ಕಾಣೆಯಾದವರು !!!: ಸತೀಶ್ ಶೆಟ್ಟಿ ವಕ್ವಾಡಿ

“ಸಾರ್, ಸಾರ್, ನಾಗೇಶ್ ಮೇಸ್ಟ್ರು ಕಾಣೆಯಾಗಿದ್ದರಂತೆ !!.” ಬೆಳ್ಳಂ ಬೆಳಿಗ್ಗೆ ಪ್ರಾಂಶುಪಾಲರ ಕಚೇರಿಗೆ ಎದುರುಸಿರು ಬಿಡುತ್ತಾ ನುಗ್ಗಿದ ಕಾಲೇಜು ಕ್ಲರ್ಕ್ ರೂಪ ಗಾಬರಿ ಮತ್ತು ದುಗುಡದಿಂದ ಹೇಳಿದಾಗ, ಪ್ರಾಂಶುಪಾಲರಾದ ನಾರಾಯಣ ಉಪಾಧ್ಯಾಯರಿಗೆ ಜೀವ ಬಾಯಿಗೆ ಬಂದಂತಾಯಿತು. ಆಗ ತಾನೆ ಕಾಲೇಜಿಗೆ ಬಂದು ತಮ್ಮ ಛೇಂಬರಿನ ದೇವಮೂಲೆಯಲ್ಲಿದ ದೇವರ ಫೋಟೋಕ್ಕೆ ಹೂ ಹಾರಹಾಕಿ, ಉದುಕಡ್ಡಿ ಹಚ್ಚುತ್ತಿದ್ದವರಿಗೆ ರೂಪ ಹೇಳಿದ ವಿಷಯ ಬರಸಿಡಿಲು ಬಡಿದಂತಾಯಿತು. ಕೈಲಲ್ಲಿದ್ದ ಉದುಕಡ್ಡಿಯನ್ನು ಅಲ್ಲೆ ಬಿಟ್ಟು ಸೀದಾ ಸಿಟಿಗೆ ಬಂದು ಕೂತ ಉಪಾಧ್ಯಾಯರು ಗಾಬರಿಗೆ ಪಕ್ಕದಲ್ಲಿದ್ದ ಒಂದು ಬಾಟಲಿ ನೀರನ್ನು ಒಂದೇ ಗುಟುಕಿಗೆ ಖಾಲಿಮಾಡಿದರು.

“ಅಲ್ಲಾ ರೂಪ, ನಿನ್ನೆ ನೀನೆ ಹೇಳಿದ್ದೀಯಲ್ಲಾ , ನಾಗೇಶ್ ಮೇಸ್ಟ್ರು ತೀರ್ಥಹಳ್ಳಿಯಲ್ಲಿರುವ ಅವರ ಅಕ್ಕನ ಮನೆಗೆ ಹೋಗಿದ್ದಾರೆ ಅಂತ.ಈಗ ನೋಡಿದರೆ ಹೀಗೆ ಹೇಳ್ತಿದ್ದಿಯಲ್ಲಾ, ಏನ್ ಕಥೆ, ಏನಾಯ್ತು ಬಿಡಿಸಿ ಹೇಳಮ್ಮ ” ಗಾಬರಿಯಿಂದ ಪ್ರಾಂಶುಪಾಲರ ಮಾತುಗಳು ನಡುಗುತ್ತಿದ್ದವು.
“ಸರ್ ಎಲ್ಲರೂ ಹಾಂಗೆ ತಿಳಿದಿದ್ದರು. ನಿಮ್ಗೆಗೊತ್ತಲ್ಲ ಸರ್, ಈ ನಾಗೇಶ್ ಮೇಸ್ಟ್ರು ಒಂತರ ಇಂಗ್ರುಟಿ ಅಂತ, ಎಲ್ಲಿಗೆ ಹೋಗ್ತಾರೆ, ಯಾವಾಗ ಬರ್ತಾರೆ ಅಂತ ಯಾರಿಗೂ ಹೇಳುದಿಲ್ಲ. ಮೊನ್ನೆ ಶನಿವಾರ ಸಂಜೆ ಮನೆಯಿಂದ ಹೋದ್ರಂತೆ. ಅವರ ತಂದೆ ಏನೋ ಅಕ್ಕನಮನೆಗೆ ಹೋಗಿರಬೇಕು ಅಂದ್ಕೊಂಡಿದ್ರಂತೆ, ಶನಿವಾರ ಕೆಲವೊಮ್ಮೆ ಹಾಂಗೆ ಮಾಡ್ತಾರಂತೆ, ಸೋಮವಾರ ಬೆಳಿಗ್ಗೆ ಮನೆಗೆ ಬರುವರಂತೆ, ಆದ್ರೆ ನಿನ್ನೆ ಸಂಜೆ ತಂಕ ಬರ್ದೇ ಇದ್ದಾಗ ತೀರ್ಥಹಳ್ಳಿಗೆ ಫೋನ್ ಮಾಡಿ ಕೇಳಿದ್ರೆ ಈ ಆಸಾಮಿ ಅಲ್ಲಿಗೆ ಹೋಗೆ ಇಲ್ಲ ಅಂತೇ. ಮೊಬೈಲ್ ಫೋನ್ ಬೇರೆ ಸ್ವಿಚ್ ಆಫ್ ಅಂತೇ, ಈಗ ಬೆಳಿಗ್ಗೆ ಅವರ ಅಪ್ಪ ಹೆಬ್ರಿ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ರು ಅಂತೇ, ಅವ್ರ್ ಪಕ್ಕಮನೆ ಹುಡುಗ ನಮ್ಮ ಸೆಕೆಂಡ್ ಪಿಯು ಅನಿಕೇತ ಹೇಳ್ದ. ನಾನು ಅವರ ಮನೆಗೆ ಫೋನ್ ಮಾಡಿ ವಿಚಾರಿಸಿದೆ, ಎಲ್ಲ ಗಾಬರಿಯಾಗಿದ್ದರೆ ” ಮಾತು ಮುಗಿಸುವ ಹೊತ್ತಿಗೆ ರೂಪಾಳ ಕೆನ್ನೆಯಮೇಲೆ ನೀರು ಹನಿಯುಕ್ಕುತ್ತಿತ್ತು.
” ಸರಿ ನೋಡೋಣ, ನೀವೇನು ಗಾಬರಿಯಾಗ ಬೇಡಿ, ನೀವ್ ಹೋಗಿ ಆ ಸದಾಶಿವ ಮೇಸ್ಟ್ರುನ ಕಳ್ಸಿ ” ಅಂತ ಪ್ರಾಂಶುಪಾಲರು ರೂಪಾಳನ್ನು ಹೊರಗೆ ಕಳುಹಿಸಿದರು.

“ಅಲ್ಲ ಸದಾಶಿವರೇ , ಈ ನಾಗೇಶನಿಗೇನು ಮರ್ಲ್ ಹಿಡ್ದಿದ್ಯ , ಎಲ್ಲಿಗೆ ಹೋತಿ ಅಂತ ಹೇಳಿ ಹ್ವಾಪುಕ್ ಎಂತ ದಾಡಿಯ ? ಪಾಪ ವಯಾಸ್ಸಾದ ಅಪ್ಪ ಅಬ್ಬಿ ಕಷ್ಟ ಗೊತ್ತಾತಿಯ್ಲ್ಯಾ ಅವನಿಗೆ, ಬಾಯಿ ತೆರೆದ್ರೆ ವೇದಾಂತ ಮಾತಾಡುತ್ತಾನೆ, ಮಾಡೋದು ಮಾತ್ರ ಇಂತ ದರಿದ್ರದ್ ಕೆಲ್ಸ, ನಿಮ್ಮ ಹತ್ರ ಸ್ವಲ್ಪ ಕ್ಲೋಸ್ ಇರ್ತ ಅಲ್ದಾ, ಎಂತಾರು ಪ್ರಾಬ್ಲಮ್ ಇದ್ದೀಯ , ಹೇಳಿದ್ನ್ಯಾ ? ” ಚಿಂತೆಯ ಮುಖ ಹೊದ್ದು ಕೆದರಿದ ತಲೆ ಕೂದಲನ್ನು ಬಾಚಿಕೊಳ್ಳುತ್ತಲೇ ತನ್ನ ಛೇಂಬರಿಗೆ ಓಡಿ ಬಂದ ಏಕಾಮಿಕ್ಸ್ ಲೆಕ್ಚರ್ ಸದಾಶಿವ ಕಿಣಿಯಲ್ಲಿ ಉಪಾಧ್ಯಾಯರು ಪ್ರಶ್ನಿಸಿದರು .
“ಇಲ್ಲ ಸರ್ , ಅಂವ ಅಂತ ಪರ್ಸನಲ್ ವಿಷ್ಯಗಳನ್ನು ನನ್ನ ಹತ್ತಿರ ಜಾಸ್ತಿ ಹೇಳ್ಕೊಳ್ಳೊಲ್ಲ. ಮನೆಯಲ್ಲಿ ಅಂತ ತೊಂದ್ರೆ ಏನು ಇದ್ದಂತಿಲ್ಲ. ದೊಡ್ಡ ಸಾಲಾ ಗೀಲಾ ಏನು ಇಲ್ಲ. ಮನೆ ರಿಪೇರಿಗೆ ಅಂತ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಐವತ್ತು ಸಾವಿರ ಸಾಲ ಮಾಡಿದ್ದ. ಅದಕ್ಕೆ ನಾನೇ ಜಾಮೀನು ಹಾಕಿದ್ದೆ. ಅದು ತಿಂಗಳ ಸಂಬಳದಲ್ಲಿ ಕಟ್ ಆಗ್ತಾ ಇದೆ, ಅದು ಬಿಟ್ರೆ ಆಗಾಗ ರೂಪಾಳ ವಿಷಯ ಮಾತಾಡ್ತಾ ಇದ್ದ,ಅವಳಿಗೆ ಇವನನ್ನು ಮದುವೆಯಾಗಬೇಕು ಅಂತ ಆಸೆ, ಆದ್ರೆ ನಾಗೇಶನಿಗೆ ಮದುವೆ ಸಂಸಾರದ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲ, ಅದ್ರ ಬಗ್ಗೆ ಇವಳ ಬಿಟ್ರೆ ಅಂವ ಏನೂ ತಲೆ ಕೆಡಿಸಿಕೊಂಡಿಲ್ಲ. ನಂಗೆ ವಿಷಯ ತಿಳಿದಾಗಿಂದ ತಲೆ ಕೆಟ್ಟು ಹೋಗಿದೆ. ಓಡಿ ಹೋಗುವಂತವನಲ್ಲ ನಾಗೇಶ್. ಯಾಕೋ ಏನೋ ಆಗಿದೆ ಅವನಿಗೆ ಅನ್ನಿಸ್ತಿದೆ ” ಸದಾಶಿವ ಕಿಣಿಯ ವರದಿಯಲ್ಲಿ ಉಪಾಧ್ಯಾಯರಿಗೆ ಯಾವ ಸುಳಿವು ಸಿಗಲಿಲ್ಲ.
“ಸರಿ ಸದಾಶಿವರೇ, ಸ್ವಲ್ಪ ವಿಚಾರಿಸಿ, ಸಾದ್ಯವಾದರೆ ಸಂಜೆ ನಾಗೇಶನ ಮನೆಗೆ ಹೋಗಿ ಬನ್ನಿ” ಅಂದ ಪ್ರಾಂಶುಪಾಲರ ಮಾತಿಗೆ ತಲೆತೂಗಿದ ಸದಾಶಿವ ಕಿಣಿ ಕ್ಲಾಸ್ ರೂಮ್ ಕಡೆಗೆ ಹೆಜ್ಜೆ ಹಾಕಿದರು.

ಅದು ಖಾಸಗಿ ಪದವಿಪೂರ್ವ ಕಾಲೇಜು . ಇರುವುದು ಹೆಬ್ರಿ ಸಮೀಪದ ಸಂತೆಕಟ್ಟೆಯಲ್ಲಿ. ನಾಗೇಶ ಇಲ್ಲಿ ಹೈಸ್ಕೂಲು ವಿಭಾಗದ ಕನ್ನಡ ಮೇಸ್ಟ್ರು. ಃ .ಇಆ ಪದವೀಧರ, ಸರಕಾರೀ ಕೆಲಸಕ್ಕೆ ಬಹಳಷ್ಟು ಪ್ರಯತ್ನ ಪಟ್ಟು ಈಗ ಅದರ ಆಸೆ ಬಿಟ್ಟು, ಕಳೆದ ಹತ್ತು ವರ್ಷದಿಂದ ಇಲ್ಲಿ ಶಿಕ್ಷಕನಾಗಿ ಕೆಲಸಮಾಡುತ್ತಿದ್ದಾನೆ. ನಾಗೇಶನ ಊರು ಸೀತಾನದಿ ಎಂಬ ಹಳ್ಳಿ. ಇವನ ತಂದೆ ತಿಮ್ಮಯ್ಯ ಪೂಜಾರರಿಗೆ ಇಬ್ಬರು ಮಕ್ಕಳು. ದೊಡ್ಡವಳು ನಾಗರತ್ನ, ಮದುವೆಯಾಗಿ ತೀರ್ಥಹಳ್ಳಿಯಲ್ಲಿ ಇದ್ದಾಳೆ. ಎರಡು ಎಕರೆ ಅಡಿಕೆತೋಟ , ಒಂದಷ್ಟು ಬತ್ತದ ಗದ್ದೆ ನಾಗೇಶನಿಗೆ ಬಂದ ಪಿತ್ರಾರ್ಜಿತ ಆಸ್ತಿ. ಸರಕಾರಿ ಕೆಲಸ ಸಿಗುವ ತನಕ ಮದುವೆ ಆಗೋಲ್ಲ ಅಂತ ಕೂತ ನಾಗೇಶನಿಗೀಗ ಮೂವತೈದು ವರ್ಷ. ಇನ್ನು ಸರಕಾರಿ ಕೆಲಸ ಮರೀಚಿಕೆ ಅಂತ ಗೊತ್ತಾದ ಮೇಲಂತೂ ಮದುವೆ ಬಗ್ಗೆಯೂ ವೈರಾಗ್ಯ ಬಂದು ಬಿಟ್ಟಿತ್ತು. ಆದರೆ ಕಾಲೇಜಿನ ಕ್ಲರ್ಕ್ ರೂಪಾಗೆ ನಾಗೇಶನ ಮೇಲೆ ಒಲುಮೆ, ಕಳೆದ ಎರಡು ವರ್ಷದಿಂನ ಮದುವೆಯಾಗೋಣ ಅಂತ ಆತನ ಬೆನ್ನು ಬಿದ್ದಿದ್ದಾಳೆ. ಇಬ್ಬರದ್ದು ಒಂದೇ ಜಾತಿ , ಆದರೂ ನಾಗೇಶನಿಗೆ ಮಾತ್ರ ಮದುವೆ ಮದುವೆ ವಿಷಯದಲ್ಲಿ ವಿರಾಗಿ. “ದಯವಿಟ್ಟು ರೂಪಾಗೆ ಬೇರೆ ಹುಡುಗನನ್ನು ಮದುವೆಯಾಗಲು ಹೇಳಿ, ನನ್ನಂಥವನನ್ನು ಮದುವೆಯಾಗಿ ಆಕೆ ಕಷ್ಟ ಪಡುವುದು ಬೇಡ. ” ಆವತ್ತು ತನ್ನಲ್ಲಿ ರೂಪಾಳ ವಿಷಯ ಪ್ರಸ್ತಾಪಿಸದ ಪ್ರಾಂಶುಪಾಲರಲ್ಲಿ ಹೇಳಿದ್ದ.
ನಾಗೇಶನೆಂದರೆ ಪ್ರಾಂಶುಪಾಲರಿಗೆ ಎಲ್ಲಿಲ್ಲದ ಅಕ್ಕರೆ. ಇಡೀ ಕಾಲೇಜಿನಲ್ಲಿ ಇವನಷ್ಟು ಚುರುಕಿನ ಮೇಸ್ಟ್ರು ಇನ್ನೊಬ್ಬರು ಸಿಗಲಾರರು ಅನ್ನುವುದು ವಿದ್ಯಾರ್ಥಿಗಳ ಮನದಾಳದ ಮಾತು. ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ ಅದಕ್ಕೆ ನಾಗೇಶನೇ ಮುಂದಾಳಾಗುತ್ತಿದ್ದ. ಎಲ್ಲ ಜವಾಬ್ಧಾರಿಗಳನ್ನು ಹೆಗಲ ಮೇಲೆ ಹಾಕಿಕೊಂಡು ಅದು ಮುಗಿಯುವವರೆಗೂ ವಿಶ್ರಮಿಸುವ ಜೀವ ಅವನದ್ದಾಗಿರಲಿಲ್ಲ. ಜೊತೆಗೆ ಬರಹಗಾರ ಕೂಡ. ಆತನ ಅನೇಕ ಸಮಾಜಮುಖಿ ಲೇಖನಗಳು ಯಾವಾಗಲೂ ಪತ್ರಿಕೆ ಮತ್ತು ಆಕಾಶವಾಣಿಗಳಲ್ಲಿ ಬಿತ್ತರವಾಗುತ್ತಿದ್ದವು.

“ಅಲ್ಲಾ ಸದಾಶಿವರೇ , ಇವತ್ತಿಗೆ ಹತ್ತು ದಿನವಾಯಿತು, ಇನ್ನು ನಾಗೇಶ ಪತ್ತೆಯಾಗಿಲ್ಲ. ನಾವೇ ಮುಂದೆ ನಿಂತು ಎಲ್ಲ ಪೇಪರ್ ಗಳಲ್ಲಿ ಪ್ರಕಟಣೆ ನೀಡಿದ್ದಾಯಿತು, ಏನ್ ಕಥೇರಿ ಇದು. ಅವ್ನ ಜೀವಕ್ಕೇನಾದರೂ ಹೆಚ್ಕಮ್ಮಿ ಆಯ್ತಾ ಅಂತ ಭಯ ನಂಗೆ ” ನಾರಾಯಣ ಉಪಾಧ್ಯಾಯರು ತಲೆ ಮೇಲೆ ಕೈ ಹೊತ್ತು ಕುಂತಿದ್ದರು
“ನನಗೂ ಅದೇ ಡೌಟ್ ಸರ್, ಇತ್ತೀಚಿಗೆ ಅವನ ಸಮಾಜವಾದಿ ಚಿಂತನೆ ಸ್ವಲ್ಪ ಜಾಸ್ತಿಯಾಗಿತ್ತು , ಕೆಲವು ದಿನಗಳ ಹಿಂದೆ ಅವನ ಪುಸ್ತಕ ಬಿಡುಗಡೆಯಾಯಿತಲ್ಲ , ಅದರಲ್ಲಿ ನಕ್ಸಲೇಟ್ ಪರ ಸರಕಾರದ ವಿರುದ್ಧ ಬರೆದಿದ್ದ. ಅವನ ಮನೆ ಬೇರೆ ಸೀತಾನದಿ, ನಕ್ಸಲೇಟ್ ಪೀಡಿತ ಊರು. ಇವ್ನಿಗೂ ಮತ್ತು ನಕ್ಸಲೇಟ್ಗೆ ಸಂಬಂಧ ಇರಬಹುದೆಂದು ಪೊಲೀಸ್ ಎಲ್ಲಾದರೂ ಹಿಡ್ಕೊಂಡ ಹೋಗಿರಬಹುದು ಅಂತ ಡೌಟ್. ಮಿಸ್ಸಿಂಗ್ ಕೇಸ್ ನ ಪೊಲೀಸ್ ಸೀರಿಯಸ್ ಆಗಿ ತಕೊಳ್ತಾ ಇರದೇ ಇರೋದ್ ನೋಡ್ರೆ ನಂಗೆ ಅನ್ನಿಸ್ತಾ ಇದೆ . ಸಾವಿರ ಸಲ ಹೇಳ್ದೆ ಅದೆಲ್ಲ ಬೇಡ ಅಂತ, ಕೇಳಿಲ್ಲ ಬಡ್ಡಿ ಮಗ. ಈಗ ನೋಡಿ ಸರ್, ನಮ್ಮೆಲ್ಲರ ಬಾಯಿಗೆ ಜೀವ ತಂದಿಟ್ಟ. ” ಸದಾಶಿವ ಮೇಸ್ಟ್ರ ಮಾತಲ್ಲೂ ಆವೇಶದ ಜೊತೆಗೆ ನೋವಿತ್ತು.

ಆದರೆ ಉಪಧ್ಯಾಯರಿಗೆ ಸದಾಶಿವ ಕಿಣಿಯ ಮಾತಲ್ಲಿ ನಂಬಿಕೆ ಹುಟ್ಟಲಿಲ್ಲ.ಕಾರಣ ಹಾಳಾಗಿಹೋಗಲಿ, ನಾಗೇಶ ಬೇಗ ಹಿಂತಿರುಗಿದರೆ ಸಾಕು ಅಂತ ಪ್ರತಿದಿನದಂತೆ ಇಂದು ಸಹ ದೇವರಿಗೆ ದೀಪ ಹಚ್ಚುವಾಗ ಬೇಡಿಕೊಳ್ಳುವುದನ್ನು ಮರೆಯಲಿಲ್ಲ .
ಮತ್ತೆ ಐದು ದಿನಗಳು ಉರುಳಿದವು. ನಾಗೇಶನ ಸುಳಿವು ಸಿಗಲಿಲ್ಲ. ಪತ್ರಿಕೆ ಮತ್ತು ಆಕಾಶವಾಣಿಯಲ್ಲಿ ನೀಡಿದ ಪ್ರಕಟಣೆಗಳು ಯಾವ ಫಲವನ್ನು ನೀಡಲಿಲ್ಲ. ಪ್ರಾಂಶುಪಾಲರ ಛೇಂಬರಿಗೆ ಬಂದ ಸದಾಶಿವ ಕಿಣಿ, ಎಂದಿನಂತೆ ಸ್ವಲ್ಪ ವಿಭಿನ್ನವಾಗಿ ನಾಗೇಶನ ನಾಪತ್ತೆ ಪ್ರಕರಣದ ವರದಿ ಒಪ್ಪಿಸಿದರು.

” ಸರ್ , ನಿನ್ನೆ ಸಂಜೆ ನಾಗೇಶನ ಮನೆಗೆ ಹೋಗಿದ್ದೆ, ಅವ್ನ್ ಅಮ್ಮ ಸುಗಂಧಿಯಕ್ಕ ಇದ್ರು, ಪಾಪ ಆ ಹೆಂಗ್ಸಿನ ಮುಖ ನೋಡುಕೆ ಆಗ್ಲಿಲ್ಲ. ಎಷ್ಟೇ ಆದರೂ ಹೆತ್ತ ಮಗನಲ್ಲವೆ ?. ನನ್ನ ನೋಡಿದ ಕೂಡಲೇ ಜೋರಾಗಿ ಅತ್ತುಬಿಟ್ಟರು. ಎಲ್ಲೂ ಸುಳಿವು ಸಿಕ್ಕಿಲ್ಲವಂತೆ. ಪೊಲೀಸ್ ನವರು ಏನೂ ಹೇಳ್ತ ಇಲ್ಲಂತೆ. ಮನೆ ಮಂದಿಯೆಲ್ಲ ಹೆದ್ರುಕೊಂಡಿದ್ದಾರೆ. ಆದ್ರೆ ಅವರ ಹತ್ರ ಮಾತಾಡುವಾಗ ಒಂದು ವಿಷಯ ತಿಳಿಯಿತು, ಅದನ್ನು ಅವ್ರು ಪೋಲಿಸರಿಗೂ ಕೂಡ ತಿಳಿಸಿದ್ದರಂತೆ, ನನಗ್ಯಾಕೋ ನಾಗೇಶ ಕಾಣೆಯಾಗಿದ್ದು ಇದೆ ಕಾರಣಕ್ಕೆ ಅನ್ನಿಸುತ್ತದೆ ” ಸದಾಶಿವ ಕಿಣಿ ಪತ್ತೇದಾರಿ ಕತೆ ತರಹ ಮಾತನಾಡಲು ಆರಂಭಿಸಿದ್ದು ನಾರಾಯಣ ಉಪಾಧ್ಯಾಯರಿಗೆ ಕಿರಿಕಿರಿ ಅನ್ನಿಸಿತು.
“ಸದಾಶಿವರೇ ಇದು ಕತೆಯಲ್ಲ , ವ್ಯಥೆ ,ಸೀದಾ ವಿಷ್ಯಕ್ಕೆ ಬನ್ನಿ ” ಉಪಾಧ್ಯಾಯರ ಧ್ವನಿಯಲ್ಲಿದ್ದ ಗದರಿಕೆಯನ್ನು ಗಮನಿಸಿದ ಕಿಣಿಯವರು ಮಾತು ಮುಂದುವರಿಸಿದರು
” ಸರ್, ಈ ನಾಗೇಶ ನಾಪತ್ತೆಯಾಗುವುದಕ್ಕೆ ಮೂರು ದಿನದ ಮುಂಚೆ ಒಂದು ಕಾಗದ ಬಂದಿತ್ತಂತೆ, ಅವನು ಮನೆಯಲ್ಲಿಯೇ ಇರುವಾಗ ಪೋಸ್ಟ್ ಮ್ಯಾನ್ ಶಂಕರ ಮರಕಾಲ ತಂದು ಕೊಟ್ನಂತೆ, ಆಗ ಅಲ್ಲೇ ಇದ್ದ ಸುಗಂಧಿಯಕ್ಕ ಯಾರದ್ದು ಆ ಕಾಗ್ದ ಅಂತ ಕೇಳಿದಕ್ಕೆ , ಅದ್ಕೆ ನಾಗೇಶ್ ” ಯಾರದ್ದು ಅಂತ ಗೊತ್ತಿಲ್ಲ, ಫ್ರಮ್ ಅಡ್ರೆಸ್ ಬರೆದಿಲ್ಲ. ಪೋಸ್ಟ್ ಸೀಲ್ ಮತ್ತು ಪಿನ್ ಕೋಡ್ ನೋಡಿದ್ರೆ ಮುಂಬೈ ಕಡೆಯದ್ದು ತರ ಇದೆ , ನೋಡ್ತೀನಿ ಇರು ” ಅಂದವ ಕಾಗ್ದ ತಕ್ಕೊಂಡು ಉಪ್ಪರಿಗೆಗೆ ಹೋಗಿದ್ದನಂತೆ. ಒಂದು ಗಂಟೆ ಕೆಳಗೆ ಬರಲೇ ಇಲ್ಲವಂತೆ. ಬಂದ ಮೇಲೆ ಏನು ಹೇಳದೆ ಮನೆ ಎದುರಿನ ತೋಟಕ್ಕೆ ಹೋಗಿ ಮರದ ಕಟ್ಟೆ ಮೇಲೆ ಸುಮಾರು ಹೊತ್ತು ಕೂತಿದ್ದನಂತೆ, ಎರಡು ಮೂರೂ ದಿನ ಪೂರ್ತಿ ಮೌನಿಯಾಗಿದ್ದನಂತೆ. ಅದೇ ಸರ್, ಹುಷಾರಿಲ್ಲ ಅಂತ ಹದಿನೈದು ದಿನದ ಹಿಂದೆ ಹೇಳ್ತ ಇದ್ದಾನಲ್ಲ, ಬಹುಶ: ಆ ಕಾಗದದ ಪ್ರಬಾವ ಇದ್ದಿರಬೇಕು , ಆ ಟೈಂನಲ್ಲಿ ಆತ ಯಾರ ಹತ್ರಾನೂ ಸರಿಯಾಗಿ ಮಾತು ಆಡಲಿಲ್ಲ ಅಂತೇ. ಮಾತು ಮಾತಿಗೂ ಸಿಟ್ಟು ಮಾಡಿಕೊಳ್ತಿದ್ದನಂತೆ, ಆ ಕಾಗ್ದ ಯಾರದ್ದು ಅಂತ ಕೇಳಿದರೆ ‘ ನನ್ ಹಳೆ ಫ್ರೆಂಡಿದ್ದು’ ಅಂತ ಹೇಳ್ತಿದ್ದನಂತೆ , ಇದಾದ ಮೂರೇ ದಿನಕ್ಕೆ ನಾಗೇಶ ಮಿಸ್ಸಿಂಗ್ , ಆಮೇಲೆ ಆ ಕಾಗದಕ್ಕಾಗಿ ಮನೆಯಲ್ಲ ಹುಡುಕಿಕರು ಎಲ್ಲೂ ಸಿಗಲಿಲ್ಲವಂತೆ, ನನಗ್ಯಾಕೋ ಆ ಕಾಗದದ ಮೇಲೇನೆ ಸಂಶಯ. ” ಸದಾಶಿವ ಕಿಣಿಯವರ ಇವತ್ತಿನ ದೈನಂದಿನ ವರದಿಯ ಹೊಸ ವಿಷಯ ಪ್ರಾಂಶುಪಾಲರ ತಲೆ ಕೆಡಿಸಿತ್ತು.
ಒಂದು ಕಾಗದ ಬಂದ ಕೊಡಲೇ ನಾಪತ್ತೆಯಾಗುವಂತದ್ದೇನಿರುತ್ತೆ. ಇರಲಿಕ್ಕಿಲ್ಲ, ಇದು ಒಂದು ಕಾಕತಾಳೀಯ ಅಷ್ಟೇ, ಹಾಗಾದರೆ ನಾಗೇಶ್ ಏನಾದ, ಪಾಪ ಕಷ್ಟ ಅಂತಹ ಕಷ್ಟ ಇದ್ರೆ ನಮ್ಮಲ್ಲಿ ಹೇಳಿಕೊಳ್ಳ ಬಹುದಾಗಿತ್ತಲ್ಲ , ಉಪದ್ಯಾಯರ ಯೋಚನಾಲಹರಿ ದಿಕ್ಕುತೋಚದೆ ವಿಲವಿಲನೆ ಒದ್ದಾಡುತ್ತಿತ್ತು.

****

ಉಡುಪಿಯಿಂದ ಹೊರಟ ಬಸ್ಸು ಮಣಿಪಾಲವನ್ನು ದಾಟಿ ಹೆಬ್ರಿ ಕಡೆಗೆ ಸಾಗುತ್ತಿತ್ತು. .ಆಗಷ್ಟೇ ಮಳೆ ಬಂದು ಹೋಗಿದ್ದರಿಂದ ರಸ್ತೆಯ ಮೇಲೆ ಹರಿಯುತ್ತಿದ್ದ ನೀರು ಬಸ್ಸಿನ ಟೈಯರ್ ಗೆ ಸಿಲುಕಿ ಕಾರಂಜಿಯಂತೆ ಚಿಮ್ಮುತ್ತಿದ್ದವು, ಬಸ್ಸಿನ ಮದ್ಯದ ಸೀಟಿನಲ್ಲಿ ಕುಳಿತು ಕಿಟಿಕಿಯಾಚೆಗೆ ದೃಷ್ಟಿ ಹಾಯಿಸಿ ಸುಮಂತನಿಗೆ ಹಸಿರಿನ ಮಡಿಲಿನಿಂದ ಮುಖಕ್ಕೆ ಅಪ್ಪಳಿಸುತ್ತಿದ್ದ ತಂಗಾಳಿ ಅಪರಿಚಿತ ಲೋಕವನ್ನು ಪರಿಚಯಿಸುವ ಸಾಹಸ ಮಾಡುತ್ತಿತ್ತು. ಎಂದೋ ನೋಡಿದ ಊರುಗಳು ಇಂದು ಹೊಸಬಣ್ಣದ ಚಾದರ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದ್ದವು . ರಸ್ತೆ ಪಕ್ಕದ ಬೋರ್ಡುಗಳಲ್ಲಿ ಒಂದೊಂದೇ ಊರಿನ ಹೆಸರು ಓದುತ್ತಿದ್ದ ಹಾಗೆ ಸುಮಂತ ರೋಮಾಂಚನಗೊಳ್ಳುತ್ತಿದ್ದ. ಸುಮಂತನಿಗೆ ಪ್ರತಿ ಊರನ್ನು ಓದಿಕೊಂಡು ಚಾದರ ಹೊದ್ದು ಮಲಗಿದ್ದ ತನ್ನ ನೆನಪುಗಳನ್ನು ಹೊರತೆಗೆದು ಪರಿಚಯಿಸಿಕೊಳ್ಳುವ ಹಂಬಲವಾದರೆ , ಆ ಊರುಗಳ ಪಾಲಿಗೆ ಸುಮಂತ ಅಪರಿಚಿತ ಪಯಣಿಗ. ಇಪ್ಪತ್ತು ವರ್ಷದ ಹಿಂದೆ ಇದೆ ಪರಿಚಿತ ಊರುಗಳನ್ನು ದಾಟಿ ಅಪರಿಚಿತ ಲೋಕಕ್ಕೆ ನೆಡೆದವ , ಇಂದು ಆ ಅಪರಿಚಿತ ಲೋಕಕ್ಕೆ ಪರಿಚಿತನಾದರೆ , ಈ ಪರಿಚಿತ ಊರುಗಳಿಗೆ ಅಪರಿಚಿತನೇ.

ಬಸ್ಸು ಹೆಬ್ರಿಗೆ ಸ್ವಲ್ಪ ಸ್ವಲ್ಪವೇ ಹತ್ತಿರವಾಗುತ್ತಿದ್ದಂತೆ , ಸುಮಂತ ಕೈಕಾಲು ಸಣ್ಣಗೆ ನಡುಗಲಾರಂಭಿಸಿತು, ಒಂದೆಡೆ ಇಪ್ಪತ್ತು ವರ್ಷ ಬಳಿಕ ಊರಿಗೆ ಬರುವ ಖುಷಿಯಾದರೆ, ಮತ್ತೊಂದೆಡೆ ಅಂದು ತಾನು ತೊರೆದು ಹೋದ ಜನರನ್ನು ಹೇಗೆ ಎದುರಿಸುವುದೆನ್ನುವ ಭಯ ಮತ್ತು ಆತಂಕ ಮಿಶ್ರೀತ ಖುಷಿ . ಇಪ್ಪತ್ತು ವರ್ಷಗಳಲ್ಲಿ ಊರುಗಳಂತೂ ಗುರುತು ಸಿಗದಷ್ಟು ಬದಲಾಗಿದೆ, ಜೊತೆಯ ಊರುಗಳು ಹೊತ್ತುಕೊಂಡಿರುವ ಜನಜೀವನ ಕೂಡ . ಮನುಷ್ಯ ವರ್ಷಗಳು ಉರುಳಿದನಂತೆ ಮುದುಕನಾಗುತ್ತಿದ್ದರೆ ಊರುಗಳು ಮೈಕೈ ತುಂಬಿಕೊಂಡು ನವ ವಧುವರರಂತೆ ಕಾಣಿಸುತ್ತಿದ್ದವು. ಅಂದು ಓಡಾಡಿದ್ದ ಉಡುಪಿ, ಮಣಿಪಾಲಗಳು ಇಂದು ಅವೇನಾ ಅನ್ನುವಷ್ಟರ ಮಟ್ಟಿಗೆ ಬದುಕು ಬದಲಾಸಿವೆ. ಇವುಗಳ ತರಹವೇ ಬದಲಾದ ಹೆಬ್ರಿ, ಸೀತಾನದಿ, , ಶೆಟ್ರ ಅಂಗಡಿ, ಕಿಣಿಯವರ ಹೋಟೆಲ್ , ಬಸ್ ಸ್ಟ್ಯಾಂಡು, ಅದಕ್ಕೆ ಅಂಟಿಕೊಂಡ ಪೋಸ್ಟಾಫೀಸು , ರಾಮಚಂದ್ರನ ಟೈಲರ್ ಅಂಗಡಿ, ಅಂಗನವಾಡಿ ಶಾಲೆ, ಯುವಕ ಮಂಡಲದ ಬಿಲ್ಡಿಂಗ್, ಶಾಲೆ ಮೈದಾನ ಎಲ್ಲಾ ಬದಲಾಗಿರಲೇ ಬೇಕು , ಜೊತೆಗೆ ಸೀತಾನದಿಯ ಜನ ಕೂಡ. ಬದಲಾದವರಿಗೆಲ್ಲ ನಾನು ಅಪರಿಚಿತ, ಇಪ್ಪತ್ತು ವರ್ಷದ ಹಿಂದೆ ನನ್ನ ಕಳೆದುಕೊಂಡ ನನ್ನ ಮನೆಯವರಿಗೂ ಕೂಡ !.

‘ ತಂಗಿಗೆ ಮದುವೆಯಾಗಿದೆಯಂತೆ, ಹೇಗಿರಬಹುದು ತಂಗಿಯ ಗಂಡ ?. ತಮ್ಮನದ್ದು ಹೆಬ್ರಿಯಲ್ಲಿ ಕಲ್ಲು ಕೋರೆ ವ್ಯವಹಾರ ಅಂತೇ , ಬಿಸಿನೆಸ್ ಜೋರಾಗಿರಬಹುದೇನೋ, ಅಪ್ಪನಿಗೇನೋ ಬಿಪಿ ಜಾಸ್ತಿಯಾಗಿದೆಯಂತೆ, ಅಮ್ಮನಿಗೆ ಕಳೆದ ಎರಡು ವರ್ಷದಿಂದ ಕಾಲು ನೋವಂತೆ, ನಡೆದಾಡಲು ಕಷ್ಟ. ತಮ್ಮನಿಗೆ ಅಪ್ಪ ಹುಡುಗಿ ಹುಡುಕುತ್ತಿದ್ದಾರಂತೆ, ಮೊದಲು ಮನೆ ಕಟ್ಟೋಣ ಆಮೇಲೆ ಮದುವೆ ಅಂತ ತಮ್ಮ ಅಂತಿದ್ದಾನಂತೆ, ‘ ಸುಮಂತನ ಮನವೆಲ್ಲ ಮನೆಯವರ ಬಗ್ಗೆನೇ ಯೋಚಿಸುತ್ತಿತ್ತು. ‘ ಬಹುಶ: ನನ್ನ ಕ್ಲಾಸ್ ಮೆಟ್ ಗೆಲ್ಲ ಮದುವೆಯಾಗಿ ಮಡಿಲಿಗೊಂದೆರಡು ಮಕ್ಕಳು ಬಂದಿರಬಹುದೇನೋ’ ಎಂಬ ವಿಷಯವೊಂದು ಸುಮಂತನ ಮನಃ ಪಟಲದಲ್ಲಿ ಸುಳಿದಾಡಿ ಮುಖದಲ್ಲಿನ ಕಿರುನಗೆಗೆ ಕಾರಣೀಭೂತವಾಯಿತು.
ಬಸ್ಸಿನ ವೇಗ ಇನ್ನಷ್ಟು ಹೆಚ್ಕಾಯಿತು. ಮತ್ತೆ ಮಳೆ ತನ್ನ ಒಡ್ಡೋಲಗ ಆರಂಭಿಸಿತು. ಬಸ್ಸಿನ ಗ್ಲಾಸ್ ಹಾಕಿದಮೇಲೆ ಸುಮಂತನಿಗೆ ಹೊರಗಿನ ದೃಶ್ಯ ಅಸ್ಪಷ್ಟವಾಯಿತು. ಧೋ ಎನ್ನುವ ಮಳೆಯ ಶಬ್ದ ಬಸ್ಸಿನ ಶಬ್ಬವನ್ನು ಸೋಲಿಸಿ ಅಟ್ಟಹಾಸಗೈಯುತ್ತಿತ್ತು. ಸೂರ್ಯನನ್ನು ತಮ್ಮ ಸೆರೆಯಾಳುವನ್ನಾಗಿಸಿದ ಮೋಡಗಳಿಂದ ಬಸ್ಸಿನ ಹೆಡ್ ಲೈಟುಗಳಿಗೆ ಹಗಲಲ್ಲೇ ಮತ್ತೆ ಕೆಲಸ ಆರಂಭವಾಯಿತು. ಬಸ್ಸಿನಾಚೆ ಏನು ಕಾಣದಾದಾಗ ಸೀಟಿಗೊರಗಿ ಕಣ್ಣು ಮುಚ್ಚಿದ ಸುಮಂತನ ಕಣ್ಣೊಳಗೆ ಹಳೆಯ ನೆನಪುಗಳ ಮೆರವಣಿಗೆ ಆರಂಭವಾಯಿತು.

ಸುಮಂತ ಸೀತಾನದಿಯ ಶ್ರೀನಿವಾಸ ಶೆಟ್ರ ಮೊದಲ ಮಗ. ಅಪ್ಪ ಊರಲ್ಲಿ ದೊಡ್ಡ ಹೆಸರುಮಾಡಿದವರು. ಒಂದು ಕಾಲದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಆಗಿದ್ದವರು, ರಾಜಕೀಯ ಪಕ್ಷವೊಂದರ ಹೆಬ್ರಿ ಬ್ಲಾಕ್ ಅಧ್ಯಕ್ಶರಾಗಿದ್ದವರು. ತಂದೆಯಂತೆ ಮಗನು ಸಹ ಬುದ್ದಿವಂತ. ಏಳನೇ ಕ್ಲಾಸಲ್ಲಿ ಶಾಲೆಗೇ ಫಸ್ಟ್ ಬಂದ ಮಗನನ್ನು ಸೀತಾನದಿಯಲ್ಲಿ ಹೈಸ್ಕೂಲ್ ಇದ್ದರೂ ಹೆಬ್ರಿಯ ಖಾಸಗಿ ಹೈಸ್ಕೂಲಿಗೆ ಸೇರಿಸಿದ್ದರು. ಮೊದಲು ಎರಡು ಕಿಲೋಮೀಟರ್ ನೆಡೆದುಕೊಂಡು ಶಾಲೆಗೇ ಹೋಗುತ್ತಿದ್ದ ಸುಮಂತನಿಗೀಗ ಬಸ್ ಭಾಗ್ಯ. ಸುಮಂತ ಬೇಗನೆ ಪೇಟೆ ಮತ್ತು ಪೇಟೆ ಶಾಲೆಗೆ ಹೊಂದಿಕೊಂಡ. ಓದಿನ ಜೊತೆಗೆ ಇತರ ಆಟೋಟ ಚಟುವಟಿಕೆಯಲ್ಲೂ ಶಾಲೆಯಲ್ಲಿ ಹೆಸರು ಮಾಡಿದ. ಸೀತಾನದಿಯ ಸುಮಂತನ ಪ್ರೈಮರಿ ಕ್ಲಾಸ್ ಮೇಟ್ ಆದ ನಾಗೇಶ ಮತ್ತು ಪ್ರಾಣೇಶರು ಸಹ ಹೆಬ್ರಿ ಹೈಸ್ಕೂಲ್ ನಲ್ಲಿ ಆತನ ಜೊತೆಗಾರರಾದರು. ಮೂವರು ಜೊತೆಯಾಗಿಯೇ ಶಾಲೆಗೆಹೋಗುತ್ತಿದ್ದರು. ನಾಗೇಶ್ ಸ್ವಲ್ಪ ಮೌನಿಯಾದರೆ, ಪ್ರಾಣೇಶ ಸಿಕ್ಕಾಪಟ್ಟೆ ತರಲೆ ಹುಡುಗ. ಸುಮಂತನಿಗೆ ನಾಗೇಶ ಅಂದ್ರೆ ಪಂಚಪ್ರಾಣ. ಇಬ್ಬರು ಒಂದನೇ ತರಗತಿಯಿಂದ ಒಂದೇ ಬೆಂಚಲ್ಲಿ ಅಕ್ಕ ಪಕ್ಕ ಕುಳಿತು ಕಲಿತವರು ಮತ್ತು ಕಲೆತವರು.

ಸುಮಂತನ ಬದುಕಲ್ಲಿ ಯಾರು ಯೋಚಿಸದಂತಹ ತಿರುವು ನೀಡಿದ್ದು ನವೆಂಬರ್ ತಿಂಗಳ ಆ ಸಂಜೆ. ದೀಪಾವಳಿ ಹಬ್ಬ ಆಗಷ್ಟೇ ಮುಗಿದಿತ್ತು. ಮೂವರಿಗೂ ಕ್ರಿಕೆಟ್ ಎಂದರೆ ಪರಮ ಹುಚ್ಚು. ಅಂದು ಶಾಲೆಗೆ ಹೋದವರು ಬಸ್ಸು ಇಳಿದು ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ನೆನ್ನೆ ನೆಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ಮ್ಯಾಚ್ ನ ಬಗ್ಗೆ ವಿಮರ್ಶೆ ಶುರುವಿಟ್ಟುಕೊಂಡರು. ನಿನ್ನೆ ನೆಡೆದ ಮ್ಯಾಚ್ ನಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ ಎಡವಟ್ಟಿನಿಂದ ರಾಹುಲ್ ದ್ರಾವಿಡ್ ರನ್ ಔಟ್ ಆಗಿದ್ದ. ಸುಮಂತನಿಗೆ ದ್ರಾವಿಡ್ ಇಷ್ಟ ಮತ್ತು ಪ್ರಾಣೇಶನಿಗೆ ಸಚಿನ್ ಅಂದರೆ ಪ್ರಾಣ. ಸಚಿನ್ ಬೇಕಂತಲೇ ರಾಹುಲ್ ನ ರನ್ ಔಟ್ ಮಾಡ್ದ ಅಂತ ಸುಮಂತ ತಗಾದೆ ಎತ್ತಿದ.

“ವಿಕೆಟ್ ಹತ್ರ ಬಾಲ್ ಇದ್ರೂ ,ಸಚಿನ್ ಬೇಡ ಬೇಡ ಅಂದ್ರು ದ್ರಾವಿಡ್ ಯಾಕೆ ಓದಿ ಬಂದದ್ದು. ಅವನ್ ಕಣ್ ಹೊಟ್ಟಿ ಹೋಯಿತಾ ” ಪ್ರಾಣೇಶ್ ರೇಗತೊಡಗಿದ
” ಬೇಡ ಅಂತ ಜೋರಾಗಿ ಕೂಗುಕೆ ಸಚಿನನ ಗಂಟಲಲ್ಲಿ ಕಪ್ಪೆ ಕೂಕಂಡಿತ್ತ ” ಸುಮಂತ ಕೂಗಾಡಿದ.
” ಸಚಿನ ಜೋರಾಗಿಯೇ ಕೂಗಿದ, ಜನರ ಗಲಾಟೆಯಲ್ಲಿ ದ್ರಾವಿಡ್ ಗೆ ಕೇಳ್ಸಿಲ್ಲ ಇರಬೇಕ. ಅವ್ನಿಗೆ ಗಡಿಬಿಡಿ ಎಂತಕ್ಕೆ ”
” ಎಂತಕಂಡ್ರೆ ಅಲ್ಲಿ ರನ್ ರೇಟ್ ಇರ್ಲಿಲ್ಲ , ಸಚಿನ್ ಸೆಂಚುರಿ ಮಾಡ್ಕ್ ಅಂತ 92 ರನ್ ಆದ್ಮೇಲೆ 2 ರನ್ ಮಾಡುಕೆ 12 ಬಾಲ್ ತಿಂದ್ನಲ್ಲ ಅದಕ್ಕೆ ”
“ಏನಿಲ್ಲ ಸೆಂಚುರಿ ಆದ್ಮೇಲೆ ಸಚಿನ್ ಅದ್ನೇಲ್ಲ ಬಡ್ಡಿ ಸಮೇತ ವಸೂಲಿ ಮಾಡ್ತಿದ್ದ , ದ್ರಾವಿಡ್ ಗೆ ಗಡಿಬಿಡಿ ಜಾಸ್ತಿ ಐತ ಅಷ್ಟೇ” .ಗೆಳೆಯರಿಬ್ಬರ ವಾಗ್ವಾದ ಜೋರಾಗತೊಡಗಿತು. ನಾಗೇಶ ಇಬ್ಬರನ್ನು ಸಮಾಧಾನ ಮಾಡಲು ಬಂದ
“ಏನಾದರೆ ಏನಂತೆ, ಇಂಡಿಯಾ ಮ್ಯಾಚ್ ವಿನ್ ಐತಲ್ಲಾ ” ನಾಗೇಶನ ಮಾತು ಇಬ್ಬರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ,
ಮಾತಲ್ಲಿದ ಜಗಳ ಕೈಯ ಹಂತಕ್ಕೆ ಬಂತು. ಇಬ್ಬರು ಒಬ್ಬರನ್ನೊಬ್ಬರು ತಳ್ಳಿ ಕೊಳ್ಳಲಾರಂಭಿಸಿದರು. ಆವೇಶದಲ್ಲಿ ಸುಮಂತ , ಪ್ರಾಣೇಶನನ್ನು ಜೋರಾಗಿ ತಳ್ಳಿ ಬಿಟ್ಟ. ಆಯ ತಪ್ಪಿದ ಪ್ರಾಣೇಶ ರಸ್ತೆ ಪಕ್ಕದ ಚರಂಡಿಗೆ ಬಿದ್ದು ಬಿಟ್ಟ ಮತ್ತು ಚರಂಡಿಯಲ್ಲಿದ ಕಲ್ಲಿಗೆ ತಲೆ ಬಡಿದಿತ್ತು. ನೋಡ ನೋಡುತ್ತಿದ್ದಂತೆ ಅನಾಹುತ ನೆಡೆದೆ ಬಿಟ್ಟಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಾಣೇಶನಿಗೆ ಪ್ರಜ್ಞೆ ತಪ್ಪಿತ್ತು. ಸುಮಂತ ಹೆದರಿಕೆಯಿಂದ ಜೋರಾಗಿ ಅಳುತ್ತ ಮನೆಕಡೆ ಓದಿದರೆ , ನಾಗೇಶ್ ಕೂಡಲೇ ಅಲ್ಲೇ ಹತ್ತಿರದ ರಾಜರಾಮನ ಅಂಗಡಿಯಲ್ಲಿದ್ದ ಜನರಿಗೆ ವಿಷಯ ತಿಳಿಸಿದ್ದ. ಅಲ್ಲೇ ಇದ್ದ ಪ್ರವೀಣನ ರಿಕ್ಷಾದಲ್ಲಿ ನಾಗೇಶ ಸೇರಿ ಮೂರ್ನಾಲ್ಕು ಜಾಣ ಪ್ರಾಣೇಶನನ್ನು ಹೆಬ್ರಿ ಆಸ್ಪತ್ರೆಯತ್ತಕೊಂಡೊಯ್ದರು.

“ಯಾಕ್ ಮಗ ಹಿಂಗ್ ಮಾಡ್ದೆ, ಎಂತ ಐತ್ ನಿಂಗೆ. ನೋಡ್ ಪ್ರಾಣೇಶನ ತಲೆಗೆ ಜೋರಾಗಿ ಪೆಟ್ಟು ಆಗಿದೆ ಅಂತೇ. ದೇವ್ರು ದೊಡ್ಡವ , ದೊಡ್ಡ ತೊಂದ್ರೆ ಏನು ಇಲ್ಲ ಅಂತೇ. ಆದ್ರೂ ಇನ್ನು ಒಂದು ತಿಂಗ್ಳು ಬೇಕಂತೆ ಸರಿ ಆಪುಕೆ. ಪಾಪ ಅವ್ನ ಅಪ್ಪ ಅಮ್ಮ ಯಾರ್ಯಾರೋ ತೋಟದಲ್ಲಿ ಕೂಲಿ ಕೆಲಸ ಮಾಡೋರು, ಅಷ್ಟು ದುಡ್ಡು ಎಲ್ಲಿಂದ ತರ್ತಾರೆ, ನಿನ್ನ ಅಪ್ಪ ಬೇರೆ ಊರಲ್ಲಿ ಇಲ್ಲ , ನಾನೇ ಆಗ ನಾಗೇಶನ ಹತ್ರ ಎರಡು ಸಾವಿರ ಕೋಟ್ ಕಳಿಸಿದೆ. ಇನ್ನ ನಿನ್ನಪ್ಪ ನಾಳೆ ಸಾಯಂಕಾಲ ಬಂದು ಏನ್ ರಂಪ ಮಾಡ್ತಾರೋ ಗೊತ್ತಿಲ್ಲ.” ಸುಮಂತನ ಅಮ್ಮ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಗೋಳಾಡುತ್ತಿದ್ದರು. ಸುಮಂತ ಮತ್ತಷ್ಟು ಗಾಬರಿಯಾದ. ಆವತ್ತು ರಾತ್ರಿ ಅವನ ಮಾನೆಯಲ್ಲೇ ಉಳಿದ ನಾಗೇಶ್ ಆಗಾಗ ಮಾಡುತ್ತಿದ್ದ ಸಮಾಧಾನದಿಂದ ಸುಮಂತನ ಅಳುವನ್ನು ನಿಲ್ಲಿಸಲಾಗಲಿಲ್ಲ .ರಾತ್ರಿ ಮಲಗಿದ ಸುಮಂತನಿಗೆ ನಿದ್ದೇನೆ ಬರಲಿಲ್ಲ. ಸಂಜೆ ನೆಡೆದ ಘಟನೆ ಪದೇ ಪದೇ ಕಣ್ಣೆದುರು ಬರುತ್ತಿತ್ತು. ಒಂದೆಡೆ ಪ್ರಾಣೇಶನಿಗೆ ಜೀವಕ್ಕೆ ಅಪಾಯ ತಂದ ನೋವಾದರೆ ಇನ್ನೊಂದೆಡೆ ನಾಳೆ ಅಪ್ಪಯ್ಯ ಬಂದರೆ ಚರ್ಮ ಸುಲೀತಾರೆ ಎನ್ನುವ ಹೆದರಿಕೆ ” ಭಯ , ಆತಂಕ ಮತ್ತು ಅಪರಾಧಿ ಮನೋಭಾವದ ತೊಳಲಾಟದಲ್ಲಿ ಪೂರ್ತಿ ರಾತ್ರಿ ಒದ್ದಾಡಿದ.

“ಅಲ್ಲ ಸುಮಂತ , ಇವತ್ತು ಶಾಲೆಯಲ್ಲಿ ಹುಡ್ಗಿಯರದ್ದು ತಾಲೂಕ್ ಲೆವೆಲ್ ಥ್ರೂ ಬಾಲ್ ಟೂರ್ನಮೆಂಟ್ ಇದೆಯಲ್ಲ.ಬ್ಯಾಗ್ ತರೋದು ಬೇಡ ಅಂತ ಹೇಳಿದರಲ್ಲ. ಮತ್ತೆ ನೀನು ತಂದಿದ್ಯಾ ” ಮಾರನೇದಿನ ಬೆಳಿಗ್ಗೆ ಶಾಲೆಗೇ ಹೋಗುವಾಗ ಪ್ರಾಣೇಶನ ವಿಷಯದಲ್ಲಿ ಸುಮಂತನ ಸಮಾಧಾನಿಸಿದ ನಂತರ ನಾಗೇಶ್ ಪ್ರೆಶ್ನೆಹಾಕಿದ.
“ಇಲ್ಲ ಕಾಣೋ, ನಿನ್ನೆ ಟೆನ್ಸ್ಷನ್ನಲ್ಲಿ ಎಲ್ಲ ಮರೆತೇ . ಇರ್ಲಿ ಬಿಡು , ಬಸ್ ಬಂತು ನೆಡೆ ” ಅಂತ ಸುಮಂತ ಗಡಿಬಿಡಿಯಲ್ಲಿ ಬಸ್ ಏರಿದ .ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸುಮಂತ ಪುಸ್ತಕದ ಬದಲಿಗೆ ಬಟ್ಟೆ ತುಂಬಿದ್ದ ಬ್ಯಾಗನ್ನು ಎದೆಗೆ ಒತ್ತಿಕೊಂಡು ಊರಿಗೆ ವಿದಾಯ ಹೇಳಿದ್ದ.
ಇತ್ತ ಶಾಲೆಯಲ್ಲಿ ಎಲ್ಲರೂ ಥ್ರೂ ಬಾಲ್ ಮ್ಯಾಚ್ನಲ್ಲಿ ಮುಳುಗಿದರೆ, ಸುಮಂತ ಯಾರ ಕಣ್ಣಿಗೂ ಕಾಣದಂತೆ ಅಲ್ಲಿಂದ ಹೊರಬಂದು ಉಡುಪಿಗೆ ಹೋಗುವ ಬಸ್ಸು ಹತ್ತಿದ್ದ . ಅವರಿವರು ಕೊಟ್ಟಿದ್ದ ಕೂಡಿಟ್ಟಿದ್ದ ಹಣವನ್ನು ಜೇಬಿಗೇರಿಸಿಕೊಂಡು ಬಂದಿದ್ದ ಆತ ಅದೇ ದುಡ್ಡಲ್ಲಿ ಹುಬ್ಬಳ್ಳಿಗೆ ಬಂದು ಬಿಟ್ಟು , ಅಲ್ಲೇ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು , ಬದುಕಿಂದ ಇನ್ನೊಂದು ಪುಟಕ್ಕೆ ಜಾರಿದ ಆತನ ಆ ಪುಟ ಕಠೋರವಾಗಿತ್ತು. ಅಲ್ಲಿ ಕೆಲ ತಿಂಗಳು ಕೆಲಸ ಮಾಡಿದವ ಯಾವುದೇ ಏಜೆಂಟ್ ತೋರಿಸಿದ ಹೆಚ್ಚಿನ ಸಂಬಳದ ಆಸೆಗೆ ಮುಂಬೈಗೆ ಬಂದು ಅಲ್ಲಿ ಕುಂದಾಪುರ ಮೂಲದ ಮಂಜುನಾಥ ಶೆಟ್ರ ಬಾರಲ್ಲಿ ಕೆಲಸಕ್ಕೆ ಸೇರಿಕೊಂಡ.
ನೋಡ ನೋಡುತ್ತಿದ್ದಂತೆ, ಸುಮಂತನ ಬದುಕು ಮೂರಾಬಟ್ಟೆ ಆಗಿಬಿಡ್ತು. ಬಹುಶ: ಪ್ರಾಣೇಶನ ಘಟನೆ ಆಗದೆ ಇದ್ದಿದ್ದರೆ, ಎಲ್ಲವೂ ಅಂದುಕೊಂಡಂತೆ ಆಗಿತ್ತಿತ್ತು. ಶ್ರೀನಿವಾಸ ಶೆಟ್ರಿಗೆ ಸುಮಂತನನ್ನು ಇಂಜಿನಿಯರ್ ಮಾಡುವ ಆಸೆ ಇತ್ತು. ಆದ್ರೆ ಚಿಕ್ಕ ತಪ್ಪಿಗೆ ತನಗೆ ತಾನೇ ಶಿಕ್ಷೆ ವಿಧಿಸಿಕೊಂಡ ಆತ ಮುಂಬೈ ಎಂಬ ಅನಾಮಿಕ ಲೋಕದಲ್ಲಿ ದಿಕ್ಕು ದೆಸೆಯಿಲ್ಲದ ಪರದೇಸಿಯಂತೆ ಬದುಕುವ ಪರಿಸ್ಥಿತಿ ಬಂದಿತ್ತು. “ಯಾಕಾಗಿ ನಾನು ಮನೆ ಬಿಟ್ಟು ಓಡಿ ಬಂದೆ, ಅಪ್ಪ ಹೊಡೀತಾರೆ ಅಂತಾನಾ ಅಥವಾ ಊರಲ್ಲಿ ಮತ್ತು ಶಾಲೆಯಲ್ಲಿ ಎಲ್ಲರ ಟೀಕೆಗಳನ್ನು ಎದುರಿಸಲಾಗದೆಯಾ? . ಅದೆಲ್ಲ ತಾತ್ಕಾಲಿಕ ಅಷ್ಟೇ. ಈಗ ಪ್ರಾಣೇಶ ಚೇತರಿಸಿಕೊಂಡು ಮತ್ತೆ ಶಾಲೆಗೆ ಹೋಗುತ್ತಿರಬಹುದು.? ಆದರೆ ನಾನು ? ಶಾಶ್ವತವಾಗಿ ಎಲ್ಲರಿಂದ ದೂರಾಗಿಬಿಟ್ಟೆ ! ಅಪ್ಪ ಅಮ್ಮ ತಮ್ಮ ತಂಗಿ ಎಲ್ಲರನ್ನು ತೊರೆದು ಬಂದೆ. ತಪ್ಪು ಮಾಡಿದೆ . ವಾಪಾಸು ಹೋಗಿ ಬಿಡಲ್ಲಾ ” ಎಷ್ಟೋ ರಾತ್ರಿ ಸುಮಂತ ಇಂತಹ ಯೋಚನೆಗಳಿಂದ ಕಣ್ಣೀರು ಹಾಕಿದ, ಆದರೆ ಹಿಂತಿರುವ ಧೈರ್ಯ ಮಾಡಲೇ ಇಲ್ಲ. ಈಗ ಆ ಧೈರ್ಯ ಮಾಡಿ ಊರಿನತ್ತ ಹೊರಟಿದ್ದಾನೆ , ಅದು ಇಪ್ಪತ್ತು ವರ್ಷ ಕಳೆದ ನಂತರ !

ಬಸ್ಸು ಹಿರಿಯಡ್ಕದಲ್ಲಿ ಎಡ ತಿರುವು ತೆಗೆದುಕೊಂಡು ಹೆಬ್ರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಬದುಕು ಯಾರಿಗೂ ಸುಲಭವಲ್ಲ, ತುಂಬಿ ತುಳುಕುತ್ತಿದ್ದದ್ದ ಬಸ್ಸಿನಲ್ಲಿದ್ದ ಪ್ರತಿಯೊಬ್ಬರೂ ಅವರದ್ದೇ ಬವಣೆಗಳ ಹೊರೆಹೊತ್ತು ಸಾಗುತ್ತಿದ್ದರು. ಬಹುಶ; ಊರು ಬಿಡದಿದ್ದರೆ ಇಲ್ಲಿಆ ಒಂದಷ್ಟು ಜನ ಸುಮಂತನ ಆಪ್ತರಾಗಿರುತ್ತಿದ್ದರೇನೋ, ಆದರೆ ಈವಾಗ ಎಲ್ಲಾ ಆತನ ಪಾಲಿಗೆ ಬೇರೊಂದು ಲೋಕದ ಅತಿಥಿಗಳು. ಮುಂಬೈ ಸೇರಿದ ಮೇಲೆ ಸುಮಂತನಿಗೆ ಊರಿನ ಸಂಪರ್ಕವೇ ಕಡಿದು ಹೋಗಿತ್ತು. ಇಪ್ಪತ್ತು ವರ್ಷ ಊರೆಂಬ ಊರನ್ನೇ ಮರೆತಿದ್ದ. ಆದರೆ ಮತ್ತೆ ಸುಮಂತನಿಗೆ ಊರಿನ ದಿವ್ಯ ಸ್ಪರ್ಶ ಕೊಡಿಸಿದ್ದು ಫೇಸ್ಬುಕ್ ಎಂಬ ಮಾಯಾಂಗನೆ. ಅಂದು ಫೇಸ್ಬುಕ್ ಗೆ ರವಿರಾಜ ಶೆಟ್ಟಿ ಸೀತಾನದಿ ಎಂಬ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಸುಮಂತ ಇದು ಯಾರಿರಬಹುದೆಂದು ಯೋಚಿಸಿದಾಗ ತಟ್ಟನೆ ನೆನಪಾಗಿದ್ದು ಪ್ರೈಮರಿ ಶಾಲೆಯ ಗೆಳೆಯ ರವಿರಾಜ . ಅಂದಿನಿಂದ ಇಬ್ಬರೂ ಫೇಸ್ಬುಕ್ ನಿಂದ ಆತ್ಮೀಯರಾದರು, ಹಾಗೇನೇ ಊರಿನ ಒಂದೊಂದೇ ವಿಷಯಗಳು ಸುಮಂತನ ಹತ್ತಿರ ಸುಳಿಯಲಾರಂಭಿಸಿದವು . ಅಮ್ಮನ ಕಾಲು ನೋವು , ತಂಗಿಯ ಮದುವೆ , ತಂಗಿಯ ಗಂಡನ ಕಾಂಟ್ರಾಕ್ಟ್ ವ್ಯವಹಾರ, ತಮ್ಮನ ಕಲ್ಲು ಕೋರೆ ಬಿಸಿನೆಸ್, ಅಪ್ಪನ ರಾಜಕೀಯ, ಪ್ರೈಮರಿಶಾಲೆಯ ರಾಜಾರಾಮ ಮೇಸ್ಟ್ರ ಕೊಲೆ , ಗೆಳೆಯ ರಾಜೀವ ನಾಥ ನಕ್ಷಲ್ಟ್ ಜೊತೆ ಸೇರಿಕೊಂಡಿದ್ದು, ಹೀಗೆ ನೂರಾರು ವಿಷಯಗಳು ರವಿರಾಜನಿಂದ ಸುಮಂತನಿಗೆ ರವಾನೆಯಾಯಿತು , ಜೊತೆಗೆ ಊರಿನಕಡೆಗೊಂದು ಸೆಳೆತ ಶುರುವಾಯಿತು
.
ಸುಮಂತ ಊರು ಬಿಡದಿದ್ದರೆ ಓದಿ ಇಂಜಿನಿಯರ್ ಆಗುತ್ತಿದ್ದನೇನೋ, ಆದರೆ ಈಗ ಕೋಟ್ಯಧಿಪತಿ . ಹತ್ತು ವರ್ಷ ಮಜುನಾಥ ಶೆಟ್ರ ಹೋಟೆಲಿನಲ್ಲಿ ಕತ್ತೆ ತರಹ ದುಡಿದ ಸುಮಂತ, ಕೂಡಿಟ್ಟ (ಜೊತೆಗೆ ಕ್ಯಾಶಿಯರ್ ಆಗಿ ಎತ್ತಿಟ್ಟಿದ್ದು ಸೇರಿ) ಹಣದಲ್ಲಿ ತನ್ನದೇ ಒಂದು ಕರಾವಳಿ ಶೈಲಿ ಹೋಟೆಲ್ ಆರಂಭಿಸಿದ. ಲಕ್ಷ್ಮಿ ಬಂದು ಸುಮಂತನ ಹೆಗಲೇರಿ ಕುಂತಳು , ಒಂದು ಹೋಗಿ ಮೂರಾಯಿತು , ಜೊತೆಗೆ ಬಾರು , ಪಬ್ಬು ಶುರುವಾಯಿತು. ಹಾಗೇನೇ ಬಡ್ಡಿ ವ್ಯವಹಾರ ಆರಂಭಿಸಿದ , ಇನ್ನೊಂದು ಕಡೆ ಕ್ರಿಕೆಟ್ ಬೆಟ್ಟಿಂಗೆ ಕೈಹಾಕಿದ. ಎಲ್ಲೂ ಸೋಲಲಿಲ್ಲ. ವರ್ಷ ಮೂವತೈದು ಆಗಿದೆ, ಮದುವೆ ಒಂದು ಬಾಕಿ ಇದೆ ಅಷ್ಟೇ. ಕೋಟಿಗಟ್ಟಲೆ ಇದ್ದರೂ , ಬಂದಹಾಗೆ ಊರಿಗೆ ಮರಳಬೇಕು ಅಂತ ಬಸ್ಸು ಹತ್ತಿ ಉರುಬಿಟ್ಟಿದ್ದ ಸುಮಂತ ಈಗ ಮತ್ತೆ ಬಸ್ಸಲ್ಲೇ ಉರುನೋಡಲು ಹೊರಟಿದ್ದ .

ಬಸ್ಸು ಅದಾಗಲೇ ಪೆರಡೂರು ದಾಟಿ ಕಬ್ಬಿನಾಲೆಗೆ ಬಂದಿತ್ತು. ಕಬ್ಬಿನಾಲೆ ಎಂಬ ಊರು ಸುಮಂತನಿಗೆ ಚಿರಪರಿಚಿತ. ಈತನ ತಂದೆಯ ತಂಗಿ ಮನೆ ಇರೋದು ಇಲ್ಲೆಯೇ . ಆಗಾಗ ಬೇಸಿಗೆ ರಜೆಗೆ ಗೆಳೆಯ ನಾಗೇಶನನ್ನು ಕರೆದುಕೊಡು ಬಂದು ಇದ್ದು ಹೋಗಿತ್ತಿದ್ದ . ಗೆಳೆಯರಿಬ್ಬರು ಸೈಕಲು , ಈಜು ಕಲಿಸಿದ್ದು ಇದೆ ಊರು . ಬಾಲ್ಯದ ದಿನದ ಎಲ್ಲಾ ಕಲಿಕೆಗಳಿಗೆ ಜೊತೆಯಾಗಿದ್ದವ ನಾಗೇಶ . ರವಿರಾಜ ಹೇಳಿದ ಪ್ರಕಾರ ನಾಗೇಶ ಹೆಬ್ರಿ ಸಮೀಪ ಖಾಸಗಿ ಕಾಲೇಜಿನಲ್ಲಿ ಲೆಕ್ಟುರರ್ .ಇನ್ನು ಮದುವೆ ಆಗಿಲ್ಲ. ಅವನ ಬದುಕು ಆರಕ್ಕೆ ಏರದೆ ಮೂರರಲ್ಲೇ ಕುಂಟುತ್ತಿತ್ತು . ಗೆಳೆಯನ ಬದುಕಿನ ಬಗ್ಗೆ ಮರುಕ ಪಟ್ಟಿದ್ದ ಸುಮಂತ , ಆತನಿಗೊಂದು ಸುಂದರವಾದ ಬದುಕು ಕಟ್ಟಿಕೊಡುವ ಸಂಕಲ್ಪ ಮಾಡಿದ್ದ. ಅದಕ್ಕೆ ರವಿರಾಜನಿಂದ ನಾಗೇಶನ ವಿಳಾಸ ಪಡೆದು ಆತನಿಗೊಂದು ಪತ್ರ ಹಾಕಿದ್ದ . ಗೆಳೆಯ ಖುಷಿ ಪಡಲಿ ಅಂತ ಒಂದಷ್ಟು ಕಾಲೆಳೆದಿದ್ದ ಊರಿಗೆ ಹೋದ ಮೇಲೆ ಗೆಳೆಯನಿಗೊಂದು ದೊಡ್ಡ ಗಿಫ್ಟ್ ಕೊಡಬೇಕು , ಅದರಿಂದ ಅವನ ಜೀವನದಲ್ಲಿ ಎತ್ತರಕ್ಕೆ ಏರಬೇಕು ಅಂತ ನಿರ್ಧರಿಸಿ ಆ ಪತ್ರವನ್ನು ಪೋಸ್ಟ್ ಮಾಡಿದ್ದ.

“ನೋಡು ನಾಗೇಶ , ಆವತ್ತು ನಾನು ಮನೆ ಬಿಟ್ಟು ಓಡಿಹೋಗಿದ್ದು ಒಳ್ಳೆಯದೇ ಆಯಿತು ನೋಡು. ಇಲ್ಲದಿದ್ದರೆ ನಿನ್ನ ತರಹ ಇಪ್ಪತ್ತೋ ಮೂವತ್ತೋ ಸಾವಿರಕ್ಕೆ ಕತ್ತೆ ತರಹ ದುಡಿತ ಬಿದ್ದಿರಬೇಕಿತ್ತು. ತಿಂಗಳ ಕೊನೆತನಕ ಸಂಬಳಕ್ಕಾಗಿ ಕಾಯುತ್ತ , ಅದು ಸಿಕ್ಕ ತಕ್ಷಣ ಅದು ಇದು ಕಮ್ಮಿಟ್ಮೆಂಟು ಅಂತ ಒಂದೇ ವಾರದ ಒಳಗೆ ಎಲ್ಲ ಖಾಲಿ ಮಾಡಿಕೊಂಡು ಆಮೇಲೆ ಪೈಸೆ ಲೆಕ್ಕ ಹಾಕುತ್ತ ಬದುಕುವ ಬದುಕಿನಿಂದ ನೀನು ಹೊರಬರಬೇಕು. ನನ್ನನು ನೋಡು ಕೋಟಿಗಟ್ಟಲೆ ದುಡಿದ್ದಿದ್ದೇನೆ. ಇಲ್ಲಿ ನ್ಯಾಯ ಅನ್ಯಾಯದ ದುಡ್ಡು ಇದೆ. ಬಾರಿನಲ್ಲಿ ಜನರಿಗೆ ಕುಡಿಸಿ ಹಾಳು ಮಾಡಿದೆನೇ, ಬಡ್ಡಿ ಮೇಲೆ ಸಾಲ ಕೊಟ್ಟು, ಬೆಟ್ಟಿಂಗ್ ಆಡಿಸಿ ಎಷ್ಟೋ ಕುಟುಂಬ ಬೀದಿಗೆ ಬರುವಂತೆ ಮಾಡಿ ನನ್ನ ಜೋಳಿಗೆ ತುಂಬಿಸಿ ಕೊಂಡಿದ್ದೇನೆ. ಜೊತೆಗೆ ನನ್ನ ರೆಸ್ಟೋರೆಂಟ್ ಗಳಲ್ಲಿ ಕಡಿಮೆ ಬೆಲೆಗೆ ಊಟ ಕೊಟ್ಟು ಎಷ್ಟೋ ಬಡವರ ಹೊಟ್ಟೆ ತುಂಬಿಸಿದ್ದೇನೆ. ಒಂದಷ್ಟು ಶಾಲೆಗಳಿಗೆ ಮಧ್ಯಾಹ್ನ ಉಚಿತ ಊಟ ಕೊಡುತ್ತಿದ್ದೇನೆ . ನನಗೆ ಇಲ್ಲಿ ಪಾಪ ಪುಣ್ಯ ಮುಖ್ಯ ಅಲ್ಲ. ದುಡ್ಡು ಮುಖ್ಯ . ಜಗತ್ತಿನಲ್ಲಿ ದುಡ್ಡಿಗೆ ಸಿಗುವ ಮರ್ಯಾದೆ ಇನ್ನ್ಯಾವುದಕ್ಕೆ ಇದೆ ಹೇಳು. ನೀನು ಗಳಿಸಿದ ಪದವಿ, ನಿನ್ನ ವಿದ್ವತ್ತು , ನಿನ್ನ ಬರಹಗಳು, ನಿನ್ನ ಸಮಾಜಮುಖಿ ಹೋರಾಟಗಳು ಈ ದುಡ್ಡಿನ ಮುಂದೆ ನಿಲ್ಲುತ್ತದಾ ? ಸ್ವಲ್ಪ ಯೋಚಿಸು, ನನಗೆ ರವಿ ಎಲ್ಲಾ ಹೇಳಿದ್ದಾನೆ, ನೀನು ಬದಲಾಗು ಗೆಳೆಯ. ಇರುವುದೊಂದೇ ಜೀವನ, ಅದರಲ್ಲಿ ಅರ್ಧ ದಾರಿ ಕ್ರಮಿಸಿಯಾಗಿದೆ. ನಾನು ಊರಿಗೆ ಬರ್ತಾ ಇದ್ದೇನೆ. ಕೆಲಸ ಬಿಡು. ಊರಲ್ಲಿ ನಿನಗೊಂದು ಬಿಸಿನೆಸ್ ಮಾಡಿಕೊಡ್ತೇನೆ, ಸ್ವಲ್ಪ ಹಣವನ್ನು ನಿನ್ನ ಮೂಲಕ ಬಡ್ಡಿಗೆ ಬಿಡ್ತೇನೆ, ಹಾಗೆ ಚೀಟಿ ವ್ಯವಹಾರನೂ ಇದೆ. ಜಾಸ್ತಿ ರಿಸ್ಕ್ ಇಲ್ಲ . ನೀನು ತಿಂಗಳಿಗೆ ಲಕ್ಷಗಟ್ಟಲೆ ದುಡಿಯಬಹುದು. ಊರಿಗೆ ಬಂದಾಗ ಮಾತಾಡುತ್ತೇನೆ. ನೀನು ಒಪ್ಪಿಕೊಳ್ಳಬೇಕು, ಒಪ್ಪದ್ದಿದ್ದರೆ ನಾನು ಬಿಡುವುದಿಲ್ಲ. ನೋಡ್ತಾ ಇರು . ಒಂದೈದು ವರ್ಷದಲ್ಲಿ ನಿನ್ನ ಕೋಟ್ಯಧಿಪತಿ ಮಾಡ್ತೇನೆ. ಊರಲ್ಲಿ ಸಿಕ್ತೇನೇ ಗೆಳೆಯ ” ನಾಗೇಶನಿಗೆ ಬರೆದ ಪಾತ್ರದ ಸಾಲುಗಳು ಸುಮಂತನ ಕಣ್ಣಂಚಿನಲ್ಲಿ ಹರಿದಾಡಿದವು. “ಬಹುಶ: ನಾಗೇಶ ಹೆದರಿರಬೇಕು , ಆರಂಭದಲ್ಲಿ ದುಡ್ಡು ನಮ್ಮನ್ನು ಹೆದರಿಸುತ್ತದೆ, ನಾವು ಅದಕ್ಕೆ ಶರಣಾಗದಿದ್ದರೆ ಕೊನೆಗೆ ಅದೇ ಹೆದರಿ ನಮ್ಮ ಜೇಬಲ್ಲಿ ಅವಿತುಕೊಳ್ಳುತ್ತದೆ. ಇದನ್ನು ಸರಿಯಾಗಿ ಸರಿಯಾಗಿ ಅರಿತು ಪಳಗಿಸಿದವನೇ ದುಡ್ಡನ್ನು ಗೆಲ್ಲೋದು, ನನ್ನ ಹಾಗೆ. ಇರಲಿ ನಾಗೇಶನಿಗೊಂದು ಬದುಕು ಕಟ್ಟಿಕೊಡಬೇಕು, ಜೊತೆಗೆ ನನ್ನ ಸಾಮ್ರಾಜ್ಯವನ್ನು ಊರಿಗೂ ವಿಸ್ತರಿಸಬೇಕು. ” ಸುಮಂತ ಮನಸ್ಸಲ್ಲೇ ಬೀಗಿದ .

****

” ಇಲ್ಲ ಕಣೋ ರವಿ, ಜಸ್ಟ್ ಕಬ್ಬಿನಾಲೆ ಪಾಸ್ ಆದೆ ಅಷ್ಟೇ , ಇನ್ನು ಕಾಲ್ ಗಂಟೆ ಆಗಬಹುದು , ಯಾಕೆ ” ಮೊಬೈಲ್ ಗೆ ಕಾಲ್ ಮಾಡಿದ ರವಿರಾಜನಿಗೆ ಉತ್ತರಿಸಿದ ಸುಮಂತ.
” ಯಾಕೂ ಇಲ್ಲ. ನೀನು ಆಗ್ಲೇ ಹೆಬ್ರಿಗೆ ಬಂದೆ ಅನ್ಕೊಂಡೆ, ನಾನ್ ಇಲ್ಲೇ ಪೊಲೀಸ್ ಸ್ಟೇಷನ್ ಗೆ ಹೋಗಿದ್ದೆ ಬರೋದು ಸ್ವಲ್ಪ ಲೇಟ್ ಆಯಿತು ” ರವಿರಾಜ ಮಾತು ಮುಗಿಸುವ ಮುನ್ನವೇ ಸುಮಂತ ಮದ್ಯ ಬಾಯಿಹಾಕಿದ
“ಪೊಲೀಸ್ ಸ್ಟೇಶನಾ ? ಯಾಕೆ ? ಏನಾಯಿತು ?
“ಆದ ನಮ್ ನಾಗೇಶನ ಮಿಸ್ಸಿಂಗ್ ಕಂಪ್ಲೇಂಟ್ ಆಗಿದೆಯಲ್ಲ . ಏನಾದರೂ ಸುದ್ದಿ ಇದೆಯಾ ಅಂತ ಕೇಳೋಕೆ ಹೋಗಿದ್ದೆ ”
“ಏನ್ ಹೇಳ್ತ ಹಿಡ್ದಿಯ ರವಿ. ನಾಗೇಶ ಕಾಣೆಯಾಗಿದ್ನ ” ಸುಮಂತ ಗಾಬರಿಯಾದ .
“ಸಾರೀ ಕಣೋ ಹೇಳೋಕೆ ಮರೆತಿದ್ದೆ. ಹದಿನೈದು ದಿನವಾಯಿತು ನಾಗೇಶ್ ಕಾಣೆಯಾಗಿ……. ” ರವಿರಾಜ ನಾಗೇಶನ ನಾಪತ್ತೆ ಪ್ರಕರಣವನ್ನು ಸಂಕ್ಷಿಪ್ತ್ರವಾಗಿ ವಿವರಿಸಿದ. ಸುಮಂತನಿಗೊಮ್ಮೆ ತಲೆ ಸುತ್ತು ಬಂದಂತಾಯಿತು. ಬ್ಯಾಗಲ್ಲಿದ್ದ ನೀರನ್ನು ಕುಡಿದು ಸಾವರಿಸಿಕೊಂಡ ಕೇಳಿದ ,
” ಯಾಕಂತೆ ಕಾರಣ ಏನಾದರೂ ಗೊತ್ತಾಯಿತಾ ?”
” ಸರಿಯಾಗಿ ಗೊತ್ತಿಲ್ಲ ಕಾಣೋ , ಆವಾ ಒಂಥಾರಾ ಸೈಲೆಂಟ್ ಅಲ್ದಾಣ . ಯಾರ್ ಹತ್ರನು ಏನು ಹೇಳಿಕೊಳ್ಳೋಲ್ಲ , ಅವನ್ ಅಮ್ಮ ಹೇಳೋ ಪ್ರಕಾರ ಮೂರೂ ವಾರದ ಹಿಂದೆ ಅವನಿಗೊಂದು ಕಾಗ್ದಬಂದಿತಂಬ್ರ. ಅದು ಬಂದ ಮೇಲೆ ಸ್ವಲ್ಪ ವಿಚಿತ್ರವಾಗಿದ್ದನಂತೆ. ಅದಾದ ಮೂರೇ ದಿನಕ್ಕೆ ನಾಪತ್ತೆ ಆಗಿದ್ದಾನೆ. ಅದಿರ್ಲಿ, ಆಮೇಲೆ ಮಾತಾಡುವ ಇಲ್ಲೇ ಬಸ್ ಸ್ಟ್ಯಾಂಡ್ನಲ್ಲಿ ಕಾಯ್ತಾ ಇದ್ದೇನೆ ” ರವಿರಾಜ ಮುಗಿಸಿದ ಮಾತು ಸುಮಂತನ ಉಸಿರು ಕಟ್ಟಿಸಿತು. ಎದೆಯ ಬಡಿತಕ್ಕೆ ಇಡೀ ದೇಹವೇ ನಡುಗುತ್ತಿತ್ತು . ಆತ ಸ್ತಬ್ಧನಾಗಿಬಿಟ್ಟ , ದೊಡ್ಡ ಅಪರಾಧ ಮಾಡಿ ಗಲ್ಲಿಗೇರಲು ಸಿದ್ಧನಾದವನ ಮನಸ್ಥಿತಿ ಅವನಾದಾಗಿತ್ತು.
” ಯಾರೀ ಹೆಬ್ರಿ ಕೆಳಪೇಟೆ , ಬನ್ನಿ ಬನ್ನಿ ಇಳ್ಕೋಳ್ಳಿ, ಇದು ಬಿಟ್ರೆ ನೆಕ್ಸ್ಟ್ ಸ್ಟಾಪ್ ಹೆಬ್ರಿ ಬಸ್ಟ್ಯಾಂಡ್. ಕುಂದಾಪುರ, ಸಂತೆಕಟ್ಟೆಗೆ ಹೋಗೋರು ಇಲ್ಲೇ ಇಳೀರಿ ” ಬಸ್ ಕಂಡಕ್ಟರನ ಏರುಧ್ವನಿ ಸುಮಂತನನ್ನು ವಾಸ್ತವಕ್ಕೆ ಎಳೆತಂದಿತ್ತು. ಕ್ಷಣಾರ್ಧದಲ್ಲಿ ಏನೋ ನಿರ್ಧರಿಸಿ ಇದ್ದಕ್ಕಿದ್ದಂತೆ ಬಸ್ಸಿನಿಂದ ಇಳಿದು ಬಿಟ್ಟ . ಕಾಣದೆ ಇರೋ ನಾಗೇಶ ಚಿತ್ರವಿಚಿತ್ರ ಮುಖಗಳು ಆತನ ಮನದ ಸುತ್ತ ಸುಳಿದಾಡುತ್ತ ಕೇಕೆ ಹಾಕತೊಡಗಿದವು.
“ಯಾರಿ, ಕುಂದಾಪುರ , ಬನ್ನಿ ಬನ್ನಿ ” ಇನ್ನೊಂದು ಬಸ್ಸಿನ ಕಂಡಕ್ಟರ್ ನ ಧ್ವನಿ ಸುಮಂತನಿಗ್ಯಾಕೋ ಆ ಕ್ಷಣಕ್ಕೆ ಆಕರ್ಷಣೀಯವಾಯಿತು. ಸೀದಾ ಹೋಗಿ ಆ ಬಸ್ಸು ಹತ್ತಿ ಕುಳಿತು ಕೊಂಡ . ಕುಂದಾಪುರಕ್ಕೆ ಟಿಕೆಟ್ ತಗೆದುಕೊಂಡು , ಮುಂಬೈ ಟ್ರಾವೆಲ್ ಏಜೆಂಟ್ ಗೆ ಕರೆ ಮಾಡಿ ತನಗೆ ಕೂಡಲೇ ಕುಂದಾಪುರದಿಂದ ಮುಂಬಾಯಿಗೆ ಟಿಕೆಟ್ ಬುಕ್ ಮಾಡುವಂತೆ ಹೇಳುವ ಹೊತ್ತಿಗೆ ರವಿರಾಜನ ಐದು ಮಿಸ್ ಕಾಲ್ ಗಳು ಆತನ ಮೊಬೈಲ್ ಗೆ ಹೊಕ್ಕಿದ್ದವು. ರವಿರಾಜನಿಗೆ ಮರಳಿ ಕರೆ ಮಾಡುವ ಧೈರ್ಯ ಬರಲಿಲ್ಲ . ಮೊಬೈಲ್ ಸ್ವಿಚ್ ಆಫ್ ಮಾಡಿ ಸೀಟಿಗೆ ತಲೆಯೊರಗಿ ಕಣ್ಣುಮುಚ್ಚಿದ ಸುಮಂತನ ಮನದ ತುಂಬೆಲ್ಲ ನಾಗೇಶನ ಅಸಹಾಯಕತೆಯ ಕೇಕೆಯ ಸದ್ದು ವಿಜೃಂಬಿಸುತ್ತಿತ್ತು

ಸತೀಶ್ ಶೆಟ್ಟಿ ವಕ್ವಾಡಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Bhavana
5 years ago

Good one sathish. 👍👍

1
0
Would love your thoughts, please comment.x
()
x