ಕಾದಂಬರಿ

ಸ್ನೇಹ ಭಾಂದವ್ಯ (ಭಾಗ 2): ನಾಗರತ್ನಾ ಗೋವಿಂದನ್ನವರ


(ಇಲ್ಲಿಯವರೆಗೆ…)

ಮರುದಿನ ಎಂದಿನಂತೆಯೆ ಗೆಳತಿಯರಿಬ್ಬರು ಅಂದುಕೊಂಡಂತೆಯೇ ಅದೇ ಮಾವಿನ ಮರದ ಕೆಳಗೆ ಭೇಟಿಯಾದರು. ಆಗ ರೇಖಾಳೆ ಮಾತಿಗಾರಂಭಿಸಿದಳು. ಏ ಸುಧಾ ಈಗಾಗಲೇ ಕಾಲೇಜ್ ಅಡ್ಮೀಷನ್ ಶುರು ಆಗಿ ನಾಲ್ಕೈದು ದಿನಗಳಾಗಿವೆ. ಇನ್ನು ಹತ್ತು ದಿನದೊಳಗಾಗಿ ನಾವು ಪಟ್ಟಣಕ್ಕೆ ಹೋಗಿ ಅಡ್ಮೀಷನ್ ಮಾಡಿಸಿ ಬರಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೌದು ಕಣೆ ರೇಖಾ ಆದಷ್ಟು ಬೇಗ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಕಾಲೇಜನ್ನ ಮರೆತು ಮನೆಯಲ್ಲಿದ್ದ ಬಿಡಬೇಕಾಗುತ್ತದೆ ಎಂದಳು. ಈಗೇನು ಮಾಡೋದು ಅಂತ ಮೊದಲು ಹೇಳು ಸುಧಾ ಮಾಡೋದಕ್ಕೇನಿದೆ ಮೊದಲು ಇಬ್ಬರು ಮನೆಯಲ್ಲಿ ದುಡ್ಡು ಕೇಳೋದು ಆಮೇಲೆ ಮುಂದಿನದು. ಸರಿ ಹಾಗಾದ್ರೆ ಇವತ್ತು ದುಡ್ಡು ಅರೇಂಜ್ ಮಾಡಿ ನಾಳೆ ಶಿವಮೊಗ್ಗಕ್ಕೆ ಹೋಗೋಣ ಎಂದಳು.

     ಅಂದುಕೊಂಡಂತೆ ಸುಧಾ ಮತ್ತು ರೇಖಾ ಇಬ್ಬರು ತಮ್ಮ ತಮ್ಮ ಮನೆಯಲ್ಲಿ ತಂದೆ-ತಾಯಿಯ ಹತ್ತಿರ ದುಡ್ಡು ಕೇಳಿದರು. ರೇಖಾ – ಅಪ್ಪಾ ನಾನು ನಾಳೆ ಕಾಲೇಜಿಗೆ ಪ್ರವೇಶ ದೊರಕಿಸಿಕೊಳ್ಳಲೂ ಹಣ ಕಟ್ಟಬೇಕಾಗುತ್ತದೆ ಎಂದರು. ಹೌದು ರೇಖಾ ನೀನು ಎಷ್ಟು ಕಟ್ಟಬೇಕಾಗುತ್ತದೆ ಎಂದರು. ಕನಿಷ್ಟ ಮೂರು ಸಾವಿರವಾದರೂ ಬೇಕಾಗುತ್ತದೆ. ಅಲ್ಲಿ ನಾನು ಹಾಗೂ ಸುಧಾ ಇಬ್ಬರು ಸೇರಿ ರೂಮು ಮಾಡೋಣ ಅಂದುಕೊಂಡಿದ್ದೇವೆ. ಎಲ್ಲಾ ಸೇರಿ ಹತ್ತಿರ ಹತ್ತಿರ ಐದು ಸಾವಿರವಾದರೂ ಬೇಕಾಗುತ್ತದೆ ಎಂದರು. ಸದ್ಯಕ್ಕೆ ಅಷ್ಟನ್ನ ತೆಗೆದುಕೊ ನಂತರ ಉಳಿದುದನ್ನು ಕೊಡುತ್ತೇನೆ ಎಂದಾಗ ರೇಖಾ ಅಯ್ತಪ್ಪ ಎಂದು ಅವರು ಕೊಟ್ಟ ದುಡ್ಡನ್ನು ಸಂತೋಷದಿಂದ ತೆಗೆದುಕೊಂಡಳು. ಇತ್ತ ಸುಧಾಳು ತನ್ನ ತಾಯಿಯ ಮನ ಒಲಿಸಿ ನಾಲ್ಕು ಸಾವಿರದಷ್ಟು ಹಣವನ್ನು ಜಮಾಯಿಸಿದಳು. ಮುಂಜಾನೆ ಸುಧಾ ಲಗುಬಗೆನೆ ಎದ್ದು ತನ್ನ ನಿತ್ಯ ಕಾರ್ಯಗಳನ್ನು ಮುಗಿಸಿ ಶಿವಮೊಗ್ಗಕ್ಕೆ ಹೊರಡಲು ರೆಡಿಯಾದಳು. ಅತ್ತ ರೇಖಾಳು ದುಡ್ಡು ಸಿಕ್ಕಿದ ಸಂತೋಷದಲ್ಲಿ ತನ್ನ ಬಟ್ಟೆ-ಬರೆ ಎಲ್ಲವನ್ನು ಪ್ಯಾಕ್ ಮಾಡುತ್ತಿದ್ದಳು. ಅಷ್ಟೊತ್ತಿಗೆ ಮನೆಗೆ ಬಂದಾಗ ಸುಧಾಳನ್ನು ನೋಡಿ ಏನೆ ಸುಧಾ ಮನೆಯಲ್ಲಿ ದುಡ್ಡು ಕೊಟ್ಟರಾ ಎಂದಳು. ಕೊಟ್ಟರು ಕಣೆ. ಹಾಗಾದ್ರೆ ಹೋಗೋಣ್ವಾ ಎಂದಳು ರೇಖಾ. ಹೋಗೋಣಾ ಆದ್ರೆ ನಿನ್ಯಾಕೆ ಬಟ್ಟೆನೆಲ್ಲಾ ಪ್ಯಾಕ್ ಮಡ್ತಾ ಇದ್ದಿಯಾ, ನಾವೇನು ಈಗಲೇ ಹೋಗಿ ಇರೋದೆಲ್ಲಿ ಎಂದು ಸುಧಾ ಕೇಳಿದಾಗ ಹೌದಲ್ವಾ ನಾನು ಇದರ ಬಗ್ಗೆ ಯೋಚನೇನೆ ಮಾಡಿರಲಿಲ್ಲ ಅಲ್ವೆ, ನಾವಿಬ್ಬರು ನಿನ್ನೆನೆ ಮಾತಾಡಿಕೊಂಡಿದ್ದು ಏನು ಆಗಲೇ ಮರೆತಬಿಟ್ಯಾ ಎಂದಳು ಸುಧಾ. ಇಲ್ಲಾ ಕಣೆ ಮರೆತಿಲ್ಲಾ. ನಮ್ಮೂರಿನಿಂದ ಶಿವಮೊಗ್ಗ ತುಂಬಾ ದೂರ ಇದೆ ನಾವು ಇವತ್ತೇ ಹೋಗಿ ಇವತ್ತೇ ತಿರುಗಿ ಬರೋಕೆ ಆಗುತ್ತಾ?  ಅದು ಕತ್ತಲಾಗುವುದರೊಳಗಾಗಿ ಅನ್ನುವ ಯೋಚನೆಯಿಂದ ಬಟ್ಟೆಯೆಲ್ಲಾ ಹಾಕ್ತಾ ಇದ್ದೆ. ಅದೇನೊ ನಿಜ ಆದರೆ ನಾವು ಹೋದ ತಕ್ಷಣಕ್ಕೆ ನಮಗೆ ರೂಮು ಸಿಗಬೇಕಲ್ಲ ಎಂದಳು. ರೂಮು ಸಿಗದಿದ್ದರೆ ಪರವಾಗಿಲ್ಲ ಎಲ್ಲಾದರೂ ಲಾಡ್ಜಿಗೆ ಹೋಗಿ ಒಂದು ರಾತ್ರಿಯನ್ನು ಕಳೆದರಾಯಿತು ಆಮೇಲಿನದು ಮುಂದಿನ ಚಿಂತೆ ಎಂದಳು. ರೇಖಾ ನಿನಗೆಲ್ಲೊ ತಲೆಕೆಟ್ಟಿದೆ ಅಂತ ಕಾಣತ್ತೆ ನೀನು ಅಂದುಕೊಂಡಷ್ಟು ಸುಲಭ ಅಲ್ಲ? ಹಾಗೇನೆ ಅಷ್ಟು ಕಷ್ಟಾನು ಅಲ್ಲಾ ಎಂದು ರೇಖಾ ಹೇಳಿದಾಗ ಸುಧಾ ಒಪ್ಪಲೇಬೇಕಾಯಿತು. 

ಅಡಿಗೆ ಮನೆ ಒಳಗಿನಿಂದಲೆ ಇವರ ಸಂಭಾಷಣೆಯನ್ನೇಲ್ಲಾ ಕೇಳಿಸಿಕೊಳ್ಳುತ್ತಿದ್ದ ರಾಧಮ್ಮ ಎರಡು ಪ್ಲೇಟ ತುಂಬಾ ಉದ್ದಿನ ವಡೆಗಳನ್ನು ಹಾಕಿಕೊಂಡು ಬಂದಳು. ಒಂದು ರೇಖಾಳಿಗೆ ಇನ್ನೊಂದನ್ನು ಸುಧಾಳಿಗೆ ಕೊಡಲು ಹೋದಾಗ ಸುಧಾ ಇಲ್ಲಾ ಆಂಟಿ ನನ್ನದು ಮನೆಯಲ್ಲಿ ತಿಂಡಿ ಮುಗಿಸಿಕೊಂಡು ಬಂದಿದ್ದೇನೆ, ಈಗ ಏನು ಬೇಡಾ ಎಂದಳು. ಅದಕ್ಕೆ ರಾಧಮ್ಮ ಇರಲಿ ತಿನ್ನಮ್ಮಾ ಸಂಕೋಚ ಪಡಬೇಡ. ನೀನು ನನ್ನ ಮಗಳಿದ್ದ ಹಾಗೆನೆ ಎಂದು ಬಲವಂತ ಮಾಡಿದ್ದರಿಂದ ಸುಧಾ ತಿಂಡಿ ತಿನ್ನಲೇಬೇಕಾಯಿತು. ಇವರಿಬ್ಬರು ತಿಂಡಿ ತಿಂದು ಮುಗಿಸುತ್ತಲೆ ರಾಧಮ್ಮ ಇಬ್ಬರಿಗೂ ಕಾಫಿ ಕೊಡುತ್ತಾ ಏನಮ್ಮಾ ಸುಧಾ ನೀವಿಬ್ಬರು ಮುಂದೆ ಓದಲೇಬೇಕಾ ಹಾಯಾಗಿ ಮದುವೆಯಾಗಿ ಮಕ್ಕಳು-ಮರಿ ಅಂತ ಇರಬಾರದೆ ಎಂದಳು. ಅದಕ್ಕೆ ಗೆಳತಿಯರಿಬ್ಬರು ಒಬ್ಬರ ಮುಖವನೊಬ್ಬರು ನೋಡುತ್ತಾ ನಗತೊಡಗಿದರು. ಏನೊಮ್ಮಾ ನಿಮಗೆ ದೊಡ್ಡವರ ಮಾತು ಅಂದರೆ ಅಷ್ಟೆ ಎನ್ನುತ್ತಾ ಒಳಗೆ ಹೋಗುವಾಗ ಸುಧಾ ತಡೆದು ಆಂಟಿ ನಾವಿಬ್ಬರೂ ಚೆನ್ನಾಗಿ ಓದಿ ನಮ್ಮ ಕಾಲ ಮೇಲೆ ನಿಲ್ಲಬೇಕೂಂತ ಇದೀವಿ. ದಯವಿಟ್ಟು ನಮಗೆ ಆಶೀರ್ವಾದ ಮಾಡಿ ನಗುನಗುತ್ತಾ ಕಳಿಸಿ ಎಂದು ರಾಧಮ್ಮಳ ಕಾಲನ್ನು ಮುಟ್ಟಿ ನಮಸ್ಕರಿಸಿದಳು. ರಾಧಮ್ಮಳಿಗೆ ಏನು ಹೇಳಬೇಕೊ ತಿಳಿಯದಾಯಿತು. 

ಇಲ್ಲಿಂದ ನೇರವಾಗಿ ಶಿವಮೊಗ್ಗಕ್ಕೆ ಹೋಗುವ ಬಸ್ ಬೆಳಿಗ್ಗೆ ಹನ್ನೊಂದು ಗಂಟೆಗೆ ಬಿಟ್ಟರೆ ಬೇರೆ ಸಮಯಕ್ಕೆ ಇಲ್ಲ. ಈಗಾಗಲೇ ಹತ್ತು ಗಂಟೆಯಾಗ್ತಾ ಬಂತು. ನಾನು ಮನೆಗೆ ಹೋಗಿ ನನ್ನ ಸಾಮಾನು ಬಟ್ಟೆ-ಬರೆ ಎಲ್ಲವನ್ನು ತಗೊಂಡು ನೇರವಾಗಿ ಬಸಸ್ಟ್ಯಾಂಡಿಗೆ ಬರಲೇ ರೇಖಾ ಎಂದಾಗ ಹಾಗೆ ಮಾಡು ಸುಧಾ ನಾನು ಅಲ್ಲಿಗೆ ಬರುತ್ತೇನೆ ಎಂದು ಗೆಳತಿಯನ್ನು ಬಿಳ್ಕೊಟ್ಟಳು. ರೇಖಾ ತಯಾರಾಗಿ ತಂದೆ ಶಿವಾನಂದ ಮತ್ತು ತಾಯಿ ರಾಧಮ್ಮ ಕಣ್ಣೀರು ಹಾಕಿದುದನ್ನು ನೋಡಿ ಏನಮ್ಮಾ ನೀನು ಚಿಕ್ಕಮಕ್ಕಳ ತರ. ನಾನು ತಿರುಗಿ ಬರೋದೆ ಇಲ್ಲಾ ಅನ್ನೊ ತರಹ ಅದು ತುಂಬಾ ದೂರದ ದೇಶಕ್ಕೆ ಕಳಿಸೊ ಹಾಗೆ ಮಾಡ್ತಾ ಇದ್ದಿಯಲ್ಲಾ ಎನ್ನುತ್ತಾ ತಾಯಿಯ ಕಣ್ಣೀರನ್ನು ಒರೆಸಿದಳು. ಅಲ್ಲಿಗೆ ಹೋಗಿ ರೂಮು ಹಿಡಿದ ತಕ್ಷಣ ವಿಳಾಸ ತಿಳಿಸುತ್ತೇನೆ ಎಂದು ಸೂಟಕೇಸನ್ನು ಹಿಡಿದುಕೊಂಡು ಬಸಸ್ಟ್ಯಾಂಡಿಗೆ ಬರುವಷ್ಟರಲ್ಲಿ ಸುಧಾ ತನ್ನ ತಮ್ಮ ಚಂದ್ರುವಿನೊಡನೆ ಬಂದು ನಿಂತಿದ್ದಳು. 

ಏನೇ ಸುಧಾ ನಿನ್ನ ಬಿಡೋಕೆ ಚಂದ್ರು ಬಂದಿದ್ದಾನೆ ನೋಡು ನನಗೂ ಒಬ್ಬ ತಮ್ಮ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದಳು ರೇಖಾ. ಆಗ ಚಂದ್ರು ಯಾಕಕ್ಕಾ ಹಾಗಂತೀಯಾ ನನ್ನನೇ ನಿನ್ನ ತಮ್ಮ ಅನಕೊ ಎಂದನು. ಇಬ್ಬರು ಅಕ್ಕಂದಿರು ಅಂಜುಬುರುಕರೆಂದೆ ನಾನು ಇಲ್ಲಿಯವರೆಗೆ ಬಿಡಲು ಬಂದಿದ್ದೆನೆ. ಆಗ ಸುಧಾ-ರೇಖಾ ಇಬ್ಬರು ಇವನ ಮಾತು ಕೇಳಿ ಹೌದೇನು ಬಲು ಚ್ಯೂಟಿ ಎಂದು ನಗತೊಡಗಿದರು. ಅಷ್ಟೊತ್ತಿಗೆ ಶಿವಮೊಗ್ಗಕ್ಕೆ ಹೋಗುವ ಬಸ್ ಬಂದಿತು. ಇವರು ಬಸ್ಸನ್ನು ಏರಿ ಚಂದ್ರುವಿಗೆ ಹೋಗಿ ಬರುತ್ತೇವೆ ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೊ ಎಂದು ಹೇಳಿದರು. 

ಇವರು ಶಿವಮೊಗ್ಗಕೆ ಬಂದಿಳಿದಾಗ ಸಮಯ ಎರಡು ಗಂಟೆಯಾಗಿತ್ತು ಅಲ್ಲಿಂದ ಅವರು ಮಹಿಳಾ ವಿದ್ಯಾಲಯದ ವಿಳಾಸವನ್ನು ದಾರಿಯಲ್ಲಿ ಒಂದಿಬ್ಬರಿಗೆ ಕೇಳುತ್ತಾ ಕಾಲೇಜಿಗೆ ಬಂದಾಗ ಮುಕ್ಕಾಲು ಗಂಟೆಯಾಗಿತ್ತು. ನಂತರ ಇವರು ತಮ್ಮಿಬ್ಬರ ಪ್ರವೇಶ ಫೀಯನ್ನು ತುಂಬಲು ಬಹಳ ರಷ್ ಇದ್ದದರಿಂದ ಕ್ಯೂನಲ್ಲಿ ನಿಲ್ಲಬೇಕಾಯಿತು. ಇವರ ಆಡ್ಮಿಷನ್ ಮುಗಿಯಬೇಕಾದರೆ ಸಂಜೆ ಆರು ಗಂಟೆಯಾಗಿತ್ತು. ಆಗ ರೇಖಾ ಅಲ್ಲಿದ್ದ ಗುಮಾಸ್ತೆಯೊಬ್ಬಳಿಗೆ ನಾವು ಅಗಸವಳ್ಳಿಯಿಂದ ಬಂದಿದ್ದೇವೆ. ದಯವಿಟ್ಟು ನಮಗೆ ಎರಡು ದಿನ ನಿಮ್ಮ ಹಾಸ್ಟೇಲಿನಲ್ಲಿರಲು ಅವಕಾಶ ಕೊಡಿ. ನಂತರ ನಾವು ರೂಮು ಮಾಡಿಕೊಂಡು ಹೋಗುತ್ತೇವೆ ಎಂದಳು. ಅನಂತರ ಅವಳು ಹಾಸ್ಟೇಲ ಸುಪರಿಂಟೆಂಡೆಂಟ್ರಿಗೆ ಭೇಟಿ ಮಾಡಿಸಿದಳು. ಅದಕ್ಕವರು ಒಪ್ಪಲಿಲ್ಲ. ಆಗ ಸುಧಾಳೇ ಮೆಡಮ್ ದಯವಿಟ್ಟು ಇಲ್ಲ ಅನ್ನಬೇಡಿ ನಮಗೆ ತಕ್ಷಣಕ್ಕೆ ಬಾಡಿಗೆಗೆ ರೂಮು ಸಿಗಬೇಕಲ್ಲ ನಿಮ್ಮನ್ನೇ ನಂಬಿದ್ದೇವೆ ಇಲ್ಲಾ ಅನ್ನಬೇಡಿ ಬೇಕಾದರೆ ಎರಡು ದಿನದ ದುಡ್ಡನ್ನು ಮುರಿದುಕೊಳ್ಳಿ ಎಂದಳು. ಅಗ ಸುಪರಿಂಟೆಂಡೆಂಟ್ಗೆ ಇಲ್ಲ ಎನ್ನಲಾಗಲಿಲ್ಲ. ಆಕೆ ವಿಧಿಯಿಲ್ಲದೆ ಒಪ್ಪಿದಳು. ಆಗ ಇಬ್ಬರಿಗೂ ಹೇಳಲಾರದಷ್ಟು ಸಂತೋಷವಾಯಿತು. ಇಬ್ಬರು ಆ ಮೆಡಮ್ಗೆ ಥ್ಯಾಂಕು ಮೇಡಮ್ ಎಂದರು. ಆಗ ಅವಳು ಹಾಸ್ಟೇಲ್ ವಾರ್ಡನಳನ್ನು ಕರೆದು ಇವರಿಬ್ಬರಿಗಿರಲು ೩೬ ನಂಬರಿನ ರೂಮೊಂದು ಖಾಲಿಯಿದೆಯಲ್ಲ ಅದರ ಕೀ. ಕೊಟ್ಟು ಇವರಿಗೆ ರೂಮು ತೋರಿಸಿ ಎಂದಳು. ಅದರಂತೆ ಹಾಸ್ಟೇಲ್ ವಾರ್ಡನಳಾದ ಶಾಂತಮ್ಮ ಅವರಿಗೆ ರೂಮನ್ನು ತೋರಿಸಿ ಕೀಯನ್ನು ಅವರಿಗೆ ಕೊಟ್ಟು ಬಂದಳು. ರೂಮನ್ನು ಪ್ರವೇಶಿಸಿದ ನಂತರ ರೇಖಾಳಿಗೆ ಹೊಟ್ಟೆ ಚುರ್ರ ಅಂತಿರುವುದು ಗಮನಕ್ಕೆ ಬಂದಿತು. ಆದರೆ ಸುಧಾಳಿಗೆ ರೂಮು ಅಚ್ಚುಕಟ್ಟಾಗಿದ್ದು ಒಂದು ಮಂಚ ಮೇಲೆ ಹೊದಿಕೆ ಇದ್ದುದನ್ನು ನೋಡಿ ರೇಖಾ ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿದೆ ಎಂದಳು. ಅದಕ್ಕೆ ರೇಖಾ ಅಲ್ವೆ ಬೆಳಿಗ್ಗೆನೆ ಮನೆ ಬಿಟ್ಟವರು ಇಷ್ಟೊತ್ತಾದರೂ ಏನು ತಿಂದಿಲ್ಲ ಚಹಾನಾದರು ಕುಡಿಯಬೇಕಿತ್ತು ಎಂದಳು. ಏನೊ ನಮ್ಮ ಪುಣ್ಯ ಇರೊದಿಕ್ಕೆ ರೂಮು ಸಿಕ್ಕಿತು. ಅಷ್ಟರಲ್ಲಿ ವಾರ್ಡನ ಬಂದು ಅವರಿಬ್ಬರನ್ನು ಚಹಾ ಕುಡಿಯಲು ಕರೆದಳು. ನಂತರ ಇಬ್ಬರು ಹಾಲ್ಗೆ ಬಂದರು. ಅಲ್ಲಿ ಇವರಿಬ್ಬರನ್ನು ಬಿಟ್ಟು ಬೇರೆ ಯಾರು ಇರಲಿಲ್ಲ. ಕೆಲಸಗಾರಳೊಬ್ಬಳು ಇವರಿಗೆ ಟೀ ಕೊಟ್ಟಳು. ಇವರು ಚಹಾ ಕುಡಿಯುತ್ತ ರೇಖಾ ನಮ್ಮನ್ನು ಬಿಟ್ಟು ಯಾರು ಬಂದಿಲ್ಲವಲ್ಲಾ ಎಂದು ಕೇಳಿದಳು. ಇಲ್ಲಮ್ಮ ಇಲ್ಲಿ ಚಹಾದ ಟೈಂ ಏನಿದ್ದರೂ ಐದು ಗಂಟೆ. ಐದೂ ಗಂಟೆಯ ಮೇಲೆ ಯಾರು ಬಂದರೂ ಅವರಿಗೆ ಚಹಾ ಇಲ್ಲ. ನೀವು ಹೊಸಬರಲ್ವಾ ಅದಕ್ಕೆ ಕೊಡ್ತಿದ್ದಿವಿ ಅಂದಳು. ರಾತ್ರಿ ೮-೩೦ ಕ್ಕೆ ಊಟಕ್ಕೆ ಬರ್ರಿ ಎಂದು ಹೇಳಿದಳು. ಇವರು ಚಹಾ ಕುಡಿದ ಮೆಲೆ ರೂಮಿಗೆ ಮರಳಿದರು. 

      ಗೆಳತಿಯರಿಬ್ಬರು ಅಕ್ಕಪಕ್ಕದ ರೂಮಿನ ಹುಡುಗಿಯರನ್ನ ಪರಿಚಯ ಮಾಡಿಕೊಂಡರು. ಅವರ ಹತ್ತಿರ ಹಾಸ್ಟೇಲಿನ ನೀತಿ ನಿಯಮಗಳನ್ನು ಕೇಳಿ ತಿಳಿದುಕೊಂಡರು. 

     ಇತ್ತ ರಾಧಮ್ಮ ಅಡುಗೆಯೆಲ್ಲ ಮುಗಿಸಿ ವರಾಂಡಕ್ಕೆ ಬಂದು ಕುಳಿತ್ತಿದ್ದಳು. ಅವಳಿಗೆ ಮಗಳ ಚಿಂತೆಯೆ. ರೇಖಾ ಹೋದವಳು ಒಂದು ಫೋನಾದರೂ ಮಾಡಬಾರದೆ. ಏನು ಹುಡುಗಿನೊ ಏನೊ ಸ್ವಲ್ಪನೂ ಗಂಭೀರತೆಯೆ ಇಲ್ಲ. ಇಲ್ಲಿ ನಾನೆಷ್ಟು ಚಿಂತೆ ಮಾಡ್ತಿರ್ತಿನಿ ಅಂತ ಅವಳಿಗೇನು ಗೊತ್ತು ಎಂದು ತನ್ನಷ್ಟಕ್ಕೆ ತಾನೆ ಅಂದುಕೊಳ್ಳುತ್ತಿದ್ದಳು. ಆಗ ಪಕ್ಕದ ಮನೆಯ ಶೈಲಜಾ ರಾಧಮ್ಮನನ್ನು ನೋಡಿ ಏನ್ರೀ ರಾಧಮ್ಮ ಒಬ್ಬರೆ ಏನೋ ಬಡಬಡಿಸ್ತಾ ಇದ್ದೀರಿ. ಏನು ಇಲ್ಲಾರಿ ಶೈಲಜಾ, ನಮ್ಮ ರೇಖಾ ಬೇಡಾ ಬೇಡಾ ಅಂದರೂ ಕೇಳದೆ ಶಿವಮೊಗ್ಗಕ್ಕೆ ಹೋಗಿದ್ದಾಳೇರಿ ಇನ್ನು ಫೋನು ಮಾಡಿಲ್ಲಾರಿ ಅದೇ ಬೇಜಾರಲ್ಲಿ ಇದ್ದಿನಿ.

ಇಷ್ಟೇನಾ ಮಾಡ್ತಾಳೆ ಬಿಡಿ. ಅದಕ್ಯಾಕೆ ಬೇಜಾರು ಮಾಡ್ಕೋತೀರಿ ಅಂದಹಾಗೆ ಅವಳು ಓದೋದಿಕ್ಕೆ ತಾನೆ ಹೋಗಿರೊದು ಹೌದುರೀ ಓದಲಿ ಬಿಡಿ ರಾಧಮ್ಮ ಈಗೀನ ಕಾಲದಲ್ಲಿ ಹೆಣ್ಣುಮಕ್ಕಳು ಅಷ್ಟೆ, ಗಂಡು ಮಕ್ಕಳು ಅಷ್ಟೆ ಕಣ್ರಿ.

     ಹೆಣ್ಣು ಮಕ್ಕಳು ಜಾಸ್ತಿ ಓದಿದರೆ ಒಳ್ಳೆಯ ವರ ಸಿಕ್ಕುತ್ತದೆ. ಏನ ಬಿಡಿ ಶೈಲಜಾ ನಮ್ಮ ಕಾಲದಲ್ಲಿ ಇದೆಲ್ಲಾ ಎಲ್ಲಿ ಇತ್ತು. ವಯಸ್ಸಿಗೆ ಬಂದ ಕೂಡಲೆ ಲಕ್ಷಣವಾಗಿ ಮದುವೆಯಾಗಿ ಅಚ್ಚುಕಟ್ಟಾಗಿ ಸಂಸಾರ ಮಾಡಿಕೊಂಡರೆ ಸಾಕಿತ್ತು. ಕಾಲ ಬದಲಾಗಿದೆ ರಾಧಮ್ಮ ಅದಕ್ಕೆ ತಕ್ಕ ಹಾಗೆ ನಾವು ಬದಲಾಗಬೇಕು. ಅದೂ ಅಲ್ಲದೆ ನಿಮಗಿರೋದು ಒಬ್ಬಳೇ ಮಗಳು. ಏನ ಮಾಡಿದರೂ ಅವಳಿಗೆ ತಾನೆ. ನೀವು ಹೇಳೋದು ಸರಿ ಅನಿಸುತ್ತೆ ಶೈಲಜಾ. ಅಷ್ಟೊತ್ತಿಗೆ ಆಟವಾಡಲು ಹೋಗಿದ್ದ ಶೈಲಜಾಳ ಇಬ್ಬರು ಮಕ್ಕಳು ಬಂದರು. ಶೈಲಜಾ ಅವರ ಜೊತೆ ಒಳಗೆ ಹೋದಳು. ಆಗ ರಾಧಮ್ಮ ಮತ್ತೆ ಯೋಚನೆಯಲ್ಲಿ ಮುಳುಗಿದಳು. 

    ಕಾಲ ಎಷ್ಟು ಬದಲಾಗಿದೆ ಅಷ್ಟೆ ಕೆಟ್ಟು ಹೋಗಿದೆ. ಹೆಣ್ಣುಮಕ್ಕಳನ್ನ ಹೊರಗೆ ಕಳಿಸಿದರೆ ತಿರುಗಿ ಅವರು ಮನೆಗೆ ಬರೋವರೆಗು ಸಮಾಧಾನ ಇರೋದಿಲ್ಲ. ಇಂದಿನ ಸಮಾಜದಲ್ಲಿ ಹೆಣ್ಣು ಗಂಡಿಗೆ ಸರಿಸಮಾನಳಾದರು ಕೂಡಾ ಅವಳ ಶೋಷಣೆ ಮಾತ್ರ ತಪ್ಪಿಲ್ಲವಲ್ಲಾ. ಅನಾದಿಕಾಲದಿಂದಲೂ ಹೆಣ್ಣಿಗೆ ಆಗುವ ಅನ್ಯಾಯಗಳು ಮಾತ್ರ ಕಡಿಮೆಯಾಗಿಲ್ಲ. ಎಂದು ಹೆಣ್ಣಿನ ಮೇಲಿನ ಶೋಷಣೆ ನಿಲ್ಲುತ್ತದೆಯೊ ಅಂದು ಸಮಾಜ ಒಂದು ಒಳ್ಳೆಯ ಸಮಾಜ ಎನಿಸಿಕೊಳ್ಳುತ್ತದೆ ಎಂದು ಎನೆನೊ ಯೋಚನೆ ಮಾಡುತ್ತಾ ಕುಳಿತ್ತಿದ್ದ ರಾಧಮ್ಮನಿಗೆ ಏನು ಯೋಚನೆ ಮಾಡ್ತಾ ಇದ್ದಿಯಾ ಅನ್ನುವ ಶಿವಾನಂದನ ಮಾತಿಗೆ ವಾಸ್ತವಕ್ಕೆ ಬಂದಳು. 

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸ್ನೇಹ ಭಾಂದವ್ಯ (ಭಾಗ 2): ನಾಗರತ್ನಾ ಗೋವಿಂದನ್ನವರ

  1. ಕಾದಂಬರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವುದಕ್ಕೆ ಧನ್ಯವಾದಗಳು ಪ್ರಶಸ್ತಿಯವರೆ.

Leave a Reply

Your email address will not be published. Required fields are marked *