ಇತ್ತೀಚೆಗೆ ನಾಲ್ಕನೇ ತರಗತಿಯಲ್ಲಿ ವಿಜ್ಞಾನ ಪಾಠವೊಂದರ ಕುರಿತು ಚರ್ಚಿಸುತ್ತಿದ್ದ ಸಮಯ. ಪಾಠದ ಹೆಸರು "ಮಣ್ಣು". ಮಕ್ಕಳಿಗೆ ಮಣ್ಣು ಹೇಗಾಯಿತು? ಮಣ್ಣಿನ ರಚನೆ, ಮಣ್ಣಿನ ಉಪಯೋಗಗಳನ್ನು ಹೇಳುವಾಗ, ಇಂಧನವಾದ ಕಲ್ಲಿದ್ದಲು ಕುರಿತು ಚರ್ಚೆ ಬೆಳೆಯಿತು. ಹಾಗಾಗಿ ಪಾಠಕ್ಕೆ ಹೊರತಾಗಿದ್ದು ಹೆಚ್ಚಿನ ಮಾಹಿತಿಯೆಂದೇ ತಿಳಿದು ವಿಷಯಾಂತರವಾದರೂ ಸರಿಯೇ ಎಂದು ಅದರ ಬಗ್ಗೆಯೂ ಮಾಹಿತಿ ನೀಡುತ್ತಿದ್ದೆ. ಈಗಿನ ಶಿಕ್ಷಣ ಕ್ರಮದಲ್ಲಿ ವಿಷಯಾಂತರ ಎಂಬ ಮಾತಿಲ್ಲ. ಕನ್ನಡ ಪಾಠದಲ್ಲಿ ವಿಜ್ಞಾನದ ವಿಷಯಾಂಶ ಬಂದರೂ ಅದನ್ನು ಭೋದಿಸಿಯೇ ಮುಂದೆ ನಡೆಯಬೇಕು. ಮಕ್ಕಳಲ್ಲಿ ಯಾವುದೊಂದು ಪ್ರಶ್ನೆಯೂ ಉತ್ತರ ಕಾಣದೆ ಉಳಿಯುವಂತಿಲ್ಲ. ಹಾಗಾಗಿ ನನಗೂ ಖುಷಿ ಮತ್ತು ಧೈರ್ಯ! :-). ಕಲ್ಲಿದ್ದಲ ಕುರಿತು ಸರಳವಾಗಿ ಅರ್ಥೈಸುವ ಪ್ರಯತ್ನದಲ್ಲಿ ಮಕ್ಕಳಿಗೆ ಹೀಗೆ ವಿವರಿಸಿದೆ;
ಡೈನೊಸರಸ್ ಹೆಸರು ಕೇಳಿದ್ದೀರಾ? "ಹೋ ಗೊತ್ತು ಮಿಸ್" ಎಂದು ಸಂತಸಪಟ್ಟರು ತುಂಬಾ ಪರಿಚಿತರೆಂಬಂತೆ. ಟಿ.ವಿಗಳಲ್ಲಿ ಕಾರ್ಟೂನ್ಗಳಲ್ಲಿ ನೋಡಿದ್ದರಿಂದ. "ಈಗ ಇದ್ಯಾ ಅದು?" ಕೇಳಿದೆ.
ಇಲ್ಲ ಮಿಸ್. ಎಲ್ಲಿ ಹೋಯ್ತು? ಉತ್ತರವಿಲ್ಲ. ಮುಂಚೆ ಇತ್ತಾ? ಹೂಂ ಅಂತೆ ಮಿಸ್. ಅದೂ ಟಿವೀಲಿ ತೊರಿಸ್ತಾರೆ.
ಸರಿ ಮಕ್ಕಳಲ್ಲಿ ಇಷ್ಟು ಮಾಹಿತಿ ಇದ್ದರೆ ಸಾಕು ಎಂದುಕೊಂಡೆ. ಹೌದಲ್ಲವೇ, ಈಗ ಇಲ್ಲ ಆದರೆ ಹಿಂದೆ ಇತ್ತಂತೆ ಹೇಳ್ತಾರೆ. ದೊಡ್ಡ ಗಾತ್ರದ ಆ ಪ್ರಾಣಿಯನ್ನು ಹೋಲುವಂತಹ ಯಾವ ಪ್ರಾಣಿಯೂ ಈಗಿಲ್ಲ, ಅಂದರೆ ಅದರ ಸಂತತಿ ಸಂಪೂರ್ಣ ನಾಶವಾಗಿರಲೇಬೇಕು. ನೈಸರ್ಗಿಕ ವೈಪರಿತ್ಯವಾದ ಭೂಕಂಪವು ಸಂಭವಿಸಿದಾಗ ಈ ಪ್ರಾಣಿಗಳಂತೆ ಇತರೆ ಜೀವಿಗಳು ನಾಶವಾಗಿ ಭೂಗರ್ಭ ಸೇರಿರುತ್ತದೆ. ಅಂದರೆ ಭೂಮಿಯ ಆಳ, ಅಲ್ಲಿ ಗಾಳಿ ಬೆಳಕಿಲ್ಲ. ಅತೀ ಒತ್ತಡವಷ್ಟೇ. ಹೀಗಿರುವಾಗ ಸತ್ತ ಪ್ರಾಣಿ ಸಸ್ಯಗಳು ಅಲ್ಪ ಪ್ರಮಾಣದಲ್ಲಿ ಕೊಳೆತು ಇಲ್ಲ ಕೊಳೆಯದೇ ಕಾಲಕ್ರಮೇಣ ಕಲ್ಲುಗಳಂತಾಗಿ ಬಿಡುತ್ತದೆ. ಸಾವಿರಾರು ವರ್ಷಗಳ ನಂತರ ನಮಗೆ ಭೂಮಿಯಲ್ಲಿ ಈಗ ಸಿಗುತ್ತಿರುವ ಇಂಧನಗಳಾಗಿವೆ ಎಂದು ವಿವರಿಸಿದೆ. ಮಕ್ಕಳಿಗೆ ಸಂಪೂರ್ಣವಾಗಲ್ಲದಿದ್ದರು ಸುಮಾರು ಅರ್ಥವಾಯಿತು. ಆದರೆ ಸತ್ತ ಜೀವಿಗಳು ಭೂಗರ್ಭದಲ್ಲಿ ಕೊಳೆಯಲಿಲ್ಲ ಎಂದಾಗ ಕನ್ಫೂಸಾಂದಂತೆ ಕಂಡದ್ದು ನಿಜ. ಸರಿ ಅದನ್ನೂ ಹೇಳಿದರಾಯ್ತು ಎಂದುಕೊಂಡು. ಈಗ ಸತ್ತವರನ್ನು ಹೂಳುತ್ತಾರೆ. ಕಾಲಕ್ರಮೇಣ ದೇಹವು ಕೊಳೆತು ಮಣ್ಣಿನೊಂದಿಗೆ ಬೆರೆತುಬಿಡುತ್ತದೆ ಹೌದಲ್ವೇ. ಮಣ್ಣಿನಲ್ಲಿ ಗಾಳಿಯಾಡುವುದರಿಂದ ಕೊಳೆಯುತ್ತದೆ. ಭೂಗರ್ಭದಲ್ಲಿ ಗಾಳಿ ಲಭ್ಯವಾಗಿರುವುದಿಲ್ಲ ಹಾಗಾಗಿ ಕೊಳೆಯುವುದಿಲ್ಲ. ಈ ಸಂದರ್ಭದಲ್ಲಿ ಮೊನ್ನೆ ಮೊನ್ನೆ ತಾನೆ ಹುಳಿಕಲ್ ನಟರಾಜ್ ರವರು ಪವಾಡ ಬಯಲು ಕಾರ್ಯಕ್ರಮದಲ್ಲಿ ಸಮಾಧಿಯಾಗಿ ಮತ್ತೆ ಎದ್ದು ಬಂದ ಸಂದರ್ಭ ನಮಗೆ ನೆನಪಾಗುತ್ತದೆ. ಕಲಿಸುತ್ತಾ ಕಲಿಯುವುದು ಎಂದರೇ ಇದೇ ಏನೋ? ಇಷ್ಟೂ ಚರ್ಚೆಗಳು ಖುಶಿ ಕೊಟ್ಟವು. ಅವಧಿ ಮುಗಿಯಿತು ಪಕ್ಕದ ತರಗತಿಗೆ ಹೊರಟೆ,
ಅಷ್ಟರಲ್ಲಿ ವಿಧ್ಯಾರ್ಥಿಯಿಂದ ಒಂದು ಹೇಳಿಕೆ; "ಮಿಸ್ ಕೆಲವರನ್ನ ಸುಡುತ್ತಾರೆ ಮಿಸ್", "ಹೌದು ಅವರವರ ಆಚರಣೆ" ಅಂದೆ. "ನಮ್ಮಪ್ಪನ್ನ ಸುಟ್ಟಿದ್ವಿ ಮಿಸ್", "ಹೌದಾ…..?" ಅಂತ ಮನಸ್ಸಿನಲ್ಲಿಯೇ ಅಂದುಕೊಂಡು ಯೊಚಿಸುತ್ತಿದ್ದೆ, ಅವನು ಅವನಕ್ಕನೂ ಒಂದೇ ತರಗತಿ. ಇಬ್ಬರೂ ಮಾತಾಡತೊಡಗಿದರು. "ಅದೇ ಮಿಸ್ ನಮ್ಮಪ್ಪ ನೇಣುಹಾಕ್ಕೊಂಡ್ರಲ್ಲಾ ಅದಕ್ಕೆ ಮಿಸ್". ಓಹ್ ನೆನಪಾಯ್ತು. ಇನ್ನೂ ಮಕ್ಕಳೆಲ್ಲದೆದುರು ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಬೇಡೆಂದು, "ಆ ರೀತಿ ಮಾಡುವುದು ತಪ್ಪು ಹಾಗೆ ಮಾಡಿದ್ದರಿಂದ ನಿಮ್ಮ ತಾಯಿ ನಿಮ್ಮನ್ನು ಸಾಕಲು ಎಷ್ಟು ಕಷ್ಟಪಡ್ತಾ ಇದ್ದಾರೆ ಅಲ್ವಾ?" ಅಂದೆ. ತರಗತಿಯ ಎಲ್ಲಾ ಮಕ್ಕಳಿಗೂ ತಿಳಿದಿದ್ದ ವಿಷಯ. ಎಲ್ಲರಿಗೂ ಸರಿ ಅನಿಸಿತು. ಎಲ್ಲಾ ತಪ್ಪುಗಳಿಗಿಂತ ದೊಡ್ಡ ತಪ್ಪು ಅದು ಎಂದು ಹೇಳಿ ಮನೆ ಪಾಠ ನೀಡಿ ಮತ್ತೆ ಇಂದೆ ಮತ್ತೊಂದು ಅವಧಿ ಸಿಕ್ಕರೆ ಬರುವುದಾಗಿ ಹೇಳಿ ಹೊರಟೆ. ಯಾಕೋ ನನಗೂ ಮನಸ್ಸಿರಲಿಲ್ಲ ಈ ಕೊನೆಯ ವಿಷಯವನ್ನು ಉದ್ದೇಶಪೂರ್ವಕವಾಗಿ ಮೊಟಕುಗೊಳಿಸಿದ್ದಕ್ಕೆ.
"ಆತ್ಮಹತ್ಯೆ", ತಲೆಹೊಕ್ಕ ವಿಷಯ. ಯಾಕೆ ಹಾಗೆ ಮಾಡಿದ್ರು? ಏನಾಗಿರ್ಬೋದು ಅಂತೆಲ್ಲಾ ಮನಸ್ಸು ಓಡಿತು. ಮೊನ್ನೆ ಯಾರೋ ಗೆಳತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರಂತೆ. ಗಾಳಿ ಸುದ್ಧಿನೋ ಏನೋ ಗೊತ್ತಿಲ್ಲ. ವಿಷಯ ತಿಳಿದಾಗಿನಿಂದ ದಿನಾ ನನ್ನ ಬಿಡುವು ಅನ್ನುವ ಸಂದರ್ಭಗಳಲ್ಲಿ ನೆನಪಾಗ್ತಾರೆ. ತುಂಬಾ ಮನಸ್ಸನ್ನು ಹಿಂಸಿಸುತ್ತೆ. ಕೊನೆಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಎಷ್ಟು ಯೊಚಿಸಿದರೇನು? ಕಾರಣಗಳೇನು ಕಾಣದು ಸುಮ್ಮನೆ ಬದುಕಿದ್ದ ನಾವು ಕಿನ್ನರಾಗುತ್ತೇವೆ ಎಂದೆನಿಸಿತು. ಆತ್ಮಹತ್ಯೆ ಸಮಾಜದಲ್ಲಿನ ಒಂದು ಅಸಹನೀಯ ವಿಚಾರವಾಗಿ ನನಗೆ ಕಾಣುತ್ತದೆ. ಆತ್ಮಹತ್ಯೆಯ ಕುರಿತು ಮಾತನಾಡಲು ನಾನೇನು ಮನೋಜ್ಞಾನಿಯಲ್ಲ, ಜ್ಯೋತಿಷಿಯಲ್ಲ; ಒಬ್ಬ ಸಾಮಾನ್ಯ ಪ್ರಜೆಯಾಗಿ ಸಮಾಜದಲ್ಲಿನ ನೋವಿಯ ಕಾವಿಗೆ ತುಸು ನೋಯೊಸಿಕೊಂಡ ಜೀವವಷ್ಟೇ. ಈ ಆತ್ಮಹತ್ಯೆಗೆ ಕಾರಣಗಳು ಏನೇನೋ…… ದಿನನಿತ್ಯ ಟೀವಿಗಳಲ್ಲಿ ಅದೇ ವಿಚಾರ. ಇತ್ತೀಚಿಗಂತು ಇಂತಹ ಕಾರ್ಯಕ್ರಮವನ್ನೇ ನೋಡಲು ಅಸಹನೀಯವೆನಿಸುತ್ತದೆ. ಯಾಕ್ ಸಾಯ್ತಾರೋ ಜನ ಅಂತ ಕೋಪ ಬಂದುಬಿಡುತ್ತೆ. ಹುಟ್ಟಿ ಏನೇನೋ ಸಾಧಿಸಿ ಅಂತ ಯಾರು ದುಂಬಾಲು ಬೀಳುವುದಿಲ್ಲ. ಕೊನೆಪಕ್ಷ ಹುಟ್ಟಿದ ಮೇಲೆ 'ಬದುಕಿ' ಅಷ್ಟೇ ಈ ಸಮಾಜ ಎಲ್ಲರನ್ನೂ ಕೇಳೋದು. 'ಒಳ್ಳೆ ರೀತಿಯ ಬದುಕು' ಅಂದರೆ ಇದೂ ಸಹ ಸೇರುತ್ತದೆ; ಆತ್ಮಸ್ಥೈರ್ಯದಿಂದ ಬದುಕುವುದು. ಚಾಪೆ ಇದ್ದಷ್ಟು ಕಾಲು ಚಾಚು ಎಂಬಂತೆ ಎಲ್ಲರೂ ಜೀವನ ಮಾಡಿದರೆ ಸಾಲಗಳು ಏಕಾತ್ತವೆ? ಸೋಮಾರಿತನವನ್ನು ಬಿಟ್ಟು ಎಲ್ಲರೂ ದುಡಿಯುವಂತಾದರೆ ಬದುಕಿನ ಸ್ಥಿತಿ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ಮತ್ತೆ ಕೆಲವು ಪ್ರೆಮ ಭಂಗಗಳು. ಪ್ರೀತಿಯ ಅರ್ಥ ತಿಳಿದು ಪ್ರೀತಿಸಿದ್ದೇ ಆದರೆ ಅಲ್ಲಿ ಭಂಗಗಳೇ ಇಲ್ಲ. ತಿಳಿಯದ ವಯಸ್ಸಿಂದ ಹಿಡಿದು ಪ್ರೌಢ ವಯಸ್ಸಿನವರೆಗೂ ಪ್ರೇಮಭಂಗದ ಕಾರಣದ ಆತ್ಮಹತ್ಯೆಯನ್ನು ನಾವು ಕೇಳಿರುತ್ತೇವೆ. ಇನ್ನೂ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ನಮಗೆ ಪಟ್ಟಿಗಿಂತ ಮುಖ್ಯ ವಾಸ್ತವ ಸ್ಥಿತಿಗಳು ಮತ್ತು ಪರಿಹಾರಗಳು.
ಆದರೂ ಕೆಲವು ಕಾರಣಗಳನ್ನು ಹೆಸರಿಸುವುದಾದರೆ, ಕೌಟುಂಬಿಕ ಕಲಹ, ಹೆಣ್ಣು-ಗಂಡೆಂಬ ತಾರತಮ್ಯ-ಅಸಮಾನತೆ, ಬಡತನ, ಅನಾರೋಗ್ಯ. ದುರ್ಬಲ ಮನಸ್ಸು, ಒಂಟಿತನ, ಇನ್ನೂ ಅನೇಕ ನಂಬಲಸಾಧ್ಯ ಕಾರಣಗಳು ಈಗೀಗ ಸೇರಿಬಿಟ್ಟಿವೆ. ಇದ್ದಕ್ಕೆ ಪರಿಹಾರವೇನು? ಇದು ನನ್ನ ನೇರ ಪ್ರಶ್ನೆ. ಅತೀ ಕಡಿಮೆ ಓದಿ, ಕೂಲಿ ಮಾಡಿ ಇಲ್ಲವೇ ಇನ್ಯಾವುದೋ ಕಡಿಮೆ ಸಂಬಳದ ಕೆಲಸ
ಮಾಡಿ ಶ್ರಮದ ನೆರಳಲ್ಲೇ ಬದುಕುವ ಅದೆಷ್ಟೋ ಜನರು ಆತ್ಮಸ್ಥೈರ್ಯದಿಂದ ಬದುಕುತ್ತಿರುವುದುಂಟು, ಆದರೆ ಅದೇ ಅತೀ ಹೆಚ್ಚು ಓದಿದ ಅಥವಾ ಶ್ರೀಮಂತ ಎನಿಸಿಕೊಳ್ಳುವ ಜನರೇ ಈಗೀಗ ಹೆಚ್ಚೆಚ್ಚು ಈ ಆತ್ಮಹತ್ಯೆ ಎಂಬ ಕೃತ್ಯಕ್ಕೆ ಮುಂದಾಗಿದ್ದಾರೆ. ಹಾಗಾದರೆ ಅವರ ಕಲಿತ ವಿದ್ಯೆ ಶಿಕ್ಷಣ ಅರ್ಥ ಕಳೆದುಕೊಂಡಿತೆ? ಸೊಜಿಗವೆನಿಸುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಕಲಿತ ಶಿಕ್ಷಣ ಕೇವಲ ಕೆಲಸವನ್ನು ಗಿಟ್ಟಿಸಿಕೊಟ್ಟರೆ ಸಾಲದು ಬದುಕಲು ಕಲಿಸಬೇಕು. ಅಂತಹ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಬೇಕು. ಇದೆಲ್ಲಾ ಶಾಲೆಗಳಲ್ಲಿ ಮಾತ್ರ ನಡೆಯುವ ಕ್ರಿಯೆಗಳಲ್ಲ. ಮಗುವಿನ ಸರ್ವತೋಮುಖ ಬೇಳವಳಿಣೆಗೆಗೆ ಮನೆ, ಶಾಲೆ ಮತ್ತು ಪರಿಸರವೂ ಇದಕ್ಕಾಗಿ ಶ್ರಮಿಸಬೇಕಿದೆ. ಇದು ಪ್ರಾಥಮಿಕ ಹಂತದ ವಿಚಾರಗಳಾದರೆ, ಇನ್ನು ಬೆಳೆದು ನಿಂತ ಮಕ್ಕಳು ಯಾವ್ಯಾವುದೋ ಬೇಡದ ಕಾರಣಗಳಿಗೆ ಸೋಲುವ ಪರಿಯನ್ನು ಅವಮಾನಿಸದೆ ತಿದ್ದುವ ತಾಳ್ಮೆ ಹಿರಿಯರಿಗಿರಬೇಕು. ತಂದೆ-ತಾಯಿಯರ ವಿಶ್ವಾಸವನ್ನು ಮಕ್ಕಳು, ಮಕ್ಕಳ ವಿಶ್ವಾಸವನ್ನು ತಂದೆ-ತಾಯಿಯರು ಗಳಿಸಿದ್ದೇ ಆದಲ್ಲಿ ಈ ಕಾರ್ಯ ಬಹು ಸುಲಭವೆನಿಸುತ್ತದೆ. 'ಪ್ರೀತಿ' ಈ ಎಲ್ಲಾ ಸಂಕಟಕ್ಕೂ ಮದ್ದು ಎಂದರಿತರೆ ಸಮಸ್ಯೆಗಳೆಲ್ಲಕ್ಕೂ ನಮ್ಮಲ್ಲಿ ಪರಿಹಾರವುಂಟು. ಇನ್ನೂ ಅನೇಕ ಪರಿಹಾರಗಳಿರಬಹುದು, ಇಲ್ಲಿ ಚರ್ಚಿಸಲಾದದ್ದು ಅತೀಸಾಮಾನ್ಯ ಮನುಷ್ಯಳಾಗಿ ಅತೀ ಸಾಮಾನ್ಯ ಮನುಷ್ಯ ಕೈಗೊಳ್ಳಬಹುದಾದ ಕೈಗೆಟಕುವ ಪರಿಹಾರಗಳು. ಈ ಕ್ರಮಕ್ಕೆ ಅತೀ ತಾಳ್ಮೆ, ಪ್ರೀತಿ ಮತ್ತು ಸಮಯ ಇವಿಷ್ಟೇ ಬೇಕಾದದ್ದು. ಆದರೆ ಈಗ ಇವೇ ದುರ್ಲಭ!! ವಿಪರ್ಯಾಸ…… ಹೌದು ಸಮಾಜದಲ್ಲಿನ ಸಾಧಕ ಬಾಧಕಗಳೆಂಬ ಎಲ್ಲಾ ಅಂಶಗಳು ನಮ್ಮಿಂದಲೇ. ಒಪ್ಪುವಿರಾ?
'ಆತ್ಮಹತ್ಯೆ' ಎಂಬ ವಿಷಯದ ಕುರಿತು ಇದೊಂದು ಪಾರ್ಶ್ವದ ಚಿಂತನೆ ಅಷ್ಟೇ. ಈ ನಿಟ್ಟಿನಲ್ಲಿ ಯೋಚಿಸಲು ಶುರು ಮಾಡಿದ್ದೇ ಆದರೆ ಬಹಳಷ್ಟು ವಿಚಾರಗಳ ಚಿಂತನ ಚರ್ಚೆಗಳಿಂದ ಹುಟ್ಟಿ ಒಂದು ಆರೋಗ್ಯಕರ ವಿಚಾರಧಾರೆ ಸೃಷ್ಟಿಯಾಗಬಹುದು. ವಿಚಾರಗಳಿಂದ ಪ್ರಭಾವಿತ ಯಾವುದೋ ಒಂದು ಜೀವ ಬೆಳಕ ಕಂಡರೆ ಅಷ್ಟೇ ನಮ್ಮೆಲ್ಲರ ಚರ್ಚೆ ಸಂವಾದಗಳ ಸಫಲತೆ. ಹಾಗಾದರೆ ಬನ್ನಿ ಚಿಂತಿಸೋಣ…
ಧನ್ಯವಾದಗಳು
ದಿವ್ಯ ಆಂಜನಪ್ಪ
೧೬/೦೯/೨೦೧೩
ಉತ್ತಮ ಲೇಖನ….
Atmahatya bagge innoo barahalu barali akka.. manasika khinnatege olagada eshto manassugalu antaha vicharagalinda horabaruvantaagali…
samajamukhiya ondu uttama lekhana
aydukonda vishayakke (Y)
Very neatly written madam. Please write such your experiences in the school.
The way you your patience to teach students is great. Keep going.
! 🙂
Chennagide Madam………….
ಮೆಚ್ಚಿದ ತಮ್ಮೆಲ್ಲರಿಗೂ ನನ್ನ ಅನಂತ ವಂದನೆಗಳು 🙂