ಇಷ್ಟು ಬೇಗ ಬೆಳಕಾಯ್ತೆ!? ಒಂದೊಂದು ಸಲ ನಿದ್ದೆ ಸಾಲದಾದಾಗ, ಏಳಲೇಬೇಕಾದ ಅನಿವಾರ್ಯತೆಯಿದ್ದಾಗ ಹಾಗನ್ನಿಸಿಬಿಡುತ್ತದೆ! ಇನ್ನೂ ಹಳೆಯದರಂತೇ ಗೋಚರಿಸುವ ಬಂಗಾಲದ New Jalpaiguri ಎಂಬ ಊರಿನಲ್ಲಿ ಗಂಟು ಮೂಟೆಗಳೊಂದಿಗೆ ಬೆಳ್ಳಂ ಬೆಳಿಗ್ಗೆ ಟ್ರೇನಿನಿಂದ ಇಳಿದಾಗ, ಇಲ್ಲಿ ಹೊಸ (New) ದೇನಿರಬಹುದು ಅಂತ ಯೋಚಿಸುತ್ತಲೇ ಹೊರಗೆ ಬಂದಾಗ ಎರಡು ಝೈಲೋ ಗಾಡಿಗಳು ಹಾಗೂ ಇಬ್ಬರು ಸಾರಥಿಗಳು ನಮಗಾಗಿ ಕಾಯ್ದಿದ್ದರು. ಒಬ್ಬನ ಹೆಸರು ಸರೋಜ್ ಇನ್ನೊಬ್ಬ ನೀ ಮಾ. ಇಬ್ಬರೂ ನೇಪಾಳಿಗಳು. ನೀ ಮಾ ಅಂದರೆ ನೇಪಾಳೀ ಭಾಷೆಯಲ್ಲಿ ಸುರ್ಯೋದಯವಂತೆ.
ಕೊಲ್ಕತ್ತಾದ ಬಿಸಿಯ ನೆನಪು ಇನ್ನೂ ಹಸಿ ಹಸಿಯಾಗಿ ಇದ್ದುದರಿಂದ, ಗಾಡಿಯಲ್ಲಿ AC ಹಾಕುವುದಿಲ್ಲವೇ ಅಂತ ಕೇಳಿದ್ದಕ್ಕೆ ನೀ ಮಾ ಹಿಂದಿಯಲ್ಲಿ ಹೀಗೆ ಹೇಳಿದ
"ಜಹಾಂ ಪೆ ಹಮ್ ಜಾರಹೆ ಹೈಂ ನೈ.. ಉಧರ್ ನೈ , ಇತನಾ ಥಂಡ ರೆಹ್ತಾ ಹೈ ನೈ .. ಆಪ್ಕೊ ಏಸಿ ಕಾ ಜರೂರತ್ ನಹಿ ಪಡ್ತಾ ಹೈ.. ನೈ " …
ಅವನ ಮಾತಿನ ಧಾಟಿಯೇ ಅಂಥದ್ದು! ಅವನ ಒಂದು ವಾಕ್ಯದಲ್ಲಿ ಹಲವಾರು "ನೈ" (ನಹಿ) ಗಳು! ಆದರೆ ಅವನು ಹೇಳಿದ್ದು ಸತ್ಯವೇ ಆಗಿತ್ತು ಜಲ್ ಪೈ ಗುಡಿ ಯಿಂದ ಮಿರಿಕ್ ಸರೋವರದ ಮುಖಾಂತರ ದಾರ್ಜಿಲಿಂಗ ಗೆ ಹೋಗುವ ಹಾದಿ ಅರೋಹಣವಾಗಿತ್ತು, ತಂಪು ಜಾಸ್ತಿಯಾಯ್ತು ಒಳ್ಳೇ ಅಹ್ಲಾದಕರ ಹವೆ. ದಾರಿಯುದ್ದಕ್ಕೂ ಚಹಾದ ತೋಟಗಳು. ಮೂರು ಗಂಟೆಯ ಪ್ರವಾಸದ ನಂತರ ಮುಟ್ಟಿದ ಮಿರಿಕ್ ಸರೋವರದ ದಡದಲ್ಲಿ ಒಂದಿಷ್ಟು ವಿಹರಿಸಿ "ಮೋ ಮೋ" ಅನ್ನುವ ಅಲ್ಲಿನ ಸ್ಥಳೀಯ ಖಾದ್ಯವೋಂದನ್ನು ತಿಂದು ಪುನೀತರಾದೆವು. ಅದು ನಮ್ಮ ಕಡೆ ಮಾಡುವ ಕುಚ್ಚಿದ ಕಡುಬಿನ ತರಹದ ತಿನ್ನುವ ಪದಾರ್ಥ. ಮಿರಿಕ್ ಸರೋವರ ಅಷ್ಟೇನು ದೊಡ್ಡದಲ್ಲದಿದ್ದರೂ ಬೆಟ್ಟದ ಮೇಲಿನಿಂದ ನಮ್ಮ ಮೇಲೆಯೇ ಬೀಳುತ್ತವೇನೊ ಎಂಬಂತೆ ನಿಧಾನವಾಗಿ ಸಾಗಿ ಬರುವ ಮೋಡಗಳು ನಮ್ಮ ದೇಹವನ್ನು ಆವರಿಸಿಕೋಂಡಾಗ ಆಗುವ ಪುಳಕವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಹೀಗೆ ಮುಂದೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಒಂದು ಕಡೆ ಗಕ್ಕನೆ ಗಾಡಿ ನಿಂತಾಗ ಸುತ್ತಲೂ ನೋಡಿದರೆ ಅಲ್ಲೇನು ಅಂಥ ವಿಶೇಷ ಕಾಣಲಿಲ್ಲ. ಇಲ್ಲೇಕೆ ನಿಲ್ಲಿಸಿದೆಯೆಂಬ ನಮ್ಮ ಪ್ರಶ್ನಾರ್ಥಕ ನೋಟವನ್ನು ಮೊದಲೇ ನಿರೀಕ್ಷಿಸಿದವನಂತೆ ನೀ ಮಾ ತನ್ನನ್ನ ಹಿಂಬಾಲಿಸಿರೆಂದು ಸನ್ನೆ ಮೂಲಕ ಹೇಳಿ ಒಳ್ಳೆ ಮಿಲ್ಟ್ರೀ ಕಮಾಂಡರ್ ತರಹ ಮುಂದೆ ಹೊರಟ. ನಾವೂ ಮಾತನಾಡದೇ ಹಿಂಬಾಲಿಸಿದೆವು. ಸ್ವಲ್ಪ ದೂರ ಕರೆದೊಯ್ದು ಒಂದು ಕಲ್ಲು ತೋರಿಸಿದ ಅದರ ಮೇಲೆ ನೇಪಾಳ ಅಂತ ಹಿಂದಿಯಲ್ಲಿ ಬರೆದಿತ್ತು! ಅದನ್ನು ನೋಡಿ ಪುಳಕಿತರಾದೆವು. ಅದು ನೇಪಾಳದ ಗಡಿ ಗುರುತಿಸುವ ಕಲ್ಲಾಗಿತ್ತು!
ಅಲ್ಲಿಂದ ಸ್ವಲ್ಪ ದೂರದ ರಸ್ತೆಯನ್ನು ಕ್ರಮಿಸಿದಾಗ, ಒಂದು ಕಡೆ ಮತ್ತೆ ನಿಂತಾಗ ಅಲ್ಲೊಂದು ಕೋಲಿನ ಗೇಟು ಇತ್ತು, ಮೇಲೊಂದು ಕಮಾನು, ಅಲ್ಲೊಂದಿಷ್ಟು ಸಮವಸ್ತ್ರದಲ್ಲಿದ್ದ ಅಧಿಕಾರಿಗಳು. ಅದು ನೇಪಾಳಕ್ಕೆ ಪ್ರವೇಶ ದ್ವಾರವಾಗಿತ್ತು. ಅಂದರೆ ನಾವು ನಿಂತಿದ್ದು ಅಂತರ್ ರಾಷ್ಟ್ರೀಯ ಗಡಿ ಅಂತ ನಮ್ಮ ಗಮನಕ್ಕೆ ಬಂದಾಗ ಮತ್ತೆ ಪುಳಕ! ಆ ಕಮಾನಿನ ಫೋಟೊ ತೆಗೆಯಲು ಹೋಗಿ ಅಧಿಕಾರಿಯೊಬ್ಬನ ಬಳಿ ಬೈಸಿಕೊಂಡೆವು. ಅದೊಂದು ಛಾಯಾಚಿತ್ರ ನಿಷೇದಿತ ಸ್ಥಳವಂತೆ. ಗೂಗಲ್ ಮ್ಯಾಪ್ ಗೆ ಹೋಗಿ ಇದೆಲ್ಲವನ್ನೂ ಇನ್ನೂ ಚೆನ್ನಾಗಿ ಕುಳಿತಲ್ಲಿಂದಲೇ ವೀಕ್ಷಿಸಬಹುದಾದ ಈ ಕಾಲದಲ್ಲಿ ಈ ಛಾಯಾಗ್ರಹಣ ನಿಷೆಧ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅಂತ ತಲೆ ಕೆರೆದುಕೊಳ್ಳುತ್ತಾ ನೇಪಾಳದೊಳಗೆ ರೆಜಿಸ್ಟರ್ ಒಂದರಲ್ಲಿ ನೋಂದಣಿ ಮಾಡಿ ನುಸುಳಿದೆವು. ಅದೊಂದು ಫ಼ಾರ್ಮ್ಯಾಲಿಟಿ ಅಷ್ಟೆ. ಆ ಗಡಿಯಲ್ಲಿದ್ದದ್ದು ಐಲಾಮ್ ಅನ್ನುವ ಒಂದು ಹಳ್ಳಿ. ನಮ್ಮ ಹಳ್ಳಿಗೂ ಅದಕ್ಕೂ ವ್ಯತ್ಯಾಸವೇನೂ ಇರಲಿಲ್ಲ. ಆ ಊರಲ್ಲಿ ಎಲ್ಲಿ ನೋಡಿದರಲ್ಲಿ ಕಂಡಿದ್ದು ಎರಡೆ ವಸ್ತುಗಳು, ಉಣ್ಣೆಯ ಬಟ್ಟೆಗಳು ಹಾಗೂ ಎಣ್ಣೆಯ ಬಾಟ್ಲಿ ಅಂಗಡಿಗಳು! ನಾವು ಎರಡನ್ನೂ ಕೊಳ್ಳಲಿಲ್ಲ! ಅಲ್ಲಿನ ಹೋಟೆಲ್ ಒಂದರಲ್ಲಿ ಊಟಕ್ಕೆ ಅಂತ ನೇಪಾಳಿ ಸ್ಪೆಷಲ್ ಏನಾದ್ರೂ ಕೊಡು ಅಂದ್ರೆ ಅನ್ನ – ದಾಲ್ ನಮ್ಮ ಮುಂದಿಟ್ಟು ಆತ ಕೈ ತೊಳಕೊಂಡ. ಬೇರೆ ಏನೂ ಆಯ್ಕೆ ಇರದಿದ್ದರಿಂದ ಊಟ ಮಾಡಿ ನಾವೂ ಕೈ ತೊಳಕೊಂಡೆವು!
ದಾರ್ಜಿಲಿಂಗ್ ಗೆ ಹೋಗುವ ರಸ್ತೆಯಲ್ಲಿ ನೋಡಿದಾಗ, ಇಲ್ಲಿನ ಜನಜೀವನ ಪೂರ್ತಿ ಬೇರೆಯದೇ ಅನಿಸಿತು. ಬಂಗಾಲದ ಜನ ಜೀವನಕ್ಕೊ ಇಲ್ಲಿನದಕ್ಕೂ ತುಂಬಾ ದೊಡ್ಡ ವ್ಯತ್ಯಾಸ. ಇದು ಬೆಂಗಾಲದಲ್ಲೇ ಇದ್ದರೂ ಇಲ್ಲಿ ಬೆಂಗಾಲಿ ಮಾತಾಡುವವರು ತುಂಬಾ ಕಡಿಮೆ, ಅಥವ ಇಲ್ಲವೇ ಇಲ್ಲ ಅಂತಲೂ ಹೇಳಬಹುದೇನೊ. ಈ ಪ್ರದೇಶಗಳು ಹೇಗೆ ಬೆಂಗಾಲಕ್ಕೆ ಸೇರಿಸಲ್ಪಟ್ಟವು ಅನ್ನುವ ನಮ್ಮ ಕುತುಹಲವ ತಣಿಸುವದಕ್ಕೆ ನೀ ಮಾ ಇದ್ದ… ನೈ?! ಮೊದಲು ದಾರ್ಜಿಲಿಂಗ್ ಸಿಕ್ಕಿಂ ರಾಜನ ಆಳ್ವಿಕೆಯಲ್ಲಿತ್ತು. ಬ್ರಿಟೀಶರು ಕಲ್ಕತ್ತಾವನ್ನು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಾಗ ಅವರಿಗೋಂದು ಬೇಸಿಗೆಯ ಕಾಲದಲ್ಲಿ ವಿಹರಿಸಲು ತಾಣವೊಂದು ಬೇಕಿತ್ತು. ಇದರ ಮೇಲೆ ಅವರ ಕಣ್ಣು ಬಿತ್ತು. ಬೇಧ-ದಂಡ ಅಂತ ಅವರ ಮಾಮುಲಿ ಕುತಂತ್ರಗಳ ಬಳಸಿ ತಮ್ಮ ತೆಕ್ಕೆಗೆ ದಾರ್ಜಿಲಿಂಗ್ ಹಾಕಿಕೊಂಡರು. ಅಲ್ಲೊಂದಿಷ್ಟು ತಮ್ಮ ಅನುಕೂಲಕ್ಕೆ ಅಂತ ರಸ್ತೆ – ಟ್ರ್ಯಾಕು ಮಾಡಿಕೊಂಡರು. ಕೊಳ್ಳೆ ಹೊಡೆದು, ಎಲ್ಲವನ್ನೂ ಅನುಭವಿಸಿ ಅವರು ಭಾರತ ಬಿಟ್ಟು ಹೋದಾಗಲೂ ಕಲ್ಕತ್ತಾದೊಂದಿಗೆ ಈ ರೀತಿ ಸಂಬಂಧ ಹೊಂದಿದ್ದ ದಾರ್ಜಿಲಿಂಗ್ ಹಾಗೂ ಸುತ್ತಲಿನ ಪ್ರದೇಶಗಳು ಬೆಂಗಾಲಕ್ಕೆ ಸೇರಿಸಲ್ಪಟ್ಟವು. ಆದರೆ ಅಲ್ಲಿ ತುಂಬಾ ದೊಡ್ಡ ಪ್ರಮಾಣದಲ್ಲಿರುವ ಗೂರ್ಖಾಗಳು ತಮಗೆ ಬೇರೆಯ ರಾಜ್ಯ ಬೇಕೆಂದು ತುಂಬಾ ವರುಷಗಳಿಂದ ಪಟ್ಟು ಹಿಡಿದಿದ್ದಾರೆ. ಅದು ಒಂದು ಮಟ್ಟಿಗೆ ಸರಿಯಾದ್ದೆ ಬೇಡಿಕೆ ಅನಿಸುತ್ತದೆ. ಅಲ್ಲಿಂದ ಪ್ರವಾಸೋದ್ಯಮದ ಮುಖಾಂತರ ಸಾವಿರಾರು ಕೋಟಿ ಉತ್ಪನ್ನ ಗಳಿಸುವ ಬಂಗಾಲ ಸರಕಾರ ಅಲ್ಲಿನ ಜನರಿಗೆ ಏನೂ ಅನುಕೂಲಗಳನ್ನು ಮಾಡಿಲ್ಲ. ಅಡ್ಡಾಡಲೂ ಸರಿಯಾದ ಸಂಚಾರ ವ್ಯವಸ್ಥೆಯೂ ಇಲ್ಲ. ಅಲ್ಲಿನ ಜನ ನೀರಿಗೂ ಪರದಾಡುತ್ತಾರೆ. ಒಂದು ಟ್ಯಾಂಕ್ ನೀರಿಗೆ ೪ ರಿಂದ ೬ ಸಾವಿರ ತೆರಬೇಕಂತೆ! ಬೇರೆ ರಾಜ್ಯ ಮಾಡಿದರೆ ಆಡಳಿತವೂ ಸುಲಲಿತವಾಗಿ ಇಲ್ಲಿನ ಪರಿಸ್ಥಿತಿ ಸುಧಾರಿಸಬಹುದೇನೊ. ಆದರೂ ಇದೊಂದು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕಾತುರ ಹೆಚ್ಚಾಯಿತು.
ಅಲ್ಲಿಂದ ನೇರವಾಗಿ ದಾರ್ಜಿಲಿಂಗ್ ಹೋಟೆಲ್ ಗೆ ತಲುಪಿದೆವು. ಅವತ್ತು ಸಂಜೆ ವಿಶ್ರಾಂತಿ. ಮರುದಿನ ಬೆಳಿಗ್ಗೆ ೪ ಗಂಟೆಗೆಲ್ಲಾ ಎದ್ದಿರಬೇಕು ಅಂತ ನೀಮಾ ಅವರು ಅಪ್ಪಣೆ ಹೊರಡಿಸಿದ್ದರು. ಬೆಳಿಗ್ಗೆ ಎದ್ದು, ಮಕ್ಕಳನ್ನೆಲ್ಲಾ ಸೇರಿಸಿಕೊಂಡು ಟೈಗರ್ ಹಿಲ್ ಗೆ ಸುರ್ಯೋದಯ ವೀಕ್ಷಣೆಗೆ ನೀಮಾ ನೊಂದಿಗೆ ಹೊರಟೆವು. ಹೋಟೆಲಿನಿಂದ ೭ ಕಿಲೋಮೀಟರ್ ದೂರದ ಬೆಟ್ಟವದು. ಹಾಗೇ ದಾರಿಯಲ್ಲಿ, ಜಗತ್ತಿನಲ್ಲೇ ಎತ್ತರದಲ್ಲಿರುವ ರೈಲು ನಿಲ್ದಾಣ ಹಾಗು ಹಳಿಗಳನ್ನು ತೋರಿಸಿದ. ಇದು ಬ್ರಿಟಿಶರ ಕಾಲದ್ದೇ ಇರಬೇಕಲ್ಲವೇ ಅಂತ ಕೇಳಿದ್ದೆ ತಡ ನೀಮಾ ಹೀಗಂದ
"ಬ್ರಿಟೀಶರು ಇಲ್ಲಿ ಬಂದಿದ್ದರಿಂದಲೇ ನಾವು ಸ್ವಲ್ಪನಾದರೂ ಉದ್ಧಾರವಾದೆವು, ಅವರಿರಬೇಕಿತ್ತು!" ನಮ್ಮ ರಕ್ತ ಕುದಿಯದೇ ಇರುವ ಸಾಧ್ಯತೆಗಳೇ ಇರಲಿಲ್ಲ!
ಅವನಿಗೆ ಚೆನ್ನಾಗಿ ದಬಾಯಿಸಿದೆವು. ಅವರು ಬಂದಿದ್ದು ನಮ್ಮನ್ನು ಕೊಳ್ಳೆ ಹೊಡೆಯಲು, ಅವರು ರೈಲು ಹಳಿ ಮಾಡಿದ್ದು ನಿನ್ನ ಅನುಕೂಲಕ್ಕಲ್ಲ ತಮ್ಮ ಅನುಕೂಲಕ್ಕೆ. ಅವರು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದರು ಅಂತೆಲ್ಲಾ ಹಿಗ್ಗ ಮುಗ್ಗ ಬೈದೆವು. ಅವನ ಸಿಟ್ಟೆಲ್ಲಾ ಇದ್ದದ್ದು ಭಾರತ ಸರಕಾರ ತಮಗೇನೂ ಮಾಡಿಲ್ಲ ಅಂತ. ಅದಕ್ಕಾಗಿ ಬ್ರಿಟೀಶರಿದ್ದರೆ ಚೆನ್ನಾಗಿತ್ತು ಅನ್ನುವುದು ಅವನ ವಾದ. ಇದು ನೀ ಮಾ ಒಬ್ಬನ ಭಾವನೆಯಲ್ಲ. ಈ ಥರ ಯೋಚಿಸುವ ತುಂಬಾ ಜನರು ನಮ್ಮ ದೇಶದಲ್ಲಿದ್ದಾರೆ ಅನ್ನುವುದು ತುಂಬಾ ವಿಶಾದನೀಯ ಸಂಗತಿ. ನಾವು ಅವನ ಮನ ಪರಿವರ್ತನೆಯ ವ್ಯರ್ಥ ಪ್ರಯತ್ನವಾಗಿ, "ಸರಕಾರ ಅಂದರೆ ನಮ್ಮಿಂದಲೇ ಅರಿಸಲ್ಪಟ್ಟಿರುವವರು. ಇಲ್ಲಿಯ ಪರಿಸ್ಥಿತಿ ಸುಧಾರಿಸಲು ನೀನು ಯಾವ ರೀತಿಯಲ್ಲಿ ಪ್ರಯತ್ನಿಸಿರುವೆ? ನೀನು ಯಾಕೆ ಚುನಾವಣೆಗೆ ನಿಲ್ಲಬಾರದು?"… ಅವನ ಮನ ಪರಿವರ್ತನೆ ಇರಲಿ ನಮ್ಮ ಮಾತು ಕೇಳುವುದಕ್ಕೂ ಅವನು ತಯಾರಿರಲಿಲ್ಲ.
"ನೀವು ಏನೇ ಹೇಳಿ, ನನ್ನ ವಿಚಾರಗಳನ್ನು ಬದಲಿಸಲು ಸಾಧ್ಯವಿಲ್ಲ!" ಅಂತ ಅವನು ಖಡಾಖಂಡಿತವಾಗಿ ಹೇಳುವುದಕ್ಕೂ ನಾವು ಸೂರ್ಯೋದಯದ ಬೆಟ್ಟದ ತುದಿ ತಲುಪುವುದಕ್ಕೂ ಸರಿ ಹೋಯ್ತು. ಇನ್ನು ಕೆಲವೇ ಕ್ಷಣಗಳಲ್ಲಿ ಅಲ್ಲಿ ಸೂರ್ಯೋದಯವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದವು. ಆದರೆ ನಮ್ಮ ಪ್ರಜೆಗಳ ಮನದಲ್ಲಿ ಸೂರ್ಯೋದಯವಾಗುವುದು ಯಾವಾಗ ಅಂತ ಯೋಚಿಸುತ್ತ ನನ್ನ ಮನಸ್ಸು ಖಿನ್ನವಾಗಿತ್ತು.
ಅಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಅಲ್ಲಿನ ಸೂರ್ಯೋದಯವನ್ನು ಅನುಭವಿಸಿಯೆ ತಿಳಿಯಬೇಕು. ಆ ಭಗವಂತನ ಸೃಷ್ಟಿಯೂ ಅದ್ಭುತವೇ, ಸೂರ್ಯೋದಯ ಜಗತ್ತಿನ ಯಾವುದೇ ಮೂಲೆಯಲ್ಲೂ ನೊಡಬಹುದಾದರೂ ಪ್ರತಿಯೊಂದು ಸೂರ್ಯೋದಯಕ್ಕೂ ತನ್ನದೇ ಆದ ಸೌಂದರ್ಯವಿದೆ. ಸುತ್ತಲೂ ಬೆಟ್ಟಗಳು, ಎಡ ಪಕ್ಕದಲ್ಲಿ ದೂರದಲ್ಲಿ ಕಂಚನಜುಂಗಾ ಶಿಖರಗಳ ಶ್ರೇಣಿಗಳ ರಮಣೀಯ ದೃಶ್ಯ, ಮುಂದುಗಡೆ ಮೋಡಗಳ ಅದ್ಭುತ ಹಾಸು. ತುಂಬಾ ದೂರದಿಂದ ಗೌರಿ ಶಂಕರದ ಶಿಖರವೂ ಕಾಣುತ್ತದೆ. ಸೂರ್ಯ ಮೇಲೇರುತ್ತಿದ್ದಂತೆ ಬೆಳ್ಳಗಿದ್ದ ಕಾಂಚನಜುಂಗಾದ ಒಂದು ಪಾರ್ಶ್ವ ಕ್ರಮೇಣವಾಗಿ ಕೆಂಪಾಗಾಗುತ್ತಿದ್ದಂತೆ ಒಂದು ಬಗೆಯ ಚೀತ್ಕಾರ ನಮಗರಿವಿಲ್ಲದಂತೆ ಹೊರಡುತ್ತದೆ. ಅಲ್ಲಿಯ ಒಂದೊಂದು ಕ್ಷಣ ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ. ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳವದು. ನಿಜಕ್ಕೂ ರುದ್ರ ರಮಣೀಯ! ಸಧ್ಯ ಈ ಸೌಂದರ್ಯದ ಸೃಷ್ಠಿಕರ್ತರೂ ಬ್ರಿಟೀಶರೇ ಅಂತ ನೀಮಾ ಹೇಳಲಿಲ್ಲ!
ಅಲ್ಲಿ ಸ್ವಲ್ಪ ಹೊತ್ತು ಇದ್ದು ವಾಪಸ್ಸು ಹೋಟೇಲಿಗೆ ಹೋದೆವು. ಉಳಿದ ದಿನ ದಾರ್ಜಿಲಿಂಗ್ ನ ವೀಕ್ಷಣೆಗೆ ಹೋಗುವುದು ಬಾಕಿ ಇತ್ತು…
(ಮುಂದುವರಿಯುವುದು…)
ನೀ.ಮಾ. ಹೇಳಿದ್ದು ಸರಿ ಆಂತ ಈ ಉಪದ್ವ್ಯಾಪಿ ದೇಶಾಯಿ ಅಂಬೋಣ…
ದೇಸಾಯಿಯವರೆ, ನೀವು ನೀಮಾ ಹೇಳಿದ್ದು ಸರಿ ಅಂತ ಹೇಳಿದ್ದು ಸರಿಕಾಣುತ್ತಿಲ್ಲ. ಅದು ಹೇಗೆ ಬ್ರಿಟೀಶರು ಬಂದು ಭಾರತವನ್ನು ಉಧ್ದಾರ ಮಾಡಿದರು ಎಂಬುದರ ಬಗ್ಗೆ ವಿವರವಾಗಿ ಹೇಳಿದರೆ ಅನುಕೂಲವಿತ್ತು. ಅವರು ರೈಲು ಹಳಿ ಹಾಕಿದರು, ಶಾಲೆ ತೆರೆದರು ಇವೆಲ್ಲಾ " ಉಪಕಾರದ" ಸಾಲಿನಲ್ಲಿ ಸೇರುತ್ತವೆ ಎಂದಾದರೆ ನೀವು ಭಾರತೀಯ ಇತಿಹಾಸವನ್ನು ಮೇಲ್ನೋಟಕ್ಕೆ ಓದಿ ತಿಳಿದ್ದಿದ್ದೀರಿ; ಆಳವಾಗಿ ಅಧ್ಯಯನ ಮಾಡಿಲ್ಲ ಎಂಬುದಕ್ಕೆ ಪುರಾವೆ.
ಉಮೇಶ, ನೀ ಮಾ ಹೇಳಿದ್ದು ಸರಿ ಹೇಗೆ ಅಂತ ದಯವಿಟ್ಟು ಬಿಡಿಸಿ ಹೇಳಿ. ಅದೂ ಅಲ್ಲದೇ, ಇದರ ಮೇಲೆ ಒಂದು ಸಂಬಾರ್ ಸಮಾವೇಷ ಆಗಲೇಬೇಕೇನೊ!
ಸೂರ್ಯೋದಯ-ನೋಡಲು ಅಷ್ಟು ದೂರ ಹೋಗಬೇಕಿತ್ತೀ ಎಂದು ಅನಿಸುತ್ತದೆ . ಆದರೆ ಪ್ರವಾಸ ದೇಶ-ಜನಜೀವನ-ಸ್ತಳ ವಿಷಯ ಮನ್ನಸ್ಸನ್ನು ಉತ್ಸಾಹಗೊಳಿಸುತ್ತದೆ . ನಿಮ್ಮಗಳ ಅನುಭವ ನಿಮ್ಮ ಮನಸ್ಸನ್ನು-ವಿಚಾರಗಳನ್ನು ಉದ್ದೀಪನಗೊಳಿಸಿದ ವಿಷಯ ನಿಮ್ಮ ಕಥನ ಮೂಡಿಬರಲಿ ಎಂಬುದು ನನ್ನ ಆಶಯ . ಲೇಖನ ಚೆನ್ನಾಗಿದೆ. ಗಡಿ -ಅಡಿಗಡಿಗೂ ಪ್ರತ್ಯೇಕಿಸುವ ಪ್ರಕ್ರಿಯೆ . ಬ್ರೀಟೀಷರಿಗೂ divide &rule ಗೆ ಸಹಾಯಕ ವಾಗಿದ್ದೇ ಈ ಗಡಿ-ಬಿಡಿ . ಈ ಗಡಿ -ವ್ಯವಹಾರದಲ್ಲಿ ಮೈನಿಂಗ್ ಪ್ರಕ್ರೀಯೆ ನಡೆದು ದೇವಿ ದೇವಸ್ತಾನ ಛಿದ್ರ ಗೊಳಿಸಿದ ರೆಡ್ಡಿಗಳು ಶ್ರೀಕೃಷ್ಣ ಜನ್ಮ ಸ್ತಾನಕ್ಕೆ ತೆರಳಿದ್ದು ಇತಿಹಾಸವಾಗಿದೆ . ಮುಂಬೈ-ಬೆಳಗಾಂ ಗಡಿ ಬಗ್ಗೆ ಮಹಾಜನ್ ವರದಿ ಧೂಳು ತಿನ್ನುತ್ತಿದೆ . ಅದ್ದರಿಂದ ಈ ಗಡಿ ಬಗ್ಗೆ ತಾವು ಉಲ್ಲೇಖ ಮಾಡಿದಾಗ ಈ ನೆನಪುಗಳು ಕಾಡಲಿ .
ನಿಮ್ಮ ಈ ಭಾಗದ ಮೊದಲ ಸಾಲೇ ಲೇಖನ ಖಂಡಿತ ಇಂಟೆರೆಸ್ಟಿಂಗ್ ಅನ್ನಿಸುವಂತೆ ಮಾಡುತ್ತದೆ. ತಮ್ಮ ಹಿಂದಿನ ಲೇಖನದ 'ಕಟ್ಟು'ಗಳಿಂದ ಹೊರಬಂದು, ಓದಿದರೆ ಒಳ್ಳೆ ಖುಷಿಯಾಗುವ ಪ್ರವಾಸೀಕಥನವಿದು. ಹೀಗೇ ರೋಚಕವಾಗಿ ಇದು ಮುಂದುವರಿಯಲಿ..!
@ ಶ್ರೀಧರ್ ಸರ್: ಸೂರ್ಯೋದಯ ನೋಡಲು ಇಷ್ಟು ದೂರ ಬರಬೇಕೇ ಎಂಬ ನಿಮ್ಮ ಪ್ರಶ್ನೆ, ಕಾಂಚನಜುಂಗಾ ಪರ್ವತದ ಮೇಲಿನ ಸೂರ್ಯೋದಯಕ್ಕೆ ಸರಿಹೊಂದುವುದಿಲ್ಲ. ಏಕೆಂದರೆ ಕಾಂಚನಜುಂಗಾ ಪರ್ವತ ಶ್ರೇಣಿಯ ಮೇಲಿನ ಆ ಕ್ರೀಯೆಯನ್ನು "ಅರೋರಾ" ( Aurora) ಅನ್ನುತಾರೆ. ಅದಕ್ಕೆ ಪರ್ಯಾಯ ಕನ್ನಡ ಪದ ಯಾವುದು ಅಂತಾ ನನಗೆ ಗೊತ್ತಿಲ್ಲ. ಈ ಅರೋರಾ ಅನ್ನುವುದು ಸೌರ ವ್ಯೂಹದ ಅತಿ ವಿಶಿಷ್ಟ, ಅಪರೂಪದ ಪ್ರಕ್ರಿಯೆ. ಅದು ಬರಿ ಸೂರ್ಯ ಹುಟ್ಟುವ ಪ್ರಕ್ರಿಯೆಯಲ್ಲ. ಸಂಕ್ಶಿಪ್ತವಾಗಿ ಹೇಳಬೇಕೆಂದರೆ- ಭೂಮಿಯ magnetic field ನಲ್ಲಿ magnetosphere ಎನರ್ಜಿ ಹಾಗೂ solar wind ನ ಘರ್ಷಣೆಯ ನಡುವೆ ಸೂರ್ಯೋದಯವಾದಾಗ, ( ಅದೂ ೬-೧೦ ಡಿಗ್ರೀ ಲಾಟಿಟ್ಯೂಡಿನಲ್ಲಿ ಮಾತ್ರ !!) ಉಂಟಾಗುವ "ಪ್ರಭೆ" ಯನ್ನು ಅರೋರಾ ಅನ್ನುತ್ತಾರೆ. ಈ ಅರೋರಾದಬಗ್ಗೆ ಬೆಂಜಮಿನ್ ಫ್ರಾಂಕ್ಲಿನ್ ನಿಂದ ಹಿಡಿದು ಘಟಾನುಘಟಿಗಳೆಲ್ಲ ಅಧ್ಯಯನ ಮಾಡಿಬಿಟ್ಟಿದ್ದಾರೆ ! ಇದು ಕೇವಲ ಉತ್ತರ ಹಾಗೂ ದಕ್ಶಿಣ ಧ್ರುವಗಳಲ್ಲಿ ಮಾತ್ರ ಗೋಚರಿಸುತ್ತದೆ ಎಂಬುದು ಪ್ರತೀತಿ. ಆದರೆ ಈ ಕಾಂಚನಜುಂಗಾ ಸೂರ್ಯೋದಯ ಕೂಡ ಆ ಅರೋರಾದ ಒಂದು ರೂಪವೇ ಎನ್ನುವುದು ತಜ್ನರ ಅಭಿಪ್ರಾಯ. ಅದರ ಸೌಂದರ್ಯ ಬರಹಗಳಲ್ಲಿ ಬಣ್ಣಿಸುವದು ಅಸಾಧ್ಯದ ಮಾತು. ಅದಕ್ಕೇ ಗುರುಪ್ರಸಾದರು ಅದು ದೇವರ ಸೃಷ್ಟಿ ಎಂಬ ಉಪಮೆಯನ್ನು ಬಳಸಿರುವರೆಂಬುದು ನನ್ನ ಅನಿಸಿಕೆ. ಅದು ಸೂಕ್ತವೂ ಹೌದು.
ನಿಮ್ಮ ಗಾಡಿ ಹಳಿಗೆ ಬಂದಂತೆ ಕಾಣುತ್ತದೆ. ರೋಚಕವಾಗಿದೆ. ಮುಂದುವರೆಸಿ..
ಜೆ.ವಿ.ಕಾರ್ಲೊ, ನಿಮ್ಮ ನಿಷ್ಠುರವಾದ ಪ್ರತಿಕ್ರಿಯೆಯೇ ನಮ್ಮ ಗಾಡಿಯನ್ನು ಹಳಿಗೆ ತರಲು ಕಾರಣ! ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದಿನ ಕಂತಿನಲ್ಲೂ ಬೋರು ಹೊಡಿಸದಂತೆ ಬರೆಯುವ ಹೊಣೆ ನನ್ನ ಮೇಲಿದೆ.
ಲೇಖನ ಮಸ್ತ್ ಇದೆ … ನೀ ಮಾ ಸ್ಟೈಲ್ ಸಕ್ಕತ್ತಾಗಿ ಬರೆದಿದ್ದೀರಿ ಸಾಬ್ಜಿ 🙂 …. ಇನ್ನೂ ಸ್ವಲ್ಪ GORKHALAND ಬಗ್ಗೆ ಬರಿತಿರ ಅಂತ ಬಯಸಿದ್ದೆ …. ಚೊಲೋ ಚೊಲೋ ಮುಂದಿನ ಭಾಗದಲ್ಲಿ ಏನಿದೆ ಅಂತ ನೋಡೋಣ 🙂 .
@ಮೂರ್ತಿ.. ನೀವು ಕೊಟ್ಟಿರುವ ಅರೋರ ದ ವಿವರಣೆ ತುಂಬಾ ಚೆನ್ನಾಗಿದೆ. ನನಗೆ ಇದೊಂದು ಹೊಸ ಮಾಹಿತಿ ನೆ ಸರಿ. ಈ ಅವರ್ಣನೀಯ ಸೌಂದರ್ಯ ದ ಹಿಂದೆ ಹೀಗೊಂದು ವೈಜ್ಞಾನಿಕ ಕಾರಣ ವಿರುವ ಸತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು. ನೀವು ಮತ್ತು ಗುರು ಹೇಳಿದಂತೆ ಈ ಒಂದು ರಮಣೀಯ ಸೌಂದರ್ಯವನ್ನು ಬರಹದಲ್ಲಿ ತಿಳಿಸಲು ನಿಜಕ್ಕೂ ಅಸಾದ್ಯ……..
ನಿರ್ಮಲಾ: ನೀವು ಚೆನಾಗಿ ಬರೀತೀರಿ. ಹೇಳಬೇಕಾದ ವಿಷಯವನ್ನು ನೀವು 'ಡೆಲಿವರ್' ಮಾಡುವ ಶೈಲಿ ( ತಲುಪಿಸುವ ಶೈಲಿ) ಬಲು ಸೊಗಸು. ವಾಕ್ಯವನ್ನು ಮುಗಿಸುವ ರೀತಿ ಕೂಡ ಪಕ್ಕಾ ಪ್ರೋಫೇಶನಲ್ ಬರಹಗಾರರ ಹಾಗೆ. ನೀವೂ ಯಾಕೆ ಲೇಖನ ಬರೆಯಬಾರದು? ಜೊತೆಗೆ, ಕನ್ನಡವನ್ನು ಕನ್ನಡದಲ್ಲೇ ನೀವು ಬರೀತಿರುವುದು ಭಾರೀ ಖುಷಿ. ( ನಮಗೆ ಇಂಗ್ಲೀಷ್ ಲಿಪಿಯ ಕನ್ನಡ ಓದುವ ಕಷ್ಟ ತಪ್ಪಿತು ಎಂಬುದಕ್ಕೆ )
ನಿರ್ಮಲಾ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ಗೂರ್ಖಾ ಲ್ಯಾಂಡ್ ಸಮಸ್ಯೆ ಬಗ್ಗೆ ಇನ್ನೂ ವಿವರವಾಗಿ ಬೇರೆಯದೇ ಲೇಖನ ಬರೆಯುವ ಇರಾದೆ ಇದೆ. ಅದಕ್ಕೆ ಇಲ್ಲಿ ಅಷ್ಟೊಂದು ಎಳೆದಿಲ್ಲ.
ಆಂದ ಹಾಗೆ ನಾನು ಹೇಳಬೇಕೆಂದಿರುವುದನ್ನು ಮೂರ್ತಿಯವರೇ ಹೇಳಿದ್ದಾರೆ. ನಿಜಕ್ಕೂ ನೀವು ಓದುವುದರ ಜೊತೆಗೆ ಚೆನ್ನಾಗಿ ಬರೆಯುತ್ತೀರಿ ಕೂಡ!
ನಿಮ್ಮ ರಕ್ಷಣೆಗೆ ಸಿದ್ದಾಂತಿ ಕೃಷ್ಣ ಮೂರ್ತಿ ರವರು ಬಂದ ಕಾರಣ ನಾವು ಸುಮ್ಮನಾಗಿದ್ದೇವೆ . ತಾವು ಲೇಖನದಲ್ಲಿ ಈ ಮಾಹಿತಿ ಕಾಣಿಸದ ಕಾರಣ,ನಮ್ಮ ಟೀಕೆ ಯಿಂದ ,ಕೃಷ್ಣ ಮೂರ್ತಿ ರೊಚ್ಚಿಗೆದ್ದು ಬರೆದದ್ದು ಸಹ ಸಂತೋಷ . ಕೃಷ್ಣ ಮೂರ್ತಿ
ಬತ್ತಳಿಕೆಯಿಂದ ಇನ್ನು ಬಾಣಗಳು ಹೊರಹೊಮ್ಮಲಿ .
ಗುರುಗಳೆ, ಆದದ್ದೆಲ್ಲಾ ಒಳ್ಳೆಯದಕ್ಕೆ ಅನ್ನುವಂತೆ ನಮಗೊಂದು ಹೊಸ ವಿಷಯ ಗೊತ್ತಾಯ್ತು ಬಿಡಿ. ಸಿದ್ಧಾಂತಿಗಳು ಹೀಗೆ ಒಳ್ಳೊಳ್ಳೆ ಹೊಸ ವಿಷಯಗಳನ್ನು ಹಂಚಿಕೊಂಡು ನಮ್ಮ ರಕ್ಷಣೆಗಿದ್ದರೆ ಅದೇ ನಮಗೆ ಆನೆ ಬಲ :). ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು!
ಲೇಖನದಷ್ಟೇ ಇದಕ್ಕೆ ಬಂದ ಪ್ರತಿಕ್ರಿಯೆಗಳೂ ಕುತೂಹಲಕಾರಿಯಾಗಿವೆ! ಮುಂದಿನ ವಾರಕ್ಕೆ ಕಾಯುವಂತೆ ಮಾಡಿದ್ದೀರಿ!
ನಿಹಾರಿಕಾ, ಧನ್ಯವಾದಗಳು! ಮುಂದಿನ ಭಾಗಗಳು ಇನ್ನೊ ಕುತುಹಲಕಾರಿ ಹಾಗೂ ರೋಮಾಂಚಕವಾಗಿರುತ್ತವೆ. ಅದರ ಜೊತೆಗೆ ಪ್ರತಿಕ್ರಿಯೆಗಳು ಕೂಡ… ಓದಲು ಮರೆಯದಿರಿ!
Nice one Guru. waiting for part 3:)