ಅಂಬೇಡ್ಕರ್ ಎಂಬ ಶಕ್ತಿಯೇ ನಿನ್ನೆಯ ಹೋರಾಟ ; ಇಂದಿನ ಬೆಳಕು, ನಾಳಿನ ಬಾಳ ಬುತ್ತಿ: ನಾಗರಾಜ್ ಹರಪನಹಳ್ಳಿ

 

ನಮ್ಮ ಕಣ್ಣ ಮುಂದಿನ ಬೆಳಕು ಅಂಬೇಡ್ಕರ್. ಅವರು ಭಾರತದ ಅಂತಃಶಕ್ತಿ ಹೆಚ್ಚಿಸಿದ ಮಹಾ ಮನವತಾವಾದಿ. ಅಂಬೇಡ್ಕರ್ ಪ್ರಜಾಪ್ರಭುತ್ವವಾದಿ. ಮಹಿಳಾವಾದಿ, ಕಾರ್ಮಿಕರ ಬಂಧು. ಮನುಷ್ಯತ್ವದ ಪ್ರತಿಪಾದಕ. ಶೋಷಿತರಿಗೆ ಪ್ರೀತಿ ಅಂತಃಕರಣದ ನದಿಯನ್ನೇ ಹರಿಸಿದ ಮನುಷ್ಯ, ಅಂಬೇಡ್ಕರ್ 1891ರಲ್ಲಿ ಜನಸಿದ್ದು. ಅವರ 128ನೇ ಜನ್ಮದಿನಕ್ಕೆ ನಾವಿಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ.

ಬಾಬಾ ಸಾಹೇಬ್ ನಮ್ಮಿಂದ ಭೌತಿಕವಾಗಿ ದೂರವಾಗಿ 63 ವರ್ಷ ಕಳೆದಿದ್ದರೂ, ಅವರನ್ನು ದೇಶ ಪ್ರತಿ ದಿನ, ಪ್ರತಿಕ್ಷಣ ನೆನಪಿಸಿಕೊಳ್ಳುವ ಭಾರತದ ಬಹುಮುಖ ಪ್ರತಿಭೆ. ಅವರು ನೀಡಿದ ಸಂವಿಧಾನದ ಮಹಾಧರ್ಮದಲ್ಲಿ ದೇಶ ಮುನ್ನೆಡದಿದೆ.

ಅವರು ಬಾಲ್ಯದಲ್ಲಿ ಅನುಭವಿಸಿದ ಬವಣೆ, ಕಷ್ಟ, ಅಸ್ಪøಶ್ಯತೆ, ಅವಮಾನಗಳೆಲ್ಲವೂ ದೇಶಕ್ಕೆ ತಿಳಿದಿದೆ. ಬರೋಡ ಮಹಾರಾಜ ಸಯ್ಯಾಜಿರಾವ್ ಗಾಯಕವಾಡ ಅವರ ಕರುಣೆ ಮತ್ತು ಆರ್ಥಿಕ ಸಹಾಯ ಅಂಬೇಡ್ಕರ್ ಅವರ ಓದಿನ ಮಹದಾಸೆಗೆ ನೀರೆರಿಯಿತು. ಅವರಿಗೆ ಕಲಿಸಿದ ಗುರುಗಳು ಅಂಬೇಡ್ಕರ್ ಪ್ರತಿಭೆಯನ್ನು ಗುರುತಿಸಿದ್ದು ಅತ್ಯಂತ ಮಹತ್ತರ ಕ್ಷಣ. ಅವರಲ್ಲಿದ್ದ ಅಪಾರ ನೆನಪಿನ ಶಕ್ತಿ ಮತ್ತು ಕಲಿಯುವ ಹಂಬಲ ಗುರುತಿಸಿ ಗುರುಗಳಾದ ಎಸ್.ಕೆ.ಬೋಲೆ ಮತ್ತು ಕೃಷ್ಣಾಜಿ ಅರ್ಜುನ್ ಕೆಲೂಸ್ಕರ್ ಮತ್ತು ಬಿ.ಎ.ಕಲಿಯುವಾಗ ಪ್ರಾಧ್ಯಾಪಕ ಮುಲ್ಲರ್ ಅಪಾರ ನೆರವು ನೀಡಿದರು. ಅಂಬೇಡ್ಕರ್ ಅವರ ಗುರು ಕೆಲೂಸ್ಕರ್ ಗೌತಮ ಬುದ್ಧನ ಜೀವನ ಚರಿತ್ರೆಯನ್ನು ಪಡೆದಿದ್ದ ಬಾಲಕ ಅಂಬೇಡ್ಕರ್ ಮನಸಲ್ಲಿ ಬಾಲ್ಯದಲ್ಲೇ ಬುದ್ಧನ ಚಿತ್ರಣ ಅಚ್ಚೊತ್ತಿತ್ತು ಎಂಬುದು ಗಮನಾರ್ಹ.

ಅಂತೂ 1913ರ ವೇಳೆಗೆ ಅಮೆರಿಕಾದ ನ್ಯೂಯಾರ್ಕ ತಲುಪಿದ ಅಂಬೇಡ್ಕರ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ,ಜನಾಂಗ ವಿಜ್ಞಾನ,ನೀತಿ ಮೀಮಾಂಸೆ ಅಧ್ಯಯನ ಮಾಡಿದರು.

ಅವರು ನಿನ್ನೆಯ ಹೋರಾಟವಾಗಿದ್ದರು. ಅವರ ಬದುಕಿನ 1913 ರಿಂದ 1916 ರವರೆಗಿನ ಕಲಿಕೆ ಮಹತ್ವದ್ದು, ಪ್ರಾಚೀಯ ಭಾರತೀಯ ವಾಣಿಜ್ಯ ವಿಷಯದ ಪ್ರಬಂಧ ಅವರಿಗೆ 1915ರಲ್ಲಿ ಎಂ.ಎ.ಪದವಿಯನ್ನು ಪೂರ್ಣಗೊಳಿಸುವಂತೆ ಮಾಡಿತು. ಹಾಗೂ ಭಾರತದಲ್ಲಿ ಜಾತಿಗಳು ಎಂಬ ವಿಷಯದಲ್ಲಿ ಸಹ ಪ್ರಬಂಧ ಮಂಡಿಸಿದ್ದರು. ಭಾರತದಲ್ಲಿ ಬ್ರಿಟಿಷ್ ಪ್ರಾಂತೀಯ ಆರ್ಥಿಕ ವಿಕಾಸ ವಿಷಯದಲ್ಲಿ ಕೊಲಂಬಿಯಾ ವಿಶ್ವ ವಿದ್ಯಾಲಯಕ್ಕೆ ಮಹಾ ಪ್ರಬಂಧ ಅರ್ಪಿಸಿದರು. ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಅಲ್ಲಿನ ಸಮಾಕಾಲೀನ ಚಳುವಳಿಗಳು , ಅಬ್ರಾಹಂ ಲಿಂಕನ್ ಜೀವನ ಹಾಗೂ ಕರಿಯರು ಹಕ್ಕುಗಳಿಗಾಗಿ ಮಾಡಿದ್ದ ಹೋರಾಟಗಳು ಸಹಜವಾಗಿ ಅಂಬೇಡ್ಕರ್‍ರ ಮೇಲೆ ಪ್ರಭಾವ ಬೀರಿದ್ದವು.
ಡಾಕ್ಟರೇಟ್ ಪಡೆಯುವತನಕದ ಅಧ್ಯಯನಶೀಲತೆ ಮತ್ತು ನಂತರ ಲಂಡನ್‍ಗೆ ಬಂದು ಅಧ್ಯಯನ ಮುಂದುವರಿಸಿದ್ದು ಒಂದು ಘಟ್ಟ.

ಸ್ಕಾಲರ್ ಶಿಪ್ ಅವಧಿ ಮುಗಿದಿದೆ ಎಂಬ ಪತ್ರ ಬರೋಡ ದಿವಾನರಿಂದ ಅಂಬೇಡ್ಕರ್ ಕೈ ಸೇರಿತು. ಅನಿವಾರ್ಯವಾಗಿ 1917 ಅಗಸ್ಟ್ 21 ರಂದು ಕೊಲಂಬೊ ಮಾರ್ಗವಾಗಿ ಅವರು ಮುಂಬಯಿ ತಲುಪಿದರು. ಆನಂತರವೂ ಅಂಬೇಡ್ಕರ್ ಅವರಿಗೆ ಅಸ್ಪøಶ್ಯತೆಯ ಅವಮಾನಗಳಾದವು. 1918ರಲ್ಲಿ ಬರೋಡಾಕ್ಕೆ ಬಂದ ಅಂಬೇಡ್ಕರ್ ಮಹಾರಾಜರೊಂದಿಗೆ (ವಿದೇಶಕ್ಕೆ ತೆರಳುವ ಮುನ್ನ) ಆದ ಕರಾರಿನಂತೆ ಸೇನಾ ಕಾರ್ಯದರ್ಶಿ ಹುದ್ದೆ ಸಿಕ್ಕಿತಾದರೂ, ಅವಮಾನ ತಪ್ಪಲಿಲ್ಲ. ಅಲ್ಲಿನ ಮೇಲ್ಜಾತಿಯ ಸಿಬ್ಬಂದಿಗಳು ಅಂಬೇಡ್ಕರ್ ಜೊತೆ ಸಹಕರಿಸಲಿಲ್ಲ. ಉಳಿಯಲು ಮನೆ ಸಿಗಲಿಲ್ಲ. ಪಾರ್ಸಿ ಹೋಟೆಲ್‍ನಲ್ಲಿ ಜಾತಿ ವಿಷಯದಲ್ಲಿ ಸುಳ್ಳು ಹೇಳಿ ಉಳಿಯಬೇಕಾಯಿತು. ಅಂಬೇಡ್ಕರ್ ಮಹಾರ್ ಎಂಬ ವಿಷಯ ತಿಳಿಯುತ್ತಲೇ ಅವರ ಮೇಲೆ ಗುಂಪು ಹಲ್ಲೆಯಾಯಿತು. ಜಾತಿ ನಿಂದನೆ , ಬೆದರಿಕೆ ಕಾರಣವಾಗಿ 11 ದಿನಗಳಲ್ಲಿ ಸೇನಾ ಕಾರ್ಯದರ್ಶಿ ಹುದ್ದೆ ಬಿಟ್ಟು ಮುಂಬಯಿಗೆ ಬಂದ ಅಂಬೇಡ್ಕರ್ ಕಾಲೇಜಿಯಲ್ಲಿ ಪ್ರಾಧ್ಯಾಪಕರಾದರು. ಲಂಡನ್‍ನಲ್ಲಿ ಇದ್ದಾಗ ಪರಿಚಯವಾಗಿದ್ದ ಗೆಳೆಯ ಸಿಡನ್ ಹ್ಯಾಂ ಅಂಬೇಡ್ಕರ್ ಅವರ ನೆರವಿಗೆ ಬಂದ. 1920ರಲ್ಲಿ ಅಂಬೇಡ್ಕರ್ ಮೂಕ ನಾಯಕ ಪತ್ರಿಕೆ ಪ್ರಾರಂಭಿಸಿದರು. ಇದೇ ವೇಳೆ ಕೊಲ್ಹಾಪುರ ಸಂಸ್ಥಾನದ ಶಾಹು ಮಹಾರಾಜ ಅಂಬೇಡ್ಕರ್ ಅವರಿಗೆ ಆರ್ಥಿಕ ನೆರವು ನೀಡಿ. ಅಂಬೇಡ್ಕರ್ ಅವರ ವಿದ್ವತ್‍ನ್ನು ಹೊಗಳಿದರು.

1917 ಮತ್ತು 1918ರಲ್ಲಿ ನಿಮ್ನ (ಶೋಷಿತ) ವರ್ಗದ ಸಮ್ಮೇಳನಗಳಿಂದ ಅಂಬೇಡ್ಕರ್ ಅಂತರವನ್ನು ಕಾಪಾಡಿಕೊಂಡೇ, ಅವುಗಳ ಚಲನೆಯನ್ನು ಗಮನಿಸಿದರು. ಆ ನಂತರ ಅವರು ಶೋಷಿತರಿಗಾಗಿ ತಮ್ಮದೇ ಆದ ದಾರಿಯಲ್ಲಿ ಹೋರಾಟಗಳ ಮೂಲಕ ಸಹನೆಯಿಂದ ಹೋರಾಡಿದ್ದು, ಮೂಕ ನಾಯಕ, ಬಹಿಷ್ಕøತ ಭಾರತ ಮತ್ತು ಜನತೆ ಪತ್ರಿಕೆಗಳ ಮೂಲಕ ಪ್ರಯತ್ನಿಸಿದ್ದು ದೊಡ್ಡ ಇತಿಹಾಸ.

ಶಾಹು ಮಹಾರಾಜರ ನೆರವಿನಿಂದ ಶೋಷಿತ ಸಮುದಾಯಗಳ ಬೃಹತ್ ಸಮಾವೇಶವನ್ನು ಅಂಬೇಡ್ಕರ್ ಸಂಘಟಿಸಿದರು. 1924 ರಲ್ಲಿ ಬಹಿಷ್ಕøತ ಹಿತಕಾರಣಿ ಸಭಾ ಮೂಲಕ ಶೋಷಿತರಿಗೆ ಶಿಕ್ಷಣ ನೀಡಲು ಮುಂದಾದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವವನ್ನು ಅಂಬೇಡ್ಕರ್ ಸಮಾಜದ ಮುಂದಿಟ್ಟರು.
1927ರಲ್ಲಿ ಚೌಡರ್ ಕೆರೆ ಚಳುವಳಿ ಮಹತ್ವದ ಘಟ್ಟ. ದಲಿತ ಸಮುದಾಯ ಕೆರೆಯ ನೀರನ್ನು ಸಹ ಮುಟ್ಟದಂತೆ ಸವರ್ಣಿಯರು ದಲಿತರನ್ನು ದೂರ ಇಟ್ಟಿದ್ದರು. ಈ ಸಂಗತಿ ಅಂಬೇಡ್ಕರ್ ಅವರನ್ನು ತೀವ್ರವಾಗಿ ಕಾಡಿತ್ತು. ಇದನ್ನು ಪ್ರತಿಭಟಿಸಲು 1927 ಮಾರ್ಚ ತಿಂಗಳ 19 ಮತ್ತು 20 ರಂದು ಮುಂದಾದರು. ಅದು ಮಹಾರಾಷ್ಟ್ರದ ಕೊಲಾಬಾ ಬಳಿಯ ಮಹದ್ ಗ್ರಾಮ. ಮಹದ್ ಕೆರೆಯ ನೀರನ್ನು ಕುಡಿದು, ವಿಶ್ರಾಂತಿ ಪಡೆಯುತ್ತಿದ್ದರು. ಇದೇ ಸಮಯದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದ್ದಾರೆಂದು ಸವರ್ಣೀಯರು ಸುಳ್ಳು ಸುದ್ದಿ ಹಬ್ಬಿಸಿ ಅಂಬೇಡ್ಕರ್ ಅನುಯಾಯಿಗಳ ಮೇಲೆ ಹಲ್ಲೆ ಮಾಡಿದರು. ಇದನ್ನು ಸಹನೆಯಿಂದ ಸಹಿಸಿಕೊಂಡ ಅಂಬೇಡ್ಕರ್ , ಹಿಂಸೆಗೆ ಪ್ರಚೋದನೆ ನೀಡದೆ ದೊಡ್ಡತನ ಮೆರೆದರು. ದೇಶದೊಳಗಿನ ಅಸಮಾನತೆಗೆ ಸಹನೆಯಿಂದ ದಾರಿ ಕಂಡು ಕೊಂಡ ಅಂಬೇಡ್ಕರ್ ದೇಶದ ಪ್ರಜ್ಞಾವಂತರ ಮತ್ತು ಸವರ್ಣೀಯರ ಕಣ್ಣು ತೆರೆಸಿದರು.

ಗಾಂಧಿಜೀ ಮತ್ತು ಅಂಬೇಡ್ಕರ್ ಮಧ್ಯದ ವೈರುದ್ಧ್ಯಗಳು :
1928ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಬರುವ ಹೊತ್ತಿಗೆ, ಅಂಬೇಡ್ಕರ್ ಭಾರತದಲ್ಲಿನ ಅಸ್ಪøಶ್ಯರ ಮತ್ತು ತಳ ವರ್ಗಗಳ ಬವಣೆಯನ್ನು ಭಾರತದಲ್ಲಿನ ಬ್ರಿಟಿಷ್ ಅಧಿಪತ್ಯಕ್ಕೆ, ಬ್ರಿಟಿಷ್ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ, ಪ್ರತಿಭಟನೆಯ ಮೂಲಕ, ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಮುಟ್ಟಿಸಲು ಯತ್ನಿಸುತ್ತಲೇ ಇದ್ದರು. ಸೈಮನ್ ಕಮಿಷನ್ ಸಹ ಶೋಷಿತ ವರ್ಗದ ಮತ್ತು ಭಾರತದ ಬೌದ್ಧಿಕ ವಯಲದ ಚಿಂತನೆ ಮತ್ತು ಭಾರತೀಯರ ಬೇಡಿಕೆಗಳನ್ನು ಬ್ರಿಟಿಷ್ ರಾಜಾಧಿಕಾರಕ್ಕೆ ತಿಳಿಸಿದರು. ಸೈಮನ್ ಕಮಿಷನ್ ಬಳಿ ಹಾಗೂ 1930-33ರ ನಡುವೆ ಲಂಡನ್‍ನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಅಂಬೇಡ್ಕರ್ ಭಾರತದಲ್ಲಿನ ಪರಿಶಿಷ್ಟ ಜಾತಿ, ವರ್ಗಗಳ ಸ್ಥಿತಿ ನಿಗ್ರೋಗಳಿಗಿಂತ ಕಡೆಯಾಗಿದೆ ಎಂದು ಬ್ರಿಟಿಷ್ ಅಧಿಪತ್ಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಬ್ರಿಟಿಷ್ ಆಡಳಿತದಲ್ಲಿ ಸಹ ಶೋಷಿತ ವರ್ಗದ ಸ್ಥಿತಿ ಬದಲಾಗಿಲ್ಲ ಎಂದು ಬ್ರಿಟನ್ ನೆಲದಲ್ಲಿ ನಿಂತು ಬ್ರಿಟನ್‍ನ ಪ್ರಧಾನಿಗೆ ಹೇಳಿದರು. ಅಂಬೇಡ್ಕರ್ ಅವರ ಖಚಿತ ಮಾತಿನ ಪ್ರಖರತೆ ಅರಿತ ಬ್ರಿಟನ್ ಪ್ರಧಾನಿ ರ್ಯಾಮ್ಸೆ ಮ್ಯಾಕ್ ಡೊನಾಲ್ಡ್ ದಲಿತರಿಗೆ ಎರಡು ಮತದ ಅಧಿಕಾರ ನೀಡಿದರು. ದಲಿತರಿಗೆ ಮೀಸಲಾತಿ ಕ್ಷೇತ್ರಗಳಿಗೂ ಅವಕಾಶ ನೀಡುವ ಸುಳಿವು ಸಿಕ್ಕಿತು. ಅಸ್ಪøಶ್ಯರು ತಮ್ಮ ಪ್ರತಿನಿಧಿಗೆ ಒಂದು ಮತ, ಸವರ್ಣೀಯಗೆ ಒಂದ ಮತ ನೀಡಬಹುದು ಎಂಬ ಆದೇಶ ಕೇಳಿದ ಗಾಂಧೀಜಿ ಯರವಾಡ ಜೈಲಿನಲ್ಲಿ ಉಪವಾಸ ಕುಳಿತರು. ಬ್ರಿಟಿಷರು ದೇಶದ ಸವರ್ಣೀಯರು ಮತ್ತು ದಲಿತರನ್ನು ವಿಭಜಿಸುತ್ತಾರೆ ಎಂಬ ನಿಲುವು,ವಾದ ಗಾಂಧಿಜೀಯದಾಗಿತ್ತು. ಆದರೆ ಭಾರತೀಯ ಸಮಾಜದ ಅಸಮಾನತೆ ಮತ್ತು ಅಸ್ಪøಶ್ಯತೆ ಸಹ ದೇಶದಲ್ಲಿ ಸವರ್ಣೀಯರು ಮತ್ತು ದಲಿತರನ್ನು ವಿಭಜಿಸಿದೆ ಎಂಬುದು ಅಂಬೇಡ್ಕರ್ ವಾದವಾಗಿತ್ತು. ದಲಿತರಿಗೆ ಎರಡು ಮತಾಧಿಕಾರಿ ನೀಡಿದ್ದನ್ನು ವಿರೋಧಿಸಿ ಉಪವಾಸ ಕುಳಿತಿದ್ದ ಗಾಂಧಿಜೀ ಭಾವನಾತ್ಮಕ ಸಂಗತಿಗಳನ್ನು ಅಂಬೇಡ್ಕರ್ ಮೇಲೆ ಹೇರಿದರು. ಗಾಂಧಿಜೀ ಉಪವಾಸದಿಂದ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸಂಗತಿ ಅಂಬೇಡ್ಕರ್‍ಗೆ ತಲುಪಿತು. ಇದನ್ನು ತಿಳಿದ ಬಾಬಾ ಸಾಹೇಬ ತಮ್ಮ ಸಮುದಾಯಕ್ಕೆ ಸಿಕ್ಕಿದ್ದ ವಿಶೇಷ ಅಧಿಕಾರ ತ್ಯಜಿಸಲು ಅಂಬೇಡ್ಕರ್ ಮುಂದಾದರು. ಅಸ್ಪøಶ್ಯರಿಗೆ ಸಿಕ್ಕಿದ್ದ ದ್ವಿಮತ ಹಕ್ಕನ್ನು ಬಿಟ್ಟುಕೊಟ್ಟು `ಪೂನಾ ಒಡಂಬಡಿಕೆ’ಗೆ ಸಹಿ ಹಾಕಿದರು. ಆಗ ಅಂಬೇಡ್ಕರ್ ಮತ್ತೆ ದೊಡ್ಡದವರಾದರು. ಹಿಂದೂ ಧರ್ಮದ ಅಸ್ಪøಶ್ಯತೆ ಕಾರಣವಾಗಿ ಗಾಂಧಿಜೀ ಪಶ್ಚತ್ತಾಪಕ್ಕೆ ಎಂಬಂತೆ ಅಸ್ಪøಶ್ಯತಾ ನಿವಾರಣೆಗೆ ದೇಶದ ತುಂಬಾ ಪ್ರವಾಸ ಮಾಡಿದರು. ಅಸ್ಪøಶ್ಯತೆ ಆಚರಣೆ ಮಹಾಪಾಪ ಎಂದರು. ಹರಿಜನ ಪತ್ರಿಕೆ ತಂದರು. ಅಹಿಂಸೆಯ ಪ್ರತಿಪಾದಕನ ಕಣ್ಣು ತೆರೆಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಶಾಶ್ವತವಾಗಿ ಸಂದಾಯವಾಯಿತು.

ಭಾರತದಲ್ಲಿನ ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿ:
1935ರಲ್ಲಿ ಭಾರತದಲ್ಲಿ ಬ್ರಿಟಿಷ್ ಸರ್ಕಾರ ಭಾರತದ ಪ್ರತಿನಿಧಿಗಳನ್ನು ಸರ್ಕಾರದಲ್ಲಿ ಭಾಗಿ ಮಾಡಿಕೊಂಡಿತು. 1942 ರಿಂದ 44 ರ ಅವಧಿಯಲ್ಲಿ ಅಂಬೇಡ್ಕರ್ ಕಾರ್ಮಿಕ ಮಂತ್ರಿಯಾಗಿ ಹಲವು ಸುಧಾರಣೆಗಳನ್ನು ತಂದರು ಎಂಬುದು ಗಮನಾರ್ಹ. ಕಾರ್ಮಿಕರಿಗೆ ವಿಮೆ ಮತ್ತು ಕಾರ್ಮಿಕ ಆಸ್ಪತ್ರೆಗಳಿಗೆ ಮುನ್ನುಡಿ ಬರೆದದ್ದು ಆಗಲೇ.

ಹಿಂದೂ ಬಿಲ್ ಕೋಡ್‍ಗಾಗಿ ಮಂತ್ರಿ ಪದವಿ ಬಿಟ್ಟ ಅಂಬೇಡ್ಕರ್ :
ಸ್ವಾತಂತ್ರ್ಯ ನಂತರ ಅಂಬೇಡ್ಕರ್ 2 ವರ್ಷ 11 ತಿಂಗಳು 17 ದಿನಗಳಲ್ಲಿ ಸಂವಿಧಾನ ರಚಿಸಿಕೊಟ್ಟರು. 1950 ಜನೇವರಿ 26 ರಂದು ಸಂವಿಧಾನ ಅಂಗೀಕರಿಸಿದ ಭಾರತದ ಸಂಸತ್ತು ಗಣರಾಜ್ಯ ಎಂದು ಘೋಷಿಸಿಕೊಂಡಿತು. ಆಗ ಅಂಬೇಡ್ಕರ್ ಒಂದು ಮಾತು ಹೇಳಿದರು… `ರಾಜಕೀಯ ಸಮಾನತೆಯನ್ನು ನಾವು ಸಾಧಿಸಿದ್ದೇವೆ. ವೈರುದ್ಧ್ಯಗಳ ಬದುಕಿಗೆ ಕಾಲಿಡಲಿದ್ದೇವೆ. ಒಂದು ಮತ, ಒಂದು ಮೌಲ್ಯ ಎಂದು ಒಪ್ಪಿಕೊಂಡಿದ್ದೇವೆ. ಸಾಮಾಜಿಕ ಸಮಾನತೆ ನಿರಾಕರಿಸಿದರೆ, ಸಮಾನತೆ ಸಾಧಿಸದೇ ಹೋದರೆ ಪ್ರಜಾಸತ್ತೆಗೆ ಗಂಡಾಂತರ’ ಇದೆ ಎಂದು ಭವಿಷ್ಯ ನುಡಿದರು.

1951 ರಲ್ಲಿ ಚುನಾವಣೆ ನಡೆದು ಲೋಕಸಭೆ ಅಸ್ತಿತ್ವಕ್ಕೆ ಬಂತು. ದೇಶದ ಮೊದಲ ಕಾನೂನು ಸಚಿವರಾಗಿ ಅಂಬೇಡ್ಕರ್ ಕಾರ್ಯ ನಿರ್ವಹಿಸಿದರು. ಮಹಿಳೆಯರಿಗೆ ಆಸ್ತಿಯ ಹಕ್ಕು ಹಾಗೂ ಸಮಾನತೆ ನೀಡುವ ಹಿಂದೂ ಬಿಲ್ ಕೋಡ್ ಮಂಡಿಸಿದರು. ಸಂಸತ್ತನಲ್ಲಿ ಅದಕ್ಕೆ ಬಹುಮತ ಸಿಗಲಿಲ್ಲ. ಲೋಕಸಭೆಯ ಸಂಸದರು ಅಂಬೇಡ್ಕರ್ ನಿಲುವನ್ನು ಹಲವರು ಸಮರ್ಥಿಸಲಿಲ್ಲ. ಇದರಿಂದ ಬೇಸರಗೊಂಡ ಅಂಬೇಡ್ಕರ್ ಕಾನೂನು ಮಂತ್ರಿ ಪದವಿಗೆ 1951 ಸೆಪ್ಟಂಬರ್‍ನಲ್ಲಿ ರಾಜೀನಾಮೆ ನೀಡಿದರು.

ತಮ್ಮ ಸಾಮಾಜಿಕ ಪರಿವರ್ತನೆಯ ಹೋರಾಟವನ್ನು ಅವರು ಕೈಬಿಡಲಿಲ್ಲ. ಇದೇ ವೇಳೆ 1952ರಲ್ಲಿ ಅಮೆರಿಕಾದ ಕೊಲಂಬಿಯಾ ವಿವಿ ಡಾಕ್ಟರೆಟ್ ಪದವಿ ನೀಡಿ ಗೌರವಿಸಿತು. ದೇಶದ ಉಸ್ಮಾನಿಯ ವಿವಿ ಗೌರವಿಸಿತು. ಅಂಬೇಡ್ಕರ್ ಆರೋಗ್ಯ ಆಗಾಗ ಕೈಕೊಡುತ್ತಲೇ ಇತ್ತು. ಇದರ ನಡುವೆಯೂ ಅವರು 1956 ಅಕ್ಟೋಬರ್ 13 ರಂದು ದೆಹಲಿಯಿಂದ ನಾಗಪುರ ತಲುಪಿದರು. ತಮ್ಮ ಬದುಕಿನ ಮಹತ್ತರ ಆಕಾಂಕ್ಷೆಯಾಗಿದ್ದ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ, ಸಮಾನತೆ ಮತ್ತು ಸಹೋದರತ್ವ ಪ್ರೀತಿ ಬೋಧಿಸುವ ,ಅನುಸರಿಸುವ ಬೌದ್ಧ ಧರ್ಮಕ್ಕೆ 1956 ಅಕ್ಟೋಬರ್ 14 ರಂದು ಮತಾಂತರವಾದರು. 5 ಲಕ್ಷ ಜನ ಈ ಘಟನೆಗೆ ಸಾಕ್ಷಿಯಾಗಿದ್ದರು. ಮರದಿನ 2 ಲಕ್ಷ ಜನ ಶೋಷಿತರನ್ನು ಬೌದ್ಧಧರ್ಮಕ್ಕೆ ಸೇರಿಸಿ ಸಮಾನತೆ ಮತ್ತು ಪ್ರೀತಿಯ ಬೋಧೆ ನೀಡಿದರು. 15 ನವ್ಹೆಂಬರ್ ನೇಪಾಳಕ್ಕೆ ಹೋಗಿದ್ದ ಅಂಬೇಡ್ಕರ್ ಅವರು ಅಲ್ಲಿನ ದೊರೆ ಮಹೇಂದ್ರರ ಜೊತೆ ಖಟ್ಮಂಡುವಿನಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿ ಮಾಕ್ರ್ಸ ಮತ್ತು ಬುದ್ಧನ ಮೇಲೆ ಉಪನ್ಯಾಸ ನೀಡಿದರು. 2 ಡಿಸೆಂಬರ್ 1956 ರಂದು ದೆಹಲಿಯ ಅಶೋಕ ವಿಹಾರದಲ್ಲಿ ಬೌದ್ಧಧರ್ಮಗುರು ದಲೈಲಾಮರನ್ನು ಅಂಬೇಡ್ಕರ್ ಭೇಟಿ ಮಾಡಿ ಚರ್ಚಿಸಿದ್ದರು. ಜಗತ್ತಿನ ವಿವಿದೆಡೆ , ಭಾರತದ ವಿವಿದೆಡೆ ಬೌದ್ಧಧರ್ಮವನ್ನು ಪ್ರಚಾರ ಮಾಡುವ ಹಂಬಲ ಅಂಬೇಡ್ಕರ್ ಅವರದಾಗಿತ್ತು. ಆದರೆ 6 ಡಿಸೆಂಬರ್ 1956 ರಂದು ಅಂಬೇಡ್ಕರ್ ನಮ್ಮನ್ನೆಲ್ಲಾ ಬಿಟ್ಟು ಹೋದರು.

ಅಂಬೇಡ್ಕರ್ ಸಾಧನೆಗಳು:
ಅಂಬೇಡ್ಕರ್ ಮಹಿಳೆಗೆ ಅಸ್ತಿ ಹಕ್ಕು ಪ್ರತಿಪಾದಿಸಿದರು. ಶಿಕ್ಷಣ ಮತ್ತು ಉದ್ಯೋಗ ಪ್ರತಿಪಾದಿಸಿದರು. ವೇತನ ಸಹಿತ ಹೆರಿಗೆ ರಜೆ ಆಗಬೇಕು, ಕೆಲಸದ ಅವಧಿ 8 ತಾಸು ಇರಬೇಕೆಂದು ಪ್ರತಿಪಾದಿಸಿದರು. ಕಾರ್ಮಿಕರಿಗೆ ವಿಮೆ ಮತ್ತು ಕಾರ್ಮಿಕ ಆಸ್ಪತ್ರೆಗಳನ್ನು ತೆರೆಯುವಂತೆ ಯೋಜನೆ ಮುಂದಿಟ್ಟರು. ಆರ್.ಬಿ.ಐ. ಸ್ಥಾಪನೆಗೆ ಮುನ್ನುಡಿ ಬರೆದವರು ಅಂಬೇಡ್ಕರ್. ದಾಮೋದರ ಕಣಿವೆ ನೀರಾವರಿ ಯೋಜನೆ ರೂಪಿಸಿದವರು ಅಂಬೇಡ್ಕರ್. ದೇಶದ ವಿದ್ಯುತ್ ಯೋಜನೆಗಳು, ಸಂವಿಧಾನ, ಮೀಸಲಾತಿ ಪರಿಕಲ್ಪನೆ, ಹಿಂದುಳಿದ ವರ್ಗಗಳ ಕಲ್ಯಾಣ, ರಾಜಕೀಯ ಮತ್ತು ಸಾಮಾಜಿಕ, ಶೈಕ್ಷಣಿಕ ಸಮಾನತೆಗಳನ್ನು ಪ್ರತಿಪಾದಿಸಿ, ಕನಸುಗಳು ನನಸಾಗುವಂತೆ ನೋಡಿಕೊಂಡವರು ಬಾಬಾ ಸಾಹೇಬ್ ಅಂಬೇಡ್ಕರ್. ಸಮಾನತೆ ಇಲ್ಲದ ಸ್ವಾತಂತ್ರ್ಯ ಅರ್ಥಹೀನ ಎಂದು ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸುತ್ತಿದ್ದರು.

ಅಂಬೇಡ್ಕರ್ ಶೋಷಿತ ಜನಾಂಗದ ಪಾಲಿಗೆ ನಿತ್ಯ ಬೆಳಗುವ ಸೂರ್ಯ. ಅವರು ಸಂವಿಧಾನದ ಜಾತ್ಯಾತೀತೆ ಮತ್ತು ಸಮಾನತೆ ಒಪ್ಪುವವರ ಪಾಲಿನ ಬೆಳುದಿಂಗಳು, ಒಪ್ಪದವರ ಪಾಲಿಗೆ ಬೊಗಸೆಯಲ್ಲಿನ ಕೆಂಡ ಎಂಬುದು ನಿತ್ಯ ಸತ್ಯ.

ನಾಳಿನ ಬಾಳ ಬುತ್ತಿ:
ಭಾರತದಂತಹ ರಾಷ್ಟ್ರದಲ್ಲಿ ಅಂಬೇಡ್ಕರ್ ಪ್ರಸ್ತುತಿ ಹೆಚ್ಚಿದೆ. ಬಹು ಸಂಸ್ಕøತಿಗಳ, ಬಹುಧರ್ಮೀಯ, ಬಹು ಜನ ಸಮುದಾಯದಗಳ ನಡುವೆ ಐಕ್ಯತೆ ಮತ್ತು ಸಮಾನತೆ ಸಾಧಿಸಲು ಸಂವಿಧಾನ ಮಾತ್ರ ನಮಗೆ ದಾರಿ ತೋರಬಲ್ಲದು. ಪ್ರಜಾಭುತ್ವದ ಅನೇಕ ವೈರುದ್ಧ್ಯಗಳ ನಡುವೆಯೂ ಅಂಬೇಡ್ಕರ್ ನಮಗೆ ಬಹುದೊಡ್ಡ ಆಶಾಕಿರಣವಾಗಿದ್ದಾರೆ. ಅಂಬೇಡ್ಕರ್ 1930 ರಿಂದ 1956 ರವರೆಗೆ ಆಲೋಚಿಸಿದ ಕ್ರಮ ಮತ್ತು ಕೈಗೊಂಡ ಹೆಜ್ಜೆಗಳು ಭಾರತೀಯ ಶೋಷಿತ ಸಮುದಾಯಕ್ಕೆ ಬೆಳಕಾಗಿವೆ. ಬಾಳ ಬುತ್ತಿಯಾಗಿವೆ ಎಂಬುದರಲ್ಲಿ ಅನುಮಾನ ಉಳಿದಿಲ್ಲ. ಸಂವಿಧಾನ ಮತ್ತು ಕಾನೂನಿನ ರಕ್ಷಣೆ ಈ ದೇಶದ ಸಾಮಾನ್ಯ ಪ್ರಜೆಯಲ್ಲೂ ಭರವಸೆ ಮೂಡಿಸಿದೆ. ಗಾಂಧಿಜೀ ಈ ದೇಶದ ಹೊರ ಮೈಕಟ್ಟಿಗೆ ಒಂದು ಚೌಕಟ್ಟು ನೀಡಿದರೆ, ಅಂಬೇಡ್ಕರ್ ಈ ದೇಶದ ಒಳರಚನೆಗೆ ಹಲವು ಸೂಕ್ಷ್ಮಗಳನ್ನು ತೋರಿಸಿ ಹೋಗಿದ್ದಾರೆ. ಮನುಷ್ಯ ಸಮಾನತೆ ಮತ್ತು ಪ್ರೀತಿ ಸಹೋದರತ್ವ ಪ್ರತಿಪಾದಿಸಿದ ಅಂಬೇಡ್ಕರ್ ಜೀವನದಲ್ಲೂ ಸಹ ಹಾಗೆ ಬದುಕಿದರು. ಅವರು ಎಂದೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಸ್ವತಂತ್ರ್ಯ ಭಾರತದಲ್ಲಿ ಸಹ ಅವರು ಮೊದಲ ಕಾನೂನು ಮಂತ್ರಿ ಪದವಿಯನ್ನು ತ್ಯಜಿಸಿದ ಕಾರಣವನ್ನು ಗಮನಿಸಿದರೆ ಅಂಬೇಡ್ಕರ್ ಎಂಥ ಅದರ್ಶವಾದಿಯಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. `ಪ್ರಗತಿಯ ರಥವನ್ನು ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ. ಇಲ್ಲವೇ ನಿಂತಲ್ಲಿ ನಿಲ್ಲಲು ಬಿಡಿ, ಹಿಂದಕ್ಕೆ ಮಾತ್ರ ಎಳೆಯಬೇಡಿ’ ಎಂಬ ಅವರ ಕಳಕಳಿ ಪ್ರಮುಖವಾದುದು. ಮನುಷ್ಯನಲ್ಲಿನ ಸ್ವಾರ್ಥ ಮತ್ತು ಸಂಕುಚಿತತೆ ಅಂಬೇಡ್ಕರ್ ಅವರಿಗೆ ಅವರು ಬದುಕಿದ್ದ ಕಾಲದಲ್ಲೇ ಸ್ಪಷ್ಟವಾಗಿ ಗೋಚರಿಸಿತ್ತು. ಬಾಬಾ ಸಾಹೇನ ಅಂಬೇಡ್ಕರ್ ಬೌದ್ಧಧರ್ಮ ಸ್ವೀಕಾರದ ಮುನ್ನಾ ದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಅವರನ್ನು “ನಮ್ಮಲ್ಲೇ ವಿಶ್ವತತ್ವಗಳಿರುವಾಗ ಬೌದ್ಧಧರ್ಮ ಯಾಕೆ ಸೇರುತ್ತಿದ್ದೀರಿ ? ಇಲ್ಲಿ ಏನು ಕಡಿಮೆಯಾಗಿದೆ ?” ಎಂದು ಕೇಳಿದ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡ ಅವರು, “ಈ ಪ್ರಶ್ನೆಯನ್ನು ನಿಮ್ಮ ಪೂರ್ವಜರಿಗೆ ಕೇಳಿ ಎಂದರು”…. ಹೀಗೆ ನೀಡಿದ ಉತ್ತರದಲ್ಲಿ ಅಂಬೇಡ್ಕರ್ ಅವರ ನೋವನ್ನು, ಆತಂಕವನ್ನು ಕಾಣಬಹುದು. ಬದುಕಿನ ಕೊನೆಯ ದಿನಗಳಲ್ಲಿ ಸಹ ಮಹತ್ತರ ಆಸೆ ಆಕಾಂಕ್ಷೆಗಳನ್ನು, ಈ ದೇಶದ ಶೋಷಿತರ ಬಗ್ಗೆ ಅಂಬೇಡ್ಕರ್ ಕಾಪಾಡಿಕೊಂಡಿದ್ದರು. ಅವರು ಬೆಳಕಿನ ಬೀಜಗಳನ್ನು ಈ ದೇಶದ ಮಣ್ಣಿನಲ್ಲಿ ಬಿತ್ತಿ ಹೋಗಿದ್ದಾರೆ. ಅವು ಈಗಲೂ ಬೆಳಕಿನ ಫಲ ಕೊಡುತ್ತಲೇ ಇವೆ.
-ನಾಗರಾಜ್ ಹರಪನಹಳ್ಳಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x