ಗೆಳೆಯನಲ್ಲ (ಭಾಗ 3): ವರದೇಂದ್ರ ಕೆ.

(5)

ಆ ದಿನ ರಾತ್ರಿ, ಸಂಪತ್ಗೂ ರಿಪ್ಲೈ ಮಾಡದೆ ಅತೀವ ದುಃಖದಿಂದ ಮಲಗಿಬಿಟ್ಟಳು. ಮರುದಿನ ಎದ್ದು, ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ, ಆದ ದುರ್ಘಟನೆಯನ್ನು ನೆನೆದು ಕಣ್ಣೀರಾದಳು. ಮುಖ ಸಪ್ಪೆ, ಕಣ್ಣುಗಳಲ್ಲಿ ಕಾಂತಿ ಇಲ್ಲ. ಮದುವೆ ಆಗುವ ಹುಡುಗಿಗೆ ಇರುವ ಲವಲವಿಕೆ ಇಲ್ಲ. ತವರು ಮನೆ ಬಿಟ್ಟು ಹೋಗುವ ದುಃಖ ಇರಬಹುದೆಂದು ಎಲ್ಲರೂ ಸುಮ್ಮನಾದರು. ಸಂತೋಷ್ ನಿಂದ ಮೆಸೇಜೂ ಇಲ್ಲ, ಕರೆನೂ ಇಲ್ಲ. ಎಂದಿನಂತೆ ಸಂಪತ್ನ ಜೊತೆ ಮಾತನಾಡುತ್ತಿದ್ದರೂ, ಮನಸಲ್ಲಿ ಮಾತ್ರ ಮೋಸ ಮಾಡುತ್ತಿರುವೆನೆಂಬ ಭಾವ. ಮದುವೆ ಮುರಿಯುವ ಸ್ಥಿತಿಯಲ್ಲೂ ಇಲ್ಲ.

ಬಂದೇ ಬಿಟ್ಟಿತು ಆ ಸುದಿನ. “ಮಾಂಗಲ್ಯಂ ತಂತುನಾನೇನ ….” ಅದ್ಧೂರಿಯ ಮದುವೆ. ಎಲ್ಲ ಬಂಧು ಬಳಗದವರಿಂದ ಶುಭಾಶೀರ್ವಾದ. ನೂತನ ವಧುವರರ ಆಗಮನ. ಮನೆ ತುಂಬಿಸಿಕೊಂಡರು ಕಮಲಮ್ಮ. ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಎಲ್ಲರೂ ಸಂಭ್ರಮದಲ್ಲಿದ್ದರು. ಇದ್ದ ಒಬ್ಬ ಗಂಡು ಮಗನಿಗೆ ಮದುವೆ ಮಾಡಿ ಸಂಸಾರ ಕಟ್ಟಿಕೊಟ್ಟ ನೆಮ್ಮದಿ ಕಮಲಮ್ಮನಿಗೆ. ತಮ್ಮನ ಮದುವೆ ಆದ ಹರುಷ ಅಕ್ಕಂದಿರಿಗೆ. ಪ್ರಸ್ಥದ ಕೋಣೆಯನ್ನು ತಮ್ಮಗೆ ಮೆಚ್ಚುಗೆ ಆಗುವಂತೆ ಸ್ಪೂರ್ತಿ ಅಕ್ಕ, ಭಾರತಿ ಅಕ್ಕ ಮತ್ತು ಭಾವಂದಿರು ಶೃಂಗಾರಗೊಳಿಸಿದ್ದರು. ಪ್ರಸ್ಥಕ್ಕೆ ಎಲ್ಲ ಅಣಿಯಾಗಿತ್ತು.

ಮೊದಲ ರಾತ್ರಿಯ ಕನಸಲ್ಲಿ ಸಂಪತ್, ಸಂಪತ್ಭರಿತವಾದ ಯೋಚನೆಯಲ್ಲಿ ತೇಲಾಡುತ್ತಿದ್ದ. ಖುಷಿ ತೋರ್ಪಡಿಸಿಕೊಂಡರೆ ಅಕ್ಕಂದಿರು, ಭಾವಂದಿರು ರೇಗಿಸುತ್ತಾರೆಂಬ ನಾಚಿಕೆಯಿಂದ ಸುಮ್ಮನಿದ್ದ.

ಅಲಂಕೃತ ಕೋಣೆಯೊಳಗೆ ಕೂಡಿಸಿ ಕಾದು ಕುಳಿತುಕೊ ಬರುವಳು ನಿನ್ನ ಮನದನ್ನೆ ಎಂದು ಅಕ್ಕ ಕೀರ್ತಿ, ಹುಷಾರು ತಮ್ಮ ಎಂದು ಹೇಳಿ ಹೋದಳು.
ಆರತಿ ಅಕ್ಕ, ಪ್ರೀತಿನ ಪ್ರಸ್ಥಕ್ಕೆ ಸಿದ್ದಗೊಳಿಸಿ, ಪ್ರಸ್ಥದ ಕೋಣೆಯೊಳಗೆ ಬಿಟ್ಟು, ಇಬ್ಬರಿಗೂ ಆಲ್ ದಿ ಬೆಸ್ಟ್ ಎಂದು ಹೇಳಿ ಹೋದಳು.

ಸಂಪತ್ಗಂತೂ ಮೈಯೆಲ್ಲ ರೋಮಾಂಚನವಾಗ್ತಿದೆ, ಹೃದಯ ಬಡಿತ ಜಾಸ್ತಿ ಆಗ್ತಿದೆ, ಪ್ರೀತಿಯ ಪ್ರೇಮದುಯ್ಯಾಲೆಯಲಿ ತೂಗಾಡುವ ಸಮಯ. ಅಂದವಾಗಿ ಸಿಂಗರಿಸಿಕೊಂಡು ಬಂದ ಪ್ರೀತಿಯನ್ನು ನೋಡಿದರೆ ಅಪ್ಸರೆಯಂತೆ ಕಾಣಿಸುತ್ತಿದ್ದಾಳೆ. ಇಂತಹ ಸುಂದರ ಬಂಗಾರದಂತ ಕಾಂತಿಯನ್ನು ಹೊಂದಿದ ಪ್ರೀತಿಯನ್ನು ಪಡೆದ ನಾನೇ ಧನ್ಯ ಎಂದು ಕುಳಿತಿದ್ದ. ಪ್ರೀತಿ ಒಳಬಂದವಳೇ ಸಾಂಪ್ರದಾಯಿಕವಾಗಿ ಗಂಡನ ಕಾಲಿಗೆ ನಮಸ್ಕರಿಸಿ ಹಾಲು ನೀಡಿ, ಅರ್ಧದಲ್ಲೇ ನನಗೂ ಪಾಲಿದೆ ಎಂದು ತಾನೂ ಕುಡಿದಳು. ಸಂಪತ್ ಅವಳ ಮುದ್ದಾದ ಮುಖವನ್ನು ನೋಡಿ ಕಣ್ಣಲ್ಲೆ ಅಂದವನ್ನು ತುಂಬಿಕೊಂಡ. ಸಿಹಿ ಮುತ್ತುಗಳನ್ನು ನೀಡಿದ. ತನ್ನ ತೋಳುಗಳನ್ನು ಬಳಸಿ ಆಲಿಂಗಿಸಿದ. ಪ್ರೀತಿ ತನ್ನ ಬಾಳಲ್ಲಿ ನಡೆದುದನ್ನು ಮರೆತು ಸಂಪತ್ ಜೊತೆ ಒಂದಾಗಬೇಕೆಂದುಕೊಂಡಳು.

ಸಂಪತ್ ಪ್ರೀತಿಯ ಅಂದದ ಮುಖವನ್ನು ಬೊಗಸೆಯಲ್ಲಿ ಹಿಡಿದು. ಎಂತಹ ಅಂದಗಾತಿ ನನ್ನ ಮುದ್ದು ಮಡದಿ. ನೋಡಿದರೆ ನೋಡ್ತಾನೇ ಇರಬೇಕೆನಿಸುತ್ತದೆ, ಬಂಗಾರಿ … ಎಂದು ಮತ್ತೆ ಆಲಿಂಗಿಸಲ್ಹೊರಟ. ಪ್ರೀತಿ ತನ್ನನ್ನು ತಾನು ನಲ್ಲನಿಗೆ ಒಪ್ಪಿಸಿಕೊಳ್ಳಬೇಕು, ನಡೆದದ್ದೆಲ್ಲ ನೆನಪಾಗಿ, ತಡೆದಳು

“ರೀ ನಂಗ್ಯಾಕೋ ಪೂರ್ತಿ ತಲೆ ನೋಯ್ತಿದೆ. ಸಮಾಧಾನವೇ ಇಲ್ಲ, ತಡೆದುಕೊಳ್ಳಲಾಗುತ್ತಿಲ್ಲ. ತಲೆ ಸಿಡಿಯುತ್ತಿದೆ ರಿ, ಏನ್ ಮಾಡೋದು” ಎಂದಳು.
ಸಂಪತ್ ತನ್ನೆಲ್ಲ ಆಸೆಗಳನ್ನು ಹತೋಟಿಗೆ ತಂದುಕೊಂಡು “ಹೌದಾ ಬಂಗಾರಿ ಬಾ ಮಲಗು” ಎಂದು ತನ್ನ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾನೆ. ಅವಳ ಮುಖ ನೋಡುತ್ತ ನಿಧಾನವಾಗಿ ಕೈ ಸವರುತ್ತಾನೆ.

ಪ್ರೀತಿ ಸಂಪತ್ನ ಮಡಿಲಲ್ಲಿ ಮಗುವಿನಂತೆ ಮಲಗುತ್ತಾಳಾದರೂ ನಿದ್ದೆ ಬರುವುದಿಲ್ಲ. ಗಂಡನ ಪ್ರೀತಿ ಕಂಡು, ತಾನು ಮೋಸ ಮಾಡುತ್ತಿರುವೆ ಎಂದು, ದುಃಖಿಸುತ್ತಾಳೆ. ಕಣ್ಣೀರು ತಡೆಯಲು ಸಾಧ್ಯವಾಗುತ್ತಿಲ್ಲ. ಎದ್ದು ಸ್ವಾರಿ ರಿ, ಸ್ವಾರಿ ರಿ ಎನ್ನುತ್ತಾಳೆ.

“ಯಾಕೆ ಚಿನ್ನ, ಏನಾಯ್ತು ಮೊದಲ ರಾತ್ರಿ ಹೀಗಾಯ್ತು ಅಂತನಾ? ಏನು ಆಗೊಲ್ಲ ನೀನು ಮಲಗು, ಆರಾಮಾಗಿ ನಿದ್ರಿಸು ಕಡಿಮೆ ಆಗುತ್ತೆ. ಪ್ರೀತಿಯಿಂದಿರೋರಿಗೆ ಪ್ರತಿ ರಾತ್ರಿಯೂ ಮೊದಲ ರಾತ್ರಿಯೇ. ನೀನು ರೆಸ್ಟ್ ಮಾಡು”, ಎಂದು ಅಧರಕ್ಕೆ ಮಧುರವಾಗಿ ಮುತ್ತಿಡುತ್ತಾನೆ. ಪ್ರೀತಿ ಮತ್ತೆ ಮತ್ತೆ ಸ್ವಾರಿ ಕೇಳುತ್ತಾ ಹಾಗೆ ಅಳುತ್ತಾ ಮಲಗಿಬಿಡುತ್ತಾಳೆ.
ಸಂಪತ್ ಗೆ ಪ್ರೀತಿ ಮಗು ತರ ಕಾಣ್ತಿದಳೆ. ಮುದ್ದಾದ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತಿದೆ. ಹಾಗೆ ಅವಳ ಮುಖ ಸವರುತ್ತ ತಾನೂ ಮಲಗಿಕೊಂಡ.
ಮರುದಿನ ಮೊದಲ ರಾತ್ರಿಯು ಯಶಸ್ವಿಯಾಗಿದೆ ಎನ್ನುವಂತೆ ಇಬ್ಬರೂ ನಟಿಸುತ್ತ ಎಲ್ಲರೊಂದಿಗೆ ನಗುನಗುತ್ತ ಇದ್ದರು. ಹಗಲು ಕಳೆದು ಮತ್ತೆ ಇರುಳು ಬಂದಿತು.

ಸಂಪತ್ ಗೆ ಪ್ರೀತಿಯೊಂದಿಗೆ ಮಧುರವಾದ ಅನುಭವ ಹೊಂದುವ ಕಾತುರ. ಈ ದಿನವೂ ಪ್ರೀತಿ ಕುಂಟು ನೆಪಹಾಕಿದಳು. ಎಲ್ಲ ಸಮಯದಲ್ಲಿ ಪ್ರೀತಿಯಿಂದ ಇರುವ ನಲ್ಲೆ ಮಿಲನದ ಘಳಿಗೆ ಮಾತ್ರ ಉದಾಸೀನತೆ ತೋರಿಸುತ್ತಾಳೆ. ಸಹೃದಯಿ ಸಂಪತ್, ಏನೋ ಕೆಲವೊಮ್ಮೆ ಈ ವಿಷಯದಲ್ಲಿನ ಭಯವೋ, ಅಥವಾ ಮಡಿವಂತಿಕೆಯೋ ಇರಬೇಕು ಪ್ರೀತಿಗೆ; ನಾಳೆ ಬದಲಾಗಬಹುದೆಂದು ಸುಮ್ಮನಾಗುತ್ತಾನೆ..

ಮರುದಿನ ಮತ್ತೊದು ನೆಪ. ನಂತರ ಮೂರು ದಿನದ ರಜೆ ನೆಪಹಾಕಿ ದೂರವೇ ಉಳಿಯುತ್ತಾಳೆ. ನಂತರ ಸುಸ್ತು, ಆಯಾಸ, ವ್ರತದ ನೆಪ. ಇದು ತಿಂಗಳವರೆಗೆ ಮುಂದುವರೆದಾಗ ಸಂಪತ್ನ ಮನಸಿಗೆ ಖಿನ್ನತೆ ಆವರಿಸತೊಡಗುತ್ತದೆ. ಸಂಪತ್ ಹಲವು ದಿನಗಳ ಕಾಲ ಪ್ರೀತಿಯಿಂದಲೇ ಇದ್ದವ, ನಂತರ ಹೀಗ್ಯಾಕೆ ಎಂದು ಅನುಮಾನಿಸತೊಡಗುತ್ತಾನೆ.. ಹೇಳಿಕೊಳ್ಳಲಾಗಲಿಲ್ಲ. ಪ್ರೀತಿ ಎಲ್ಲದರಲ್ಲೂ ಸಹಜವಾಗಿಯೇ ಇರುತ್ತಾಳೆ. ನಗು ನಗುತ್ತಾ ಮಾತಾಡುತ್ತಾಳೆ. ಕೆಲವೊಮ್ಮೆ ಮುದ್ದಿಸಿದರೆ ಒಪ್ಪಿ, ಅಪ್ಪಿ ಸುಮ್ಮನಿರುತ್ತಾಳೆ. ನನ್ನನ್ನು ಅತಿ ಕಾಳಜಿ ಪ್ರೀತಿಯಿಂದ ಆರೈಕೆ ಮಾಡುತ್ತಾಳೆ. ಆದರೆ ಈ ವಿಷಯದ ಕುರಿತಾಗಿ ಏನನ್ನು ಹಂಚಿಕೊಳ್ಳುತ್ತಿಲ್ಲ.

ನಗುವಿನ ಗಣಿ ನನ್ನ ಪ್ರೀತಿ, ಪ್ರೀತಿಯ ಕಣಜ. ಮಲಗುವ ಕೋಣೆ ಸೇರಿದೊಡನೆ ಮಂಕಾಗಲು ಕಾರಣವೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ. ನೇರವಾಗಿ ಕೇಳಿದರೆ ಅಳುತ್ತಾಳೆ. ಕ್ಷಮೆಯಾಚಿಸುತ್ತಾಳೆ, ಸುಮ್ಮನಾಗುತ್ತಾಳೆ.

ಪ್ರೀತಿಯನ್ನು ದುಃಖದಲ್ಲಿರುವಂತೆ ಮಾಡಲು ಸಂಪತ್ಗೆ ಮನಸಿಲ್ಲ. ನೋಯಿಸಲೂ ಆಗದೆ, ಒರಿಸಲೂ ಆಗದೆ, ಪ್ರೀತಿಯ ಮನಸಲ್ಲಿ ಏನಿದೆ ಎಂದು ತಿಳಿಯಲೂ ಆಗದೆ ಹಿಂಸೆ ಪಡುತ್ತಾನೆ. ಮನೆಯಲ್ಲಿ ಯಾರಿಗೂ ಹೇಳಿಕೊಳ್ಳಲಾಗದೆ ದಿನದಿಂದ ದಿನಕ್ಕೆ ಮಂಕಾಗುತ್ತಿದ್ದಾನೆ. ಪ್ರೀತಿಯ ಜೊತೆ ಮಾತು ಕಡಿಮೆ ಮಾಡಿದ್ದಾನೆ. ಇದರಿಂದ ಪ್ರೀತಿಗೂ ಸಹನೆ ಆಗುತ್ತಿಲ್ಲ. ಅವಳಲ್ಲೂ ಬದಲಾವಣೆ ಆಗುತ್ತಿವೆ.
ಮನೆಯಲ್ಲಿನ ನಡೆ ನುಡಿಗಳು ಮೊದಲಿನಂತಿಲ್ಲ.

ಪ್ರೀತಿಯ ನಡೆಯಲ್ಲಿನ ಅಸಹಜತೆ ಕಂಡು, ಕಮಲಮ್ಮ ನಾಲ್ಕು ದಿನ ಗಂಡನೊಂದಿಗೆ ಹೊರಹೋಗಿ ಬರಲು ಹೇಳಿದ್ದಾರೆ. ಆದರೆ ಪ್ರೀತಿ ಒಬ್ಬಳೇ ತವರಿಗೆ ಹೋಗಿ ಬರಲು ಸಿದ್ಧಳಾಗಿ ಹೊರಟಿದ್ದಾಳೆ.

ಕ್ಯಾಬ್ ಬುಕ್ ಮಾಡಿದ್ದಾಳೆ. ಮನೆಯಿಂದ ಹೊರಬಂದು, ಕ್ಯಾಬ್ ಬರುವ ಸ್ಥಳದಲ್ಲಿ ನಿಂತಿದ್ದಾಳೆ. ಕ್ಯಾಬ್ ಬಂತು, ಒಳಗೆ ಕೂರಬೇಕು ಎನ್ನುವಷ್ಟರಲ್ಲಿ, ಯಾರೋ ಒಳಗಡೆ ಇದಾರೆ ನಾನು ಕೂರುವುದಿಲ್ಲ, ಎಂದಿದ್ದಾಳೆ.

ಕ್ಯಾಬ್ ಬಾಗಿಲು ತೆಗೆದು “ಹಾಯ್ ಪ್ರೀತಿ….” ಎಂಬ ಗಂಡು ಧ್ವನಿ ಬಂದು, ಪ್ರೀತಿ ಗೆಳೆಯ ಸಂತೋಷ್ನನ್ನು ಕಂಡು ಆಶ್ಚರ್ಯದಿಂದ ನೋಡಿದ್ದಾಳೆ. ಒಂದು ಕ್ಷಣ ಮೈ ಮರೆತಂತೆ ನಿಂತಿದ್ದಾಳೆ..
ಸಂತೋಷ್, “ಬಾ ಪ್ರೀತಿ ಒಳಗಡೆ” ಎಂದು ಕರೆದೊಡನೆ ಎಚ್ಚರವಾದಂತಾಗಿ, ನಾನು ಬರುವುದಿಲ್ಲ ಎಂದಾಗ, ಸಂತೋಷ್, “ಪ್ಲೀಸ್ ಬಾ ಪ್ರೀತಿ” ಎಂದು ಕರೆದು ಕೂರಿಸಿಕೊಂಡಿದ್ದಾನೆ. ಕ್ಯಾಬ್ ಚಲಿಸುತ್ತದೆ.

ಇವನು ಇಲ್ಲಿ ಹೇಗೆ ಬಂದ, ಇಷ್ಟು ದಿನ ಎಲ್ಲಿಗೆ ಹೋಗಿದ್ದ, ಎಂದು ಮೈಮರೆತವಳಿಗೆ, ಹಿಂದಿನ ಎಲ್ಲ ಘಟನೆಗಳ ನೆನಪು ಸ್ಮೃತೀಪಟಲದಲ್ಲಿ ಸುಳಿದು ಹೋಗುತ್ತವೆ.

ಕ್ಯಾಬ್ ಚಲಿಸುತ್ತಲೇ ಇದೆ. ಗರಬಡಿದವಳಂತೆ ಮೈಮರೆತು ಕುಳಿತ ಪ್ರೀತಿಯನ್ನು ಸಂತೋಷ್, ಪ್ರೀತಿ ಎಂದು ಮುಟ್ಟಿದಾಗ ಎಚ್ಚರಗೊಳ್ಳುತ್ತಾಳೆ. ಏನ್ ಯೋಚನೆ ಮಾಡ್ತಾ ಇದೀಯಾ ಪ್ರೀತಿ?. ಎಂದೊಡನೆ ಎದೆ ಝಲ್ ಎಂದು ವರ್ತಮಾನಕ್ಕೆ ಬರುತ್ತಾಳೆ. ನಾನ್ಯಾಕೆ ಇವನಿರುವ ಗಾಡಿ ಹತ್ತಿದೆ. ಎಲ್ಲಿದ್ದೇನೆ ನಾನು?

“ಡ್ರೈವರ್ ಎಲ್ಲಿದೆ ಗಾಡಿ ಈಗ. ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ ನನ್ನ!? ಎಂದು ಕೇಳುತ್ತಾಳೆ. ಸಂತೋಷ್ ಏನ್ ಇದೆಲ್ಲ” ಎಂದು ಭಯದಿಂದ ಕೇಳುತ್ತಾಳೆ……

        (6)    

“ಹೇ ಪ್ರೀತಿ ನಮ್ಮ ಮನೆಗೆ ಕರೆದೊಯ್ಯುತ್ತಿದ್ದೇನೆ. ನಿನ್ನ ಬಳಿ ಸ್ವಲ್ಪ ಮಾತಾಡಬೇಕು. ಎಷ್ಟು ದಿನದ ಮೇಲೆ ಸಿಕ್ಕಿದೀಯಾ ನೀನು”, ಎನ್ನುತ್ತಾನೆ.

“ಬೇಡ ಬೇಡ.. ಗಾಡಿ ನಿಲ್ಲಿಸಿ. ನಾನಿಲ್ಲಿಯೇ ಇಳಿಯುತ್ತೇನೆ. ಒಂದು ಬಾರಿ ನಿನ್ನ ನಂಬಿ ಬಂದದ್ದಕ್ಕೆ; ಸರಿಯಾದ ಬಹುಮಾನವೇ ಕೊಟ್ಟಿದ್ದೀಯ. ಈಗ ಯಾವ ನಂಬಿಕೆಯಿಂದ ನಿನ್ನ ಜೊತೆ ಬರಲಿ.

“ಪ್ಲೀಸ್…. ಗಾಡಿ ನಿಲ್ಲಿಸಿ, ನಿಲ್ಲಿಸಿ”…. ಎನ್ನುವಷ್ಟರಲ್ಲಿ ಕಾರು ಅದೇ ಸಂತೋಷ್ ನ ಬಂಗಲೆ ಒಳಗಡೆ ಹೋಗುತ್ತದೆ.

ಪ್ರೀತಿಯನ್ನು ಬಲವಂತವಾಗಿಯೇ ಕರೆದೊಯ್ಯುತ್ತಾನೆ ಸಂತೋಷ್. “ಬಿಡು ಸಂತೋಷ್ ನೀನು ಮಾಡಿದ ದ್ರೋಹದಿಂದ ಇಲ್ಲಿಯವರೆಗೂ ನನ್ನ ಮನಸ್ಸು ತಪ್ಪಿತಸ್ಥ ಭಾವನೆಯಲ್ಲಿ ಬೇಯುತ್ತಲೇ ಇದೆ. ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡನೊಂದಿಗೆ ನಾನು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಪಾಪಿ ನೀನು, ಸ್ನೇಹಕ್ಕೇ ಕಳಂಕ ನೀನು, ನನ್ನ ಬಿಟ್ಟುಬಿಡು” ಎಂದು ಚೀರುತ್ತಾಳೆ.

“ಪ್ರೀತಿ ಸುಮ್ಮನಿರು ನಾನೇನು ಮಾಡುವುದಿಲ್ಲ. ನಿನ್ನ ಸ್ನೇಹಕ್ಕೆ ಕಪ್ಪು ಮಸಿ ಬಳೆದ ನನಗೆ ದೇವರು ಸರಿಯಾಗಿಯೇ ಶಿಕ್ಷಿಸಿದ್ದಾನೆ. ಆ ದಿನ ನೀನು ಮನೆಗೆ ಹೋದ ಮೇಲೆ, ನಿನಗೆ ಮೆಸೇಜ್ ಮಾಡಿದ್ರೂ ನೀನು ರಿಪ್ಲೈ ಮಾಡಲಿಲ್ಲ, ನೇರವಾಗಿ ನಿನ್ನ ಮಾತಾಡಿಸೋಣ ಎಂದು ನಿಮ್ಮ ಮನೆಗೆ ಬರುವಾಗ ಕಾರು ಅಪಘಾತಕ್ಕೀಡಾಯಿತು. ನಾನು ಪ್ರಜ್ಞೆ ತಪ್ಪಿ ಬಿದ್ದು ಕೋಮಾಸ್ಥಿತಿಗೆ ಹೋಗಿದ್ದೆ. ನನಗೆ ಎಚ್ಚರವಾಗಿದ್ದೇ ನಿನ್ನೆ. ಆದ ಅಪಘಾತದಲ್ಲಿ ನಾನೂ ಕಳೆದುಕೊಂಡದ್ದೂ……” ಎನ್ನುವಷ್ಟರಲ್ಲಿ,

“ನೀ ಏನು ಹೇಳುವ ಅವಶ್ಯಕತೆಯಿಲ್ಲ, ನಿನ್ನ ಮಾತು ಕೇಳುವ ಮನಸ್ಸೂ ನನಗಿಲ್ಲ. ನಾ ಹೋಗಬೇಕು ಈಗ” ಎಂದು ಅಂಗಲಾಚುತ್ತಾಳೆ.

“ಪ್ರೀತಿ, ನನಗೆ ಎಚ್ಚರವಾದೊಡನೆ ನಿನ್ನ ನೋಡಬೇಕೆಂದೇ ನಿಮ್ಮ ಮನೆಗೆ ಹೊರಟಿದ್ದೆ. ದಾರಿಯಲ್ಲಿ ನೀನು ಸಿಕ್ಕಿದೆ. ನಿನ್ನನ್ನು ಮತ್ತೆ ನಾನು ಕ್ಷಮೆಯಾಚಿಸುತ್ತೇನೆ. ನಿನ್ನನ್ನು ಮದುವೆ ಆಗುವ ಬಯಕೆಯಿದ್ದದ್ದು ನಿಜ. ಆದರೆ ನಿನ್ನ ಅನುಭವಿಸುವ ಆಸೆ ನನಗಿರಲಿಲ್ಲ ಪ್ರೀತಿ. ಪ್ಲೀಸ್ ಪ್ರೀತಿ ನನ್ನನ್ನು ಕ್ಷಮಿಸು, ಕ್ಷಮಿಸ್ತಿಯಲ್ವಾ..?”

“ಪ್ಲೀಸ್ ಸಂತೋಷ್ ನಾನು ಮನೆಗೆ ಹೋಗ್ಬೇಕು. ನನ್ನನ್ನು ಕಳಿಸು. ನಿನ್ನ ಯಾವ ಮಾತುಗಳೂ ನನಗೆ ರುಚಿಸದು. ನಿನ್ನ ನೋಡುವ, ನಿನ್ನ ಜೊತೆ ಮಾತನಾಡುವ ಆಸೆ, ಅನಿವಾರ್ಯತೆ ಎರಡೂ ನನಗಿಲ್ಲ. ನಿನ್ನಿಂದ ನನ್ನ ಬಾಳೇ ಕತ್ತಲಲ್ಲಿ ಮುಳುಗಿದೆ. ನನ್ನ ಮನಸು ನನ್ನನ್ನು ಚುಚ್ತಾನೇ ಇರುತ್ತೆ. ನನ್ನ ಗಂಡನ ಜೊತೆ ನೆಮ್ಮದಿಯಿಂದ ಇರೋಕೂ ಆಗ್ದೆ, ಸತ್ಯ ಹೇಳೋಕೂ ಆಗ್ದೆ, ನಿತ್ಯ ನರಕ ಅನುಭವಿಸ್ತಿದೀನಿ. ನನ್ನ ನಡೆ ನನ್ನ ಅತ್ತೆ ಮನೆಯಲ್ಲಿ ಅನುಮಾನದ ಬೀಜ ಬಿತ್ತಿದೆ. ನಾ ಏನು ಮಾಡಲಿ ನೀನೇ ಹೇಳು. ನನ್ನ ಆತ್ಮೀಯ ಗೆಳೆಯನಾಗಿ ನೀನು ನಿನ್ನ ಕಾಮ ತೃಷೆಗೆ ನನ್ನನ್ನು ಬಲಿಯಾಗಿಸಿದ್ದು ನ್ಯಾಯನಾ? ಹೇಳು ಸಂತೋಷ್.. ನನ್ ಮನಸಿನ ಭಾವನೆ ನನ್ ಗಂಡಂಗೆ ಹೇಗೆ ಹೇಳಲಿ. ನನಗೆ ಪಾಪ ಪ್ರಜ್ಞೆ ಕಾಡುತ್ತೆ ಪ್ಲೀಸ್ ನನ್ನನ್ನು ಹೋಗಲು ಬಿಟ್ ಬಿಡು” ಎಂದು ಗೋಗರೆಯುತ್ತಾಳೆ.

“ಆಯ್ತು ಪ್ರೀತಿ”
ಎಂದು ಮರುಮಾತಾಡದೇ ಅದೇ ಕ್ಯಾಬ್ನಲ್ಲಿ ಪ್ರೀತೀನ ಮನೆಗೆ ಕಳಿಸಿ, ನನ್ನ ಗೆಳತಿಯ ಸಂಸಾರದ ಹಾದೀನ ನಾನೇ ಸರಿ ಮಾಡಬೇಕು, ಅವಳ ಪಾಲಿಗೆ ಮುಳ್ಳಾದ ನಾನೇ ಅವಳ ದಾರಿಗೆ ಹೂ ಹಾಸಿಗೆ ಹಾಸಬೇಕು. ಅವಳ ಗಂಡ ಯಾರೆಂದು ತಿಳಿದು ಸತ್ಯ ಹೇಳಿ ಅವರಿಬ್ಬರ ನಡುವೆ ಸಾಮರಸ್ಯ ಹುಟ್ಟಿಸಬೇಕು. ಎಂದು ಮನೆ ಹುಡುಕಲು ಹೊರಡುತ್ತಾನೆ.

ವರದೇಂದ್ರ ಕೆ.


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಇಲ್ಲಿಯವರೆಗೆ… […]

1
0
Would love your thoughts, please comment.x
()
x