ಗೆಲ್ಲಿಸುವ ದಾರಿಯಲ್ಲಿ – ಕೌಶಲ್ಯದ ಪರಿಚಯ: ರಘುನಂದನ ಕೆ. ಹೆಗಡೆ

SKILL, SPEED, SCORE ಕೌಶಲ್ಯ ವೇಗ ಗೆಲುವು

ಕೌಶಲ್ಯ (Skill) ಎಂದ ತಕ್ಷಣ ನಮ್ಮ ಯೋಚನೆಯೆಲ್ಲ ವೃತ್ತಿ ಜೀವನಕ್ಕೆ ಹೊರಟು ಬಿಡುತ್ತೆ, ಇಲ್ಲಾ ಇದೆಲ್ಲಾ ಕಲಿಕೆಯ ಕೊನೆ ಹಂತದಲ್ಲಿರೋ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಅನ್ಕೋತೇವೆ. ಹಾಗಾದರೆ ವೃತ್ತಿಯನ್ನ ಬಿಟ್ಟು, ಜೀವನಕ್ಕೆ ಕೌಶಲ್ಯ ಬೇಕಿಲ್ವಾ? ಹೆಂಗೆಂಗೋ ಬದುಕೋರಿಗೆ ಕೌಶಲ್ಯ ಬೇಕಿಲ್ಲ, ಕೌಶಲ್ಯ ಇದ್ದೋರಿಗೆ ಸ್ಕೂಲ್ ಶಿಕ್ಷಣ ಇಲ್ದೇ ಇದ್ರು ಗೆಲುವು ಸಿಗುತ್ತೆ. ನಂಬಿಕೆ ಆಗ್ತಿಲ್ವಾ, ಥಾಮಸ್ ಅಲ್ವಾ ಎಡಿಸನ್ ಗೊತ್ತಲ್ಲಾ, ಬಲ್ಬನ್ನು ಕಂಡು ಹಿಡಿದು ಬೆಳಕು ಕೊಟ್ಟ ವಿಜ್ಞಾನಿ, ಅವರು ಸ್ಕೂಲ್‍ಗೆ ಹೋಗಿದ್ದು ಮೂರೇ ತಿಂಗಳು, ಅವರ ಹೆಸರಲ್ಲಿರೋ ಸಂಶೋಧನೆಗಳ ಪೇಟೆಂಟ್ ಸಂಖ್ಯೆ 2332. ಕೌಶಲ್ಯಕ್ಕೆ ಶಿಕ್ಷಣ ಬೇಕಿಲ್ಲ, ಅಧ್ಯಯನ ಬೇಕು, ಜ್ಞಾನ ಬೇಕು, ಇವೆರಡನ್ನೂ ಸರಿಯಾದ ಸಮಯದಲ್ಲಿ ಉಪಯೋಗಿಸುವ ತಿಳಿವು ಬೇಕು ಅಷ್ಟೆ.

ಈ ಪ್ರಪಂಚದಲ್ಲಿ ಎಲ್ಲ ಜೀವಿಗಳಿಗೂ ಒಂದಷ್ಟು ಮೂಲ ಕೌಶಲ್ಯ (Basic Skills) ಹುಟ್ಟುತ್ತಲೇ ಬಂದಿರುತ್ತೆ. ಕೆಲವನ್ನ ಬೆಳೆಯುತ್ತ ಕಲಿಯುತ್ತವೆ. ಪ್ರಪಂಚದಲ್ಲಿ ಬದುಕಲೇಬೇಕಾದ ಅನಿವಾರ್ಯತೆ, ಉಳಿಯುವಿಕೆಯ ಹೋರಾಟದಲ್ಲಿ ಕೌಶಲ್ಯಗಳು ತನ್ನಿಂತಾನೆ ಅಭ್ಯಾಸವಾಗುತ್ತವೆ. ಹಕ್ಕಿಗೆ ಹಾರುವ ಕೌಶಲ್ಯ, ಹುಲಿಗೆ ಬೇಟೆಯಾಡುವ ಕೌಶಲ್ಯ, ಜಿಂಕೆಗೆ ಓಡುವ ಕೌಶಲ್ಯ ಎಲ್ಲ ಉಳಿಯುವಿಕೆಯ ಹೋರಾಟದಲ್ಲಿ ಮೂಡಿಬಂದ ಕೌಶಲ್ಯಗಳೇ. ಆದರೆ ಬಹುತೇಕ ಸಂದರ್ಭದಲ್ಲಿ ಮೂಲ ಗುಣವೆಂಬಂತೆ ಬೆಳೆದು ಬರುವ ಕೌಶಲ್ಯಗಳನ್ನ ನಾವು ಕೌಶಲ್ಯವೆಂದು ಪರಿಗಣಿಸುವುದೇ ಇಲ್ಲ. ಆದರೆ ಗೆಲುವಿನ ರಹಸ್ಯ ಮೂಲ ಕೌಶಲ್ಯಗಳಲ್ಲೇ ಅಡಗಿರುತ್ತದೆ ಎನ್ನುತ್ತದೆ ವಿಜ್ಞಾನ ಲೋಕ. ರೂಢಿಗತ ಕೌಶಲ್ಯಗಳಿಗೆ ಅಭ್ಯಾಸದ ಅನಿವಾರ್ಯತೆ ಬೇಕು, ಆದರೆ ಬೇಸಿಕ್ ಸ್ಕಿಲ್‍ಗಳು ರಕ್ತದಲ್ಲೇ ಸೇರಿಹೋಗಿರುತ್ತವೆ. ಅವುಗಳಿಗೆ ಸಾಣೆ ಹಿಡಿದರೆ ಯಶಸ್ಸು ಸುಲಭ. ಇದು ಸಿದ್ಧ ದಾರಿಯ ಪ್ರಯಾಣ.

ಇನ್ನು ಮನುಷ್ಯನ ವಿಷಯಕ್ಕೆ ಬಂದರೆ, 20,000 ವರ್ಷಗಳ ಹಿಂದೆ ಮನುಷ್ಯ ಬೆಂಕಿ ಕಂಡು ಹಿಡಿಯುವ ಪೂರ್ವದಲ್ಲಿ ಅವನ ಅನಿವಾರ್ಯತೆಗಳೇ ಬೇರೆ. ಅಪಾಯಕಾರಿ ಸಂದರ್ಭದಲ್ಲಿ, ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಮನುಷ್ಯ ಯಾ ಪ್ರಾಣಿಗಳು ತೋರಿಸುವ ನೈಪುಣ್ಯವಿದೆಯಲ್ಲ ಅವು ಬೇಸಿಕ್ ಸ್ಕಿಲ್‍ಗಳಿಂದ ಬರುವಂತವು. ಇಂದಿನ ಮನುಷ್ಯ ಬೌದ್ಧಿಕ ಕೌಶಲ್ಯಗಳ ರೂಢಿಸಿಕೊಳ್ಳುತ್ತಿದ್ದರೆ, ಶಿಲಾಯುಗದ ಕಾಲದಲ್ಲಿ ದೈಹಿಕ ಕೌಶಲ್ಯಗಳ, Survival Skills ಅನಿವಾರ್ಯತೆಯಿತ್ತು. ವೇಗವಾಗಿ ಓಡುವುದು, ಈಜುವುದು, ಮರ ಹತ್ತುವುದು ಇವೆಲ್ಲ ಆ ಕಾಲದ ಕೌಶಲ್ಯಗಳು. ನಂತರ ಸಂವಹನದ ಅನಿವಾರ್ಯತೆ ಚಿತ್ರ ಬರೆಯುವ ಕೌಶಲ್ಯವನ್ನ ಕಲಿಸಿತು. ಇದೇ ಚಿತ್ರಗಳು ಮುಂದೆ ಲಿಪಿಗಳಾದವು. ಕಾಲ ಬದಲಾಯಿತು, ಬೆಂಕಿಯ ಉಪಯೋಗ, ಚಕ್ರದ ಅನ್ವೇಶಣೆ, ಕುಟುಂಬ ಜೀವನದ ಅಭ್ಯಾಸ ಇವೆಲ್ಲ ಮನುಷ್ಯನ ಜೀವನ ಕ್ರಮವನ್ನ ಬದಲಿಸಿದವು. ಇಲ್ಲಿಗೆ ದೈಹಿಕ ಕೌಶಲ್ಯಗಳ ಅನಿವಾರ್ಯತೆ ಕಡಿಮೆಯಾಯ್ತು ಅನ್ನುತ್ತದೆ ಇತಿಹಾಸ.

ಹಿಂದೆ ಶಿಲಾಯುಗದ ಕಾಲದಲ್ಲಿ ಮನುಷ್ಯ ಬದುಕಿರುವುದಕ್ಕಾಗಿ ಪ್ರಾಣಿಗಳೊಂದಿಗೆ ಹೋರಾಡಬೇಕಿತ್ತು. ಪ್ರಕೃತಿಯೊಂದಿಗೆ ಸೆಣಸಬೇಕಿತ್ತು. ಇವತ್ತಿಗೆ ಮನುಷ್ಯ ಮನುಷ್ಯನೊಂದಿಗೆ ಹೋರಾಡಬೇಕಿದೆ. ಈಗ ದೈಹಿಕ ಕೌಶಲ್ಯಕ್ಕಿಂತ ಬೌದ್ಧಿಕ ಕೌಶಲ್ಯದ ಅನಿವಾರ್ಯತೆ. ಅಷ್ಟಕ್ಕೂ ಇಂದಿನ ದಿನದಲ್ಲಿ ನಾವು Survival Skills ಹಾಗೂ ದೈಹಿಕ ಕೌಶಲ್ಯವನ್ನ ಪ್ರಾಣಿಗಳಿಗೆ ಮಾತ್ರ ಅನ್ವಯಿಸುತ್ತೇವೆ. ಮನುಷ್ಯನಿಗೆ ಸಂಬಂಧಪಟ್ಟಂತೆ ಇವು ಕೌಶಲ್ಯಗಳೇ ಅಲ್ಲವಾಗಿರುವ ಕಾಲ ಇದು.

ಹಾಗಾದರೆ ಇಂದಿನ ಕೌಶಲ್ಯಗಳಾವುದು ಎಂದರೆ ನಾವು ಉದ್ಯೋಗ ಕೇಂದ್ರಿತ ಲೆಕ್ಕಾಚಾರ ಮಾಡಿ ವೃತ್ತಿ ಕೌಶಲ್ಯ ಎಂದು ಬಿಡುತ್ತೇವೆ. ಬದುಕನ್ನು ಗೆಲ್ಲಿಸುವ ಕೌಶಲ್ಯದಲ್ಲಿ ವೃತ್ತಿ ಕೌಶಲ್ಯ ಒಂದು ಭಾಗ ಮಾತ್ರ. ಹಾಗಾದರೆ ಏನೆಲ್ಲವನ್ನ ಕೌಶಲ್ಯವೆಂದು ಪರಿಗಣಿಸಬಹುದು. ಪ್ರತಿ ಜ್ಞಾನವೂ ಕೌಶಲ್ಯವಾಗುತ್ತದೆ, ಅನ್ವಯಿಸುವ ವಿಧಾನ ಗೊತ್ತಿದ್ದರೆ. ಹಲವು ಕೌಶಲ್ಯಗಳನ್ನ ಒಟ್ಟು ಸೇರಿಸಿ ವರ್ಗೀಕರಣ ಮಾಡಿದರೆ ಸಿಗುವುದು ಪ್ರಮುಖವಾಗಿ ಮೂರೇ ಮೂರು ಕೌಶಲ್ಯಗಳ ಗುಚ್ಛ.

1. ವೃತ್ತಿ ಕೌಶಲ್ಯ (Professional skills) : ವೃತ್ತಿ ಕೌಶಲ್ಯವೆಂದರೆ ಯಾವುದೇ ಒಂದು ಕೆಲಸವನ್ನ ಅಥವಾ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಲು, ನಿಭಾಯಿಸಲು ಬೇಕಾದ ನೈಪುಣ್ಯತೆ. ಇಲ್ಲಿ ಅನೇಕ ವಿಷಯಗಳಲ್ಲಿ ಪರಿಣಿತಿ ಬೇಕಾಗುತ್ತದೆ. ಸಂವಹನ (communication), ತಂಡವಾಗಿ ಕಾರ್ಯನಿರ್ವಹಿಸುವ (team work), ಸಮಸ್ಯಯನ್ನು ನಿವಾರಿಸುವ (Problem solving), ಸಂಘಟಿಸುವ (organizing), ತಂತ್ರಜ್ಞಾನ ಅಳವಡಿಕೆಯ, ಸಮಯ ನಿರ್ವಹಣೆಯ ಕೌಶಲ್ಯಗಳೆಲ್ಲ ವೃತ್ತಿ ಕೌಶಲ್ಯದ ಭಾಗಗಳು.

2. ಸಾಮಾಜಿಕ ಕೌಶಲ್ಯ (Social skills): ಸಾಮಾಜಿಕ ಜೀವನದಲ್ಲಿ ನಾಗರಿಕನಂತೆ ಬದುಕಬೇಕಾದರೆ ಮನುಷ್ಯ ಒಂದಷ್ಟು ಜೀವನ ವಿಧಾನಗಳನ್ನ ರೂಢಿಸಿಕೊಂಡಿರುತ್ತಾನೆ. ಬದುಕಲು ಅಷ್ಟು ಸಾಕು, ಆದರೆ ಸಾಮಾಜಿಕವಾಗಿ ಗೆಲ್ಲುವುದಕ್ಕೆ ಅಷ್ಟು ಸಾಲುವುದಿಲ್ಲ. ಸಾಮಾಜಿಕ ನಡತೆಯ, ಸ್ವಯಂ ಮೌಲ್ಯಮಾಪನದ, ಸಾಮಾಜಿಕ ಮೌಲ್ಯಗಳನ್ನು ಪಾಲಿಸುವ, ಸಂಸ್ಕøತಿಯನ್ನು ಗೌರವಿಸುವ ನೈಪುಣ್ಯಗಳು ಸೇರಿ ಸಾಮಾಜಿಕ ಕೌಶಲ್ಯವಾಗುತ್ತದೆ. ಇದರಲ್ಲಿ ವ್ಯಕ್ತಿತ್ವ ವಿಕಸನವೂ, ನಾಯಕತ್ವದ ಕೌಶಲ್ಯವೂ ಸೇರುತ್ತದೆ.

3. ಜೀವನ ಕೌಶಲ್ಯ (Life skills): ಬದುಕಿನ ಅಗತ್ಯತೆಯ ಎಲ್ಲವೂ ಜೀವನ ಕೌಶಲ್ಯಗಳೇ. ಹಾಗೆ ನೋಡಿದರೆ ವೃತ್ತಿ ಹಾಗೂ ಸಾಮಾಜಿಕ ಕೌಶಲ್ಯಗಳೂ ಜೀವನ ಕೌಶಲ್ಯದ ಭಾಗವೇ. ಆದರೂ, ವೃತ್ತಿ ಬದುಕು ಮತ್ತು ಸಾಮಾಜಿಕ ಬದುಕನ್ನು ಹೊರತುಪಡಿಸಿ ಮನುಷ್ಯನಿಗೆ ತನ್ನದೇ ಆದ ಜೀವನವೊಂದಿರುತ್ತದೆ. ವೃತ್ತಿ ಮತ್ತು ಸಮಾಜದಲ್ಲಿ ಸೋತವರೆನಿಸಿಕೊಂಡವವರೆಲ್ಲ ಜೀವನದಲ್ಲಿ ಗೆದ್ದು ಸ್ಪೂರ್ತಿಗಳಾದ ಉದಾಹರಣೆಗಳಿವೆ. ಜೀವನ ಕೌಶಲ್ಯವೇ ಅಂತದ್ದು, ಇಲ್ಲಿ ಎಲ್ಲವೂ ಸಲ್ಲುತ್ತದೆ. ಹೊಸ ಅನ್ವೇಷಣೆ, ಹೊಸತುಗಳ ಕಲಿಕೆ, ಕನಸುಗಳನ್ನು ಸಾಕಾರಗೊಳಿಸುವ ಹೋರಾಟದ ಛಾತಿ ಎಲ್ಲ ಜೀವನ ಕೌಶಲ್ಯದ ಭಾಗಗಗಳು.

ಭಾರತದ ಕೈಗಾರಿಕಾ ಕ್ರಾಂತಿಗೆ ಚಾಲನೆ ಕೊಟ್ಟ ಜೇಮ್‍ಷೆಡ್ ಜಿ ಟಾಟಾ, ಮಂಗಳೂರಿನಲ್ಲಿ ಓದಿ ಜಗತ್ತಿನ ಅಗ್ರಗಣ್ಯ ಸಾಪ್ಟವೇರ್ ಸಂಸ್ಥೆ ಮೈಕ್ರೋಸಾಪ್ಟ್‍ನ ಮುಖ್ಯಕಾರ್ಯನಿರ್ವಾಹಕನಾದ ಸತ್ಯ ನಾದೆಲ್ಲಾ, ಆಪಲ್ ಕಂಪನಿ ಸ್ಥಾಪಿಸಿ ಗೆದ್ದ ಸ್ಟೀವ್ ಜಾಬ್ಸ್, ಕಾರು ಉತ್ಪಾದನೆಯಲ್ಲಿ ಕ್ರಾಂತಿ ಮಾಡಿದ ಹೆನ್ರಿ ಪೋರ್ಡ್, ಮಾನವ ಕಂಪ್ಯೂಟರ್ ಎಂದು ಹೆಸರು ಪಡೆದ ಶಕುಂತಲಾ ದೇವಿ ಇವರೆಲ್ಲ ವೃತ್ತಿ ಕೌಶಲ್ಯದ ಗೆಲುವಿನ ಉದಾಹರಣೆಗಳಾದರೆ, ಮದರ್ ಥೆರೆಸಾ, ಗಾಂಧೀಜಿ, ನೆಲ್ಸನ್ ಮಂಡೇಲಾ ಇವರೆಲ್ಲ ಸಾಮಾಜಿಕ ಕೌಶಲ್ಯದ ಮೂರ್ತರೂಪಗಳು. ನಿರಂತರ ಸೋಲನ್ನೂ ಮೆಟ್ಟಿ ನಿಂತು ಗೆದ್ದ ಥಾಮಸ್ ಆಲ್ವಾ ಎಡಿಸನ್, ಅಂಧರ ಬದುಕಿನ ಸ್ಪೂರ್ತಿಯಾದ ಹೆಲೆನ್ ಕೆಲ್ಲರ್, ಭಾರತವನ್ನು ಹೊಸ ಶಕ್ತಿಯಿಂದ ಬೆಳಗಿದ ಸ್ವಾಮಿ ವಿವೇಕಾನಂದ ಇವರೆಲ್ಲ ಜೀವನ ಕೌಶಲ್ಯದ ಸಾಧಕರು.

ಭಾರತದ ಕ್ಷಿಪಣಿ ತಂತ್ರಜ್ಞಾನದ ಸಾಧಕ, ಮಾಜಿ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂ ಗೊತ್ತಲ್ಲ ಇವರು ತಮ್ಮ ವೈಜ್ಞಾನಿಕ ಕಾರ್ಯಗಳಿಂದ ವೃತ್ತಿ ಕೌಶಲ್ಯಕ್ಕೂ, ರಾಷ್ಟ್ರಪತಿ ಹುದ್ದೆ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಸಾಮಾಜಿಕ ಕೌಶಲ್ಯಕ್ಕೂ ಹಾಗೂ ಜೀವನದ ಹೋರಾಟಗಳಿಂದ ಸ್ಪೂರ್ತಿಯಾಗುವ ಮೂಲಕ ಜೀವನ ಕೌಶಲ್ಯಕ್ಕೂ ಉದಾಹರಣೆಯಾಗಿ ನಿಲ್ಲುತ್ತಾರೆ. ಮನುಷ್ಯ ವೃತ್ತಿ ಕೌಶಲ್ಯಗಳಿಂದ ವೈಯಕ್ತಿಕ ಬೆಳವಣಿಗೆಯನ್ನೂ, ಸಾಮಾಜಿಕ ಕೌಶಲ್ಯಗಳಿಂದ ಸಮಾಜದ ಅಭಿವೃದ್ಧಿಯನ್ನೂ ಹಾಗೂ ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗುವ ರೀತಿಯಿಂದ ಜೀವನ ಕೌಶಲ್ಯವನ್ನೂ ರೂಢಿಸಿಕೊಂಡಾಗ ಬದುಕಿನ ಪೂರ್ಣತೆಯನ್ನ ಸಾಧಿಸಲು ಸಾಧ್ಯವಾಗುತ್ತೆ ಅಲ್ವೆ.

ರಘುನಂದನ ಕೆ. ಹೆಗಡೆ

* * * * * * *

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x