ಮೊನ್ನೆ ಕಾಶಿಯಾತ್ರೆಗೆ ಹೋದಾಗ, ಪಿತೃಕಾರ್ಯ ಮಾಡಿಸಲಿಕ್ಕಂತ ’ಗಯಾ’ ಕ್ಷೇತ್ರಕ್ಕ ಹೋದ್ವಿ. ಅಲ್ಲೆ ದೂರ ದೂರದಿಂದ ಬಂದ ಜನರನ್ನ ನೋಡಿ ಆಶ್ಚರ್ಯ ಆಗಿತ್ತು. ’ಗಯಾ ತೀರ್ಥ’ ಅಂತ ಕರೆಸಿಕೊಳ್ಳೊ ಈ ಕ್ಷೇತ್ರದೊಳಗ ಪಿತೃಗಳನ್ನುದ್ದೇಶಿಸಿ ಶ್ರಾದ್ಧ ದಾನಾದಿಗಳನ್ನ ಮಾಡೊದರಿಂದ ಪಿತೃದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತಿ ಆಗ್ತದ, ಮತ್ತ ಅವರು ಸಂತುಷ್ಟರಾಗಿ ಆಯುರಾರೋಗ್ಯ, ಐಶ್ವರ್ಯಾದಿಗಳನ್ನ ಕೊಡ್ತಾರಂತ ಪ್ರತೀತಿ ಅದ.
ಉರಿಯೊ ಬಿಸಿಲೊಳಗ, ’ಗಯೆಯ’ ಆ ಮಹಾಸ್ಮಶಾನದೊಳಗ ಸುತ್ತಲು ಸುಡುವ ಚಿತೆಗಳ ನಡುವ ಕಾಲುರಿ ಸಹಿಸಿಕೊಳ್ತಾ, ಶ್ರಾದ್ಧಾದಿಕರ್ಮಗಳನ್ನ ಮಾಡಲಿಕ್ಕಂತ ನಿಂತ ಮಂದಿನ್ನ ನೋಡಿ ಮನಸ್ಸಿನೊಳಗ ಒಂದ ವಿಚಾರ ಬಂತು. ಅಂಥಾ ಯಾವ ವಿಶೇಷತೆ ಅದ ಈ ನೆಲದೊಳಗ. ಇಲ್ಲೆ ಯಾಕ ತ್ರಾಸ ಪಟ್ಟು ಬಂದು ಈ ಕೆಲಸಗಳನ್ನ ಮಾಡ್ತಾರ ಅಂತ.
ಅನೇಕ ವಿಷಯಗಳಿಗೆ ಪ್ರಾಮಾಣಿಕವಾದ ಉತ್ತರ ನಮಗ ಪುರಾಣಗಳಿಂದ ಸಿಗ್ತದ. ಅದಕ್ಕ ಪುರಾಣಗಳು ಒಂಥರಾ ಆಧಾರ ಗ್ರಂಥಗಳಂಗ. ಅದಕ್ಕ ಅವುಗೊಳನ್ನ ಎಂದೂ ಉದಾಸೀನ ಮಾಡಬಾರದು. ವಾಯು ಪುರಾಣದೊಳಗ ಗಯೆಯ ಮಹಾತ್ಮದ ಬಗ್ಗೆ ವಿವರಣೆ ಅದ.
ಅತ್ಯಂತ ಪ್ರಾಚೀನ ಕಾಲದೊಳಗ ’ಗಯಾಸುರ’ನೆಂಬ ಒಬ್ಬ ದೈತ್ಯ ’ಕೋಲಾಹಲ’ ಪರ್ವತದೊಳಗ ಬ್ರಹ್ಮನ್ನ ಕುರಿತು ತಪಸ್ಸನ್ನ ಮಾಡಿ ಬ್ರಹ್ಮನಿಂದ ಎರೆಡು ವರಗಳನ್ನ ಕೇಳಿದನಂತ. ಅದೇನಂದ್ರ, ತಾನು ಮೂರು ಲೋಕದಲ್ಲಿರುವವರಿಗೆ ಮಹಾ ಪವಿತ್ರನಾಗಿರಬೇಕು, ಮತ್ತ ತಾನು ಸ್ಪರ್ಷ ಮಾಡಿದ ವಸ್ತುಗಳು ಜೀವಿಗಳು ಮುಕ್ತಿಗೆ ಹೋಗಲು ಯೋಗ್ಯರಾಗಿರಬೆಕು. ಅಂತ ಕೇಳಿದ್ನಂತ. ಆಗ ಬ್ರಹ್ಮದೇವ ಈ ಎರೆಡು ವರಗಳನ್ನ ಕೊಟ್ಟನಂತ. ವರಗಳ ಪ್ರಕಾರ ಎಲ್ಲಾರು ’ಗಯಾಸುರ’ನ್ನ ಮುಟ್ಟಿ ಮುಕ್ತಿಗೆ ಯೋಗ್ಯರಾಗತಿದ್ರು. ಇದರ ಪರಿಣಾಮದಿಂದ ಧರ್ಮ, ದಾನ, ಪಿತೃಕಾರ್ಯ, ಎಲ್ಲಾ ಕಡಮಿ ಆಕ್ಕೋತ ಬಂತು. ಯಾಕಂದ್ರ ಎಲ್ಲಾರು ಇವನನ್ನ ಸ್ಪರ್ಷ ಮಾಡಿ ಮುಕ್ತಿ ಹೊಂದತಿದ್ರು. ಇದರಿಂದ ಯಮಲೋಕ, ಸ್ವರ್ಗ ನರಕ ಎಲ್ಲವೂ ಬಿಕೋ ಅನ್ನಿಸ್ಲಿಕತ್ತುವಂತ. ಇದರ ಪರಿಣಾಮವಾಗಿ ಪ್ರಕೃತಿಯ ನಿಯಮನು ಬದಲಾಯ್ತು. ನಿತ್ಯ ಆಚರಣೆಯು ನಿಂತು ಹೋಗಿತ್ತು. ಚಿಂತಿತರಾದ ಬ್ರಹ್ಮಾದಿ ದೇವತೆಗಳು ವಿಷ್ಣುವಿನ ಹತ್ತಿರ ಹೋಗಿ ತಮ್ಮ ಸಮಸ್ಯೆಯನ್ನು ನಿವೇದಿಸಿಕೊಂಡ್ರಂತ. ಅದಕ್ಕ ವಿಷ್ಣುವು ನೀವು ’ಗಯಾಸುರ’ ನ ಹತ್ರ ಹೋಗಿ, ಅವನ ಶರೀರವನ್ನ ಯಜ್ಞಕ್ಕಾಗಿ ಬೇಕಂತ ಕೇಳಿರಿ ಅಂತ ಉಪಾಯ ಹೇಳಿಕೊಟ್ಟನು.
ದೇವತೆಗಳೆಲ್ಲಾ ’ಗಯಾಸುರ’ ನ ಸಮೀಪಕ್ಕ ಹೋಗಿ ಹೇ ಗಯಾಸುರ ಇಡೀ ಪ್ರಪಂಚದೊಳಗ ಯಜ್ಞಕ್ಕಾಗಿ ಪವಿತ್ರ ಸ್ಥಳ ಹುಡುಕಿದ್ವಿ, ಆದ್ರ ನಿನ್ನ ಶರೀರದಷ್ಟು ಪವಿತ್ರವಾದ ಸ್ಥಳ ಮತ್ತೊಂದಿಲ್ಲ ಅನ್ನಿಸಿ, ಯಜ್ಞಕ್ಕಾಗಿ ನಿನ್ನ ಶರೀರವನ್ನ ಕೇಳಲಿಕ್ಕೆ ಬಂದೇವಿ ಅಂದಾಗ ’ಗಯಾಸುರ’ ಸಂತೊಷದಿಂದ ತನ್ನ ಶರೀರವನ್ನ ಯಜ್ಞಕ್ಕಾಗಿ ಕೊಡಲಿಕ್ಕೆ ಒಪ್ಪಿ ಉತ್ತರಕ್ಕ ತನ್ನ ತಲೆ ಇಟ್ಟು, ದಕ್ಷೀಣಕ್ಕ ತನ್ನ ಕಾಲುಗಳನ್ನ ಚಾಚಿ ಮಲಗಿದಾಗ ಅದು ಎಷ್ಟು ದೂರ ಹೋತಂದ್ರ, ಪಂಚ ಕ್ರೋಶಂ ಗಯಾ ಕ್ಷೇತ್ರಂ, ಕ್ರೋಶ ಮೇಕಂ ಗಯಾ ಶಿರಃ. ಐದು ಕ್ರೋಶದವರೆಗೆ ಕೈ-ಕಾಲು, ಮತ್ತ ಒಂದು ಕ್ರೋಶದವರೆಗೆ ಬರಿ ತಲೆ ಹಬ್ಬಿತಂತ ಅಂದ್ರ ಸುಮಾರು ಇಪ್ಪತ್ತು ಮೈಲಿ ದೂರದವರೆಗು. ಬ್ರಹ್ಮದೇವ ಈ ಯಜ್ಞಕ್ಕಾಗಿನ ವಿಶೇಷ ಬ್ರಾಹ್ಮಣರನ್ನ ಸೃಷ್ಠಿ ಮಾಡಿ, ಗಯಾಸುರನ ಶರೀರದ ಹೃದಯ ಭಾಗದ ಮ್ಯಾಲೆ ಯಜ್ಞವನ್ನು ಪ್ರಾರಂಭ ಮಾಡಿದಾಗ, ಅದರ ಝಳಕ್ಕ ’ಗಯಾಸುರ’ ನ ಶರೀರ ಕಂಪಿಸ್ಲಿಕತ್ತಾಗ ಯಜ್ಞಕ್ಕ ಬಾಧೆ ಆಗಲಿಕ್ಕತ್ತಾಗ, ಧರ್ಮರಾಜ ತನ್ನಲ್ಲಿರೊ ದೇವಮಯವಾದ ಶಿಲೆಯನ್ನಿಟ್ಟಾಗಲು ’ಗಯಾಸುರ’ನ ದೇಹದ ಕಂಪನ ನಿಲ್ಲಲಿಲ್ಲ. ಆಗ ದೇವತೆಗಳ ದೀನ ಆವಸ್ಥಯನ್ನ ನೋಡಿ ಶ್ರೀ ವಿಷ್ಣುವು ತಾನೆ ಗದಾಧಾರೀ ರೂಪದೊಳಗ ಧರ್ಮಶೀಲೆಯ ಮ್ಯಾಲೆ ಪ್ರಕಟನಾದನಂತ. ಆಗ ಕಂಪನ ನಿಂತು ಶಾಂತವಾಯಿತಂತ. ಆಗ ’ಗಯಾಸುರ’ನು ವಿಷ್ಣುವನ್ನ ಕುರಿತು ಈ ಗದಾಧರ ರೂಪದಿಂದ ನನ್ನ ಶರೀರದ ಮೇಲೆ ಯಾವಾಗಲು ವಿರಾಜಿಸುತ್ತ ನನ್ನ ಪವಿತ್ರನನ್ನಾಗಿ ಮಾಡ್ತಿರು, ಮತ್ತ ನನ್ನ ದೇಹದ ಮ್ಯಲೆ ದೇವತೆಗಳು ವಾಸವಾಗಿರಲಿ ಮತ್ತೆ ವಿಶೇಷವಾಗಿ ನನ್ನ ದೇಹದ ಮ್ಯಾಲೆ ಪಿಗ್ಪ್ಲಿsಟ ನಡೆಯಲು ನಿನ್ನ ಪಾದವನ್ನಿಡು, ಪಿತೃಕಾರ್ಯಕ್ಕಾಗಿ ಈ ಸ್ಥಳ ಪ್ರಸಿದ್ಧವಗಲಿ, ಪಿತೃಗಳಿಗೆ ಅಕ್ಷಯವಾದ ತೃಪ್ತಿ ದೊರೆಯಲಿ, ಈ ನನ್ನ ಶರೀರದ ಮೆಲಿರುವ ನಿನ್ನ ಪಾದ ಚಿಹ್ನೆ ಇರುವ ಧರ್ಮಶಿಲಾದ ಮೇಲೆ ಯಾರು ಪಿಂಡದಾನ ಮಾಡುತ್ತಾರೊ ಅವರ ಪಿತೃದೇವತೆಗಳಿಗೆ ಅಕ್ಷಯಲೋಕ ಪ್ರಾಪ್ತವಾಗಲಿ ಮತ್ತು ನಿತ್ಯ ಪಿತೃಕರ್ಯ ನಡೆಯುತ್ತಿರಲಿ ಎಂದು ವರವನ್ನು ಕೇಳಿದ್ದರಿಂದ ಭಗವಂತ ಗದಾಧರನ ರೂಪದಿಂದ ಗಯಾ ಕ್ಷೇತ್ರದಲ್ಲಿದ್ದು ಆ ಸ್ಥಳ ’ವಿಷ್ಣುಪಾದ’ ಕ್ಷೇತ್ರವೆಂದು ಪ್ರಸಿದ್ದವಾಗಿದೆ.
ಕಾಲಕ್ರಮೇಣ ಅಲ್ಲಿ ನಡೆಯೊ ಧರ್ಮ ಕಾರ್ಯಗಳ ಫಲವಾಗಿ, ದುರ್ಲಭವಾದ ಧನ, ಧಾನ್ಯ, ಈ ಭೂಮಿ ಅಳೆಯಲು ಶಕ್ಯವಾಗದ ಸಂಪತ್ತಿನಿಂದ ತುಂಬಿ ತುಳುಕುತ್ತಿತ್ತು. ಹಾಲು, ಮೊಸರು, ತುಪ್ಪ ಇವುಗಳ ನದಿಯೇ ಹರಿಯುತ್ತಿತ್ತು. ಬಂಗಾರ ಬೆಳ್ಳಿಗಳ ಪರ್ವತವೇ ಕಾಣುತ್ತಿತ್ತು. ಇಂಥ ಅದೃಶ್ಯವಾದ ಸಂಪತ್ತು ತಮ್ಮೆದುರಿದ್ದರೂ ಸಹ ಯಾವುದೇ ರೀತಿಯ ಯಜ್ಞ ನಿಮಿತ್ತದಿಂದ ದಾನ ತೆಗೆದುಕೊಳ್ಳಬಾರದೆಂದು ಯಜ್ಞ ಕಾರ್ಯಗಳಿಗಾಗಿಯೇ ವಿಶೇಷವಾಗಿ ಸೃಷ್ಟಿಸಿದ ಬ್ರಾಹ್ಮಣರಿಗೆ ಬ್ರಹ್ಮನು ಆಜ್ಞೆ ಮಾಡಿದ್ದನು. ಆದರೆ ಒಂದು ಘಳಿಗೆಯ ಮೋಹಕ್ಕೆ ಬಲಿಯಾಗಿ ದಾನಗಳನ್ನು ಸ್ವೀಕರಿಸಿದ ವಿಪ್ರರ ನೋಡಿ, ಬ್ರಹ್ಮನು ಕೋಪದಿಂದ ನಿವೇಲ್ಲಾ ದರಿದ್ರರಾಗಿರಿ ಅಂತ ಶಾಪ ಕೊಟ್ಟನಂತೆ. ಕ್ರಮೇಣ ಸಂಪತ್ತೆಲ್ಲ ನಶಿಸಿ, ಬಂಗಾರ ಬೆಳ್ಳಿಯ ಪರ್ವತಗಳೆಲ್ಲಾ ಶಿಲಾ ಪರ್ವತಗಳಾದುವಂತೆ.
’ಗಯೆ’ಯಲ್ಲಿನ ಈಗಿನ ಪ್ರಸ್ತುತ ಪರಿಸ್ಥಿತಿ ನೊಡಿದರೆ ಈ ಮಾತು ಸತ್ಯ ಅನಿಸುತ್ತದೆ. ದೇವಾಸ್ಥಾನದ ಸುತ್ತ ಬಿಕ್ಷೆ ಬೇಡುವ ಆ ಚಿಕ್ಕ ಚಿಕ್ಕ ಮಕ್ಕಳು, ವಯಸ್ಸಾದ ಮುದುಕರು, ಹೆಣ್ಣು ಮಕ್ಕಳನ್ನು ನೋಡಿದರೆ ಅಯ್ಯೊ ಅನಿಸುತ್ತೆ. ವಿಷ್ಣುವಿನ ದೇವಸ್ಥಾನದ ಸುತ್ತ ಕಾಣುವ ರೌರವ ಕಳೆಯನ್ನು ನೋಡಿದರೆ ಹೆದರಿಕೆ ಆಗುತ್ತದೆ ವಿನಃ ಯಾವ ಭಕ್ತಿ ಭಾವನೆಗಳು ಬರುವದಿಲ್ಲ. ವಿಷ್ಣುಪಾದದ ದರ್ಶನಕ್ಕೆ ಬರುವ ಭಕ್ತಾದಿಗಳು ಹಾಕುವ ಪುರುಸೊತ್ತಿಲ್ಲದೆ ದಕ್ಷೀಣೆಗಳನ್ನು ಬಾಚಿಕೊಳ್ಳುವ ಪೂಜಾರಿಗಳನ್ನು ನೋಡಿದರೆ ಹಫ್ತಾ ವಸೂಲಿ ಮಾಡುವ ರೌಡಿಗಳಂತೆ ಕಾಣುವರು. ಆರತಿ ತಟ್ಟೆಯನ್ನು ಮುಂದೆ ಹಿಡಿದು ಪದೇ ಪದೇ ದಕ್ಷೀಣೆ ಹಾಕಿ ಎಂದು ಸತಾಯಿಸುವ ಪೂಜಾರಿಗಳು. ದೇವನ ಮುಂದೆ ಹೋಗಿ ಒಂದು ನಿಮಿಷ ಕಣ್ಣು ಮುಚ್ಚಿ ನಮಸ್ಕಾರ ಮಾಡಲು ಹೋದರೆ, ಪೂಜಾರಿಗಳ, ’ದಕ್ಷೀಣೆ ಹಾಕಿ, ದಕ್ಷೀಣೆ ಹಾಕಿ ಅನ್ನೊ ಮಾತುಗಳಿಂದ ಅಸಹ್ಯ ಹುಟ್ಟುತ್ತದೆ. ದೇವಸ್ಥಾನದ ಸುತ್ತಮುತ್ತ ಒಂದು ಥರದ ಗುನು ಗುನು ವಾಸನೆ, ತುಂಬಿ ಜೊಮಗುಟ್ಟುವ ನೋಣಗಳ ಸಂತತಿ, ಕಸದ ರಾಶಿ ಯನ್ನು ನೋಡಿದರೆ ಅಲ್ಲಿ ಉಸ್ತುವಾರಿಯವರು ಬರಿ ದುಡ್ಡಿಗಾಗಿ ದೇವಸ್ಥಾನವನ್ನು ಬಳಸಿಕೊಳ್ಳುತ್ತಿದ್ದಾರೇನೊ ಅನಿಸುತ್ತೆ. ಶ್ರಾದ್ಧ ಕಾರ್ಯ ಮುಗಿದ ಮೇಲೆ ಬರುವ ಒಂದು ಗುಂಪು ಅಲ್ಲಿಗೆ ಬಂದ ಪ್ರವಾಸಿಗರ, ಕಾರ್ಯ ಮಾಡಿದ ಜನರನ್ನು ಆ ದಕ್ಷೀಣೆ. ಇ ದಕ್ಷೀಣೆ ಅಂತ ಸುಲಿಗೆ ಮಾಡ್ತಾರೆ. ಕೊಡದಿದ್ದರೆ ರೌಡಿಸಂ ಬೇರೆ.
ಇದೆಲ್ಲ ನೋಡಿದರೆ ಅನಿಸುತ್ತೆ, ’ಗಯೆ’ ಊರು ಎಂದರೆ ’ಗಯಾಸುರ’ ನ ದೇಹ. ಅವನು ಪುಣ್ಯಾತ್ಮನಾದರೂ, ಅವನೊಬ್ಬ ದೈತ್ಯ. ಆದ್ದರಿಂದ ಆ ನೆಲದಲ್ಲಿ ಹುಟ್ಟಿದ ಜನರು ಕೂಡ ರಾಕ್ಷಸ ಗುಣದವರು. ಸ್ವಲ್ಪವಾದರು ಅದರ ಶಕೆ ಇರುವುದೆಂದು ಅಲ್ಲಿಯ ಒರಟು ಜನರ ನೊಡಿದರೇನೆ ಅನಿಸುವುದು. ಒಟ್ಟಿನಲ್ಲಿ ಗಯೆಯೊ-ಮಾಯೆಯೊ. . . .
*****
ನೆಲದಲ್ಲಿ ಹುಟ್ಟಿದ ಜನರು ಕೂಡ ರಾಕ್ಷಸ ಗುಣದವರು . heart less bodies..
ಇದ್ರೂ ಇರಬಹುದು ರಾಕ್ಷಸತನಾ ,,
ಇತ್ತಿತ್ಲಾಗ್ ಹಣಾ ಕಿಳೋ ಮ೦ದಿ ಭಾಳ ಅಗ್ಯಾರ್ ,,,
ಭಕ್ತಿ ಯಾರಿಗೆ ಬೇಕು ? ಧನ ಕನಕಾದಿ ಒ೦ದಿದ್ದರೆ ಸಾಕು ! ನಿನ್ಯಾಕೋ ನಿನ್ನ ಹ೦ಗ್ಯಾಕೋ !ನನ್ನ ಪಾಲು ನನಗೆ ಬ೦ದರೆ ಸಾಕೋ !!! ಅನ್ನೋ ಕೀಳ ಮಟ್ಟಕ್ಕ ಇಳದಾರ….ಜನಾ !!!