ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ: ನಾಗರೇಖಾ ಗಾಂವಕರ

nagarekha

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ  ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕಾಲಕ್ಕೆ ಆದ ಬದಲಾವಣೆಯಲ್ಲಿ  ವಿಸ್ತøತವಾಗುತ್ತಲೋ ಇಲ್ಲ ಸಂಕೀರ್ಣವಾಗುತ್ತಲೋ ಇವೆ. ಈ ಕೌಟಂಬಿಕ ನೆಲೆಗಟ್ಟಿನಲ್ಲಿ ಹಲವಾರು ಸಂಬಂಧಗಳು ಬೆಸೆದುಕೊಂಡಿವೆ. ಗಂಡ-ಹೆಂಡತಿ,ತಂದೆ-ತಾಯಿ,ಮಗ -ಸೊಸೆ,ಅಳಿಯ-ಮಾವ, ಅತ್ತೆ-ಸೊಸೆ ಹೀಗೆ ಆಲದ ಮರದ ಬೀಳಲುಗಳಂತೆ ಭಾರತೀಯ ಸಂಬಂಧಗಳು ಹಲವಾರು. ಅದರಲ್ಲಿ ಅತ್ತೆ-ಸೊಸೆ ಸಂಬಂಧ  ಸಮಾಜದ ಮೂಲ ಘಟಕವಾದ ಕುಟುಂಬದ ಬಲಬೇರು.                         

ಅತ್ತೆ ಸೊಸೆ ಎಂದ ಕೂಡಲೇ ಪರಸ್ಪರ ಸಂಧಿಸದ ಉತ್ತರ ಧ್ರುವ ದಕ್ಷಿಣ ಧ್ರುವ ಎಂದುಕೊಳ್ಳುವುದು, ಹೆಣ್ಣಿಗೆ ಹೆಣ್ಣೆಂದರೆ ಅಲರ್ಜಿ. ಹೆಣ್ಣು ಮತ್ಸರದ ನೆರೆ. ನೂರು ಮೀಸೆಗಳಿದ್ದಲ್ಲಿ ಇರಬಹುದು,ಎರಡು ಜಡೆಗಳಿದ್ದಲ್ಲಿ ಇರಲಾಗದು. ಇತ್ಯಾದಿ ಗಾದೆಗಳು, ಹೇಳಿಕೆಗಳು ಆಗಾಗ ನಮ್ಮ ನಿಮ್ಮೆಲ್ಲರ ಕಿವಿಗಳ ಮೇಲೆ ಬೇಡ ಬೇಡವೆಂದರೂ ಬೀಳುತ್ತಿರುತ್ತವೆ. ಯಾರಾದರೂ ಇಬ್ಬರೂ ಹೆಣ್ಣುಗಳು ಜಗಳವಾಡುತ್ತಿದ್ದರೆ, “ಅತ್ತೆ ಸೊಸೆಯಂತೆ ಕಚ್ಚಾಡುವಿರಲ್ಲ” ಎಂಬ ಸಾಮಾನ್ಯ ಉದ್ಗಾರ ಯಾಕೆ ಬರುವುದು? ಈ ಅತ್ತೆ ಸೊಸೆ ಜಗಳವೇಕೆ ಲೋಕ ಪ್ರಸಿದ್ಧ. ಮಾವ ಅಳಿಯನ ಸಂಬಂಧ ಈ ರೀತಿಯಾಗಿ ವಿಶ್ಷೇಷಿಸಲ್ಪಡುವುದಿಲ್ಲವಲ್ಲ ಯಾಕೆ? ಅತ್ತೆ ಸೊಸೆ ಸಂಬಂಧವನ್ನು ಇಷ್ಟು ನಿಕೃಷ್ಠ ಸಂಬಂಧವೆಂಬಂತೆ ನಿರೂಪಿತವಾದದ್ದು ಹೇಗೆ? ಮತ್ತು ಯಾಕೆ? ಎಂಬ ಪ್ರಶ್ನೆ ಸಾಮಾನ್ಯವಾಗಿ ವಿದ್ಯಾವಂತ ಸ್ತ್ರೀ ಸಮೂಹವನ್ನು ಕಾಡುತ್ತದೆ. ವೇದಕಾಲದಲ್ಲಾಗಲಿ,ಪುರಾಣಗಳಲ್ಲಾಗಲಿ ಅತೆ ಸೊಸೆ ಕಚ್ಚಾಟದ ಕಥೆಗಳಾಗಲಿ ಅಂತಹ ವ್ಯಕ್ತಿತ್ವಗಳಾಗಲಿ ಕಾಣಸಿಗುವುದಿಲ್ಲ. ಹಾಗೆ ಹಿಂದಣ ದಿನಮಾನಗಳಲ್ಲಿ ಅತ್ತೆ ಸೊಸೆ ಸಂಬಂಧಗಳು ಸರಳವಾಗಿದ್ದವು. ಅವು ಸಂಕೀರ್ಣರೂಪ ಪಡೆದುಕೊಂಡಿದ್ದು ಅರ್ಥವ್ಯವಸ್ಥೆಯ ಏರಾಟದಲ್ಲಿ. ಐಶಾರಾಮಿ ಬದುಕಿನ ಹೋರಾಟದಲ್ಲಿ. ಸಂಧಿಗ್ಧ ಸಂಬಂಧಗಳ  ತಕ್ಕಡಿ ಮೇಲಾಟದಲ್ಲಿ.

ಇತ್ತೀಚಿನ ಸಾಮಾಜಿಕ ಕಾದಂಬರಿಗಳು, ದೂರದರ್ಶನದಲ್ಲಿ ಪ್ರಸಾರವಾಗುವ ಧಾರವಾಹಿಗಳು, ಸಾಹಿತ್ಯ ಲೋಕದ ಕೌಟಂಬಿಕ ಹಿನ್ನೆಲೆಯುಳ್ಳ ಲೇಖನಗಳು ಅತ್ತೆ ಸೊಸೆ ಸಂಬಂಧವನ್ನು ಋಣಾತ್ಮಕವಾಗಿ ವಿಜೃಂಬಿಸಿ ಪ್ರದರ್ಶಿಸುತ್ತಿವೆ. ಅವುಗಳ ವಾಚಕರು, ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾಮಣಿಗಳೆ ಎಂಬುದು ಸೋಜಿಗದ ಸಂಗತಿ. ಅಲ್ಲಿಯ ಡೈಲಾಗುಗಳು, ತಂತ್ರಗಾರಿಕೆ ನೇಯುವ ಕಲೆ, ಕುಟುಂಬ ಜೀವನವನ್ನು ಬಂಧಗಳನ್ನು ಒಡೆಯುವ ಶಿಥಿಲಗೊಳಿಸುವ ಅತ್ತೆಯದೋ ಇಲ್ಲ ಸೊಸೆಯದೋ ಪಾತ್ರಗಳು, ಅವುಗಳ ವೈಭವೀಕರಣ, ಇವುಗಳನ್ನೆಲ್ಲಾ ನೋಡುತ್ತ ನೋಡುತ್ತ ಅರೆ ಶಿಕ್ಷಿತ ಯುವ ಪೀಳಿಗೆಯ ಕೆಲವು ಸೊಸೆಯರು, ಅಶಿಕ್ಷಿತ ಅತ್ತೆಯಂದಿರು ಅದನ್ನೆ ಸತ್ಯ, ಇಂಥಹ ಅತ್ತೆ ಸೊಸೆಯಂದಿರೇ ಬಹಳ ಎಂಬಷ್ಟರ ಮಟ್ಟಿಗೆ ಬಂದು ತಮ್ಮ ಜೀವನದಲ್ಲೂ ವ್ಯವಧಾನ ರಹಿತರಾಗಿ ಆ ರೀತಿಯಲ್ಲಿ ವರ್ತಿಸಲೂಬಹುದು. ಬದುಕು ಹೊಂದಾಣಿಕೆ. ಸಹಬಾಳ್ವೆ ಸೃಷ್ಠಿಯ ನಿಯಮ. ಅಲ್ಲೊಂದು ಇಲ್ಲೊಂದು ಅಭಿಪ್ರಾಯ ಬೇಧಗಳು,

ಸಣ್ಣ ಪುಟ್ಟ ಸಂಘರ್ಷಗಳು ಸರ್ವೆಸಾಮಾನ್ಯ. ಅದು ತಂದೆ ಮಗನ ನಡುವೆ ಅಣ್ಣ ತಮ್ಮನ ನಡುವೆ, ಮಾವ ಅಳಿಯ ನಡುವೆ ಕೂಡ ನಡೆಯುತ್ತದೆ. ಮನುಷ್ಯ ಒಬ್ಬನಂತೆ ಇನ್ನೊಬ್ಬ ಚಿಂತಿಸುವುದಿಲ್ಲ, ವರ್ತಿಸುವುದಿಲ್ಲ,ವ್ಯಯಕ್ತಿಕ ಭಿನ್ನತೆಗಳು ಜನ್ಮತಃ ಲಕ್ಷಣಗಳು ಎಲ್ಲರೂ ನನ್ನಂತೆಯೇ ನಡೆದುಕೊಳ್ಳಬೇಕೆಂದರೆ ಅದು ಅಸಾಧ್ಯದ ಸಂಗತಿ. ಆದ್ದರಿಂದ ಮನೆಗೆ ಬಂದ ಸೊಸೆ ಸಕರಾತ್ಮಕ ಧೋರಣೆಯುಳ್ಳ ಹೆಣ್ಣಾಗಿದ್ದಷ್ಟು ಕೌಟಂಬಿಕ ಮೌಲ್ಯಗಳು ಬೆಳಗುತ್ತವೆ.

ಈಗೀಗ ಕೆಲವು ಶಿಕ್ಷಿತ ಸುಸಂಸ್ಕøತ ಕುಟುಂಬಗಳಲ್ಲಿ ಅತ್ತೆ ಸೊಸೆಯರು ಪರಸ್ಪರ ಪೂರಕವಾಗಿ ವ್ಯವಹರಿಸುತ್ತಾರೆ. ಎಷ್ಟೋ ಅತ್ತೆ ಸೊಸೆಯರು ಜೊತೆಜೊತೆಯಾಗಿ ಶಾಪಿಂಗ್ ಮಾಡುತ್ತಾರೆ. ವಾಕಿಂಗ್ ಹೋಗುತ್ತಾರೆ. ಮನೆಯ ಕಷ್ಟಸುಖಗಳಲ್ಲಿ ಇಬ್ಬರೂ ಚರ್ಚಿಸಿ ತೀರ್ಮಾನಿಸುತ್ತಾರೆ. ಇದು ಯಾವಾಗ ಸಾಧ್ಯವೆಂದರೆ ಅತ್ತೆಗೆ ಮನೆಗೆ ಸೊಸೆಯಾಗಿ ಬಂದವಳ ಬಗ್ಗೆ ಆದರ,ಅಕ್ಕರೆ, ಕರುಣೆ,ಅಭಿಮಾನ ಇದ್ದಾಗ. ಹಾಗೆ ಸೊಸೆಯಾದವಳಿಗೂ ದುರಭಿಮಾನದ ಗೂಡಾಗಿರದೆ ತನ್ನ ವಿದ್ಯೆಗೆ ತಕ್ಕಂತೆ ವಿನಯಶಾಲಿಯಾಗಿದ್ದು ಅತ್ತೆಯ ಸ್ಥಾನಮಾನದ ಅರಿವಿದ್ದಾಗ. ಸಣ್ಣ ಪುಟ್ಟ ಮನಸ್ತಾಪಗಳಿಗೆ ಶಾಂತಮನಸ್ಸಿನಿಂದ ಚರ್ಚಿಸಿದರೆ ವೈಮನಸ್ಸುಗಳು ದೂರಾಗುವವು. ಮುಕ್ತ ಸಂವಹನದ ಪರಿಣಾಮಕಾರಿ ಪರಿಹಾರ.

ದೋಷರಹಿತನಾದ ವ್ಯಕಿ ಜಗತ್ತಿನಲ್ಲಿ ಯಾರೂ ಇಲ್ಲ. ಎಲ್ಲರಲ್ಲೂ ಒಂದಲ್ಲಾ ಒಂದು ವಿಕಾರಗಳು ಸಾಮಾನ್ಯ. ಅತ್ತೆಯ ಗುಣ ಮತ್ತು ನ್ಯೂನ್ಯತೆಗಳನ್ನು ಸೊಸೆಯಾದವಳು, ಸೊಸೆಯ ಗುಣ, ನ್ಯೂನ್ಯತೆಗಳನ್ನು ಅತ್ತೆಯಾದವಳು  ಸ್ವೀಕರಿಸಿ ಬದುಕಿದರೆ ಸಂಸಾರ ಸಸಾರ. ಪರಸ್ಪರ ಸಾಮರಸ್ಯತೆ ಸಂಸಾರದ ರಸವತ್ತತೆಯನ್ನು ಅಧಿಕಗೊಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಅತ್ತೆ ಸೊಸೆ ಮಧ್ಯೆ ಭೌತಿಕ ಸಹಕಾರದ ಜೊತೆ ಭಾವನಾತ್ಮಕ ಬೆಂಬಲವೂ ಮೂಡಿಬಂದಲ್ಲಿ ತಮ್ಮ ಸಂಸಾರದ ಕಷ್ಟ ಸುಖಗಳನ್ನು ಹಂಚಿಕೊಂಡು ಪರಸ್ಪರ ಸಮಾಧಾನಿಸಿಕೊಳ್ಳಬಹುದು. ಯಾಕೆಂದರೆ ಒಂದು ಹೆಣ್ಣಿನ ಮನಸ್ಥಿತಿ ಇನ್ನೊಂದು ಹೆಣ್ಣಿಗೆ ಮಾತ್ರ ಸರಿಯಾಗಿ ಅರ್ಥವಾಗುವುದು. ನನಗೆ ಗೊತ್ತಿರುವ ಒಂದು ಬಡಿಗ ಕುಟುಂಬವೊಂದಿದೆ. ಅತ್ತೆ ಸೊಸೆ ಅನ್ಯೋನ್ಯವಾಗಿರುವ ಆ ಕುಟುಂಬದಲ್ಲಿ ಮಗನೇ ಪರಕೀಯ. ಕುಡಿದು ಬರುವ ಮಗನ ಪೌರುಷವನ್ನು ತುಚ್ಛಿಕರಿಸಿ ಮಾತನಾಡುವ ಅತ್ತೆ ಸೊಸೆಯ ತ್ಯಾಗವನ್ನು ಶ್ರಮವನ್ನು ಕೊಂಡಾಡುತ್ತಾಳೆ. ಅಶಿಕ್ಷಿತ ಮಹಿಳೆಯರಲ್ಲೇ ಇಂತಹ ಭಾಂದವ್ಯ ಇರುವಾಗ ಅತ್ತೆ ಸೊಸೆ ಸಂಬಂಧಕ್ಕೆ ಉಪ್ಪುಖಾರ ಹಚ್ಚಿ ವೈಭವೀಕರಿಸುವ ಸಿನೇಮಾ, ಕಿರುತೆರೆಯ ಏಕ ಪ್ರಕಾರದ ಚರ್ವಿತಚರ್ವಣ ವಿಚಾರಗಳು ಕೆಲವೊಮ್ಮೆ ಹಾಸ್ಯಾಸ್ಪದವೆನಿಸುತ್ತವೆ.

 ಆದರೂ ಆಧುನಿಕತೆ ಎಂಬ ವಿಷ ವರ್ತುಲ ನಿಧಾನವಾಗಿ ನಮ್ಮ ಸಂಸ್ಕಾರ ಸಂಸ್ಕøತಿಗಳ ಮೇಲೆ  ಆವರಿಕೊಳ್ಳುತ್ತಿದೆ. ಇಂದಿನ ದಿನಮಾನಗಳಲ್ಲಿ ಅವಿಭಕ್ತ ಕುಟುಂಬಗಳು ವಿರಳವಾಗುತ್ತಿವೆ. ವಿಭಕ್ತ ಕುಟುಂಬ, ಭೋಗಸಂಸ್ಕøತಿ, ಸ್ವೇಚ್ಛಾಚಾರದ ಪ್ರವೃತ್ತಿಗಳು ತಲೆಎತ್ತುತ್ತಿವೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಬಂಧಗಳು ಬಲಗೊಳ್ಳಬೇಕು ಸಂಸ್ಕøತಿ ಉಳಿಯಬೇಕು. ಹೊಂದಾಣಿಕೆ ಬೇಕೆಬೇಕು.

ಅತ್ತೆಯಾದವಳ ಸೊಸೆಯ ಸಮಸ್ಯೆಗಳಿಗೆ ಸ್ಪಂದಿಸಿ ಆಧರಿಸಬೇಕು. ಸೊಸೆ ಮಗಳಂತೆ ಆಗದಿದ್ದರೂ ಆಕೆಯೂ ಕೂಡ ತನ್ನಂತೆ ಹೆಣ್ಣು. ಆಕೆಯ ಪ್ರಾಯದ ಬಯಕೆಗಳು ಒಂದು ಕಾಲಕ್ಕೆ ತನ್ನದೂ ಆಗಿದ್ದವು ಎಂದರಿತು ಅನುವು ಮಾಡಿಕೊಡಿಕೊಟ್ಟಷ್ಟು ಸಂಬಂಧಗಳು ಸುರಳಿತ. ಮಗ ಸೊಸೆಯ ಅನ್ಯೋನ್ಯತೆಯನ್ನು ಕಂಡು  ತನ್ನ ಅಳಿಯ ಮಗಳು ಹೀಗಿದ್ದರೆ ತನ್ನ ಆನಂದಾನೂಭೂತಿ ಹೇಗಿರುತ್ತಿತ್ತು ಎಂದು ತಾಳೆ ಹಾಕುವುದನ್ನು ಕಲಿತರೆ ಚೆನ್ನ.

ಇನ್ನು ಸೊಸೆಗೆ ತನ್ನ ಅನುಭವದ ಅಮರವಾಣಿಗಳನ್ನು ಹೇಳುವುದು ತಪ್ಪಲ್ಲ. ಆದರೆ ಅದು ಆದೇಶವಾಗದಂತಿರಲಿ. ಪ್ರೀತಿಯಿಂದ ತಿಳಿಹೇಳುವ ಹಿತ ನುಡಿಯಂತಿರಲಿ.

ಸೊಸೆಯ ಮುಟ್ಟಿನ ದಿನಗಳಲ್ಲೂ, ಬಾಣಂತಿತನದ ದಿನಗಳಲ್ಲಿ ಆಕೆಯಿಂದ ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ಒತ್ತಾಯಿಸದೇ ಆ ಸಂದರ್ಭಗಳÀಲ್ಲಿ ತಾಯಿಯ ಕಾಳಜಿಯನ್ನು,ಅಷ್ಟಲ್ಲದಿದ್ದರೂ ಒಬ್ಬ ಹೆಣ್ಣು ಇನ್ನೊಂದು ಹೆಣ್ಣಿಗೆ ತೋರುವ ಕಾಳಜಿಯನ್ನು ತೋರಿಸಿದರೆ ಒಳಿತು.

ಉದ್ಯೋಗಸ್ಥ ಸೊಸೆ ಇದ್ದಾಗ ಆಕೆ ಕೆಲಸ ಮುಗಿಸಿ ಬರುವವರೆಗೂ ಮನೆಯ ಕೆಲಸವನ್ನು ಆಕೆಗಾಗೆ ಕಾಯ್ದಿರಿಸುವುದನ್ನು  ಬಿಡಬೇಕು. ತನ್ನಿಂದಾಗುವ ಕೆಲಸವನ್ನು ಮಾಡಿ ಆಕೆಗೆ ಸಹಾಯ ಮಾಡುವ ಪರಿಪಾಟ ಬೆಳೆಸಿಕೊಂಡಲ್ಲಿ  ಸೊಸೆಗೆ  ಅತ್ತೆಯ ಮೇಲೆ ಗೌರವ ಇಮ್ಮಡಿಯಾಗುವುದು. ಮಗನ ಮೇಲೆ ಮೊಮ್ಮಕಳ ಮೇಲೆ ಜೀವವಿರಿಸಿಕೊಳ್ಳುವ ಕೆಲವು ಅತ್ತೆಯಂದಿರು ಸೊಸೆಯೆಂದರೆ ಉರಿದು ಬೀಳುತ್ತಾರೆ. ಅಕ್ಕ ಪಕ್ಕದ ಮನೆಯವರೊಂದಿಗೆ ಆಕೆಯನ್ನು ಆಡಿಕೊಳ್ಳುವುದು ಉಂಟು. ಈ ರೀತಿಯ ವರ್ತನೆಗಳು ಸಂಬಂಧಗಳ ಕಂದಕವನ್ನು ಹೆಚ್ಚಿಸುತ್ತವೆ.

ಸೊಸೆ ಕೂಡ ಮುಂದೆ ಅದೇ ಚಟಕ್ಕೆ ಅಂಟಿಕೊಂಡು ಅತ್ತೆಯನ್ನು ಮನೆಯವರ ವಿಚಾರಗಳನ್ನು ಹೊರಗಿನವರ ಮುಂದೆ ಆಡಿಕೊಂಡು ಸಂಸಾರದ ಗುಟ್ಟು ಬೀದಿ ರಟ್ಟು ಆಗುತ್ತದೆ.

ಸೊಸೆಯಾದವಳು ಅತ್ತೆಯನ್ನು ತಾಯಿಯಂತೆ ಕಾಣಬೇಕು. ಅನ್ಯರ ಎದುರಿನಲ್ಲಿ ಅವಿಧೇಯವಾಗಿ ವರ್ತಿಸದೇ ಅತ್ತೆಯ ಆದೇಶಗಳನ್ನು ಪಾಲಿಸಿ ನಮ್ರತೆಯಿಂದ ನಡೆದುಕೊಂಡರೆ ಅತ್ತೆಗೂ ಸೊಸೆಯೆಂದರೆ ಸಮಾಧಾನವಾಗುವುದು. ಇಳಿವಯಸ್ಸಿನಲ್ಲಿ ಅತ್ತೆಗೆ ಪತಿಯಿದ್ದರೆ ಆಕೆ ಮಗನ ಬೆಂಬಲ ಅತಿಯಾಗಿ ಅವಲಂಬಿಸುವುದಿಲ್ಲ. ಅದೇ ಒಬ್ಬಂಟಿಯಾದರೆಮಗನೇ ಆಕೆಯ ಸರ್ವಶ್ವ. ಅದಕ್ಕಾಗಿ ಸೊಸೆ ಅವರಿಬ್ಬರ ಆತ್ಮೀಯತೆ ಪ್ರೀತಿಯ ಮಧ್ಯೆ ಬರದೇ ತಾಯಿಯ ಪ್ರೀತಿ ಮಗನಿಗೂ ಮಗನ ಪ್ರೀತಿ ತಾಯಿಗೂ ಸಿಗುವಂತೆ ಮಾಡಬೇಕು. ಕುಟುಂಬ ಎಂದಮೇಲೆ ಭಿನ್ನಾಭಿಪ್ರಾಯಗಳು  ಸಾಮಾನ್ಯ. ಇಂದಿನ ಕಾಲದ ಸೊಸೆಯಾದವಳಿಗೆ ಅತ್ತೆಯ ಆಚಾರವಿಚಾರಗಳು ಅಪ್ಯಾಯವಾಗಲಾರವು. ಹಾಗೆಂದು ಅವರ ಆಚಾರಗಳ ಮೇಲೆ ಗದಾ ಪ್ರಹಾರ ಮಾಡಲು ಪ್ರಯತ್ನಿಸಿದರೆ ಆಗ ವಾಗ್ವಾದಗಳು ತಾರಕಕ್ಕೇರುತ್ತವೆ. ವ್ಯಕ್ತಿಯ ದೋಷಗಳನ್ನು ಆತನ ಗುಣಗಳಂತೆ ಸ್ವೀಕರಿಸಿ ಸಹಕರಿಸಬೇಕು. ಅಂದಾಗ ಸಾಮರಸ್ಯತೆ ಸಾಧ್ಯ. ಅತ್ತೆಯ ಅನಾರೋಗ್ಯದ ಸಮಯದಲ್ಲಿ  ಆಕೆಯ ಬಗ್ಗೆ ಕಾಳಜಿ ವಹಿಸುವುದು, ಕೆಲವೊಮ್ಮೆ ಆಕೆಗೆ ಇಷ್ಟವಾದ ತಿಂಡಿತಿನಿಸುಗಳನ್ನು ಮಾಡಿಕೊಡುವುದು, ಆಧುನಿಕ ಗಟ್ಟಿಗಿತ್ತಿ ಅತ್ತೆಯಾಗಿದ್ದರೆ ಆಕೆಯ ವಿಚಾರ ಆಚಾರಗಳನ್ನು ಸಮಾನ ಚಿಂತನೆಗಳನ್ನು ಹಂಚಿಕೊಳ್ಳುವುದು ಮಾಡುತ್ತ ಸಂಬಂಧಗಳನ್ನು ಬೆಸೆದುಕೊಳ್ಳಬಹುದು.

ಹಾಗೆ ಉದ್ಯೋಗಸ್ಥ ಸೊಸೆ ಅತ್ತೆಗೆ ಆಗಾಗ ಹುಟ್ಟಿದ ಹಬ್ಬಕ್ಕೋ, ಇಲ್ಲ ಹಬ್ಬಹರಿದಿನಗಳ ಸಮಯಗಳಲ್ಲೋ ಸೀರೆ ಚಿಕ್ಕಪುಟ್ಟ ಒಡವೆ ಇತ್ಯದಿಯಾಗಿ ಉಡುಗೊರೆಗಳನ್ನು ನೀಡಬಹುದು. ಇವು ಸೊಸೆಯ ಆರ್ಥಿಕತೆಯನ್ನು ಅವಲಂಬಿಸಿ. ಆದರೆ ಅದು ಸದುದ್ದೇಶದ ಬದಲಾವಣೆಯನ್ನು ತರಬಲ್ಲದು ಎಂಬುದರಲ್ಲಿ ಎರಡು ಮಾತಿಲ್ಲ. ಹೆಣ್ಣುಗಳೆಲ್ಲ ಅತಿ ಪ್ರೌಢರಿಂದ ಹಿಡಿದು ಇಂತಹ ವಿಷಯಗಳಿಗೆ ಮುಖಗಂಟಿಕ್ಕಿಕೊಳ್ಳುವವರಿರಲಾರರು. ಅತ್ತೆಯ ಜಿಗುಟುತನ  ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬಹುದು. ಸೊಸೆಯ ಬಗ್ಗೆ ನಲ್ಮೆಯ ನುಡಿಗಳು ಆಗಾಗ ಮೆಲುಕಾಡಬಹುದು.

ಸೊಸೆಯಾದವಳಿಗೆ ಅತ್ತೆಯ ಬೈಗುಳವನ್ನು ಸಹಿಸಲಾಗುವುದಿಲ್ಲ. ತಾಯಿಯ ಕೋಪ, ಬೈಗುಳಗಳು ಬಹುಬೇಗನೆ ಮರೆತುಹೋದರೆ ಅತ್ತೆಯ ಸಣ್ಣ ಪುಟ್ಟ ನಿಷ್ಟುರ ನುಡಿಗಳು ಕರ್ಣಾಘಾತದ ಸಲಾಕೆಗಳಾಗುತ್ತವೆ. ಅದಕ್ಕಾಗೆ ಸೊಸೆ ಇಂತಹ ಪರಿಸ್ಥಿತಿಯಲ್ಲಿ ಸರಳವಾಗಿದ್ದು ಅತ್ತೆಯಲ್ಲಿ ತಾಯಿಯ ರೂಪವನ್ನು ಕಂಡು ಸಕಾರಾತ್ಮಕ ದೋರಣೆ ತಾಳಬೇಕು. ಹೊರತು ಈರ್ಷೆಯಿಂದ ದುಡುಕಬಾರದು.

ಇನ್ನೊಂದು ಅತ್ತೆ ಸೊಸೆ ಇವರಿಬ್ಬರ ನಡುವಿನ ಬಂಧನದ ಕೊಂಡಿ ಒಬ್ಬ ಪುರುಷ. ಆತ ಮಗನಾಗಿ ಪತಿಯಾಗಿ ದ್ವಿಪಾತ್ರವನ್ನು ಅಭಿನಯಿಸುವ ಸಂದರ್ಭದಲ್ಲಿ  ವಿವೇಚನಾಶೀಲನಾಗಿರಬೇಕು. ಅವರಿಬ್ಬರನ್ನು ಸಂಭಾಳಿಸಿ ಮಧುರ ಭಾಂದವ್ಯವನ್ನು ಬೆಸೆಯುವಲ್ಲಿ ಅವನ ಪಾತ್ರ ಬಹಳ ಹಿರಿದು. ಆತ ಎರಡು ಹೆಣ್ಣು ಮನಸ್ಸುಗಳನ್ನು ಕೂಡಿಸಲು ತಾಳ್ಮೆಯಿಂದ ವರ್ತಿಸಬೇಕು. ಪತ್ನಿಗೆ ತಾಯಿಯ ತ್ಯಾಗ, ತಮ್ಮನ್ನು ಬೆಳೆಸುವಲ್ಲಿ ಆಕೆಯ ಕರ್ತವ್ಯಪರತೆಯನ್ನು ವಿಷದಪಡಿಸಿ, ಆಕೆಯ ಮನಸ್ಸಿನಲ್ಲಿ ತಾಯಿಯ ಬಗ್ಗೆ ಗೌರವ ಮೂಡಿಸಲು ಪ್ರಯತ್ನಿಸಬೇಕು. ತಾಯಿಗೆ ಹೆಂಡತಿಯ ವಿಚಾರದಲ್ಲಿ ಸಮಜಾಯಿಷಿ ನೀಡಬೇಕಾದ ಸಂದರ್ಭ ಬಂದರೆ ಮುಂದುವರಿಯಬೇಕು. ಪತ್ನಿಯ ವಿಚಾರದಲ್ಲಾಗಲಿ ತಾಯಿಯ ವಿಚಾರವೇ ಆಗಲಿ ಅವರು ಹೇಳಿದ ಯಾವುದೇ ಸಂಗತಿಗಳನ್ನು ಕುರುಡಾಗಿ ನಂಬದೆ ಪರೀಶೀಲಿಸಬೇಕು. ತಾಯಿಗೆ ಪತ್ನಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಬೇಕು. ಪತ್ನಿಗೂ ಹಿರಿಯಳಾದ ತಾಯಿಯ ಮಾರ್ಗದರ್ಶನದ ಅಗತ್ಯತೆಯನ್ನು ತಿಳಿಸಬೇಕು. ಸಮಯೋಚಿತ ಹಾಗೂ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಂಡರೆ ಒಳಿತು.

ನಮ್ಮ ಪ್ರಾಚೀನ ಕುಟುಂಬ ವ್ಯವಸ್ಥೆಯ ಸುಭಧ್ರ ಅಸ್ಥಿತ್ವ ಕುಟುಂಬದ ಸದಸ್ಯರ ಕೈಯಲ್ಲಿದೆ. ಪರಸ್ಪರ ಹೊಂದಾಣಿಕೆಯ ಕೊರತೆ. ವಿಚಾರ ವಿನಿಮಯದ ಕೊರತೆ, ವಯಸ್ಸಿನ, ಚಿಂತನೆಯ ದೋರಣೆಯಲ್ಲಿನ ಭಿನ್ನತೆ. ಇವೆಲ್ಲವೂಗಳು ಸಂಬಂಧಗಳಲ್ಲಿ ಬಿರುಕುಂಟು ಮಾಡುತ್ತವೆ. ಇದೆಲ್ಲಕ್ಕೂ ಪರಿಹಾರ ಮಹಿಳೆ ಮಹಿಳೆಯನ್ನು ಮೊದಲು ಬೆಂಬಲಿಸುವುದನ್ನು ಕಲಿಯಬೇಕು. ಅವರು ಅತ್ತೆ ಸೊಸೆ ಆಗಿರಬಹುದು, ಇಲ್ಲ ಅತ್ತಿಗೆ ನಾದಿನಿಯಾಗಿರಬಹುದು, ಓರಗಿತ್ತಿಯರಾಗಿರಬಹುದು. ವಿರೋಧ ಮನಸ್ಥತಿಗೆ ಕಾರಣವನ್ನು ತಿಳಿದು ಮುಕ್ತ ವಿಚಾರ ವಿನಿಮಯ, ಇನ್ನೊಬ್ಬ ಸ್ತ್ರೀ ಒಳಿತಾದರೆ ಅದನ್ನು ಸಂಭ್ರಮಿಸುವ ಗುಣ,ತುಂಬಿದ ಸಭೆಯಲ್ಲಿ ಇನ್ನೊಬ್ಬ ಹೆಣ್ಣನ್ನು ಬೆಂಬಲಿಸುವ ದೈರ್ಯ ಔದಾರ್ಯ ಪ್ರತಿಯೊಬ್ಬ ಸ್ತ್ರೀಂiÀi ಆಂತರ್ಯದಲ್ಲಿ ಒಡಮೂಡಬೇಕು. ಅದಕ್ಕೆ ತಾಯಿಯಾದವಳು ಪೂರಕ ಸನ್ನಿವೇಶಗಳನ್ನು ಮನೆಗಳಿಂದಲೇ ಪ್ರಾರಂಭಿಸಬೇಕು. ತಾಯಿ ತಾನೆ ಮೊದಲ ಗುರು. ನಾವು ತಾಯಂದಿರು ನಮ್ಮ ಅತ್ತೆಯಂದಿರಿಗೆ  ಮಾನಸಮ್ಮಾನಗಳನ್ನು ನೀಡಿದ್ದೇ ಹೌದಾದರೆ ನಮ್ಮ ಕುವರಿಯರು ಬರೀಯ ಆಧುನಿಕ ಶೈಲಿಯಲ್ಲಿ ಅತ್ತೆಯನ್ನು ಅಮ್ಮ ಎನ್ನುತ್ತಲೇ ಗುಮ್ಮನ ಪ್ರತಿಬಿಂಬದ ಕಲ್ಪನೆಯನ್ನು ಮೆಟ್ಟಿ ನಿಜದ ತಾಯಿಯ ದರ್ಶನ ಪಡೆಯಲು  ಸಾಧ್ಯವಿದೆ. ಹೆಣ್ಣಿಗೆ ಹೆಣ್ಣು ವೈರಿಯಲ್ಲ, ಬದಲಿಗೆ ಯಶಸ್ಸಿಗೆ ದಾರಿ. . ಕಾಲದ ಕುದುರೆಯೊಂದಿಗೆ ನಮ್ಮ ಓಟವು ಮುಗ್ಗರಿಸದೇ ಪರಸ್ಪರ ಸಹಾಯದಿಂದ ಕೂಡಿರಲಿ. ಕಣ್ಣು ಕಾಣದ ಗಾವಿಲರಿಗೆ ದಾರಿ ದೀಪವಾಗಿ ಹೆಣ್ಣಿನ ಶಕ್ತಿಯ ನಿಜ ದರ್ಶನ ನೀಡುವಂತಾಗಲಿ.                           

-ನಾಗರೇಖಾ ಗಾಂವಕರ


                    

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Nandal
Nandal
6 years ago

Nice

1
0
Would love your thoughts, please comment.x
()
x