ಹೀಗೊಂದು ಗೆಳೆಯರ ಬಳಗ!: ಗುರುಪ್ರಸಾದ ಕುರ್ತಕೋಟಿ


ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು! 
"ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… ಎದ್ದು ಭಾಳ ಹೊತ್ತಾತು. ನಿನ್ನ ಫೋನಿಗೆ ಕಾಯ್ಕೋತ ಕೂತಿದ್ದೆ" ಅಂದಾಗ ತನ್ನ ಟಿಪಿಕಲ್ ಆದ ಕಂಚಿನ ಕಂಠದಾಗ ಗಹಗಹಿಸಿ ನಕ್ಕ. ಅದು ಇನ್ನೂ ಇರಿಟೇಟ್ ಆತು. 

"ಅಲ್ರೀ ಸರ್ರ ಈ ಫೇಸ್ಬುಕ್ಕ್ನ್ಯಾಗ ಒಂದು ಆಪ್ಷನ್ ಇದ್ರ ಚೊಲೊ ಆಗ್ತಿತ್ತು"
"ಏನಪಾ ಅದು?" ಮುಂಜ್ ಮುಂಜಾನೆ ಕೇಳೊ ಪ್ರಶ್ನೆ ಎನ್ರೀ ಅದು?
"ಎಲ್ಲಾರ್ದೂ ಪೋಸ್ಟ್ ಮತ್ತ ಫೋಟೊ ಆರಿಸಿಕೊಂಡು ಒಂದ ಸಲಕ್ಕ  ಲೈಕ್ ಮಾಡಿ ಬಿಡೋದು!" ಅಂವಾ ಯಾವಾಗ್ಲೂ ಹಂಗ. ಏನ್ ವಿಷಯ ಅಂತ ಹೇಳೊಕಿಂತ ಮೊದ್ಲ ಒಂದ್ ಈ ತರದ ಒಗಟು ಒಗಿತಾನ. ನಾವು ಸೀ ಐ ಡಿ ಪ್ರದ್ಯುಮ್ನ ನ ಹಂಗ ’ಇದ್ರಾಗ ಏನೋ ಗಡಬಡ ಐತಿ’ ಅಂತ ತಲಿ ಕೆರ್ಕೋಬೇಕು, ಹಂಗ ಒಂದು ಹುಳಾ ಬಿಡ್ತಾನ. ನಗಗಂತೂ ಏನೂ ಹೊಳಿಲಿಲ್ಲ.
"ಅದರಿಂದ ಏನಪಾ ಉಪಯೋಗ?" ಅಂತ ಕೇಳಿದ್ದಕ್ಕ. 
"ನಮ್ಮ ವಿಜಯ್ ಗುರುಗಳು ತಾವು ತಗದದ್ದ ಒಂದು ಫೋಟೊ ಫೇಸ್ ಬುಕ್ನ್ಯಾಗ ಹಾಕಿದ್ರು. ನಾ ಅದನ್ನ ಇನ್ನೂ ಲೈಕ್ ಮಾಡಿಲ್ಲ ಅಂತ ಸಿಟ್ಟಿಗೆದ್ದಾರ! ಅದಕ್ಕ ಅಂಥಾ ಆಪ್ಶನ್ ಇದ್ರ ಮುಂಜಾನೆ ಎದ್ದು ಎಲ್ಲಾರ್ ಫೋಟೋನೂ ಒಂದ್ ಸಲ ಲೈಕ್ ಮಾಡಿ ಬಿಟ್ರ ಒಂಥರ ನಿಶ್ಚಿಂತಿ ನೋಡ್ರೀ. ಇಲ್ಲಾಂದ್ರ ನನ್ನ ಫೋಟೊ ಲೈಕ್ ಮಾಡಿಲ್ಲ ನಿನ್ನ ಫೋಟೊ ಮಾಡಿಲ್ಲ ಅಂತ ಸಿಟ್ಟಿಗೇಳೋ ಪ್ರಶ್ನೇನ ಏಳುದಿಲ್ಲ." 
"ಹೌದಲ್ಲೋ ಮಾರಾಯ! ಇದು ಖರೇನ ಚೋಲೊ ವಿಚಾರ ನೋಡು" ನನಗೂ ಇಂಥಾ ಅನುಭವ ಭಾಳ ಆಗಿದ್ವು. ಅವಾಗಾವಗ ಇಂಥಾವು ಉಪಯೋಗ ಆಗೂ ಅಂಥ ವಿಚಾರ ಮಾತಾಡ್ತಾನ. ಅಡ್ಡಿ ಇಲ್ಲ. ಅಂದ್ಕೋತಿರ್ಬೇಕಾದ್ರ…. 

"ಲೇ ಎಪ್ರೇಷಿ… ಬುದ್ಧಿ ಅದ ಇಲ್ಲಲೇ ನಿನಗ…! ಲೇ ಎಲ್ಲಿದ್ದೀ ಬಾಯಿಲ್ಲೆ!!" ಅಂತ ಒದ್ರೀದ.

"?!!??"

"ಸರ್‍ರ ನಿಮಗ ಅಲ್ಲಾ, ನನ್ನ ಮಗಾ ಏನ್ ಧಾಂದ್ಲೆ ಹಾಕ್ತಾನ್ರೀ ಪಾ. ಅಂವಗ ಬೈಲಿಖತ್ತಿದ್ದೆ. ಇಕಿನೂ ಹಂಗ, ನಾ ಫೋನ್ ಮಾಡು ಮುಂದ ಹುಡುಗುರ್ನ ನನ್ನ ಹತ್ರ ಬಿಟ್ಟಿರ್ತಾಳ." ಅಂದ. ಸಧ್ಯ ಬದಕ್ದೆ, ಎಲ್ಲೆ ನನಗ ಬೈದ್ನೋ ಅಂತ ಹೆದರಿದ್ದೆ! ಹಂಗ ಅಂದವ್ನ ಖೊರ್‍ರ ಅಂತ ಖ್ಯಾಖರಿಸಿ ಉಗುಳಿದ. ಫೋನ್ ಹಿಡಕೊಂಡು ಅವನ ಮನಿ ಮುಂದಿನ ಘಟಾರ್ ನ್ಯಾಗ ಉಗುಳಿದ್ದ. ಆದ್ರೂ ಅದು ನನ್ನ ಕಿವ್ಯಾಗ ಉಗುಳಿದಂಗ ಆಗಿ ನಾನು ಕರ್ಚೀಫ್ ಲೆ ಕಿವಿ ವರಿಸಿಕೊಂಡೆ. ಅದಕ್ಕ…, ಅವನ ಜೋಡಿ ಫೋನ್ ನ್ಯಾಗ ಮಾತಾಡೋವಾಗ ಒಂದು ಕರ್ಚೀಫು ಬಾಜುಕ್ಕ ಇಟಗೊಂಡ ಕೂತಿರ್ತೀನಿ!  

"ಆತ್ ತೊಗೊಪಾ ಸ್ವಲ್ಪ ಮಕಾ ತೊಕ್ಕೊಂಡು, ಚಾ ಕುಡದು ಅಮ್ಯಾಲೆ ಫೋನ್ ಮಾಡ್ತೀನಿ" ಅಂತ ಸಂಭಾಷಣೆ ಮುಗಸೊ ಪ್ರಯತ್ನ ಮಾಡ್ದೆ. ಆದ್ರ ಅಂವ ಬಿಡಬೇಕಲ್ಲ! 

"ಅಲ್ರೀ ನಿಮ್ಮ ಪಾರ್ಟಿ ಯಾವಾಗ?" ಅಂತ ಮತ್ತೇನೋ ಒಂದು ಒಗಟು ಒಗದಾ. 

"ಯಾವ ಪಾರ್ಟಿ??" ನನ್ನ ಅಲ್ಪ ಸ್ವಲ್ಪ ಉಳದದ್ದ ನಿದ್ದೀನೂ ಹಾರಿ ಹೋಗಿತ್ತು. 

"ಒಂದ? ಎರಡ?…, ಭಾಳ ಪಾರ್ಟಿ ಪೆಂಡಿಂಗ ಅವ ನಿಮ್ವು. ಬರ್ತ್ ಡೇ ದ್ದು ಕೊಟ್ಟಿಲ್ಲ, ಮ್ಯಾರೇಜ್ ಅನ್ನಿವರ್ಸರಿದೂ ಕೊಡಲಿಲ್ಲ, ಹೊಸಾ ಫ್ರಿಜ್ ತೊಗೊಂಡ್ರಿ ಅದರ್ದು ಇಲ್ಲ" ಪುಣ್ಣ್ಯಾಕ್ಕ ನಾ ಮೊನ್ನೆ ಹೊಸ ಅಂಡರ್ ವೇರ್ ತೊಗೊಂಡಿದ್ದು ಅವಂಗ ಇನ್ನೂ ಗೊತ್ತಿಲ್ಲಾ, ಒಂದು ಪಾರ್ಟಿ ಉಳೀತು! ಪ್ರತಿಯೊಂದಕ್ಕೂ ಪಾರ್ಟಿ ಕೇಳೋದಕ್ಕ ಎಲ್ಲಾರೂ ಇಂವಗ ಪಾರ್ಟಿ ಪ್ರಶಾಂತ ಅಂತ ಹೆಸರು ಇಟ್ಟಾರ.

"ಅಲ್ಲೋಪಾ, ಇಷ್ಟ್ ವಯಸ್ಸಾದ್ ಮ್ಯಾಲೂ ಬರ್ಥ್ ಡೇ ಮಾಡ್ತಾರೇನು? ಮದಿವಿ ಆಗಿದ್ದಂತೂ ಪಾರ್ಟಿ ಕೊಡು ಅಂಥಾ ವಿಷಯಾನ ಅಲ್ಲ. ಸುಮ್ಮ್ ಸುಮ್ಮ್ನ ಮುಂಜಾನೆ ತಲಿ ತಿನ್ನಬ್ಯಾಡ"

"ಅಲ್ರೀ ಗುರು ನಿಮಗೇನ್ ಅಂಥಾ ವಯಸಾಗ್ಯಾವ್ರೀ. ನೋಡ್ಲಿಕ್ಕೆ ಇನ್ನೂ ಇಪ್ಪತ್ತರ ಹತ್ ಹತ್ತ್ರ ಇದ್ದಂಗ ಕಾಣ್ತೀರಿ." ಅಂತ ಬೇಣ್ಣಿ ಹಚ್ಚಿದ್ದಕ್ಕ ಹೋಗ್ಲಿ ಒಂದರೆ ಪಾರ್ಟಿ ಕೊಟ್ಟ್ರಾತು ಅಂತ ನಿರ್ಧಾರಾ ಮಾಡಿದ್ದ ತಡ. ನನ್ನ ಹೇಂಡ್ತಿ ಎಲ್ಲ್ಯೋ ಹೊರಗ ಇದ್ದಾಕಿ ಒಳಗ ಬಂದು  "ಇಬ್ಬರಿಗೂ ಉದ್ಯೋಗಿಲ್ಲ ಉಸಾಬರಿಲ್ಲಾ. ಬರೇ ಫೋನ್ ನ್ಯಾಗ ಮಾತಾಡ್ಕೋತ ಕೂಡ್ರಿ. ಇನ್ನೂ ಭಾಳ ಕೆಲ್ಸಾ ಅವ, ಮುಗಸ್ರೀ ಇನ್ನ." ಅಂತ ಬೈದ್ಲು. ಏ ಛೊಲೊ ಟೈಮಿಗೆ ಬಂದ್ಲು ಅಂದ್ಕೊಂಡು.

"ಇಕಿ ಬೈಲಿಖತ್ತಾಳ ಮಾರಾಯ. ಇನ್ನೂ ಭಾಳ ಕೆಲ್ಸ ಅವ. ಅಮ್ಯಾಲೆ ಮಾತಾಡೋಣ ಅಂತ" ಫೋನು ಬಂದ ಮಾಡಿದೆ. ಆದ್ರೂ ನಾ ಹೇಂಡ್ತೀಗೆ ಇಷ್ಟು ಹೆದರ್ತೀನಿ ಅಂತ ಇಂವಗ ಪ್ರತೀ ಸಲ ಅಂವಾ ಫೋನ್ ಮಾಡ್ದಾಗೂ ಗೊತ್ತಾಗಿ ಬಿಡ್ತದಲ್ಲ ಅನ್ನೋ ಬ್ಯಾಸರಾ ಅಂತೂ ಇತ್ತು!   

—–

ಮನಸ್ಸು ಕ್ಷಣಾರ್ಧದಲ್ಲಿ ಹುಬ್ಬಳ್ಳಿಗೆ ಹೋಗಿತ್ತು. ಸುಮಾರು ಹದಿನಾಲ್ಕು ವರ್ಷದ ಹಿಂದಿನ ಮಾತು. ನಾನು ಬೆಂಗಳೂರಿನ್ಯಾಗ ಕೆಲ್ಸ ಹುಡಕಿ ಸುಸ್ತ ಆಗಿ ವಾಪಸ್ಸು ಅಪ್ಪನ ಹತ್ರ ರೊಕ್ಕಾ ಇಸಗೋಳಿಕ್ಕೆ ಅಂತ ಧಾರವಾಡಕ್ಕ ಬಂದಿದ್ದೆ. ಹಂತಾದ್ರಾಗ ಇಲ್ಲೇ ಹುಬ್ಬಳ್ಳ್ಯಾಗ ಒಂದು ಕಡೆ ಸಾಫ್ಟವೇರ್ ಕೆಲ್ಸ ಖಾಲಿ ಅದ ಅಂತ ನನ್ನ ಮಿತ್ರನೊಬ್ಬ ಹೇಳಿ ಕುತುಹಲ ಕೆರಳಿಸಿದ್ದ. ತಾನು ಮಾತ್ರ ಅಷ್ಟು ಹೇಳಿ ಬೆಂಗಳೂರಿಗೆ ಕೆಲ್ಸಾ ಹುಡುಕಲಿಕ್ಕೆ ಹೋಗಿದ್ದ. ನಾನು ಆ ಕಂಪನಿಗೆ ಹೋಗಿ ಇಂಟರ್ವ್ಯೂ ಪಾಸ್ ಆಗಿ ಕೆಲ್ಸಕ್ಕೆ ಸೆರ್ಕೊಂಡಿದ್ದು ಒಂದು ಇತಿಹಾಸ! ಅಲ್ಲೆ ನನಗಿಂತ ಮೊದಲ ಇದ್ದವರೊಳಗ ಆಮ್ಯಾಲೆ ಸಿಕ್ಕಾಪಟ್ಟಿ ದೋಸ್ತ ಆದಂವಾ ಅಂದ್ರ ವಿಟ್ಠಲ. ನಮಿತಾ ಅಂತ ಒಂದು ಹುಡಗಿನೂ ಇದ್ಲು. ಅಕೀನು ಒಳ್ಳೆ ಫ಼್ರೆಂಡ್ ಆದ್ಲು, ಅದ್ರೂ ಕೆಲ್ಸದ ವಿಷಯದಾಗ ಬರೇ ಜಗಳಾ ಮಾಡ್ತಿದ್ಲು. ಅದು ಆ ಮಟ್ಟಿಗಿನ ಜಗಳ. ದ್ವೇಷದ ಜಗಳ ಅಲ್ಲಾ!

ಅದು ಒಂದು ಸಣ್ಣ ಸಾಫ್ಟವೇರ್ ಕಂಪನಿ. ಇದ್ದವ್ರ ನಾಲ್ಕೈದ್ ಮಂದಿ. ನಮಗೊಬ್ಬ್ರು ಬಾಸ್ ಇದ್ರು. ಸಮಸ್ಯೆ ಏನು ಅಂದ್ರ ಅವರ ಮನಿ ಆಫಿಸಿನ ಕೆಳಗ ಇತ್ತು! ಅದಕ್ಕ ಅವ್ರು ಯಾವಾಗ್ಲೂ ಮನ್ಯಾಗ ಇರೌರು … ಅಲ್ಲಲ್ಲಾ ಆಫಿಸ್ ನ್ಯಾಗ ಇರೌರು. ಮನಿಗಿಂತ ಆಫೀಸಿನ್ಯಾಗ ಅವ್ರಿಗೆ ಶಾಂತಿ ಜಾಸ್ತಿ ಇತ್ತು ಅಂತ ನಮಗ ಆಮ್ಯಾಲೆ ಗೊತ್ತಾತು. ಅದು ಏನಪಾ ಅಂದ್ರ ಅವರ ಹೆಂಡತಿ ಸಂಗೀತ ಕಲೀತಿದ್ರು. ಹಿಂಗಾಗಿ ಯಾವಗ್ಲೂ ಅವ್ರು ಮನ್ಯಾಗ ತಮ್ಮ ಸಂಗೀತ ಸಾಧನೆ  ಮಾಡವ್ರು. ನಮ್ಮ ಬಾಸು ಅದ್ನ ತಪ್ಪಿಸಿಗೋಳಲಿಕ್ಕೆ ಆಫಿಸಿನ್ಯಾಗ ಕುತಗೊಂಡು ನಮಗ ತಮ್ಮ ರಾಗದಾಗ ತಮ್ಮ ಸಂಗೀತಾ ಹೇಳತಿದ್ರು! ಅದ್ರೂ ಭಾಳ ತಡಾ ಆತಂದ್ರ ಅವ್ರ್ ಹೆಂಡತಿನ ಮ್ಯಾಲೆ ಆಫಿಸಿಗೆ ಬಂದು ಬಿಡವ್ರು. ನಾವಾಗ ನಿಟ್ಟುಸಿರು ಬಿಡತಿದ್ವಿ. ಯಾಕಂದ್ರ ಬಾಸು ತಮ್ಮ ಮನೀಗೆ ದಯಮಾಡ್ಸಿದ್ರ ನಾವು ಜಾಗಾ ಖಾಲಿ ಮಾಡ್ಬಹುದಿತ್ತು!  

ಹಿಂಗ ಜೀವನಾ ನಡದಿತ್ತು. ಆವಾಗ ನಮ್ಮ ಟೀಮ್ ಲೀಡ್ ಆಗಿ ಬಂದವ್ರು ವಿಜಯ್ ಅವ್ರು. ಅವರು ನಮಗಿಂತ ಹೆಚ್ಚು ಬಲ್ಲವರಾಗಿದ್ರು, ಹಿಂಗಾಗಿ ಅನಿವಾರ್ಯವಾಗಿ ಅವರನ್ನ ನಮ್ಮ ಗುರುಗಳನ್ನಾಗಿ ಮಾಡಿಕೋಬೇಕಾತು. ಅದೂ ಒಂದು ಇತಿಹಾಸ. ಇವ್ರು ಬಂದ ಮ್ಯಾಲೆ ಬಂದವ್ನ ನಮ್ಮ ಪಾರ್ಟಿ ಪ್ರಶಾಂತ. ಅವಗಿಂತಾ ನಾನು ಹೆಚ್ಚು ಬಲ್ಲವನಾಗಿದ್ದೇನಾದ್ದರಿಂದ ಅವನು ಪಾಪಾ ಅನಿವಾರ್ಯವಾಗಿ ನನಗ ಗುರುಗಳ ಸ್ಥಾನಾ ಕೊಟ್ಟು ಮರ್ಯಾದಿ ದಯಪಾಲಿಸ್ದಾ. ಹಿಂಗ ನಮ್ಮ ಗುರು-ಶಿಶ್ಯ ಪರಂಪರೆ ಶುರು ಆತು. ನಾವು ಒಬ್ಬರ್ನೊಬ್ರು ಎಷ್ಟು ಹಚಿಗೊಂಡಬಿಟ್ಟಿದ್ವಿ ಅಂದ್ರ ಅಷ್ಟ ಹಚಿಗೊಂಡಿದ್ವಿ ನೋಡ್ರೀ! ಯಾಕಂದ್ರ ಅವಾಗ ಎಲ್ಲಾರೂ ಬ್ರಹ್ಮಚಾರಿಗಳು. ಯಾರಿಗೂ ಹೇಳವ್ರಿಲ್ಲ ಕೇಳವ್ರಿಲ್ಲ. ಒಟ್ಟಿಗೆ ಊಟಾ ಮಾಡ್ತಿದ್ವಿ, ಗಿರಿಮಿಟ್ಟು ಮಿರ್ಚಿ ತಿಂತಿದ್ವಿ, ಪಿಕ್ನಿಕ್ ಹೋಗ್ತಿದ್ವಿ…. 

ಆದ್ರ ಎರಡ ವರ್ಷ ಹಿಂಗ ಕಳದಾದ ಮ್ಯಾಲೆ ಐ ಟಿ ಇಂಡಸ್ಟ್ರೀ ಮ್ಯಾಲೆ ಸಿಡ್ಲು ಬೀಳಲಿಕ್ಕೆ ಹತ್ತಿ ನಮ್ಮ ಬಾಸು ನಮ್ಮ ಪಗಾರಕ್ಕೂ ಕೈ ಹಚ್ಚಿದಾಗ ಎಲ್ಲಾರೂ ಬ್ಯಾರೆ ಕೆಲ್ಸಾ ಹುಡಿಕ್ಕೊಂಡು ಅತ್ಲಾಗ ಇತ್ಲಾಗ ಆದ್ವಿ. ವಿಟ್ಠಲ ಬೆಂಗಳೂರಿಗೆ ಹೋದ, ನಮೀತಾ ನೂ ಬೆಂಗಳೂರು ಸೇರಿದ್ಲು. ನಾನೂ ಪ್ರಶಾಂತ ಹುಬ್ಳ್ಯಾಗ ಬ್ಯಾರ್ ಬ್ಯಾರೆ ಕಡೆ ಕೆಲ್ಸಕ್ಕ ಸೇರಿದ್ವಿ. ವಿಜಯ್ ಅವ್ರೂ ಹುಬ್ಳ್ಯಾಗ ಇನ್ನೊಂದ್ ಕಡೆ ಸೇರಿ ಆಮ್ಯಾಲೆ ಬೆಂಗಳೂರಿಗೆ ಹೋದ್ರು. ನಾವು ಒಬ್ಬರ್ನೊಬ್ರು ಮಿಸ್ಸ್ ಅಂತೂ ಮಾಡ್ಕೋತಿದ್ವಿ. ಆದ್ರೂ ವಿಧಿ ಮತ್ತ ತನ್ನ ಆಟಾ ತೋರಸ್ತು. ಕಾಲಾಂತರದಾಗ ನಮ್ಮನ್ನ ಎಲ್ಲಾರ್ನೂ ಬೆಂಗಳೂರಿಗೆ ತಂದು ವಗಿತು. ಅದೂ ಅಲ್ದ ಎಲ್ಲಾರೂ ಗ್ರಹಸ್ತಾಶ್ರಮಕ್ಕ ಕಾಲ ಇಟ್ಟಿದ್ವಿ! ನಮ್ಮ ಟೀಮು ಈಗ ದೊಡ್ಡದಾಗಿತ್ತು.

—–

ಈಗ ಎಲ್ಲಾರೂ ಒಂದ ಕಡೆ ಇದ್ದೀವಿ.  ಆದ್ರೂ ಎಲ್ಲಾರೂ ಒಟ್ಟಿಗೆ ಸೇರೂದು ಆಗವಲ್ದು. . . ನಾವು ಭೆಟ್ಟ್ಯಾಗೋದು ಫೇಸ್ ಬುಕ್ನ್ಯಾಗ ಮಾತ್ರ. ಪ್ರೊಫೈಲ್ ವಿಸಿಟ್ ಮಾಡಿದ್ರ ಅವರ ಮನೀಗೆ ಹೋದಂಗ ಆಗಿ ಬಿಟ್ಟದ. ಎಂಥ ವಿಪರ್ಯಾಸ ಅಲ್ಲಾ? ಆದ್ರ ಅದರಿಂದ ಆಗ್ತಿರೋ ಸಮಸ್ಯೆ ಅಂದ್ರ ನನ್ನ ಫೋಟೊ ನೋಡಿಲ್ಲ, ಲೈಕ್ ಮಾಡಿಲ್ಲ, ಕಮೆಂಟ್ ಮಾಡಿಲ್ಲ ಅನ್ನೋ ಕ್ಷುಲ್ಲಕ ರಗಳೆಗಳು. ಅದ ಕಾರಣಕ್ಕ ನಮ್ಮ ಪಾರ್ಟಿ ಪ್ರಶಾಂತ ಮುಂಜ ಮುಂಜಾನೆ ಒಂದು ಪರಿಹಾರ ಹೇಳಿದ್ದು. ಆದ್ರೂ ಒಬ್ಬರಿಗೊಬ್ರು ಮ್ಯಾಲೆ ಸಿಟ್ಟಿಲ್ಲ ಬಿಡ್ರೀ. ಅದು ಬರೀ ಕಾಲೆಳೆಯುವ ಮನಸ್ತಾಪಗಳು ಅಷ್ಟೆ. 

ಇನ್ನ ಒಬ್ಬೊಬ್ರ ಬಗ್ಗೆ ಹೇಳಬೇಕಂದ್ರ, ಒಬ್ಬೊಬ್ರೂ ಒಂದೊಂಥರಾ ಕ್ಯಾರೆಕ್ಟರ್!    ವಿಜಯ್ ನಾ ಮೊದ್ಲ ಹೇಳಿದಂಗ ನಮ್ಮೆಲ್ಲರ ಗುರುಗೋಳು. ಅದ್ರ ಜೊತಿಗೆ ಒಂಥರ ಸೈಂಟಿಷ್ಟು! ಅವರಿಗೆ ತಾಂತ್ರಿಕ ವಿಷಯದಾಗ ಸಿಕ್ಕಾಪಟ್ಟೆ ಆಸಕ್ತಿ ಹಾಗೂ ಹಿಡಿತ. ಒಂದೊಂದ್ ಸರ್ತಿ ಸೈಂಟಿಸ್ಟ ತರಾನ ಆಡೊವ್ರು. ಅವ್ರ ಲಗ್ನಕ್ಕ ನಾನು ಪ್ರಶಾಂತ ಹೋಗಿದ್ವಿ. ನಮ್ಮನ್ನ ಹೆಂಡತಿಗೆ ಪರಿಚಯ ಮಾಡ್ಸೂ ಮುಂದ ನನ್ನ ಮತ್ತ ಪ್ರಶಾಂತನ ಹೆಸ್ರು ಅದ್ಲ ಬದ್ಲ ಮಾಡಿ ಹೇಳಿ ಬಿಟ್ರು! ಆಮ್ಯಾಲೆ ನಾವು ನಮ್ಮ ನಮ್ಮ ಹೆಸರು ಹೇಳ್ಕೋಬೇಕಾತು. 

ವಿಟ್ಠಲ ಒಬ್ಬ ಕಲಾವಿದ ಮತ್ತ ಕಂಪುಟರ್ ಗ್ರಾಫಿಕ್ಸ್ ಪ್ರವೀಣ. ಅಂವನ ಮಾತು ಯಾವಗ್ಲೂ ನೇರ ಮತ್ತ ನಿಷ್ಠುರ (ಹೆಂಡ್ತಿ ಜೋಡಿ ಓಂದ ಬಿಟ್ಟ ಮತ್ತ!). ಅಂವಗ ಅಪ್ಪಿ ತಪ್ಪಿ ನಾನು ಒಂದ ಸಲ ನಾ ನನ್ನ ಕೈಯ್ಯಾರೆ ರಚಿಸಿದ್ದ ಅದ್ಭುತ (ನನ್ನ ಮಟ್ಟಿಗೆ!) ಕಲಾಕೃತಿ ತೋರಿಸಿ ಬಿಟ್ಟೆ ನೋಡ್ರೀ, ಅದಕ್ಕ ಅಂವ "ಗುರು ನೀವು ಚೊಲೊ ಬರೀತಿರಿ ಅದನ್ನ ಬೇಕಂದ್ರ ಮುಂದುವರಸ್ರಿ" ಅಂದ ಬಿಡಬೇಕ! ನಾನ ಕಷ್ಟ ಪಟ್ಟು ತಗದದ್ದ ಪೇಂಟಿಂಗಿಗೆ ಈ ತರದ್ದು ಒಂದು ಪ್ರತಿಕ್ರಿಯೆ ಬಂದ ಮ್ಯಾಲೆ ನಾನು ಬರ್ಯೋದ್ ಜಾಸ್ತಿ ಮಾಡಿದ್ದಂತೂ ಖರೆ. ಚಿತ್ರಾನೂ ತಗೀತಿನಿ ಆದ್ರ ಅಂವಗ ತೋರ್ಸಂಗಿಲ್ಲ ಅಷ್ಟ!

ಮತ್ತ ನಮ್ಮ ಪಾರ್ಟಿ ಪ್ರಶಾಂತನ್ನ ಬಗ್ಗೆ ಹೇಳಬೇಕಂದ್ರ, ಅಂವನ ಸ್ವಭಾವಕ್ಕ ಆ ಹೆಸರು ಹೋದಂಗಿಲ್ಲ. ಅಂವಗ ಜಗಳ ಮಾಡಿಲ್ಲ ಅಂದ್ರ ಸಮಾಧಾನ ಇಲ್ಲ. ಅಂವಾ ಜಗಳಾ ಮಾಡಲಾರದ ವೇಟರ್ ಗಳು ಬೆಂಗಳೂರಿನ್ಯಾಗ ಯಾರೂ ಇಲ್ಲ! ಪ್ಲೇಟು ಸ್ವಚ್ಚ ಇಲ್ಲಾ ಅನ್ನುದರಿಂದ ಹಿಡಕೊಂಡು ಊಟಾ ತರೂದು ತಡ ಆತು ಅನ್ನೂ ತನ್ಕಾ ಅವ್ರ ಜೊತಿ ಕಾಲು ಕೆದರಿ ಜಗಳಾ ತಗದು ಬರ್ತಾನ! ಕಾರ್ ನ್ಯಾಗ ಹೋಂಟಾಗಂತೂ ದಾರಿಗುಂಟ ಬ್ಯಾರೆ ಚಾಲಕರಿಗೆ ಬೈಕೊಂತನ ಗಾಡಿ ಹೋಡಿತಾನ. ಆದ್ರ ಬೈಯ್ಯು ಮುಂದ ಕಾರಿನ ಗ್ಲಾಸ್ ಎರ್ಸಿರ್ತಾನ! ಹಿಂಗಾಗಿ ಇನ್ನೂ ಯಾರೂ ವಾಪಸ್ಸು ಅಂವಗ ಬೈದಿಲ್ಲ. ಯಾಕಂದ್ರ ಇಂವಾ ಬೈದಿದ್ದು ಯಾರಿಗೂ ಕೇಳ್ಸೇ ಇಲ್ಲ! ಹಾಡು ಚೊಲೊ ಹಾಡ್ತಾನ. ಆದ್ರ ಒಮ್ಮೆ ಹಾಡ್ಲಿಕ್ಕೆ ಸುರು ಮಾಡಿದ್ನಂದ್ರ ಮುಗ್ಸಂಗೇ ಇಲ್ಲ. 

ಇನ್ನ ನನ್ನ ಬಗ್ಗೆ ನಾನ ಬರ್ಕೋಳ್ಳೋದು ಸರಿ ಅನ್ಸಂಗಿಲ್ಲ. ಅದಕ್ಕ ನಾನಿಲ್ಲೆ ಸೂತ್ರಧಾರನಾಗೇ ಇರ್ತೀನಿ! ಈ ನಮ್ಮ ಗೆಳೆಯರ ಬಗ್ಗೆ ಬರಿಯೋ ವಿಷಯ ಇನ್ನೂ ಭಾಳ ಅವ. ಎಲ್ಲಾ ಈಗ ಬರದಬಿಟ್ರ ಬೋರಾದೀತು. ಈ ಬರಹಕ್ಕ ಎಷ್ಟು ಲೈಕು, ಕಮೇಂಟು ಬರ್ತಾವ ಅಂತ ನೋಡ್ಕೊಂಡು ಮುಂದ ಬರೀತಿನಿ! ನಾವು ಹೆಂಗ ಇದ್ರೂ ಒಬ್ಬರ ಮ್ಯಾಲೆ ಒಬ್ಬರಿಗೆ ಪ್ರೀತಿ ಅಭಿಮಾನ ಇನ್ನೂ ಇಟಗೊಂಡೀವಿ. ತಿಂಗಳಿಗೊಮ್ಮೆ ಇಲ್ಲಾ ಅಂದ್ರೂ ಆದಾಗಾದಗ ಸಿಗ್ತಿರ್ತೀವಿ. ಹೊಸಾ ಪರಿಸರಕ್ಕ ಹೋದಂಗ ಹೊಸ ಹೊಸ ಗೆಳ್ಯಾರು ನಮ್ಮ ಜೀವನದಾಗ ಬರ್ತಾರ. ಆದ್ರೂ ನಮ್ಮದೊಂದು ಗೆಳೆಯರ ಬಳಗ ಇಷ್ಟು ವರ್ಷ ಇನ್ನೂ ಸಂಪರ್ಕದಾಗ ಇರೋದು ಭಾಳ ಅಪರೂಪ ಅಂತ ನನ್ನ ಅಂಬೋಣ. ನೀವೇನಂತೀರಿ?      

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

36 Comments
Oldest
Newest Most Voted
Inline Feedbacks
View all comments
vitthal
vitthal
9 years ago

Mast baradiri… ವಿಟ್ಠಲ ಒಬ್ಬ ಕಲಾವಿದ ಮತ್ತ ಕಂಪುಟರ್ ಗ್ರಾಫಿಕ್ಸ್ ಪ್ರವೀಣ. ಅಂವನ ಮಾತು ಯಾವಗ್ಲೂ ನೇರ ಮತ್ತ ನಿಷ್ಠುರ (ಹೆಂಡ್ತಿ ಜೋಡಿ ಓಂದ ಬಿಟ್ಟ ಮತ್ತ!).  correct aagyadaa… 🙂 

Guruprasad Kurtkoti
9 years ago
Reply to  vitthal

ವಿಟ್ಠಲ, ನಿನಗ ಲೇಖನ ಸೇರಿದ್ದು ಕೇಳಿ ಖುಷಿ ಆತು! ಎಲ್ಲೆ ಸಿಟ್ಟಿಗೆದ್ದು ಬಿಡತೀಯೋ ಅಂದಕೊಂಡಿದ್ದೆ… ಇನ್ನೂ ಹೇಳಲಿಕ್ಕೆ ಬರೂದಿಲ್ಲ.. ನಿಮ್ಮ ಮನಿಯವರು ಬೈದ್ರೂ ಬೈಬಹುದು 🙂

ಹೆಸರ್ಯಾಕೆ ಬಿಡಿ..
ಹೆಸರ್ಯಾಕೆ ಬಿಡಿ..
9 years ago

ಛಲೋ ಅದ ಲೇಖ್ನಾ. ನಿಮ್ಮ ಟಿಪಿಕಲ್ ಶೈಲಿಯಲ್ಲಿ ಅರುಹಿದ ಪ್ರಶಾಂತಾಯಣದ ಮೊದಲರ್ಧ ಸಿಕ್ಕಾಪಟ್ಟೆ ಖುಶಿ ಕೊಟ್ಟಿತು. ಯಾವುದೇ ವಿಷಯಾಧಾರಿತವಲ್ಲದ ಲೇಖನ ಬರೆದರೂ ಅದನ್ನು ಹೇಗೆ ರಸವತ್ತಾಗಿ ಬರೀಬಹ್ದು ಅನ್ನೋದಕ್ಕೆ ಇದೇ ಉದಾಹರಣೆ. ಆ ಕಲೆ ನಿಮಗೆ ಸಿದ್ದಿಸಿದೆ. ಗೆಳೆತನದ ಅನುಭೂತಿ ಹಾಗೇನೆ. ಮೊಗೆದು ಬಾಚಿಕೊಳ್ಳುವುದರಲ್ಲಿಯೇ ಸುಖ; ಒರತೆ ಇರುವುದು ಗಮನಕ್ಕೆ ಬರಬೇಕಷ್ಟೇ. ನಿಮ್ಮ ಲೇಖನ ಓದಿದ ಮೇಲೆ, ಮಾರ್ಕ್ವೆಜ್ ಹೇಳಿದ್ದು ನೆನಪಿಗೆ ಬರುತ್ತಿದೆ- "There is always something left to love"

 

ನಿಮ್ಮ ಗೆಳೆಯರ ಬುತ್ತಿಯ ರೊಟ್ಟಿಗಳು ಹೀಗೇ ಒಂದೊಂದಾಗಿ ಹೊರಬರುತ್ತಿರಲಿ. ಅದರ ರುಚಿ ಸವಿಯುವ ಭಾಗ್ಯ ನಮ್ಮದಾಗಲಿ.

 

( ಕಾರಿನ ಗಾಜು ಏರಿಸಿ ಪಕ್ಕದವರಿಗೆ ಬೈಯ್ಯುವ ಪ್ರಶಾಂತರ ಶೈಲಿ ಸೊಗಸಾಗಿದೆ. ಹಾಗೆ, ಹೊಟೇಲಿನ ವೇಟರ್ಗಳಿಗೆ ಬೈದರೆ ಅವರು ಚಹ ತರುವಾಗ ಅದರಲ್ಲಿ ಲೈಟ್ ಆಗಿ ಎಂಜಲು ಉಗುಳಿ ನಮಗೆ ತಂದು ಕೊಡುತ್ತಾರೆ ಎಂಬುದು ನಾನು ಉಗುಳಿ; ಉಗುಳಿಸಿಕೊಂಡ ಅನುಭವದ ಮಾತು ! ಇದನ್ನು ಅವರು ಇನ್ನೊಮ್ಮೆ ತಮಗೆ ಫೋನ್ ಮಾಡಿದಾಗ ತಿಳಿಸಿಬಿಡಿ. ಹೇಗಂದರೂ ಕರವಸ್ತ್ರ ನಿಮ್ಮ ಕೈಯ್ಯಲಿ ಇದ್ದೇ ಇರುತ್ತದಲ್ಲ !)

 

 

Guruprasad Kurtkoti
9 years ago

'ಹೆಸರ್ಯಾಕೆ ಬಿಡಿ' ಅವ್ರೆ, ನೀವು ಯಾರು ಅಂತ ನಮಗೆ ಗೊತ್ತಾಯ್ತು ಬಿಡಿ :). ಅಂದ ಹಾಗೆ ನೀವು ಗೆಳೆತನದ ಬಗ್ಗೆ ಹೇಳಿದ್ದು ಸರಿ ಇದೆ. ಅದು ಗೆಳೆತನಕ್ಕೊಂದೆ ಅಲ್ಲ, ಎಲ್ಲ ಸಂಬಂಧಗಳಿಗೂ ಅನ್ವಯಿಸುತ್ತೆ. ಇಷ್ಟು ದೊಡ್ಡ ಕಮೆಂಟು ನಿಮ್ಮಿಂದ ನೋಡಿ ತುಂಬಾ ದಿನ ಆಗಿತ್ತು, ಓದಿ ಖುಷಿಯಾಯ್ತು!

ಮೂರ್ತಿ
ಮೂರ್ತಿ
9 years ago

ಚೆನ್ನಾಗಿ ಬರೆದಿದ್ದೀರಿ. ಫೇಸುಬುಕ್ಕಿನ ಆಪ್ಶನ್ನು, ಪ್ರಶಾಂತನ ಫೋನು, ಕಾರಲ್ಲಿ ಕುಳಿತು ಬೈಗುಳದ ಆಪರೇಷನ್ನು… ಇತ್ಯಾದಿಗಳು ನಿರೂಪಣಾ ಶೈಲಿಯಿಂದ ನಗೆ ಉಕ್ಕಿಸುತ್ತವೆ. ಫೋನಿನಲ್ಲಿ ಮಾತನಾಡುತ್ತ ಹತ್ತಿರದವರಿಗೆ ಬೈಯ್ಯುವ ಸ್ಟೈಲ್ ನೀವು ಒಮ್ಮೆ ಹಿಂದೆ ಹೇಳಿದ್ದು ನೆನಪಾಯಿತು. ಒಂದು ವಿಷಯ ಹೇಳಬೇಕೆನ್ನಿಸುತ್ತಿದೆ. ಲೇಖನದ ಮಧ್ಯದ ೨೦-೩೦ ಶಬ್ದಗಳಶ್ಟು 'ಟ್ರಿಮ್' ಮಾಡಿದ್ದಿದ್ದರೆ ಇನ್ನೂ ಪ್ರಭಾವಿಯಾಗಿರುತ್ತಿತ್ತೇನೋ. ಆದರೆ ಅದರಿಂದ ಲೇಖನದ ಓಘಕ್ಕೆ ಹೊಡೆತವೇನೂ ಬಿದ್ದಿಲ್ಲ ಬಿಡಿ. ಯಾವುದೂ ಹೀಗೇ ಬರೆಯುತ್ತಿರಿ. ತಮ್ಮ ಅಂಕಣ ಬರಹಗಳು ಪಂಜುವಿನಲ್ಲಿ ಆದಷ್ಟೂ ಬೇಗ ಶುರುವಾಗಲಿ ಎಂಬ ನಿರೀಕ್ಶೆಯಲ್ಲಿ….

 

Guruprasad Kurtkoti
9 years ago

ಮೂರ್ತಿ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು!

ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
9 years ago

ನಿಮ್ಮಈ ಲಲಿತ ಪ್ರಭಂದ ,ಸಂಭಂದಗಳನ್ನು ಸ್ಪಷ್ಟೀಕರಿಸಿದರೂ ,ತಾವು ಹೇಳಬೇಕಾದ ವಿಷಯ ಹೊರಗೆಡವಿಲ್ಲ ಎಂಬುದು ಇಲ್ಲಿನ ಕೊರತೆ. ಆದಾಗ್ಯೂ ನಿಮ್ಮ ಪ್ರಯತ್ನ ಚೆನ್ನಾಗಿದೆ . ಈ ಹಿಂದೆ ನಮಗೆ ಖುಷಿ ಕೊಟ್ಟಂತೆ ಈ ಲಲಿತ ಪ್ರಭಂದ, ಲಲಿತ-ರಹಿತ ಎನಿಸಿದೆ

Guruprasad Kurtkoti
9 years ago

ಶ್ರೀಧರ್ ಗುರುಗಳೆ, ನೀವು ಹೀಗೆ ಕಿವಿ ಹಿಂಡುತ್ತಿದ್ದರೆ ನಾವು ಸುಧಾರಿಸುವುದು! ಮುಂದಿನ ಸಲ ಲಲಿತೆಯ ಜೊತೆಗೆ ಬರುವೆ! ಧನ್ಯವಾದಗಳು 🙂

Sadanand Arkasali
Sadanand Arkasali
9 years ago

Preeya Guruprasad, Nimma Gandumettina Uttarakarnatakada gandu hashya bharita shaili nanage bahala istavayitu. Neevu Huilgol Narauanarayara vanshadavaru, nimmamma valleya sahiti aagidru, avara aashirvad ninna mele ide,  valleya bhavisha ide,  munduvarisu shubhavagali.

Guruprasad Kurtkoti
9 years ago

ಸದಾನಂದ ಅರ್ಕಸಾಲಿ ಸರ್, ನಿಮ್ಮಂಥ ಹಿರಿಯರು ಲೇಖನವನ್ನು ಓದಿ ಮೆಚ್ಚಿದ್ದು ನೋಡಿ ಖುಷಿಯಾಯ್ತು!

Prashant B K
Prashant B K
9 years ago

Ondu anto khare helatini sir, inmunda phone madidaga heli ugalateni!

Guruprasad Kurtkoti
9 years ago
Reply to  Prashant B K

ಪ್ರಶಾಂತ, ಹೇಳ್ಯರೆ ಉಗುಳು, ಹೇಳ್ದ ಕೇಳ್ದ ಅರೆ ಉಗುಳು, ಆದರ ಉಗುಳು ಬದ್ಲಿ ಮೊಬೈಲ್ ಮಾತ್ರ ಘಟಾರ್ ನ್ಯಾಗ ಒಗಿಬ್ಯಾಡ ಮತ್ತ! 🙂

narayana.M.S.
narayana.M.S.
9 years ago

Well writtern. Perhaps there is a prashanth in every gang. At least there is one in mine. 

Guruprasad Kurtkoti
9 years ago
Reply to  narayana.M.S.

ನಾರಾಯಣ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ಅಂದ ಹಾಗೆ ಪ್ರತಿಯೊಂದು ಸ್ನೇಹಿತರ ಬಳಗದಲ್ಲೊಬ್ಬ ಇಂಥ 'ಪ್ರಶಾಂತ'ರಿದ್ದರೆ ಚೆನ್ನ ಅಲ್ಲವೆ? 🙂

chandan
chandan
9 years ago

Lekhana mattu nim snehitara nantu bahala chennagide.. 🙂 eega prashant avru namge guru galagiddare 🙂

Guruprasad Kurtkoti
9 years ago
Reply to  chandan

ಚಂದನ್, ಧನ್ಯವಾದಗಳು! ಅಂತೂ ಗುರು-ಶಿಶ್ಯ ಪರಂಪರೆ ಮುಂದುವರಿದಿದೆ ಅಂತಾಯ್ತು! ಆದ್ರೆ ನಿಮ್ಮ ಗುರುಗಳಿಗೆ ಫೋನ್ ಮಾಡಿದಾಗ ಕೈಯ್ಯಲ್ಲೊಂದು ಕರವಸ್ತ್ರ ಇಟ್ಟುಕೊಂಡಿರಿ ಅಷ್ಟೆ! 🙂

amardeep.p.s.
amardeep.p.s.
9 years ago

mast ide ri  geleyara balagada haasya prasangagalu……..

Guruprasad Kurtkoti
9 years ago
Reply to  amardeep.p.s.

ಅಮರ್ ದೀಪ್, ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು!

Mahesh G
Mahesh G
9 years ago

GK Bhai… well written… i am great follower of your writings… and gives a bit of relief from work tensions… 🙂

Guruprasad Kurtkoti
9 years ago
Reply to  Mahesh G

ಮಹೇಶ್, ನನ್ನ ಲೇಖನಗಳು ನಿಮ್ಮನ್ನು ಕೆಲಸದ ಒತ್ತಡದಿಂದ ಹೊರತರುತ್ತಿರುವ ವಿಷಯ ಓದಿ ನನಗೆ ಇನ್ನೊ ಬರೆಯುವ ಸ್ಪೂರ್ತಿ ಬಂತು! ಧನ್ಯವಾದಗಳು!

ವನಸುಮ
9 years ago

ಬಾಳ್ ಚಲೋ ಬರದೀರ್ ತೆಗಿರಿ… ಫೇಸ್ ಬುಕ್ ನಾಗ ಇನ್ನೊಂದು ಆಪ್ಶನ್ ಇಡಾಕ್ ಬೇಕು… ಸಿಕ್ಕಾಪಟ್ಟೆ ಲೈಕ್ ಆದಾಗ ಒಂದ್ ಲೈಕ್ ಒತ್ತಿದ್ರ ನೂರೊ ಸಾವರನೊ ಲೈಕ್ ಬಿಳಾಕ್ ಬೇಕ ಹಂಗ.. ಚಲೊ ಬರದೀರಿ, ಹಿಂಗ ಬರೀತಾ ಇರ್ರೀ.

ಶುಭವಾಗಲಿ.

Guruprasad Kurtkoti
9 years ago

ಗಣೇಶ, ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು! ನೀವ್ ಹೇಳಿದ್ದ ಒಪ್ಷನ್ನೂ ಚೊಲೊ ಅದ ಬಿಡ್ರೀ! 🙂

ಪ್ರಕಾಶ ಮೂಲಿಮನಿ
ಪ್ರಕಾಶ ಮೂಲಿಮನಿ
9 years ago

ಗುರುಗಳೆ,

ಗೆಳೆಯರ ಬಳಗ ಚನ್ನಾಗಿದೆ! ಆದರೆ ಪ್ರಶಾಂತ sir ಅವರು ಗೊತ್ತಿರುವವರಿಗೆ ಬೇಯುವದಿಲ್ಲ. ನೀವೇನು ನಿಮಗೆ ಬೈದರೆನೂ ಅಂದುಕೊಳ್ಳಬೇಕಾಗಿಲ್ಲ…:)

Guruprasad Kurtkoti
9 years ago

ಪ್ರಕಾಶ, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು! ಅಂದ ಹಾಗೆ ನಿಮಗೆ ಗೊತ್ತಿರಲಿಕ್ಕಿಲ್ಲ, ಅವರು ತಮಗೆ ಗೊತ್ತಿದ್ದವರಿಗೆ ಇನ್ನೂ ಜಾಸ್ತಿನೇ ಬೈಯ್ಯೋದು! 🙂

umesh desai
umesh desai
9 years ago

mast ada vitthal nimma mele innu daave yaaka haakilla

Guruprasad Kurtkoti
9 years ago
Reply to  umesh desai

ಉಮೇಶ, ಧನ್ಯವಾದಗಳು! ಮನ್ಯಾಗ ಒಂದ ಮಾತ್ ಕೇಳಿ ದಾವೆ ಹಾಕ್ತೀನಿ ಅಂತ ಹೇಳ್ಯಾರ. 🙂

praveen
praveen
9 years ago

super

 

Prakasha
Prakasha
9 years ago

Super !!!! 

Guruprasad Kurtkoti
9 years ago

ಪ್ರವೀಣ, ಪ್ರಕಾಶ, ಧನ್ಯವಾದಗಳು!

Gaviswamy
9 years ago

ಚೆನ್ನಾಗಿದೆ ಸರ್.

Guruprasad Kurtkoti
9 years ago
Reply to  Gaviswamy

ಗವಿಸ್ವಾಮಿ, ಧನ್ಯವಾದಗಳು!

sangeeta
sangeeta
9 years ago

Certainly you should write more about your “geleyara balaga”…no of likes and comments say so☺

Guruprasad Kurtkoti
9 years ago
Reply to  sangeeta

ಸಂಗೀತಾ, ಮುಂದಿನ ಕಂತು ಬರೀಲಿಕ್ಕೆ ಇದಕ್ಕಿಂತ ಸ್ಪೂರ್ತಿ ಬೇಕೆ? ಈಗಿಂದೀಗ ಶುರು ಮಾಡ್ತೀನಿ. 🙂

 

meghana
meghana
9 years ago

 ega ododu mugaside………

ok nimmadu observation correct irabahudu?!

trackback

[…] ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! ಇಲ್ಲಿದೆ ಅದರ […]

narayan babanagar
narayan babanagar
9 years ago

nice

36
0
Would love your thoughts, please comment.x
()
x