ಹುಸೇನಿ ಕಥೆಯಾಗಿ ಹೋದ ಕಥೆ.. (ಭಾಗ 3): ನಾರಾಯಣ ಬಾಬಾನಗರ

ಇಲ್ಲಿಯವರೆಗೆ
ಅವನಿಗೆ ‘’ಹುಸೇನಿ’’ ಹಂಗಂತ ಕರೀತಿದ್ದದ್ದು ಮಾತ್ರ ನೆನಪು…ಅವನ ಪೂರ್ತಿ ಹೆಸರು ಈಗ ಗೊತ್ತಿಲ್ಲಂತಲ್ಲ ನಾವು ಸಣ್ಣವರಾಗಿದ್ದಾಗಲೂ ಖರೇ ಅಂದ್ರೂ ಗೊತ್ತಿರಲಿಲ್ಲ ಬಿಡ್ರಿ..ಅವನ ವಯಸ್ಸೆಷ್ಟಿದ್ದಿತ್ತು ಅಂತ ಲೆಕ್ಕಾ ಹಾಕಲಾಕ ಹೋಗಿ ನಾವು ಸೋತು ಸುಣ್ಣರಾಗಿದ್ದಕ್ಕಾಗಿ ಮುಂದ ಅವನ ವಯಸ್ಸಿನ ಬಗ್ಗೆ ತಿಳಕೊಳ್ಳಲಾಕ ಹೋಗು ಗೋಜಿಗೇ ಹೋಗಲಿಲ್ಲ.ಅಂವಾ ನಮಗ ವಿಚಿತ್ರವಾಗಿ ಕಾಣಲಾಕ ತರಹಾವರಿಯ ಕಾರಣಗಳಿದ್ದವು…ಅಂವಾ ಹುಡುಗರ ಕೂಡ ಇದ್ದಾಗ ಹುಡುಗರಂಗಿರತಿದ್ದ…ಹಿರಿಯರಗೂಡಾ ಥೇಟ್ ಹಿರಿಯರ ಹಂಗ ಇರತಿದ್ದ..ಹಿಂಗಾಗಿ ನಮಗ ಒಮ್ಮೊಮ್ಮೆ ಮಳ್ಳ ಹಿಡಿತಿತ್ತು…ಅವನ ಗೂಡಾ ಹೆಂಗಿರಬೇಕು ಅಂತ…ಅಂಥಾದರಾಗ ಅಂವಾ ತೊದಲಿಸಿ ಮಾತಾಡಾಂವ…ಅವನ ಮಾತು ಸಣ್ಣ ಚಿಟಮ್ಯಾ ಹುಡುಗರಂಗ ಇರತಿದ್ದು.

ಅಂವಾ ನಕ್ಕಂದರ ಅವನ ಬಾಯಿಯೊಳಗಿನ ಚಿತ್ರವಿಚಿತ್ರವಾಗಿದ್ದ ಹಲ್ಲುಗಳ ವಿಶ್ವರೂಪ ದರ್ಶನದಿಂದ ನಮಗ ಇನ್ನೂ ಒಂದ ನಮೂನಿ ಕಾಣಲಾಕ ಕಾರಣಕರ್ತನಾಗಿಬಿಟ್ಟಿದ್ದ.ಅವನು ನಮಗ ಭಾಳ ಹತ್ತಿರಾಗಲಿಕ್ಕೂ ಅನೇಕ ಕಾರಣಗಳಿದ್ದವು.ಅವನು ನಮ್ಮ ಗತೆ ಚಡ್ಡಿ ಹಾಕತಿದ್ದ.ಥೇಟು ನಾವು ಹಾಕೋತಿದ್ದ ಖಾಕಿ ಬಣ್ಣದ ಚಡ್ಡಿಯೇ..ಆದರ ಅವನ ಚಡ್ಡಿ ಮಾತ್ರ ಜರಾ ಉದ್ದ ಢಗಳಂಪಗಳ ಇರತಿತ್ತು…ಅವನು ನಮ್ಮಂತಹ ಚಡ್ಡಿ ಹಾಕೋತ್ತಿದ್ದ ಅನ್ನೂ ಒಂದ ಕಾರಣಕ್ಕ ಅವನನ್ನ ನಮ್ಮ ಗುಂಪಿನ ಒಳಗ ಬಿಟಗೊಂಡಿದ್ದೆವು.ಆದರ ನಮಗ ಅವನಿಗೆ ಮುಲಾಕತ್ ಅಂತ ಆಗತಿದ್ದದ್ದು ಕೋಳಿಗೂಡ್ ಅಂತ ಕರೀತಿದ್ದ ಒಂದು ಮೈದಾನದಾಗ ಸಂಜೀಮುಂದ …ಯಾಕಂದರ ನಮ್ಮಗೂಡಾ ಅವನೇನೂ ಸಾಲಿಗಿ ಬರತೀರಲಿಲ್ಲ..ಅವನು ಕೆಲಸ ಅಂತ ಮಾಡತಿದ್ದದ್ದು ನಮಗ ಭಾಳ ಹಿಡಿಸೋ ಕೆಲಸ..ಹಿಂಗಾಗಿ ನಮಗ ಭಾಳ ಹಿಡಿಸುವ ಕೆಲಸ ಮಾಡಾವರನ್ನ ನಮ್ಮ ಗುಂಪಿನಾಗ ಇಟ್ಟಗೊಂಡಿದ್ವಿ..ಯಾಕಂದರ ನಮ್ಮನ್ನೂ ಅವರು ತಾವು ಮಾಡತಿದ್ದ ‘’ದನಾ’’ ಕಾಯುವ ಕೆಲಸಕ್ಕ ಯಾವಾಗರೊಮ್ಮೆ ಕರಕೊಂಡು ಹೋಗಲಿ ಅಂತಾ ಆಶೆಯಿಂದ. ಆದರ ಏನು ಮಾಡೋದು ನಂದಿಗೂಡಾ ಇರಬೇಕೆಂಬ ನಮ್ಮ ಆಶೆಯನ್ನು ಆ ಶಿವ ಪರಮಾತ್ಮ ಮುಂದಕ್ಕ ಮುಂದಕ್ಕ..ತಳ್ಳಕೋತ ಹೊಂಟಿದ್ದ…

ಇಂತಿಪ್ಪ ಹುಸೇನಿಯ ತಮ್ಮನಿಗೆ ಮದುವಿಯಾಗಿ ಮಕ್ಕಳಾದರೂ ಹುಸೇನಿಗೆ ಮಕ್ಕಳಿರಲಿಲ್ಲ…ಯಾಕಂದರ ಅವನಿಗೆ ಮದುವೆಯಾಗಿರಲಿಲ್ಲ.ಹಿಂಗಾಗಿ ಅವನೇ ಒಬ್ಬ ಮಗುವಿನ್ಹಂಗ ಇದ್ದ..
ಒಂದಿನಾ ಏನಾತಂದರ ಸಂಜೀಮುಂದ ಅಂವಾ ದನಾ ಮೇಯಿಸಿಕೊಂಡು ಬರಾಕತ್ತಿದ್ದ…ಊರ ಹೊರಗಿಂದ ಬರಬೇಕಾದರ ನಮ್ಮ ಸಾಲಿ ಮುಂದನ ಹಾದ ಹೋಗಬೇಕ…ಮುಂದ ಮುಂದ ದನಗೋಳು ತಲಿ ಕೆಳಗ ಹಾಕೊಂಡು ಹೊಂಟಿದ್ದವು..ಅವುಗಳ ಕೊಳ್ಳಾಗ ಕಟ್ಟಿದ್ದ ಗುದ್ದಲಿ ಅಕಾಡೊಮ್ಮೆ ಇಕಾಡೊಮ್ಮೆ ಬಡಕೋತ ಇದ್ದದಕ್ಕ ,ಅವುಗಳ ಕಾಲಾಗ ತೊಡಕ ಹಾಕತಿದ್ದದಕ್ಕ ದನಗೋಳು ಅಡ್ಡಾದಿಡ್ಡಿ  ಕಾಲಿಟ್ಟಕೋತ ಹೊಂಟಿದ್ದವು..ಇಂವಾ ಹುಸೇನಿ ಹೆಗಲ ಮ್ಯಾಲ ಅಡ್ಡ ಬಡಗಿ ಇಟಗೋಂಡು ಬಡಗಿ ಮ್ಯಾಲ ಎರಡೂ ಕೈಗಳನ್ನು ಹಾಕೊಂಡು ಕುಶಾಲಿಲೆ ಹೊಂಟಿದ್ದ….ಹಿಂಗ ಹೊಂಟವನನ್ನು ನೋಡಿ ನನ್ನ ತರಗತಿಯೊಳಗಿನ ತರಲೆಗಳಿಗೆ ಅದೇನು ಕೆಟ್ಟ ಬುದ್ಧಿ ಬಂತೋ…ಹುಸೇನಿಯನ್ನ ನೋಡಿದ ಕೂಡಲೇ…ಥೇಟ್ ಹುಸೇನಿ ಮಾತಾಡುವಂಗ ತೊದಲ-ಬದಲ ಅಡಸಾಳ ಬಡಸಾಳ ಕೂಗಿದರು..ಹಂಗ ಇವರು ಒದರುವದನ್ನು ಹುಸೇನಿ ನೋಡಿಬಿಟ್ಟ!…ಹಂಗ ನೋಡಿದವನು ಸುಮ್ಮನೇ ನೋಡಿ ಬಿಡಲಿಲ್ಲ…ಅದೇನೋ ತೊದಲು ತೊದಲು ಬಯ್ಗಳ ಬೈದಾ,ಅಷ್ಟಕ್ಕ ಸುಮ್ಮನ ಕೂಡದ ಒಂದು ದೊಡ್ಡ ಕಲ್ಲು ತೊಗೊಂಡು ಬೀಸಿ ನಮ್ಮ ಕಡೆ ಒಗದ..ಹಂಗ ಅವನು ಒಗೆಯುವುದಕ್ಕೂ ನಮ್ಮ ತರಗತಿಯ ತರಲೆಗಳು ಬಾಗಿಲಾ ಹಾಕೋದಕ್ಕೂ ಮೇಳಾತು…ಒಳಗಿದ್ದ ನಮಗ ಧಪ್ಪಂತ ಸಪ್ಪಳ ಬಂತು…ಕಾಲುಗಳು ನಡಗಾಕತ್ತಿದ್ದು…ಆದರ ತಮಾಷೆ ತಗೋಳ್ಳುವವರು ಏನೂ ಆಗಲಾರದ್ಹಂಗ ನಕ್ಕೋತ ನಿಂತಿದ್ದರು…ಯಾವಾಗ ಹುಸೇನಿಯಿಂದ ಇಂಥಾ ಪ್ರತಿಕ್ರಿಯೆ ಬಂತೋ ತರಲೆಗಳಿಗೆ ಮಜಾ ಅನಿಸಿ ಇದು ಪುನರಾವರ್ತನೆಯಾಗಲಾಕ ಶುರುವಾಯಿತು.ಅಂವಾ ಎಲ್ಲಿ ಕಾಣತಾನೋ ಅಲ್ಲೆಲ್ಲಾ ಹುಸೇನಿಯನ್ನು ಚಿರಡಿಗೆ ಏರಿಸುವ ಅಣಕಿಸುವಿಕೆ ಮುಂದುವರೆಯತೊಡಗಿತು..ಆದರ ನಾ ಮಾತ್ರ ಅಂಥಾದ್ದು ಮಾಡಲಿಲ್ಲ.ಅದಕ್ಕ ಮೂರು ಕಾರಣಗಳಿದ್ದವು.ಒಂದನೇದು ಏನಂದರ-ಅಂವಾ ನಮ್ಮ ಓಣ್ಯಾಂವಿದ್ದ.ಎರಡನೆಯ ಕಾರಣವೆಂದರೆ-ನಮ್ಮ ಮನಿಯೊಳಗಿನ ಆಕಳಾ ಅಂವ ಮೇಯಿಸಿಕೊಂಡು ಬರತಿದ್ದ ದನಗಳ ಗುಂಪಿನಾಗ ಇತ್ತು.ಮೂರನೆಯ ಕಾರಣವೆಂದರೆ-ಉಳಿದವರು ಕೆಣಕಿದಂಗ ನನಗ ಕೆಣಕಲಾಕ ಧೈರ್ಯವಿರಲಿಲ್ಲ.

ಕೆಣಕುವುದು ಪುನರಾವರ್ತನೆಯಾದಂತೆ,ಅವನು ನನ್ನ ಮೇಲೆನೂ ಗುಮಾನಿ ಇಡತೊಡಗಿದ.ಒಂದಿನ ಆಕಳಾ ಮೇಯಿಸಿಕೊಂಡು ಮನಿಗಿ ಹೊಡಕೊಂಡು ಬಂದಾಂವ,ನಮ್ಮ ಮನೆಯವರಿಗೆ ನನ್ನ ಮ್ಯಾಲ ಫಿರ್ಯಾದಿ ನೀಡಿದ.ನಾ ಮಾತ್ರ ಸುತಾರಾಮ್ ಒಪ್ಪಲಿಲ್ಲ.ಹಿಂಗಾಗಿ ಅವತ್ತು ಸುಮ್ಮನ ಹ್ವಾದ.ದೀಪಾವಳಿ ಬಂದರ ಸಾಕು,ಹೊತ್ತು ಮುಳುಗು ಮುಂದ ಹುಲ್ಲಿನ ಗೂಡಿನಾಗ ದೀಪಾ ಇಟಗೊಂಡು ಬಂದು,ಹಾಡಾ ಹಾಡಿ ದನಗೋಳಿಗೆ ಬೆಳಗಿ ಹೋಗತಿದ್ದ.ಕೊನೆಯ ದಿವಸ ಎಣ್ಣಿಗಿ ರೊಕ್ಕಾ ಕೊಡ್ರಿ ಅಂತ ಇಸಗೊಂಡು ಹೋಗತಿದ್ದ.ಹಿಂಗ ಹುಸೇನಿ ನಮಗ ಬಿಡಿಸಲಾರದ ಒಗಟಿನಾಂಗಿದ್ದ.

ಇಂಥಾದರಾಗ ಆ ವರ್ಷ ಹೋಳಿ ಹುಣ್ಣಿವಿ ಬಂತು.ಪ್ರತಿ ವರ್ಷ ಯಾರಾದರೊಬ್ಬರಿಗೆ ಹೆಣದ ವೇಷ ಹಾಕಿ ಮಜಾ ಮಾಡುವ ಪದ್ಧತಿ.ಎಲ್ಲಾರೂ ಹುಬ್ಬೇರಿಸುವಂಗ ಆ ವರ್ಷ ಹುಸೇನಿಗಿ ಹೆಣದ ವೇಷ ಹಾಕಿ ಅವನನ್ನು ಹೆಣದ ಗತೆ ಮಾಡಿಬಿಟ್ಟಿದ್ದರು.ಸತ್ತಾವರಗತೆ ಬೀಳೋದು ಬಲೆ ಹಿಂಸೆಯ ಕೆಲಸ.ಅಂಥಾದರಾಗ ಹುಸೇನಿ ಅದನ್ನ ಭಾಳ ಚಂದ ನಿಭಾಯಿಸಿಬಿಟ್ಟ.ನನ್ನ ತರಗತಿಯ ತರಲೆಗಳು ಕಾಡಿಸಿದರೂ ಕಮಕ್ ಕಿಮಕ್ ಅನ್ನಲಿಲ್ಲ.

ಆದರ ಇದಾಗಿ ಕೆಲವೇ ದಿನಗಳಲ್ಲಿ ಹುಸೇನಿ ಹಟಾತ್ತನೇ ಒಂದಿನ ತೀರಿಕೊಂಡು ಬಿಟ್ಟ…!ಎಲ್ಲರ ಮನಸಿನಾಗ ದುಃಖದ ಮಡವು ಮಾಡಿಟ್ಟ.ಅವನನ್ನು ನೋಡಿ ನಗತಿದ್ದವರೂ ಹುಸೇನಿನ್ನ ಕಳಕೊಂಡು ಕೊರಗಿದರು.ಎಲ್ಲಾರ ಊರಿನಾಗೂ ಇಂಥಾ ಒಬ್ಬ ಹುಸೇನಿ ಇದ್ದೇ ಇರತಾನ…ಅಂಥವರು ನಮ್ಮ ಜೊತೆ ಇಲ್ಲದಿದ್ದಾಗ ಒಂದು ವಿಷಾದ ಬಿಟ್ಟ ಹೋಗಿರತಾರ ಅನ್ನೂದು ಮಾತ್ರ ಖರೆ.
ಅದಿರಲಿ ನಿಮ್ಮೂರಾಗ ಹೋಳಿ ಹುಣ್ಣಿವಿ ಹೆಂಗ ಆಚರಿಸ್ತೀರಿ ಅನ್ನೂದು ನಂಗೊತ್ತಿಲ್ಲ…ಆದರ ನಮ್ಮೂರಾಗಿನ ಹೋಳಿ ಹುಣ್ಣಿಮಿಯ ಖದರ್ರೇ ಬ್ಯಾರೆ…ಅದನ್ನ ಮುಂದಿನ ವಾರ ನಿಮಗ ಹೇಳತೀನಂತ.
-ನಾರಾಯಣ ಬಾಬಾನಗರ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] November 24th, 2014 editor [ ಸರಣಿ ಬರಹ ] https://www.panjumagazine.com/?p=9353 ಇಲ್ಲಿಯವರೆಗೆ ‘’ಹೋಗಿ ಹೋಗಿ ಈಗ್ಯಾಕ ಹೋಳಿ ಹುಣ್ಣಿವಿ […]

1
0
Would love your thoughts, please comment.x
()
x