ಜಾನ್ ಕೀಟ್ಸ್- ಪ್ರೇಮ ಮತ್ತು ಸಾವು: ನಾಗರೇಖಾ ಗಾಂವಕರ

“If I die, said I to myself, I have left no immortal work behind me, nothing to make my friends proud of my memory- but I have loved the principles of beauty in all things, and if I had time I would have made myself remembered”

ಇದು ಕೀಟ್ಸ್ ಫ್ಯಾನಿಗೆ ಬರೆದ ಪತ್ರದ ಸಾಲುಗಳು. ಮನುಷ್ಯನ ಬದುಕು ಕ್ಷಣಿಕ. ಆದರೆ ಆ ಬದುಕಿನ ಸುತ್ತ ಚಿತ್ರಿಸಿಕೊಳ್ಳಬೇಕಾಗಿದ್ದು ಸೌಂದರ್ಯ, ಕಲೆ. ಅದೇ ಅಮರ. ಅದುವೇ ಸತ್ಯ. ಕೀಟ್ಸ್ ತನ್ನ ಪ್ರಿಯತಮೆ ಫ್ಯಾನಿಗೆ ಬರೆದ ಪತ್ರಗಳು ಆತನ ಕಾವ್ಯ ಹಾಗೂ ಬದುಕಿನ ಒಳನೋಟವನ್ನು ಅರಿಯಲು ಸಹಕರಿಸುತ್ತವೆ. ತನ್ನ ಬದುಕಿನ ಸಾರ್ಥಕತೆ ಇನ್ನೂ ಸಾಧಿಸದ ವ್ಯಥೆಯೂ ಈ ಮಾತಿನಲ್ಲಿದೆ. ಸೌಂದರ್ಯದ ಸಾಕಾರ ಇಂಚಿಂಚಿನಲ್ಲೂ ಕಾಣಬಯಸಿದ ಕವಿ ಆತ. ನೈಜ ಕವಿಗೆ ಸೌಂದರ್ಯ ಎನ್ನುವುದು ಪ್ರತಿಯೊಂದು ಸಂಗತಿಗಳಲ್ಲೂ ಕಾಣಸಿಗುವುದು. ಸೌಂದರ್ಯ ಕಲ್ಪನೆ ಮತ್ತು ಸತ್ಯಗಳ ಸುತ್ತಲೇ ಸುಳಿದಾಡುವ ಮಹೋನ್ನತ ಸಾರವನ್ನು ಕಾವ್ಯದಲ್ಲಿ ಕಂಡ ಕೀಟ್ಸ್. ಅತೀ ಚಿಕ್ಕ ವಯಸ್ಸಿಗೆ ಪರಿಗೃಹಿಸಿದ ಸಾಹಿತ್ಯದ ಆಳ, ಕಾವ್ಯತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು, ಆ ಮೂಲಕ ಬದುಕನ್ನು ಉತ್ತರಿಸುವ ಪ್ರಯತ್ನ, ಜೀವನದ ಸಂತೋಷ ಹಾಗೂ ಕ್ಷಣ ಭಂಗುರತೆಯನ್ನು ತನ್ನ ಬದುಕಿನೊಂದಿಗೆ ಅನ್ವಯಿಸಿದ್ದು, ವಿಷಯಾಸಕ್ತ ವಾಂಛೆಯ ಪರಿಶೋಧನೆ ಆತನನ್ನು ಕಾವ್ಯ ಲೋಕ ಮೆಚ್ಚುವಂತೆ ಮಾಡಿತು.

ಕೇವಲ 25 ವರ್ಷಗಳಷ್ಟೇ ಬದುಕಿದ ಕೀಟ್ಸ್ 1814ರಿಂದ 1820ರವರೆಗಿನ ತನ್ನ 6 ವರ್ಷಗಳ ಬರವಣಿಗೆಯ ಅವಧಿಯಲ್ಲಿ ಸಾರಭರಿತವಾದ ಕಾವ್ಯಗಳನ್ನು ಬರೆದ. ಈ ಅವಧಿಯಲ್ಲಿಯೇ ಆತನ Lamia, Isabella, The eve of St. Agnes ಪ್ರಕಟವಾದವು. ಸುಶಿಕ್ಷಿತನಾಗಿದ್ದ ಕೀಟ್ಸ್ ತನ್ನ ಅಲ್ಪಾವಧಿಯ ಸಾಹಿತ್ಯ ಯಾತ್ರೆಯಲ್ಲಿ ಪ್ರಗಾಥಗಳಿಂದ ಬಹು ಪ್ರಸಿದ್ಧನಾದ. ಹತ್ತು ಹಲವು ಸಾಹಿತಿಗಳಿಗೆ ಸ್ಪೂರ್ತಿಯಾದ ಕವಿ ಕೀಟ್ಸ್ ಬಗ್ಗೆ 20 ನೇ ಶತಮಾನದ ಅಜೆರ್ಂಂಟೈನಾದ ಹೆÀಸರಾಂತ ಸಾಹಿತಿ ಎoಡಿge Jorge luis borges ತನ್ನ ಬದುಕಿನ ಸಾಹಿತ್ಯಿಕ ಅನುಭವಗಳು ವಿಸ್ತøತಗೊಳ್ಳಲು ಕೀಟ್ಸ್‍ನ ಕವಿತೆಗಳು ಪ್ರಮುಖ ಪಾತ್ರ ವಹಿಸಿವೆಯೆಂದು ಹೇಳುತ್ತಾರೆ.

ಜೀವನದ ದಾರಿಯಲ್ಲಿ ಬರಿಯ ಸಾವು ಸಂಕಟಗಳೇ ಇದ್ದರೂ ಕೀಟ್ಸ್ ಬದುಕನ್ನು ಆಸ್ವಾದಿಸಿದ್ದ. ಅಂತಹ ಕೀಟ್ಸ್ ಜೀವನದ ಪ್ರೇಮದ ಹಾದಿಯಲ್ಲಿ ಹಾದುಹೋದವರು. ಇಸಾಬೆಲ್ಲಾ ಜೋನ್ಸ್ ಮತ್ತು ಫ್ಯಾನಿ ಬ್ರೌನ್. ಅದು ಸುಮಾರು 1817ರ ಸಮಯ. ಕೀಟ್ಸ್‍ನ ಯೌವನದ ಜೀವನದಲ್ಲಿ ಬಂದವಳು ಇಸಾಬೆಲ್ಲಾ. ಸುಂದರ, ಬುದ್ಧಿವಂತ, ಜಾಣ ತರುಣಿ ಇಸಾಬೆಲ್ಲಾ ಮಧ್ಯಮ ಕುಟುಂಬದ ಹೆಣ್ಣು. ಆಕೆಯೊಂದಿಗೆ ದೈಹಿಕ ಸಂಬಂಧದೊಂದಿಗೆ ಮಾನಸಿಕವಾಗಿಯೂ ಬೆರೆತಿದ್ದ ಕೀಟ್ಸ್. ಯಾವುದೇ ನಿರ್ದಿಷ್ಟ ಒಪ್ಪಂದಗಳಿಲ್ಲದೇ ಸಹಜವಾಗಿ ಬೆರೆಯುತ್ತಿದ್ದ ಈ ಜೋಡಿ ಹಲವು ಕಾಲ ಸಂತೋಷದ ಸುರೆಯುಂಡಿದ್ದರು. ಗೆಳೆಯ ಜಾರ್ಜನಿಗೆ ಬರೆದ ಪತ್ರದಲ್ಲಿ ಆಕೆಯೊಂದಿಗಿನ ಬಂಧವನ್ನು ಬೆಚ್ಚಗಿನ ಅನುಭವವೆಂದು, ಆಕೆಗೆ ತಾನು ಮುತ್ತಿಕ್ಕಿದ್ದಾಗಿಯೂ ಕೀಟ್ಸ್ ಹೇಳಿಕೊಂಡಿದ್ದಾನೆ. ಆದರೆ ಅವರೆಷ್ಟು ಹತ್ತಿರವಾಗಿದ್ದರು ಎಂಬುದು ಸ್ಪಷ್ಟವಿಲ್ಲ. “ದಿ.ಬ್ರೈಟ್ ಸ್ಟಾರ್” ಕವಿತೆಯನ್ನು ಆತ ಆಕೆಯ ಬಗ್ಗೆಯೇ ಬರೆದ. ಆದರೆ ಮುಂದೆ ಯಾವುದೋ ಕಾರಣಕ್ಕೋ ಈ ಬಂಧ ಮುಂದುವರಿಯಲಿಲ್ಲ. ಮರುವರ್ಷವೇ ಅಂದರೆ 1818ರಲ್ಲಿ ಕೀಟ್ಸ್ ಬದುಕಿನಲ್ಲಿ ಪ್ರೇಮದ ಕಾರಂಜಿಯಾದವಳು ಫ್ಯಾನ್ಸಸ್ ಬ್ರೌನ್. ಆತನ ಪತ್ರಗಳು ಮತ್ತು ಕವಿತೆಗಳು ಇದನ್ನು ಉಲ್ಲೇಖಿಸಿವೆ. ಹದಿನೆಂಟು ವರ್ಷಗಳ ಸುಂದರ ತರುಣಿ ಫ್ಯಾನಿ. ಆಕೆಯ ಬದುಕಿನಲ್ಲೂ ಸಾವಿನ ನೆರಳು ಸದಾ ಸರಿದಾಡುತ್ತಿತ್ತು. ಕೀಟ್ಸ್‍ನ ಹೆತ್ತವರು ಬಂಧುಗಳು ಕ್ಷಯರೋಗಕ್ಕೆ ಬಲಿಯಾದಂತೆ ಆಕೆಯ ಬಂಧುಗಳನ್ನು ಕ್ಷಯ ತನ್ನ ಹೆಡಮುರಿಗೆಯಲ್ಲಿ ಬಂಧಿಸಿ ಸಾವಿನ ದಾರಿಗೆ ತಳ್ಳಿತ್ತು. ಆಕೆ ಕೀಟ್ಸ್‍ನನ್ನು ಬಹಳ ಮೆಚ್ಚಿಕೊಂಡಿದ್ದಂತೆ ತೋರುತ್ತದೆ.

ಆದರೆ ಈ ಸಂಬಂಧವೂ ಕೀಟ್ಸ್‍ನ ಸಹೋದರ ಟಾಮ್‍ನ ಅನಾರೋಗ್ಯದ ನಿಮಿತ್ತ ಬೃಹದಾಕಾರವಾಗಿ ಬೆಳೆಯಲಿಲ್ಲ. ಆದರೂ ಕೀಟ್ಸ್ ಆಕೆಯನ್ನು ದಿನವೂ ಭೇಟಿಯಾಗುತ್ತಿದ್ದ. ಆಕೆಗೆ ಓದಲು ಹಲವು ಪುಸ್ತಕಗಳನ್ನು ನೀಡುತ್ತಿದ್ದ. ಬಹುಶಃ ಒಂದು ಕಾಲಕ್ಕೆ ಮೊದಲ ಗೆಳತಿ ಇಸಾಬೆಲ್ಲಾಳ ಬಗ್ಗೆ ಬರೆದ “ದಿ ಬ್ರೈಟ್ ಸ್ಟಾರ್” ಕವಿತೆಯನ್ನು ಪರಿಷ್ಕರಿಸಿ ಫ್ಯಾನಿಯ ಕುರಿತಾಗಿ ಬರೆದಿರುವಂತೆ ಕಾಣುತ್ತದೆ. ಫ್ಯಾನಿಯ ಪರಿಚಯವಾದ ನಂತರ ಕೀಟ್ಸ್‍ನ ಎಲ್ಲಾ ಆಕಾಂಕ್ಷೆಗಳು ಆಕೆಯ ಕುರಿತಾಗಿಯೇ ಆಗಿದ್ದವು. ಆಕೆಯನ್ನು ವಿವಾಹವಾಗುವ ಇರಾದೆ ಆತನದಾಗಿತ್ತು. ಆದರೆ ಹಣಕಾಸಿನ ಸಮಸ್ಯೆ ಮನೆಯಲ್ಲಿಯ ಅನಾರೋಗ್ಯದ ಸಮಸ್ಯೆ ಸ್ವತಃ ಕಾಡುತ್ತಿದ್ದ ಕ್ಷಯರೋಗ ಹೀಗೆ ಎಲ್ಲ ಸಂಗತಿಗಳು ಆತನ ಸುಂದರ ಬದುಕನ್ನು ನುಂಗುವ ಪ್ರಯತ್ನ ಮಾಡುತ್ತಿದ್ದವು. ಒಂದೆಡೆ ಫ್ಯಾನಿಯ ಪ್ರೀತಿಯ ಆಹ್ಲಾದಕತೆ ಇನ್ನೊಂದೆಡೆ ನರನರವನ್ನೆಲ್ಲಾ ಜಡ್ಡುಗಟ್ಟಿಸುತ್ತಿದ್ದ ಕ್ಷಯ ರೋಗದಿಂದ ಸಾವಿನ ನಿಶ್ಚಲ ನೆರಳು ಎರಡನ್ನು ಆತ ಏಕಕಾಲಕ್ಕೆ ಇದಿರುಗೊಂಡ ದುರವಸ್ಥೆ ಆತನದು. ಆದನ್ನಾತ ಹೀಗೆ ಹೇಳುತ್ತಾನೆ.

“ I have two luxurious to brood over in my walks, Your loveliness, and the hour of my death”

ಫ್ಯಾನಿಯನ್ನು ಬಿಟ್ಟಿರಲಾಗದ ಸಮ್ಮೋಹಕ್ಕೆ ಒಳಗಾಗಿದ್ದ ಕೀಟ್ಸ್ ತನ್ನ ಪತ್ರದಲ್ಲಿ ಅದನ್ನು ನಿವೇದಿಸುತ್ತಾನೆ.

“ my love has made me selfish. I cannot exist without you…. Men could die Martyrs for religion- I have shuddered at it- I shudder no more- I could be martyr’for my Religion- love is my religion –I could die for that- I could die for you”.

ಆದರೆ ಕರುಣೆಯಿಲ್ಲದ ಕ್ಷಯ ಆತನನ್ನು ಕ್ಷಣಕ್ಷಣವೂ ಕೊಲ್ಲುತ್ತಿತ್ತು. ಆತನ ಎರಡು ಶ್ವಾಸಕೋಶಗಳು ಜರ್ಜರಿತವಾಗಿದ್ದವು. ಲಂಡನ್ನಿನ ವಾತಾವರಣದಿಂದ ದೂರವಿರುವಂತೆ ನೀಡಿದ ವೈದ್ಯರ ಸಲಹೆಯಂತೆ ಆತ ರೋಮಗೆ ಹೋದ. ಇನ್ನೆಂದೂ ಫ್ಯಾನಿಯನ್ನು ನೋಡಲಾಗದು ಎಂಬ ನೈಜತೆಯನ್ನು ಮನಗಂಡೆ ಅಲ್ಲಿಗೆ ಹೋದ ಕೀಟ್ಸ್ ಐದು ತಿಂಗಳ ತರುವಾಯ 1821ರ ಫೆಬ್ರುವರಿ 23ರಂದು ಅಲ್ಲಿ ತೀರಿಹೋದ. ಆತನ ಮರಣದ ಒಂದು ತಿಂಗಳ ನಂತರ ಆಕೆಗೆ ಮರಣವಾರ್ತೆ ತಿಳಿಯುತ್ತಲೂ ಆಕೆ ಶೋಕದ ಹಾಸಿಗೆಯಲ್ಲಿ 6 ವರ್ಷಗಳ ಕಳೆದಳು. ಆತ ಸತ್ತು ಸುಮಾರು 12ವರ್ಷಗಳ ನಂತರ 1833 ಆಕೆ ಇನ್ನೊಂದು ವಿವಾಹವಾದಳು.
ತನ್ನ ಜೀವನದುದ್ದಕ್ಕೂ ತನ್ನ ಸೃಜನಶೀಲ ಸಾಹಿತ್ಯದ ಮೂಲಕ ಬದುಕಿದ್ದ ಕೀಟ್ಸ್ ತನ್ನ ಗೋರಿವಾಕ್ಯವನ್ನು ಹೀಗೆ ಬರೆದಿದ್ದ. “Here lies one whose name was writ in water”

-ನಾಗರೇಖಾ ಗಾಂವಕರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x