ತರಾವರೀ ತರ್ಕ ಮತ್ತು ಹಾಸ್ಯ (ಕೊನೆಯ ಭಾಗ): ಎಂ.ಎಸ್.ನಾರಾಯಣ.

ಇಲ್ಲಿಯವರೆಗೆ

ಚಕ್ರ ತರ್ಕದ ಉದಾಹರಣೆಗಳು ನಿಜಕ್ಕೂ ಬಹಳ ಸ್ವಾರಸ್ಯಕರವಾಗಿರುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ.

೧. ನನ್ನ ಮನೆಯಲ್ಲಿ ನಾನೇ ಯಜಮಾನ, ಹಾಗೆ ಹೇಳಲು ನನಗೆ ನನ್ನ ಹೆಂಡತಿಯ ಅನುಮತಿಯಿದೆ.
೨. ಬೈಬಲ್ಲಿನಲ್ಲಿರುವುದೆಲ್ಲಾ ಸತ್ಯ. ಹಾಗಂತ ಬೈಬಲ್ಲಿನಲ್ಲೇ ಹೇಳಿದೆ.                  
೩. ಈ ಮುಂದಿನ ಹೇಳಿಕೆ ಸುಳ್ಳು. ಹಿಂದಿನ ಹೇಳಿಕೆ ನಿಜ.
೪. ಸಿಗರೇಟು ಬಿಡುವುದು ಬಲು ಸುಲಭ, ನಾನು ಹಲವಾರು ಬಾರಿ ಬಿಟ್ಟಿದ್ದೇನೆ. 
೫. ವೆಂಕನಿಗೆ ಮದುವೆಯಾಗದೆ ಹುಚ್ಚು ಬಿಡುವುದಿಲ್ಲ, ಆದರೆ ಹುಚ್ಚು ಬಿಡದೆ ಮದುವೆಯಾಗುವುದಿಲ್ಲ.
೬. ಅನುಭವವಿದ್ದವರಿಗೆ ಕೆಲಸ ಸಿಗುತ್ತದೆ. ಕೆಲಸ ಸಿಗದೆ ಅನುಭವ ಬರುವುದಿಲ್ಲ.
೭. ಒಬ್ಬ:”ತರ್ಕಶಾಸ್ತ್ರಜ್ಞರಿಗೆ ನಂಬಿಕೆಯಲ್ಲಿ ನಂಬಿಕೆಯಿಲ್ಲ, ಅವರು ಎಲ್ಲವನ್ನೂ ಅನುಮಾನದಿಂದಲೇ ನೋಡುತ್ತಾರೆ”.
    ಇನ್ನೊಬ್ಬ: “ಹಾಗೇನಿಲ್ಲ, ತರ್ಕಶಾಸ್ತ್ರಜ್ಞರಿಗೆ ಅನುಮಾನದ ಮೇಲೆ ನಂಬಿಕೆ ಹೆಚ್ಚು, ಅಷ್ಟೆ.”
೯. ಹೆಂಡತಿ:”ನೀವು ಇಷ್ಟು ಮೂರ್ಖರೆಂದು ಮೊದಲೇ ತಿಳಿದಿದ್ದರೆ ಖಂಡಿತಾ ನಿಮ್ಮನ್ನು ಮದುವೆಯಾಗುತ್ತಿರಲಿಲ್ಲ”.
ಗಂಡ: “ನಿನ್ನೊಂದಿಗೆ ನಾನು ಮದುವೆಯ ಪ್ರಸ್ತಾಪ ಮಾಡಿದಾಗಲೇ ಅರ್ಥಮಾಡಿಕೊಂಡು ತಿರಸ್ಕರಿಸುವ ಕೃಪೆ           ಮಾಡಬಾರದಿತ್ತೆ.”
೧೦. “ಹಾಲಿದ್ದಿದ್ದಿದ್ರೆ, ಕಾಫಿಪುಡಿ, ಸಕ್ರೆ ತಂದು ಕಾಫಿ ಮಾಡಿ ಕುಡಿಯಬಹುದಿತ್ತು!”
೧೧. ಆಶಾವಾದಿಯು ಈ ಜಗತ್ತಿಗಿಂತ ಸ್ವರ್ಗ ಸದೃಶವಾದ ಬೇರೆ ಸ್ಥಳವೇ ಸೃಷ್ಟಿಯಲ್ಲಿ ಇಲ್ಲವೆಂದು ಸಂಭ್ರಮಿಸುತ್ತಾನೆ.
ನಿರಾಶಾವಾದಿಯು ಆಶಾವಾದಿಯ ಗ್ರಹಿಕೆ ನಿಜವಿದ್ದರೂ ಇರಬಹುದೆಂದು ಭಯ ಭೀತನಾಗುತ್ತಾನೆ.
೧೨. ವಿಚಾರವಾದಿ ಯುವಕನೊಬ್ಬ ಹೆಸರಾಂತ ಕಾಲಜ್ಞಾನಿಯೊಬ್ಬನನ್ನು ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಕ್ಕಿಸುವ ಹುನ್ನಾರನಡೆಸಿದ್ದನು. ತನ್ನ ಮುಷ್ಠಿಯಲ್ಲಿ ಒಂದು ಸಣ್ಣ ಹಕ್ಕಿಯನ್ನು ಹಿಡಿದು ಕಾಲಜ್ಞಾನಿಯ ಬಳಿಗೆ ಬಂದ ಆ ಯುವಕನು, “ಸ್ವಾಮೀ, ಸರ್ವಜ್ಞರೆಂದು ಪ್ರಸಿದ್ಧರಾದ ತಮಗೆ ಒಂದು ಸಣ್ಣ ಪರೀಕ್ಷೆ, ನನ್ನ ಕೈಯಲ್ಲಿರುವ ಹಕ್ಕಿ ಬದುಕಿದೆಯೋ ಸತ್ತಿದೆಯೋ ಎಂದು ಸ್ವಲ್ಪ ತಿಳಿಸಬಹುದೇ?” ಎಂದು ಕೇಳಿದನು. ಕಾಲಜ್ಞಾನಿಯು ಹಕ್ಕಿಯು ಬದುಕಿದೆಯೆಂದರೆ, ಯುವಕನು ತನ್ನ ಕೈಯಿಂದ ಹಕ್ಕಿಯನ್ನು ಬಲವಾಗಿ ಅದುಮಿ ಅದನ್ನು ಕೊಂದು ನಂತರ ಕೈ ತೆರೆಯುವನು. ಒಂದುವೇಳೆ ಕಾಲಜ್ಞಾನಿಯು ಹಕ್ಕಿ ಸತ್ತಿರುವುದಾಗಿ ಹೇಳಿದರೆ ಯುವಕನು ಹಾಗೇ ಕೈ ತೆರೆದು ಜೀವಂತ ಹಕ್ಕಿಯನ್ನು ತೋರುವನು. ಒಟ್ಟಿನಲ್ಲಿ ಆ ಯುವಕನು, ಕಾಲಜ್ಞಾನಿಯನ್ನು, ಅವನು ಏನು ಹೇಳಿದರೂ, ಅದು ಸುಳ್ಳಾಗಬೇಕು ಎನ್ನುವಂಥಾ ಪರಿಸ್ಥಿತಿಯಲ್ಲಿ ಸಿಕ್ಕಿಸಿಬಿಟ್ಟನು. ಆಗ ಕಾಲಜ್ಞಾನಿಯು ಯುವಕನನ್ನು ನೋಡಿ ನಗುತ್ತಾ, “ ವತ್ಸಾ, ನೀನು ಕೈಯಲ್ಲಿ ಹಿಡಿದಿರುವ ಹಕ್ಕಿಯ ಜೀವ ನಿನ್ನ ಕೈಯಲ್ಲೇ ಇದೆ” ಎಂದು ಭವಿಷ್ಯ ನುಡಿದು ಸಂದಿಗ್ಧದಿಂದ ಪಾರಾದನು.

ವಕ್ರ ತರ್ಕ:  ನೇರವಲ್ಲದ ತರ್ಕವೇ ವಕ್ರ ತರ್ಕ. ಅನುಮಾನಾತ್ಮಕ ಮತ್ತು ಅನುಗಮನಾತ್ಮಕ ತರ್ಕಗಳಂಥಾ  ಶಾಸ್ತ್ರೀಯ ತರ್ಕ ಪದ್ಧತಿಗಳ ನೇರ ವಿವೇಚನಾ ಕ್ರಮಗಳನ್ನು ಅನುಸರಿಸದೆ, ವಕ್ರವಾಗಿ ಆಲೋಚಿಸುವ ಕ್ರಮಕ್ಕೆ ವಕ್ರತರ್ಕ ಎನ್ನುತ್ತಾರೆ. ‘ಉದ್ದೇಶಪೂರ್ವಕ ಸೃಜನಶೀಲತೆ’ಯ ಪ್ರತಿಪಾದಕನಾದ ಎಡ್ವರ್ಡ್ ಡೀ ಬೋನೋ ಎಂಬ ಆಧುನಿಕ ತರ್ಕಶಾಸ್ತ್ರಜ್ಞನಿಗೆ ವಕ್ರತರ್ಕದ ಪರಿಕಲ್ಪನೆಗೆ ಹೊಸ ಕಾಯಕಲ್ಪ ಕೊಟ್ಟ ಕೀರ್ತಿಯು ಸಲ್ಲುತ್ತದೆ. 1967 ರಲ್ಲಿ ಎಡ್ವರ್ಡ್ ಮೊದಲ ಬಾರಿಗೆ, “ಲ್ಯಾಟೆರಲ್ ಥಿಂಕಿಂಗ್” ಎಂಬ ಪದಪ್ರಯೋಗ ಮಾಡಿ, ಪ್ರಜ್ಞಾಪೂರ್ವಕವಾಗಿ ವಕ್ರವಾದ ಆಲೋಚನಾ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಕ್ಲಿಷ್ಟವಾದ ಸಮಸ್ಯೆಗಳನ್ನು ನಿವಾರಿಸಬಹುದೆಂಬ ಸಿದ್ಧಾಂತವನ್ನು ಪ್ರಸ್ತುತ ಪಡಿಸಿದ್ದಾನೆ. ಈ ಲೇಖನದ ಸೀಮಿತ ಪರಿಧಿಯೊಳಗೆ “ಲ್ಯಾಟೆರಲ್ ಥಿಂಕಿಂಗ್” ಕುರಿತಾದ  ವಿವರವಾದ ಚರ್ಚೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗ ವಕ್ರ ತರ್ಕದ ಉದಾಹರಣೆಗಳನ್ನು ಮಾತ್ರ ನೋಡೋಣ. ಈ ಕೆಳಗಿನ ಹಾಸ್ಯ ಪ್ರಕರಣವನ್ನು ವಕ್ರ ತರ್ಕ ಪ್ರಯೋಗದ ಒಂದು ಉದಾಹರಣೆಯಾಗಿ ಪರಿಗಣಿಸಬಹುದು.

ನಮ್ಮನೇ ಬೀದೀಲೇ ಕೆಳಗಡೆ ನಿಂಗ್ರಾಜನ ಮನೆಯಿದೆ. ಅವರ ಮನೆಯಲ್ಲಿ ಹಸು ಸಾಕಿಕೊಂಡು ಹಾಲಿನ ವ್ಯಾಪಾರ ಮಾಡುತ್ತಾರೆ. ಮೊನ್ನೆ ನಿಂಗ್ರಾಜನ ಅಜ್ಜಿ ನಿಂಗಜ್ಜಿ, ಉರಿಬಿಸಿಲಿನಲ್ಲಿ ಹಸುವಿನೊಂದಿಗೆ ಎಲ್ಲಿಗೋ ಹೊರಟಿದ್ದಳು.  ಹಾಸ್ಯಪ್ರವೃತ್ತಿಗೆ ಹೆಸರಾದ ನಿಂಗಜ್ಜಿಗೆ ವಯಸ್ಸು ಸುಮಾರು ಎಪ್ಪತ್ತೈದರಮೇಲಾಗಿರಬೇಕು. ನಿಂಗಜ್ಜಿ ಕೆಟ್ಟ ನಾಲಿಗೆಯ ಘಾಟಿ ಮುದುಕಿಯಾದರೂ, ಅವಳ ಆಂತರ್ಯದಲ್ಲಿ ಕಪಟವಿರಲಿಲ್ಲ. ಅಂಥಾ ನಿಂಗಜ್ಜಿಯನ್ನ ಕಂಡ ನಾನು ಸುಮ್ಮನಿರಲಾರದೆ, “ಇದ್ಯಾಕ್ ನಿಂಗಜ್ಜಿ, ಈ ಉರ್ಬಿಸ್ಲಲ್ ಅಸ ವೊಡ್ಕೊಂಡ್ ಎಲ್ಗೊಂಟೆ?!” ಅಂದು ಬಿಟ್ಟೆ. ಅದಕ್ಕೆ ಅಜ್ಜಿ “ಅಸ ಈಟುಗ್ಬಂದದಲ್ಲಾಪ್ಪಾ, ಅದ್ಕೆ ಓರಿ ಆರುಸ್ಕಂಬರ್ಮಾಂತ್ ಕರ್ಕವೋಯ್ತಿದ್ದೆ ಕಣ್ಮಗಾ” ಅಂತು. ಅದಕ್ಕೆ ನಾನು “ಅದ್ಸರಿ ನಿಂಗಜ್ಜೀ, ಈ ಬಿಸುಲ್ ಜಳ್ದಲ್ಲೀ, ನೀನೂ….., ಯಾಕ್ನಿಂಗ್ರಾಜ ಇರ್ನಿಲ್ಲ್ವಾ?” ಅಂದೆ. ಅದಕ್ಕವಳು “ಅವನ್ಕೈಲಾಗುಲ್ದು ಕಣ್ಮಗಾ, ಅದಕ್ ಓರಿನೇ ಸರಿ” ಎಂದವಳೆ, ತನ್ನ ಹಲ್ಲಿಲ್ಲದ ಬೊಚ್ಚು ಬಾಯ್ತುಂಬಾ ಪಕಪಕನೆ ಜೋರಾಗಿ ನಕ್ಕುಬಿಟ್ಟಳು. ಈ ಮಾತಿನಿಂದ ಸ್ವಲ್ಪ ಪೆಚ್ಚಾದ ನಾನು “ಹೆಹೆಹೆ” ಎಂದು ಬೆಪ್ಪು ನಗೆ ನಕ್ಕು ಮನೆಯೊಳಗೆ ನಡೆದೆ.  ಈ ನಿಂಗಜ್ಜಿಗೆ ಬಾಯಿ ಕೊಡುವುದೆಂದರೆ ಕೋಲು ಕೊಟ್ಟು ಹೊಡೆಸಿಕೊಂಡಂತೆ ಎಂದನಿಸಿತು. ಆದರೆ ಎಲ್ಲ ಸನ್ನಿವೇಶಗಳಲ್ಲೂ ಹಾಸ್ಯ ಹುಡುಕುವ ನಿಂಗಜ್ಜಿಯ ಹಾಸ್ಯ ಪ್ರಜ್ಞೆಯ ಬಗ್ಗೆ ಮೆಚ್ಚುಗೆಯಾಗದಿರಲಿಲ್ಲ.

ಈ ಮೇಲಿನ ಪ್ರಸಂಗದಲ್ಲಿ, ಉರಿಯುವ ಬಿಸಿಲಿನಲ್ಲಿ ಈ ವಯಸ್ಸಿನಲ್ಲಿ ಪಾಪದ ಮುದುಕಿ ಹಸುವನ್ನು ಹೊಡೆದುಕೊಂಡು ಹೋಗುವುದನ್ನು ಕಂಡ ನನಗೆ ಅನುಕಂಪ ಮೂಡಿತ್ತು. ಹಾಗಾಗಿ ನನಗೆ, ನನ್ನ ನೇರ ತರ್ಕದಲ್ಲಿ ಅವಳು ಮಾಡುತ್ತಿದ್ದ ಕೆಲಸವನ್ನು ನಿಂಗ್ರಾಜ ಮಾಡಬಹುದಿತ್ತಲ್ಲಾ ಎಂದು ಅನ್ನಿಸಿತು. ಹಾಗಾಗಿ “ಅದ್ಸರಿ, ಈ ಬಿಸುಲ್ ಜಳ್ದಲ್ಲೀ, ನೀನೂ….., ಯಾಕ್ನಿಂಗ್ರಾಜ ಇರ್ನಿಲ್ಲ್ವಾ?” ಅಂದು ಬಿಟ್ಟಿದ್ದೆ. ಅದಕ್ಕೆ ತುಂಟ ನಿಂಗಜ್ಜಿಯು ತನ್ನ ಚಾತುರ್ಯದಿಂದ ವಕ್ರ ತರ್ಕವನ್ನು ಬಳಸಿ ಆ ಸನ್ನಿವೇಶದಿಂದ ಹಾಸ್ಯ ಸೃಷ್ಟಿಸಿದ್ದಳು. ಇದೇ ವಕ್ರ ತರ್ಕವನ್ನಾಧರಿಸಿದ ಅಸಂಖ್ಯಾತ ನಗೆಹನಿಗಳು ಬಹಳ ಜನಪ್ರಿಯವಾಗಿವೆ. “ಚೌಡಯ್ಯನ ಪಿಟೀಲು ಕೇಳಿದೆಯಾ?” ಎಂಬ ಪ್ರಶ್ನೆಗೆ “ಕೇಳ್ದೆ, ಕೊಡಲ್ಲಾಂತನ್ಬುಟ್ಟ್ರು” ಎಂದುತ್ತರಿಸಿದರಂತೆ! ಈ ನಗೆಹನಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂಥದ್ದೇ. ಇದರಲ್ಲಿ ಪ್ರಶ್ನೆ ಮಾಡುವವನು ನೇರತರ್ಕದಿಂದ,  ಚೌಡಯ್ಯನವರ ಪಿಟೀಲು ವಾದನವನ್ನು ಅಂದರೆ ಸಂಗೀತವನ್ನು ಕೇಳಿದೆಯಾ ಎಂದು ಪ್ರಶ್ನಿಸಿರುತ್ತಾನೆ. ಸಾಮಾನ್ಯ ಜ್ಞಾನವಿರುವ ಯಾರಾದರೂ, ಸಂವಾದದ ನೆಲೆಗಟ್ಟಿನಲ್ಲಿ ಇದನ್ನು ಮೇಲ್ನೋಟಕ್ಕೇ ತಿಳಿದುಕೊಳ್ಳಬಹುದು. ಆದರೆ ಈ ಪ್ರಶ್ನೆಗೆ ಉತ್ತರಿಸುವವನು ಆಡುಮಾತಿನಲ್ಲಿ ಕೇಳಲಾದ ಈ ಪ್ರಶ್ನೆಯು ಅರ್ಥವಾದರೂ ಬೇಕೆಂದೇ ತನ್ನ ವಕ್ರವಾದ ಆಲೋಚನೆಯಿಂದ “ಚೌಡಯ್ಯನ ಪಿಟೀಲನ್ನೇ (ವಾದ್ಯವನ್ನೇ) ಕೇಳಿದೆಯಾ” ಎಂಬರ್ಥದಲ್ಲಿ ಗ್ರಹಿಸಿದಂತೆ ಉತ್ತರಿಸಿ ಹಾಸ್ಯ ಸೃಷ್ಟಿಸುತ್ತಾನೆ. ಈಗ ವಕ್ರತರ್ಕವನ್ನಾಧರಿಸಿದ ಕೆಲವು ಹಾಸ್ಯೋಕ್ತಿ ಹಾಗೂ ನಗೆಹನಿಗಳ ಉದಾಹರಣೆಗಳನ್ನು ನೋಡೋಣ.

೧. ಹೆಂಡತಿ: ವಯ್ಯಾರದಿಂದನಾಚುತ್ತಾ, “ನೀವು ನನಲ್ಲಿ ಏನನ್ನು ತುಂಬಾ ಇಷ್ಟ ಪಡುತ್ತೀರಿ?, ನನ್ನ ಮುದ್ದಾದ ಮುಖಾರವಿಂದವನ್ನೋ  ಇಲ್ಲ, ನನ್ನ ಈ ಮಾಟವಾದ ಮೈ ಸಿರಿಯನ್ನೋ?”
ಗಂಡ: ಹೆಂಡತಿಯನ್ನು ಮೇಲಿಂದ ಕೆಳಗಿನವರೆಗೂ ನೋಡಿ, “ನಿನ್ನ ಅದ್ಭುತವಾದ ಹಾಸ್ಯ ಪ್ರಜ್ಞೆಯನ್ನು! ”.
೨. ಹೆಂಡತಿ: ಯಾವಾಗಲೂ ವೃತ್ತಪತ್ರಿಕೆಯೊಂದಿಗೇ ಕಾಲ ಕಳೆಯುತ್ತಿದ್ದ ಗಂಡನನ್ನು ಕುರಿತು, “ ನನಗ್ಯಾಕೋ ನಾನು ನ್ಯೂಸ್ ಪೇಪರ್ರಾಗಿರ್ಬೇಕಾಗಿತ್ತೂ ಅಂತಾಸೆ ಆಗ್ತಿದೆ ಕಣ್ರೀ, ಆವಾಗ್ಲಾದ್ರೂ ನೀವು ನನ್ನನ್ನ ಗಮನಿಸ್ತಿದ್ರೀ ಅನ್ಸುತ್ತೆ”
ಗಂಡ: “ ನಿಜ ಕಣೆ ಆವಾಗ ನನಗೂ ದಿನಾ ಒಂದೊಂದು ಹೊಸಾ ಪೇಪರ್ ಸಿಕ್ಕೋ ಚಾನ್ಸ್ ಇರ್ತಾಯಿತ್ತು.”
೩. ಸಾಮಾನ್ಯವಾಗಿ ಚೈತನ್ಯದ ಚಿಲುಮೆಯಂತಿರುತ್ತಿದ್ದ ನೆರೆಮನೆಯ ವೆಂಕಮ್ಮನವರು ಗರಬಡಿದವರಂತೆ ನಿಸ್ತೇಜರಾಗಿ ಕುಳಿತದ್ದನ್ನು ಕಂಡ ನನ್ನಾಕೆ ಕಳಕಳಿಯಿಂದ, “ ಇದೇನಾಯ್ತು ವೆಂಕಮ್ನೋರೇ ಹಿಂಗ್ ಕೂತ್ಬುಟ್ರೀ?” ಎನ್ನಲು, ವೆಂಕಮ್ಮನವರು, “ಅಯ್ಯೋ ಅದ್ಯಾಕ್ ಕೇಳ್ತಿ ಮಾರಾಯ್ತೀ, ಬೆಳಗ್ಗೆ ಹಸೀ ಮೆಣ್ಸಿನ್ಕಾಯಿ ತರ್ತೀನೀಂತ್ ಹೋದ್ನಮ್ಮೆಜಮಾನ್ರು, ಬಿದ್ಬುಟ್ಟು ಮೈ ಕೈಯೆಲ್ಲಾ ಗಾಯಮಾಡ್ಕೊಂಡು, ಹಾಗೇ ವಾಪಸ್ಸಾದ್ರೂ ಕಣೇ” ಎಂದು ಪ್ರಲಾಪಿಸಿದರು.  ಅದಕ್ಕೆ ನನ್ನ ಹೆಂಡತಿ ಗಾಬರಿಯಿಂದ, “ಅಯ್ಯೋ ದೇವ್ರೆ! ಮತ್ತೀಗೇನ್ಮಾಡಿದ್ರೀ?” ಎಂದಾಗ ವೆಂಕಮ್ಮನವರು “ಇನ್ನೇನ್ಮಾಡೋದಮ್ಮ, ಜೀವನದಲ್ ಬರೋದೆಲ್ಲಾ ಎದುರಿಸ್ಲೇ ಬೇಕಲ್ಲ, ಒಣ ಮೆಣ್ಸಿನ್ ಕಾಯ್ನೇ ಹಾಕ್ ಚೆಟ್ನಿ ರುಬ್ಕೊಂಡೆ” ಎನ್ನುವುದೇ?
೪. ಹೆಂಡತಿ: “ನಾನು ಎವರೆಸ್ಟ್ ಏರಿದರೆ ನೀವು ನನಗೇನು ಕೊಡುತ್ತೀರಿ?”
ಗಂಡ: “ಒಂದು ಜೆಂಟಲ್ ಪುಶ್”.
೫. ನಮ್ಮ ಭವಿಷ್ಯ ನಮ್ಮ ಕನಸುಗಳ ಮೇಲೆ ಅವಲಂಬಿಸಿರುತ್ತದಂತೆ, ಹಾಗಾಗಿ ಯಾವಾಗಲೂ ಚೆನ್ನಾಗಿ ನಿದ್ದೆ ಮಾಡಬೇಕು.
೬. ಮಗು: “ ಅಮ್ಮಾ, ಈವತ್ ಅಪ್ಪ ಬಸ್ನಲ್ಲಿ ಆಂಟೀಗೆ ಸೀಟ್ ಬಿಟ್ಕೊಡಕ್ ಹೇಳಿದ್ರು.”
ಅಮ್ಮ: “ಒಳ್ಳೇದು ಮಗೂ, ಪರೋಪಕಾರ ಮತ್ತು ತ್ಯಾಗದ ಗುಣಗಳನ್ನು ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಳ್ಳಬೇಕು”
ಮಗು: “ಆದ್ರೆ, ಅಮ್ಮಾ ನಾನಾಗ ಅಪ್ಪನ ತೊಡೆ ಮೇಲ್ಕೂತಿದ್ದೆ”
೭. “ಎಲ್ಲರೂ ಪ್ರಾಣಿಗಳನ್ನು ಪ್ರೀತಿಸಬೇಕು. ಅವು ನಿಜಕ್ಕೂ ತುಂಬಾ ರುಚಿಕರವಾಗಿರುತ್ತವೆ.”
೮. ಡಾಕ್ಟರ್: “ನೋಡೀಮ್ಮಾ, ನಿಮ್ಮ ಪತಿಗೆ ಶಾಂತಿ ಮತ್ತು ವಿಶ್ರಾಂತಿಯ ಬಹಳ ಅಗತ್ಯವಿದೆ, ನಾನು ಕೆಲವು ನಿದ್ದೆ ಮಾತ್ರೆಗಳನ್ನ ಕೊಟ್ಟಿರ್ತೀನಿ….”
ಅಷ್ಟರಲ್ಲಿ, ಆಕೆ: “ಈ ಮಾತ್ರೆಗಳನ್ನು ಇವ್ರಿಗೆ ಯಾವ್ಯಾವ ಹೊತ್ಗೆ ಎಷ್ಟೆಷ್ಟ್ ಕೊಡ್ಬೇಕು ಡಾಕ್ಟ್ರೆ?”
ಡಾಕ್ಟರ್: “ನೋಡೀಮ್ಮಾ, ನಾನೀ ಮಾತ್ರೆಗಳನ್ನ ಕೊಟ್ಟಿರೋದು ನಿಮಗೆ ತೊಗೋಳೊದಕ್ಕೆ!”.
೯. ಮೊನ್ನೆ ಹಾಲಿನ ಡೈರಿಯಲ್ಲಿ ‘ಶುದ್ಧವಾದ ಹಸುವಿನ ಹಾಲು ದೊರೆಯುತ್ತದೆ’ ಎಂಬ ಫಲಕವನ್ನು ನೋಡಿದ ಶುದ್ಧ ತರ್ಲೆ ಗ್ರಾಹಕನೊಬ್ಬ,  “ ಅಸ ಸುದ್ದ ಇರದಿರ್ಲೀ, ಆಲ್ ಸುದ್ದ್ವಾಗಿದ್ದದೇನಪ್ಪಾ?” ಎಂದು ಕ್ಯಾತೆ ತೆಗೆದಿದ್ದ.

ಒಟ್ಟಾರೆಯಾಗಿ ಹೇಳುವುದಾದರೆ, ತರ್ಕ ಶಾಸ್ತ್ರವು ಮಾನವನ ಜೀವನದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ದೈದಂದಿನ ಆಗುಹೋಗುಗಳಲ್ಲಿ ನಮ್ಮ ವರ್ತನೆ, ನಡವಳಿಕೆಗಳು ತಾರ್ಕಿಕವಾಗಿಲ್ಲದಿದ್ದರೆ, ಸಮಾಜದಲ್ಲಿ ಹುಚ್ಚರೆಂದು ಕರೆಸಿಕೊಳ್ಳುವ ಅಪಾಯವಿರುತ್ತದೆ. ಇನ್ನು ಕಲೆ, ವಿಜ್ಞಾನ, ಸಮಾಜಶಾಸ್ತ್ರಗಳ ಅಧ್ಯಯನಕ್ಕೆ ತರ್ಕದ ಅರಿವು ಅತ್ಯಗತ್ಯ. ಗಣಿತ ಶಾಸ್ತ್ರ ಮತ್ತು ತರ್ಕಶಾಸ್ತ್ರಗಳನ್ನು ಒಂದೇ ನಾಣ್ಯದ ಎರಡು ಮುಖಗಳೆನ್ನುತ್ತಾರೆ. ಇವೆರಡನ್ನೂ ಆಧಾರವಾಗಿಸಿಕೊಂಡು ವಿಜ್ಞಾನವು ಪ್ರಗತಿ ಹೊಂದುತ್ತದೆ. ಇನ್ನು ತತ್ವಶಾಸ್ತ್ರವಂತೂ ತರ್ಕಶಾಸ್ತ್ರದ ಬುನಾದಿಯ ಮೇಲೆಯೇ ನಿಲ್ಲುತ್ತದೆ. ವಿಪರ್ಯಾಸವೆಂದರೆ, ಧರ್ಮಗಳು ತರ್ಕವನ್ನು ಆಧಾರವಾಗಿಸಿಕೊಂಡರೂ ಆಧ್ಯಾತ್ಮದಲ್ಲಿ ತರ್ಕಕ್ಕೆ ಯಾವುದೇ ಪ್ರಾಶಸ್ತ್ಯವಿಲ್ಲ. ಅಂತಿಮ ಸತ್ಯವೆನ್ನುವುದು ತರ್ಕಾತೀತವೆಂಬುದು ಜ್ಞಾನಿಗಳ, ಅನುಬಾವಿಗಳ ಒಮ್ಮತದ ಅಭಿಪ್ರಾಯ. ತರ್ಕವನ್ನು ಬದಿಗಿರಿಸದೇ ಸಾಕ್ಷಾತ್ಕಾರ ಸಾಧ್ಯವಾಗುವುದಿಲ್ಲ ಎಂಬುದನ್ನು ಆಧ್ಯಾತ್ಮ ವಲಯಗಳಲ್ಲಿ ಎಲ್ಲರೂ ಒಪ್ಪುತ್ತಾರೆ. ಆದರೆ ಉಳಿದಂತೆ ಮಾನವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತರ್ಕ ಶಕ್ತಿಯು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ಇತರ  ವಿಚಾರಗಳಂತೆಯೇ ತರ್ಕದ ವಿಚಾರದಲ್ಲಿಯೂ ಅಳತೆಯ ಅರಿವು ಬಹಳ ಮುಖ್ಯವಾಗುತ್ತದೆ. ರವೀಂದ್ರ ನಾಥ ಟ್ಯಾಗೋರರ ತರ್ಕದ ಕುರಿತಾದ ಮಾರ್ಮಿಕವಾದ ಮಾತೊಂದು ಈ ವಿಷಯದ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತದೆ. “ ಬರೀ ತರ್ಕಮಯವಾದ ಮನಸ್ಸು ಮೈಯೆಲ್ಲಾ ಅಲುಗಾದ ಕತ್ತಿಯ ಹಾಗೆ, ಅದು ತನ್ನನ್ನು ಬಳಸುವ ಕೈಗಳನ್ನು ಘಾಸಿಗೊಳಿಸುತ್ತದೆ.” ಎಂಬ ಈ ಹೇಳಿಕೆಯು, ನಾವು ಜಾಗರೂಕತೆಯಿಂದ ತರ್ಕದ ಸೂಕ್ತ ಬಳಕೆ ಮಾಡಬೇಕೆಂದು ನಮ್ಮನ್ನು ಎಚ್ಚರಿಸುತ್ತದೆ. ಅದೇ ರೀತಿ ಜೋಸೆಫ್ ವುಡ್ ಕ್ರಚ್ ಎಂಬಾತನ, “ತರ್ಕವು ಆತ್ಮವಿಶ್ವಾಸದಿಂದ ಹಾದಿ ತಪ್ಪುವ ಕಲೆ” ಎಂಬ ಹಾಸ್ಯೋಕ್ತಿ ತರ್ಕದಿಂದಾಗಬಲ್ಲ ಅಪಾಯದ ಕುರಿತು ಜಾಗೃತಿ ಮೂಡಿಸುತ್ತದೆ.

ಇನ್ನು, ತರ್ಕಶಾಸ್ತ್ರಕ್ಕೂ ಹಾಸ್ಯಕ್ಕೂ ಅನಾದಿಕಾಲದ ಬಿಡಿಸಲಾರದ ನಂಟಿದೆ. ನಿತ್ಯ ಜೀವನದಲ್ಲಿ ನಿರೀಕ್ಷಿತ ತಾರ್ಕಿಕ ಪ್ರತಿಕ್ರಿಯೆಗಳಿಗಿಂತ ವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾದಲ್ಲೆಲ್ಲಾ ಹಾಸ್ಯ ರಸದ ಉತ್ಪಾದನೆ ಆಗುತ್ತದೆ. ನಮ್ಮ  ದೈನಂದಿನ ವ್ಯವಹಾರಗಳಲ್ಲಿ ಉಂಟಾಗುವ ತರ್ಕದೋಷಗಳನ್ನು ನಿಜವಾಗಿ ನಗೆಹನಿಗಳ ಕಾರ್ಖಾನೆಗಳೆನ್ನಬಹುದು. ನಾನು ಗಮನಿಸಿದಂತೆ ಹಾಸ್ಯ ಚಟಾಕಿಗಳ ಲೋಕದಲ್ಲಿ ಚಕ್ರತರ್ಕ ಮತ್ತು ವಕ್ರತರ್ಕಗಳಿಗೆ ವಿಶೇಷವಾದ ಸ್ಥಾನವಿದೆ. ವಿವಿಧ ತರ್ಕದೋಷಗಳಿಂದ ಆವಿರ್ಭವಿಸುವ ಕೆಲವು ನಗೆಹನಿಗಳನ್ನು ಗಮನಿಸಿ ಅವುಗಳ ಹಿಂದಿನ ತರ್ಕವನ್ನು  ಗುರುತಿಸಿ, ವಿಶ್ಲೇಷಿಸುವುದರಿಂದ ಹಾಸ್ಯದ ನಿಜ ಸ್ವರೂಪವನ್ನು ತಿಳಿಯಬಹುದು. ಹಾಗೆ ನೋಡಿದರೆ, ಹಾಸ್ಯ ಚಟಾಕಿಗಳ ವಿಷಯದಲ್ಲಿ ಕಾಪಿರೈಟ್ ಸಂಸ್ಕೃತಿ ಕಡಿಮೆಯೆಂದೇ ಹೇಳಬೇಕು. ಹಾಸ್ಯ ಯಾರಪ್ಪನ ಮನೆಯ ಸ್ವತ್ತೂ ಅಲ್ಲವೆಂದಿರಬೇಕು, ಸಾಮಾನ್ಯವಾಗಿ ನಗೆಹನಿಗಳ ಸಂಗ್ರಹಗಳಲ್ಲಿ ಅವುಗಳ ಲೇಖಕರ ಹೆಸರುಗಳು ಸಹ ಪ್ರಕಟಗೊಳ್ಳುವುದಿಲ್ಲ. ಬಹುತೇಕ, ಹಾಸ್ಯ ಬ್ರಹ್ಮರು ಉದಾರ ಮನಸ್ಕರಾಗಿದ್ದು ಕೃತಿ ಸ್ವಾಮ್ಯತೆಯ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಂತೆಯೂ ಕಾಣುವುದಿಲ್ಲ. ಹಾಗಾಗಿ, ಬಹುಶಃ, ಮನುಷ್ಯನ ಅನನ್ಯ ಹಾಸ್ಯ ಪ್ರಜ್ಞೆಗೊಂದು ಮಹಾನಮನ ಸಲ್ಲಿಸಿ ಎಲ್ಲಿಂದ ಕದ್ದರೂ ತಪ್ಪೇನಿಲ್ಲವೇನೋ? ಹಾಗಾಗಿ ಈ ಲೇಖನದುದ್ದಕ್ಕೂ ನಾನು ಎಲ್ಲೆಲ್ಲೋ ಕೇಳಿರುವ, ಓದಿರುವ ಕೆಲವು ಹಾಸ್ಯೋಕ್ತಿ ಹಾಗೂ ನಗೆಹನಿಗಳ ಸಂಕಲನ ಮಾಡಿ, ಅಲ್ಲಲ್ಲಿ ನನ್ನ ಒಗ್ಗರಣೆಯನ್ನೂ ಸ್ವಲ್ಪ ಸೇರಿಸಿ ಬಳಸಿಕೊಂಡಿದ್ದೇನೆ. ನಾನು ವಿಶೇಷವಾಗಿ, ನಿಮಗೆಂದೇ ಅತ್ಯಂತ ಕಾಳಜಿಯಿಂದ ಆಯ್ದಿರುವ ಈ ನಗೆಹನಿಗಳು ನಿಮ್ಮನ್ನು ಬೋರು ಹೊಡೆಸುವುದಿಲ್ಲವೆಂಬ ಪರಿಪೂರ್ಣ ವಿಶ್ವಾಸ ನನಗಿದೆ. ಅಲ್ಲದೇ, ಸಂಗೀತ ಜ್ಞಾನ ಉಳ್ಳವರು ಹಾಡೊಂದನ್ನು ಕೇಳಿದೊಡನೆ ಅದರ ರಾಗವನ್ನು ಗುರುತಿಸುವಂತೆ ಈ ಲೇಖನದ ಓದುಗರು ಇನ್ನು ಮುಂದೆ ನಗೆಹನಿಗಳನ್ನು ಕಂಡೊಡನೆ ಅವುಗಳ ಹಿಂದಿನ ತರ್ಕಗಳನ್ನು ಗುರುತಿಸಲು ಈ ಉದಾಹರಣೆಗಳು ಸಹಕಾರಿಯಾಗುತ್ತವೆ. ಹಾಗಾಗಿ, ಚಕ್ರ ತರ್ಕ ಹಾಗೂ ವಕ್ರತರ್ಕಗಳಿಗೆ ತುಸು ಹೆಚ್ಚೆನಿಸುವಷ್ಟೇ ಉದಾಹರಣೆಗಳನ್ನು ಕೊಟ್ಟುಬಿಟ್ಟಿದ್ದೇನೆ. ಓದಿ ಆನಂದಿಸಿದ್ದೀರೆಂದು ನಂಬುತ್ತೇನೆ. 

******
       

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Soory Hardalli
Soory Hardalli
9 years ago

Good readable article. Thank you. We expect more like this from you.

Santhoshkumar LM
9 years ago

Narayan Bro,

ನಿಜಕ್ಕೂ ಬೇಸರವಾಯ್ತು…….ಇದು ಲೇಖನದ ಕಡೆಯ ಕಂತು ಅಂತ ಗೊತ್ತಾಗಿ……Really enjoyed all the jokes and their background details. You should continue writing such articles. Thank you for such a nice interesting article.
 

Prasanna
Prasanna
9 years ago

Good one. Enjoyed reading it 🙂

Narayan Sankaran
Narayan Sankaran
9 years ago
Reply to  Prasanna

Thanks Suri,Santhu and Prasanna.

Ramacharan
Ramacharan
9 years ago

Had no doubts on your writing abilites and skills but honestly had no idea that you can give a humours touch to your writing… Enjoyed reading Sir….

SHYLAJA
SHYLAJA
9 years ago

bareeri.chennagide.

Sudha
8 years ago

Narayana your articles are really too good.we will b expecting more Articles from you..

ರಾಶಂಗಪ್ರ
ರಾಶಂಗಪ್ರ
3 years ago

Better late than never ಎಂಬ ಉಕ್ತಿಯು ಈ ಲೇಖನವನ್ನು ಓದಿದ ಮೇಲೆ ತರ್ಕಬದ್ಧವಾಗಿದೆ ಎನಿಸಿತು. ಬರೆಯುವುದನ್ನು ನಿಲ್ಲಿಸದಿರು ಮಗನೇ ಕನ್ನಡದಲ್ಲೂ!!!

8
0
Would love your thoughts, please comment.x
()
x