ಕನಸಿಗೊಂದು ವಿನಂತಿ
ನಿದ್ದಿ ಬರವಲ್ದವ್ವ
ಕನಸು ಕಳೆದೀತೆಂದು
ಕಣ್ಣಿಂದ ಜಾರಿ ಬಿದ್ದು ಹೋದೀತೆಂದು
ಕಣ್ಣು ಬಡಿಯದೆ ಕುಂತೀನೆ
ಕನಸ ಕನವರಿಸುತಲೆ!
ಯಾವಾಗನೊ ಮಲಗಿ ಬಿಟ್ಟೆ
ಎಚ್ಚರವಾದಾಗ ಮನಹೊಕ್ಕು ನೋಡಿದೆನು
ಎಲ್ಲೂ ಹೋಗದೆ ಕನಸು ಮನದಾಗ ನಿಂತೈತೆ
ಮತ್ತಷ್ಟು ರಂಗು ರಂಗಾಗೇತಿ ನೋಡವ್ವ
ಕಣ್ತುಂಬ ತುಂಬೇತಿ ಉಲ್ಲಾಸದ ಹೊಳಪು!
ಕನಸೆಂಬ ಕುದುರೆಯ ಮ್ಯಾಲೆ
ಸವಾರಿ ಹೊಂಟೀನಿ ನಾನು
ಬ್ಯಾಸರಿಕೆ ಇಲ್ಲ ಬಾಯಾರಿಕೆ ಇಲ್ಲವ್ವ
ಓಡುತೋಡುತ ಇದರ ಓಟ ಹೆಚ್ಚಾಗೇತಿ
ಬದುಕಿನ ಹಾಡಿಗೆ ಅಚ್ಚು ಮೆಚ್ಚಾಗೇತಿ!
ಏ ಕನಸೇ ನೋಡಾ ನವಯುಗಕೆ ಕಾದಿರುವೆ
ಕಣ್ಬೆಳಕು ನೀನೇ, ಬೆನ್ನೆಲುಬು ನೀನೆ
ಬಿಸಿಲ ದಗೆ ದಾರ್ಯಾಗ ನೆರಳೊಂದು ನೀನೆ
ಬಾಯಾರಿ ಬಳಲಿದರೂ ನಿನ್ನ ಸ್ಮರಣೆ ನೀರು!
ಕನಸೇ, ಕೈ ಹಿಡಿದು ನೀ ನಡೆಸೆ ಆತ್ಮಬಂಧು!
-ಸಾವಿತ್ರಿ ವಿ. ಹಟ್ಟಿ
ಸಾವು
ನಿನ್ನ ನೋಡುವ ನನ್ನೀ ತವಕ.
ನೀ ಅರಿಯಲಾರೆ ಓ ನನ್ನ ಸಖ.
ಸುಳಿವೆ ಇಲ್ಲದೆ ಬಂದು
ನನ್ನ ಬಳಗಕೆ ಕೊಡುವೆ ನಿನ್ನ ಸುಖ
ಅಂದು ನಾನಾಗಿರುವೆ ನಿನ್ನ ಪರವಶ
ಓ ನನ್ನ ಪ್ರೀತಿಯ ಸಖ
ಬೆಂಬಿಡದೆ ನೀ ಇದ್ದೆ ನನ್ನಿಂದೆ
ಎಚ್ಚರಿಸಿದೆ ಕ್ಷಣ,ಕ್ಷಣ ಬೇಡವೆಂದು.
ಅಂದು ನಾ ಬಿಡಲಿಲ್ಲ
ನನ್ನ ಗರ್ವ, ಅಹಂಕಾರ, ದುಷ್ಟತನಗಳನ್ನು
ಇಂದು ನಾ ತೊಟ್ಟ ಕಣ್ಪಟ್ಟಿ ಜಾರಿದೆ.
ಇಂದು ನಾ ಕಳೆದುಕೊಂಡರು
ನನ್ನೀ ಜೀವನದ ಮೋಹವ.
ಲಿಂಗ ವರ್ಣ ಭೇದವಿಲ್ಲದ ಆತ್ಮಕೆ.
ಇಲ್ಲಿ ಎಲ್ಲವು ನಶ್ವರ, ನೀನೆ ಶಾಶ್ವತ.
ನನ್ನೀ ತವಕಕೆ ನೀ ತೋರಿದೆ
ನಾನೆ ಅರಿಯಲಾಗದ ಅಂತ್ಯವ.
ಈ ಗೌಣ ಜೀವನದ ಉತ್ತರ
ನೀನೆ ಅಲ್ಲವೆ ಓ ನನ್ನ ಸಖ
ಸಾವು.
ಚಾರುಶ್ರೀ ಕೆ ಎಸ್
ನಿಜಶರಣ ಕಲಬುರಗಿ ಮಲ್ಲೇಶಪ್ಪಾ,,,
ದೇವರಿಗೊಂದು ಕಾಗದ ಬರೆವೆ
ಕಾಣದ ಕಣ್ಣೀರ ಮಸಿಯಲೆ
ಕರುಣೆಯಲೋದುವುದಾದರೆ ಓದಿಕೋ,,
ಭುವಿಯ ಮೇಲೆಲ್ಲ ಒಂದೇ ಆಕ್ರಂದನ
ಈ ಸಾವು ನ್ಯಾಯವೇ ? ಶರಣ
ಕಲಬುರಗಿಯ ಸಾವು ನ್ಯಾಯವೇ ?,,,
ನಿನ್ನಿರವ ಜಗಕೆಲ್ಲ ಸಾರಿದ ಶರಣನಯ್ಯ
ಸಂಗಮ ಬಸವಾದಿ ಪ್ರಮಥರ ನಿಘಂಟಿನೊಡೆಯ
ಬಸವಗೊದಗಿದ ಸಾವ ತೆರದಿ ಈ ಸಾವು ನ್ಯಾಯವೇ ?
ಲೌಕಿಕದಿ ನಿಜ ಶರಣ ವಚನಗಳ ನಿಜ ಕಾರುಣನ
ಹತ್ಯೆಗೈದರು ಹಗಲೇ ಕಾಣಲಿಲ್ಲವೇ ನಿನಗೆ
ಓ ದೇವರೇ ಈ ಸಾವು ನ್ಯಾಯವೇ ?,,,
ಬಲ್ಲಿಹರು ಬಲ್ಲವರು ಮೌಢ್ಯಕ್ಕೆ ಶರಣಾದರೂ
ಖಂಡಿಸುವುವಿದ ಸಾವ ಕಲಬುರಗಿ ಶರಣರದು
ಓ ದೇವರೇ ಈ ಸಾವು ನ್ಯಾಯವೇ ?
ನೇರದಿಟ್ಟರಿಗಿಲ್ಲಿ ನೆಲೆಯಿಲ್ಲದಾಗಿದೆಯಯ್ಯಾ
ಸುಳ್ಳು ಲಂಪರಿಗದೇ ಅತೀ ಬೆಂಬಲ
ಖಂಡಿಸುತ ದೂರುತಿಹೆನೀ ಪತ್ರದಲಿ,,,
ಮನದೀ ಮಮ್ಮುಲ ಮರುಗುತಲಿ ಕಣ್ಣೀರ ಮಸಿಯಲಿ
ಮನದ ದು:ಖಿತ ಹಾಳೆಯಲಿದೋ ಬರಿದಿರುವೆ
ಶಿಕ್ಷಿಸಲೊಲ್ಲೆಯೇಕಯ್ಯಾ ಆ ದುಷ್ಟರನ ಈ ಸಾವು ನ್ಯಾಯವೇ ?,,
-ಸಿದ್ರಾಮ ತಳವಾರ
Nija iddakkiddanthe avara hathye nadedu suddi kivige badida aa dina manasu tallanisi hoytu… hathyegaida paapigalige sariyaada shikshe aage aagutthe….
[…] -ಸಿದ್ರಾಮ ತಳವಾರ […]