ಸ್ನೇಹ ಭಾಂದವ್ಯ (ಭಾಗ 5): ನಾಗರತ್ನಾ ಗೋವಿಂದನ್ನವರ


(ಇಲ್ಲಿಯವರೆಗೆ)

ಇತ್ತ ಸಂಜೆ ಆಫೀಸಿನಿಂದ ಮನೆಗೆ ಎಂದ ರಾಜೇಶ ತುಂಬಾ ಖುಷಿಯಾಗಿರುವದನ್ನು ಗಮನಿಸಿದ ಪದ್ಮಮ್ಮ ಏನೋ ರಾಜೇಶ ಇವತ್ತು ತುಂಬಾ ಖುಷಿಯಾಗಿದೆಯಲ್ಲೋ ಏನಾದರೂ ಲಾಟರಿ ಹೊಡೆಯಿತೇನೋ ಎಂದಳು. ಆಗ ರಾಜೇಶನಿಗೆ ಬೇಸರವಾಗಿ ಹೋಗಮ್ಮ ನಿನಗ್ಯಾವಾಗಲು ದುಡ್ಡಿನದೇ ಚಿಂತೆ ಎನ್ನುತ್ತಾ ತನ್ನ ರೂಮಿಗೆ ಹೋದ. ಅವನಿಗೆ ಬೇಗ ನಿದ್ದೆ ಬರದೆ ತನ್ನ ಕಾಲೇಜಿನ ದಿನಗಳು ನೆನಪಾದವು. ತನ್ನ ಸಹಪಾಠಿಯಾದ ಸುನಿತಾಳನ್ನು ತುಂಬಾ ಪ್ರೀತಿಸುತ್ತಿದ್ದ. ದಿನಾ ಅವಳನ್ನು ನೋಡುತ್ತಾ ತನ್ನ ಮನದಲ್ಲಿರೋದನ್ನ ಅವಳಿಗೆ ಹೇಳಬೇಕು ಅಂತ ಎಷ್ಟೊಂದು ಬಾರಿ ಪ್ರಯತ್ನಿಸಿದರೂ ಆಗುತ್ತಿರಲಿಲ್ಲ. ಒಂದು ದಿನ ಹೇಗಾದ್ರು ಮಾಡಿ ಅವಳಿಗೆ ತಾನು ಅವಳನ್ನು ಪ್ರೀತಿಸುತ್ತಿರುವುದನ್ನು ಹೇಳಬೇಕು ಅಂದುಕೊಂಡು ಅವಳು ಲೈಬ್ರರಿಯಲ್ಲಿರುವುದು ತಿಳಿದು ಅಲ್ಲಿಗೆ ಹೋಗಿದ್ದ. ಆಗ ಅವಳು ಅಲ್ಲಿ ಯಾವುದೋ ಹುಡುಗನ ಜೊತೆ ಮಾತಾಡೋದನ್ನ ಕೇಳಿಸಿಕೊಂಡ ಅವನಿಗೆ ತಲೆ ಸುತ್ತಿದ ಹಾಗಾಗಿತ್ತು. ಅವಳಿಗೆ ಈಗಾಗಲೇ ಮದುವೆಯಾಗಿದೆ ಅಂತ ಗೊತ್ತಾಗಿತ್ತು. ಅವಳು ಆ ಹುಡುಗನನ್ನು ಗುಟ್ಟಾಗಿ ಮದುವೆಯಾಗಿದ್ದು, ಯಾರಿಗೂ ಆ ವಿಷಯ ಗೊತ್ತಾಗದಂತೆ ಇದ್ದಳು. ಇದೇ ವಿಷಯವಾಗಿ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿರೋದನ್ನ ತಿಳಿದುಕೊಂಡ. ಅವನಿಗೆ ತುಂಬಾ ಬೇಸರವಾಯಿತು ತಾನು ಇಷ್ಟ ಪಟ್ಟ ಹುಡುಗಿ ನನ್ನವಳಲ್ಲಾ ಎಂದು ಅದೆಷ್ಟೋ ಅತ್ತಿದ್ದ. ಆ ದಿನ ಏನೊ ಕಳೆದುಕೊಂಡಂತೆ ಒದ್ದಾಡಿತ್ತು ತನ್ನ ಮನಸ್ಸು ಆದರೂ ತನ್ನ ಮನಸ್ಸಿಗೆ ತಾನೆ ಸಮಾಧಾನ ಹೇಳಿಕೊಂಡಿದ್ದ ಮೊದಲೆ ಮದುವೆಯಾಗಿರುವ ಹುಡುಗಿ ತನ್ನವಳಾಗಲು ಹೇಗೆ ಸಾಧ್ಯ. ತಪ್ಪು ನನ್ನದೆ ಅವಳ ಬಗ್ಗೆ ಏನು ತಿಳಿಯದೆ ಪ್ರೀತಿಸಿದ್ದು ಎಂದು ತನ್ನ ಮನಸ್ಸನ್ನು ಹತೋಟಿಗೆ ತಂದುಕೊಂಡು ನಡೆದುದೆಲ್ಲವನ್ನು ಮರೆಯಲು ಪ್ರಯತ್ನಿಸಿದ್ದು ಎಲ್ಲಾ ನೆನಪಾಯಿತು ಅವನಿಗೆ. ಆಗಿದ್ದೆಲ್ಲವು ಒಳ್ಳೆಯದೆ ಅಂತ ಈಗನಿಸ್ತಾ ಇದೆ ಇಲ್ಲಾಂದ್ರೆ ಸುಧಾಳಂತ ಮುದ್ದಾದ ಹುಡುಗಿ ನನ್ನ ಜೀವನದಲ್ಲಿ ಬರೋಕಾಗ್ತಾ ಇತ್ತಾ ಎಂದು ಯೋಚಿಸುತ್ತಿದ್ದ. ಅವನ ಮನಸ್ಸು ಮಾತ್ರ ನಾಳೆ ಸಂಜೆ ಯಾವಾಗ ಆಗುತ್ತದೋ ಎಂದು ಚಡಪಡಿಸಿದ. 

ಮರುದಿನ ಎಂದಿನಂತೆ ಬ್ಯಾಂಕಿಗೆ ಹೋದರೂ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. ಸಂಜೆ ೫ ಗಂಟೆಯಾಗುತ್ತಲೆ ಪಾರ್ಕಿಗೆ ಹೋಗಬೇಕು ಎನ್ನುತ್ತಾ ಸಮಯ ಕಳೆಯತೊಡಗಿದ. ಅವನು ಸಮಯ ಆಗುತ್ತಲೇ ಪಾರ್ಕಿನಲ್ಲಿ ಹಾಜರಿದ್ದ, ಅನಂತರ ಸುಧಾ ಬಂದಳು. ಅವನನ್ನು ನೋಡಿ ಹೇಗೆ ಮಾತಾಡುವುದು ಎಂದು ಮಾನಸಿಕವಾಗಿ ಸಿದ್ಧವಾಗತೊಡಗಿದಳು. ಹಲೋ ಸುಧಾರವರೇ ಏನು ಬರಹೇಳಿದ್ದು ಎಂದು ರಾಜೇಶನೆ ಮಾತಿಗಾರಂಭಿಸಿದ. ನಿಮ್ಮಿಂದ ಒಂದು ಸಹಾಯ ಆಗಬೇಕು ರಾಜೇಶರವರೇ ಎಂದಳು ಸುಧಾ. ಅದೇನುಂತ ಹೇಳಿ ನನ್ನಿಂದ ಸಾಧ್ಯ ಆಗುವುದಾದರೆ ಖಂಡಿತಾ ಮಾಡುವೆ ಎಂದು ರಾಜೇಶ ನುಡಿದ. ನಾನಿನ್ನು ಓದಬೇಕೂಂತ ಇದ್ದೀನಿ ಆದರೆ ನಮ್ಮನೇಲಿ ಆಗಲೇ ಮದುವೆ ಮಾಡೋಕೆ ಸಿದ್ಧವಾಗಿದ್ದಾರೆ ಎಂದಳು. ನೀವು ಒಂದೆರಡು ವರ್ಷ ಕಾದರೆ ಓದು ಮುಗಿಯುತ್ತದೆ. ಇಲ್ಲ ನಿಮಗೆ ತುಂಬಾ ಅವಸರ ಇದ್ದರೆ ನೀವು ಬೇರೆಯವರನ್ನ ಮದುವೆಯಾಗಬಹುದು. ಆಗ ರಾಜೇಶ ಬೇಸರದಿಂದ ಬೇರೆಯವರನ್ನ ಮದುವೆಯಾಗೋದು ಬಿಡೋದು.. ನೀವೇನೂ ಹೇಳಬೇಕಿಲ್ಲ ಎಂದಾಗ ಅವನ ಮನಸ್ಸಿಗೆ ನೋವಾಗಿದೆ ಎಂದನಿಸಿತು ಸುಧಾಳೀಗೆ ಅವಳು ಏನೋ ಹೇಳಬೇಕೆನ್ನುವಷ್ಟರಲ್ಲಿ ರಾಜೇಶನೇ ನೋಡಿ ಸುಧಾ ನನಗೆ ನೀವು ತುಂಬಾ ಇಷ್ಟವಾಗಿದ್ದೀರ.  ಮದುವೆಯಾದರೆ ನಿಮ್ಮನ್ನೆ ಮದುವೆಯಾಗೋದು ಅಂತ ನಿರ್ಧಾರ ಮಾಡಿದ್ದೇನೆ. ಇನ್ನು ನಿಮ್ಮ ಓದಿನ ಚಿಂತೆ ನೀವು ಮದುವೆಯಾದ ಮೇಲು ಓದಬಹುದು ಅದಕ್ಕೆ ನಾನು ತೊಂದರೆ ಮಾಡಲ್ಲ ಆದರೆ ದಯವಿಟ್ಟು ಮದುವೆ ಮಾತ್ರ ಮುಂದಕ್ಕೆ ಹಾಕಬೇಡಿ. ಇಷ್ಟರ ಮೇಲೆ ನಿಮ್ಮಿಷ್ಟಾ ಎಂದು ಹೇಳಿ ಅಲ್ಲಿ ನಿಲ್ಲದೆ ಹೋಗಿಬಿಟ್ಟ.

ಆಗ ಸುಧಾಳಿಗೆ ತುಂಬಾ ಸಂತೋಷವಾಯಿತು ಅವಳು ನೇರವಾಗಿ ರೇಖಾಳ  ಮನೆಗೆ ಹೋಗಿ ರೇಖಾಳಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದಳು. ಆಗ ರೇಖಾ ಇನ್ನೆನ್ನೆ ನಿನ್ನ ಸಮಸ್ಯೆ ಪರಿಹಾರ ಆಯಿತಲ್ಲಾ ನಾಳೆನೆ ನಾನು ಮದುವೆಗೆ ಒಪ್ಪಿದ್ದೀನಿ ಅಂತ ನಿನ್ನ ಹುಡುಗನಿಗೆ ತಿಳಸಿಬಿಡು  ಎಂದಳು. ಸುಧಾಳಿಗು ಅದೇ ಸರಿ ಅನಿಸಿತು. ಅವಳು ಮರುದಿನ ರಾಜೇಶನಿಗೆ ತಾನು ಮದುವೆಗೆ ಒಪ್ಪಿರುವುದಾಗಿ ಫೋನ್ ಮಾಡಿ ಹೇಳಿದಳು. ಇದರಿಂದ ರಾಜೇಶನಿಗೂ ಸಮಾಧಾನವಾಯಿತು. ಅವನು ತುಂಬಾ ಸಂತೋಷವಾಗಿದ್ದ. ಕಚೇರಿಯಲ್ಲಿ ಸಹದ್ಯೋಗಿಗಳು ಏನೋ ರಾಜೇಶ ಇವತ್ತು ತುಂಬಾ ಖುಷಿಯಾಗಿದ್ದೀಯಾ ಏನೋ ವಿಷಯ ಎಂದು ಕೇಳಿದರು. ಏನು ಇಲ್ಲಾ ಮೊನ್ನೆ ಹುಡುಗಿ ನೋಡೊಕೆ ಹೋಗಿದ್ದೆ ತುಂಬಾ ಇಷ್ಟಾ ಆಗಿದ್ದಾಳೆ ಎಂದು ಹೇಳಿದ. ಒಹೋ ಹೌದೇನೋ ರಾಜೇಶ ಯಾವಗಪ್ಪ ಮದುವೆ ಊಟಾ ನಮಗೆಲ್ಲ ಎನ್ನುತ್ತಾ ಶ್ರೀಕಾಂತ ಕೇಳಿದ. ಸದ್ಯದಲ್ಲಿಯೆ ಎಲ್ಲಾ ಹೇಳ್ತಿನಿ ಬಿಡು ಎಂದು ರಾಜೇಶ ಹೇಳಿದ. ಆಯಿತು ಬಿಡು ನನಗು ಒಂದು ಹುಡುಗಿ ಹುಡುಕಪ್ಪಾ ಎಂದ ಅದಕ್ಕೆ ರಾಜೇಶ ಆಯಿತು ನನಗೆ ಗೊತ್ತಾದರೆ ಖಂಡಿತಾ ಹೇಳ್ತಿನಪ್ಪಾ ಈಗ ಕಾಫಿ ಕುಡಿಯೋಣ ನಡಿ ಎಂದು ಇಬ್ಬರು ಹೊರಗಡೆ ನಡಿದರು.  ಶ್ರೀಕಾಂತ ರಾಜೇಶನಿಗೆ ತುಂಬಾನೆ ಆಪ್ತಮಿತ್ರನಾಗಿದ್ದ.

ರಜೆಗಳು ಮುಗಿದಿದ್ದರಿಂದ ರೇಖಾ ಶಿವಮೊಗ್ಗಕೆ ಹೋಗಲು ತಯಾರಾದಳು. ಆದರೆ ಅವಳಿಗೆ ಸುಧಾಳನ್ನು ಬಿಟ್ಟು ಹೊಗಲು ಮನಸ್ಸು ಬರುತ್ತಿಲ್ಲ ನೀನು ಬಂದು ಬಿಡು ನಿನ್ನ ನಿಶ್ಚಿತಾರ್ಥದ ಹಿಂದಿನ ದಿನ ಬರುವೆಯಂತೆ ಅಂದಾಗ ಕಾವೇರಮ್ಮ ಇಲ್ಲಮ್ಮ ರೇಖಾ ಈಗ ಅವಳು ಎಲ್ಲಿಗೂ ಬರೊಲ್ಲ ಮದುವೆಯಾಗೊವರೆಗೂ ಮನೇಲೆ ಇರಲಿ. ಮನೆಯಲ್ಲಿಯೇ ಇದ್ದುಕೊಂಡು ಓದಲಿ. ಪರೀಕ್ಷೆಗೆ ಬರ್‍ತಾಳೆ ಬಿಡು ಎಂದಳು. ಆಗ ರೇಖಾ ಸುಧಾಳ ಅಸಹಾಯಕ ಮುಖ ಕಂಡು ಸುಮ್ಮನಾದಳು. ನಾನಿನ್ನು ಹೊರಡ್ತೀನಿ ಸುಧಾ ಎನ್ನುತ್ತಾ ಅವಳ ಮನೆಯಿಂದ ಹೊರಗೆ ಬಂದಳು. ಸುಧಾಳಿಗೂ ರೇಖಾಳಿಂದ ದೂರ ಇರುವುದು ಕಷ್ಟ ಅನಿಸಿತು. ಆದರೂ ಅವಳು ನಗುತ್ತಾ ಹೋಗಿ ಬಾ ರೇಖಾ ಎಂದು ಅವಳಿಗೆ ಕೈ ಬೀಸಿದಳು. ಅದಕ್ಕೆ ಪ್ರತಿಯಾಗಿ ರೇಖಾ ಕೈ ಬೀಸಿದಳು. ಅಂದುಕೊಂಡಂತೆ ರೇಖಾ ಆ ದಿನ ಶಿವಮೊಗ್ಗಕ್ಕೆ ಹೋದಳು. ಏನೇ ರೇಖಾ ನೀನು ಒಬ್ಬಳೆ ಬಂದಿದ್ದೀಯಾ ಸುಧಾ ಎಲ್ಲಿ ಎಂದು ಸೌಮ್ಯ ಕೇಳಿದಳು. ಇಲ್ಲಾ ಅವಳಿಗೆ ನಿಶ್ಚಿತಾರ್ಥ ಗೊತ್ತಾಗಿದೆ ಕಣೆ ಅವಳಿನ್ನು ಅದೆಲ್ಲ ಮುಗಿದ ಮೇಲೇನೆ ಬರ್‍ತಾಳೆ. ಓ ಹೌದೇನೆ ಮತ್ತೆ ನಮಗ್ಯಾರಿಗು ಅವಳು ತನ್ನ ನಿಶ್ಚಿತಾರ್ಥಕ್ಕೆ ಕರೀಲೆ ಇಲ್ಲವಲ್ಲೆ. ಅಯ್ಯೋ ಸೌಮ್ಯ ನೀನೊಬ್ಬಳು ಇನ್ನು ಸಮಯ ಇದೆ ಕಣೆ ಎಲ್ಲರನ್ನೂ ಕರಿತೀನಿ ಅಂತ ಹೇಳಿದ್ದಾಳೆ. ಹೌದಾ ಹಾಗಾದ್ರೆ ಸರಿ ಬಿಡು ಎನ್ನುತ್ತಾ ಸೌಮ್ಯ ತನ್ನ ರೂಮಿನೊಳಗೆ ಹೋದಳು.  

ಇತ್ತ ಸುಧಾಳ ನಿಶ್ಚಿತಾರ್ಥದ ಸಿದ್ಧತೆ ಭರದಿಂದ ಸಾಗಿತು. ಸುಧಾ ತನ್ನ ನಿಶ್ಚಿತಾರ್ಥ ಇನ್ನು ಒಂದು ವಾರವಿದೆ ಅಂದಾಗಲೆ ಅವಳು ರೇಖಾಳಿಗೆ ತನ್ನ ನಿಶ್ಚಿತಾರ್ಥಕ್ಕೆ ಬಾ ಹಾಗೆ ಉಳಿದ ಗೆಳತಿಯರೆಲ್ಲರಿಗೂ ಬರೋದಿಕ್ಕೆ ಹೇಳು ಎಂದು ಪತ್ರ ಬರೆದಿದ್ದಳು. ಮತ್ತು ಹೋಗಿ ಅವಳ ಮನೆಯವರಿಗೂ ಹೇಳಿ ಬಂದಿದ್ದಳು. ಇವಳ ಪತ್ರ ಓದಿ ರೇಖಾಳಿಗೆ ತುಂಬಾ ಸಂತೋಷವಾಯಿತು. ಅವಳು ಉಳಿದ ಗೆಳತಿಯರಿಗೂ ಹೇಳಿದಳು. ಅದಕ್ಕವರು ಒಬ್ಬೊಬ್ಬರು ಒಂದೊಂದು ರೀತಿ ಆಡಿಕೊಂಡರು. ಬಿಡೆ ರೇಖಾ ಅವಳು ನಿನ್ನೊಬ್ಬಳಿಗೆ ತಾನೆ ಕಾಗದ ಹಾಕಿರೊದು ನಮಗೇನು ಹಾಕಿಲ್ಲವಲ್ಲ ಬಿಡು ನಾವೆಲ್ಲ ಬರಲ್ಲಾ ನೀನು ಬೇಕಿದ್ದರೆ ಹೋಗು ಎಂದರು. ಅದಕ್ಕವಳು ಸರಿ ನಿಮ್ಮಿಷ್ಟ ಎಂದು ಸುಮ್ಮನಾದಳು.  ಅವಳು ಊರಿಗೆ ಬಂದಿಳಿದಳು. ಅವಳು ಬರೋವಾಗ ಸುಧಾಳಿಗೊಂದು ಚಿಕ್ಕ ಉಡುಗೊರೆಯೊಂದನ್ನು ತಂದಿದ್ದಳು. ನಿಶ್ಚಿತಾರ್ಥದ ದಿನ ಬಂದೇ ಬಿಟ್ಟಿತು ರೇಖಾ ತನ್ನ ತಾಯಿಯೊಡನೆ ಸುಧಾಳ ಮನೆಗೆ ಬಂದಳು. ಸುಧಾಳ ಮನೆ ನೆಂಟರಿಷ್ಟರೊಂದಿಗೆ ತುಂಬಿಕೊಂಡಿತ್ತು. ರೇಖಾಳನ್ನು ನೋಡಿದ ಸುಧಾ ಓಡಿ ಬಂದು ರೇಖಾಳನ್ನು ತಬ್ಬಿಕೊಂಡಳು. ಏನೇ ಚೆನ್ನಾಗಿದ್ದಿಯಾ ಎಂದು ಸುಧಾ ರೇಖಾಳನ್ನು ಕೇಳಿದಳು. ನಾನು ಚೆನ್ನಾಗಿದ್ದೇನೆ ನೀನು ಹೇಗಿದ್ದೀಯಾ ಎಂದಳು. ಏನಕ್ಕಾ ನನ್ನನ್ನ ಮಾತಾಡಿಸೊಲ್ವಾ ಎಂದನು ಚಂದ್ರು. 

ಓ ನಿನ್ನ ಮರೆಯೋಕಾಗತ್ತಾ ತಗೊ ಇದು ನಿನಗೆ ಎಂದು ಚಾಕಲೇಟ್ ಕೊಟ್ಟಳು. ಅವನು ರೇಖಾಳೀಗೆ ಥ್ಯಾಂಕ್ಸ್ ಹೇಳಿದ. ಆಗ ರೇಖಾ ಸುಧಾಳಿಗೆಂದು ತಂದ ಉಡುಗೊರೆಯನ್ನು ಕೊಟ್ಟಳು. ಸುಧಾ ಆತುರದಿಂದ ಬಿಚ್ಚಿ ನೋಡಿದಳು ಅದರಲ್ಲಿ ಸ್ವಚ್ಛಂದವಾಗಿ ಹಾರಡುವ ಎರಡು ಹಕ್ಕಿಗಳ ಚಿತ್ರದ ಪೇಂಟಿಂಗ್ ಆಗಿತ್ತು. ಎಷ್ಟು ಸುಂದರವಾಗಿದೆ ಎಂದಳು ಸುಧಾ. ಇದು ನನ್ನ ಚಿಕ್ಕ ಕಾಣಿಕೆ ನಮ್ಮಿಬ್ಬರ ಸ್ನೇಹದ ಪ್ರತೀಕವಾಗಿರಲಿ ಎಂದಳು. ಸುಧಾಳ ಕಣ್ಣಲ್ಲಿ ನೀರು ಬರುವುದನ್ನು ನೋಡಿದ ರೇಖಾ ಛಿ ಏನಿದು ಇವತ್ತು ಸಂತೋಷದ ದಿನ ತಿಳಿತಾ ಎಲ್ಲಿ ನಿನ್ನ ಭಾವಿಗಂಡ ಎಂದಳು ಗೆಳತಿಯನ್ನು ಛೇಡಿಸಿದಳು. ಅಷ್ಟೊತ್ತಿಗೆ ಇವರನ್ನು ನೋಡಿದ ಕಾವೇರಮ್ಮ ಬನ್ನಿ ಬನ್ನಿ ರಾಧಮ್ಮನವರೇ ಎನ್ನುತ್ತಾ ರಾಧಮ್ಮಳನ್ನು ಒಳಗೆ ಕರೆದುಕೊಂಡು ಹೋದಳು. ನೀನು ಬಾರೇ ಎನ್ನುತ್ತಾ ಸುಧಾ ರೇಖಾಳನ್ನು ಕರೆದುಕೊಂಡು ಹೋದಳು. ರೇಖಾ ಸುಧಾಳಿಗೆ ಸಿಂಗರಿಸಿದಳು. ಸುಧಾ ನೀನು ಅಪ್ಸರೆ ತರಹ ಕಾಣಿಸ್ತಿದಿಯಾ ಕಣೆ. ನಿನ್ನ ಹುಡುಗನ ಗತಿ ಅಧೋಗತಿ ಎಂದು ರೇಖಾ ಸುಧಾಳನ್ನು ಚೇಡಿಸಿದಳು. ಏ ಹೋಗೆ ಎಂದು ಸುಧಾ ಹುಸಿಮುನಿಸು ತೋರಿಸಿದಳು. ಅಷ್ಟೊತ್ತಿಗೆ ಬೀಗರ ಕಡೆಯವರೆಲ್ಲ ಬಂದರು. ಸುಧಾ ಮತ್ತು ರಾಜೇಶನ ನಿಶ್ಚಿತಾರ್ಥವು ನಡೆಯಿತು. ರಾಜೇಶನ ಸಹದೋಗಿಗಳೆಲ್ಲ ನಿಶ್ಚಿತಾರ್ಥಕ್ಕೆ ಬಂದಿದ್ದರು. ಬಂದವರೆಲ್ಲ ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ಎಂದು ಹೇಳುವವರೆ. ಶ್ರೀಕಾಂತ ರಾಜೇಶನಿಗೆ ತಾನು ತಂದಿರುವ ಕಾಣಿಕೆಯನ್ನು ಕೊಡುತ್ತ ನಿಮ್ಮ ಜೋಡಿ ಸುಪರ್ ಕಣೊ. 

ಮೇಡ್ ಫಾರ್ ಈಚ್ ಅದರ್. ಥ್ಯಾಂಕ್ಸ್ ಕಣೊ. ಏ ರಾಜೇಶ ನನಗೂ ಒಂದು ಹುಡುಗಿ ಹುಡುಕಿಕೊಡೊ ಮದುವೆಯಾಗ್ತಿನಿ ಎಂದನು. ಅದಕ್ಕೆ ರಾಜೇಶ ಈ ಮದುವೆ ಮನೆನಲ್ಲಿ ಚೆನ್ನಾಗಿರೊ ಹುಡುಗಿಯರೆಲ್ಲ ಬಂದಿರ್‍ತಾರೆ ನೋಡೋಗು ಯಾರಾದ್ರು ಇಷ್ಟಾ ಆದ್ರು ಅಗಬಹುದು ನಿನಗೆ ಎಂದು ನಗತೋಡಗಿದನು. ಏ ನೀನೊಬ್ಬನು ಸರಿ ಬಿಡು ಎಂದು ಶ್ರೀಕಾಂತ ಅವರಿಬ್ಬರಿಗೆ ಹಾರೈಸಿ ಅಲ್ಲಿಂದ ಗೆಳೆಯರ ಗುಂಪಿಗೆ ಸೇರಿದನು. ಬಂದವರೆಲ್ಲ ಊಟ ಮುಗಿಸಿಕೊಂಡು ಒಬ್ಬೊಬ್ಬರಂತೆ ಹೊರಟು ಹೋದರು ಬಂದ ಕಾರ್ಯ ಮುಗಿದ ಮೇಲೆ ಬೀಗರ ಕಡೆಯವರು ಹೊರಟು ಹೋದರು. ನಾನಿನ್ನು ಹೋಗ್ತೇನೆ ಸುಧಾ. ನಾಳೇನೆ ಶಿವಮೊಗ್ಗಕ್ಕೆ ಹೋಗಬೇಕು ಎಂದಳು ರೇಖಾ. ಇನ್ನು ಸ್ವಲ್ಪ ಹೊತ್ತು ಇರೆ ಎಂದು ಸುಧಾ. ಇಲ್ಲಾ ಕಣೆ ಹೊತ್ತಾಗತ್ತೆ ಹೋಗ್ತೀನಿ ಆದರೆ ಒಂದು ಮಾತು ಸುಧಾ ನಿನ್ನ ಭಾವಿ ಪತಿ ನೋಡಲು ಲಕ್ಷಣವಾಗಿದ್ದಾರೆ ನೀನು ಪುಣ್ಯವಂತೆ ಎಂದಳು. ಹೊಗಳಿಕೆಯನ್ನು ಕೇಳಿದ ಸುಧಾ ಉಬ್ಬಿಹೋದಳು. ಇಲ್ಲೆ ಕನಸು ಕಾಣ್ತಾ ನಿಂತಿರ್‍ತಿಯಾ ಇಲ್ಲಾ ನನ್ನ ಹೊರಗಡೆವರೆಗೂ ಬಿಡೋಕೆ ಬರ್‍ತಿಯಾ ಎಂದಳು ರೇಖಾ ಆಗ ಸುಧಾ ನಗುತ್ತಾ ನಡಿಯೆ ಎಂದಳು. ಅಷ್ಟೊತ್ತಿಗೆ ರಾಧಮ್ಮ ಕಾವೇರಮ್ಮವರನ್ನು ಬಿಡಳು ಹೊರಗೆ ಬಂದರು. ಆಗ ರೇಖಾ ಮತ್ತು ಕಾವೇರಮ್ಮ ಹೊರಟು ಹೋದರು. ಇತ್ತ ಸುಧಾಳಿಗೆ ಬೆಳಿಗ್ಗೆಯಿಂದ ಸರಿಯಾಗಿ ಏನನ್ನು ತಿಂದಿರದಿದ್ದರಿಂದಲೊ ಏನೋ ಹೊಟ್ಟೆ ತುಂಬಾ ಹಸಿದಿತ್ತು. ಅವಳು ಅಮ್ಮ ಊಟಾ ಬಡಿಸುಬಾಮ್ಮ ತುಂಬಾ ಹೊಟ್ಟೆ ಹಸಿದಿದೆ ಎಂದಳು.

     ಮರುದಿನ ಮುಂಜಾನೆ ರೇಖಾ ಅಮ್ಮ ನಾನು ಇವತ್ತು ಶಿವಮೊಗ್ಗಕ್ಕೆ ಹೋಗ್ತಿನಿ ಎಂದಳು. ಅದಕ್ಕೆ ರಾಧಮ್ಮ ಇವತ್ತೊಂದು ದಿನ ಇರಮ್ಮ ನಾಳೆ ಹೋಗುವಿಯಂತೆ ಎಂದಳು. ಇಲ್ಲಮ್ಮ ಇನ್ನೊಂದು ವಾರಕ್ಕೆ ನಮಗೆ ಟೆಸ್ಟ್ ಶುರುವಾಗುತ್ತದೆ ತಪ್ಪಿಸೊ ಹಾಗಿಲ್ಲ ಅದಕ್ಕೆ ತುಂಬಾ ಓದಿಕೊಳ್ಳೋದಿದೆ. ಸರಿಯಮ್ಮ ಹೋಗಿ ಬಾ ಎಂದಳು. ಶಿವಾನಂದ ರೇಖಾ ಚೆನ್ನಾಗಿ ಓದಮ್ಮಾ ಎಂದರು. ಅವಳು ಹೊರಡಲು ಸಿದ್ಧವಾದಾಗ ತಾವೇ ಅವಳನ್ನು ಬಸ್ ಹತ್ತಿಸಿ ಬಂದರು. ರೇಖಾ ತಾವು ಬಾಡಿಗೆಗೆ ಪಡೆದಿದ್ದ ರೂಮಿಗೆ ಬಂದಳು. ಒಂದೆರಡು ದಿನಕ್ಕೆ ರೂಮು ತುಂಬೆಲ್ಲಾ ಧೂಳು ತುಂಬಿಕೊಂಡಿತ್ತು. ಅದನ್ನೆಲ್ಲ ಕಸಗೂಡಿಸಿ ಸ್ವಚ್ಛ ಮಾಡಿದಳು. ಅದನ್ನೆಲ್ಲಾ ಮಾಡುವಷ್ಟೊತ್ತಿಗೆ ಸಮಯ ಮೀರಿದ್ದರಿಂದ ಅಮ್ಮ ಕಟ್ಟಿದ ಬುತ್ತಿಯನ್ನು ಬಿಚ್ಚಿ ಊಟ ಮಾಡಿದಳು. ಅವಳಿಗೆ ಸುಧಾ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸಿತು. ಮರುದಿನ ಅವಳು ಕಾಲೇಜಿಗೆ ಹೋಗಲು ಶುರು ಮಾಡಿದಳು. ಪರೀಕ್ಷೆ ಹತ್ತಿರ ಬರುತ್ತಿದಂತೆ ರೇಖಾಳಿಗೆ ಬಿಡುವು ಸಿಗದೆ ಓದುವುದರಲ್ಲಿ ತಲ್ಲೀನರಾಗಿರುತ್ತಿದ್ದಳು.

     ಇತ್ತ ಸುಧಾಳಿಗೆ ದಿನಗುಳಿರುಳಿದ್ದೇ ತಿಳಿಯುತ್ತಿರಲಿಲ್ಲ. ಅವಳು ಟೆಸ್ಟ್‌ಗೆ ತಾನು ಹಾಜರಾಗುತ್ತೇನೆ ಎಂದಿದಕ್ಕೆ ಕಾವೇರಮ್ಮ ಅದೇನು ಬೇಡಾ ಮೆನೆಯಲ್ಲಿಯೇ ಇರು ಇನ್ನು ಒಂದು ವಾರಕ್ಕೆ ಮದುವೆಯಿದೆ ನೀನು ಹೇಗೆ ಹೋಗಲಿಕ್ಕಾಗುತ್ತದೆ ಎಂದರು. ಸುಧಾಳಿಗೆ ತನ್ನ ಓದು ನಿಂತಂತೆಯೆ ಭಾಸವಾಯಿತು. ಸುಧಾ ಈ ಬಾರಿಯು ತನ್ನ ಗೆಳತಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಳಿಸಿದಳು. ಇಲ್ಲಿ ಅವಳ ಮನೆಯವರಿಗೆಲ್ಲ ಹೇಳಿ ಬಂದಿದ್ದಳು. ರಾಧಮ್ಮ ಮತ್ತು ಶಿವಾನಂದ ತಾವು ಮದುವೆಗೆ ಬರುವುದಾಗಿ ತಿಳಿಸಿದರು. ಮದುವೆಯ ದಿನ ಬಂದೆಬಿಟ್ಟಿತು. ಆದರೆ ರೇಖಾ ಇನ್ನು ಊರಿಗೆ ಬಾರದಿರುವುದು ಸುಧಾಳಿಗೆ ಚಿಂತೆಗೀಡು ಮಾಡಿತು. ಇತ್ತ ರೇಖಾಳಿಗೆ ಆ ದಿನವು ಅವಳ ಪರೀಕ್ಷೆ ಇದ್ದುದರಿಂದ ಅವಳಿಗೆ ಸುಧಾಳ ಮದುವೆಗೆ ಬರಲಿಕ್ಕಾಗಲಿಲ್ಲ. ಆದರೆ ಅವಳ ತಂದೆ-ತಾಯಿಯರು ಸುಧಾಳ ಮದುವೆಗೆ ಬಂದು ಅವಳಿಗೆ ಉಡುಗೊರೆ ಕೊಟ್ಟು ಶುಭ ಹಾರೈಸಿದರು. ಮದುವೆ ಸರಳವಾಗಿ ಒಂದು ಕಲ್ಯಾಣ ಮಂಟಪದಲ್ಲಿ ನಡೆಯಿತು. ಮದುವೆಯಾದ ಮಾರನೆ ದಿನವೇ ಸುಧಾಳನ್ನು ಗಂಡನ ಮನೆಗೆ ಕಳಿಸಿದರು. ಸುಧಾ ಹೋಗುವಾಗ ಚಂದ್ರು ಮತ್ತೆ ಕಾವೇರಮ್ಮನ ದುಃಖ ತಡೆಯಲಾಗಲಿಲ್ಲ. ಚಂದ್ರು ಅಂತು ಯಾವಾಗ ಬರ್‍ತಿಯಕ್ಕಾ ಎಂದ. ಸುಧಾ ಬೇಗ ಬರ್‍ತಿನೊ ಚಂದ್ರು ಎಂದು ತಮ್ಮನನ್ನು ತಬ್ಬಿಕೊಂಡು ಅತ್ತಳು. ಸುಧಾ ಮನೆಗೆ ಬಂದಾಗ ಪದ್ಮಮ್ಮ ಸಂಪ್ರದಾಯದಂತೆ ಬಾಗಿಲ ಬಳಿ ಅಕ್ಕಿ ತುಂಬಿದ ಸೇರನ್ನು ಇಟ್ಟು ಸೇರನ್ನು ಒದ್ದು ಬಲಗಾಲಿನಿಂದ ಒಳಗೆ ಕಾಲಿಡಮ್ಮ ಎಂದರು. ಸುಧಾ ಹಾಗೆಯೆ ಮಾಡಿದಳು. ಅಚ್ಚ ಕೆಂಪು ರೇಷ್ಮೆ ಸೀರೆಯನ್ನು ಉಟ್ಟ ಸುಧಾ ರಾಜೇಶನ ಕಣ್ಣಿಗಂತು ಅಪ್ಸರೆಯಂತೆ ಕಾಣುತ್ತಿದ್ದಳು. ರಾಜೇಶನು ಸುಧಾಳನ್ನು ತುಂಬಾ ಪ್ರೀತಿಸುತ್ತಿದ್ದ. ಇವರಿಬ್ಬರು ಅನ್ಯೋನ್ಯತೆಯಿಂದ ಸುಖವಾಗಿದ್ದರು. ಸುಧಾ ಬಂದ ಹೊಸದರಲ್ಲಿ ಪದ್ಮಮ್ಮ ಅವಳನ್ನು ಪ್ರೀತಿಯಿಂದ ನೋಡುತ್ತಿದ್ದಳು.

******

(ಮುಂದುವರೆಯುವುದು..)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x