ಅದೊಂದು ಮಲೆನಾಡಿನ ಪುಟ್ಟ ಹಳ್ಳಿ. ಅಲ್ಲಿ ಸುರೇಶನದು ಒಪ್ಪವಾದ ಸಂಸಾರ. ಅವನಿಶ್ಚೆಯನರಿತ ಸತಿ, ಮುದ್ದಾದ ಒಬ್ಬಳೇ ಮಗಳು, ವಯಸ್ಸಾದ ಪ್ರೀತಿಯ ಅಮ್ಮ. ಇವರೊಂದಿಗೆ ಬದುಕಿನ ಗತಿ ಸುಗಮವಾಗಿ ಸಾಗುತ್ತಿರುವಾಗ ಕೂಡಿಟ್ಟ ಅಲ್ಪ ಸ್ವಲ್ಪ ಹಣ ಸೇರಿಸಿ ಸರ್ಕಾರದ ಯೋಜನೆಯಡಿಯಲ್ಲಿ ಸಿಕ್ಕ ಒಂದೂವರೆ ಲಕ್ಷ ರೂಪಾಯಿ ಹಾಗೂ ಹೆಂಡತಿಯ ಒತ್ತಾಯದ ಮೇರೆಗೆ ಅವಳ ತವರಿನ ಒಡವೆ ಕೂಡಾ ಮಾರಿ ಎರಡು ರೂಮಿರುವ ಪುಟ್ಟದಾದ ಹೆಂಚಿನ ಮನೆ ಕಟ್ಟಿದ. ಅದೇನೊ ಸಂಭ್ರಮ, ಸಂತೋಷ ಮನೆಯವರೆಲ್ಲರ ಮುಖದಲ್ಲಿ. ತಮ್ಮದೇ ಆದ ಸ್ವಂತ ಗೂಡು ಎಂಬ ಅಭಿಮಾನ ಉಕ್ಕಿ ಹರಿಯುತ್ತಿದೆ.
ಇದಲ್ಲದೆ ಸುರೇಶ ತನ್ನ ಮನೆಯ ಸುತ್ತ ಮುತ್ತ ಇರುವ ಚಿಕ್ಕ ಜಾಗದಲ್ಲಿ ಬಾಳೆ,ತೆಂಗು ಅಗತ್ಯ ತರಕಾರಿ ಮನೆಯ ಖರ್ಚಿಗೆ ಸಾಕಾಗುವಷ್ಟು ಕಷ್ಟ ಪಟ್ಟು ದುಡಿದು ಸಂಪಾದನೆ ಮಾಡುತ್ತಿದ್ದ. ಹಿರಿಯರು ಮಾಡಿಟ್ಟ ಆಸ್ತಿ ಒಡ ಹುಟ್ಟಿದವರೆಲ್ಲ ಹಂಚಿಕೊಂಡು ಒಂದು ಎಕರೆ ಜಾಗ ಇವನ ಪಾಲಿಗೆ ದಕ್ಕಿತ್ತು. ಸುರೇಶ ಶ್ರಮ ಜೀವಿ. ಸ್ವತಃ ದುಡಿದು ಅಭಿವೃದ್ಧಿಗೊಳಿಸಿದ್ದ.
ಮಗಳು ಸಾಧನಾ ಹೆಸರಿಗೆ ತಕ್ಕಂತೆ ಓದಿನಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತ ತನ್ನ ವೈದ್ಯಕೀಯ ಓದನ್ನು ಮುಂದುವರೆಸುತ್ತಿದ್ದಳು. ಅವಳಿಗೆ ತಾನು ಚೆನ್ನಾಗಿ ಓದಿ ಮುಂದೆ ದೊಡ್ಡ ಡಾಕ್ಟರ್ ಆಗಬೇಕು. ಈ ಹಳ್ಳಿಯಲ್ಲಿ ತನ್ನದೇ ಆದ ಸ್ವಂತ ಆಸ್ಪತ್ರೆ ಕಟ್ಟಿ ಸುತ್ತಮುತ್ತಲ ಹಳ್ಳಿಯ ರೋಗಿಗಳಿಗೆ ಶುಶ್ರೂಷೆ ನೀಡಬೇಕೆಂಬ ಅದೆನೇನೊ ನೂರೆಂಟು ಆಸೆ.
“ಮಗಳೆ ಇಷ್ಟೆಲ್ಲಾ ಆಸೆ ಇಟ್ಕೊಬೇಡಾ ಪುಟ್ಟಾ. ನಾವು ಸ್ಥಿತಿವಂತರಲ್ಲ. ಏನೊ ನೀನು ಓದಿನಲ್ಲಿ ಮುಂದೆ ಇದ್ದೀಯಾ. ಸರ್ಕಾರದಿಂದ ಸ್ಕಾಲರ್ಶಿಪ್, ಸಂಘ ಸಂಸ್ಥೆಗಳ ನೆರವಿನೊಂದಿಗೆ ಇಲ್ಲಿವರೆಗೂ ಓದಿಸಲು ಸಾಧ್ಯವಾಗುತ್ತಿದೆ. ಓದು ಮುಗಿದ ಮೇಲೆ ಸರಕಾರಿ ಕೆಲಸಕ್ಕೆ ಅರ್ಜಿ ಹಾಕಿ ಕೆಲಸಕ್ಕೆ ಸೇರು ಸಾಕು” ಎಂದು ಆಗಾಗ ಬುದ್ಧಿ ಹೇಳುತ್ತಿದ್ದರೂ ಅವಳು ತನ್ನ ಆಸೆ ಬಿಡೊ ಲಕ್ಷಣ ಕಾಣುತ್ತಿಲ್ಲ.
ಸುರೇಶನಿಗೆ ಇರುವ ಒಂದೇ ಒಂದು ಚಿಂತೆ ತನ್ನ ಬಡತನ. ಮಗಳ ಆಸೆ ಪೂರೈಸಲಾಗದ ನಾನು ಎಂತಹ ತಂದೆ! ಈ ಬಡತನ ಮನುಷ್ಯನ ಆಸೆಗಳನ್ನು ಚಿವುಟಿಹಾಕಿಬಿಡುತ್ತದೆ. ಇರುವ ಗುಮಾಸ್ತನ ಹುದ್ದೆ ಬೆಳಗಿಂದ ಸಾಯಂಕಾಲದವರೆಗೆ ದುಡಿದರೂ ಉಳಿತಾಯ ಶೂನ್ಯವಾಯಿತು.
ಇದರ ಜೊತೆಗೆ ಇತ್ತೀಚೆಗೆ ಕಾಡುತ್ತಿರುವ ಹೆಂಡತಿಯ ಖಾಯಿಲೆ ಅವನನ್ನು ಹೈರಾಣನನ್ನಾಗಿ ಮಾಡಿತ್ತು. ದೊಡ್ಡ ಷಹರದವರೆಗೂ ಹಲವು ವೈದ್ಯರ ಭೇಟಿ. ಬರಬರುತ್ತಾ ಅವಳ ಔಷಧಿ ಖರ್ಚು ಹೆಚ್ಚಾಯಿತೆ ಹೊರತು ಖಾಯಿಲೆ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ.
ವಯಸ್ಸಾದ ಅಮ್ಮ ಗತಿಯಿಲ್ಲದೆ ಅಡಿಗೆ ಮನೆಯಲ್ಲಿ ಹೆಂಡತಿಗೆ ಅಡಿಗೆಯಲ್ಲಿ ನೆರವಾಗುವ ಪರಿಸ್ಥಿತಿ. ಮಗಳ ಓದು ಇನ್ನೂ ಎರಡು ವರ್ಷ ಇದೆ. ಅವಳ ಮದುವೆಯ ಮಂಗಲ ಕಾರ್ಯ ನಡೆಯಬೇಕು ಮುಂದೆ ಈ ಮನೆಯಲ್ಲಿ. ಹೆಂಡತಿಯ ಆರೋಗ್ಯ ಹೀಗಾದರೆ ಮುಂದೆ ಹೇಗೆ ಎಂಬ ಭಯ ಕಾಡತೊಡಗಿತು.
ಎಲ್ಲಿಯವರೆಗೆ ಮನುಷ್ಯನಿಗೆ ಮನಸ್ಥಿತಿ ಸಂತೋಷದಿಂದಿರುತ್ತದೊ ಅಲ್ಲಿಯವರೆಗೆ ಅವನ ಆರೋಗ್ಯ ಕೂಡಾ ಹದ್ದುಬಸ್ತಿನಲ್ಲಿರುತ್ತದೆ. ಇಲ್ಲವಾದರೆ ಚಿಕ್ಕ ಪುಟ್ಟ ನೋವು ನರಳಾಟ. ಇದು ಸುರೇಶನನ್ನೂ ಬಿಡಲಿಲ್ಲ. ಅಮ್ಮ ಮಾಡುವ ಹಳ್ಳಿ ಮದ್ದು ಒಂದಷ್ಟು ಸಾಂತ್ವನ. ಮನೆಯಲ್ಲಿ ಒಬ್ಬರು ಖಾಯಿಲೆ ಮಲಗಿದರೆ ಆ ಮನೆ ಶಾಂತಿ ನೆಮ್ಮದಿಯನ್ನೇ ಕದಡಿಬಿಡುತ್ತದೆ. ಈ ವಾತಾವರಣ ಸೃಷ್ಟಿಯಾದ ದಿನದಿಂದ ಅವನ ಮನೆಯಲ್ಲಿ ಮೌನವೇ ತುಂಬಿತ್ತು.
ಆಗಾಗ ಬರುವ ಮಗಳ ಫೋನು, ಅವಳೊಂದಿಗೆ ಮನೆಯವರೆಲ್ಲರ ಮಾತು ತುಸು ಖುಷಿ ತರಿಸಿದರೂ ಮತ್ತದೇ ಮೌನ ಬಿಡದು. ಇನ್ನೇನು ಗಣೇಶನ ಹಬ್ಬ ಬಂತಲ್ಲ. ಬರುತ್ತೇನೆಂಬ ಅವಳ ಮಾತು ಸಂಭ್ರಮ ತಂದರೂ ಅವಳಮ್ಮ ಮಾತ್ರ ನಿತ್ರಾಣದಲಿ ” ನಾನೇನು ಹಬ್ಬಕ್ಕೆ ಮಾಡ್ತೀನೊ ಏನೊ. ದೇವರೆ ಯಾವಾಗಪ್ಪಾ ನನ್ನ ಖಾಯಿಲೆ ವಾಸಿ ಮಾಡ್ತೀಯಾ”ಎಂದು ಕಣ್ಣೀರಿಡುತ್ತಿದ್ದಳು.
ಹಬ್ಬಕ್ಕೆ ನಾಲ್ಕು ದಿನ ಮೊದಲೇ ಮಗಳ ಆಗಮನ. ಅವಳು ಬಂದ ಸಂತಸದಲ್ಲಿ ಮಾತೇ ಮುಗಿಯದು. ಹದಿನೈದು ದಿನ ಇರ್ತೀನಮ್ಮಾ ಎಂದು ಅವಳಮ್ಮನ ಕೊರಳಿಗೆ ಹಾರವಾಗಿ ಲಲ್ಲೆಗರೆಯುತ್ತ ತಾನೇ ಅವಳಮ್ಮನಾಗಿ ಅಮ್ಮನ ಕಣ್ಣಲ್ಲಿ ಮಿಂಚು ಕಾಣಲು ಪ್ರಯತ್ನಿಸಿದಳು. ಗೊತ್ತು ಅವಳಿಗೆ ಅಮ್ಮನ ಖಾಯಿಲೆಯ ಪರಿಣಾಮ. ಎಲ್ಲವನ್ನೂ ತನ್ನಲ್ಲಿ ನುಂಗಿಕೊಂಡು ಮರೆಯಲ್ಲಿ ಕಣ್ಣು ಒದ್ದೆ ಮಾಡಿಕೊಳ್ಳುತ್ತಿದ್ದಳು. ಯಾರಲ್ಲೂ ಸತ್ಯ ಹೇಳಲಾಗದ ಸ್ಥಿತಿ ಪಾಪ ಈ ಚಿಕ್ಕ ವಯಸ್ಸಿಗೆ!
ಹಬ್ಬಕ್ಕೆ ಎರಡು ದಿನ ಇರುವಾಗ ಇದ್ದಕ್ಕಿದ್ದಂತೆ ಬೋರ್ಗರೆಯುವ ಮಳೆ, ಸಿಡಿಲಿನ ಅಬ್ಬರ ಜೋರು. ನಾಲ್ಕು ದಿನಗಳಾದರೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎತ್ತ ನೋಡಿದರತ್ತ ತುಂಬಿದ ನೀರು. ರಾತ್ರಿಯ ರವರವ ಕತ್ತಲು. ಕರೆಂಟಿಲ್ಲದೇ ಒಂದು ವಾರವಾಗಿತ್ತು ಮಳೆಯ ಅವತಾರಕ್ಕೆ.
ಏನಾಗುತ್ತಿದೆ ಈ ಮಳೆಗೆ ಎಂದು ಪಕ್ಕದ ಮನೆಯ ಎಂಕಣ್ಣನ ಹತ್ತಿರ ಹೇಡಿಗೆಯ ತುದಿಗೆ ನಿಂತು ಮಾತನಾಡುತ್ತಿರುವಾಗ ತನ್ನ ಮನೆಯ ಚಾವಣಿ ಕುಸಿದು ಬಿದ್ದ ಸದ್ದು. ಒಳಗೆ ಹೆಂಡತಿ, ಮಗಳು, ಅಮ್ಮ ಎಲ್ಲರೂ ಮಧ್ಯಾಹ್ನ ಊಟ ಮಾಡಿ ಹಾಗೆ ಚಾಪೆಯ ಮೇಲೆ ಮಲಗಿದ್ದು ಗೊತ್ತು. ಅಯ್ಯೋ ದೇವರೆ! ಏನಾಯಿತು ಇವರೆಲ್ಲರ ಗತಿ?
ಓಡಿ ಬಂದು ನೋಡಿದರೆ ಯಾರೂ ಕಾಣುತ್ತಿಲ್ಲ, ಒಳಗೆ ಅಡಿಯಿಡಲೂ ಆಗುತ್ತಿಲ್ಲ. ಕೂಗಿ ಕರೆದರೂ ಯಾರ ಧ್ವನಿಯಿಲ್ಲ. ಸುರೇಶನ ಜಂಗಾಲವೇ ಉಡುಗಿಹೋಯಿತು. ಇವನ ಕೂಗಾಟಕ್ಕೆ ಅಕ್ಕ ಪಕ್ಕದವರೆಲ್ಲ ಓಡಿ ಬಂದರು. ಬಿದ್ದ ಮನೆಯ ಚಾವಣಿಯನ್ನು ಪ್ರಯತ್ನ ಪಟ್ಟು ಸರಿಸಿ ನೋಡಿದರೆ ಮೂವರ ಮೇಲೆ ಬಿದ್ದ ರಭಸಕ್ಕೆ ಅಲ್ಲೇ ಉಸಿರು ನಿಂತು ಹೋಗಿದೆ.
ನಡೆದ ಅವಘಡ ತಿಳಿದು ಬಂದ ಅಧಿಕಾರಿಗಳಿಂದ ಒಂದಷ್ಟು ಸಾಂತ್ವನ ಪರಿಹಾರ ದೊರೆತರೂ ತನ್ನವರನ್ನು ಕಳೆದುಕೊಂಡು ಅನಾಥನಾದ ಸುರೇಶ. ಮೂಲೆಯಲ್ಲಿ ಬಿದ್ದ ಅವನಮ್ಮ ಮತ್ತು ಮಗಳ ಫೋಟೊ ಕೈಯಲ್ಲಿ ಹಿಡಿದುಕೊಂಡು ನೆನಪಿಸಿ ನೆನಪಿಸಿಕೊಂಡು ಇನ್ನಷ್ಟು ರೋಧಿಸತೊಡಗಿದ. ಮಳೆ ಸರ್ವಸ್ವವನ್ನೂ ನಿರ್ನಾಮ ಮಾಡಿತ್ತು.
-ಗೀತಾ ಜಿ. ಹೆಗಡೆ, ಕಲ್ಮನೆ.
[…] ದುರಂತ: ಗೀತಾ ಜಿ. ಹೆಗಡೆ, ಕಲ್ಮನೆ. https://panjumagazine.com/?p=16441 […]