ಮೂರು ಕವನಗಳು: ದಯಾನಂದ ರೈ ಕಳ್ವಾಜೆ

“ಮೌನ ತಪ್ಪಿದ ಹಾದಿ”..

ಮೆಲ್ಲುಲಿದು ಪಾದಸರ
ಮೌನವಾಯಿತು ಮತ್ತೆ
ಅವಳ ಪಾದದಿ ಮಲಗಿ ಸದ್ದಿಲ್ಲದೇ…
ಅವಳಿರುವ ಸೂಚನೆಗೆ
ನಲಿವ ಗೆಜ್ಜೆಯೆ ದನಿಯು
ನಿಂತಲ್ಲೆ ಮೈ ಮರೆತು ಕಲ್ಲಾದಳೇಕೆ?!
ಯಾರದೋ ಕಾಯುವಿಕೆ
ಬಿಟ್ಟ ಕಿವಿ ಬಿರು ನೋಟ
ಆಗಾಗ ಅವಳಿದಿರು
ಯಾರ ಕಡೆಗೇ…?
ಸಹಜ ಸುಂದರಿಯವಳು
ನೀಳಕೇಶದ ರಾಶಿ…
ಇನಿತಿಲ್ಲ ನವಯುವಗದ
ಥಳಕು ಬಳುಕೂ…
ಕಲ್ಲ ಚಪ್ಪಡಿಯಲ್ಲಿ ಬಿಮ್ಮನೇ ಪವಡಿಸುತ
ಕಣ್ಣೆಡೆಯ ಕೇಶವನು ಕಿವಿಗಿಟ್ಟಳು..
ಕಣ್ಣಂಚು ನೀರಹನಿ
ಕೈ ಬಿಗಿದ ಫೋನೊಂದು
ಆಗಾಗ ಅದರೆಡೆಗು ಹರಿದ ದೃಷ್ಟಿ….
ಬಂತೊಂದು ಸಂದೇಶ
ಮರೆತು ಬಿಡು ನನ್ನಿದಿರ
ಕಾಯದಿರು ನನ್ನೊಲವ
ಮೂಗಿಯನು ಕೈಹಿಡಿದು ನಾ ಬಾಳಲಾರೆ…
ಬಿಗಿದ ಗಂಟಲು ಬೇನೆ
ಅಳುವಿಗೂ ದನಿಯಿಲ್ಲ
ಬಿಕ್ಕಿದಳು ಮೌನದಲಿ ಹಾಯೆನಿಸುವಷ್ಟು..
ಪಾದಸರ ಕಂಪಿಸಿತು
ಮತ್ತೆ ಚೇತನವಾಯ್ತು
ಹದಗೆಟ್ಟ ಭಾವದಲಿ ಪುಟಿದೆದ್ದಳೂ…
ಕಡಲಾಚೆ ಮರೆಯಾದ
ಸಂಜೆಗೆಂಪಿನ ಸೂರ್ಯ
ಬಸಿದ ರಕ್ತದ ಕೋಡಿ ಸುತ್ತಲೂ ಚೆಲ್ಲಿ…!!
ಹಸಿದ ಖಗ ಮೃಗವೆಲ್ಲ
ತಮ್ಮ ಬೇಟೆಗೆ ಸಿದ್ಧ
ಇರುಳತೆರೆ ಕಪ್ಪಿನಲಿ ಮರೆಯಾದವು..
*


“ಮೆಲುಕು”


ಅದೇ ಬಾಲ್ಯದ ನೆನಪು
ಆದರೆ ಹೀಗಲ್ಲ….
ಲಗೋರಿಯ ಸುತ್ತ ಸುತ್ತಿದ
ಹಳೆಯ ಛಾಪು…
ಕುಟ್ಟಿ ದೊಣ್ಣೆಯ
ಹೊಡೆದಾಟದ ಮಂಪು..
ಚಡ್ಡಿ…ಧೋಗಲೆಯ ಅಂಗಿ;
ಮಣ್ಣಾದ ಕೈ ಕಾಲುಗಳು..
ಆಗ ಯೆಲ್ಲಿತ್ತು ಆಟವಾಡಿಸುವ
ಯಂತ್ರಗಳು….?!
ಈಗೀಗ ಮಕ್ಕಳೇ ಯಂತ್ರಗಳಾದರು!!
ಆಟವೆಲ್ಲವೂ ಬೂಟಾಟಿಕೆ!!
ಮಣ್ಣಾಟವಿಲ್ಲ
ಮನಬಿಚ್ಚಿ ಮಾತಿಲ್ಲ ಕತೆಯಿಲ್ಲ…
ಮನಸೆಲ್ಲ ಬಿಗಿ ಹಿಡಿದು
ಶಿಸ್ತಿನ ಸಿಪಾಯಿಗಳಂತೆ!!
ಯಂತ್ರ ಮಾನವರಂತೆ
ಮಮ್ಮೀ ಡ್ಯಾಡೀ ಇದಿಷ್ಟೇ
ಮಾತು ಕತೆ…
ಕಂಪ್ಯೂಟರ್ ತಂತ್ರಾಂಶಗಳ
ಕಲಬೆರಕೆ…!!
ಅದಷ್ಟೇ ಸಾಕೇ ಈ ಬದುಕಿಗೇ..?
ನನಗದೇ ಚಿಂತೆ..
ಅದೇ ಬಾಲ್ಯದ ನೆನಪು
ಮತ್ತೆ ಕಾಡಿದೆ ನನ್ನ..
ಕಡು ಬಿಸಿಲಿಗೂ ಜಗ್ಗದ ದೇಹ
ಮಡುಗಟ್ಟಿದ ಕೆಸರಾಟದ ನೋಟ…;
ಹಾಯೆನಿಸುವ ಆ ಹುಡುಗಾಟ
ಅದೇ ಬಾಲ್ಯದ ನೆನಪು
ಮಣ್ಣ ಕಣ ಕಣದಲ್ಲೂ
ಮಸುಕಾಗಿ ಕಾಡುತ್ತಲೇ
ಬದುಕು ಜಾರಿದೆ ಮುಸ್ಸಂಜೆಯ
ಹಾದಿಯ ಬೆರೆತು
ಹದಬೀಸಿದ ಗಾಳಿಗೆ ಮರೆತು
ಮಣಭಾರದ ನೋವನು
ಮನದಲಿ ಹೊತ್ತು…
ಅದೇ ಬಾಲ್ಯದ ನೆನಪು
ಅದೇ ಹರೆಯದ ಹುರುಪು…….
*



“ಬಣ್ಣ ಮತ್ತು ಬದುಕು ”

ಬಾಲ್ಯದಲಿ ಅಮ್ಮ ಹೇಳಿದ್ದುಂಟು,
ಒಳ್ಳೆಯವನಾಗೆಂದು….,
ಕಥೆಗಳನು ಬಿಡಿಸಿ, ಭಜನೆಗಳ ಕಲಿಸಿ ,
ಸದ್ಭಾವದ ನೆಲೆಗೆ
ಸನ್ನಡೆಯ ಬಗೆಗೆ…..!
ಆಟವಾಡಿದೆ ನಾಟಕವಾಡಿದೆ
ಬಣ್ಣವಿಟ್ಟು ಕುಣಿದದ್ದೂಇದೆ,
ಪ್ರಶ್ನೆಗಳು ಕಾಡದೆ ಬಿಡಲಿಲ್ಲ
ಮೌನವಾಗಿ…
ನಾನು ಒಳ್ಳೆಯವನಾಗುವುದೆಂತು?!
ರಂಗದಲಿ ಬಣ್ಣಹಚ್ಚಿದವನೊಬ್ಬ
ರಾಮನಾದ, ಸೀತಾವಲ್ಲಭನೆಂಬ ಬಿರುದೂ ಪಡೆದ…!!
ಪರದೆಯಂಚಿಗೆ ಸರಿದು
ಸೇದಿದ ಸಿಗರೇಟಿನ ಮೊನೆಯ…!
ಅವನು ಬಳಿದ ಬಣ್ಣವ ಕಳಚಲು ಸಹಕರಿಸಿದ್ದು
–ಪ್ರೇಯಸಿಯೆಂಬ ಅನುರಾಗದರಸಿ…..!
ಮನೆಯಲ್ಲಿ ಕಾದಿರುವ ತನ್ನವಳ ವಂಚಿಸಿ….,
ಅಮ್ಮಹೇಳಿದ್ದುಂಟು ಹರಿಕಥೆಯ ಕೇಳಲೂ
ಹರಿದಾಸರ ಪಾದಕೆರಗಲೂ..,
ಹರಿದಾಸರೇ ಪರನಾರಿಯರ
ಸೀರೆಯೋಳಗಾವರಿಸಿದ್ದು
ನಿಜಬದುಕಿನ ಕಗ್ಗಂಟು!!
ನಾನಾದರೋ ಶ್ರೀರಾಮನಂತೆ ಬಹಳ
ಒಳ್ಳೆಯವನಾಗಬೆಕಿತ್ತು…..?
ಯಾಕೋ ಬಿಡಲಿಲ್ಲ ವಿಷಯಾಸಕ್ತಿಗಳ ನಂಟು…?!
ಬದುಕಲೇ ಬೇಕಾದ ಮಿಥ್ಯೆಗಳ ಸಖ್ಯ
ಬದುಕೂ ಬೇಕೆಂಬ ನಿರ್ದಾಕ್ಷಿಣ್ಯದ ಸಿಂಹ ಮುಖ!
ಸಾತ್ವಿಕತೆ ಅನ್ನೋದು ಹಲ್ಲು ಕಿತ್ತ ಹಾವಿನಂತೆ…!
ಅದು ಭುಸುಗುಡಲು ಮಾತ್ರ…?!
ನನಗೇನೂ ತಿಳಿದಿಲ್ಲ ಆದರೆ ನಟಿಸುವೆ…..
ಅಧಿಕಾರಕ್ಕಾಗಿ ಅಂಗೀಕಾರದ ಒಲವಿಗಾಗಿ..,
ಬಣ್ಣಹಚ್ಚದೆಯೇ ಬಲು ಸುಭಗನಂತೆ…,
ಹರೆಯಕುಂದಿದೆಯೆಂದು
ನನ್ನೊಳಮನಸು ಹೇಳುವುದುಂಟು..,
ಬದುಕಿನಾಸೆಗೆ ಕಡಿವಾಣವೇ ಇಲ್ಲ….!!
ಸುಪ್ತಭಾವಗಳು ಆಗಾಗ ತಳಮಳಿಸುವುದುಂಟು,
ಒಳ್ಳೆಯವನಾಗೆಂದು ಹೇಳಿ ಎಚ್ಚರಿಕೆಯನಿತ್ತು,
ನನ್ನಮ್ಮನಾತ್ಮ ಮತ್ತೆ ಧ್ವನಿಯೆತ್ತಿದಂತೆ!
ಈಗ ಆ ಹಳೆಯ ಹರಿಕಥೆಗೂ ಅರ್ಥವಿಲ್ಲ,
ಅಮ್ಮನಮಗನೆಂಬನಾನು
ಒಳ್ಳೆಯವನೋ ಕೆಟ್ಟವನೋ ನನಗೇ ತಿಳಿದಿಲ್ಲ..?!!
ನಟನೆಯಲೇ ಸಾಗಿದೆ ಬದುಕು,
ಬಣ್ಣ ಮಾಸದಂತೆ ಮರುಕ ಹುಟ್ಟದಂತೆ,
ಅಮ್ಮಹೇಳಿದ್ದೂ ಬದುಕು ಕಲಿಸಿದ್ದೂ ಅಜೀರ್ಣವಾಗುಳಿದಿದೆ
ಜಲೋಧರ ಭಾಧೆಯಂತೆ..?!
ಅಂಕ ಕೊಡುವವನ ಕಣ್ಣುತಪ್ಪಿಸಲೆಂತು?!
ಪರದೆ ಸರಿದಾಗಲೇ ತಿಳಿಯಬಹುದು ನನ್ನಂಕದ ಬಾಬ್ತು…….
ನಾನೀಗ ಹೇಳುವುದೊಂದೆ ನನ್ನ ಮಗನಿಗೂ..,
ಒಳ್ಳೆಯವನಾಗೆಂದು
ಸಜ್ಜನರ ಸೇರೆಂದು..

-ದಯಾನಿಧಿ ರೈ ಕಳ್ವಾಜೆ


ದಯಾನಂದ ರೈ ಕಳ್ವಾಜೆ ಕಾಸಗೋಡಿನ ಗಡಿನಾಡ ಕನ್ನಡಿಗ, ಕೃಷಿ ಇವರ ವೃತ್ತಿ. ಮಂಗಳ ವಾರಪತ್ರಿಕೆ, ತರಂಗ, ತುಷಾರ, ನೂತನ, ಭಾವನಾ, ಸುಧಾ, ಮಯೂರ, ಪಂಜು ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x