ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಅನುಭವ (ಭಾಗ ೧): ಗುರುಪ್ರಸಾದ ಕುರ್ತಕೋಟಿ


"ಯಾವುದೆ ಪ್ರವಾಸದಲ್ಲಿ ಅನುಭವಿಸುವ ಅನಂದಕ್ಕಿಂತ ಆ ಪ್ರವಾಸಕ್ಕಾಗಿ ಮಾಡುವ ಸಿಧ್ಧತೆ ಹಾಗೂ ಅದರ ಕಲ್ಪನೆಯಲ್ಲಿ ಸಿಗುವ ಮಜವೇ ಅದ್ಭುತ!" ಅಂತ ನಮ್ಮ ಕೃಷ್ಣ ಮೂರ್ತಿ ಅವರ ಅಂಬೋಣ. ಅದು ನಿಜವೂ ಹೌದು. ಹಾಗೂ ಆ ಮಾತು ಪ್ರವಾಸಕ್ಕಷ್ಟೇ ಸೀಮಿತವಲ್ಲ. ಯಾವುದೇ ವಿಷಯದಲ್ಲೂ ಕಲ್ಪನೆಯಲ್ಲಿರುವ ಖುಷಿಯೇ ಬೇರೆ. ಹೀಗೆ ನಮ್ಮ ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಪರಿಕಲ್ಪನೆ ಶುರುವಾದದ್ದು ಮೂರು ತಿಂಗಳ ಹಿಂದೆ. ಎಲ್ಲೆಲ್ಲಿ ಹೋಗುವುದು, ಏನೇನು ಸಿದ್ಧತೆಗಳು, ಎಲ್ಲಿ ಪ್ಲೇನು, ಎಲ್ಲಿ ಟ್ರೇನು ಅನ್ನುವ ಹಲವಾರು ವಿಚಾರ ವಿನಿಮಯಗಳು ನಡೆದು, ಅಂತೂ ಬಟ್ಟೆ ಬರೆ ಕಟ್ಟಿಕೊಂಡು, ಮೂರು ದಂಪತಿಗಳು ತಮ್ಮ ಪುಟಾಣಿಗಳೊಂದಿಗೆ ಬೆಂದಕಾಳೂರಿನ ವಿಮಾನಾಲಯದಲ್ಲಿ (ಇದು ವಿಮಾನ ನಿಲ್ದಾಣಕ್ಕಿರುವ ಪರ್ಯಾಯ ಪದ ಅಂತ ಅಲ್ಲಿನ ಬೋರ್ಡು ನೋಡಿದಾಗ ಗೊತ್ತಾಗಿದ್ದು!) ಹತ್ತಿ ಕುಳಿತಾಗ ರವಿವಾರದ ೬ ಗಂಟೆ. ಆದರೆ ೬.೩೦ ಗಂಟೆಗೆ ಹೊರಡಬೇಕಿದ್ದ ವಿಮಾನ ೭.೩೦ ಆದರೂ ಇನ್ನೂ ಹೊರಡದೇ ಇದ್ದರೂ, ನಮ್ಮ ಬಸ್ಸಿನಲ್ಲಿ ಗಲಾಟೆ ಮಾಡುವ ಮಾನವ ಜೀವಿಗಳೆಲ್ಲಾ ಅಲ್ಲಿ ಏನೂ ಗಲಾಟೆ ಮಾಡದೆ ಸುಮ್ಮನೆ ಕುಳಿತಿದ್ದೆವು. ಅಷ್ಟು ಚೆಂದದ ಗಗನ ಸಖಿಯರೆದುರು ಗಲಾಟೆ ಮಾಡಲು ಯಾರಿಗೆ ತಾನೆ ಮನಸ್ಸಿದ್ದೀತು! ಅಂತೂ ಪ್ಲೇನು ಟೇಕ್ ಆಫ್ ಆದಾಗ ನಾವು ನಿರಂಬಳರಾದೆವು. ಆದರೆ ಬೆಳಿಗ್ಗೆ ಬೇಗ ಎದ್ದವರ ಹೊಟ್ಟೆಗಳು ಕೇಳಬೇಕಲ್ಲ! ಅಲ್ಲಿದ್ದ ಮೆನು ಕಾರ್ಡು ತೆಗೆದು ನೋಡಿದರೆ ಒಂದು ಸ್ಯಾಂಡ್ ವಿಚ್ ಗೇ ೨೦೦ ರುಪಾಯಿ ಅಂತ ನೋಡಿ, ಮಿಸ್ ಪ್ರಿಂಟ್ ಇರಲಿಕ್ಕಿಲ್ಲ ಅಂದುಕೊಂಡು, ಮಕ್ಕಳಿಗೆ ಮಾತ್ರ ಅಂತ ಆರ್ಡರ್ ಮಾಡಿ ಅದರಲ್ಲೇ ಸ್ವಲ್ಪ ತಿಂದು ಸಮಾಧಾನ ಪಟ್ಟುಕೊಂಡೆವು. 

ಅಂತೂ ಇಂತೂ ಕೊಲಕತ್ತಾ ಮುಟ್ಟಿದಾಗ ಅಲ್ಲಿನ ಬಿಸಿ ಗಾಳಿ ತಟ್ಟಿ ಪುಳಕಿತರಾದೆವು! (?). ನಮ್ಮ ಟ್ರಾವಲ್ ಏಜನ್ಸಿ ನಮಗಾಗಿ ಟೆಂಪೋ ಟ್ರಾವಲರ್ ಅನ್ನು ಕಳಿಸಿತ್ತು. ಅಮಿತ್ ಅನ್ನುವ ಗೈಡು ಮೌನವೇ ಬಂಗಾರ ಅನ್ನುವ ತತ್ವವನ್ನು ನಂಬಿದವನಾಗಿದ್ದರಿಂದ ಮಾತನ್ನು ತೂಕ ಮಾಡಿ ಮಾತಾಡುತ್ತಿದ್ದ!  ರವಿವಾರ ಕೆಲಸಕ್ಕೆ ಕಳಿಸಿದ್ದರಿಂದಲೋ ಏನೊ ಒಂಥರಾ ಸಿಟ್ಟಿನಲ್ಲಿದ್ದ. ಕೋಲ್ಕತ್ತಾ ವಿಮಾನಾಲಯದಿಂದ ನಮ್ಮನ್ನು ನೇರವಾಗಿ ಕರೆದೊಯ್ದದ್ದು ಹೂಗ್ಲಿ ನದಿ ತೀರದಲ್ಲಿರುವ ದಕ್ಷಿಣೇಷ್ವರ ದೇವಾಲಯಕ್ಕೆ. ಅಲ್ಲಾದರೂ ಮಾತಾಡುತ್ತಾನೆಂದು ಕಾಯ್ದ ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿ ತನ್ನ ತತ್ವಕ್ಕೆ ಬದ್ಧನಾಗಿದ್ದ! ನಾವು ಪಟ್ಟು ಬಿಡದ ಬೇತಾಳದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ದಕ್ಷಿಣೆಶ್ವರ ಕಾಳಿ ದೇವಾಲಯದ ವಿಶಾಲವಾದ ಆವರಣದಲ್ಲಿ ಜನ ಸಾಗರವಂತೂ ಭರ್ಜರಿಯಾಗಿತ್ತು. ಪಾಳಿ ಹಚ್ಚಿ ದರುಶನ ಮಾಡಿಯಾಯ್ತು. ಆ ದೇವಾಲಯದ ವಾಸ್ತುಶಿಲ್ಪ ದಕ್ಶ್ಗಿಣ ಭಾರತದ ದೇವಾಲಯಗಳಿಗಿಂತ ಭಿನ್ನವಾಗಿದೆ. ತುಂಬಾ ಸುಂದರವಾಗಿದೆ ಕೂಡ.

ಈ ದೇವಾಲಯವನ್ನು ಕಟ್ಟಿಸಿದ್ದು ರಾಶ್ಮೋನಿ ರಾಣಿ, ಆದರೆ ಆಮೇಲೆ ಇದು ಪ್ರಸಿಧ್ಧವಾದದ್ದು ಶ್ರೀ. ರಾಮಕೃಷ್ಣ ಅವರ ಉಪಸ್ಥಿತಿಯಿಂದ. ದೇವಾಲಯದಿಂದ ಹೊರಗೆ ಬಂದವರ ಹೊಟ್ಟೆಗಳು ತಾಳ ಹಾಕುತ್ತಿದ್ದವು. ನೇರವಾಗಿ ಊಟಕ್ಕೆ ಒಂದು ದಕ್ಷಿಣ ಭಾರತದ ಹೋಟೆಲಿಗೆ ಕರೆದೊಯ್ದ ನಮ್ಮ ಮೌನಿ ಬಾಬಾ! ಅಲ್ಲಿ ಊಟ ತುಂಬಾ ಚೆನ್ನಾಗಿತ್ತು. ಹೊಟ್ಟೆ ತುಂಬಾ ಉಂಡು ಕೊಲ್ಕತ್ತ ಪಾನ್ ತಿಂದಿಲ್ಲವೆಂದರೆ ದ್ಯಾವ್ರು ಮೆಚ್ಚುವನೆ?? ಅಲ್ಲಿಯ ಪಾನ್ ಅಂಗಡಿಯೊಂದರಲ್ಲಿ ಹತ್ತು ಪಾನ್ ಹೇಳಿ ಕಾದು ನಿಂತೆವು. ಬೊರೊಬ್ಬರಿ ಅರ್ಧ ಗಂಟೆ ತೊಗೊಂಡು ತುಂಬ ಮುತುವರ್ಜಿಯಿಂದ ಮಾಡಿದ ಪಾನ್ ಸರಿಯಾಗಿ ಅರ್ಧ ಕೇಜಿ ತೂಗುತ್ತಿತ್ತು! ಅಷ್ಟು ದೊಡ್ಡ ಪಾನ್ ನಾನಂತೂ ನೋಡಿರಲಿಲ್ಲ. ತುಂಬಾ ರುಚಿಯಾಗಿತ್ತು. ಮೂರರಿಂದ ನಾಲ್ಕು ಕಂತುಗಳಲ್ಲಿ ತಿಂದು ಬಾಯಿ ಚಪ್ಪರಿಸಿಕೊಂಡೆವು.

ಅಲ್ಲಿಂದ ವಿಕ್ಟೋರಿಯಾ ಮೆಮೋರಿಯಲ್ ಗೆ ಹೋದೆವು. ತುಂಬಾ ಭವ್ಯ ಹಾಗೂ ಸುಂದರವಾದ ಕಟ್ಟಡವಾದರೂ ಒಂಥರ ಕಸಿವಿಸಿಯೆನಿಸುವ ಸ್ಥಳ. ಬಹುಶಃ ನಮ್ಮ ಸ್ವತಂತ್ರ ಪೂರ್ವದ ಗುಲಾಮಗಿರಿಯ ಸಂಕೇತ ಅನಿಸಿ ಬೇಜಾರಾಗುತ್ತೋ ಏನೊ! ಅದನ್ನೊಂದು ವಸ್ತು ಸಂಗ್ರಹಾಲಯವನ್ನಾಗಿ ಮಾಡಿದ್ದಾರೆ. ಅಲ್ಲಿನ ಅವ್ಯವಸ್ಥೆಗಳಂತೂ ಆ ಕಟ್ಟಡವನ್ನು ಮರೆಯಲಾರದಂತೆ ಮಾಡುತ್ತವೆ. ಅದೇ ಕಾರಣಕ್ಕೆ ಅದರ ಹೆಸರು "ಮೆಮೋರಿಯಲ್" ಅಂತ ಇಟ್ಟಿರಬಹುದೇನೊ?! ಅಲ್ಲಿ ರೆಸ್ಟ್ ರೂಮ್ ಹುಡುಕಿ, ಹೋಗಿ ಬರಲು ಅರ್ಧ ಗಂಟೆ ಮೇಲೆ ಬೇಕಾಯ್ತು! ಕಟ್ಟಡದ ಒಳಗಂತೂ ವಿಚಿತ್ರ ಸೆಕೆ. 

ಹೊರಗೆ ಬಂದಾಗ ಗಂಟೆ ನಾಲ್ಕಾಗಿತ್ತೇನೊ. ಅಲ್ಲೇ ಹೊರಗಡೆ ನೀರು, ಚಹಾ ಕುಡಿದು ದಣಿವಾರಿಸಿಕೊಂಡೆವು. ಅಲ್ಲೊಬ್ಬ ಜೊತೆಗೊಂದು ಮಂಗನನ್ನು ತಂದು ಶಾಹ್ ರುಖ್ ಖಾನ್ ಡಾನ್ಸು ನೋಡಿ ಅಂತ ಮಂಗನನ್ನು ಕುಣಿಸಿದ. ಯಾಕೊ ಮಂಗನ ಸ್ಥಿತಿ ನೋಡಿ ಪಾಪ ಅನಿಸಿತು. ಆದರೆ ಅದು ನೋಡೋಕೆ ಶಾಹ್ ರುಖ್ ಗಿಂತ  ಚೆನ್ನಾಗಿತ್ತು! ಆ ರಸ್ತೆಯಲ್ಲಿ ಬರೀ ಟಾಂಗಾಗಳು (ಜಟಕಾ ಬಂಡಿ), ಮತ್ತು ಹಳದಿ ಬಣ್ಣದ ಅಂಬಾಸಿಡರ್ ಟ್ಯಾಕ್ಸಿಗಳು.

ಅಲ್ಲಿಂದ ವಿವೇಕಾನಂದಾ ಹೌಸ್, ಮದರ್ ತೆರೆಸ್ಸಾ ಹೌಸ್ ನೋಡಿಕೊಂಡು ರಾತ್ರಿಯಷ್ಟೊತ್ತಿಗೆ ರೈಲು ನಿಲ್ದಾಣ ತಲುಪಿದೆವು. ದಾರಿಯಲ್ಲಿ ಕಂಡದ್ದರಲ್ಲಿ ಬಹುತೇಕವು ಹಳೆಯದಾದ, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳು, ತುಕ್ಕು ಹಿಡಿದ ಬ್ರಿಟೀಶರ ಕಾಲದ ಟ್ರಾಮ್ ಗಳು, ದಾರಿಯಲ್ಲೇ ಕ್ಷೌರ ಮಾಡುವವರು ಹಾಗೂ ಮಾಡಿಸಿಕೊಳ್ಳುವವರು ಮತ್ತು ಸ್ಲಮ್ ಗಳು! ಇದಕ್ಕೇನಾ "City of Joy" ಅನ್ನೋದು ಅಂತ ಆಶ್ಚರ್ಯದ ಜೊತೆಗೆ ಬೇಸರವೂ ಆಯ್ತು! 

 

ಸಿಕ್ಕಾಪಟ್ಟೆ ದಣಿದಿದ್ದರಿಂದಲೋ ಏನೊ ರಾತ್ರಿ ರೈಲಿನಲ್ಲಿ ಮಲಗಿದವರಿಗೆ ನಿದ್ದೆ ಆವರಿಸಿದ್ದೆ ಗೊತ್ತಾಗಿಲ್ಲ. ಮರುದಿನ ಬೆಳಿಗ್ಗೆ ಜಲ್ ಪೈಗುಡಿ, ಅಲ್ಲಿಂದ ಮುಂದೆ ಒಂದು ಸುಂದರವಾದ ಜಾಗಕ್ಕೆ ಹೋಗುವದಿತ್ತು. ಅದರದ್ದೇ ಕನಸು….

(ಮುಂದುವರಿಯುವುದು…)   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

15 Comments
Oldest
Newest Most Voted
Inline Feedbacks
View all comments
ಮೂರ್ತಿ
ಮೂರ್ತಿ
11 years ago

ಭಾಷೆ ಹಾಗೂ ನಿರೂಪಣೆಯ ದೃಷ್ಟಿಯಲ್ಲಿ ಲೇಖನ ಚೆನ್ನಾಗಿದೆ. ಆದರೆ ತಮ್ಮ ಮಾಮೂಲಿ ಶೈಲಿಯ ಟಚ್ ಇದಕ್ಕಿಲ್ಲ ಎಂಬುದು ಎದ್ದು ಕಾಣುತ್ತಿದೆ. ಪ್ರವಾಸಿ ಕಥನ ಕೇವಲ ಘಟನೆಗಳನ್ನು ತಿಳಿಸುವ ಪ್ರಬಂಧವಾದರೆ ಸರಳವೆನ್ನಿಸಿಬಿಡುತ್ತದೆ. ನಿಮ್ಮ ಹೊರಗಣ್ಣಿನಿಂದ ಸೆರೆಹಿಡಿದ ಚಿತ್ರಗಳೊಡನೆ, ಒಳಗಣ್ಣಿನಿಂದ ನೋಡಿದ ವಿಷಯಗಳು ನಿಮ್ಮದೇ ಸ್ಟೈಲ್ ನಲ್ಲಿ ಮೂಡಿಬಂದರೆ ಆಗ ಅದು ವಿಶಿಷ್ಟವೆನಿಸುತ್ತದೆ. ಇದರ ಮುಂದಿನ ಭಾಗ ಆರೀತಿ ವೈಶಿಷ್ಟ್ಯಪೂರ್ಣವಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿ…………
ಇದು ಒಟ್ಟಾರೆಯಾಗಿ ಹೇಳಿದ್ದರೂ ಕೆಲವೊಂದು ಸಾಲುಗಳು ಖಂಡಿತ ಮನ ಸೆಳೆಯುತ್ತವೆ. ಉದಾ: ೨೦೦ ರೂಪಾಯಿ ಸ್ಯಾಂಡ್ವಿಚ್ ಬೆಲೆ ತಪ್ಪು ಪ್ರಿಂಟಾಗಿದೆಯೋ ಅಂದುಕೊಂಡಿದ್ದು, ವಿಕ್ಟೋರಿಯಾ ಹಾಲ್ ನೋಡಿದಾಗ ಖುಷಿಗಿಂತ ಬೇಸರವೇ ಆದದ್ದು ಇತ್ಯಾದಿ. 

ಗುರುಪ್ರಸಾದ ಕುರ್ತಕೋಟಿ

ನಿಮ್ಮ ಶೈಲಿಯಲ್ಲಿ ಪ್ರತಿಕ್ರಿಯಿಸದ್ದಕ್ಕೆ ಧನ್ಯವಾದಗಳು! :). ಮುಂದಿನ ಕಂತಿನಲ್ಲಿ ಇನ್ನೂ ಹೆಚ್ಚು ಒಳ ನೋಟದಿಂದ ಬರೆಯುವ ಪ್ರಯತ್ನ ಮಾಡುವೆ.

sridhar gopaalakrishna rao mulbagal
sridhar gopaalakrishna rao mulbagal
11 years ago

ತಮ್ಮ ಲೇಖನ ಓದಿದ ನಂತರ ಈ ಮೂರೂ ಅಂಶಗಳ ಬಗ್ಗೆ ತಮ್ಮ ಗಮನ ಸೆಳೆಯಲು ಬಯಸುತ್ತೇನೆ . ೧) ಮಿಸ್ ಪ್ರಿಂಟ್ ಇರಲಿಕ್ಕಿಲ್ಲ -ಬಹುಶಃ ನಿಮ್ಮ ಸುತ್ತ-ಮುತ್ತ ಮಿಸ್ ಗಳು ಇದ್ದ ಕಾರಣ ಮುದ್ರಾರಾಕ್ಷಸ ನೆನಪಿಗೆ ಬಂದಿಲ್ಲ ೨)ಕಲ್ಪನೆಯಲ್ಲಿರುವ ಖುಷಿಯೇ ಬೇರೆ.-ಮಿಸ್ ಗಳ ಕಲರವದಲ್ಲಿ ಕಲ್ಪನಾ ನೆನಪಿಸಿಕೊಂಡಾಗ ನಿಮ್ಮ ಪತ್ನಿಯರು ನಿಮ್ಮ ಜೊತೆ ಬಂದಿದ್ದಾರೆ ಎಂಬುದನ್ನು ಮರೆತ ಪುಣ್ಯ-ಪುರುಷರು,ನೀವುಗಳು ಎಂದು ಅನಿಸುತ್ತದೆ . ೩)ಚೆಂದದ ಗಗನ ಸಖಿಯರೆದುರು ಗಲಾಟೆ ಮಾಡಲು ಯಾರಿಗೆ ತಾನೆ ಮನಸ್ಸಿದ್ದೀತು-ನಿಮ್ಮ ಜೊತೆಯಲ್ಲಿ ಪತ್ನಿಯರು ಇದ್ದ ಕಾರಣ ನೀವು ಗಲಾಟೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಾಮಾಣಿಕ ವಾಗಿ ಒಪ್ಪಬಹುದಿತ್ತು . ಮೇಲಿನ ಅಭಿಪ್ರಾಯ ತಮ್ಮನ್ನು ಚುಡಾಯಿಸಲು ಅಸ್ಟೇ ,ಈ ಪೂರ್ವಾರ್ದ ಲೇಖನ ಚೆನ್ನಾಗಿ ಪ್ರವಾಸದ ಸವಿಯನ್ನು ಹೊರಹೊಮ್ಮಿಸಿದೆ .

ಮೂರ್ತಿ
ಮೂರ್ತಿ
11 years ago

ಹ್ಹ.ಹ್ಹಾ..ಸರ್ ಚೆನಾಗಿದೆ ನಿಮ್ಮ "ಮಿಸ್ಕಲ್ಪನೆಗಳು"..!!

ಗುರುಪ್ರಸಾದ ಕುರ್ತಕೋಟಿ

ಗುರುಗಳೆ, ನಿಮ್ಮ 'ಮಿಸ್' ಭರಿತ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು!

umesh desai
umesh desai
11 years ago

ಹೌದು ಇನ್ನೂ ಸ್ವಲ್ಪ ಮಸಾಲಿ ಇರಬೇಕಾಗಿತ್ತು ಎರಡನೇ ಭಾಗದಾಗ ಈ ಕಮಿ ಪೂರ್ತಿ ಆದೀತಲ್ಲ….?

ಗುರುಪ್ರಸಾದ ಕುರ್ತಕೋಟಿ
Reply to  umesh desai

ಮುಂದಿನ ಸಲ ಬೊರೊಬ್ಬರಿ ಮಸಾಲಿ ಹಾಕ್ತೀನಿ. ಅಮ್ಯಾಲೆ ಅಸಿಡಿಟಿ ಆತು ಅಂತ ಬೈಬ್ಯಾಡ್ರೀ! 🙂

K.M.Vishwanath
11 years ago

ಬಹಳ ಒಳ್ಳೆಯ ಪ್ರಯತ್ನ ಹಾಗೂ ಮಾಹಿತಿ ಪೂರ್ಣ ಲೇಖನ 

ಗುರುಪ್ರಸಾದ ಕುರ್ತಕೋಟಿ
Reply to  K.M.Vishwanath

ವಿಶ್ವನಾಥ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು!

Venkatesh
Venkatesh
11 years ago

ಚೆನ್ನಾಗಿದೆ…

ಗುರುಪ್ರಸಾದ ಕುರ್ತಕೋಟಿ
Reply to  Venkatesh

ವೆಂಕಟೇಶ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು!

ನಿರ್ಮಲಾ
ನಿರ್ಮಲಾ
11 years ago

ಲೇಖನ ಚೆನ್ನಾಗಿದೆ …. ಹಾಂ…  ಅಂದಹಾಗೆ ನೀವು ಮರೆತಿರಬಹುದು…. ಮಿಸ್ ಗಳ ಜೊತೆ ಗಲಾಟೆ ಮಾಡದಿದ್ದರೂ … ನಮ್ಮ ಗಲಾಟೆಯಿಂದ  ಆ ವಿಮಾನದಲ್ಲಿ ಕೆಲ ಪ್ರಯಾಣಿಕರ  ನಿದ್ದೆಗಂತೂ  ಕುತ್ತು ತಂದಿದ್ದು ನಿಜ….  ಮುಂದಿನ ಭಾಗದ ನಿರೀಕ್ಷೆಯಲ್ಲಿ……

ಗುರುಪ್ರಸಾದ ಕುರ್ತಕೋಟಿ

ನಿರ್ಮಲಾ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ಹೌದು ಪ್ರಯಾಣಿಕರಿಗೆ ಕಷ್ಟವಾಗಿರಬಹುದು. ಆದರೆ ನಿಮಗೆ ನೆನಪಿರಬಹುದು, ವಿಮಾನದಿಂದ ಇಳಿಯುವಾಗ ಒಬ್ಬ ಪ್ರಯಾಣಿಕ, ನಾವೆಲ್ಲರೂ ಪ್ರಯಾಣದುದ್ದಕ್ಕೂ ಕನ್ನಡದಲ್ಲೇ ಮಾತಾಡಿದ್ದಕ್ಕೆ ನಮ್ಮನ್ನು ಪ್ರಶಂಸಿಸಿದ್ದು! ಅದನ್ನು ಕೇಳಿ ಖುಷಿಯಾಯ್ತಾದರೂ ಅಷ್ತೇ ಬೇಸರವೂ ಆಯ್ತು. ಕನ್ನಡ ಮಾತನಾಡುವುದು ಇಷ್ಟೊಂದು ಅಪರೂಪವಾಗುತ್ತಿದೆಯೆ ಅಂತ!

ಜೆ.ವಿ.ಕಾರ್ಲೊ, ಹಾಸನ
ಜೆ.ವಿ.ಕಾರ್ಲೊ, ಹಾಸನ
11 years ago

ನೀವು ವಿಮಾನ ಹತ್ತಿ ಇಳಿಯುವವರರೆಗೂ ಚೆನ್ನಾಗಿತ್ತು. ನಿಮ್ಮ ಗೈಡ್ ಅಮಿತ್ ಸಿಕ್ಕ ಮೇಲೆ ಯಾಕೋ ಬೋರ್ ಹೊಡೆಸಿತು.

ಗುರುಪ್ರಸಾದ ಕುರ್ತಕೋಟಿ

ನಿಮ್ಮ ಅನಿಸಿಕೆಗೆ ಧನ್ಯವಾದಗಳು! ಮುಂದಿನ ಬಾರಿ ಬೋರು ಹೊಡಿಸದಂತೆ ಬರೆಯಲು ಯತ್ನಿಸುವೆ!

15
0
Would love your thoughts, please comment.x
()
x