನ ನಾಲ್ಕು ಗಂಟೆಗೆ ಗಯಾಕ್ಕೆ ಟ್ರೇನ್ ನಲ್ಲಿ ಹೊರಡ ಬೇಕಾಗಿತ್ತು. ನಾವು ಎಷ್ಟೇ ಪ್ಲ್ಯಾನ್ ಮಾಡಿದ್ದರೂ ಅದೇ ಹೇಳಿದ್ದೇನಲ್ಲ, ಹತ್ತು ಪರ್ಸೆಂಟ್ ಅತ್ತಿತ್ತ. ಕೃಷ್ಣ ಮಠದಲ್ಲಿ ವಿವರಿಸಿದಂತೆ, ನಾವು ನಮ್ಮ ಟ್ರೇನ್ ಟಿಕೇಟ್ ಕ್ಯಾನ್ಸಲ್ ಮಾಡಿಸಿ, ರಾತ್ರಿ ಎರಡು ಗಂಟೆಗೆ ಸ್ವಂತ ವೆಹಿಕಲ್ ನಲ್ಲಿ ಗಯಾಕ್ಕೆ ಹೊರಟೆವು.  

ಕಾಶಿಯ ರಾಜುವಿನ ರಥದಂತೆಯೇ ಇದೂ ಕೂಡಾ. ನಮ್ಮ ಡ್ರೈವರ್ ರಾತ್ರಿವರೆಗೂ ಗಾಡಿ ಓಡಿಸಿದ್ದನಂತೆ, ತೂಕಡಿಸುತ್ತಿದ್ದ. ಮುಖ್ಯ ರಸ್ತೆಯ ಪ್ರಾರಂಭದಲ್ಲಿಯೇ ಸೈಕಲ್ ರಿಕ್ಷಾವೊಂದಕ್ಕೆ ಧಡ್ ಎಂದು ಹೊಡೆದು, ವೇಗವಾಗಿ ಓಡಿಸಿಬಿಟ್ಟ. ಹಿಂದೆ ಕುಳಿತಿದ್ದ ನಮಗೆ ಮೇಲೆ ಹಾಕಿದ್ದ ಯಾವುದೋ ಸೂಟಕೇಸ್ ಬಿತ್ತೆಂದು ತಿಳಿದು ಕೂಗತೊಡಗಿದೆವು. ತುಂಬಾ ಮುಂದೆ ಬಂದ ಮೇಲೆ ನಡೆದ ವಿಷಯ ತಿಳಿಸಿದ. ನಮಗೋ ನಿದ್ರೆಯ ಭರದಲ್ಲಿ ಇನ್ನೇನಾದರೂ ಮಾಡಿಯಾನೆಂದು ಭಯ. ಅವನನ್ನು ಎಚ್ಚರವಿರಿಸಲು ಮಾತನಾಡಿಸಿದರೆ ಮಾತನಾಡಲೊಲ್ಲ. ಬಾಯಿ ತುಂಬಾ ಗುಟಕಾ ತುಂಬಿದೆ. ಹೇಗೆ ಮಾತನಾಡುತ್ತಾನೆ.  ಕೃಷ್ಣರವರು ಮೊಬೈಲ್ ನಲ್ಲಿ ಕೊಳಲು ವಾದನ ಹಾಕಿದರೆ ಇದೇನು ಕೇಳಲು ಚನ್ನಾಗಿಲ್ಲ ಆರಿಸಿ ಎಂದ. ಮುಂದೆ ಚಹಾ ಕುಡಿದು ಸ್ವಲ್ಪ ನಿಚ್ಚಳಾದ.  ಅಂತೂ ಇಂತೂ ನಮ್ಮನ್ನು ಗಯಾದ ವಿಷ್ಣು ಪಾದ ಮಾರ್ಗದ ಮಂತ್ರಾಲಯ ರಾಮಾಚಾರ್ಯರ ಮನೆಗೆ ಮುಟ್ಟಿಸಿದ. ಮಂತ್ರಾಲಯ ರಾಮಾಚಾರ್ಯರು ನಮಗೆಲ್ಲ ತಮ್ಮ ಮನೆಯ ಪಕ್ಕದಲ್ಲೇ ದೊಡ್ಡ ಎಸಿ ಹೊಟೇಲಿನಲ್ಲಿ 3 ರೂಮುಗಳನ್ನು ಬುಕ್ ಮಾಡಿದ್ದರು. 3 ನೇ ಮಹಡಿ. ನಮ್ಮ ಲಗೇಜ್ ಗಳನ್ನು ಅಲ್ಲಿಗೆ ಸಾಗಿಸಲು ಹಾಗೂ ಕೆಳಗಿಡಿಸಲು ರೂಂ ಬಾಯ್ ಅಕ್ಷರಶಃ ಅತ್ತು ಬಿಟ್ಟ. ನಾವೂ ಅವನಿಗೆ ಸಹಾಯ ಮಾಡಿದೆವು. ಕೈ ತುಂಬಾ ದುಡ್ಡೂ ಕೊಟ್ಟೆವು. ಗಂಡಸರೆಲ್ಲ ಧಾರ್ಮಿಕ ವಿಧಿಗೆ ಹೋದರು. ಮಂತ್ರಾಲಯ ರಾಮಾಚಾರ್ಯರು ದೊಡ್ಡ ವಿದ್ವಾಂಸರು. ಮುಂದೆ ಮಂತ್ರಾಲಯದ ಮಠದಲ್ಲಿ ಪೀಠಾಧಿಪತಿಯಾಗುವವರಂತೆ. (ಇದನ್ನು ಅವರೇ ಹೇಳಿದರು) ಪ್ರಸ್ತುತ ರಾಜಕೀಯದ ವಿಷಯ ಮಾತಾಡುತ್ತ ಎಲ್ಲಾ ಧಾರ್ಮಿಕ ವಿಧಿಗಳನ್ನೂ ಮಾಡಿಸಿದರು. ತಮ್ಮ ಸಹಾಯಕನಿಗೆ ಪಿಂಡ ಪ್ರದಾನ ಮಾಡಿಸಲು ಕಳಿಸಿದರು. ಅವರೊಂದಿಗೆ ನಾವೂ ಹೊರಟೆವು ವಿಷ್ಣುಪಾದ ದೇವಸ್ಥಾನಕ್ಕೆ. ಗಯೇಯಂ ಗಯೇಯಂ ಗಯೇಯಂ ಎಂದುಕೊಳ್ಳುತ್ತಾ.

ಇಲ್ಲಿ ಸಿಕ್ಕಿರುವ ಟೆರ್ರಕೋಟ ಈ ದೇವಾಲಯವನ್ನು ಸುಮಾರು ಕ್ರಿ.ಶ. ೪-೫ನೇ ಶತಮಾನದಷ್ಟು ಹಿಂದಿನದೆಂದು ಹೇಳುತ್ತದೆ. ಇದು ಕನಿಷ್ಠ ಎರಡು ಬಾರಿ ಧ್ವಂಸಮಾಡಲಾಗಿರುವ ಸಂಕೇತಗಳು ಕಂಡುಬಂದಿವೆ. ಈಗಿರುವ ದೇವಾಲಯವು ೧೭೮೩ರಲ್ಲಿ ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ (ಈಕೆಯಂತು ಎಲ್ಲೆಡೆ ದೇವಾಲಯಗಳನ್ನು ನಿರ್ಮಿಸಿದಂತೆ ಕಾಣುತ್ತದೆ!) ಕಟ್ಟಿಸಿದಳಂತೆ. ಈ ದೇವಾಲಯದಲ್ಲಿ ಧರ್ಮಶಿಲೆಯೆಂಬ ಬಂಡೆಯ ಮೇಲಿರುವ, ಸುಮಾರು ೪೦ ಇಂಚು ಉದ್ದದ ಶ್ರೀಮನ್ನಾರಾಯಣನ ಪಾದದ ಗುರುತನ್ನು ಪೂಜಿಸಲಾಗುವುದು. ಈ ಶಿಲೆಯು ಒಂದು ಬೆಳ್ಳಿಯ ಕಟಕಟ್ಟೆಯಲ್ಲಿದೆ. ದೇವಾಲಯವು ಗುಪ್ತಗಾಮಿನಿಯಾದ ಫಾಲ್ಗು ನದಿ ತೀರದಲ್ಲಿದ್ದು, ಇದರ ಅಷ್ಟಕೋನದ, ಬೆಳ್ಳಿಯ ತಗಡು ಹೊದಿಸಿದ, ೩೦ ಅಡಿ ಎತ್ತರದ ಗೋಪುರವು ಕಲ್ಲಿನ ಕಂಬಗಳ ಮೇಲೆ ನಿಂತಿದೆ. ದೇವಾಲಯವು ಪೂರ್ವಮುಖಿಯಾಗಿದೆ, ಹಾಗು ಅಷ್ಟಕೋನಾಕಾರದಲ್ಲಿದೆ. ಶಿಖರದ ಮೇಲೆ ತಾವರೆ ಹೂವಿನಾಕಾರ ಹಾಗು ಚಿನ್ನದ ಕಲಶವಿದೆ. ದೇವಾಲಯದ ಮುಂಭಾಗದಲ್ಲಿ ಒಂದು ಎರಡು ಅಂತಸ್ತಿನ ಸಭಾಮಂಟಪವಿದೆ, ಹಾಗು ಇದರ ಮೇಲೆ ಒಂದು ಗೋಳವಿದೆ (ಡೋಮ್). ಸೂಕ್ಷ್ಮ ಕೆತ್ತನೆಯುಳ್ಳ 42 ಕಂಬಗಳು ಈ ಗೋಳವನ್ನು ಎತ್ತಿ ಹಿಡಿದಿವೆ. ಪಕ್ಕದಲ್ಲಿ ಲಕ್ಷ್ಮಿ ಹಾಗು ಶಿವನ ಗುಡಿಗಳಿವೆ. ಪ್ರಾಚೀನ ಕಾಲದ (11 ನೇ ಶತಮಾನ) ಗದಾಧರ, ನೃಸಿಂಹ, ಗಯೇಶ್ವರಿಯರ ಗುಡಿಗಳು ಇನ್ನು ಉಳಿದಿವೆ. ಧರ್ಮನ ಮಗಳಾದ ಧರ್ಮವತಿಯು ತನ್ನ ಪತಿಯಾದ ಮರೀಚಿಯನ್ನು ಸೇವಿಸುತ್ತಿದ್ದಾಗ ಬ್ರಹ್ಮ ದೇವರು ಆಗಮಿಸುತ್ತಾರೆ. ಅವರನ್ನು ಸ್ವಾಗತಿಸಲು ಧರ್ಮವತಿಯು ಹೋದಾಗ, ಮರೀಚಿಯು ಕೋಪಗೊಂಡು, ಅವಳನ್ನು ಕಲ್ಲಾಗುವಂತೆ ಶಪಿಸುತ್ತಾನೆ. ಆಗ   ಧರ್ಮವತಿಯು   ಉಗ್ರ ತಪಸ್ಸನ್ನು ಆಚರಿಸುತ್ತಲೇ.  ಶ್ರೀಮನ್ನಾರಾಯಣನು ಅವಳ ಶಿಲೆಯ ಮೇಲೆ ದೇವ ಸಾನ್ನಿಧ್ಯವಿರುವ ವರವನ್ನು ಕೊಡುತ್ತಾನೆ. ಇದೇ ಸಂದರ್ಭದಲ್ಲಿ ಗಯಾಸುರನೆಂಬ ರಾಕ್ಷಸನಿದ್ದ. ಈ ರಾಕ್ಷಸರು ಪೆದ್ದರಲ್ಲ. ಅಜ್ಞಾನಿಗಳಲ್ಲ. ತಮಗಿದ್ದ ಅಪಾರ ಶಕ್ತಿಯನ್ನು, ಜ್ಞಾನವನ್ನು ಸಮಾಜ ಉಪಯೋಗಿ ಕೆಲಸಗಳಿಗೆ ಬಳಸದೇ ವಿನಾಶಕ್ಕಾಗಿ, ಸ್ವಾರ್ಥಕ್ಕಾಗಿ ಬಳಸಿದ್ದರಿಂದ ಅವರನ್ನು ರಾಕ್ಷಸರೆಂದು ಕರೆದರು. ಇಂದಿಗೂ ಅಂಥವರು ಅನೇಕರಿಲ್ಲವೇ?

ಈ ಗಯಾಸುರ ಒಮ್ಮೆ ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿದ. ಅವನ ತಪಸ್ಸಿನ ಶಕ್ತಿಯನ್ನು ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾದ. ಗಯಾಸುರನ ಯಾವುದೇ ಕೋರಿಕೆಯನ್ನು ಈಡೇರಿಸುವುದಾಗಿ ವಚನವನ್ನಿತ್ತ. ಈತ ಮೊದಲೇ ರಾಕ್ಷಸ. ಈಗ ತನ್ನ ತಪಸ್ಸಿನ ಶಕ್ತಿಯ ಬಗ್ಗೆ ಅಹಂಕಾರ ಬಂತು. ತಾನು ಮನಸ್ಸು ಮಾಡಿದರೆ ಸೃಷ್ಟಿಕರ್ತನಾದ ಬ್ರಹ್ಮನನ್ನೇ ಕರೆಸಬಲ್ಲೆ ಎಂಬ ಸೊಕ್ಕಿನಿಂದ ಹೇಳಿದ, ‘ಬ್ರಹ್ಮ, ಸಣ್ಣ ಪುಟ್ಟ ಜನರು ನಿನ್ನನ್ನು ಓಲೈಸಿ, ಮೆಚ್ಚಿಸಿ ನಿನ್ನಿಂದ ಕೆಲವು ವರಗಳನ್ನು ಪಡೆದು ಧನ್ಯರಾದೆವೆಂದು ಭಾವಿಸುತ್ತಾರೆ. ಆದರೆ ನಾನು ಸಣ್ಣವನಲ್ಲ. ನೋಡು, ನಿನ್ನನ್ನು ಹೇಗೆ ಬರುವಂತೆ ಮಾಡಿದೆ? ಈಗ ನಾನು ನಿನ್ನನ್ನು ಏನೂ ಬೇಡುವುದಿಲ್ಲ. ಅದರ ಬದಲಾಗಿ ನಿನಗೆ ಏನು ಬೇಕೋ ಕೇಳಿಕೋ, ನಾನೇ ವರ ಕೊಡುತ್ತೇನೆ.’ ಅವನ ಮಾತಿನಲ್ಲಿ ಅಹಂಕಾರದ ಕೊಳೆ ಸೋರುತ್ತಿತ್ತು. ಬ್ರಹ್ಮ ಗಮನಿಸಿದ. ತನ್ನ ದೇವತೆಗಳೆಲ್ಲ ಗಾಬರಿಯಿಂದ ಕಂಗಾಲಾಗಿದ್ದಾರೆ. ಅಹಂಕಾರದಿಂದ ತಲೆ ತಿರುಗಿದ ರಾಕ್ಷಸ ಏನು ಬೇಕಾದರೂ ಮಾಡಿಯಾನು. ಬ್ರಹ್ಮ ಹೇಳಿದ, ‘ಹಾಗೆಯೇ ಆಗಲಿ ಅಸುರ ಶ್ರೇಷ್ಠ, ನಾನೇ ಕೇಳಿಕೊಳ್ಳುತ್ತೇನೆ. ನನಗೆ ನಿನ್ನ ದೇಹವನ್ನು ನೀಡು. ನಾನು ಅದನ್ನೊಂದು ಯಜ್ಞಕುಂಡವನ್ನಾಗಿ ಮಾಡಿ, ಪ್ರಪಂಚಕ್ಕೆ ಒಳ್ಳೆಯದಾಗಲು ವಿಶೇಷ ಯಜ್ಞವನ್ನು ನಡೆಯಿಸುತ್ತೇನೆ.’ ಗಯಾಸುರನಿಗೆ ಅರ್ಥವಾಯಿತು. ಇದು ತನ್ನನ್ನು ಇಲ್ಲವಾಗಿಸಲು ಬ್ರಹ್ಮ ಮಾಡಿದ ಯೋಚನೆ. ತಾನು ಅಹಂಕಾರದಿಂದ ಹೇಳಿದ ಮಾತಿನಿಂದ ಹಿಂದೆ ಸರಿಯುವುದು ಸಾಧ್ಯವಿಲ್ಲ. ತಾನೂ ಒಂದು ಯೋಚನೆ ಮಾಡಿ ‘ಆಗಲಿ’ ಎಂದು ಹೇಳಿದ. ಅಂತೂ ರಾಕ್ಷಸನ ಅವನತಿಯಾಯಿತು ಎಂದು ದೇವತೆಗಳು ಭಾವಿಸಿದರು. ದೇವತೆಗಳು ಬ್ರಹ್ಮನ ನೇತೃತ್ವದಲ್ಲಿ ಗಯಾಸುರನ ದೇಹದ ಮೇಲೆ ಯಜ್ಞವನ್ನು ಪ್ರಾರಂಭಿಸಿದರು.

ಭಯಂಕರವಾದ ಜ್ವಾಲೆಯನ್ನು ಉರಿಸಿ ಅನೇಕ ವರ್ಷಗಳವರೆಗೆ ಯಜ್ಞ ನಡೆಸಿದರೂ ಗಯಾಸುರನ ದೇಹ ಸುಡಲಿಲ್ಲ. ಅವನ ತಾಳ್ಮೆ ಅಪಾರವಾದುದು. ಒಂದು ದಿನ ಅವನ ತಾಳ್ಮೆಯೂ ಮೀರಿತು. ಅವನ ದೇಹ ಯಜ್ಞಕುಂಡವನ್ನು ಕಿತ್ತೊಗೆದು ಗರಗರನೇ ಚಕ್ರದಂತೆ ಆಕಾಶದಲ್ಲಿ ತಿರುಗಲಾರಂಭಿಸಿತು. ದೇವತೆಗಳ ಗಾಬರಿಗೆ ಕೊನೆಯೇ ಇಲ್ಲ. ಸ್ವತಃ ಮಹಾವಿಷ್ಣುವೇ ಬಂದು ಗಯಾಸುರನ ಎದೆಯ ಮೇಲೆ ಬಲವಾಗಿ ಗುದ್ದಿದ. ಗಯಾಸುರನಿಗೆ ಏನೂ ಆಗಲಿಲ್ಲ. ಆಗ ವಿಷ್ಣು, ‘ಗಯಾಸುರ, ಸಾಕು ಇನ್ನು ನಿನ್ನ ವ್ಯರ್ಥ ಪೌರುಷ. ನೀನು ಜ್ಞಾನಿ, ಆದರೂ ಏಕೆ ಹೀಗೆ ಅಲ್ಪರಂತೆ ನಡೆಯುತ್ತಿದ್ದೀ? ದೇಹದ ಮೇಲಿನ ಆಸೆಯನ್ನು ಬಿಟ್ಟು ಮೋಕ್ಷದೆಡೆಗೆ ನೋಡು’ ಎಂದ. ರಾಕ್ಷಸ ಗಯಾಸುರ, ‘ಹಾಗಾದರೆ ಇಷ್ಟು ವರ್ಷ ಘನಘೋರ ತಪಸ್ಸು ಮಾಡಿ ಪಡೆದ ಪುಣ್ಯದ ಗತಿ ಏನು?’  ಎಂದು ಕೇಳಿದ. ವಿಷ್ಣು, ‘ನೀನು ದೇಹವನ್ನು ಬಿಟ್ಟ ಸ್ಥಳ ಪವಿತ್ರವಾಗುತ್ತದೆ. ಜನ ಇಲ್ಲಿ ಬಂದು ತಮ್ಮಿಂದ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡಿದಾಗ ನಿನ್ನ ಪುಣ್ಯದ ಭಾಗ ಅವರಿಗೆ ದೊರೆಯುತ್ತದೆ. ಹೀಗೆ ಮತ್ತೊಬ್ಬರಿಗೆ ಪುಣ್ಯ ನೀಡಿದ ಅಪರೂಪದ ಭಾಗ್ಯ ನಿನ್ನದಾಗುತ್ತದೆ.’ ಗಯಾಸುರ ಒಪ್ಪಿ ಸಂತೋಷದಿಂದ ದೇಹತ್ಯಾಗ ಮಾಡಿದ ಸ್ಥಳ ಗಯಾ. ತನ್ನ ಪುಣ್ಯವನ್ನು ನೀಡುವುದರಿಂದ ರಾಕ್ಷಸನಾದ ಗಯಾಸುರ ಕೂಡ ಶಾಶ್ವತನಾದ. ಸ್ಥಳ ಪವಿತ್ರ ಯಾತ್ರಾ ಸ್ಥಳವಾಯಿತು. ನೀಡುವಿಕೆಯ ಗುಣ ನೀಡಿದವನನ್ನು, ನೀಡಿದ ವಸ್ತುವನ್ನು ಪವಿತ್ರವಾಗಿಸುತ್ತದೆ. ಅದಕ್ಕೆ ವಿರುದ್ಧವಾಗಿ ತನ್ನ ಸ್ವಾರ್ಥಕ್ಕಾಗಿ ಬಗೆದುಕೊಳ್ಳುವ, ತುಂಬಿಕೊಳ್ಳುವ ಕ್ರಿಯೆ ಆ ವ್ಯಕ್ತಿಯನ್ನೂ, ವಸ್ತುವನ್ನು ಅಪವಿತ್ರವನ್ನಾಗಿಸುತ್ತದೆ. ಪ್ರೀತಿಯಿಂದ ನೀಡುವಿಕೆ ಅಪವಿತ್ರವನ್ನು ಪವಿತ್ರವಾಗಿಸುತ್ತದೆ. ಆದ್ದರಿಂದ ಅಲ್ಲಿ ವಿಷ್ಣುವಿನ ಪಾದದ ದೇವಸ್ಥಾನವಿದೆ. ಇಲ್ಲಿಯೇ   ಪಿಂಡ ಪ್ರದಾನ ಮಾಡಬೇಕು. ಇದು ಪಿತೃ ದೇವತೆಗಳಿಗೆ ಅಕ್ಷಯ ತೃಪ್ತಿ ತರುತ್ತದೆ. ಈ ಕ್ಷೇತ್ರದಲ್ಲಿ ರಾಮದೇವರು ದಶರಥನ ಶ್ರಾದ್ಧ ಕರ್ಮಗಳನ್ನು ಆಚರಿಸಿದರು.

ಗಯಾದಲ್ಲಿ ಪಿತೃ ಕಾರ್ಯ ಮಾಡಿದಾಗ ಉಂಟಾಗುವ ಅನುಭವ ಅನಿರ್ವಚನೀಯ. ವಿಷ್ಣುಪಾದದ ಮೇಲೆ ಪಿಂಡ ಪ್ರದಾನ ಮಾಡಿದಾಗ ಒಂದು ದೈವೀಕ ಅನುಭವ ಉಂಟಾಗುತ್ತದೆ. ಅಲ್ಲಿಯೇ ಹರಿಯುವ ಫಲ್ಗುಣೀ ನದಿಯಲ್ಲಿ ಯಾವಾಗಲೂ ನೀರಿರುವುದಿಲ್ಲವಂತೆ. ಆದರೆ ನದೀ ಪಾತ್ರ ತುಂಬಾ ಆಳ ಮತ್ತು ದೊಡ್ಡದು. ಅದೇ ಮರಳಿನಲ್ಲಿಯೇ ಪಿಂಡ ಪ್ರದಾನ ಮಾಡಿದರು. ದಡದಲ್ಲಿದ್ದ ವಟು ವೃಕ್ಷ ಹಾಗೂ ವಿಷ್ಣುಪಾದದ ಮೇಲೆ ಪಿಂಡಪ್ರದಾನ ಮಾಡಿಸಿದರು. ಅಲ್ಲಿ ವಿಷ್ಣು ಪಾದದ ಮೇಲೆ ಎಲ್ಲಾ ಜಾತಿಯವರೂ ಪಿಂಡ ಪ್ರದಾನ ಮಾಡ ಬಹುದು. ನಾವು ಹೋದಾಗ ಮಧ್ಯಾನ್ಹದ ವೇಳೆಯಾಗಿದ್ದು ದೇವಾಲಯವನ್ನು ತೊಳೆಯುತ್ತಿದ್ದರು, ಸರಿ ಪರಿಶುಭ್ರವಾದ ವಿಷ್ಣು ಪಾದದ ಮೇಲೆ ನಮ್ಮ ಹಿರಿಯರ ಪಿಂಡ ಪ್ರದಾನ ಮಾಡಿದರು. ಗಯಾದಲ್ಲಿ ಎಲ್ಲಿ ಕಾಲಿಟ್ಟರೂ ಪಿಂಡಗಳೇ ಸಿಗುವಂತಿರುತ್ತವೆ. ದೇವಸ್ಥಾನದ ಸುತ್ತಮುತ್ತ ಒಂದು ಥರದ ಗುನು ಗುನು ವಾಸನೆ, ತುಂಬಿ ಜೊಮಗುಟ್ಟುವ ನೊಣಗಳ ಸಂತತಿ, ಕಸದ ರಾಶಿ ಯನ್ನು ನೋಡಿದರೆ ಅಲ್ಲಿ ಉಸ್ತುವಾರಿಯವರು ಬರಿ ದುಡ್ಡಿಗಾಗಿ ದೇವಸ್ಥಾನವನ್ನು ಬಳಸಿಕೊಳ್ಳುತ್ತಿದ್ದಾರೇನೊ ಅನಿಸುತ್ತೆ. ಶ್ರಾದ್ಧ ಕಾರ್ಯ ಮುಗಿದ ಮೇಲೆ ಬರುವ ಒಂದು ಗುಂಪು ಅಲ್ಲಿಗೆ ಬಂದ ಪ್ರವಾಸಿಗರ, ಕಾರ್ಯ ಮಾಡಿದ ಜನರನ್ನು ಆ ದಕ್ಷಿಣೆ. ಇ ದಕ್ಷಿಣೆ ಅಂತ ಸುಲಿಗೆ ಮಾಡ್ತಾರೆ. ಕೊಡದಿದ್ದರೆ ರೌಡಿಸಂ ಬೇರೆ.  ಮಂತ್ರಾಲಯ ರಾಮಾಚಾರ್ಯರು ಕೂಡಾ ಒಂದು ಶ್ರಾದ್ಧಕ್ಕೆ 3,000/- ರೂ ಪಡೆದರೆನಿಸುತ್ತದೆ. (ಇದು ಉತ್ತರ ಭಾರತ ಪ್ರವಾಸದುದ್ದಕ್ಕೂ ಧಾರ್ಮಿಕ ವಿಧಿಗಾಗಿ ನೀಡಿದ ಅತಿ ಹೆಚ್ಚಿನ ಮೊತ್ತ.)

ಉತ್ತರಾದಿ ಮಠದ ಪೀಠಸ್ಥರಾದ ಶ್ರೀ ಸತ್ಯಧ್ಯಾನ ತೀರ್ಥರು ವಿಷ್ಣು ಪಾದದ ಜಾಗದಲ್ಲಿಯೇ ಮೂಲ ರಾಮರ ಪೂಜೆ ಮಾಡಿದ್ದರಂತೆ. ಅಲ್ಲಿಯೇ ನಾವು ನಮಗಿಷ್ಟದ ಸಿಹಿ, ತರಕಾರಿ ಹಣ್ಣುಗಳನ್ನು ಸೇವಿಸುವುದಿಲ್ಲವೆಂದು ಸಂಕಲ್ಪ ಮಾಡುವುದು. ನಮ್ಮಲ್ಲಿಯೂ ಅನೇಕರು ಈ ಸಂಕಲ್ಪಗಳನ್ನು ಮಾಡಿದರು. ನಂತರ ಶ್ರೀ ಮಂತ್ರಾಲಯ ರಾಮಾಚಾರ್ಯರು ವ್ಯವಸ್ಥೆ ಮಾಡಿದ ಮನೆಯಲ್ಲಿ ಊಟ ಮಾಡಿ, ವಿಶ್ರಾಂತಿ ಪಡೆದು, ಸಾಯಂಕಾಲ ನದಿಯ ಆ ದಂಡೆಗಿರುವ ದಶರಥ ಸೀತಾ ಮಾತೆಯ ದೇವಸ್ಥಾನಗಳಿಗೆ 2 ಆಟೋಗಳಲ್ಲಿ ಹೊರಟೆವು. ಗಯಾ ನಗರವು ಸಿಹಿ ತಿಂಡಿಗಳಿಗೂ ಪ್ರಸಿದ್ಧಿಯನ್ನು ಪಡೆದಿದೆ. ಮುಖ್ಯ ರಸ್ತೆಗಳ ತುಂಬೆಲ್ಲ ಸಿಹಿ ತಿಂಡಿ ಅಂಗಡಿಗಳದೇ ಕಾರುಬಾರು. ನನಗೇನು ಬರಿ ತಿಂಡಿಗಳ ಚಿಂತೆಯೇ ಎನ್ನಬೇಡಿ. ಕಣ್ಣಿಗೆ ಕಂಡದ್ದು ಹೇಳಿದ್ದೇನೆ.

ರಾಮ ಲಕ್ಷ್ಮಣರು ತಮ್ಮ ಪಿತೃಗಳ ಶ್ರಾದ್ಧವನ್ನು ಗಯೆಯಲ್ಲಿ ಮಾಡಲು ನಿರ್ಧರಿಸಿ, ಅದಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಖರೀದಸಲು ಹೋದಾಗ ಸೀತೆಗೆ ದಶರಥನ ಆತ್ಮ ಬಂದು ತುಂಬಾ ಹಸಿವೆಯಾಗಿದೆ ಎಂದು ಕೇಳಲು, ಶ್ರಾದ್ಧ ಮಾಡಿ ಪಿಂಡ ಇಡುವ ವರೆಗೆ ಕಾಯಲು ಸಾಧ್ಯವಿಲ್ಲವೆಂದು ಹೇಳಿದಾಗ, ಸೀತೆ ಅಲ್ಲಿಯೇ ಇದ್ದ ಮರಳಿನಲ್ಲಿ ಪಿಂಡ ಮಾಡಿ ಕೊಟ್ಟಳಂತೆ. ರಾಮ ಲಕ್ಷ್ಮಣರು ಇದನ್ನು ನೋಡಿ, ಫಲ್ಗು ನದಿಯನ್ನು ಕೇಳಿದಾಗ, ನದಿ ಸುಳ್ಳು ಹೇಳಿತಂತೆ. ನದಿಗೆ ಸೀತೆಯ ಶಾಪವಿದೆ. ಫಲ್ಗು ನದಿಯಲ್ಲಿ ಹನಿಯೂ ನೀರಿಲ್ಲ. ಅಲ್ಲಿದ್ದ ಬ್ರಾಹ್ಮಣನನ್ನು ಕೇಳಲಾಗಿ, ಅವನೂ ಸುಳ್ಳು ಹೇಳಿದನಂತೆ. ಆದ್ದರಿಂದ ಇಡೀ ಗಯೆಯ ಬ್ರಾಹ್ಮಣರಿಗೆಲ್ಲ ಯಾವತ್ತೂ ತೃಪ್ತಿಯೇ ಆಗದಿರಲಿ ಎಂದು ಶಾಪ ನೀಡಿದಳಂತೆ. ಆಕಳನ್ನು ಕೇಳಲಾಗಿ, ಅದೂ ಸುಳ್ಳು ಹೇಳಿದ್ದರಿಂದ, ಆಕಳಿಗೂ ಮೂಕವಾಗಿ ಹೋಗು ಎಂದು ಶಾಪ ನೀಡಿದಳಂತೆ. ಅಲ್ಲಿದ್ದ ವಟು ವೃಕ್ಷ ಮಾತ್ರ ನಿಜ ಹೇಳಿದ್ದರಿಂದ, ಅದರ ಪಾದ ಭಾಗದಲ್ಲಿ ಒಂದು ಪಿಂಡವನ್ನು ಪ್ರದಾನ ಮಾಡುವಂತೆ ಹರಸಿದಳಂತೆ. ಈಗಲೂ ಗಯಾದ ವಟು ವೃಕ್ಷದಡಿಗೆ ಪಿಂಡ ಪ್ರದಾನ ಮಾಡಲಾಗುತ್ತದೆ. ಸೀತಾರಾಮರ ಮೂರ್ತಿ ಹಾಗೂ ಮರಳಿನ ಪಿಂಡವನ್ನು ಹಿಡಿದ ದಶರಥನ ಕೈಯನ್ನು ನೋಡಿದೆವು.

ನಾವೆಲ್ಲ ಒಂದು ಆಟೋದಲ್ಲಿ ಕುಳಿತಿದ್ದು, ಇನ್ನು ಕೆಲವರು ಇನ್ನೊಂದು ಆಟೋದಲ್ಲಿ ಕುಳಿತಿದ್ದರು. ಅದರ ಚಾಲಕ ಮಹಾಶಯ ಆಟೋವನ್ನು ಚಲಿಸುವ ಸ್ಥಿತಿಯಲ್ಲಿಟ್ಟು ಕೆಳಗೆ ಗೆಳೆಯರೊಂದಿಗೆ ಮಾತನಾಡುತ್ತಿದ್ದ. ಇವರೆಲ್ಲ ಕುಳಿತ ತಕ್ಷಣವೇ ಆಟೋ ವೇಗವಾಗಿ, ಹಿಮ್ಮುಖವಾಗಿ ನದಿಯ ಇಳಿಜಾರಿನಡಿ ಚಲಿಸಲಾರಂಭಿಸಿತು. ಚಾಲಕ ಓಡಿ ಬಂದು ಅದನ್ನು ನಿಯಂತ್ರಿಸಿದ. ಯಾವುದೇ ಅವಘಡವಾಗಲಿಲ್ಲ. ನಂತರ ಪುಟ್ಟದೊಂದು ಗುಡ್ಡ ಏರಿ ವಟು ವೃಕ್ಷವನ್ನು ನೋಡಿ, ದೇವಸ್ಥಾನಕ್ಕೆ ಬಂದೆವು. ಅಲ್ಲಿ ಆಚಾರ್ಯರು ನಮಗೆಲ್ಲ ವಿಷ್ಣು ಸಹಸ್ರನಾಮದ ಸೇವೆಗೆ ಮೊದಲೇ ಬುಕ್ ಮಾಡಿದ್ದರು. ಆ ದಿನ ನಮ್ಮ ಸುದೈವ ನಾವು 11 ಜನ ಹಾಗೂ ಆಚಾರ್ಯರನ್ನು ಬಿಟ್ಟರೆ, ಇನ್ಯಾರೂ ಸೇವೆಗೆ ಇರಲಿಲ್ಲ. ನಿಧಾನವಾಗಿ ಶಾಂತವಾಗಿ ವಿಷ್ಣು ಸಹಸ್ರ ನಾಮದ ಪಾರಾಯಣೆ ಮಾಡಿ, ಬಿಳಿ ಬಟ್ಟೆಯ ಮೇಲೆ ವಿಷ್ಣು ಪಾದದ ಅಚ್ಚನ್ನು ಪಡೆದು ಬಿಡಾರಕ್ಕೆ ಹಿಂದಿರುಗಿದೆವು. ಅಲ್ಲಿ ಉಪ್ಪಿಟ್ಟು, ಮತ್ತೇನೋ ನಮಗಾಗಿ ಕಾಯುತ್ತಿತ್ತು. ಮಂತ್ರಾಲಯ ರಾಮಾಚಾರ್ಯರ ವ್ಯವಸ್ಥೆ.  ಮರುದಿನ ಬೆಳಿಗ್ಗೆ ಬೋಧ ಗಯಾ ಅಥವಾ ಬುದ್ಧ ಗಯಾ. ಆಟೋ ಹಿಡಿದು ಅಲ್ಲಿಯ ಸ್ತೂಪ, ಚೈತ್ಯ, ವಿಹಾರಗಳನ್ನು ನೋಡಲು ಹೊರಟೆವು. ಹತ್ತಾರು ದೇಶಗಳು ಇಲ್ಲಿ ಬುದ್ಧಾಲಯ ಹಾಗು ಇತರ ವಿಹಾರಗಳನ್ನು ನಿರ್ಮಿಸಿದ್ದಾರೆ. ಟಿಬೆಟ್, ಬರ್ಮಾ, ಜಪಾನ್, ಥಾಯ್‌ಲ್ಯಾಂಡ್ ಇತ್ಯಾದಿ ದೇಶಗಳ ಕೊಡುಗೆಗಳಿವೆ. ನಮ್ಮ ಪ್ರಾಥಮಿಕ ಶಾಲೆಯ ಇತಿಹಾಸದ ಮಿತ್ರ ಹ್ಯೂ ವೆನ್ ತ್ಸಾಂಗ್ 7 ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಈ ಸ್ಥಳದ ಚೈತ್ಯ ವಿಹಾರ ಸ್ತೂಪಗಳ ವೈಭವವನ್ನು ವರ್ಣಿಸಿದ್ದಾನಂತೆ. ಶಾಂತವಾಗಿರುವ ಈ ಸಣ್ಣ ಊರು ಬೌದ್ಧರಿಗೆ ಅತ್ಯಂತ ಪವಿತ್ರ ಪುಣ್ಯಕ್ಷೇತ್ರ. ಇದೇ ಸ್ಥಳದಲ್ಲಿ ರಾಜಕುಮಾರ ಸಿದ್ಧಾರ್ಥ ಜ್ಞಾನೋದಯ ಹೊಂದಿ ಬುದ್ಧನಾದದ್ದು. ಇಲ್ಲಿಯ ಬೋಧೀ (ಪೀಪಲ್) ವೃಕ್ಷದ ಕೆಳಗೆ ಬೌದ್ಧ ಧರ್ಮದ ಮೂಲಗಳಿವೆ.  ಜೊತೆಗೆ ದಾರಿಯುದ್ದಕ್ಕೂ ಅನೇಕ ಶಾಲೆ ಕಾಲೇಜುಗಳಿವೆ. ಊರು ತುಂಬಾ ಸುಂದರವಾಗಿದೆ. ನಮಗೆಲ್ಲ ಮೊದಲು ಪೇಟ್ ಪೂಜೆಗೆ ಅವಸರವಿತ್ತು. ನಮ್ಮ ಆಟೋಗಳ ಡ್ರೈವರ್ ಗಳೂ ಸಹ ಉತ್ತಮ ಹೋಟೆಲ್ ತೋರಿಸುವುದಾಗಿ ಹೇಳಿದರು. ಆದರೆ ಅಷ್ಟು ಬೆಳಿಗ್ಗೆ ನಮ್ಮ ಅವಸರಕ್ಕೆ ತಕ್ಕಂತೆ, ಹೋಟೆಲ್ ಗಳಲ್ಲಿ ತಿಂಡಿ ತಯಾರಾಗಿರಲಿಲ್ಲ. ಸರಿ ಹಸಿದುಕೊಂಡೇ ಬುದ್ಧದೇವನ ದರ್ಶನಕ್ಕೆ ಹೊರಟೆವು.


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x