Facebook

ಪಂಜು ಕಾವ್ಯಧಾರೆ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೈಕುಗಳು.

ಅಮ್ಮನ ಪ್ರೇಮ
ಎಲ್ಲೆಲ್ಲಿಯೂ ಸಿಗದ
ಅಮೃತದಂತೆ.

*

ಏನು ಚೆಂದವೋ
ಸೂರ್ಯನ ಕಿರಣವು
ಪ್ರತಿ ಮುಂಜಾವು.

*

ಗುರು ಬಾಳಿಗೆ
ದೇವತಾ ಮನುಷ್ಯನು
ಜೀವನ ಶಿಲ್ಪಿ.

*

ಬಾಳ ಬೆಳಗೋ
ಆ ಸೂರ್ಯ, ಚಂದ್ರರಿಗೆ
ಕೋಟಿ ಪ್ರಣಾಮ.

*

ನಿರ್ಗತಿಕರ
ಸೇವೆ ನೀ ಮಾಡುತಲಿ
ದೇವರ ಕಾಣು.

*

ಸಿರಿಗನ್ನಡ
ನಮ್ಮ ಕಣಕಣದಿ
ಪುಟಿಯುತ್ತಿದೆ.

*

ದಾನ ಹಸ್ತಕ್ಕೆ
ಜಾತಿ ಕಾರಣವೇಕೆ
ಮಾನವ ಧರ್ಮ.

*

ತಾಯಿಯ ಪ್ರೇಮ
ದೇವನಿಗೆ ಸಮಾನ
ಮಿಕ್ಕದ್ದು ಮಿಥ್ಯ.

*

ನಾನು ನಕ್ಕರೆ
ಅವಳು ನಗುವಳು
ತಾಯಿ ದೇವರು.

*

ಈ ಬದುಕಿನ
ಕೊನೆತನಕ ನಂಬಿ
ನಡೆಯಬೇಕು.

*

ಬಾಳಿನ ಕಣ್ಣು
ಪ್ರೀತಿ ವಾತ್ಸಲ್ಯವನೂ
ತೋರುವ ಹೆಣ್ಣು.

*
ಮಂಜುನಾಥ ಗುತ್ತೇದಾರ


ಋಣ

ಅಳೆಯಲು ಆಗದು ತನ್ನ ಒಡಲ 
ಧಾರೆಯೆರೆದು ಉಸಿರಿಗೊಂದು 
ಹೆಸರಕೊಟ್ಟ ಹೆತ್ತೊಡಲ ಋಣವ

ಮುಗ್ದಮನಕೆ ಅಕ್ಷರದ 
ಅಮೃತ ಉಣಿಸಿ ಜ್ಞಾನದ ಕೀಲಿಕೈ 
ನೀಡುವ ವಿದ್ಯಕಲಿಸಿದ 
ಗುರುವಿನ ಋಣವ ಮರೆಯಲಾಗದು

ಪ್ರಜೆ ಯ ಪಟ್ಟ ನೀಡಿ ಬದುಕಲು 
ಸ್ವತಂತ್ರ್ಯ ನೀಡಿ  ಗೌರವಿಸುವ 
ದೇಶದ ಋಣವ ಬಣ್ಣಿಸಲಾಗದು

ಎದೆಗೆ ಬಿದ್ದು ಅಕ್ಷರವಾಗಿ ಸಂವಹನದ 
ರೂಪವಾಗಿ ಅರಿವ ಉಣಿಸುವ 
ಮಾತೃಭಾಷೆಯ ಋಣ ಪದಗಳಿಗೆ 
ನಿಲುಕದು

ಸ್ನೇಹಕ್ಕೆ ಮಣಿದು ನೋವು ನಲಿವುಗಳ 
ಹಂಚಿಕೊಳ್ಳುವ ಗೆಳೆತನದ ಋಣವ 
ವರ್ಣಿಸಲಾಗದು

ಇರುವವರೆಗೊ ಪೊರೆದು 
ಅಳಿದ ಮೇಲೂ ಜರಿಯದೆ 
ಭೇದತೋರದೆ ತನ್ನ ಒಡಲಲ್ಲಿ 
ಮುಚ್ಚುಟ್ಟುಕೊಳ್ಳವ ಭೂತಾಯಿಯ ಋಣವ
ಜನ್ಮ ಜನ್ಮಕ್ಕೂ ತೀರಿಸಲು ಅಸಾಧ್ಯವದು …..

ರೇಶ್ಮಾ ಗುಳೇದಗುಡ್ಡಾಕರ್


ಸಿಕ್ಸಥ್ ಸೆನ್ಸ್

ನನ್ನ ನಯವಾದ ಬೆರಳಗಳು
ಅವನೆದೆಯ ಕೇದಗೆವನದಲಿ
ಸರಾಗವಾಗಿ ಹರಿದಾಡಿ
ಕೋಮಲವಾಗಿ ಕಚಗುಳಿ 
ಇಟ್ಟಾಗಲೂ
ಆತ ಭಯಭೀತನಾಗಿ
ಬೆವರುವುದೆಂದರೆ… ?

ಸಂದೇಹಕ್ಕೆ ಎಡೆಯಾಗಿ
ಅವನಂತರಂಗದಲಿ ಅಡಗಿರುವ
ನಿಗೂಢ ರಹಸ್ಯ ಅಗೆದು
ಸತ್ಯಶೋಧಿಸುವ ಕಾರ್ಯಾಚರಣೆ

ಕೆಲವರು ಅಲ್ಲಿ ಜೀವಿಸಿದ್ದರೂ
ಗುರ್ತುಸಿಗದ ಬೇತಾಳಗಳು
ಇನ್ನು ಕೆಲವರ ಕಳೇಬರ ಕೊಳೆತು 
ನಾರುವ ಸುಡಗಾಡವದು,
ಹೀಗಾಗಿ ಅಲ್ಲಿ ಸತ್ತು
ಬದುಕಿದವರನ್ನ ಪತ್ತೆ
ಹಚ್ಚಲಾಗದ  ಅಸಹಾಯಕತೆ

ಕೆಲವೊಮ್ಮೆ ಅವನ ತುಟಿಗೆ
ಮುತ್ತಿಕ್ಕಲು ಹೋಗಿ ಗಲ್ಲಕ್ಕೆ
ಮೆತ್ತಿದ ಕೊಳಕು  ಲಿಪ್ ಸ್ಟಿಕ್ 
ವಾಸನೆ ಮೂಗಿಗೆ ಬಡಿದು
ವಾಕರಿಸುತ್ತೇನೆ ಮತ್ತು
ಮೃತ್ಯುಚುಂಬನದ ಭಯವಾಗಿ
ತತ್‍ಕ್ಷಣಕ್ಕೆ ಹಿಂದೆ ಸರಿಯುತ್ತೇನೆ

ಆದರೂ ಒಮ್ಮೊಮ್ಮೆ
ಜೀವದ ಹಂಗು ತೊರೆದು
ಉಸಿರಲ್ಲಿ ಉಸಿರಾಗುವಂತೆ ನಟಿಸಿ
ಅವನ ಉಸಿರಲ್ಲಿ ವಿಷವಾಗಿ
ಸೇರಿ ಹೋದವರ ಹೆಸರು 
ಪತ್ತೆ ಮಾಡಲು ಹೋಗಿ 
ಕೈಲಾಗದೆ ವಿಷಾಧಿಸುತ್ತೇನೆ

ಕಣ್ಣಲ್ಲಿ ಕಣ್ಣಾಗಿಯೂ
ಮಾನಸ ಸರೋವರದಲಿ 
ಇಣುಕುತ್ತೇನೆ;
ನೀಲಿ ಸಮುದ್ರದ 
ಕಪ್ಪು ದ್ವೀಪದಲಿ ಎಲ್ಲವೂ
ಅಗಮ್ಯ – ಅಗೋಚರ !

ಪೋಲಿಸ ನಾಯಿಯಂಥ
‘ಸಿಕ್ಸಥ್ ಸೆನ್ಸ್’ 
ಅವನಪರಾಧದ ವಾಸನೆ 
ಗಹಗಹಿಸುತ್ತದೆಯಾದರೂ
ಸಾಬೀತು ಪಡಿಸುವ 
ಪುರಾವೆಗಳಿಲ್ಲದೆ ಕೈಕಟ್ಟಿ
ನಿಂತ ನನ್ನ ಕಣ್ಮುಂದೆಯೇ 
ಸಿಡಿಲಪ್ಪಳಿಸಿ 
ಬುದಿಯಾಗುತ್ತಿರುವ
ಬದುಕಿನಲ್ಲಿ ಆಶಾಕಿರಣವೊಂದು
ಹುಡುಕಲು ಪ್ರಯತ್ನಿಸುತ್ತೇನೆ

ಒಂದಿಲ್ಲ ಒಂದು ದಿನ ಸತ್ಯ
ಬಯಲಿಗೆ ಬಂದು ಆತ 
ನನ್ನ ಮುಂದೆ ಬೆತ್ತಲಾಗುವದರ 
ಜತೆಗೆ ಮಾನವಂತನಾಗುವನೆಂದು
ಕಾಯುತ್ತಿದ್ದೇನೆ.. ಕಾಯುತ್ತಿದ್ದೇನೆ.

 — ಅಶ್ಫಾಕ್ ಪೀರಜಾದೆ


.


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply