ಕಾದಂಬರಿ

ಸ್ನೇಹ ಭಾಂದವ್ಯ (ಭಾಗ 3): ನಾಗರತ್ನಾ ಗೋವಿಂದನ್ನವರ


(ಇಲ್ಲಿಯವರೆಗೆ…) 

ಇತ್ತ ಗೆಳತಿಯರಿಬ್ಬರು ಮುಂದೇನು ಎಂದು ಚಿಂತಿಸತೊಡಗಿದರು. ಆಗ ರೇಖಾನೆ ಮೊದಲಿಗಳಾಗಿ ಸುಧಾ ನಾಳೆ ಬೆಳಿಗ್ಗೆ ನಾವಿಬ್ಬರು ಮೊದಲು ಎಲ್ಲಾದರೂ ರೂಮು ಬಾಡಿಗೆಗೆ ಸಿಗುತ್ತದಾ ಅಂತ ನೋಡೋಣಾ ಎಂದಳು. ಗೆಳತಿಯ ಮಾತಿಗೆ ಸುಧಾ ಸಮ್ಮತಿಸಿದಳು. ಅನಂತರ ಪಕ್ಕದ ರೂಮಿನ ಹುಡುಗಿಯೊಬ್ಬಳು ಬಂದು ಊಟಕ್ಕೆ ಬರ್ರಿ ಎಂದು ಹೇಳಿ ಹೋದಳು. ಅದರಂತೆ ರೇಖಾ ಮತ್ತು ಸುಧಾ ಇಬ್ಬರು ಊಟದ ಹಾಲಿಗೆ ಬಂದಾಗ ಕನಿಷ್ಟ ನಲವತ್ತು ಹುಡುಗಿಯರು ಊಟಕ್ಕೆ ಕುಳಿತ್ತಿದ್ದರು. ಇವರು ಹೋಗಿ ಕುಳಿತರು. ಆಗ ಹುಡುಗಿಯರೆಲ್ಲ ಒಬ್ಬೊಬ್ಬರಂತೆ ಇವರ ಪರಿಚಯ ಮಾಡಿಕೊಂಡರು. ಅವರಲ್ಲಿ ಕೆಲವರು ಇವರಿಬ್ಬರು ಹಳ್ಳಿಯಿಂದ ಬಂದವರು ಎಂದು ಗೊತ್ತಾಗುತ್ತಲೆ ತಮ್ಮ ತಮ್ಮಲ್ಲಿಯೆ ಎನೊ ಗುಸು ಗುಸು ಮತಾಡುತ್ತಾ ನಗತೊಡಗಿದರು ಇದು ಸುಧಾಳಿಗೆ ಬೇಸರವಾದರು ತೋರಿಸಿಕೊಳ್ಳದೆ ಸುಮ್ಮನೆ ಊಟ ಮಾಡಿದಳು. ಊಟವಾದ ನಂತರ ಇವರು ರೂಮಿಗೆ ಮರಳಿ ಹಾಸಿಗೆಯ ಮೇಲೆ ಉರುಳಿದರು.

ಮುಂಜಾನೆ ಸುಧಾ ಬೇಗನೆ ಎದ್ದು ರೇಖಾಳನ್ನು ಎಬ್ಬಿಸಿದಳು. ಅನಂತರ ಇಬ್ಬರು ಬೇಗನೆ ರೇಡಿಯಾಗಿ ತಿಂಡಿ ತಿಂದು ವಾರ್ಡನಳ ಅನುಮತಿಯನ್ನು ಪಡೆದು ಬಾಡಿಗೆಗೆ ರೂಮೊಂದನ್ನು ಹುಡುಕಲು ಹೋದರು. ಅಪರಿಚಿತ ಊರಲ್ಲಿ ರೂಮು ಹುಡುಕುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೂ ಕೊನೆಗೆ ಇವರಿಗೆ ಎಲ್ಲ ವ್ಯವಸ್ಥೆಯನ್ನು ಹೊಂದಿದ ಒಂದು ರೂಮ ಹೊಂದಿರುವ ಚಿಕ್ಕ ಮನೆಯೊಂದನ್ನು ದೊರೆತಿತ್ತು. ಮನೆಯ ಮಾಲಿಕ ತಿಂಗಳಿಗೆ ಐದುನೂರು ರೂಪಾಯಿ ಬಾಡಿಗೆ ಹೇಳಿದ್ದ. ಹಾಗೆ ಸಾವಿರ ರೂ. ಅಡ್ವಾನ್ಸ ಕೇಳಿದ್ದ. ಅದಕ್ಕೆ ಇವರಿಬ್ಬರು ಒಪ್ಪಿಕೊಂಡು ಇವತ್ತು ಸಾಯಂಕಾಲನೆ ಬರುತ್ತೇವೆ ಎಂದು ಹಿಂದಿರುಗಿದರು. ಹಾಸ್ಟೇಲಿನಲ್ಲಿ ವಾರ್ಡನಗೆ ಹೇಳಿ ಇಬ್ಬರದು ಸೇರಿ ಐವತ್ತು ರೂ. ಕೊಟ್ಟು ತಮ್ಮ ಸೂಟಕೇಸ್ ಹಿಡಿದು ತಾವು ಗೊತ್ತು ಮಾಡಿದ್ದ ರೂಮಿಗೆ ಬಂದರು. ರೂಮ ಚಿಕ್ಕದಾಗಿದ್ದರೂ ಸಾಕಷ್ಟು ಕಪಾಟುಗಳಿಂದ ಕೂಡಿ ಚೊಕ್ಕಟವಾಗಿತ್ತು. ರೇಖಾ ಮಾರ್ಕೆಟಿಗೆ ಹೋಗಿ ಒಂದು ಸ್ಟೌವ ಮತ್ತೆ ಇನ್ನಿತರ ಪಾತ್ರೆ, ರೇಷನ್ ಎಲ್ಲಾ ತರೋಣ್ವಾ ಎಂದಳು ಸುಧಾ. ಅದಕ್ಕೆ ರೇಖಾ ಏನೇ ಸುಧಾ ಈಗಾಗಲೇ ನಮ್ಮ ಹತ್ತಿರ ಇಷ್ಟಕ್ಕೆ ಎಷ್ಟೊಂದು ದುಡ್ಡು ಖರ್ಚಾಯಿತಲ್ಲ. ಹೌದೇ ಏನು ಮಾಡೋದು ಇದನ್ನೇಲ್ಲಾ ತರೋದು ಅನಿವಾರ್ಯವಲ್ವಾ ಎಂದು ಇಬ್ಬರು ಮಾರ್ಕೆಟಿಗೆ ಹೋಗಿ ತಮಗೆ ಬೇಕಾದ ಅಕ್ಕಿ, ಬೇಳೆ ಇನ್ನಿತರ ಅವಶ್ಯಕ ವಸ್ತುಗಳನ್ನು ಮತ್ತು ಒಂದು ಸ್ಟೌವ್ ಕೊಂಡು ತಂದರು.

ಅಷ್ಟೊತ್ತಿಗೆ ಸುಸ್ತಾಗಿದ್ದ ಇಬ್ಬರಿಗೆ ಹೊಟ್ಟೆಯ ಹಸಿವು ತಾಳದಾಯಿತು. ಇಬ್ಬರು ಸೇರಿ ಒಂದಿಷ್ಟು ಅಡಿಗೆ ಮಾಡಿ ಊಟ ಮಾಡಿದರು ದಿನಗಳು ಹೀಗೆ ಉರುಳುತ್ತಿತ್ತು. ಅವರು ಕಾಲೇಜಿಗೆ ಹೋಗಿ ಬರುತ್ತಿದ್ದರು. ಒಂದು ದಿನ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ನೋಟಿಸು ಬಂದಾಗ ಗೆಳತಿಯರಿಬ್ಬರ ಮುಖ ಅರಳಿತು. ಅವರು ಸಂತೋಷದಿಂದ ಅರ್ಜಿ ಸಲ್ಲಿಸಿದರು. ಇವರು ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗಾಗಿ ಇವರಿಬ್ಬರೂ ಸಾವಿರ ರೂ.ಗಳನ್ನು ಪಡೆದರು. ಇದರಿಂದ ರೇಖಾಳಿಗೆ ಹೇಳತೀರದಷ್ಟು ಸಂತೋಷವಾಯಿತು. ಗೆಳತಿಯರಿಬ್ಬರು ತಮ್ಮ ತಂದೆ-ತಾಯಿಗೆ ತಾವು ಆರೋಗ್ಯದಿಂದಿರುವುದಾಗಿ ಪತ್ರ ಬರೆದರು. ಪತ್ರ ಓದಿದ ಶಿವಾನಂದ ರೇಖಾಳ ಬಗ್ಗೆ ಹೆಮ್ಮೆ ಪಡುತ್ತಾ ನೋಡೆ ನನ್ನ ಮಗಳು ಎಷ್ಟು ಜಾಣೆ ಅಂತ ಹೆಂಡತಿಗೆ ಹೇಳಿದ. ರಾಧಮ್ಮ ಹೌದುರೀ ಎಲ್ಲವು ನಿಮ್ಮ ಸ್ವಭಾವವೇ ಅವಳು ಹಿಡಿದ ಹಟ ಸಾಧಿಸೊವರೆಗೂ ಬಿಡೊದಿಲ್ಲ ಎಂದಳು. ಆದರೆ ಪತ್ರ ಬರಿದಿದ್ದಾಳೆ ಒಂದು ಫೋನ್ ಮಾಡೊಕಾಗಲ್ವ ಇವಳಿಗೆ ನನ್ನ ಕಷ್ಟ ಹೇಗೆ ತಿಳಿಬೇಕು ಎಂದುಕೊಂಡಳು. ಇತ್ತ ಸುಧಾಳ ಪತ್ರ ಓದಿದ ಚಂದ್ರುಗೂ ಸಂತೋಷವಾಯಿತು.

ಏನೇ ಸುಧಾ ಇವತ್ತು ಲೈಬ್ರರಿಯಲ್ಲಿ ಬುಕ್ಸ್ ಕೊಡ್ತಾರಂತೆ ಹೋಗಿ ತಗೊಳ್ವೆನೆ. ಹೌದೇ ರೇಖಾ ತಗೊಳ್ಳಲೇಬೇಕು. ನಮಗೇನು ಹೊರಗೆ ಕೊಂಡುಕೊಳ್ಳೊಕೆ ಆಗುತ್ತಾ ಎಂದು ಎದ್ದು ಒಲೆಯ ಮೇಲಿಟ್ಟ ಅನ್ನವನ್ನು ನೋಡಲು ಹೋದಳು. ಹೀಗೆ ಗೆಳತಿಯರು ಆತ್ಮೀಯತೆಯಿಂದ ಇದ್ದು ಅವರಿಗೆ ದಿನಗಳು ಉರುಳಿದ್ದೆ ತಿಳಿಯಲೇ ಇಲ್ಲ. ಮೊದಲನೆ ಪಿ.ಯು.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ರಜೆಗೆಂದು ಊರಿಗೆ ಮರಳಿದ್ದರು. ರೇಖಾ ತಾಯಿಗೆ ಅಡಿಗೆ ಮನೆಯ ಕೆಲಸದಲ್ಲಿ ಸಹಾಯ ಮಾಡಲು ಹೋದಾಗ ತಾಯಿ ರಾಧಮ್ಮ ಏನು ಮಾಡ್ತಿಯಾ ಬಿಡು ಎಲ್ಲಾ ನಾನೇ ಮಾಡ್ತೀನಿ ನೀನು ಸ್ವಲ್ಪ ಹಾಯಾಗಿರಮ್ಮ ಮತ್ತೆ ಅಲ್ಲಿಗೆ ಹೋದಾಗ ಮಾಡಿಕೊಂಡು ತಿನ್ನೊದು ಇದ್ದೆ ಇದೆ ಎಂದಳು. ತಾಯಿಯ ಮಾತು ಕೇಳಿ ರೇಖಾಳಿಗೆ ಆಶ್ಚರ್ಯವಾಯಿತು. ನಾನು ಇಲ್ಲೆ ಇದ್ದಾಗ ಮನೆಯಲ್ಲಿ ಸ್ವಲ್ಪನೂ ಹಾಯಾಗಿರೋಕೆ ಬಿಡದೆ ಅದು ಮಾಡು, ಇದು ಮಾಡೂಂತ ಹೇಳ್ತಾ ಇದ್ದವಳು ಈಗ ನೋಡಿದರೆ ಮಾಡಬೇಡವೆನ್ನುತ್ತಾಳಲ್ಲ ಎಂದು ಯೋಚಿಸುತ್ತಾ ಇವಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದುಕೊಂಡಳು. ಸುಧಾಳ ಮನೆಯಲ್ಲಿ ಕಾವೇರಮ್ಮ ಗಂಡನಿಗೆ ಅವಳಿಗೆ ಆದಷ್ಟು ಬೇಗ ಮದುವೆ ಮಾಡಿ ಇನ್ನು ಅವಳೇನು ಕಾಲೇಜಿಗೆ ಹೋಗುವುದು ಬೇಡಾ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದಳು. 

ವೆಂಕಟಗಿರಿಗೂ ಆದಷ್ಟು ಬೇಗ ಸುಧಾಳಿಗೆ ಮದುವೆ ಮಾಡಿ ಅವಳು ಸುಖವಾಗಿ ಸಂಸಾರ ಮಾಡುವುದನ್ನು ನೋಡಬೇಕಿತ್ತು. ಅದಕ್ಕಾಗಿ ಅಂದೇ ಸಾಯಂಕಾಲ ಜೋಯಿಷರನ್ನು ಕರೆಸಿದರು. ಜೋಯಿಷರೆ ನಮ್ಮ ಸುಧಾಳಿಗೊಪ್ಪುವ ಯಾವುದಾದರೂ ಗಂಡಿದ್ದರೆ ಹೇಳಿ ಎಂದರು. ಅದರಂತೆ ಜೋಯಿಷರು ಅವಳ ಜಾತಕವನ್ನು ನೋಡಿ ಅದಕೊಪ್ಪುವ ಒಂದು ವರ ಇದೆ. ನಾಳೆ ಒಳ್ಳೆಯ ಮಹೂರ್ತ ಇದೆ. ನೀವು ಒಪ್ಪುವುದಾದರೆ ನಾನು ಗಂಡಿನ ಕಡೆಯವರನ್ನು ಕರೆದುಕೊಂಡು ಬರುತ್ತೇನೆ ಎಂದನು. ಆಗ ವೆಂಕಟಗಿರಿ ಹಾಗೆ ಆಗಲಿ ಕರೆದುಕೊಂಡು ಬರ್ರಿ ಎಂದು ಹೇಳಿದ ಆದರೆ ಸುಧಾಳಿಗೆ ಇದ್ಯಾವುದು ಬೇಕಾಗಿರಲಿಲ್ಲ. ಅವಳಿಗೆ ಸದ್ಯಕ್ಕೆ ಎಲ್.ಎಲ್.ಬಿ ಓದಿ ತಾನು ದೊಡ್ಡ ಲಾಯರ ಅಗಬೇಕು ಅನ್ನುವುದೊಂದೇ ಗುರಿಯಾಗಿತ್ತು. ಜೊತೆಗೆ ಅವಳಿಗೆ ಸಂಗೀತದಲ್ಲಿ ತುಂಬಾ ಆಸಕ್ತಿಯಿತ್ತು. ಹೇಗಾದರು ಮಾಡಿ ಸಂಗೀತ ಕಲಿಬೇಕು ಅನ್ನೋದು ಅವಳ ಚಿಕ್ಕಂದಿನಿಂದ ಬಂದ ಆಸೆಯಾಗಿತ್ತು. ಜೀವನ ತುಂಬಾ ಚಿಕ್ಕದು ಬದುಕು ಬರೀ ಮದುವೆ ಗಂಡ, ಮನೆ, ಮಕ್ಕಳು ಇಲ್ಲಿಗೆ ಮುಗಿಬಾರದು ಏನಾದರೂ ಸಾಧನೆ ಮಾಡಬೇಕು ಅನ್ನುವ ಮನೋಭಾವ ಅವಳದಾಗಿತ್ತು. ಆದರೆ ಅದಕ್ಕೆ ಮನೆಯಲ್ಲಿ ಪ್ರೊತ್ಸಾಹದಾಯಕವಾದ ವಾತಾವರಣವಿರಲಿಲ್ಲ. ಇದು ಅವಳ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಅವಳಿಗೆ ಎಸ್. ಜಾನಕಿಯವರ ಹಾಡುಗಳು ಹಾಗೆ ಹಿಂದಿಯಲ್ಲಿ ಲತಾ ಮಂಗೇಶ್ಕರ್ ಹಾಡುಗಳು ಅಂದ್ರೆ ತುಂಬಾ ಇಷ್ಟವಾಗುತ್ತಿದ್ದವು. ತುಂಬಾ ಭಾವನಾ ಜೀವಿಯಾದ ಸುಧಾಳಿಗೆ ತನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವರು ತನ್ನ ಮನೆಯಲ್ಲಿ ಯಾರು ಇಲ್ಲ ಎಂದೆನಿಸುತ್ತಿತ್ತು. ಅದಕ್ಕವಳು ಕಾವೇರಮ್ಮನಿಗೆ ತಾನು ಗಂಡಿನೆದರು ಬರುವುದಿಲ್ಲ. ನನಗೆ ಈಗಾಗಲೇ ಮದುವೆ ಬೇಡಾ ಎಂದು ಹಟ ಹಿಡಿದಳು.

ಸಿಟ್ಟಿಗೆದ್ದ ವೆಂಕಟಗಿರಿ ಎದುರುವಾದಿಸುವಷ್ಟು ಸೊಕ್ಕು ಬಂತೆ ನಿನಗೆ ಎಂದು ಹೊಡೆಯಲು ಹೋದ. ಆಗ ಕಾವೇರಮ್ಮ ಮಧ್ಯೆ ಪ್ರವೇಶಿಸಿ ಅವಳಿಗೆ ನಾನು ಬುದ್ಧಿ ಹೇಳುತ್ತೇನೆ. ನೀವು ಸುಮ್ಮನಿರಿ ಎಂದು ಗಂಡನಿಗೆ ಸಮಾಧಾನ ಹೇಳಿದಳು. ಸುಧಾ ನಡಿಯೆ ಒಳಗೆ ಎನ್ನುತ್ತಾ ಅವಳ ಕೈ ಹಿಡಿದು ಕರೆದೊಯ್ದಳು. ಏನಮ್ಮಾ ನೀನು ನನ್ನ ಒಂದು ಮಾತು ಕೇಳದೆ ಎಲ್ಲಾ ನೀವೆ ನೀವೆ ತೀರ್ಮಾನ ಮಾಡಿಬಿಟ್ಟರೆ ಹೇಗೆ ಮುಂದೆ ಜೀವನ ಮಾಡಬೇಕಾದವಳು ನಾನು ನೀವಲ್ಲ ಎಂದ ಸುಧಾಳ ಮಾತಿಗೆ ಕಾವೇರಮ್ಮ ನೋಡು ಸುಧಾ ನಾವು ಹೇಳಿದ ಹಾಗೆ ಕೇಳು. ಆ ಹುಡುಗ ಶ್ರೀಮಂತಾ ಅಂತೆ ಒಬ್ಬನೇ ಮಗ ಬೇರೆ. ನಾದಿನಿ, ಮೈದುನಾ ಅಂತ ಯಾರ ಕಾಟವು ಇರೊದಿಲ್ಲಾ ಹುಡುಗ ನೋಡೊದಿಕ್ಕೂ ಚೆನ್ನಾಗಿದ್ದಾನಂತೆ, ಅವನು ನಿನ್ನ ನಾಳೆ ಮೆಚ್ಚಿಕೊಂಡರೆ ಅದು ನಿನ್ನ ಅದೃಷ್ಟ. ಆದರೆ ಅಮ್ಮಾ ನನ್ನ ಓದು ಎಂದ ಸುಧಾಳ ಮಾತನ್ನು ಮಧ್ಯದಲ್ಲಿ ತಡೆದು ಕಾವೇರಮ್ಮ ನೀನು ಮದುವೆಯಾದ ಮೇಲೂ ಓದು ಯಾರ ಬೇಡಾ ಅಂದವರು. ಈಗ ಸದ್ಯಕಂತು ನಿಮ್ಮಪ್ಪನಿಗೆ ಎದುರು ವಾದಿಸದೆ ಹೇಳಿದಷ್ಟು ಕೇಳು ಎಂದವಳು ಒಳಗೆ ಹೋದಳು. ಆದರೆ ಸುಧಾಳಿಗೆ ಮಾತ್ರ ರಜೆಗೆಂದು ಊರಿಗೆ ಬಂದದ್ದೆ ತಪ್ಪಾಯಿತು ಎಂದು ತನ್ನನ್ನೇ ತಾನು ಹಳಿದುಕೊಂಡಳು. ಅಷ್ಟರಲ್ಲಿ ಅಲ್ಲಿಗೆ ಬಂದ ಚಂದ್ರು ಏನಕ್ಕ ಓಹೊ, ಮದುವೆಯಂತೆ ಎಂದು ಅವಳನ್ನು ಛೇಡಿಸಿದ ಏನೊ ತರಲೆ, ನನ್ನ ಸಂಕಟ ನನಗೆ ನಿನಗೆ ತಮಾಷೆನಾ ಎಂದಳು. ಆಗ ಚಂದ್ರುವಿನ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿದ್ದನ್ನು ನೋಡಿದ ಸುಧಾ ಏನಾಯಿತು ಚಂದ್ರು ಯಾಕ ಕಣ್ಣಲ್ಲಿ ನೀರು ಎಂದಳು. ಅಕ್ಕಾ ಇಷ್ಟು ಬೇಗ ನೀನು ಮದುವೆಯಾಗಬೇಡಕ್ಕಾ ನೀನು ಮದುವೆಯಾದರೆ ನಮ್ಮನ್ನು ಬಿಟ್ಟು ಹೋಗಿಬಿಡ್ತಿಯಾ ಎಂದಾಗ ಸುಧಾಳಿಗೆ ಚಂದ್ರುವಿನ ಬಗ್ಗೆ ಅಭಿಮಾನ ಮೂಡಿತು.

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *