ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 8): ಪ್ರಸಾದ್ ಕೆ.

prasad kಇಲ್ಲಿಯವರೆಗೆ

1993 ರಲ್ಲಿ ತನಿಖಾ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಟ್ಯಾಮಿ ಹೊಮೋಲ್ಕಾಳ ಶವಪೆಟ್ಟಿಗೆಯನ್ನು ಸ್ಮಶಾನದಿಂದ ಹೊರತೆಗೆಯಲಾಯಿತು. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವೀಡಿಯೋ ಟೇಪ್ ಗಳನ್ನು ಅಕ್ರಮವಾಗಿ, ಹದಿನೇಳು ತಿಂಗಳುಗಳ ಕಾಲ ತನ್ನ ಸುಪರ್ದಿಯಲ್ಲಿ ಬಚ್ಚಿಟ್ಟುಕೊಂಡ ತಪ್ಪಿಗಾಗಿ, ಪೌಲ್ ಬರ್ನಾರ್ಡೊನ ವಕೀಲನಾಗಿದ್ದ ಕೆನ್ ನ ತಲೆದಂಡವಾಯಿತು. ಪೌಲ್ ಬರ್ನಾರ್ಡೊನನ್ನು ಪ್ರತಿನಿಧಿಸುತ್ತಿದ್ದ ಕೆನ್ ಮುರ್ರೇ, ಕಾರೊಲಿನ್ ಮೆಕ್-ಡೊನಾಲ್ಡ್ ಮತ್ತು ಕಿಮ್ ಡಾಯ್ಲ್ ರ ತಂಡ ಅಷ್ಟೇನೂ ಅನುಭವಿ ತಂಡವಾಗಿರಲಿಲ್ಲ. ಅದರಲ್ಲೂ ಈ ಪ್ರಕರಣದಲ್ಲಿ ಪೌಲ್ ಬರ್ನಾರ್ಡೊ ಜೊತೆ ಸೇರಿ ಮಾಡಿದ ಬಾಲಿಶ, ನಿರ್ಲಕ್ಷ್ಯದ ತಪ್ಪುಗಳಿಗಾಗಿ ಕೆನ್ ದೊಡ್ಡ ಬೆಲೆಯನ್ನೇ ತೆರಬೇಕಾಯಿತು. ಸರಕಾರದ ಮೊಹರನ್ನು ಹೊಂದಿ `ಗೌಪ್ಯ' ವೆಂದು ಪರಿಗಣಿಸಲ್ಪಟ್ಟಈ ವೀಡಿಯೋ ಟೇಪ್ ಗಳು ನ್ಯಾಯಾಲಯಕ್ಕೆ ಅಧಿಕೃತವಾಗಿ ಹಸ್ತಾಂಸರಿಸಲ್ಪಟ್ಟವು. ಮುಂದೆ ಕೆನ್ ಮುರ್ರೇಯ ಸ್ಥಾನಕ್ಕೆ ವಕೀಲ ಜಾನ್ ರೊಸೆನ್ ರ ನೇಮಕವಾಗುವಷ್ಟರಲ್ಲಿ ಎರಡು ವರ್ಷಗಳು ಕಳೆದುಹೋಗಿದ್ದವು. 1995 ರ ಮೇ ತಿಂಗಳಿನಲ್ಲಿ ಕೊನೆಗೂ ಪೌಲ್ ಬರ್ನಾರ್ಡೊನ ವಿಚಾರಣೆಗೆ ಕಾಲ ಕೂಡಿಬಂದಿತ್ತು. 

“ದ ಸ್ಕಾರ್-ಬೋರೋ ರೇಪಿಸ್ಟ್'' ಎಂದು ಈಗಾಗಲೇ ಬಿರುದನ್ನು ಪಡೆದು ಕುಖ್ಯಾತನಾಗಿದ್ದ ಪೌಲ್ ಬರ್ನಾರ್ಡೊ ಪ್ರಕರಣದ ಮುಖ್ಯ ಆರೋಪಿಯಾಗಿರುವುದಷ್ಟೇ ಅಲ್ಲದೆ ಎಲ್ಲಾ ಸಾಕ್ಷಿಗಳು ಅವನೇ ತಪ್ಪಿತಸ್ಥ ಎಂಬುದನ್ನು ಸಾರಿ ಹೇಳುತ್ತಿದ್ದವು. ಈ ಕಾಲಾವಧಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿ, ವಿಚ್ಛೇದನವನ್ನು ಪಡೆದುಕೊಂಡೂ ಬಿಟ್ಟ ಮಾಜಿ ಪತ್ನಿ ಕಾರ್ಲಾ ಹೊಮೋಲ್ಕಾಳ ಹೇಳಿಕೆಗಳು ಪೌಲ್ ನ ಭಾಗದ ಕೇಸನ್ನು ಬಹುತೇಕ ನಾಶಗೊಳಿಸಿದ್ದವು. “ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಕತ್ತಿಗೆ ಎಲೆಕ್ಟ್ರಿಕ್ ತಂತಿಯನ್ನು ಪೌಲ್ ಸ್ವತಃ ತನ್ನ ಕೈಯಾರೆ ಬಿಗಿದು ಸಾಯಿಸಿದ್ದ ಮತ್ತು ಈ ಎರಡು ಕೊಲೆಗಳು ತನ್ನ ಕಣ್ಣೆದುರೇ ನಡೆದಿದ್ದವು'' ಎಂದು ಕಾರ್ಲಾ ತನಿಖೆಯ ಸಮಯದಲ್ಲಿ ಹೇಳಿಕೆಯನ್ನು ನೀಡಿದ್ದಳು. 

ಸ್ಕಾರ್-ಬೋರೋದ ತನ್ನ ಆರಂಭದ ದಿನಗಳಿಂದಲೂ ಪೌಲ್ ನ ಕಥೆಯಲ್ಲಿ, ಜೀವನದಲ್ಲಿ, ವ್ಯಕ್ತಿತ್ವದಲ್ಲಿ ವಿಲಕ್ಷಣತೆಯ ದಟ್ಟ ಛಾಯೆಯಿದ್ದುದು ಸುಳ್ಳಲ್ಲ. ಪೌಲ್ ನ ಹೆಸರು ಮಾಧ್ಯಮಗಳಲ್ಲಿ ಬಿಡುಗಡೆಯಾದ ನಂತರದಲ್ಲಿ ಆತನ ಒಂದಿಬ್ಬರು ಹಳೆಯ ಗರ್ಲ್ ಫ್ರೆಂಡ್ ಗಳು (ಜೆನ್ನಿಫರ್ ಗಲ್ಲಿಗನ್) ಹೆಚ್ಚುತ್ತಿರುವ ಅತ್ಯಾಚಾರದ ಪ್ರಕರಣಗಳಲ್ಲಿ ಆತನ ಕೈವಾಡವಿರುವ ಶಂಕೆಯನ್ನು ವ್ಯಕ್ತಪಡಿಸಿದ್ದರು. ಈ ಹಿಂದೆಯೇ ದಾಖಲಿಸಿದಂತೆ ಪೌಲ್ ನ ಖಾಸಾ ಗೆಳೆಯನ ಪತ್ನಿ ಟೀನಾ ಸ್ಮಿರ್ನಿಸ್, ಪೌಲ್ ಬಗೆಗಿನ ತನ್ನ ಸಂದೇಹವನ್ನು ಖುದ್ದಾಗಿ ಪೋಲೀಸರಲ್ಲಿ ತಿಳಿಸಿದ್ದಳು. ಪ್ರೈಸ್ ವಾಟರ್ ಹೌಸ್ ಎಂಬ ಚಿಕ್ಕ ಸಂಸ್ಥೆಯಲ್ಲಿ ಜೂನಿಯರ್ ಅಕೌಂಟೆಂಟ್ ಆಗಿದ್ದು ಮುಂದೆ ಆ ಉದ್ಯೋಗ ಕೈಬಿಟ್ಟುಹೋದ ನಂತರ ಕೆನಡಾ-ಅಮೇರಿಕಾ ಸರಹದ್ದಿನಲ್ಲಿ ಸಿಗರೇಟುಗಳ ಕಳ್ಳಸಾಗಾಣಿಕೆಯ ದಂಧೆಯಲ್ಲಿ ಈತ ತೊಡಗಿಸಿಕೊಂಡಿದ್ದ. ಲೆಸ್ಲಿ ಮಹಾಫಿಯ ಅಪಹರಣಕ್ಕೆ ತೆರಳಿದ್ದ ದಿನ ಪೌಲ್, ನಿಜಕ್ಕೂ ಮನೆಯಿಂದ ಹೊರಬಿದ್ದಿದ್ದು ಕಾರಿನ ಲೈಸೆನ್ಸ್ ಪ್ಲೇಟುಗಳ ಕಳ್ಳತನಕ್ಕೆಂದು. 

ಸ್ಕಾರ್-ಬೋರೋದ ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಪೌಲ್ ನ ನೇರ ನಂಟಿತ್ತು. ಹಿಂದಿನಿಂದ ಬಂದು ಗಬಕ್ಕನೆ ಹಿಡಿದು ಭಯಹುಟ್ಟಿಸಿ, ಮೂಲೆಗೆ ಎಳೆದುಕೊಂಡು ಹೋಗುವ ಆತನ `ಮೋಡಸ್ ಅಪೆರಾಂಡಿ'ಯನ್ನು ಅತ್ಯಾಚಾರಕ್ಕೆ/ವಿಫಲ ಅತ್ಯಾಚಾರಕ್ಕೆ ಬಲಿಯಾದ ಎಲ್ಲಾ ಯುವತಿಯರೂ ದೃಢಪಡಿಸಿದ್ದರು. ದಾಳಿಗೊಳಗಾಗಿದ್ದ ಯುವತಿಯರು ಗಾತ್ರದಲ್ಲಿ ಚಿಕ್ಕದಾಗಿಯೂ, ದೈಹಿಕವಾಗಿ ಬಲಶಾಲಿಯಾಗಿಲ್ಲದವರೂ, ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿದ್ದವರೂ ಆಗಿದ್ದರು. ಈ ಎಲ್ಲಾ ಪ್ರಕರಣಗಳಲ್ಲೂ, ದಾಳಿ ನಡೆಸುತ್ತಿದ್ದ ಆಗಂತುಕ ವಿಪರೀತವಾಗಿ ಮಾತನಾಡುತ್ತಿದ್ದ, ರಾಕ್ಷಸ ಸದೃಶ ಲೈಂಗಿಕ ರಭಸವನ್ನು ಹೊಂದಿದ್ದ ಮತ್ತು ಅಪಹೃತ ಯುವತಿಯರಿಂದ ಅತ್ಯಾಚಾರದ ಹೊತ್ತಿನಲ್ಲಿ ಅಶ್ಲೀಲ ಮಾತುಗಳನ್ನು ಒತ್ತಾಯಪೂರ್ವಕವಾಗಿ ಹೇಳಿಸುತ್ತಿದ್ದ. ಯುವತಿಯರನ್ನು ತನ್ನ ಚಾಕುವಿನಿಂದ ಗಾಯಗೊಳಿಸುತ್ತಿದ್ದ ಅಥವಾ ಅವರ ತಲೆಯನ್ನು ನೆಲಕ್ಕೆ/ಆಸುಪಾಸಿನ ಗಟ್ಟಿ ಸಮತಲಗಳಿಗೆ ಬಡಿದು ಭೀಕರವಾಗಿ ಥಳಿಸುತ್ತಿದ್ದ. ಓರ್ವ ಯುವತಿಯನ್ನಂತೂ ಥಳಿಸಿ, “ನಿನ್ನನ್ನು ಕೊಲ್ಲಲೇ?'' ಎಂದು ಅಬ್ಬರಿಸಿ ಹೆದರಿಸುತ್ತಾ ಆಕೆ ಪ್ರಾಣಭಿಕ್ಷೆಯನ್ನು ಬೇಡುವಂತೆ ಮಾಡಿ, ಆ ಕ್ಷಣಿಕ `ಅಧಿಕಾರ'ದ ವಿಲಕ್ಷಣ ಸುಖವನ್ನು ಅನುಭವಿಸಿದ್ದ. ಅಂತೆಯೇ ಏನಾದರೊಂದು ವಸ್ತುಗಳನ್ನು ಅವರಿಂದ ಕಸಿದು ತನ್ನೊಂದಿಗೆ ಇರಿಸಿಕೊಳ್ಳುತ್ತಿದ್ದ. 1987 ರ ಕ್ರಿಸ್ ಮಸ್ ಹಬ್ಬದ ಅವಧಿಯಲ್ಲೇ ದಾಳಿಗೆ ಬಲಿಯಾದ ಯುವತಿಯರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೋಲೀಸರು ಓರ್ವ ಸುಂದರ, ಬರೋಬ್ಬರಿ ಆರು ಅಡಿ ಎತ್ತರದ, ಕ್ಲೀನ್ ಶೇವ್ ಮಾಡಿಕೊಂಡ, ಯಾವುದೇ ಟ್ಯಾಟೂಗಳನ್ನು ಹೊಂದಿರದ ಮತ್ತು ಸಾಧಾರಣ ಮೈಕಟ್ಟಿನ ಒಂದು ಪ್ರೊಫೈಲ್ ಅನ್ನು ಸಿದ್ಧಮಾಡಿಟ್ಟುಕೊಂಡಿದ್ದರು. ಆದರೆ ಸಾರ್ವಜನಿಕವಾಗಿ ಇದನ್ನು ಬಿಡುಗಡೆಗೊಳಿಸಿರಲಿಲ್ಲ. ಇವೆಲ್ಲಾ ಲಕ್ಷಣಗಳಿಗೆ ಬಂಧಿತ ಆರೋಪಿ ಪೌಲ್ ಬರ್ನಾರ್ಡೊ ಹೊಂದಿಕೆಯಾಗುತ್ತಿದ್ದ. ಮುಂದೆ ಇಲಾಖೆಯು ಬಿಡುಗಡೆಗೊಳಿಸಿದ ರೇಖಾಚಿತ್ರವೂ ಈತನ ಮುಖಚರ್ಯೆಗೆ ಹೋಲಿಕೆಯಾಗುತ್ತಿತ್ತು. 

ಫಾರೆನ್ಸಿಕ್ ತಜ್ಞೆ ಕಿಮ್ ಜಾನ್ಸ್ಟನ್ ಪರೀಕ್ಷಿಸಿದ, ಅಪರಾಧ ನಡೆದ ಸ್ಥಳಗಳಿಂದ ಸಂಗ್ರಹಿಸಿಕೊಂಡ ವೀರ್ಯದ ಮಾದರಿಗಳು ಅಪರಾಧಿಯ ರಕ್ತದ ಗುಂಪನ್ನು ನಿಖರವಾಗಿ ಹೇಳಬಲ್ಲವಾಗಿದ್ದವು. ಪೌಲ್ ನಿಂದ ಸಂಗ್ರಹಿಸಲಾದ ರಕ್ತ, ಎಂಜಲು ಮತ್ತು ಕೂದಲಿನ ಮಾದರಿಗಳು ಇತರ ಇನ್ನೂರ ಮೂವತ್ತು ಮಾದರಿಗಳೊಂದಿಗೆ ಕಿಮ್ ಜಾನ್ಸ್ಟನ್ ರ ಲ್ಯಾಬೋರೇಟರಿಯಲ್ಲೇ ಇತ್ತು. ಅಲ್ಲದೆ ಅಪರಾಧ ನಡೆದ ಸ್ಥಳಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಮತ್ತು ಶಂಕಿತ ಮಾದರಿಗಳನ್ನು ಪರೀಕ್ಷಿಸಿದಾಗ, ಸಂಗ್ರಹಿತ ಇನ್ನೂರ ಮೂವತ್ತು ಮಾದರಿಗಳಲ್ಲಿ ಐದು ಮಾದರಿಗಳು ಶಂಕಿತ ಅಪರಾಧಿಯ ರಕ್ತದ ಮಾದರಿಯನ್ನು ಹೋಲುತ್ತಿದ್ದವು. ಮತ್ತು ಆ ಐದು ಮಾದರಿಗಳಲ್ಲಿ ಪೌಲ್ ಬರ್ನಾರ್ಡೊನ ರಕ್ತದ ಮಾದರಿಯೂ ಒಂದಾಗಿತ್ತು. 1992 ರ ಎಪ್ರಿಲ್ ತಿಂಗಳಿನಲ್ಲಿ ಪೌಲ್ ಬರ್ನಾರ್ಡೊ ನ ಮಾದರಿಗಳನ್ನು ಮುಂದಿನ ಹಂತದ ಪರೀಕ್ಷೆಗಾಗಿ ಮತ್ತೊಮ್ಮೆ ನೀಡಲಾಯಿತು. ಆದರೆ ಅಷ್ಟರಲ್ಲಿ ಆತ ಸ್ಕಾರ್-ಬೋರೋ ದಿಂದ ಸೈಂಟ್-ಕ್ಯಾಥರೀನ್ ಗೆ ವಲಸೆ ಹೋಗಿದ್ದ. ಸ್ಕಾರ್-ಬೋರೋ ನಗರಗಳಲ್ಲಿ ಅಪರಾಧಗಳು ಹಟಾತ್ತನೆ ನಿಂತುಹೋಗಿದ್ದವು ಮತ್ತು ತನಿಖೆಗಳಿಗೆ ತೀವ್ರ ಹಿನ್ನಡೆಯುಂಟಾಯಿತು. 

ಮುಂದೆ ಕ್ರಿಸ್ಟನ್ ಫ್ರೆಂಚ್ ಅಪಹರಣದ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ವರದಿಯನ್ನಾಧರಿಸಿ ತಯಾರಿಸಲ್ಪಟ್ಟಿದ್ದ ಶಂಕಿತ ಅಪರಾಧಿಯ ಪ್ರೊಫೈಲ್ ಕೂಡ ಪೌಲ್ ನನ್ನು ಹೋಲುತ್ತಿತ್ತು. ಬಾಲಕಿಯ ಅಪಹರಣವಾದ ದಿನದಂದು ಓರ್ವ ಮಹಿಳೆಯೊಬ್ಬಳು “ಆ ಹೊತ್ತಿನಲ್ಲಿ ಕಾರೊಳಗೆ ಕೂತ ಬಾಲಕಿಯೊಬ್ಬಳು ಒದ್ದಾಡುತ್ತಿರುವಂತೆ ಕಂಡಿತು'', ಎಂದು ಹೇಳಿಕೆಯನ್ನು ಕೊಡುತ್ತಾಳೆ. ಕಾರುಗಳ ಮಾಡೆಲ್ ಬಗ್ಗೆ ಆಕೆಗೆ ಅಂಥಾ ಜ್ಞಾನವಿರುವುದಿಲ್ಲ. “ಬಹುಷಃ ಕಮಾರೋ ಮಾಡೆಲ್ ನ ಕಾರು'' ಎಂದು ಆಕೆ ಹೇಳಿರುತ್ತಾಳೆ. ಆದರೆ ತನಿಖಾ ತಂಡ ಪೌಲ್ ನ ಮನೆಗೆ ವಿಚಾರಣೆಗೆಂದು ತೆರಳಿದ ಸಮಯದಲ್ಲಿ ಆತನ ಕಾರು “ನಿಸಾನ್'' ಮಾಡೆಲ್ ನದ್ದು ಎಂದು ತಿಳಿದುಬರುತ್ತದೆ. ತನಿಖೆ ಮತ್ತೊಮ್ಮೆ ದಿಕ್ಕುತಪ್ಪಿರುತ್ತದೆ. ಆದರೆ 1993 ರ ಫೆಬ್ರವರಿಯ ಸುಮಾರಿನಲ್ಲಿ, ಅತ್ಯಾಚಾರಕ್ಕೊಳಗಾದ ಮೂವರು ಯುವತಿಯರ ದೇಹದಿಂದ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾದ ವೀರ್ಯದ ಮಾದರಿಯನ್ನು ಆಧಾರವಾಗಿರಿಸಿಕೊಂಡು ರಕ್ತದ ಗುಂಪನ್ನು ದೃಢಪಡಿಸಿಕೊಂಡ ಪರೀಕ್ಷಾಲಯವು, ಈ ಮಾದರಿಗಳು ಪೌಲ್ ಬರ್ನಾರ್ಡೊನ ರಕ್ತದ ಗುಂಪಿಗೆ ಹೋಲಿಕೆಯಾದುದನ್ನು ದೃಢಪಡಿಸುತ್ತದೆ.

ಕಾರ್ಲಾ ಹೊಮೋಲ್ಕಾ, ಆಕೆಯ ಗೆಳತಿಯರು ಮತ್ತು ಸಹೋದ್ಯೋಗಿಗಳ ಹೇಳಿಕೆಯಂತೆ ಕಾರ್ಲಾಳ ಮೇಲೆ ಆತ ನಿರಂತರವಾಗಿ ನಡೆಸಿಕೊಂಡು ಬಂದ ದೈಹಿಕ ದೌರ್ಜನ್ಯದ ಅಪರಾಧವೂ ಸಾಬೀತಾಗಿರುತ್ತದೆ. ತನ್ನ ಫ್ಲ್ಯಾಷ್ ಲೈಟಿನಿಂದ ಥಳಿಸಲ್ಪಟ್ಟು ಭೀಕರವಾದ ಗಾಯಗಳೊಂದಿಗೆ ಸೈಂಟ್-ಕ್ಯಾಥರೀನ್ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಗ ಪೋಲೀಸರು ತೆಗೆದ ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತ ಪಡಿಸಲಾಗುತ್ತದೆ. `ರಕೂನ್ ಐಸ್' ಮತ್ತು ಇತರ ಗಂಭೀರವಾದ ಗಾಯಗಳನ್ನು ಪಡೆದುಕೊಂಡ ಕಾರ್ಲಾಳ ಚಿತ್ರಗಳನ್ನು ಜ್ಯೂರಿ ಸದಸ್ಯರಲ್ಲಿ ಪ್ರದರ್ಶಿಸುತ್ತಲೇ ಅದರ ಭೀಕರತೆಯು ಜ್ಯೂರಿ ಸದಸ್ಯರ ಹುಬ್ಬೇರಿಸುತ್ತದೆ. ಈ ಸಂಬಂಧ ಘಟನೆಯ ಸ್ಥಳದಲ್ಲಿ ಹಾಜರಿದ್ದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು, ಕಾರ್ಲಾಳ ಹೆತ್ತವರು ಮತ್ತು ಎನ್.ಆರ್.ಪಿ ಯ ಪೋಲೀಸ್ ಅಧಿಕಾರಿಗಳ ಹೇಳಿಕೆಗಳು ವಿಚಾರಣೆಯ ಕಡತಗಳಲ್ಲಿ ದಾಖಲಾಗುತ್ತವೆ. “ತನ್ನ ಹದಿನೈದು ವರ್ಷಗಳ ಔದ್ಯೋಗಿಕ ಅನುಭವದಲ್ಲಿ ಇಷ್ಟು ಭೀಕರವಾದ ಗೃಹದೌರ್ಜನ್ಯದ ಪ್ರಕರಣವನ್ನು ತಾನೆಂದೂ ನೋಡೇ ಇಲ್ಲ'', ಎಂದು ಪರೀಕ್ಷಿಸಿದ ವೈದ್ಯರು ಹೇಳಿಕೆಯನ್ನು ನೀಡುತ್ತಾರೆ. 

ವಿಚಾರಣೆಯ ಮೊದಲಿನಿಂದ ಕೊನೆಯವರೆಗೂ “ತಾನು ಯಾವ ಕೊಲೆಯನ್ನೂ ಮಾಡಿಲ್ಲ ಮತ್ತು ಅಪಹರಿಸಿದ ಇಬ್ಬರೂ ಬಾಲಕಿಯರನ್ನು ಕೊಲೆ ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ'' ಎಂಬ ವಾದವೇ ಪೌಲ್ ಬರ್ನಾರ್ಡೊನಿಂದ ಮಂಡನೆಯಾಗುತ್ತದೆ. “ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಅತ್ಯಾಚಾರದ ಬಳಿಕ ಆಹಾರವನ್ನು ತರಲು ನಾನು ಪಕ್ಕದ ಶಾಪಿಂಗ್ ಸೆಂಟರ್ ಗೆ ಹೋಗಿದ್ದೆ. ಆದರೆ ತಾನು ವಾಪಾಸು ಮರಳುವಷ್ಟರಲ್ಲಿ ಇಬ್ಬರೂ ಹೆಣವಾಗಿದ್ದರು'' ಎಂದು ಆತ ವಾದಿಸುತ್ತಾನೆ. ಕಾರ್ಲಾ ಹೊಮೋಲ್ಕಾ ಹಾಲ್ಸಿಯನ್ ಮಾತ್ರೆಗಳನ್ನು ಕೊಟ್ಟು ಲೆಸ್ಲಿಯ ಕೊಲೆ ಮಾಡಿದಳು ಎನ್ನುವ ಪೌಲ್, ಕ್ರಿಸ್ಟನ್ ಫ್ರೆಂಚ್ ಪಲಾಯನ ಮಾಡಲು ಪ್ರಯತ್ನಿಸಿದ ಕಾರಣ ಕಾರ್ಲಾ ತನ್ನ ಪುಟ್ಟ ರಬ್ಬರಿನ ಕೊಡಲಿಯಿಂದ ಬಾಲಕಿಯನ್ನು ಹೊಡೆದು ಸಾಯಿಸಿದಳೆಂದು ವಾದಿಸುತ್ತಾನೆ. ಆದರೆ ಸಾಕ್ಷ್ಯಾಧಾರಗಳೊಂದಿಗೆ ಸಾಬೀತಾದ ಸ್ಕಾರ್-ಬೋರೋ ನಗರದ ಅತ್ಯಾಚಾರದ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.

`ಸರಪಳಿಗಳನ್ನು, ಲೋಹದ ಕೈಕೋಳಗಳನ್ನು ಬಿಗಿದು, ಪ್ರಾಣಿಯಂತೆ ನನ್ನ ಕತ್ತಿಗೆ ಪಟ್ಟಿಯನ್ನು ಕಟ್ಟಿ ಲೈಂಗಿಕವಾಗಿ ತನ್ನನ್ನು ಹಿಂಸಿಸುತ್ತಿದ್ದ' ಎಂದು ಕಾರ್ಲಾ ಹೊಮೋಲ್ಕಾ ವಿಟ್-ನೆಸ್ ಸ್ಟ್ಯಾಂಡಿನಲ್ಲಿ ಕುಳಿತು ತನ್ನ ದುಃಖದ ಕಥೆಯನ್ನು ಹೇಳುತ್ತಾಳೆ. ಆದರೆ ಕಾರ್ಲಾಳ ವಿಚಾರಣೆ ಈಗಾಗಲೇ ಮುಗಿದಿರುವುದರಿಂದ ಈ ಸಂದರ್ಭಗಳಲ್ಲಿ ಆಕೆ ಸ್ವಇಚ್ಛೆಯಿಂದಲೇ, ಸಂಪೂರ್ಣ ಭಾಗೀದಾರಳಾಗಿದ್ದಳು ಎಂಬ ಸತ್ಯದಲ್ಲಿ ಸಂದೇಹವೇನೂ ಉಳಿದಿರುವುದಿಲ್ಲ. ಆದರೆ ಆತನೊಂದಿಗೆ ದೈಹಿಕ ಸಂಬಂಧವಿರಿಸಿಕೊಂಡಿದ್ದ ಹೆಂಗಸರು, ಹಳೆಯ ಗರ್ಲ್ ಫ್ರೆಂಡ್ ಗಳು, ಇವನ ಲೋಲುಪತೆಯ ರಂಗುರಂಗಿನ ಕಥೆಗಳನ್ನು ಬೇಡವೆಂದರೂ ಕೇಳಲೇಬೇಕಾಗಿ ಬರುತ್ತಿದ್ದ ಗೆಳೆಯರು, ಅತ್ಯಾಚಾರಕ್ಕೊಳಗಾಗಿದ್ದ ಯುವತಿಯರು… ಹೀಗೆ ಹತ್ತು ಹಲವರ ಹೇಳಿಕೆಗಳು ಪೌಲ್ ಬರ್ನಾರ್ಡೊನ ವಿಲಕ್ಷಣ ಲೈಂಗಿಕ ಫ್ಯಾಂಟಸಿಗಳನ್ನು ನ್ಯಾಯಾಲಯದೆದುರು ಬಿಚ್ಚಿಡುವುದರಲ್ಲಿ ಯಶಸ್ವಿಯಾಗುತ್ತವೆ. ತನಿಖಾಧಿಕಾರಿಗಳಲ್ಲಿ ವಿಚಾರಣೆಯ ಅವಧಿಯಲ್ಲಿ ಕಾರ್ಲಾ ಹೊಮೋಲ್ಕಾಳಿಂದ ಹೇಳಲಾಗಿದೆ ಎಂದಾದ ಒಂದು ವಿಚಿತ್ರ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಲಾಗುತ್ತದೆ. ಇದರ ಪ್ರಕಾರ ತಾನು ಮೂವತ್ತಕ್ಕೂ ಹೆಚ್ಚು ಅತ್ಯಾಚಾರಗಳನ್ನು ಮಾಡಿದ್ದೇನೆ ಆದರೆ ಪೋಲೀಸರು ನನ್ನನ್ನು ಹತ್ತು-ಹನ್ನೆರಡು ಪ್ರಕರಣಗಳಲ್ಲಷ್ಟೇ ಹುಡುಕುತ್ತಿದ್ದಾರೆ ಎಂದು ಪೌಲ್ ಬರ್ನಾರ್ಡೊ, ತನ್ನ ಪತ್ನಿ ಕಾರ್ಲಾ ಹೊಮೋಲ್ಕಾಳಲ್ಲಿ ಜಂಭ ಕೊಚ್ಚಿಕೊಂಡಿರುತ್ತಾನೆ.    

ಕ್ರಿಸ್ಟನ್ ಫ್ರೆಂಚ್ ಳನ್ನು ಕೊಲೆ ಮಾಡಿದ ದಿನವೇ ಕೆರ್ರಿ ಪ್ಯಾಟ್ರಿಚ್ ಎಂಬಾಕೆ ಬೀದಿಯಲ್ಲಿ ಅಡ್ಡಾಡುತ್ತಿದ್ದ ಪೌಲ್ ನನ್ನು ಕಂಡು ನಯಾಗರಾ ಪೋಲೀಸ್ ಇಲಾಖೆಯನ್ನು ಸಂಪರ್ಕಿಸಿರುತ್ತಾಳೆ. ಈ ಯುವಕ ಕೆಲವು ದಿನಗಳ ಹಿಂದೆ ನನ್ನನ್ನು ಹಿಂಬಾಲಿಸುತ್ತಿದ್ದ ಎಂದು ಆಕೆ ಎನ್.ಆರ್.ಪಿ ಯಲ್ಲಿ ಹೇಳಿಕೊಂಡಿರುತ್ತಾಳೆ. ಆದರೆ ಈ ದೂರಿಗೆ ಸಂಬಂಧಪಟ್ಟ ದಾಖಲಾತಿಗಳು ಕಳೆದುಹೋಗಿದ್ದರ ಪರಿಣಾಮ ಸಂಶಯಾಸ್ಪದ ವ್ಯಕ್ತಿಯ ಬಂಧನದಲ್ಲಿ ವಿಳಂಬವಾಗಿರುತ್ತದೆ. 1995-96 ರಲ್ಲಿ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ ನ್ಯಾಯಪೀಠ ಈ ನಿರ್ಲಕ್ಷ್ಯಕ್ಕೆ ಸಂಬಂಧಪಟ್ಟಂತೆ ಎನ್.ಆರ್.ಪಿ ಗೆ ಛೀಮಾರಿ ಹಾಕುತ್ತದೆ. ಇಂಥದ್ದೇ ಹಿಂಬಾಲಿಕೆಯ ಇನ್ನೊಂದು ಪ್ರಕರಣದಲ್ಲಿ ಸಿಡ್ನೀ ಕ್ರೆಶೆನ್ ಎಂಬಾಕೆ ಕೂಡ ಆಗಂತುಕನೊಬ್ಬ ನನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಪೋಲೀಸರಲ್ಲಿ ಹೇಳಿರುತ್ತಾಳೆ.  

ಚಿತ್ರೀಕರಿಸಿದ ವೀಡಿಯೋ ಟೇಪ್ ಗಳಲ್ಲಿ ಪೌಲ್ ಬರ್ನಾರ್ಡೊ ಭಾಗವಹಿಸುತ್ತಿರುವುದು ಮತ್ತು ಚಿತ್ರೀಕರಿಸುತ್ತಿರುವುದು ಎರಡೂ ಸ್ಪಷ್ಟವಾಗಿ ದಾಖಲಾಗಿರುತ್ತವೆ. ವಿಕೃತ, ಪೈಶಾಚಿಕ, ಅಮಾನವೀಯ ಎನ್ನುವಂತಹ ವೀಡಿಯೋದ ಮತ್ತು ಆಡಿಯೋದ ಹಲವು ಭಾಗಗಳು ನ್ಯಾಯಾಲಯದಲ್ಲಿ ನೆರೆದ ಜನರನ್ನು ಮತ್ತೊಮ್ಮೆ ತೀವ್ರವಾಗಿ ಮುಜುಗರ ಮತ್ತು ಹಿಂಸೆಗೊಳಪಡಿಸುತ್ತವೆ. ಕಾರ್ಲಾ ಹೊಮೋಲ್ಕಾ ಬಾಲಕಿಯರೊಂದಿಗೆ ಮಾಡುತ್ತಿರುವ ಅತ್ಯಾಚಾರ ಮತ್ತು ಸಂಬಂಧಿ ವಿಲಕ್ಷಣ ಪ್ರಕ್ರಿಯೆಗಳನ್ನು ಚಿತ್ರೀಕರಿಸುತ್ತಲೇ, ಹಿನ್ನೆಲೆಯಿಂದ “ಹಾಗೆ ಮಾಡು, ಹೀಗೆ ಮಾಡು'' ಎಂದು ಸಿನೆಮಾ ನಿರ್ದೇಶಕನ ಧಾಟಿಯಲ್ಲಿ ಹೇಳುವ ಪೌಲ್ ನ ಧ್ವನಿಯು ಆತನನ್ನು ನಿಸ್ಸಂದೇಹವಾಗಿ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುತ್ತವೆ. 

ತಾನು ಅಪರಾಧ ನಡೆಸಿದ ಬಹುತೇಕ ಎಲ್ಲಾ ಪ್ರಕರಣಗಳ ಬಗ್ಗೆಯೂ ಪೌಲ್ ಬರ್ನಾರ್ಡೊ ತನ್ನ ಅಪರಾಧದ ವಿವರಗಳನ್ನು ವಿಸ್ತøತವಾಗಿ ದಿನಚರಿಯ ದಾಖಲೆಗಳಂತೆ ಬರೆದಿಟ್ಟುಕೊಂಟಿದ್ದ. ಹೋಟೇಲ್ ಬಿಲ್ಲುಗಳು, ಕಾರಿಗೆ ಹಾಕಿಸಿಕೊಂಡ ಇಂಧನದ ರಸೀದಿಗಳು ಹೀಗೆ ಹಲವು ದಾಖಲೆಗಳನ್ನೂ ಪೌಲ್ ಸುರಕ್ಷಿತವಾಗಿ ಇರಿಸಿಕೊಂಡಿದ್ದ. ಈ ಪ್ರಕರಣಗಳಲ್ಲಿ ಅಕಸ್ಮಾತ್ ಬಂಧನಕ್ಕೊಳಗಾದರೆ `ಅಲಿಬೀ' (ಅಪರಾಧ ನಡೆದ ಸ್ಥಳ ಮತ್ತು ಸಮಯದಲ್ಲಿ ಆರೋಪಿ ಅಲ್ಲಿರಲಿಲ್ಲ ಎಂಬುದನ್ನು ಸಾಬೀತುಪಡಿಸುವ ಘಟನೆಗಳು ಮತ್ತು ಸಾಕ್ಷಿಗಳು) ಗಳಾಗಿ ದಾಖಲಾತಿಗಳನ್ನು ತಯಾರು ಮಾಡಲು, ದಿನಾಂಕ ಮತ್ತು ಸಮಯದ ನೆನಪಿಗಾಗಿ ಈ ಎಲ್ಲಾ ವಿವರಗಳನ್ನು ಆತ ದಾಖಲಿಸಿದ್ದಿರಬಹುದು. ಆದರೆ ಈ ಚಿಕ್ಕಪುಟ್ಟ ರಸೀದಿಗಳ ರಾಶಿ, ಕಾಗದಗಳು, ನಕಾಶೆಗಳು ಅಪರಾಧ ನಡೆದ ಸ್ಥಳಗಳಲ್ಲಿ ಪೌಲ್ ಬರ್ನಾರ್ಡೊನ ಉಪಸ್ಥಿತಿಯಿದ್ದುದನ್ನು ನೇರವಾಗಿ ಬೊಟ್ಟುಮಾಡಿ ಹೇಳುತ್ತಿದ್ದವು. ಅಲ್ಲದೆ ಲೆಸ್ಲಿ ಮಹಾಫಿಯ ಕೊಲೆಯ ನಂತರ ಅವಳ ಮೃತದೇಹಕ್ಕೊಂದು ಗತಿಕಾಣಿಸಲು ಪಕ್ಕದ ಹಾರ್ಡ್ವೇರ್ ಅಂಗಡಿಯಿಂದ ಖರೀದಿಸಿದ್ದ ಸಿಮೆಂಟ್ ಮತ್ತು ಬ್ಯಾಗುಗಳ ರಸೀದಿಗಳು ಈಗಾಗಲೇ ಪೋಲೀಸರ ಕೈಸೇರಿದ್ದವು. ಅಂತೆಯೇ ಸರಣಿಹಂತಕರು, ನೀಲಿ ಚಿತ್ರಗಳು ಮತ್ತು ವಿಕೃತ ಲೈಂಗಿಕತೆಗಳ ಬಗೆಗಿನ ಹಲವು ಪುಸ್ತಕಗಳು ಮತ್ತು ವೀಡಿಯೋ ಟೇಪ್ ಗಳು ಪೌಲ್-ಕಾರ್ಲಾ ದಂಪತಿಗಳ ಪೋರ್ಟ್ ಡಾಲ್-ಹೌಸಿ ಮನೆಯಲ್ಲಿ ಜಪ್ತಿಯಾಗಿದ್ದವು.  

ಸ್ಕಾರ್-ಬೋರೋ ನಗರದ ಹಲವು ಸರಣಿ ಅತ್ಯಾಚಾರಗಳು, ಟ್ಯಾಮಿ ಹೊಮೋಲ್ಕಾಳ ಅತ್ಯಾಚಾರ, ಲೆಸ್ಲಿ ಮಹಾಫಿ ಮತ್ತು ಕ್ರಿಸ್ಟನ್ ಫ್ರೆಂಚ್ ರ ಅತ್ಯಾಚಾರ, ದೈಹಿಕ ಹಿಂಸೆ ಮತ್ತು ಕೊಲೆ, ಪತ್ನಿ ಕಾರ್ಲಾ ಹೊಮೋಲ್ಕಾಳ ಮೇಲೆ ನಡೆಸಿದ ನಿರಂತರ ದೌರ್ಜನ್ಯ ಹೀಗೆ ಹತ್ತು ಹಲವು ಗಂಭೀರವಾದ ಪ್ರಕರಣಗಳು ಪೌಲ್ ಬರ್ನಾರ್ಡೊನನ್ನು ಚೆನ್ನಾಗಿ ರುಬ್ಬುತ್ತಿರುತ್ತವೆ. ಸ್ಕಾರ್-ಬೋರೋದ ಸರಣಿ ಅತ್ಯಾಚಾರದ ಪ್ರಕರಣಗಳು ಮತ್ತು ಟ್ಯಾಮಿ ಹೊಮೋಲ್ಕಾಳ ಅತ್ಯಾಚಾರದ ಪ್ರಕರಣವು ಸ್ಕಾರ್-ಬೋರೋ ನಗರದ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ವಿಚಾರಣೆಗೊಳಪಡುತ್ತವೆ. 1990 ರ ಜೂನ್ ತಿಂಗಳಲ್ಲಿ ನಾಪತ್ತೆಯಾದ ಯುವತಿ ಎಲಿಝಬೆತ್ ಬೈನ್ ಳ ಕೊಲೆ ಆರೋಪ ಸೇರಿದಂತೆ ಇನ್ನೂ ನಾಲ್ಕೈದು ಪ್ರಕರಣಗಳು ಪೌಲ್ ಬರ್ನಾರ್ಡೊ ಮತ್ತು ಕಾರ್ಲಾ ಹೊಮೋಲ್ಕಾರ ಬೆನ್ನುಬಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿದ್ದುಹೋಗುತ್ತವೆ. ಅಲ್ಲದೆ 1992 ರಲ್ಲಿ ನಾಪತ್ತೆಯಾದ ಬಳಿಕ ಕೊಲೆಯಾಗಿ ಪತ್ತೆಯಾದ ಟೆರ್ರಿ ಆಂಡರ್ಸನ್ ಎಂಬ ಹದಿನಾಲ್ಕರ ಬಾಲಕಿಯ ಪ್ರಕರಣದಲ್ಲೂ ಪೌಲ್ ಬರ್ನಾರ್ಡೊನ ದಟ್ಟಛಾಯೆ ಕಂಡುಬಂದಿತ್ತು. ಮರೆಯಾದ ನೀನಾ ಡಿವಿಲಿಯರ್ಸ್ ಎಂಬ ಹದಿನೆಂಟರ ಯುವತಿಯ ಪ್ರಕರಣದಲ್ಲೂ ಪೌಲ್ ನ ಹೆಸರಿತ್ತು. ಮುಂದೆ ಹಲವು ವರ್ಷಗಳ ಬಳಿಕ, 1986-87 ರ ಅವಧಿಯಲ್ಲಿ ಸ್ಕಾರ್-ಬೋರೋದಲ್ಲಿ ನಡೆದ, ಆದರೆ ಬೆಳಕಿಗೆ ಬಾರದ ಹತ್ತರಿಂದ ಹದಿನೈದು ಅತ್ಯಾಚಾರಗಳನ್ನು ತಾನೇ ಮಾಡಿದ್ದಾಗಿ ಪೌಲ್ ಒಪ್ಪಿಕೊಳ್ಳುತ್ತಾನೆ.   

ಈಗಾಗಲೇ ಬರೋಬ್ಬರಿ ಎಂಭತ್ತಾರು ಜನ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ತಮ್ಮ ಹೇಳಿಕೆಗಳನ್ನು ಕೊಟ್ಟಿರುತ್ತಾರೆ. 1995 ರ ಸಪ್ಟೆಂಬರ್ ಒಂದರಂದು, ಹೊರಿಸಲಾಗಿದ್ದ ಬಹುತೇಕ ಎಲ್ಲಾ ಆರೋಪಗಳಲ್ಲೂ ಪೌಲ್ ಬರ್ನಾರ್ಡೊ ದೋಷಿಯೆಂದು, ಎಂಟು ಜನ ಪುರುಷರು ಮತ್ತು ನಾಲ್ವರು ಮಹಿಳೆಯರನ್ನೊಳಗೊಂಡ ಜ್ಯೂರಿ ಸಮೂಹವು ಸುಮಾರು ಎಂಟು ಘಂಟೆಗಳ ಸುದೀರ್ಘ ಮಾತುಕತೆಯ ನಂತರ ತೀರ್ಪನ್ನು ನೀಡುತ್ತದೆ. ನ್ಯಾಯಾಲಯವು ಪೌಲ್ ಬರ್ನಾರ್ಡೊಗೆ ಕನಿಷ್ಠ ಇಪ್ಪತ್ತೈದು ವರ್ಷಗಳ ಮಟ್ಟಿಗೆ ಪರೋಲ್ ಗೆ ಅವಕಾಶವಿಲ್ಲದಿರುವ ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತದೆ. ಅಲ್ಲದೆ ನವೆಂಬರ್ ತಿಂಗಳಿನಲ್ಲಿ ಪೌಲ್ ಬರ್ನಾರ್ಡೊ ಒಬ್ಬ `ಅಪಾಯಕಾರಿ ಅಪರಾಧಿ' ಎಂಬ ವರದಿ ಬಂದ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಪರೋಲ್ ಗೆ ಅವಕಾಶವಿರುವ ಸಾಧ್ಯತೆಯೂ ಬಹುತೇಕ ಕ್ಷೀಣಿಸುವುದಲ್ಲದೆ, ಸಾಯುವವರೆಗೂ ಜೈಲಿನಲ್ಲೇ ಕೊಳೆಯಬೇಕಾದ ಸಾಧ್ಯತೆಗಳೂ ಗಣನೀಯವಾಗಿ ಹೆಚ್ಚುತ್ತವೆ. ಅಂತೂ ಪೌಲ್ ಬರ್ನಾರ್ಡೊ ಎಂಬ ಸ್ಯಾಡೋ-ಮ್ಯಾಸೋಚಿಸ್ಟ್, ವೋಯುರಿಸ್ಟ್, ಅತ್ಯಾಚಾರಿ, ಕೊಲೆಗಡುಕ ಗರಿಷ್ಠ ಭದ್ರತೆಯ ಓಂಟಾರಿಯೋದ ಕುಖ್ಯಾತ ಕಿಂಗ್-ಸ್ಟನ್ ಕಾರಾಗೃಹವೊಂದರಲ್ಲಿ ಬಂಧಿಯಾಗಿರುತ್ತಾನೆ.

1995 ರ ಡಿಸೆಂಬರಿನಲ್ಲಿ ಇಲಾಖೆಯು ಬರ್ನಾರ್ಡೊ ದಂಪತಿಗಳ ಪೋರ್ಟ್ ಡಾಲ್-ಹೌಸಿ ಮನೆಯನ್ನು ಧ್ವಂಸಗೊಳಿಸಿರುತ್ತದೆ. ನಾಲ್ಕು ವರ್ಷಗಳ ನಂತರ ಹೊಸ ಮನೆಯೊಂದು ಅದೇ ಜಾಗದಲ್ಲಿ ತಲೆಯೆತ್ತುತ್ತದೆ. 2001 ರ ಡಿಸೆಂಬರ್ ಒಂದರಂದು ಕೆನಡಾದ ಪೋಲೀಸ್ ಇಲಾಖೆಯು ಭಯಾನಕ ಕಂಟೆಂಟ್ ಗಳಿರುವ ಆ ವೀಡಿಯೋ ಟೇಪ್ ಗಳನ್ನು ನಾಶಪಡಿಸುತ್ತದೆ. ಆರೋಪಿಗಳು ಮತ್ತು ಸಾಕ್ಷಿಗಳ ವಿಚಾರಣೆ ಮತ್ತು ಸಂದರ್ಶನದ ಕೆಲ ವೀಡಿಯೋ ಟೇಪ್ ಗಳು ಸರಕಾರಿ ದಾಖಲೆಗಳಲ್ಲಿ ಭದ್ರವಾಗುತ್ತವೆ.  



(ಮುಂದುವರೆಯುವುದು)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x