ಪುಸ್ತಕದ ಹೆಸರು: ಚಿನ್ನಮ್ಮನ ಲಗ್ನ-1893
(ಮಲೆಗಳಲ್ಲಿ ಮದುಮಗಳು ಕುರಿತ ಟಿಪ್ಪಣಿಗಳು)
ಲೇಖಕರು: ಕೆ ಸತ್ಯನಾರಾಯಣ, ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು
ಮೊದಲ ಮುದ್ರಣ: 2020, ₹ 170, ಡೆಮಿ 1/8, ಪುಟಗಳು: 176
ಕೆ ಸತ್ಯನಾರಾಯಣ ಅವರು ನಮ್ಮ ಕನ್ನಡದ ಹೆಮ್ಮೆಯ, ಮಹತ್ವದ ಹಾಗೂ ಸುಸಂವೇದನಾಶೀಲ, ಸೃಜನಶೀಲ ಬರೆಹಗಾರರು. ಅವರ ಕತೆಗಳು ಮತ್ತು ಪ್ರಬಂಧಗಳು ನಮ್ಮ ಭಾಷೆ-ಸಮಾಜ ಮತ್ತು ಸಂಸ್ಕೃತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಾ ಅದರ ಪರಿಧಿಯನ್ನು ವಿಸ್ತರಿಸಿವೆ, ಪುನಾರಚಿಸಿವೆ ಮತ್ತು ಆಪ್ಯಾಯಮಾನವಾಗಿ ನಿರ್ವಚಿಸಿವೆ. ಅವರ ಕತೆಗಳು ಮತ್ತು ಪ್ರಬಂಧಗಳ ಶೈಲಿ ಮತ್ತು ಧ್ವನಿಗಳು ನನಗೆ ಇಷ್ಟ. ಹಾಗಾಗಿ ಅವರ ಬರೆಹಗಳನ್ನು ಗಮನಿಸುವ ಮತ್ತು ಓದಿ ಸುಖಿಸುವ ಅಭ್ಯಾಸ ನನ್ನದು.
ಇದೀಗ ನನ್ನ ತಂದೆಯವರ ಸೋದರ ಸಂಬಂಧಿಗಳಾದ, ನನ್ನನ್ನು ತುಂಬು ಪ್ರೀತಿ ಮತ್ತು ಅಭಿಮಾನಗಳಿಂದ ಕಾಣುವ, ನನ್ನ ಹಿರಿಯ ಅಣ್ಣನವರೂ ಅಂತಾರಾಷ್ಟ್ರೀಯ ಖ್ಯಾತಿಯ ಯಶಸ್ವೀ ಉದ್ಯಮಿಗಳೂ ಸಾಹಿತ್ಯಾದಿ ಲಲಿತಕಲೆಗಳಲ್ಲಿ ಗಂಭೀರ ಓದುಗರೂ ಸದಭಿರುಚಿಯ ಚಲನಚಿತ್ರ ಮತ್ತು ಟೀವಿ ಧಾರಾವಾಹಿಗಳ ನಿರ್ಮಾಪಕರೂ ಆದ ಶ್ರೀ ಡಿ ಎಸ್ ರಾಮಚಂದ್ರ, ಬೆಂಗಳೂರು- ಇವರ ಮೂಲಕ ಅತ್ಯಂತ ಆಕಸ್ಮಿಕವಾಗಿಯೆಂಬಂತೆ ಶ್ರೀಯುತ ಕೆ ಸತ್ಯನಾರಾಯಣರ ಇತ್ತೀಚಿನ ಹೊಸ ಪುಸ್ತಕ ‘ಚಿನ್ನಮ್ಮನ ಲಗ್ನ-1893’ ಅನ್ನು ಓದುವ ಭಾಗ್ಯ ನನ್ನದಾಯಿತು. ಸ್ವತಃ ಇದರ ಲೇಖಕರೇ ನನ್ನಂಥ ಈ ಕಿರಿಯ ಓದುಗನ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಪುಸ್ತಕದ ಮೊದಲ ಪುಟದಲ್ಲಿ ನನ್ನ ಹೆಸರನ್ನು ಬರೆದು, ಶುಭಾಶಯಗಳೊಂದಿಗೆ ಈ ಕೃತಿಯನ್ನು ನನ್ನ ಅಣ್ಣನವರ ಹಸ್ತಮುಖೇನ ತಲಪಿಸಿದ್ದು ನನಗಾದ ರೋಮಾಂಚನ!
ಪುಸ್ತಕವು ಆಕರ್ಷಕವಾಗಿಯೂ ತುಂಬ ಮುದ್ದಾಗಿಯೂ ಮುದ್ರಣಗೊಂಡಿದ್ದು, ಕೈಗೆತ್ತಿಕೊಳ್ಳಲು ಹಗುರವಾಗಿಯೂ ಇದ್ದು, ಕುವೆಂಪು ಅವರ ಕುಪ್ಪಳಿಯ ಮನೆಯನ್ನೇ ಹೋಲುವ ಮುಖಚಿತ್ರದಿಂದಾಗಿ ಅತ್ಯಂತ ಆಪ್ತವಾಗುತ್ತದೆ. (ನನಗಂತೂ ಮುಕುಂದಯ್ಯ ಮತ್ತು ಚಿನ್ನಮ್ಮರ ‘ಮಗು’ ವನ್ನು ಎತ್ತಿಕೊಂಡಷ್ಟೇ ಸಂಭ್ರಮ, ಸಂತೋಷಗಳಾದವು!) ಪ್ರೊ. ಕೆ ಸುಂದರರಾಜ್ ಅವರ ಬೆನ್ನುಡಿಯು ಕೃತಿಯ ಅಂತಸ್ಸತ್ವವನ್ನು ಅದ್ಭುತವಾಗಿ ಪರಿಚಯಿಸುತ್ತದೆ. ಇಲ್ಲಿಯೇ ಅಚ್ಚಾಗಿರುವ ಸತ್ಯನಾರಾಯಣರ ಕಪ್ಪು ಬಿಳುಪಿನ ಕಿರುಭಾವಚಿತ್ರ ಸಹ ಅವರ ಆಲೋಚನೆಯ ಮತ್ತು ಸೃಷ್ಟಿಶೀಲ ಅಭಿವ್ಯಕ್ತಿ ನಿರ್ಮಿತಿಯನ್ನು ಸಂಕೇತಿಸುತ್ತದೆ; ಒಂದು ವಿಮರ್ಶಾತ್ಮಕ ದೂರವನ್ನು ಕಾಪಾಡಿಕೊಂಡೇ ಮದುಮಗಳ ಎಲ್ಲ ಆಯಾಮಗಳನ್ನೂ ಒಳ ಹೊಕ್ಕು ನೋಡಿದ ತೃಪ್ತಿ ಮತ್ತು ಧನ್ಯತೆಗಳ ಕಿರುನಗೆಯೊಂದು ಇವರ ಭಾವಚಿತ್ರದಲ್ಲಿ ಅಡಕವಾಗಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದವರಿಗಷ್ಟೇ ಗೊತ್ತಾಗುವಂತಿದೆ.
ಈ ಕೃತಿಗೆ ಯಾರ ಮುನ್ನುಡಿಯೂ ಇಲ್ಲವೆಂಬುದು ವಿಶೇಷ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕನ್ನಡಿಯೇ ಇದಾಗಿರುವಾಗ ಮುನ್ನುಡಿಯ ಅಗತ್ಯವಿಲ್ಲವೆಂಬುದು ಲೇಖಕರ ಗ್ರಹಿಕೆಯಾಗಿರಬೇಕೆನಿಸುತ್ತದೆ. ಇಷ್ಟಕೂ ಇದೊಂದು ವಿಭಿನ್ನ ತೆರನಾದ ಮತ್ತು ವಿಶಿಷ್ಟ ಬಗೆಯ ಪುಸ್ತಕ. ಸೃಜನವೂ ಕಲಾತ್ಮಕವೂ ಆದ ಕೃತಿಗೊಂದು ಅಷ್ಟೇ ಸೃಜನಾತ್ಮಕವಾದ ಪ್ರತಿಕ್ರಿಯೆಯಾಗಿ ಇದು ರೂಪುಗೊಂಡ ಕನ್ನಡದಲ್ಲಿ ‘ಹೊಸ ಬಗೆ’ಯ ಇನ್ನೊಂದು ಕಲಾಕೃತಿ ಈ ಚಿನ್ನಮ್ಮನ ಲಗ್ನ!
ಮುಖಪುಟ ತೆರೆಯುತಿದ್ದಂತೇ ಕೆ ಸತ್ಯನಾರಾಯಣರನ್ನು ಕುರಿತ ಸಂಕ್ಷಿಪ್ತ ವಿವರವಿದೆ. ಒಂದೇ ಪುಟದಲ್ಲಿ ಅವರ ಸಾಹಿತ್ಯದ ಬಹುಮುಖ ಸಾಧನೆ ಮತ್ತು ಕೊಡುಗೆಗಳನ್ನು ಪರಿಚಯಿಸಿದೆ. ತರುವಾಯ ಈ ಪುಸ್ತಕವನ್ನು ಬರೆದ ಹಿನ್ನೆಲೆಯನ್ನು ‘ಓದುಗರೊಡನೆ’ ಹಂಚಿಕೊಂಡಿದ್ದಾರೆ. ಇಂಗ್ಲೆಂಡಿನ ಹೇಗ್ ಪಟ್ಟಣದಲ್ಲಿ ಎರಡೂವರೆ ತಿಂಗಳು ಇರುವಂಥ ಅವಕಾಶ ಒದಗಿದಾಗ ನಡೆಸಿದ ಈ ಬರೆವಣಿಗೆಯ ಕ್ರಮವನ್ನು ವಿಶದೀಕರಿಸಿದ್ದಾರೆ. ಕುವೆಂಪು ಅವರ ಈ ಮಹಾಕಾದಂಬರಿಯು ಯಾವಾಗಲೂ ಸಾವಯವವಾಗಿ ಒಳಗಿಂದೊಳಗೇ ಬೆಳೆಯುತ್ತಿರುವ ಪರಿಯನ್ನು ಗಮನಕ್ಕೆ ತಂದಿದ್ದಾರೆ. ಕನ್ನಡದಮಟ್ಟಿಗೆ ಇಂಥ ಪ್ರಯತ್ನ ಹೊಸದು ಎಂದೂ ಈವರೆಗೆ ಯಾವುದೇ ಕಾದಂಬರಿಯ ಎಲ್ಲ ಅಧ್ಯಾಯಗಳನ್ನು ಕುರಿತು ಅಧ್ಯಾಯವಾರು ಟಿಪ್ಪಣಿಗಳನ್ನು ಬರೆದಂತಿಲ್ಲ ಎಂದೂ ತಿಳಿಸಲು ಮರೆತಿಲ್ಲ.
ಆನಂತರದ್ದು ಬಲು ವಿಶೇಷವೆನಿಸುವುದು ‘ಲಗ್ನಪತ್ರಿಕೆ.’ ಕ್ರಿಯಾಶೀಲವೂ ಪ್ರತಿಭಾವಂತಿಕೆಯೂ ಮೈಗೂಡಿದ ಈ ಆಹ್ವಾನಪತ್ರಿಕೆಯನ್ನು ಸತ್ಯನಾರಾಯಣರು ತಯಾರಿಸಿ ಅಚ್ಚಿಸಿದ್ದಾರೆ. ಏಕೆಂದರೆ ಇದು ಚಿನ್ನಮ್ಮನ ಲಗ್ನ! ಇದನ್ನು ಓದುವವರನ್ನು ಈ ಮೂಲಕ ಆಹ್ವಾನಿಸುತ್ತಾರೆ. ಕೋಣೂರು ಮುಕುಂದಯ್ಯ ಮತ್ತು ಹೂವಳ್ಳಿ ಚಿನ್ನಮ್ಮರ ದಿವ್ಯಲಗ್ನಕ್ಕೆ ಕನ್ನಡದ ಓದುಗರನ್ನು ವಿಶಿಷ್ಟ ರೀತಿಯಲ್ಲಿ ಬರಮಾಡಿಕೊಳ್ಳುತ್ತಾರೆ. ಇದನ್ನು ಓದಿಯೇ ಸವಿಯಬೇಕು; ಇದೊಂದು ಬಲು ಸುಂದರವಾದ ಅರ್ಥಗರ್ಭಿತ ಕಟ್ಟೋಣ.
ತರುವಾಯ ‘ಪರಿವಿಡಿ’ ಲಭಿಸುತ್ತದೆ. ಇದೂ ವಿಶೇಷವಾದ ಹೆಣಿಗೆಯಲ್ಲಿದೆ. ತಾಯಿಯೊಬ್ಬಳು ತನ್ನ ಮಗಳಿಗೋ ಸೊಸೆಗೋ ಶಾಸ್ತ್ರೋಕ್ತವಾಗಿ ಜಡೆ ಹಾಕಿ, ಸಿಂಗಾರ ಮಾಡುವ ರೀತಿಯಲ್ಲಿ ಲೇಖಕರು ಈ ಪುಸ್ತಕವನ್ನು ಸಂಯೋಜಿಸಿದ್ದಾರೆ. ಸುಮ್ಮನೆ ತಮಗನಿಸಿದ್ದನ್ನು ದಾಟಿಸಿಲ್ಲ! ಹೆಸರಿಗೆ ‘ಟಿಪ್ಪಣಿಗಳು’ ಎಂದರೂ ಇದು ಕೇವಲ ಟಿಪ್ಪಣಿಯಾಗಷ್ಟೇ ಉಳಿಯದೇ, ಮುಂದುವರೆದು ವಾಚಕಕೇಂದ್ರಿತ ಸಂರಚನೆಯಾಗಿದೆ. ಹೊಸ ಬಗೆಯ ಡಿಸ್‍ಕೋರ್ಸ್ ಆಗಿದೆ.
‘ಕುವೆಂಪುವನ್ನು ಹೀಗೇ ಓದಬೇಕು’ ಎಂದು ಈ ಕೃತಿಯನ್ನು ಪ್ರವೇಶಿಸುವ ಹಾದಿಗೆ ನಮ್ಮನ್ನು ಪರಿಚಯಿಸುತ್ತಾರೆ. ರಸಋಷಿ ಕುವೆಂಪು ಅವರು ತಮ್ಮೊಳಗೆ ಇಳಿದ ಬಗೆಯನ್ನು ನೆನಪಿಸಿಕೊಳ್ಳುತ್ತಾ ಆತ್ಮೀಯವಾಗುತ್ತಾರೆ. ಜೊತೆಗೆ ನಾನೊಬ್ಬ ವಿಮರ್ಶಕನಾಗಿ, ವಿಮರ್ಶನ ದೃಷ್ಟಿಯಿಂದ ಮಾಡಿರುವ ಬರೆಹ ಇದಲ್ಲ ಎಂಬುದನ್ನು ನಯವಾಗಿಯೇ ತಿಳಿಸುತ್ತಾರೆ. ಆಮೇಲೆ ಸಾಹಿತ್ಯವನ್ನು ನಾನು ಗ್ರಹಿಸುವ ಮತ್ತು ನಿರ್ಮಿಸುವ ವೈಧಾನಿಕ ಮಾರ್ಗ ಯಾವುದು ಎಂಬುದರತ್ತ ಹೊರಳುತ್ತಾರೆ. ‘ಸಂಘಟನೆ, ಚಳವಳಿಗಳ, ಆಶಯಗಳ ವಿಜೃಂಭಣೆಯಿಂದ ಪ್ರೇರಣೆ ಪಡೆದು ಓದುಗಾರಿಕೆಯನ್ನು ರೂಪಿಸಿಕೊಳ್ಳುವ ಹಾದಿ ನನ್ನದಲ್ಲ’ ಎಂದು ಖಚಿತಪಡಿಸುತ್ತಾರೆ. ಅಂತಿಮವಾಗಿಯೂ ಸಾಹಿತ್ಯವೆಂಬುದು ‘ಕಾಂತಾಸಮ್ಮಿತ’ ಎಂಬುದನ್ನು ಈ ಪದ ಬಳಸದೇ ಅರ್ಥ ಮಾಡಿಸುತ್ತಾರೆ. ಅವರವರಿಗೆ ಬೇಕಾದ ಕುವೆಂಪು ಅವರನ್ನು ಅವರೇ ‘ರೀ ಡಿಸ್ಕವರ್’ ಮಾಡಿಕೊಳ್ಳಬೇಕು; ಅಂಥದೊಂದು ನನ್ನ ಪ್ರಯತ್ನದ ಫಲ ಎಂದು ಮನಗಾಣಿಸುತ್ತಾರೆ.
ಕುವೆಂಪು ಭಕ್ತನೂ ಆಗದೇ ವಕಾಲತ್ತು ವಹಿಸುವ ವಕ್ತಾರನೂ ಆಗದೇ ಕೇವಲ ನಿಷ್ಠಾವಂತ ಪ್ರೀತಿಪಾತ್ರ ಓದುಗನಾಗಿ ನನ್ನ ಓದಿನ ಹೊಸ ಸಾಧ್ಯತೆಯೊಂದನ್ನು ತಮ್ಮ ಮುಂದೆ ತೆರೆದಿಟ್ಟಿರುವೆ ಎಂಬ ವಿನಯವಂತಿಕೆಯೇ ಇವರ ಘನತೆ ಮತ್ತು ಮಮತೆಗಳನ್ನು ಮನದಟ್ಟು ಮಾಡಿಸುತ್ತದೆ.
ಕುವೆಂಪು ಅವರ ‘ಯಾವ ಜನ್ಮದ ಮೈತ್ರಿ’ ಕವಿತೆಯ ಸಾಲುಗಳನ್ನು ಲೇಖಕರು ಉಲ್ಲೇಖಿಸಿರುವುದು ತಮ್ಮ ಹಾಗೂ ಕುವೆಂಪು ಅವರ ಸಾಹಿತ್ಯಕ ದೃಷ್ಟಿ ಧೋರಣೆಗಳನ್ನು ಪ್ರತಿನಿಧಿಸುವಂತಿದೆ:
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಹೌದು, ಮಲೆಗಳಲ್ಲಿ ಮದುಮಗಳನ್ನು ಓದುವಾಗ ‘ಅರ್ಥ’ ಕ್ಕೆ ಹಲವು ಆಯಾಮಗಳಿರುವುದನ್ನು ಮನನ ಮಾಡುತ್ತಾರೆ. ಕಾದಂಬರಿಯ ಪ್ರಾರಂಭದಲ್ಲೇ ಕುವೆಂಪು ಉಲ್ಲೇಖಿಸುವ ತಮ್ಮದೇ ಕವಿತೆಯ ಸಾಲುಗಳು ಕೂಡ ‘ಅರ್ಥ’ ವನ್ನು ಕುರಿತವು:
ಎಲ್ಲಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲ ಊ ತೀರ್ಥ!
(ಕಾದಂಬರಿಯಲ್ಲಿ ಇದು ‘ಓದುಗರಿಗೆ’ ನೀಡಿದ ದಿಗ್ದರ್ಶನವೆನಿಸಿದೆ.) ಆದರೆ ಲೇಖಕರು ಈ ‘ಪ್ರಣಾಳಿಕೆಯು ಓದುಗರಿಗೆ ಮಾತ್ರವೇನು?’ ಎಂದು ಪ್ರಶ್ನಿಸುತ್ತಾ, ಆ ಸಾಲುಗಳನ್ನು ಹಾಗೆಯೇ ಅಚ್ಚಿಸಿದ್ದಾರೆ. ಇದರಿಂದ ಈ ಕೃತಿಯ ಓದುಗರು ಕಾದಂಬರಿಯ ಓದುಗರೂ ಆಗಿ ಬಿಡುತ್ತಾರೆ ಅಥವಾ ಓದಿದ್ದನ್ನು ಕಣ್ಣ ಮುಂದೆ ತಂದುಕೊಳ್ಳುತ್ತಾರೆ.
ಕುವೆಂಪು ಅವರು ಒಂದು ‘ಓದುವಿಕೆಯ ಮೀಮಾಂಸೆ’ ಯನ್ನು ಪ್ರತಿಪಾದಿಸುತ್ತಿದ್ದಾರೆಯೇ? ಎಂದು ತಮ್ಮನ್ನೇ ಕೇಳಿಕೊಳ್ಳುತ್ತಾರೆ. ‘ಓದುಗನನ್ನು ಲೇಖಕನಿಗೆ ಸಮಾನ’ ಎಂದು ಭಾವಿಸುತ್ತಿದ್ದಾರೆಯೇ? ಎಂದೂ ಕೇಳುತ್ತಾರೆ. ಹೀಗಾಗಿ, ಇತ್ತೀಚೆಗೆ ಬಂದಿರುವ ವಾಚಕ ಕೇಂದ್ರಿತ ಪ್ರತಿಸ್ಪಂದನ ವಿಮರ್ಶೆ (Readers Response theory) ಯನ್ನೇ ಆ ಕಾಲದಲ್ಲಿ ಕುವೆಂಪು ಅವರ ಕನ್ನಡದಲ್ಲಿ ಈ ಮೂಲಕ ಉದ್ಘಾಟಿಸಿದರು ಎಂದೇ ನಾನೀಗಲೂ ಭಾವಿಸಿರುವೆ. ‘ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು……’ ಎಂದ ಬೇಂದ್ರೆಯವರೂ ಇದೇ ಮನೋಧರ್ಮದವರೇ.
ಜೊತೆಗೆ ಕುವೆಂಪು ಅವರಿಗೆ ಒಟ್ಟಾರೆ ವಿಮರ್ಶಕರ ರಸಹೀನ ಶುಷ್ಕ ಥಿಯರಿಯಾಧಾರಿತ ಟೀಕೆ ನಿಂದನೆಗಳ ‘ವಿಮರ್ಶೆ’ ಹೆಸರಿನ ಬರೆಹಗಳ ಬಗ್ಗೆ ಬೇಸರವಿದೆ. ಅದನ್ನು ಆಗಲೇ ತಿರಸ್ಕರಿಸಿ ‘ನಾನೇರುವೆತ್ತರಕೆ ನೀನೇರಬಲ್ಲೆಯಾ’ ಎಂದು ಸವಾಲು ಹಾಕಿದ್ದವರೇ! ಈ ಹಿನ್ನೆಲೆಯಲ್ಲಿ ಸತ್ಯನಾರಾಯಣ ಅವರು ‘ಕುವೆಂಪು ಬಯಸುತ್ತಿರುವುದು ಎಚ್ಚರ ತುಂಬಿದ ಪ್ರಜ್ಞಾವಂತ ಓದುಗನನ್ನು’ ಎಂದು ಸಮರ್ಪಕವಾಗಿಯೇ ಗುರುತಿಸಿ ಕೊಟ್ಟಿದ್ದಾರೆ.
ಹಾಗೆ ನೋಡಿದರೆ ‘ಯಾವ ಜನ್ಮದ ಮೈತ್ರಿ’ ಕವನದ ಕೊನೆಯ ಸಾಲುಗಳಾದ ‘ಬಾರಯ್ಯ, ಮಮ ಬಂಧು, ಜೀವನಪಥದೊಳಾವು; ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು’ ಎಂಬುದು ಮದುಮಗಳು ಕಾದಂಬರಿಯ ಪ್ರಮುಖ ಆಶಯವೂ ಆಗಿದೆ ಎಂದು ನಾನು ಈ ಕ್ಷಣ ಅಂದುಕೊಳ್ಳುತ್ತಿದ್ದೇನೆ.
ಚಿನ್ನಮ್ಮನ ಲಗ್ನ ಹೊತ್ತಗೆಯ ಬಹಳಷ್ಟು ಕಡೆಗಳಲ್ಲಿ ಕಾದಂಬರಿಯ ಉಲ್ಲೇಖಗಳೂ ಉದ್ಧೃತಗಳೂ ಬಂದಿವೆ; ಅವುಗಳ ಪುಟಸಂಖ್ಯೆಗಳನ್ನು ಆವರಣದಲ್ಲಿ ಕೊಡಲಾಗಿದೆ. ಆದರೆ ಲೇಖಕರು ತಾವು ಉದ್ಧರಿಸಿರುವ ಕಾದಂಬರಿಯು ಎಷ್ಟನೇ ಮುದ್ರಣದ್ದು ಎಂಬುದನ್ನು ಹೇಳಲು ಮರೆತಿದ್ದಾರೆ. (ಇದೇನೂ ಬಹು ದೊಡ್ಡ ಲೋಪವಲ್ಲ) ಕೆಲವೊಂದು ಕಡೆಗಳಲ್ಲಿ ಅಕ್ಷರ ಸ್ಖಾಲಿತ್ಯಗಳು ಹಾಗೆಯೇ ಉಳಿದುಕೊಂಡಿವೆ. ಮುಂದಿನ ಮುದ್ರಣದಲ್ಲಿ ಶ್ರೀಯುತರು ಇದನ್ನು ಖಂಡಿತ ಗಮನಿಸುವರೆಂಬ ವಿಶ್ವಾಸ ನನ್ನದು.
ಕಾಲದ ಎಲ್ಲ ಆಯಾಮಗಳನ್ನು ಒಳಗೊಂಡ ಧೀಮಂತ ಪ್ರಜ್ಞಾವಂತಿಕೆಯಲ್ಲಿ ಬರೆದ ಕಾದಂಬರಿ ಇದು ಎಂದು ಲೇಖಕರು ಹೇಳುವುದು ತುಂಬ ಸಮಂಜಸವಾಗಿದೆ. ಹಾಗೆಯೇ ಸೃಷ್ಟಿಯ ವಿನ್ಯಾಸದಲ್ಲೇ ಒಂದು ಹೆಣಿಗೆಯಿದೆ, ಬಂಧವಿದೆ, ವಿನ್ಯಾಸವಿದೆ. ಇದನ್ನು ಕಾಣಬೇಕೆಂದು ಕಾದಂಬರಿ ಒತ್ತಾಯಿಸುತ್ತದೆ ಎಂಬುದನ್ನೂ ತಿಳಿಸಿ ನಮಗೊಂದು ಹೊಸನೋಟವನ್ನು ಕಲಿಸಿದ್ದಾರೆ.
ಗುತ್ತಿ-ತಿಮ್ಮಿ, ಮುಕುಂದಯ್ಯ-ಚಿನ್ನಮ್ಮ ಮತ್ತು ಐತ-ಪೀಂಚಲು ಎಂಬ ಮೂರೇ ಜೋಡಿಗಳಿಲ್ಲ, ಇನ್ನೂ ಹಲವು ಜೋಡಿಗಳೂ ಸಂಬಂಧ, ಒಳಸಂಬಂಧಗಳನ್ನು ಹೊಂದಿವೆ, ದುರಂತಗಳ ಸರಮಾಲೆಯೇ ಇದೆ ಎಂಬುದನ್ನು ಸತ್ಯನಾರಾಯಣರು ಗುರುತಿಸಿ, ವಿಶದೀಕರಿಸಿ, ಅವೆಲ್ಲವನ್ನೂ ತಮ್ಮ ಅಗಾಧ ಮತ್ತು ಆಳವಾದ ಓದಿನಿಂದ ವಿಶ್ಲೇಷಿಸಿ ಕೊಡುವುದು ನಮ್ಮ ಪಾಲಿನ ಸುಕೃತವೇ ಸರಿ.
ಜೊತೆಗೆ ಕುವೆಂಪು ಅವರು ತಾವು ಭಾವಿಸಿರುವಂತೆ, ಅತೀತವಾದ ಶಕ್ತಿ ತನಗಿದೆ ಎಂಬ ಮತ್ತು ಬದುಕಿನಲ್ಲಿರುವ ಲೀಲೆಯ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬ ಹಾಗೆಯೇ ಎಲ್ಲದರಲ್ಲೂ ಮಮಕಾರದಿಂದ ಭಾಗವಹಿಸುವ ವಿನಯ ಮತ್ತು ಸೌಂದರ್ಯಪ್ರಜ್ಞೆ ಇರಬೇಕೆಂಬ ‘ಪೂರ್ಣದೃಷ್ಟಿ’ಯನ್ನು ನೆನಪಿಸಿಕೊಟ್ಟು, ಕಾದಂಬರಿಯನ್ನು ಓದುವಾಗಿನ ಮನೋಭೂಮಿಕೆಯತ್ತ ಬೊಟ್ಟು ಮಾಡುತ್ತಾರೆ.
ಇನ್ಮುಂದೆ ಕಾದಂಬರಿಯ ಅರುವತ್ನಾಲ್ಕು ಅಧ್ಯಾಯಗಳನ್ನು ತುಂಬ ತೀವ್ರವಾಗಿ ಅಷ್ಟೇ ಒಳನೋಟಗಳಿಂದ ತುಂಬಿದ ತದೇಕವಾಗಿ ವಿಶ್ಲೇಷಿಸಿ ಕೊಡುವ ಲೇಖಕರು ಪ್ರತಿ ಅಧ್ಯಾಯದಲ್ಲಿ ಬರುವ ಕಥಾನಕ, ಪಾತ್ರಗಳು, ಅವುಗಳ ನಡುವಿನ ಅಂತಸ್ಸಂಬಂಧಗಳು, ಬಿಟ್ಟು ಕೊಡುವ ಅರ್ಥಛಾಯೆಗಳು ಮೊದಲಾದುವನ್ನು ರಸಪೂರ್ಣವಾಗಿ ವ್ಯಾಖ್ಯಾನಿಸುತ್ತಾರೆ. ಲೇಖಕರ ಕಥನಪ್ರತಿಭೆಯು ಕಾದಂಬರಿಕಾರರ ಕಥನಪ್ರತಿಭೆಯೊಂದಿಗೆ ಮುಖಾಮುಖಿಯಾಗುತ್ತದೆ. ಇದರಿಂದಾಗಿ ಒಂದು ಸುಂದರ ಮತ್ತು ಸುಸಂಬದ್ಧ ಪ್ರಾಯೋಗಿಕ ಜೀವಂತ ಓದು ನಮಗೂ ದಕ್ಕಿದೆ. ಇಷ್ಟಕ್ಕೇ ನಿಲ್ಲದೆ, ಕುವೆಂಪು ಅವರಿಗೆ ಬಲುಪ್ರಿಯವಾಗಿದ್ದ ದರ್ಶನ ವಿಮರ್ಶೆಯ ನೆಲೆಗಳನ್ನೂ ಕಂಡಿರಿಸಿದೆ. ಕಾದಂಬರಿಯ ಪ್ರಬಂಧ ಧ್ವನಿಗೆ ಎಲ್ಲೂ ಧಕ್ಕೆ ತಾಗಿಲ್ಲವೆಂಬುದನ್ನು ಶ್ರುತಪಡಿಸುತ್ತಾರೆ. ಅವರ ಓದು ನಮ್ಮಗಳ ಓದೂ ಆಗುವುದು ಇಲ್ಲಿನ ಚೋದ್ಯ. ಹಾಗೆಯೇ ನಮ್ಮ ಓದಿನ ಪರಿಮಿತಿಗಳೂ ಮುನ್ನೆಲೆಗೆ ಬಂದು ನಮ್ಮನ್ನು ‘ಸರಿ’ಪಡಿಸುವುದು ಈ ಲಗ್ನದ ಬಹುಮುಖ್ಯ ಲಾಭ.
ಸತ್ಯನಾರಾಯಣ ಅವರಿಗೆ ಅವರ ಸ್ನೇಹಿತರಾದ ಶ್ರೀ ಗಿರೀಶ್ ವಾಘ್ ಜೊತೆಗಿದ್ದಾರೆ. ಇವರು ಕುವೆಂಪು ಕುರಿತು ಬಂದಿರುವ ಸಕಲ ವಿಮರ್ಶೆಗಳನ್ನೂ ಗಮನಿಸಿದವರು. ಈ ವಿಶ್ವಾಸವೇ ಸತ್ಯನಾರಾಯಣರ ವಿಶ್ಲೇಷಣೆಗೆ ಧೈರ್ಯ ತುಂಬಿದೆ. ಹಾಗಾಗಿ ಲೇಖಕರ ಓದಿನಲ್ಲಿ ಕಾದಂಬರಿಯನ್ನು ಕುರಿತು ಬಂದಿರುವ ಕೆಲವು ವಿಮರ್ಶೆಗಳ ವಿಚಕ್ಷಣೆಯನ್ನೂ ನಾವು ಕಾಣಬಹುದು. ಅಧ್ಯಾಯವಾರು ಟಿಪ್ಪಣಿಗಳ ನಂತರ ಬಂದಿರುವ ಎರಡು ಹಿನ್ನುಡಿಗಳಲ್ಲಿ ಗಿರೀಶ್ ವಾಘ್ ಅವರದೂ ಒಂದು. ‘ಕಲಾಕೃತಿಯ ದಾರ್ಶನಿಕ ದೃಷ್ಟಿಯನ್ನು ಸತ್ಯನಾರಾಯಣರು ಓದುಗರಿಗೆ ದಾಟಿಸುವಲ್ಲಿ ಸಫಲರಾಗಿದ್ದಾರೆ’ ಎಂದು ಅವರು ಮನಸಾರೆ ಮೆಚ್ಚಿದ್ದಾರೆ ಮಾತ್ರವಲ್ಲದೇ ‘ಪ್ರಾಯೋಗಿಕ ವಿಮರ್ಶೆಯ ಹೊಸ ಮಾದರಿಯನ್ನು ನಮ್ಮ ಮುಂದಿಟ್ಟಿದ್ದಾರೆ’ ಎಂದಿದ್ದಾರೆ.
ಇನ್ನೊಂದು ಹಿನ್ನುಡಿ: ಡಾ. ಸುಧಾಕರ ದೇವಾಡಿಗರದು. ‘ಸತ್ಯನಾರಾಯಣರ ಈ ಬರೆಹವು ಸಮಗ್ರ ಒಳನೋಟವನ್ನು ನೀಡಿದ್ದು, ಒಮ್ಮೊಮ್ಮೆ ಎರಡೆರಡು ಅಧ್ಯಾಯಗಳನ್ನು ಒಟ್ಟು ಸೇರಿಸಿ ಚರ್ಚಿಸಿರುವುದರಿಂದ ಮಹತ್ವದ ಒಳನೋಟಗಳು ದೊರಕಿವೆ’ ಎಂದಿದ್ದಾರೆ. ಕುವೆಂಪು ಕಾದಂಬರಿಗಳಲ್ಲಿ ಕೇಂದ್ರವಿಲ್ಲ, ಸಾವಯವ ಸಂಬಂಧವಿಲ್ಲ ಎಂಬ ಹಳೆಯ ಟೀಕೆಗಳಿಗೆ ಈ ಪುಸ್ತಕವು ಸಮರ್ಥ ಉತ್ತರ ನೀಡಿದ್ದು, ಕಾದಂಬರಿಯ ಎಲ್ಲ ಘಟನೆ-ಸಂಘಟನೆಗಳ ಹಿಂದೆ ಏಕಸೂತ್ರತೆ ಇದೆ, ಹಾಗಾಗಿ ಕನ್ನಡ ಓದುಗ ಜಗತ್ತಿಗೆ ವಿಭಿನ್ನವಾದ ಅನುಭವ ನೀಡುವ ಬರೆಹ ಇದೆಂದು ತಮ್ಮ ಹಿನ್ನುಡಿಯಲ್ಲಿ ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ ಜಗತ್ತಿಗೆ ಸತ್ಯನಾರಾಯಣರ ಈ ‘ಚಿನ್ನಮ್ಮನ ಲಗ್ನ’ ವು ಹೊಚ್ಚ ಹೊಸ ಕಾಣಿಕೆ ಮತ್ತು ಕಾಣ್ಕೆ ಎಂದೇ ನಾನು ಸಂತೋಷ ಪಟ್ಟಿದ್ದೇನೆ. ಇಂಥ ಹೊಸ ಪ್ರಯತ್ನದಲ್ಲೇ ಲೇಖಕರು ‘ಮೊದಲ ಚೆಂಡಿಗೇ ಸಿಕ್ಸರು’ ಬಾರಿಸಿದ ಯಶಸ್ಸನ್ನು ದೋಚಿದ್ದಾರೆ. ಹಾಗೆ ನೋಡಿದರೆ ಈವರೆಗಿನ ಎಲ್ಲ ವಿಮರ್ಶಾ ಪಂಥಗಳ ಧನಾತ್ಮಕ ಅಂಶಗಳ ಹದವರಿತ ಪಾಕವೇ ಆಗಿದೆ. ವಿಮರ್ಶಾ ಪ್ರಕಾರಗಳ ಎಲ್ಲ ಮುಖ್ಯ ‘ಹತಾರ’ ಗಳನ್ನು ಸಹೃದಯಾತ್ಮಕ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಂಡಿದೆ. ಜೊತೆಗೆ ಆಪ್ತವಾಗಿಯೂ ಆತ್ಮೀಯವಾಗಿಯೂ ಈ ಸಮಗ್ರ ವಿಶ್ಲೇಷಣಾತ್ಮಕ ಓದು ರೂಪುಗೊಂಡಿದೆ. ಏಕೆಂದರೆ ಮುಗ್ಧನೂ ಪ್ರಬುದ್ಧನೂ ಆದ ಓದುಗ ಸತ್ಯನಾರಾಯಣರಲ್ಲೂ ಇದ್ದಾನೆ ಮತ್ತು ಚಿನ್ನಮ್ಮನ ಲಗ್ನವನ್ನು ಓದುವವರಲ್ಲೂ ಲೇಖಕ ಇದನ್ನೇ ಬಯಸುತ್ತಿದ್ದಾನೆ.
ಚಿನ್ನಮ್ಮನ ಲಗ್ನವನ್ನು ಓದಿದ ಮೇಲೆ ಮದುಮಗಳನ್ನು ಎಷ್ಟು ಸಲ ಓದಿದ್ದರೂ (ಸಂಖ್ಯೆ ಮುಖ್ಯವಲ್ಲ) ಇನ್ನೊಮ್ಮೆ ಓದಬೇಕೆಂಬ ತುಡಿತ-ಮಿಡಿತಗಳು ಮೂಡುವುದು ಈ ಪುಸ್ತಕದ ಸಫಲತೆ. ಇದುವೇ ‘ಲಗ್ನ’ದ ನಿಜವಾದ ಆಮಂತ್ರಣ! ‘ರಸವನ್ನೀಂಟುವ ಸೌಭಾಗ್ಯ.’ ವಿಮರ್ಶೆಯು ನಿಜವಾಗಿ ಇಂಥ ಕೆಲಸವನ್ನು ಮಾಡಬೇಕು ಎಂಬ ಕಳಕಳಿಯ ಧ್ವನಿ ಇಂಥಲ್ಲಿದೆ. ಲೇಖಕರು ಪರಿಚಯಿಸಿರುವ ಈ ಹೊಸ ರೀತಿಯ ಸಾಹಿತ್ಯಕ ಮತ್ತು ವಿಮರ್ಶಾತ್ಮಕ ಪ್ರಕಾರವು (ಇಂಗ್ಲಿಷ್ ಭಾಷಾಸಾಹಿತ್ಯದಲ್ಲಿ ಇಂಥವು ಇರುವುದನ್ನು ಸ್ವತಃ ಲೇಖಕರೇ ನೆನಪಿಸಿಕೊಟ್ಟಿದ್ದಾರೆ) ಇನ್ನು ಮುಂದೆ ಸಮರ್ಥ ಸಹೃದಯೀ ಓದುಗರಿಂದ ಶ್ರೀಮಂತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂಬುದು ನನ್ನ ಅನಿಸಿಕೆ. ಕುವೆಂಪು ಅವರ ಇನ್ನೊಂದು ಮಹಾ ಕಾದಂಬರಿ ‘ಕಾನೂರು ಹೆಗ್ಗಡಿತಿ’ಯನ್ನು ಕುರಿತು ಇಂಥದೇ ಒಂದು ‘ಧನ್ಯತಾ ಓದ’ನ್ನು ನಾವು ಸತ್ಯನಾರಾಯಣರಿಂದ ಖಂಡಿತಾ ನಿರೀಕ್ಷಿಸಬಹುದಾಗಿದೆ. ಆ ಮೂಲಕ ನಾನು ಈಗ ಆಗಿರುವಂತೆ ನನ್ನ ಅರಿವನ್ನೂ ಆನಂದವನ್ನೂ ಹೆಚ್ಚಿಸಿಕೊಳ್ಳಲು ಕಾತರನಾಗಿದ್ದೇನೆ.
ಸಾಹಿತ್ಯದ ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ ನಾನು ಇಲ್ಲಿ ನನಗನಿಸಿದ ಸಂತಸದ ಸೆಳಕುಗಳನ್ನು ಹಂಚಿಕೊಂಡಿರುವೆ; ಮದುಮಗಳ ಪ್ರೀತಿಯ ಓದುಗನಾಗಿದ್ದುದರಿಂದಾಗಿ ತಕ್ಷಣದ ಅಭಿವ್ಯಕ್ತಿಯನ್ನು ದಾಖಲಿಸಿರುವೆ. ಇಂಥ ವಿಭಿನ್ನ ಮಾದರಿಯ ಪ್ರಯೋಗದಿಂದ ಪುಳಕಿತನಾಗಿರುವೆ. ಕೈಗಿತ್ತ ಲೇಖಕರಿಗೂ ಕೈಗೆ ತಂದಿಟ್ಟ ಅಣ್ಣ ರಾಮಚಂದ್ರ ಅವರಿಗೂ ಪ್ರಕಟಿಸಿದ ಅಂಕಿತ ಪುಸ್ತಕದ ಪ್ರಕಾಶಕರಿಗೂ ಹೃದಯಪೂರ್ವಕ ಧನ್ಯವಾದಗಳು.
-ಡಾ. ಹೆಚ್ಚೆನ್ ಮಂಜುರಾಜ್