ಆ ಕಡೆಯಿಂದ ಒಮ್ಮಿಂದೊಮ್ಮೆಲೆ ಗಲಾಟೆ ಶುರುವಾಯಿತು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕರ್ಚೀಫ್ ಅಂಗಡಿಯವನು ಕರ್ಚೀಫ್‍ಗಳೆಲ್ಲವನ್ನು ಬಾಚಿ ಎದೆಗೊತ್ತಿ ಓಡತೊಡಗಿದ. ಬಾಚಣಿಕೆ, ಕನ್ನಡಿ, ಬ್ರಷ್, ಸೀರಣಿಗೆ ಮಾರುತ್ತಿದ್ದ ಸಲೀಮ ಹರವಿದ್ದ ಪ್ಲಾಸ್ಟಿಕ್ ಕವರನ್ನೆ ಮಡಚಿ ಬಗಲಲ್ಲಿಟ್ಟುಕೊಂಡು ಮೆಲ್ಲನೆ ಕಾಲುಕಿತ್ತ. ಅದೆಲ್ಲೆಲ್ಲಿಂದಲೋ ಹೊಂದಿಸಿದ್ದ ಸೆಕೆಂಡ್ ಹ್ಯಾಂಡ್ ಚಪ್ಪಲಿಗಳನ್ನು ರಾಶಿ ಹಾಕಿ ಹರಾಜು ಹಾಕುತ್ತಿದ್ದ ರಾಜು ಒಂದೇ ಉಸಿರಿಗೆ ಗೋಣಿ ಚೀಲಕ್ಕೆ ಎಲ್ಲಾ ಚಪ್ಪಲಿಗಳನ್ನು ತುರುಕಿ ಹೊರಲಾರದೆ ಹೊತ್ತು ಅವಸರದಿಂದ ನಡೆಯತೊಡಗಿದ. ಎಲ್ಲವೂ ಕ್ಷಣಾರ್ಧದಲ್ಲಿಯೇ ನಮ್ಮ ಕಣ್ಮಂದೆ ನಡೆಯುತ್ತಿತ್ತು. ಅಲ್ಲಿನ ಎಲ್ಲರಿಗೂ ಬೂಟು ಕಾಲಿನವನ ಕೈಯಲ್ಲಿನ ಬೆತ್ತ ಮತ್ತು ಆ ಬೆತ್ತಕ್ಕೆ ತೆರಬೇಕಾದ ಮಾಮೂಲಿ ಹಣದ ಬಗೆಗಿನ ಆತಂಕವೊಂದೇ ಕಾಡುತ್ತಿತ್ತು.
ಅವಳ ಕೈಯಲ್ಲಿದ್ದ ನನ್ನ ಮಗು ಅವಸರವಸರವಾಗಿ ಕುಡಿದ ಹಾಲು ನೆತ್ತಿಗೇರಿದರೂ ಲೆಕ್ಕಿಸದೆ ಅವಳ ಎದೆ ಕಚ್ಚಿತ್ತು. ಅವಳು ಎಲ್ಲವನ್ನು ಅರ್ಥಮಾಡಿಕೊಂಡಂತಿತ್ತು. ಹಾಲುಣಿಸುತ್ತಿದ್ದ ಮಗುವನ್ನೆ ಅವಚಿಕೊಂಡು ಓಡಿದಳು. ತನ್ನ ಸನಿಹದಲ್ಲೇ ಪೊಲೀಸ್ ಬೆನ್ನತ್ತಿದ್ದಾಗ ಓಡಿ ಓಡಿ ಹಾದಿ ತಪ್ಪಿಸಿಬಿಟ್ಟಳು. ನಾನು ದೂರದಲ್ಲಿ ಅವಳನ್ನು ಬೆನ್ನತ್ತಿದ್ದೆ. ಲೆಫ್ಟ್-ರೈಟ್, ಶಿಸ್ತಿನಲ್ಲಿದ್ದ ಪೊಲೀಸು ಮುಂದಕ್ಕೆ ಓಡಿದಾಗ ನಿಟ್ಟುಸಿರಿಟ್ಟು ಮತ್ತು ಮೊಲೆ ಉಣಿಸುವುದನ್ನು ಮುಂದುವರೆಸಿದಳು.
ಹತ್ತು ಹನ್ನೆರಡು ಸಲ ಹಾಲು ಹೀರಿ ಸುಸ್ತಾದ ಮಗು ತೊಟ್ಟು ಬಿಟ್ಟು ಸುಧಾರಿಸಿಕೊಳ್ಳುತಿತ್ತು. ಹಾಲು ಸುರಿಯುತಿದ್ದ ಮೊಲೆ ತೊಟ್ಟನ್ನು ಮಮತೆಯಿಂದ ಮತ್ತೆ ಅದರ ಬಾಯಿಗಿರಿಸುತ್ತಿದ್ದಳು. ಕಣ್ಣು ಬಿಟ್ಟು ಅವಳನ್ನೆ ನೋಡುತ ಮೊಲೆಯ ಮೇಲೆ ತನ್ನ ಪುಟ್ಟ ಕೈಯಿರಿಸಿ ಮತ್ತೆ ಲೊಚಲೊಚನೆ ಹೀರುತ್ತಿತ್ತು. ಅವಳಿಗೆ ದೂರದಲ್ಲಿ ಹಳದಿ ಕಾರು ಬಂದು ನಿಂತಿದ್ದು ಕಾಣಿಸಿತು. ಕಾರಿನಿಂದ ಇಳಿದ ವ್ಯಕ್ತಿ ಸರಸರನೆ ಅತ್ತಿತ್ತ ಕಣ್ಣಾಡಿಸಿ ಫೋನ್ ಮಾಡುತಿದ್ದದ್ದೂ ಕಾಣಿಸಿತು. ಇವಳು ಅವನತ್ತ ಒಮ್ಮೊಮ್ಮೆ ದುಗುಡದಿಂದ ನೋಡಿದಳು. ಮಗು ಅವಳ ಎದೆಯನ್ನು ಆವುಚಿಕೊಂಡಿತ್ತು. ಏನನ್ನೋ ನಿರ್ಧರಿಸಿದಂತೆ ಅಲ್ಲಿಯೆ ಕುಳಿತುಬಿಟ್ಟಳು. ನಿಧಾನಕ್ಕೆ ನನ್ನತ್ತ ಕಣ್ಣರಳಿಸಿ ಕಾರಿನ ಕಡೆ ಸನ್ನೆ ಮಾಡಿದಳು. ನನಗೇನೂ ಅರ್ಥವಾಗಲಿಲ್ಲ. ‘ನೀನು ಈ ದಂಧೆಗೆ ಹೊಸಬಳಂತ ಕಾಣತದ' ಎಂದಳು. ನಾನು ಹೌದೆನ್ನದೆ ವಿಧಿಯಿರಲಿಲ್ಲ. ಆಮೇಲೆ ನನ್ನತ್ತ ಧೈರ್ಯದಿಂದ ‘ನಾನು ಇದೇ ದಂಧೆಯಲ್ಲಿರೊಳು' ಎಂದಳು. ಸ್ವಲ್ಪ ಹೊತ್ತು ಸುಮ್ಮನಾದಳು ಅವಳು ತುಟಿಯಲ್ಲಿಯೆ ಅಳುತ್ತಿರಬೇಕು ಎಂದು ನನಗೆ ಅನಿಸತೊಡಗಿತು. ಗಿರಾಕಿ ಜೋರಾಗಿ ಮೊಬೈಲಿನೊಳಗ ಅದ್ಯಾರನ್ನೋ ಬೈಯುತಿದ್ದ. ಕೊನೆಗೆ ಸಿಟ್ಟಿನಿಂದ ಫೋನ್ ಕಾರಿನೊಳಗೆ ಎಸೆದು ಕುಳಿತು ಸ್ಟಾರ್ಟ್ ಮಾಡಿದ್ದು ಕಾಣಿಸಿತು. ‘ಇವತ್ತಿನ ಕಮಾಯಿ ಹೊತಲಾ. ಸಾಯಲಿ ಎಲ್ಲರೂ, ನನಗೇನಾಗಬೇಕು ನಾನುಂಟು ಈ ಮಗುವುಂಟು' ಎಂದು ಆಕೆ ಏನೇನೋ ಬಡಬಡಿಸಿದಳು. ಮಗು ಹೊಟ್ಟೆ ತುಂಬಿ ನಿಶ್ಚಿಂತೆಯಿಂದ ಮಲಗಿಬಿಟ್ಟಿತ್ತು.
ಅವಳು ಎದೆಯ ಬಿಗಿತ ಕಡಿಮೆಯಾದುದನ್ನು ಒಮ್ಮೆ ಹೆಮ್ಮೆಯಿಂದ ನೋಡಿಕೊಂಡಳು. ಈಗ ಅವಳ ಮೈ ಮನಸುಗಳಲ್ಲಿ ಹಾಯಾದ ಅನುಭವ ಕಂಡು ಬಂತು. ಕಣ್ಣೀರು ಒರೆಸಿಕೊಳ್ಳುತ್ತಲೇ ಅವಳು ಮಗುವನ್ನು ನನ್ನ ಕೈಗೆ ಹಸ್ತಾಂತರಿಸಿದಳು. ಆಮೇಲೆ ನನ್ನ ಪರಿಚಯ ಮಾಡಿಕೊಂಡಳು. ನಾನು ಇರೋ ಕತೆಯನ್ನೆಲ್ಲಾ ಹೇಳಿದೆ. ಅವಳು ನನ್ನನ್ನು ಪಕ್ಕದ ಹೊಟೇಲಿಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಮಸಾಲೆ ದೋಸೆ ತಿನ್ನಿಸಿದಳು. ಇಷ್ಟೆಲ್ಲಾ ಕೊಡಿಸುವ ನನಗೆ ಅವಳ ಕತೆಯನ್ನು ಕೇಳಿ ತಿಳಿದುಕೊಳ್ಳಬೇಕೆಂಬ ಹುಕಿ ಸುರುವಾಯಿತು. ಇಕಿ ನನ್ನನ್ನು ಒಂದು ದಂಡೆಗೆ ಹತ್ತಿಸತಾಳೆ ಅಂತ ದೂರದ ಭರವಸೆ. ದೂರದಲ್ಲಿ ಒಂದು ಅಂಗಡಿಯ ಬಾಗಿಲನ್ನು ಹಾಕಿರೋದನ್ನು ಖಾತರಿ ಮಾಡಿಕೊಂಡು ಆ ಅಂಗಡಿಯ ಶೆಟರ್ ಮುಂದೆ ಹೋಗಿ ಕುಳಿತೆವು ಆಕೆ ತನ್ನ ಕತೆ ಹೇಳತೊಡಗಿದಳು.
* * *
‘ಎಷ್ಟು ಮುದ್ದಾಗಿತ್ತು ನನ್ನ ಕೂಸು, ಆದ್ರ ಪ್ರಯೋಜನವೇನು ಮದುವೆಯಿಲ್ಲ, ಗಂಡನಿಲ್ಲ. ಹೇಳಿ…. ಕೇಳಿ.. ನಾನು ಮಾಡುತ್ತಿರುವುದು ಮೈ ಮಾರುವ ಕೆಲಸ. ಇಲ್ಲಿ ಖಾಯಿಲೆ ಕಸಾಲೆಗಳನ್ನು ಹಡಿಬಹುದೆ ವಿನಃ ಮಕ್ಕಳನ್ನಲ್ಲ. ಬಸುರಾಗದಂತೆ ಕೆಟ್ಟ ಖಾಯಿಲೆ ಮೈಸೇರದಂತೆ ಎಚ್ಚರವಹಿಸುವುದೇ ನಮ್ಮ ದಂಧೆಯ ಮೊದಲ ಮಂತ್ರ ಅಂತ ಏನೆನೋ ಹೇಳಿ ನನ್ನನ್ನು ಏಮಾರಿಸಿದ್ದಳು ಘರವಾಲಿ ರತ್ನಮ್ಮ.
ಅಳುವ ಕಂದನ ತುಟಿಯು ಹವಳದ ಕುಡಿಯಂಗ. ನನ್ನ ಕಂದನದು ಹವಳದ ತುಟಿಯೇ. ಆ ತುಟಿಗಳಿಂದ ಮೊಲೆ ಹೀರಿ ಸಂತೃಪ್ತಿಯಿಂದ ಮಲಗುತಿದ್ದ ನನ್ನ ಕಂದ ಅಂತಹ ಹಸುಗೂಸನ್ನ! ಅದ್ಯಾವುದೋ ಅನಾಥಾಶ್ರಮದ ಹೆಂಗಸಿನ ಕೈಯಲ್ಲಿರಿಸಿ ಬರುವಂತೆ ಮಾಡಿದಳು ಆ ತಾಟಗಿತ್ತಿ ಘರವಾಲಿ. ಹುಟ್ಟಿದ್ದು ಹೆಣ್ಣಾಗಿದ್ದರೆ ಇಲ್ಲಿಯೇ ಸಾಕಲು ಬಿಡುತಿದ್ದಳೇನೋ? ಎಷ್ಟೆಂದರೂ ಅದು ಅವಳ ದಂಧೆಗೆ ಭವಿಷ್ಯದ ಬಂಡವಾಳವಾಗಿತ್ತು. ಆದರೆ ಹುಟ್ಟಿದ್ದು ಗಂಡು. ಉಪಯೋಗವಿಲ್ಲ. ಹೊರಗೆ ಸಾಗಿಸಿಬಿಟ್ಟಳು. ವೇಶ್ಯೆಯ ಮಕ್ಕಳಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅಲ್ಲಿದ್ದರೆ ಮಕ್ಕಳಿಗೆ ಪುಣ್ಯವಂತರು ಸಾಕಿಕೊಳ್ಳುತ್ತಾರೆ. ಒಳ್ಳೆ ಓದು ಬರಹ ಸ್ಥಾನಮಾನ ಸಿಗುತ್ತದೆ. ಒಳ್ಳೆಯ ಗೌರವಯುತ ವ್ಯಕ್ತಿಯಾಗಿ ಬೆಳೆಯುತ್ತಾನೆ. ನಿನ್ನ ಮಗ ಮದುವೆಯಾಗಿ ಹೆಂಡತಿ ಮಕ್ಕಳ ಜೊತೆ ಬಂಗಾರದಂತಹ ಜೀವನ ನಡೆಸುವುದು ಬೇಡವೇ? ಹೀಗೆ ಹಾಗೆ ಎಂದು ತಲೆ ತಿಂದು ಬಿಟ್ಟಳು. ಮಗುವಿದ್ದರೆ ನಾನು ಸಂಪಾದನೆಯ ಕಡೆ ಗಮನ ಕೊಡುವುದಿಲ್ಲ. ಜೊತೆಗೆ ತಾಯ್ತನದಿಂದ ನಿನ್ನ ಹಾವಭಾವ ಸ್ವಭಾವ ಎಲ್ಲವೂ ಬದಲಾಕ್ಕೈತಿ ಆನ್ನೋದು ಆಕಿ ಒಳಗಿನ ದುರುದ್ದೇಶ. ಇದು ಅವಳ ದಂಧೆಗೆ ಕುತ್ತಲ್ಲವೇ? ಕಂಡ ಹೆಣ್ಣುಮಕ್ಕಳನ್ನೆಲ್ಲಾ ಸೂಳೆಯನ್ನಾಗಿಸುವ ವ್ರತ ಹಿಡಿದೋಳು ಅವಳು. ಇವಳಿಂದ ಅವರು ಸೂಳೆಯರಾಕ್ಕಾರೋ? ಇವಳಲ್ಲಿಗೆ ಬರುವ ಗಂಡಸರಿಂದ ಆಕ್ಕಾರೋ.? ಇವಳು ಸಾಯಲಿ. ಇವಳ ಮನೆಗೆ ಬರುವ ಗಂಡಸರು ಹುಳಬಿದ್ದು ಸಾಯಲಿ. ಮನಸ್ಸು ಉರಿತಿತ್ತು.
ಆದ್ರ ನಾನು ಆಕಿನ ಬೈಯ್ಯುದೊರೊಳಗ ಏನು ಅರ್ಥ ಇಲ್ಲ. ಇಲ್ಲೆ ಹಂತ್ಯಾಕ ಗಬ್ಬೂರು ಅಂತ ಒಂದು ಸಣ್ಣ ಹಳ್ಳಿ ಐತಿ. ಆ ಹಳ್ಳಿಯವಳು ನಾನು. ನಮ್ಮವ್ವ ಕಣಿ ಹೇಳತಿದ್ಲಂತ. ನಾನು 7ನೇ ಇಯತ್ತೆ ಇದ್ದಾಗ ಅದೆನೋ ಜಡ್ಡು ಬಂದು ಸತ್ತು ಹೋದ್ಲು. ನಾನು ಅನಾಥಳಾಗಿ ಹುಬ್ಬಳ್ಳಿ ಪಾಲಾದೆ, ಪೋಲಿ ಪಟಿಂಗರ ಕೈಗೆ ಸಿಕ್ಕಿ ನಾಯಿಕುನ್ನಿಯಂತೆ ಇಟ್ಟಾಡುತಿರುವಾಗ ಅದು ಹೇಗೋ ಘರವಾಲಿ ಕಣ್ಣಿಗೆ ಬಿದ್ದೆ. ನಾನು ಮನುಷ್ಯಳು ಎಂಬ ಭಾವನೆ ಬರುವಂತೆ ಅವಳು ತಾಯಿಯಾಗಿ ಜೋಪಾನ ಮಾಡಿದ್ದಳು. ನನ್ನ ಹಳೆಯ ಹೆಸರು ಮಲ್ಲವ್ವ ತೆಗೆದು ನನ್ನ ರೂಪಕ್ಕೆ ಅನುಗುಣವಾಗಿ ರೂಪಾ ಎಂದು ನನ್ನ ಹೆಸರು ಬದಲಿಸಿದಳು. ತಳುಕು ಬಳುಕು ಕಲಿಸಿ ಹದಿನಾರು ವರ್ಷಕ್ಕೆ ನನ್ನನ್ನು ದಂಧೆಗೆ ಇಳಿಸಿದಳು. ಅದೆಷ್ಟೋ ತರಹದ ಗಂಡಸರು, ಹೆಚ್ಚಿನವರು ಸೀಳುನಾಯಿಗಳೆಂದೇ ಅನ್ನಿಸುತಿತ್ತು. ನನ್ನ ಎಳೆಯ ದೇಹಕ್ಕೆ ನೋವಾಗುತ್ತದೆ ಎನ್ನುವುದು ಸೈತ ಅವರಿಗೆ ತಿಳಿಯುತ್ತಿರಲಿಲ್ಲ. ಅಥವಾ ಬೇಕಂಥ ನೋಯಿಸುತಿದ್ದರೊ. ನಾನು ನೋವಿನಿಂದ ನರಳಿದರೆ ಅವರಿಗೆ ಖುಷಿಯೋ ಖುಷಿ. ಕೇಕೆ ಹಾಕಿ ನಗುತಿದ್ದರು. ಆಗೆಲ್ಲಾ ಒಬ್ಬೊಬ್ಬರನ್ನು ಕತ್ತರಿಸಿ ಹಾಕಬೇಕು ಎನ್ನಿಸುತಿತ್ತು.
ನನ್ನ ಮಗು ಮುದ್ದು, ಮೆತ್ತನ ಮೈಯ್ಯಿ! ಎಷ್ಟು ಗುಂಡುಗಿದ್ದ. ತನ್ನಪ್ಪನ ಹಂಗ ಸುಂದರವಾಗಿದ್ದ ಅಪ್ಪನದೇ ಅರಳುಗಣ್ಣು. ಆ ತರುಣ ಆಹಾ ಕಾಗೆಗಳ ಗುಂಪಿನಿಂದ ಹೊರಬಿದ್ದ ಹಂಸನಹಾಗಿದ್ದ. ಯಾಕ ಬಂದಿದ್ದನೋ ನಮ್ಮಂಥೋರ ಮನೆಗೆ. ರಾಜಾಸ್ಥಾನದಿಂದ ಬಂದಂಗ ಕಾಣಿಸತೈತಿ, 'ಒಳ್ಳೆಯ ಹೊಸ ಹುಡುಗಿ ಬೇಕಂತೆ. ಯಾವುದೋ ಎಳುಕು ಹೋಗು ಎಂದು ರತ್ನಮ್ಮ ನನಗೆ ಕಣ್ಣು ಹೊಡೆದು ಸನ್ನೆ ಮಾಡಿ ಕಳುಹಿಸಿದಳು. ಬನ್ನಿ ನನಗೂ ಇದೇ ಮೊದಲ ಸಲ ಎಂದು ಸೋಗು ಮಾಡಿ ಅವನನ್ನು ಕರೆದಿದ್ದೆ. ಅವನ ಸುಂದರ ರೂಪ, ಮೈ ಕಟ್ಟು ಸಮಾಗಮದಲ್ಲಿ ಅವನ ಅರೆ ತಿಳಿವಳಿಕೆ ಆತುರ ಇವುಗಳನ್ನು ಸಂಭಾಳಿಸುವ ಸಂಭ್ರಮದಲ್ಲಿ ಆ ದಿನ ನನಗೆ ಎಚ್ಚರವಹಿಸುವುದೇ ಮರೆತುಹೋಯಿತು. ಬೇಕೆಂದೆ ಮರೆತನೋ ನನಗೆ ತಿಳಿಯದು. ಆದರೂ ವಿಷಯ ಮುಚ್ಚಿಟ್ಟೆ. ಬಸಿರಾಗುವ ಸಹಜ ಹೆಣ್ಣಿನ ಬಯಕೆ ನನ್ನೊಳಗೆ ಹುದುಗಿದಂತೆ ಕಾಣುತ್ತದೆ. ಅನುಮಾನ ಬಂದ ರತ್ನಮ್ಮ ಎಗರಾಡಿದಳು. ತೆಗಿಸಿ ಬಿಡು ನಿನಗೆ ಮಕ್ಕಳಾದ್ರ ಬೇಡಿಕೆ ಕಡಿಮೆಯಾಕ್ಕೈತಿ ಎಂದು ರಂಪ ಮಾಡಿದ್ದಳು. ಹಟ ಹಿಡಿದು ಹೋರಾಡಿ ಅವಳನ್ನೆದುರಿಸಿ ಮಗನನ್ನ ಪಡೆದಿದ್ದೆ. ಬೈಯ್ಯುತಲೇ ಹೆರಿಗೆ ಖರ್ಚು ನೋಡಿಕೊಂಡ ಸೋನಮ್ ನನ್ನ ಮಗುವಿನ ಮುದ್ದಿನ ಮುಖ ನೋಡಿದ ಕೂಡಲೇ ಅದೇನಾಯಿತೋ? ಸ್ವಲ್ಪ ಮೃದುವಾದಳು. ಮೂರು ತಿಂಗಳವರೆಗೆ ನನ್ನ ತಂಟೆಗೆ ಬರಲಿಲ್ಲ. ಮಗುವಿಗೆ ಬೇಕಾಗಿದೆಲ್ಲ ತರಿಸಿಕೊಟ್ಟು ನಮ್ಮ ಆರೈಕೆ ಮಾಡಿದಳು. ಬಿಡುವಾದಾಗಲೆಲ್ಲಾ ಬಂದು ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಅದನ್ನೇ ನೋಡುತ್ತಾ ಮೈ ಮರೆಯುತಿದ್ದಳು. ಶಾಂತವಾಗಿ ನಗುತಿದ್ದಳು. ಪಾಪ ಅವಳು ಹೆಣ್ಣಲ್ಲವೇ? ಆದರೂ ಹಳೆ ಬುದ್ದಿ. ಮೂರು ತಿಂಗಳಾಗುತಿದ್ದಂತೆ ವರಾತ ಹಚ್ಚಿದಳು. ದಂಧೆಗೆ ಇಳಿ ಅಂತ. ನನಗೂ ಬೇರೆ ದಾರಿ ಗೊತ್ತಾಗಲಿಲ್ಲ. ಅಲ್ಲಾ ನಾನು ಮಾಡತಿರೋದು ಕೆಟ್ಟ ಕೆಲಸ, ಇದರಿಂದ ಸುಖವಿಲ್ಲ. ಆಗ ನಮ್ಮನ್ನ ಕೀಳಾಗಿ ನೋಡುತ್ತಾರೆ ಎನ್ನುವ ತಿಳುವಳಿಕೆ ಬಂದ ಮೇಲೂ ನಾನು ಯಾಕೆ ಬೇರೆ ಜೀವನೋಪಾಯ ನೋಡಿಕೊಳ್ಳಲಿಲ್ಲ? ಆದರೆ ನನಗೆ ಈ ಕೆಲಸ ಬಿಟ್ಟು ಬೇರೇನು ಗೊತ್ತಿತ್ತು. ವಿದ್ಯೆಯಿಲ್ಲ. ಕೂಲಿ ಕೆಲಸಕ್ಕೆ ಆಗ ನನ್ನ ಮೈ ಬಗ್ಗುತಿತ್ತೆ? ಜೊತೆಗೆ ಈ ವೃತಿಯ ಜೊತೆಗೆ ಸಹಜವಾಗಿ ನಿರ್ಲಕ್ಷ್ಯ, ನಿರ್ಲಿಪ್ತತೆಯೋ? ಅಸಹಾಯಕತೆಯೋ? ಹಾಗೆ ಮುಂದುವರೆದಿದ್ದಾಯಿತು ನೀರಿನಲ್ಲಿ ಮುಳುಗಿದವನಿಗೆ ಚಳಿಯೇನು, ಮಳೆಯೇನು?
ಈಗಿನ ಕಾಲದ ಹುಡುಗರು ತಾವು ಮದುವೆಯಾಗುವ ಹುಡುಗಿಯ ಹಿಂದಿನ ಅಫೇರ್‍ಗಳ ಬಗ್ಗೆ ಅವಳ ಪಾತಿವ್ರತ್ಯದ ಬಗ್ಗೆ ಅಷ್ಟೇ ಏನು ತಲೆ ಕೆಡಿಸಿಕೊಳ್ಳದೆ ಮುಂದೆ ತಮಗೆ ನಿಷ್ಠರಾಗಿ ಇದ್ದರೆ ಸಾಕು ಎನ್ನುವಂತಹವರು. ಇಂತಹ ಹುಡುಗರು ಮುಂದೆ ಬಂದು ನಮ್ಮ ಹುಡುಗಿಯರ ಕೈ ಹಿಡಿದು ಶುದ್ಧ ದಾಂಪತ್ಯ ಜೀವನ ನಡೆಸುವಂತಾದರೆ, ಆದರೆ..? ಅದೆಲ್ಲಾ ಈ ಜನ್ಮದಲ್ಲಿ ಸಾಧ್ಯವೇ? ನಮ್ಮ ಸಂಪಾದನೆಯಲ್ಲಿ ಅರ್ಧಭಾಗ ನುಂಗಿಹಾಕುವ ಈ ಘರವಾಲಿಗಳು, ತಲೆಹಿಡಕರು. ತಮ್ಮ ಸ್ವಾರ್ಥ ಕೀಳು ಕಾಮನೆಗಳಿಗಾಗಿ ಇಂತಹ ವ್ಯವಸ್ಥೆಯನ್ನು ಹುಟ್ಟುಹಾಕಿ ಬೆಳೆಸುವ, ಬೆಂಬಲಿಸುವ ಆ ರಾಜಕಾರಣಿಗಳು ಹಾಗೂ ಶ್ರೀಮಂತರು ಇರುವಾಗ ಇವೆಲ್ಲಾ ಬದಲಾಗುವುದಕ್ಕೆ ಬಿಟ್ಟಾರೆಯೇ? ಬಿಟ್ಟರೆ ನಮ್ಮ ದುಡಿಮೆಯನ್ನೇ ಆಧರಿಸುವ ಹೋಟೆಲ್, ಡ್ಯಾನ್ಸ್ ಬಾರ್, ಮದ್ಯ ತಯಾರಕರು, ಟೂರಿಸಂ ವ್ಯವಹಾರಗಳು ಕುದುರುವುದು ಹೇಗೆ? ಕಟ್ಟಿ ಹಾಕಿದಂತೆ ಎನಿಸಿತು.
ಇವತ್ತು ಕೂಡ ಘರವಾಲಿ ಡ್ಯೂಟಿ ಹಾಕಿದ್ದರಿಂದಲೆ ಇಲ್ಲಿಗೆ ಬಂದಿದ್ದೆ. ಬಸ್ ಸ್ಟಾಪ್ ಹತ್ತಿರ ಬಂದು ಕಾಯುತ್ತಿದ್ದೆ. ಈ ತುದಿಯಿಂದ ಆ ತುದಿಯವರೆಗೆ ಕಣ್ಣಾಡಿಸಿದರೂ ಘರವಾಲಿ ಹೇಳಿದ್ದ ಯಾವ ಹಳದಿ ಕಾರು ಕಾಣಲಿಲ್ಲ. ಆಸಾಮಿ ಬಂದು ಹೋದನೋ? ಅಥವಾ ಇನ್ನು ಬಂದೇ ಇಲ್ಲವೋ? ಬರದಿದ್ದರೆ ಚಲೋನ ಆಯಿತೆಂದು ನಿರಾಳವೆನಿಸಿತು. ಇವತ್ತಾದರೂ ಆ ಹಾಳು ಗಂಡಸರ ಸೊಂಟದ ಕೆಳಗೆ ನನ್ನ ಮೈ ನಲುಗುವುದು ತಪ್ಪುತ್ತದೆಯಲ್ಲ ಎಂದು ಖುಷಿ ನನ್ನ ಮನಸ್ಸಿನೊಳಗಡೆ ಅವರಿಸುತ್ತಿತ್ತು.
ಎಲ್ಲೋ ಒಂದಿಬ್ಬರು ಗಂಡಸರು ಬಸ್‍ಗಾಗಿ ಕಾಯುತ್ತಿದ್ದರು. ಸೆಲ್ ಫೋನ್ ಕಿರುಗುಟ್ಟಿತು. ಕಿವಿಗಿರಿಸಿದರೆ ಘರವಾಲಿ ರತ್ನಮ್ಮಳದೆ ದನಿ. ‘ಪಾರ್ಟಿ ಬರಲಿಕ್ಕೆ ಅರ್ಧ ಗಂಟೆ ತಡ ಆಕ್ಕೆತಂತ. ಎಲ್ಲಿದಿಯಾ? ಬಸ್ ಸ್ಟಾಪ್ ತಲುಪಿದರೆ ಅಲ್ಲೆ ಇರು' ಎಂದು ಹೇಳಿದಳು. ‘ಇನ್ನೆಲ್ಲಿ ಹೋಗಿತೀನಿ ಒಂದು ಗಂಟೆಯಿಂದ ಇಲ್ಲೆ ಸಾಯ್ತ ಇದ್ದೀನಿ' ಎಂದಿದ್ದೆ. `ಸುಳ್ಳು ಹೇಳಬೇಡ ನೀನು ಇಲ್ಲಿಂದ ಹೊರಟಿದ್ದೆ ಲೇಟು. ಸ್ವಲ್ಪ ಸಮಾಧಾನದಿಂದಿರು. ಮೂಡ್ ಕೆಡಿಸಿಕೊಬೇಡ. ಒಳ್ಳೆ ಪಾರ್ಟಿಯಂತ. ಆಫೀಸರ್ ಅಂತೆ ಟಿಪ್ಸ್ ಚೆನ್ನಾಗಿ ಗಿಟ್ಟುತೆ ಏನಾದ್ರೂ ಪ್ರಾಬ್ಲಮ್ ಆದ್ರೆ ಉಪಾಯವಾಗಿ ನಿಭಾಯ್ಸು. ನೀನು ಬಾಣಂತಿ ಅಂತ ಪಾರ್ಟಿಗೆ ಗೊತ್ತಾಗಬಾರದು. ಗೊತ್ತಾದರೆ ಅವನ ಮೂಡ್ ಆಫ್ ಆಕ್ಕೆತಿ. ಮಜಾ ಮಾಡು, ಓಕೆ ಸಿಯು ಡಿಯರ್' ಕಾಲ್ ಕಟ್ ಆಯಿತು. ಆಹಾ! ಎಲ್ಲಾ ಎಷ್ಟು ಸುಲಭ ಇವಳಿಗೆ. ಅನುಭವಿಸುವ ಕಷ್ಟ ಮರತೇ ಹೋಗಿರಬೇಕು ಎಂದು ನನಗೆ ಸಿಟ್ಟು ಬರತೊಡಗಿತು.
ಪಕ್ಕದಲ್ಲಿ ಮಗು ಅತ್ತಂತೆ ಆಯಿತು. ಬೆಚ್ಚಿ ತಿರುಗಿದೆ. ನೀನು ಕುಳಿತಿದ್ದೆ. ಮಡಿಲಲ್ಲಿ ಮಗು ಒಂದೇ ಸಮನೆ ಅಳುತ್ತಿದೆ. ನನ್ನೊಳಗಿನ ತಾಯ್ತನ ಅದು ಹಸಿವಿನಿಂದ ಅಳುತ್ತದೆ ಎಂದು ತಿಳಿಸಿತು. ಅಸಹನೆಯಿಂದ ನಿನ್ನ ಕಡೆಗೆ ತಿರುಗಿದರೆ ನಿನ್ನ ಮೊಗದಲ್ಲಿ ಅಸಹಾಯಕತೆ ನಿನ್ನ ಒಣಗಿದ ಕಸುವಿಲ್ಲದ ದೇಹ ನೋಡಿ ಮರುಕವಾಯಿತು. ಮಗು ಸುಸ್ತಾಗಿತ್ತು. ಬಿಟ್ಟು ಬಿಟ್ಟು ಕ್ಷೀಣವಾಗಿ ಅಳುತಿತ್ತು. ಈ ಕೈಯ್ಯಿಂದ ಆ ಕೈಗೆ ಬದಲಾಯಿಸುತ್ತಾ ನೀನು ಸುಧಾರಿಸುವ ಪ್ರಯತ್ನ ಮಾಡುತ್ತಿದಿ. ಅದೇಕೋ? ಹಾಲಾದ್ರೂ ಕುಡಿಸಬಾರದೇ? ಅದರ ಅಳು ಸಹಿಸಲಸಾಧ್ಯ ಎನಿಸಿದ್ದರಿಂದ ನಾನು ಕೇಳಿದೆ. ಹಾಳಾಗಲಿ ಆ ಗಿರಾಕಿಯಾದರೂ ಬಂದಿದ್ದರೆ ನಾನು ಜಾಗ ಖಾಲಿ ಮಾಡಬಹುದಿತ್ತು ಎಂದು ನನಗೊಮ್ಮೆ ಯೋಚನೆ ಬಂದಿತ್ತು. ನನ್ನ ಮಗುವೂ ಹೀಗೆ ಹಸಿವಿನಿಂದ ಅಳುತ್ತಿರಬಹುದೇ? ಇಷ್ಟು ಬೇಗ ಯಾರೂ ದತ್ತು ತೆಗೆದುಕೊಂಡಿರಲು ಸಾಧ್ಯವಿಲ್ಲ. ಅನಾಥಾಶ್ರಮದಲ್ಲಿ ನೋಡುವವರಿಲ್ಲದೆ ಹಾಲಿಲ್ಲದೆ ಹಸಿವಿನಿಂದ ನನ್ನ ಮಗು ಸತ್ತೆ ಹೋದರೆ? ನನ್ನ ಮಗುವಿನ ನೆನಪು ಕಾಡಿಸುತ್ತಿತ್ತು, ನಿನ್ನ ಮಗು ಬೇರೆ ಅಳುತ್ತಲೇ ಇತ್ತು. ಹಿಂಗಾಗಿ ನಿನ್ನ ಕೈಯಿಂದ ಮಗುವನ್ನು ಕಸಿದುಕೊಂಡು ಹಾಲು ಕುಡಿಸಬೇಕಾತು.
ತಾನು ಹೆತ್ತ ಮಗು ಅತ್ತರೆ ತಾಯಿಯ ಎದೆಯಲ್ಲಿ ಹಾಲು ಉಕ್ಕುತ್ತೆ ಎನ್ನುತ್ತಾರೆ. ಆದರೆ ಯಾರದೋ ಮಗು ಅತ್ತರೆ ತಾಯಿಯ ಎದೆಯಲ್ಲಿ ಹಾಲು ಉಕ್ಕುವುದೇಕೆ? ಹೇಗೆ? ಇದುವರೆಗೆ ನೂರಾರು ಗಂಡಸರು ಕಾಮಲಾಲಸೆಯಿಂದ ಕಚ್ಚಿ ಹಿಸುಕಿ ಹಿಂಡಿದ ಮೇಲೆ ಇಂದು ನನಗೆ ಸಂಬಂಧವಿಲ್ಲದ ಒಂದು ಅಪರಿಚಿತ ಮಗುವಿಗೆ ಜೀವಧಾರೆ ಮಾಡುತ್ತಿದ್ದೇನೆಯೇ? ಹಸಿದ ಮಗುವಿನ ಕರೆಗೆ ಕರಗಿ ಅಮೃತವನ್ನೇ ಉಕ್ಕಿ ಹರಿಸಿತಲ್ಲ ಈ ಮಮತೆಯ ಒಡಲು. ನೆನಸಿಕೊಂಡ್ರ ಕಣ್ಣೀರು ಬರತಾವು.
ಆಕೆ ತನ್ನ ದೀರ್ಘ ಕತೆಯನ್ನು ಹೇಳುತ್ತಿರಬೇಕಾದರೆ ನಾನು ಆಕೆಯತ್ತ ತಿರುಗಿ ಬೆಕ್ಕಸಬೆರಗಾಗಿ ನೋಡುತ್ತಿದ್ದೆ. ನನ್ನ ಕಣ್ಣುಗಳು ಕಣ್ಣೀರಾದವು. ‘ಆ ದ್ಯಾವರು ಇರೋದೇ ಸುಳ್ಳು ಅಂತ ತಿಳಿದಿದ್ದೆ. ಆದ್ರೆ ನನ್ನ ಮಗೀನ ಜೀವ ಉಳಿಸಿದ ತಾಯಿ ನೀನು ನನ್ನ ಪಾಲಿಗೆ ನೀನೆ ದೇವರು, ನೀನೇ ತಾಯಿ ಗುಡ್ಡದ ಯಲ್ಲಮ್ಮ! ಅಮ್ಮ ಆದಿಶಕ್ತಿ’ ಎಂದು ಕಣ್ಣೀರು ಹಾಕುತ್ತಾ ಕಾಲು ಮುಟ್ಟಿ ನಮಸ್ಕರಿಸಿಬಿಟ್ಟೆ. ಜೀವನದಲ್ಲಿ ಮೊದಲಬಾರಿಗೆ ಸಾರ್ಥಕ್ಯದ ಭಾವನೆ ಆಕೆಯಲ್ಲಿ ಮೂಡಿತು. ಆಸೆಯಿಂದ ಅವಳು ಮಗುವನ್ನು ನೋಡುತ್ತಿರುವುದನ್ನು ಗಮನಿಸಿ ಮಗುವನ್ನು ಅವಳ ಕೈಗೆ ವರ್ಗಾಯಿಸಿದೆ.
* * *
(ಮುಂದುವರೆಯುವುದು)