ಚೆಲುವೆಯ ನೋಟ ಚೆನ್ನಾ, ಒಲವಿನ ಮಾತು ಚೆನ್ನಾ..: ಸುಮನ್ ದೇಸಾಯಿ ಅಂಕಣ



ಮೊನ್ನೆ ರವಿವಾರ ಮುಂಝಾನೆ ನಮ್ಮ ತಮ್ಮ  ಹಾಡ ಹಾಡಕೊತ ಗಿಡಕ್ಕ ನೀರ ಹಾಕಲಿಕತ್ತಿದ್ದಾ. ಆ ಹಾಡು ಏನಂದ್ರ " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋತಿಯ ಕಾಟಾ, ಹೆಂಡತಿಯೊಬ್ಬಳು ಜೊತೆಯಲಿ ಇದ್ದರೆ ಹಳಸಿದ ಅನ್ನದ ಊಟಾ…" ಅಂತ ಹಾಡಕೊತ ತನ್ನಷ್ಟಕ್ಕ ತಾನ ನಗಲಿಕತ್ತಾಗ ಹಿಂದ ಯಾರೊ ನಿಂಥಂಗ ಅನಿಸಿ ಹೊಳ್ಳಿ ನೋಡಿದ್ರ ಟೊಂಕದ ಮ್ಯಾಲೆ ಕೈ ಇಟಗೊಂಡ ಉರಿ ಉರಿ ಮಾರಿಮಾಡಕೊಂಡ ತನ್ನ ನೋಡಲಿಕತ್ತ ಹೆಂಡತಿನ್ನ ನೋಡಿ ಒಂದ ಘಳಿಗಿ ಎದಿ ಝಲ್ಲಂದು ಹಂಗ ಸುಮ್ನ ನಿಂತಾ. ಆಕಿ ನಿಂತ ಸ್ಟೈಲ ನೋಡಿ " ಟೊಂಕದ ಮ್ಯಾಲೆ ಕೈ ಇಟಗೊಂಡ ಬಿಂಕದಾಕಿ ಯಾರ ಈಕಿ, ವಂಕಿತೋಳ ತೋರಸತಾಳ ಸುಂಕದ ಕಟ್ಟ್ಯಂವಗ, ಬಿಂಕದಾಕಿ ಯಾರ ಈಕಿ"… ಅಂತ ಇನ್ನೊಂದ ಹಾಡ ನೆನಪಾಗಿ ಹಾಡಬೇಕಂತ ಅನಿಸಿದ್ರು ಹೆಂಡ್ತಿ ಗಡಗಿಮಾರಿ ನೋಡಿ ಬ್ಯಾಡ ಅಂತ ಸುಮ್ನಾದಾ. ಹೊರಗ ಗಾರ್ಡನ್ ನ್ಯಾಗ ಇಕಿ ನಿಂತ ಸ್ಟೈಲ ಆಜುಬಾಜುದವರು ಯಾರರ ನೋಡಲಿಕತ್ತಾರೆನೊ ಅಂತ ಸೂತ್ತುಕಡೆ ನೋಡಿ ಯಾರು ಇಲ್ಲಂತ ಖಾತ್ರಿ ಮಾಡಕೊಂಡಾ.

ಆವತ್ತ ಸಂಡೇ ಇದ್ದದ್ದು ಭಾಳ ಛೋಲೊ ಆತು ಅನಿಸ್ತು. ಯಾಕಂದ್ರ ಸೂಟಿ ಇರತದ. ಆಜುಬಾಜುದ್ದ ಮಂದಿಯೆಲ್ಲಾ ಹೊತ್ತಾಗಿ ಎಳತಾರ. ಹಿಂಗಾಗಿ ಯಾರು ನೋಡಿಲ್ಲಾ ಅಂತ ಸಮಾಧಾನಾ ಮಾಡಕೊಂಡಾ. ಆಕಿ ನಿಂತಿದ್ದ ಸ್ಟೈಲ ಹೆಂಗಿತ್ತಂದ್ರ " ಯಾಕ? ಹೆಂಗನಸ್ತದ? ತಲಿ ನೆಟ್ಟಗದ ಇಲ್ಲೊ? ಸಣ್ಣಂಘ ಕಡಿಲಿಕತ್ತಾವೇನು?" ಅಂತ ಕೇಳಲಿಕತ್ತಾಳೇನೊ ಅನ್ನೊವರ ಹಂಗ ಇತ್ತು. ಆಕಿನ್ನ ನೋಡಿ ನನ ತಮ್ಮಾ,ಇನ್ನ ಸುಮ್ನ ಇದ್ರ ಹಕಿಕತ್ತ ಭಾಳ ಮುಂದ ಹೊಗತದ ಅಂತ ಹೆಂಡತಿಗೆ ಸಮಜಾಯಿಸಿ ಕೋಡಬೆಕಂತ "ಎ ಯವ್ವಾ ದುರದುಂಡೆಶ್ವರಿ ಮಹಾತಾಯಿ ಈ ಹಾಡು ನಂದಲ್ಲಾ. ನಿಮ್ಮ ಅಣ್ಣ ವಿನ್ಯಾಂದು (ವಿನಯ). ನಿಮ್ಮ ವೈನಿ ಕಿರಿಕಿರಿ ತಡಕೊಳ್ಳಾರದಕ್ಕ ಮೊನ್ನೆ ಹೋಟೆಲನ್ಯಾಗ ಕೂತಾಗ್ ಹಾಡಲಿತತ್ತಿದ್ದಾ. ಅದು ನೆನೆಪಾಗಿ ನಾನು ಹಾಡಿದೆ ಅಷ್ಟ" ಅದಕ್ಯಾಕ ನೀ ಹಿಂಗ ಮೈಯ್ಯಾಗ ದೆವ್ವ ಹೊಕ್ಕವರಂಘ ನಿಂತಿ ಅಂದಾ. ಅದನ್ನ ಕೇಳಿ ಸ್ವಲ್ಪ ಶಾಂತ ಆದ್ಲು.

ಈ ನಮ್ಮ ತಮ್ಮನ ಹೆಂಡತಿ ಅಣ್ಣಂದ ಒಂದ ಪೂರಾಣನ ಅದ. ಇತ್ಲಾಕಡೆ ಹೆಂಡತಿ, ಅತ್ಲಾಕಡೆ ಆಕಿ ಅಣ್ಣ ಇವರಿಬ್ಬರ ನಡುವ ನಮ್ಮ ತಮ್ಮಾ ಪುಂಡಿ ಪಲ್ಯಾ, ಹರವಿ ಪಲ್ಯಾ ಆಗಿಹೋಗ್ಯಾನ ಪಾಪ. ವಿನ್ಯಾಂದು ಒಂಥರಾ ವಿಚಿತ್ರ ಕ್ಯಾರೆಕ್ಟರ್. ಈ ಮನಶ್ಯಾನ್ನ ಶಾಣೆ ಅನಲಿಕ್ಕೂ ಬರಂಗಿಲ್ಲಾ, ದಡ್ಡ ಅನಲಿಕ್ಕೂ ಆಗಂಗಿಲ್ಲಾ ಒಂದ ನಮೂನಿ ಎರಡರ ನಡಬರಕಿನ ಒಂದ ಪೀಸ್. ಅದಕ್ಕ ನಮ್ಮ ತಮ್ಮಾ  ಅಂತಿದ್ದಾ ಆ ಬ್ರಹ್ಮ ತನಗ ಜೋರಾಗಿ ಕೈಕಾಲಿಗೆ ಬಂದಾಗ ಗಡಿಬಿಡಿಲೇ ಇಂವನ್ನ ಸೃಷ್ಠಿ ಮಾಡಿ ಒಗದಿರಬೇಕು ಅಂತ ಅದು ಇಂವನ್ನ ನೋಡಿದವರಿಗೆ ಒಂದೊಂದ ಸಲಾ ಖರೆ ಅನಿಸ್ತದ. ಇನ್ನ ಇಂವನ ಬಗ್ಗೆ ಹೇಳಬೇಕಂದ್ರ ಇವರದು ದೊಡ್ದ ಜಮೀನ್ದಾರರ ವಂಶ. ಬೇಕಾದಷ್ಟ ಆಸ್ತಿ ಅದ. ವಿನ್ಯಾನು ಎನ ಅನಕ್ಷರಸ್ಥ ಅಲ್ಲಾ, ಡಿಗ್ರಿ ಹೋಲ್ಡರ್ ಇದ್ದಾನ. ರಗಡ ಶಾಣೆ ಇದ್ದಾನ. ಸರಹೊತ್ತಿನ್ಯಾಗ ಹೋಗಿ ಯಾವದೇ ವಿಷಯದ ಬಗ್ಗೆ ಅಂದ್ರ ಅದು ರಾಜಕೀಯ, ವಿಜ್ಞಾನ, ಸಿನೇಮಾ, ಅಥವಾ ಯಾವದ ಕ್ಷೇತ್ರದ ಬಗ್ಗೆ ಕೇಳಿದ್ರುನು ನಿಮಗ ಗೊತ್ತಿಲ್ಲದಂಥಾ ವಿಚಾರಗಳನ್ನ ಸವಿವರವಾಗಿ ವಿವರಿಸಿ ಹೇಳೊ ಅಷ್ಟು ಜ್ಞಾನ ಅದ, ಆದ್ರ ನೀರುದ್ಯೋಗಿ. "ನಾವ ಜಮೀನ್ದಾರ ವಂಶದವರು, ನಾಯಾಕ ಇನ್ನೊಬ್ಬರ ಕೈಕೇಳಗ ಕೆಲಸಕ್ಕ ಹೋಗಬೇಕ" ಅನ್ನೊ ಒಣಾ ದಿಮಾಕನ ಭಾಳ ಇತ್ತು. ನಮ್ಮ ತಮ್ಮನು ಒಂದೆರಡ ಕಡೆ ಇಂವಗ ಕೆಲಸಾ ಕೋಡಸಲಿಕ್ಕಂತ ಹೇಳಿ ಮಂದಿಗೆ ಬಾಯಿ ತಗದ ಮಂಗ್ಯಾ ಆಗಿದ್ದಾ. ಇಂವನ ಇಂಟರವ್ಯೂಕ್ಕ ಕಳಸಿದ್ರ, ಆಮ್ಯಾಲೆ ಕಂಪನಿಯವರು ನಮ್ಮ ತಮ್ಮಗ ಫೋನ್ ಮಾಡಿ " ಕ್ಯಾ ಜಿ ಆಪ್, ಕೈಸಾ ಆದಮಿಕೊ ಭೇಜೆ, ಟೋಟಲ್ ದಿವಾನಾ ಹೈ ದೇಖೊ ವೊ" ಅಂಥೇಳಿ ಉಗಳತಿದ್ರಂತ.

ವಿನ್ಯಾನ ಸ್ವಭಾವನ ಒಂಥರಾ ವಿಚಿತ್ರನ. ಸರ್ರಾತ್ರಿಯಾಗ ಯಾರ ಎನ ಸಹಾಯ ಕೇಳಿದ್ರು ಮಾಡತಿದ್ದಾ. ಆದ್ರ ಮನ್ಯಾಗ ತನ್ನ ಮೂರ ವರ್ಷದ ಮಗಾ ತಾ ಸಣ್ಣಾಂವ ಇದ್ದಾಗಿನ ಆಟಗಿಸಾಮಾನ ತಗೊಂಡ ಆಡಲಿಕತ್ತ್ರ, " ಎ ಅವು ನನ್ನುವು, ನಮ್ಮಪ್ಪ  ದುಬೈಯಿಂದ ನನಗ ತಂದಕೊಟ್ಟದ್ವು ಅಂತ ಒದರಿ ಆ ಕೂಸಿನ ಕೈಯ್ಯಾಗಿನ್ನ ಆಟಗಿಸಾಮಾನ ಕಸಗೋತಿದ್ದಾ. ಇಂಥಾಂವಗ ದಡ್ದ ಅನಬೇಕೊ, ಶಾಣೆ ಅನಬೇಕೊ ಅಂತ ತಿಳಿಲಾರದ ಇಂವನ ಹೆಂಡ್ತಿ ಕನಫ್ಯೂಸ್ ಆಗತಿದ್ಲು. ಇಂವಾ ಬ್ಯಾಂಕಿಗೆ ಹೋದ್ರಂತು ಇಂವಾ ಯಾಕರ ಬರ್ತಾನಪ್ಪಾ ಅಂತ ಮನಸ್ನ್ಯಾಗ ಅನ್ಕೊಂಡ, ಮ್ಯಾಲೆ ಮತ್ರ "ಬರ್ರಿ ಬರ್ರಿ ವಿನಯ ಅವರ" ಅಂತ ದೇಶಾವರಿ ನಗು ನಕ್ಕೊತ ಕರಿತಿದ್ರು. ಯಾಕಂದ್ರ ಇಂವನ ಜೋಡಿ ಸ್ವಲ್ಪ ಹೆಚ್ಚು ಕಡಿಮಿ ನಡಕೊಂಡ್ರಂತು ಮುಗಿತು ಸಿಟ್ಟಿಗೆದ್ದು ತನ್ನ ಲಕ್ಷಗಟ್ಟಲೆ ಎಫ್.ಡಿ ಎಲ್ಲಾ ಕ್ಯಾನ್ಸಲ್ ಮಾಡತೇನ ಅಷ್ಟ ಅಲ್ಲಾ ನಮ್ಮ ಕಾಕಾ, ಮಾಮಾಗೊಳ ಎಫ್.ಡಿಗೋಳನ್ನ ಸುಧ್ಧಾ ಕ್ಯಾನ್ಸಲ್ ಮಾಡಸ್ತೇನಿ ಅಂತ ಧಮಕಿ ಕೋಡತಿದ್ದಾ. ಮದಲ ತಲಿತಿರಕಾ ಹೇಳಿಧಂಗ ಮಾಡಿಗಿಡ್ಯಾನ ಅಂತ ಯಾರು ಆಂವಾ ಬಂದಾಗ ಆಂವನ್ನ ತಡವಲಿಕ್ಕೆ ಹೋಗತಿದ್ದೀಲ್ಲಾ ಸಮಾಧಾನಲೆ ಮಾತಾಡಿ ಕಳಸತಿದ್ರು. ಹಿಂಗ ಇಂವಾ ಮನ್ಯಾಗ ಅಷ್ಟ ಅಲ್ಲಾ ಹೋರಗಿನ ಮಂದಿಗು ವಾಳ ಆಗಿದ್ದಾ.

ಮನ್ಯಾಗ ಹೆಂಡ್ತಿ ಜೋಡಿ ಅಂತು ದಿನಾ ಕಿರಿಕಿರಿ ಇದ್ದ ಇರತಿತ್ತು. ಆವತ್ತು ಹಂಗ ಆತು ಮನ್ಯಾಗ ಹೆಂಡತಿ ಜೋಡಿ ಲಗ್ಗಿ ಭಗ್ಗಿ ಜಗಳಾಡಿ ಇನ್ನೆನ ಹೊರಗ ಹೋಗಬೇಕನ್ನೊದ್ರಾಗ ಕೋರಿಯರ್ ನ್ಯಾಗ ಒಂದ ಪಾರ್ಸಲ್ ಬಂತು. ತಗದು ನೋಡೊದ್ರಾಗ ಒಂದ ದೊಡ್ದದ ರಾಮಪೂರಿ ಚಾಕು ಇತ್ತು. ವಿನ್ಯಾನ ಅದನ್ನ ಆನ್ ಲೈನ್ ಆರ್ಡರ್ ಕೊಟ್ಟು ತರಿಸಿಕೊಂಡಿದ್ದಾ. ಇನ್ನ ಮುಗಿತು ಮದಲ ಜಗಳದಾಗ ಹೆಂಡ್ತಿಗೆ "ನಿಮ್ಮವ್ವನ್ನ, ನಿಮ್ಮಪ್ಪನ್ನ, ನಿಮ್ಮತಮ್ಮನ್ನ ಎಲ್ಲಾರನು ಖಚ್ಚ್ ಅನಸ್ತೇನಿ ಅಂತ ಧಮಕಿ ಹಾಕಿದ್ದಾ, ಅದ ಹೊತ್ತಿಗೆ ಚಾಕುದ್ದ ಪಾರ್ಸಲ್ ನೋಡಿ ವಿನ್ಯಾನ ಹೆಂಡ್ತಿ ಇನ್ನ ಸುಮ್ನ ಕೂತ್ರ ಇಂವಾ ಎಲ್ಲಾರಗೂ ರವಾಉಂಡಿ ತಿನಸ್ತಾನ ( ಅಂದ್ರ ಶ್ರಾಧ್ಧಾ ಮಾಡತಾನ), ಇಂವಗ ಹಿಂಗ ಬಿಡಬಾರದ ಅಂತ ಹೇಳಿ ಪೋಲಿಸ್ ಸ್ಟೇಷನ್ ಹೋಗಿ ನನ್ನ ಗಂಡಾ ತ್ರಾಸ ಕೋಡಲಿಕತ್ತಾನ ಅಂಥೇಳಿ ಕಂಪ್ಲೇಂಟ್ ಕೊಟ್ಟಬಿಟ್ಟಳು. ಕಡಿಕೆ ನಮ್ಮ ತಮ್ಮನ ಹೋಗಿ ರಾಜಿ ಮಾಡಿಸ್ಕೊಂಡ ಬಿಡಿಸ್ಕೊಂಡ ಬಂದಾ.

ಈ ವಿನ್ಯಾಂದು ಬರೆ ಬಾಯಿ ಧಮಕಿ ಅಷ್ಟ. ಖರೆ ಹೇಳ್ಬೇಕಂದ್ರ ಇಂವಗ ಒಂದ ಸಣ್ಣ ಇರವಿ ಸಾಯಿಸೊ ಅಷ್ಟನು ಧೈರ್ಯಾ ಇಲ್ಲಾ. ಬರೆ ಹಂಗ ಮಾಡ್ತೇನಿ, ಹಿಂಗ ಮಾಡ್ತೇನಿ ಅಂತ ಒಣಾ ಉರ್ಯೋಣಗಿ ಮಾತ ಅಷ್ಟ. ಆವತ್ತಿಂದ ಶುರು ಆತು ವಿನ್ಯಾಂದ ರಾಹು ದಶಾ. ಕೂತ್ರನಿಂತ್ರ ಹೆಂಡ್ತಿ ಕಿರಿಕಿರಿ ತಾಳಲಾರದಕ್ಕ, ನಮ್ಮನಿಗೆ ಬಂದ ನಮ್ಮ ತಮ್ಮನ ತಲಿ ತಿಂತಿದ್ದಾ. ಇತ್ತಿತ್ತಲಾಗ ನಾ ಮಠಾ ಸೇರಕೋತೇನಿ. ಸನ್ಯಾಸ ದಿಕ್ಷಾ ತಗೋತೆನಿ. ಅಂತಿದ್ದಾ. ಆತ ಇಂವಾ ಏನರೆ ಮಠಾ ಸೇರಕೊಂಡ್ರ ಮಠಾಹೋಗಿ ಹುಚ್ಚರ ದವಾಖಾನಿ ಆಗತದ "ಅಂತಿದ್ದಾ ನಮ್ಮ ತಮ್ಮ. ಒಂದಿನಾ ಮುಂಜ ಮುಂಜಾನೆ ಬಂದು ನಮ್ಮ ತಮ್ಮನ ಮುಂದ "ನಾ ಉತ್ತರಾಖಾಂಡಕ್ಕ ಹೋಗಿ ಆಶ್ರಮ ಸೇರಕೋಬೇಕಂತ ಮಾಡಿದ್ದೆ. ಇ-ಮೇಲ್ ಎಲ್ಲಾ ಕಳಸಿದ್ದೆ. ಆದ್ರ ನಮ್ಮ ಹಣೆಬಾರಕ್ಕ ಅದೂ ಇಲ್ಲಾ, ಎಲ್ಲಾ ಆಶ್ರಮಗೊಳ ನೀರಾಗ ತೇಲ್ಕೊಂಡ ಹೋಗ್ಯಾವ" ಅಂತ ಹಣಿ ಹಣಿ ಬಜ್ಜಿಕೊಂಡ, ನನ್ನ ತಮ್ಮಗ "ನನಗ ಯಾವದರ ಆಶ್ರಮಕ್ಕ ಸೇರಿಸಿ ದೀಕ್ಷಾ ಕೊಡಸು. ಇಲ್ಲಂದ್ರ ನಾ ಸೂಸೈಡ್ ಮಾಡಕೋತೇನಿ "ಅಂದ. ಆವತ್ತಿಂದ ನಮ್ಮ ತಮ್ಮಗ ಏಳರ ಶನಿಕಾಟಾ ಶೂರು ಆತು. ಕೂತ್ರ ನಿಂತ್ರ ಫೋನ್ ಮಾಡಿ ದೀಕ್ಷಾ, ಸೂಸೈಡ್ ಅಂತ ಕಿರಿಕಿರಿ ಮಾಡತಿದ್ದಾ.

ಇದರಿಂದ ತಲಿಕೆಟ್ಟು ಇದಕ್ಕೊಂದ ದಾರಿ ಹುಡಕಬೇಕಂತ ಒಂದ್ ಪ್ಲ್ಯಾನ್ ಮಾಡಿ ತನ್ನ ಗೇಳ್ಯಾ ರಮ್ಯಾ(ರಮೇಶ)ನ್ನ ಸಹಾಯ ತಗೊಂಡಾ. ಆಮ್ಯಾಲೆ ವಿನ್ಯಾನ್ನ ಮನಿಗೆ ಕರಿಸಿ ಹೇಳಿದಾ "ಮತ್ತ ನಾ ಒಂದ ಆಶ್ರಮದವರ ಜೊಡಿ ಮಾತಾಡೇನಿ. ಅವರು ದಿಕ್ಷಾ ಕೋಡಲಿಕ್ಕೆ ಹೂಂ ಅಂದಾರ. ಆದರ ಅವರುವು ಒಂದಿಷ್ಟ ಕಂಡಿಶನ್ ಅವ ಅಂತ ಅವನ್ನ ಪಾಲಿಸ್ತೇನಿ ಅಂತ ಒಂದ ಬಾಂಡ್ ಪೇಪರ ಮ್ಯಾಲೆ ಬರದು ಕೋಡಬೇಕಂತ, ನೀ ಹೂಂ ಅಂದ್ರ ಆಶ್ರಮದವರಿಗೆ ಫೋನ್ ಹಚ್ಚಿ ಕೋಡತೇನಿ ಮಾತಾಡು" ಅಂದಾ. ವಿನ್ಯಾ "ನಾ ಅದೇನಿದ್ರು ಪಾಲಸ್ತೇನಿ" ಅಂದಮ್ಯಾಲೆ ನಮ್ಮ ತಮ್ಮಾ ಮದ್ಲ ಪ್ಲ್ಯಾನ್ ಮಾಡಿಧಂಘ ತನ್ನ ಗೆಳೆಯಾ ರಮ್ಯಾಗ ಫೋನ್ ಹಚ್ಚಿ ವಿನ್ಯಾನ ಕೈಯ್ಯಾಗ ಕೊಟ್ಟಾ. ಇತ್ಲಾಕಡೆ ವಿನ್ಯಾ "ನಾ ನಿಮ್ಮ ಆಶ್ರಮದಾಗ ಸನ್ಯಾಸ ದೀಕ್ಷಾ ತಗೊಬೇಕಂತ ಮಾಡೇನಿ, ನಂಗ ದೀಕ್ಷಾ ಕೋಡ್ರಿ" ಅಂತ ಸ್ವಲ್ಪ ಆರ್ಡರ್ ಮಾಡೊಹಂಗ ಕೇಳ್ಕೊಂಡಾ. ಅತ್ಲಾಕಡೆ ರಮ್ಯಾ "ಆತೇಳ್ರಿ ಕೋಡೊಣಂತ, ಆದ್ರ ನಮ್ಮ ಆಶ್ರಮದ ಕೆಲವೊಂದಿಷ್ಟ ಕಂಡಿಶನ್ ಅವ. ಈ ನಿತ್ಯಾನಂದನ ಲಫಡಾ ಆದಮ್ಯಾಲೆ ಆಶ್ರಮಕ್ಕ ಬರೊವರಿಗೆ ಈ ಕಂಡಿಶನ್ ಹಾಕೊದ ಭಾಳ ಜರೂರಿ ಆಗೇದ. ನೀವು ಎಲ್ಲಾದಕ್ಕು ಒಪ್ಕೊಂಡ್ರ ನಾವು ನಿಮಗ ದೀಕ್ಷಾ ಕೊಡತೇವಿ" ಅಂದಾ.

ನಮ್ಮ ಕಂಡಿಷನ್ನಗೋಳ ಎನಂದ್ರ ಅಂತ ಹೇಳಲಿಕ್ಕೆ ಶೂರು ಮಾಡಿದಾ ರಮ್ಯಾ, ೧) ಒಮ್ಮೆ ದೀಕ್ಷಾ ತಗೊಂಡ ಮ್ಯಾಲೆ ನಿಮ್ಮ ಪೂರ್ವಾಶ್ರಮದ್ದ ಮಂದಿನ್ನ ಯಾರನ್ನು ಭೆಟ್ಟಿಯಾಗೊ ಹಂಗಿಲ್ಲಾ. ೨) ಮೈಮ್ಯಾಲೆ ಕನಿಷ್ಠ ಒಂದ ತುಂಡ ಪಂಜಾ, ಮತ್ತ ಭಾಳ ಥಂಡಿ ಇದ್ರ ಹೊಚಗೊಳ್ಳಿಕ್ಕೆ ಒಂದ ಧೋತರ ತುಂಡ ಮಾತ್ರ ಇರತಕ್ಕದ್ದು. ಕಂಪಲಸರಿ ಚಾಪಿ ಮ್ಯಾಲೆ ಮಲಗತಕ್ಕದ್ದು. ೩) ದಿನಾ ಮುಂಝಾನೆ ನಾಲ್ಕಕ್ಕ ಎದ್ದು ದನದಕ್ಕಿ ಕೆಲಸಾ ಅಂದ್ರ ಆಶ್ರಮದ ಗೋವುಗಳ ಕಾಲಾಗಿನ ಶಗಣಿ ಕಸಾ ಬಳದು ಸ್ವಚ್ಛ ಮಾಡಿ, ಹಾಲ ಹಿಂಡಬೇಕು. ಆಶ್ರಮದ್ದ ಕಸಾ ಉಡಗಿ ಒರಸಬೇಕು. ೪) ಮತ್ತ ೫ ವರ್ಷದ್ದ ತನಕಾ ಯವುದೇ ರೀತಿ ಸಿಹಿ, ಉಪ್ಪು, ಖಾರಾ, ಹುಳಿ ಹಾಕಿದ್ದ ಪದಾರ್ಥ ತಿನ್ನೊಹಂಗಿಲ್ಲಾ. ಬರೆ ಜ್ವಾಳದ ಹಿಟ್ಟಿನ ಗಂಜಿ ಅದು ಒಂದ ತಟಗ ಉಪ್ಪು ಹಾಕಿದ್ದು ಒಂದ ಲೋಟಾಧಂಗ ಮುಂಝಾನೆ, ಸಂಜಿ ದಿನಕ್ಕ ಎರಡ ಸಲಾ ಕೋಡತೇವಿ. ನಡು ನಡುವ ಏನು ತಿನ್ನೊಹಂಗಿಲ್ಲಾ. ೫) ಮತ್ತ ಹೊರಗಿನ ಜಗತ್ತಿನ ಜೋಡಿ ಮೋಬೈಲ್, ಇಂಟರನೇಟ್ ಅಂತ ಯಾವುದೇ ರೀತಿ ಸಂಬಂಧ ಇಟ್ಕೊಳ್ಳೊಹಂಗಿಲ್ಲಾ. ೬) ಇನ್ನೊಂದ ಇಂಪಾರ್ಟೆಂಟ್ ಕಂಡಿಶನ್ ಎನ ಅಂದ್ರ, ನಿಮ್ಮ ಮನಸ್ಸಿನ್ಯಾಗ ಯಾವದೇ ರೀತಿ ಶೄಂಗಾರಭಾವನೆಗೋಳ ಹುಟ್ಟಬಾರದು. ಅದಕ್ಕ ನೀವು ಒಂದ ಆಪರೇಷನ ಮಾಡಿಸ್ಕೊಬೇಕು.

ಇವೆಲ್ಲಾ ನಮ್ಮ ಆಶ್ರಮದ ರೂಲ್ಸ ಅವ ಇವಕ್ಕೆಲ್ಲಾ ನೀವು ಒಪ್ಕೊಂಡ್ರ ನಿಮ್ಮನ್ನ ನಮ್ಮ ಆಶ್ರಮದಾಗ ಇಟ್ಕೊತೇವಿ ಅಂದು ಹೇಳಿ ಮುಗಿಸಿದಾ ರಮ್ಯಾ. ಇದನ್ನ ಕೇಳಿ ವಿನ್ಯಾ,"ನಂಗ ಒಂದ ಸ್ವಲ್ಪ ವಿಚಾರ ಮಾಡಲಿಕ್ಕೆ ಟೈಮ್ ಕೊಡ್ರಿ ಅಂತ ಹೆಳಿ ಫೋನ್ ಕಟ್ ಮಾಡಿದಾ. ಆಶ್ರಮದವರ ಕರ್ಣಕಠೋರ ಕಂಡಿಶನ್ ಕೇಳಿದಮ್ಯಾಲೆ ಮನ್ಯಾಗಿನ ಹೆಂಡ್ತಿ ಧಮಕಿ ಹಿತಾ ಅನಿಸ್ಲಿಕತ್ತುವು. ಮುಂಝಾನೆ ಒಂಬತ್ತರ ತನಕಾ ಹಾಸಗ್ಯಾಗ ಬಿದ್ದಿರತಿದ್ದಾ, ಅಂಥಾದ್ದ ಹೊಗಿ ನಸಿಕಲೆ ನಾಲ್ಕ ಗಂಟೆಕ್ಕ ಎದ್ದು ದನದಕ್ಕಿ ಸ್ವಚ್ಛ ಮಾಡೊದಕ್ಕಿಂತಾ ಮನ್ಯಾಗ ಮಕ್ಕಳ ಡೈಪರ್ ಛೇಂಜ ಮಾಡೋದನ ಅಡ್ಡಿಯಿಲ್ಲಾ ಅನಿಸ್ಲಿಕತ್ತು. ದಿನಾ ಸಂಜಿಮುಂದ ತಿನ್ನೊ ಚಾಟ್ಸ್, ಚೀಟು, ಫೇಸ್ ಬುಕ್ಕು, ಎಲ್ಲಾ ನೆನಪಾಗಲಿಕತ್ವು. ಇನ್ನ ಆಪರೇಶನ್ ಮಾಡಿಸ್ಕೊಳ್ಳೊದ ನೆನಿಸ್ಕೊಂಡ್ರಂತು ಕಾಲಾಪಾನಿ ಜೇಲಿನ ಜೀವನದ ಬಗ್ಗೆ ಓದಿದ್ದ ನೆನಪಾಗಿ, ತಲ್ಯಾಗ ಹೊಕ್ಕಿದ್ದ ಆಶ್ರಮದ ಜೀವನದ ಭೂತ ಸವಕಾಶ ಇಳಿಲಿಕತ್ತು.

ಹಿಂಗ ಮುಂದ ಒಂದ ಎಂಟ ದಿನಾ ಆದಮ್ಯಾಲೆ "ದಿನಕ್ಕ ಇಪ್ಪತ್ತಸಲಾ ಫೋನ್ ಮಾಡಿ ತಲಿತಿನ್ನಾಂವಾ, ಯಾಕ ಫೋನ್ ಮಾಡೆ ಇಲ್ಲಾ" ಅಂತ ನಮ್ಮ ತಮ್ಮಗ ಸಂಶಯ ಬಂದು ವಿನ್ಯಾಗ ಫೋನ್ ಹಚ್ಚಿ, "ಎಲ್ಲಿದ್ದೀಯಪ್ಪ ತಂದೆ, ಎನ್ ಸುದ್ದಿನ ಇಲ್ಲಾ. ಇದ್ದೀಯೊ…? ಅಂದ ಮುಂದ ಟಿಮ್ ಟಿಮ್ ಇಟ್ಟಾ. ಅದಕ್ಕ ವಿನ್ಯಾ"ಎನಿಲ್ಲಾ ಮತ್ತ ನನ್ನ ಹೆಂಡ್ತಿ ಶಾಪಿಂಗ್ ಹೋಗೊಣ ಅಂದ್ಲು, ಅದಕ್ಕ ಈಜಿಡೇ ಕ್ಕ ಕರಕೊಂಡ ಬಂದೇನಿ ಅಂದಾ. ಮಾತಾಡಲಿಕತ್ತಿದ್ದು ವಿನ್ಯಾನ ಹೌದೊ ಅಲ್ಲೊ ಅಂತ ಸಂಶಯ ಬಂದು "ಮತ್ತ ಸನ್ಯಾಸಾ, ದೀಕ್ಷಾ, ಸೂಸೈಡ್ ಅಂತ ಏನೇನೊ ಅಂತಿದ್ಯಲ್ಲಾ ಏನಾತು?" ಅಂತ ಕೇಳಿದ್ದಕ್ಕ, ಅತ್ಲಾಕಡೆಯಿಂದ ವಿನ್ಯಾ "ಶಾದಿ ತೊ ಸಜಾ ಹೈ,.. ಶೋಷಣ ಕಾ ಅಪನಾ ಹಿ ಮಜಾ ಹೈ…" ಅಂದು ಹಿ.. ಹಿ… ಹಿ.. ಅಂತ ನಕ್ಕೊತ ಫೋನ್ ಕಟ್ ಮಾಡಿದಾ.

ಇತ್ಲಾಕಡೆ ನಮ್ಮ ತಮ್ಮಗ ಹಿಡಿದಿದ್ದ ಗ್ರಹಣ ಬಿಟ್ಟಂಗಾಗಿ ಖುಷಿಲೇ "ಇಂದು ಆನಂದ ನಾ ತಾಳಲಾರೆ, ನನ್ನ ಮಾತಲ್ಲಿ ನಾ ಹೇಳಲಾರೆ" ಅಂತ ಹಾಡಕೋತ ಒಳಗ ಬರೊದ್ರಾಗ ಮುಂದ ದುರದುಂಡೇಶ್ವರ ಕಂಪನಿ ಅಂದ್ರ ಹೇಂಡ್ತಿ ಟೊಂಕದ ಮ್ಯಾಲೆ ಕೈಇಟಗೊಂಡ ಹುಬ್ಬಹಾರಿಸಿ ನೋಡಕೋತ ನಿಂತಿದ್ಲು. ಆಕಿ ಹುಬ್ಬ ಹಾರಸೋದ ಹೇಂಗಿತ್ತಂದ್ರ ಇಂವನ ಖುಶಿ ನೋಡಿ "ಯಾವಾಕಿ ಆಕಿ ಸುಂದರಿ, ಯಾವಾಕಿನ್ನ ಭೇಟ್ಟಿ ಆಗಿ ಬಂದಿ" ಅಂತ ಕೇಳಲಿಕತ್ಥಂಗ ಇತ್ತು. ಆವಾಗ ನಮ್ಮ ತಮ್ಮ ಪಟ್ಟನ ಪ್ಲೇಟ್ ಚೆಂಜ್ ಮಾಡಿ "ಚೆಲುವೆಯ ನೊಟ ಚೆನ್ನಾ, ಒಲವಿನ ಮಾತು ಚೆನ್ನಾ, (ಚೆಂಡ ಹೂವು ಅಂದ್ರ ಬರೊಬ್ಬರಿ ಸೂಟ್ ಆಗ್ತದ ಅಂತ ಮನಸಿನ್ಯಾಗ ಅನಕೊಂಡು, ಆದ್ರ ಧೈರ್ಯಾ ಸಾಲದಕ್ಕ) ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನಾ" ಅಂತ ಹಾಡಲಿಕ್ಕೆ ಶೂರು ಮಾಡಿದಾ. ಅದನ್ನ ಕೇಳಿ ಆಕಿ " ಹಿಂಗ ಬಾ ಹಾದಿಗೆ " ಅನ್ನೊಹಂಗ ಟೊಂಕದ ಮ್ಯಾಲಿನ ಕೈ ಇಳಿಸಿದ್ಲು…


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
prashant adur
10 years ago

as usual good one…keep it up.

ಹನುಮಂತ ಹಾಲಿಗೇರಿ
ಹನುಮಂತ ಹಾಲಿಗೇರಿ
10 years ago

ದಾರವಾಡ ಭಾಷೆಯೊಳಗ ಬಾಳ ಚಂದ ಬರೆದೇರಿ ಅಕ್ಕಾರ, ನಕ್ಕು ನಕ್ಕು ಸಾಕಾತು. ಉತ್ತರ ಕರ್ನಾಟಕದ ಜಾನಪದ ಹಾಡುಗಳನ್ನು ಬಾಲ ಸ್ಟಾಕ್ ಇಟಕೊಂಡಂಗ ಕಾಣ್ತೆರಿ, ಇನ್ನುಷ್ಟು ಬರಿರಿ,

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಖರೇವಂದ್ರೂ ಅಕ್ಕಾರ…ನಿಮ್ಮ ಲೇಖನಾ ಓದಿ ಭಾಳ ಖುಷಿ ಆಗ್ತದ ನೋಡ್ರೀ….ಮನಸ್ಸಿಗೆ ತಂಪ ಅನಸ್ತದ ಅನ್ನೋ ಮಾತು ಖರೇನರೀ…ಶುಭವಾಗಲಿ !

umesh desai
umesh desai
10 years ago

ಮೇಡಮ್ ನಿಮ್ಮ ಲೇಖನ ಸೊಗಸಾಗಿದೆ..
ನಮ್ಮ ತವರಮನಿ ಹೆಣ್ಣಮಗಳು ಈ ಪರಿ ಹೊಳಿಯೋದು ನೋಡಿ
 
ಖುಷಿ ಅನಸ್ತದ..ಹಾಂ ಅಲ್ಲಲ್ಲೆ ಟೈಪೋ ಎರರ್ ಅವರಿ ಸಂಬಾಳಿಸಿಕೊಳ್ರಿ…

ಸುಮನ್
ಸುಮನ್
10 years ago
Reply to  umesh desai

ನಿಮ್ಮ ಅಭಿಮಾನಕ್ಕ ಧನ್ಯವಾದಗಳು…. ನೀವು ಕೊಟ್ಟ ಸಲಹೆ ಬಗ್ಗೆ ಇನ್ನ ಮುಂದ ಎಚ್ಚರ ವಹಿಸ್ತೇನಿ.

Gundentti Madhukar
Gundentti Madhukar
10 years ago

    ದೇಶಿ ಭಾಷೆ ಬಳಿಸುವ ನಿಮ್ಮ ಬರುವಣಿಗೆ ಸುಂದರವಾಗಿದೆ.  ನಿಮ್ಮ ಕಲ್ಪನೆಯ ಾ ಸನ್ನಿವೇಷಗಳು ನಗೆಗಡಲಲ್ಲಿ ತೇಲಿಸುವುದರಲ್ಲಿ ಯಶಸ್ವಿಯಾಗಿವೆ – ಗುಂಡೇನಟ್ಟಿ ಮಧುಕರ   ಮೊ 9448093589

Rukmini Nagannavar
10 years ago

ಸುಮಕ್ಕ ಏನ್ ಚಂದ ಬರೀತೀರಿ.. ಮನಸ ಅಗದಿ ಆಕಾಶದಾಗ ಹಾರಾಡ್ಲಿಕತ್ತದ. ನಾ ನಿಮ್ಮ ಫ್ಯಾನ್ ಆಗಿಬಿಟ್ಟೆ.. ಹಿಂಗ್ ಬರೀರಿ ನಮ್ಮ ಭಾಷಾನ್ಯಾಗ. ಭಾಳ ಇಂಪು ಅನಿಸ್ತದ ಓದಾಕ.  🙂

sharada moleyar
sharada moleyar
10 years ago

good

srujan
srujan
10 years ago

aarambhadalli odalu swalpa kashta anisidaru..sogasaagi barediddeera madam. keep it up.

GAVISWAMY
10 years ago

very hilarious..enjoyed reading it..tnq 

Bheemappa
Bheemappa
10 years ago

ಅಬ್ಬಾ ನಿಮ್ಮ ಲೇಖನ ಓದೋದು ಅಂದ್ರ ಒಂಥರಾ ತಾಲೀಮು ಮಾಡಿದ ಆಯಾಸ ಆದಂಗ ಆಗುತ್ತೇರಿ ಬಾಯಾರ..ನಾನು ಉತ್ತರ ಕರ್ನಾಟಕದವನಾದ್ರು..ನಮ್ಮ ಭಾಷೆ ಮಾತಾಡೊಕೆ ಎಷ್ಟು ಚೆಂದಾನೊ…ಅದನ್ನ್ನ ಬರೆಯೋದು ಮತ್ತ ಒದೋದು ಅಷ್ಟೆ ಕಷ್ಟ ಅನಸ್ತದ ರೀ…ಆದ್ರು ನಿಮ್ಮ ಲೇಖನ್ ಭಾಳ ಚಲೋ ಐತಿ ನೋಡ್ರಿ…

Bheemappa
Bheemappa
10 years ago

ಉತ್ತರ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಆ.10,11ರಂದು ನಗರದ ಅರಮನೆ ಮೈದಾನದಲ್ಲಿ ಉತ್ತರ ಕರ್ನಾಟಕ ಉತ್ಸವ ಆಯೋಜಿಸಲಾಗಿದೆ..ಬನ್ನಿ ಭಾಗವಹಿಸಿ…

ಉತ್ಸವದ ವಿಶೇಷ
* ಸಾಂಸ್ಕೃತಿಕ ಕಾರ್ಯಕ್ರಮ
500 ಕಲಾವಿದರಿಂದ ಗೀಗಿ ಪದ, ಸುಡುಗಾಡು ಸಿದ್ಧರ ಆಟ, ಗೊರವರ ಕುಣಿತ, ದೊಡ್ಡಾಟ, ಹಂತಿ ಪದ, ಸಂಗ್ಯಾ ಬಾಳ್ಯಾ, ಹಾಲಕ್ಕಿ ಕುಣಿತ, ಹಲಗೆ ಮೇಳ, ಲಂಬಾಣಿ ಕುಣಿತ, ಶ್ರೀ ಕೃಷ್ಣ ಪಾರಿಜಾತ ಸಾಂಸ್ಕೃತಿಕ ಕಾರ್ಯಕ್ರಮ.

*ರೊಟ್ಟಿ ವೀರ ಪ್ರಶಸ್ತಿ: ಅತಿ ಹೆಚ್ಚು ಜೋಳದ ರೊಟ್ಟಿ ತಿನ್ನುವ ವ್ಯಕ್ತಿಗೆ 'ರೊಟ್ಟಿವೀರ' ಪ್ರಶಸ್ತಿ ಪತ್ರ, ಒಂದು ಎತ್ತಿನ ಗಾಡಿಯಷ್ಟು ಜೋಳ ಬಹುಮಾನ.

*ಉಡುಗೆ ತೊಡುಗೆ ಪ್ರಶಸ್ತಿ: ಉತ್ತರ ಕರ್ನಾಟಕದ ಮಹಿಳೆ ಮತ್ತು ಪುರುಷರಿಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ. ಮೊದಲ ಬಹುಮಾನ ಒಂದು ತೊಲ ಬಂಗಾರ.

*101 ತಿಂಡಿ ಪ್ರದರ್ಶನ: 101 ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಸ್ಪರ್ಧೆ

12
0
Would love your thoughts, please comment.x
()
x