ಕೆಂಗುಲಾಬಿ (ಭಾಗ 10): ಹನುಮಂತ ಹಾಲಿಗೇರಿ

 
 
ಅವತ್ತು ಹಾಗೆ ಆತ್ಮೀಯಳಾದ ಅವಳು ಸ್ವಲ್ಪ ದಿನಗಳವರೆಗೆ ಆಶ್ರಯದಾತಳು ಆದಳು. ತನ್ನ ಕಥೆಯನ್ನೆಲ್ಲ ಹೇಳಿಯಾದ ಮೇಲೆ ನನ್ನ ಕಥೆಯನ್ನು ಕೇಳಿದ ಅವಳು, ನಾನು ಕೂಡ ದಂಧÉಗೆ ಹಳಬಳೇ ಎಂಬುದನ್ನು ಅರ್ಥ ಮಾಡಿಕೊಂಡಾದ ಮೇಲೆ ‘ನಮ್ಮ ರತ್ನಮ್ಮನ ದಂಧೆಮನೆಗೆ ನೀನು ಸೈತ ಬರುವುದಾದರೆ ಬಾ' ಎಂದು ಕರೆದಳು. ಮರುಕ್ಷಣ ‘ಬೇಡ ಬೇಡ ನನ್ನ ಮಗನಿಗಾದ ದುರ್ಗತಿಯೇ ನಿನ್ನ ಮಗಳಿಗೂ ಆಗಬಹುದು, ಇಲ್ಲವೇ ನಿನ್ನ ಮಗಳನ್ನು ಸ್ವಲ್ಪ ದೊಡ್ಡವಳಾದ ತಕ್ಷಣವೆ ದಂಧೆಗೆ ಇಳಿಸಿಬಹುದು. ಈ ಕೂಪದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡೋದಕ್ಕಿಂತ ಎಲ್ಲಿಯಾದರೂ ಬದುಕಿಕೋ' ಎಂದು ಕಣ್ಣೀರು ಒರೆಸಿಕೊಂಡಳು, ನನಗೊಂದು ಕ್ಷಣ ಅವಳು ಹೇಳುತ್ತಿರುವುದು ಹೌದೆನಿಸಿತು. ಆದರೆ ನಾನು ಸಿಕ್ಕಿರುವ ಆಸರೆಯ ಸಣ್ಣ ಎಳೆಯೊಂದನ್ನು ಬಿಟ್ಟು ಬದುಕುವಾದರು ಹೇಗೆ. ನಾನು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಬಿಟ್ಟಿದ್ದೆ. ಆ ಹೊತ್ತಿನಿಂದ ಅವಳನ್ನು ನೋಡುತ್ತಾ ದೂರದಿಂದ ಒಬ್ಬ ಗಿರಾಕಿ ನಿಂತಿದ್ದ. ನಂಜೊತೆ ಮಾತಾಡಿ ಸಾಕಾದ ಅವಳು ಆ ಕಡೆ ಹೊರಳಿದಾಗ ಇವಳ ಆಂವನ ಮಧ್ಯೆ ಸನ್ನೆಗಳು ನಡೆದು ಇವಳು ಅವನ ಹತ್ತಿರ ಎದ್ದು ಹೋದಳು. ಅವಳು ಹೋದ ಮೇಲೆ ನಾನು ಮತ್ತೆ ಏಕಾಂಗಿಯಾದೆ. ಮೊದಲು ಹತ್ತಿರದಲ್ಲಿದ್ದ ಖಾನಾವಳಿಗೆ ಹೋಗಿ ಒಂದು ರೈಸ್ ತಿಂದೆ. ಮುಂದೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗಲಿಲ್ಲ. ಅವಳು ಮತ್ತೆ ತನ್ನ ದಂಧೆ ಮುಗಿಸಿ ಮರಳಿ ಬರಬಹುದೆಂಬ ಕ್ಷೀಣ ಆಸೆಯೊಂದಿಗೆ ಅಲ್ಲೆ ಇದ್ದೆ. ಮಗು ಈಗ ಶಾಂತವಾಗಿತ್ತು. ಹೊಟ್ಟೆಗೊಂದಿಷ್ಟು ಬಿದ್ದಿದ್ದರ ಫಲವಾಗಿ ಅದರ ಕಣ್ಣಿಗೆ ಚೆನ್ನಾಗಿ ನಿದ್ದೆ ಬಂದಿತ್ತು. ಅಲ್ಲಿಯೆ ಉರುಳಿ ಮಲಗಿಬಿಟ್ಟೆ. ಯಾರೋ ನನ್ನ ಭುಜ ಹಿಡಿದು ಅಲುಗಾಡಿಸಿದಂತಾಗಿ ದಿಗ್ಗನೆ ಎದ್ದು ಕುಳಿತೆ. ರೂಪಕ್ಕ ನನ್ನ ಮುಂದೆ ಕುಳಿತುಕೊಂಡಿದ್ದಳು. ಮಗು ಪಕ್ಕದಲ್ಲಿಯೇ ಹರಿದಾಡಿಕೊಂಡು ಆಡುತ್ತಿತ್ತು. 
 
‘ಏನು ಇಲ್ಲೆ ಮಲಗಿದ್ದಿ. ಯಾಕೆ ಎಲ್ಲಿಗೂ ಹೋಗಲಿಲ್ಲೇನ?' ಎಂದು ಅವಳು ನನ್ನನ್ನು ಕೇಳಿದಳು. ನಾನು ಸುಮ್ಮಕ ಮುಖ ನೋಡುಕೋತ ಕುಳಿತುಕೊಂಡೆ. ಅವಳು ತನ್ನ ಜಂಪರನ ಉಬ್ಬಿನಿಂದ ಪರ್ಸು ತೆಗೆಯುತ್ತಾ ಈ ಗಿರಾಕಿಯಿಂದ ಇಸಕೊಂಡಿದ್ದ 200 ರೂಪಾಯಿಗಳನ್ನು ನನ್ನ ಕೈಯಲ್ಲಿಟ್ಟು ‘ಆತ ಟಿಪ್ಸ್ ಅಂತ ಕೊಟ್ಟಿದ್ದು ಇಷ್ಟೆ. ಇದನ್ನು ಇಟ್ಟುಕೊಂಡು ಎಲ್ಲಾದರೂ ಬದುಕಿಕೋ' ಎಂದು ನನ್ನ ತಲೆ ನೆವರಿಸಿದಳು. 'ನಂಗ ಟೈಮ್ ಆತು' ಎಂದು ಮಗುವನ್ನು ಎತ್ತಿಕೊಂಡು ಕೊನೆಯ ಬಾರಿ ಎಂಬಂತೆ ಲಲ್ಲೆಗರೆದು ಅಲ್ಲಿಂದ ಹೊರಟಳು. ಅವಳು ಸ್ವಲ್ಪ ದೂರ ಹೋಗಿರಲಿಲ್ಲ. `ನಾನು ಬರ್ತೆನಕ್ಕಾ' ಎಂದು ನಾನು ಅವಳನ್ನು ಹಿಂಬಾಲಿಸಿದೆ ರೂಪಕ್ಕ ಮತ್ತೇನು ಮಾತಾಡಲಿಲ್ಲ.
* * *
 
ಆಟೋದಿಂದ ಅತ್ಯಂತ ಜನಪ್ರದೇಶದಿಂದ ಕೂಡಿದ ಮಾರುಕಟ್ಟೆ ಪ್ರದೇಶದಲ್ಲಿ ನಾವಿಬ್ಬರು ಇಳಿದೆವು. ನಮ್ಮ ಪಾದ ಭೂಮಿಗೆ ತಾಕುತ್ತಿದ್ದಂತೆಯೆ ಅಲ್ಲಿನ ಮಾರುಕಟ್ಟೆಯ ಎಲ್ಲ ವಾತಾವರಣವೇ ಬದಲಾಯಿತು. ಅಲ್ಲಲ್ಲಿ ಕೈ ಚೀಲಗಳನ್ನು ಹಿಡಿದುಕೊಂಡು ತರಕಾರಿಯನ್ನು ಮನೆಗೆ ಸಂತೆಯನ್ನು ಖರೀದಿಸುವ ನಾಟಕವಾಡುತ್ತಿದ್ದ ಗಂಡಸರು ನಮ್ಮತ್ತಲೇ ತಲೆ ಎತ್ತಿ ನೋಡತೊಡಗಿದರು. ಅಲ್ಲಿಯೇ ಹತ್ತಿರದ ಬೈಕ್ ಸ್ಟಾಂಡುಗಳಲ್ಲಿ ಬೈಕುಗಳನ್ನು ತರಬಿಕೊಂಡು ಅವುಗಳ ಮೇಲೆ ಕುಂತ ಕೆಲವೊಂದು ಹೈಕಳುಗಳು ಪಾನ್ ತಿನ್ನುತ್ತಲೂ, ಸಿಗರೇಟು ಸೇದುತ್ತಲೋ ಅಥವಾ ಬೈಕಿನ ಕನ್ನಡಿಯಲ್ಲಿ ತಮ್ಮ ತಲೆಗೂದಲನ್ನು ಕೈ ಆಡಿಸುತ್ತಲೋ ನಮ್ಮತ್ತ ತಮ್ಮ ನೋಟವನ್ನು ಚೆಲ್ಲಿದ್ದರು. ರೂಪಕ್ಕಳಂತೆಯೇ ಡ್ರೆಸ್ ಮಾಡಿಕೊಂಡಿದ್ದ ಐದಾರು ಹೆಂಗಸರು ಅಲ್ಲಲ್ಲಿ ದಾರಿ ಬದಿಯಲ್ಲಿ ಸಿಕ್ಕು ನನ್ನ ಬಗ್ಗೆ ರೂಪಕ್ಕಳೊಂದಿಗೆ ಮಾತಿಗೆಳೆಯಲು ಹವಣಿಸಿದರು. ರೂಪಕ್ಕ ಅವರಿಗೆಲ್ಲ ಆಮೇಲೆ ಸಿಗುತ್ತೇನೆ ಎಂದು ಸನ್ನೆಯಲ್ಲಿಯೆ ಹೇಳುತ್ತಾ ದಾರಿ ಮಾಡಿಕೊಂಡು ಮುನ್ನಡೆದಿದ್ದಳು.
 
ಅದೆಲ್ಲಿಂದಲೋ ಕೈಯಲ್ಲಿ ಬೀಡಿ ಹಿಡಿದಿದ್ದ, ತಲೆಯಿಂದ ಭುಜದವರೆಗೆ ಹಿಪ್ಪಿ ಬಿಟ್ಟಿದ್ದ ಹುಡುಗನೊಬ್ಬ ರೂಪಕ್ಕಳೆದುರಿಗೆ ದುತ್ತನೆ ಎದುರಾದ. ರೂಪಕ್ಕ ಒಂದು ಕ್ಷಣ ಗಾಬರಿಯಾದರೂ ಅವನನ್ನು ಬದಿಗೆ ಸರಿಸಿ ಮುನ್ನಡೆಯಲು ನೋಡಿದಳು. ಆದರೆ  ಆತ ‘ರೂಪಿ ಯಾವ್ದು ಹೊಸ ಮಾಲು' ಎಂದು ಕಣ್ಣು ಹಾರಿಸಿದ. ರೂಪಕ್ಕ ‘ಅದೆಲ್ಲಾ ನಿನಗ್ಯಾಕ ದಾರಿ ಬಿಡು' ಎಂದು ಅವನನ್ನು ಕಡೆಗಣಿಸಿ ಮುನ್ನಡೆದು ಅವಸರಿಸಿದಳು. ಆದರೆ ಆತ ಅಡ್ಡಬಂದು ‘ರೂಪಿ ಯಾಕ ಎಲ್ರೂ ಹೋಗಿ ಅ ರತ್ನಮ್ಮಳ ಹೊಲಸ ಕೋಣ್ಯಾಗ ಹೋಗಿ ಸಾಯ್ತಿರಿ. ನೀ ಹೂಂ ಅಂದ್ರ ಒಲ್ಡ್ ಹುಬ್ಬಳ್ಯಾಗ ಒಂದು ಬಾಡಿಗೆ ಮನೆ ಮಾಡೂನು. ಸ್ವಂತ ದಂಧಾ ಮಾಡೂನು' ಎಂದು ಗಂಟು ಬಿದ್ದ. ಆದ್ರ ರೂಪಕ್ಕ ಆದಕ್ಯಾವುದಕ್ಕೂ ಜಗ್ಗದೆ ‘ನಿಂದು ಯಾವಾಗಲೂ ಇದ ಮಾತಾತು' ಎಂದು ಅವನನ್ನು ಬದಿಗೆ ಸರಿಸಿ ಮುನ್ನುಗ್ಗಿದಳು. ನಾನು ಅವನ ಪಕ್ಕಕ್ಕೆ ಹಾಯ್ದು ಹೋಗುವಾಗ ಆತ ಮೊಟು ಬೀಡಿಯನ್ನು ಬಾಯಲ್ಲಿ ಹಿಡಿದುಕೊಂಡು ನನ್ನನ್ನೆ ಆಸೆಗಣ್ಣಿನಿಂದ ನೋಡುತ್ತಿದ್ದ. ನಾನು ಹೆದರಿ ಅವಸರವಾಗಿ ನಡೆದು ರೂಪಕ್ಕನ ಹಿಂದಿಂದೆ ನಡೆಯತೊಡಗಿದೆ. ಅಷ್ಟರಲ್ಲಿ ಒಬ್ಬ ಗಿರಾಕಿ ನನ್ನ ಭುಜಕ್ಕೆ ತನ್ನ ಭುಜ ತಾಗಿಸಿ ವಿಚಿತ್ರ ಆನಂದದಲ್ಲಿ ನನ್ನನ್ನು ಮಿಕಿ ಮಿಕಿ ನೋಡುತ್ತಾ ನನ್ನ ಪ್ರತಿಕ್ರಿಯೆಗಾಗಿ ಕಾಯ್ದ. 
 
ಈಗಾಗಲೆ ರೂಪಕ್ಕ ಸಿಟ್ಟಿಗೆದ್ದಿದ್ದಳು ‘ಏ ಮೂಳಾ ಹಳೆ ಮೂಳಾ, ನಿನಗ ಅಕ್ಕತಂಗ್ಯಾರು ಅದಾರಿಲ್ಲೋ ಹೆಣ್ಣಮಕ್ಕಳ ಮೈ ಮುಟ್ಟೆತಿ' ಎಂದು ಅವನೊಂದಿಗೆ ಜಗಳಕ್ಕೆ ನಿಲ್ಲಲು ಆತ ಅವಸರವಾಗಿ ಮಾರುಕಟ್ಟೆಯಲ್ಲಿ ತನ್ನನ್ನು ಕಳೆದುಕೊಂಡ. ಈ ಘಟನೆಯನ್ನು ನೋಡಿದ ಸುತ್ತಮುತ್ತಲಿನ ಹತ್ತಾರು ಗಂಡಸರು ಇವರ ಸುದ್ದಿ ಬ್ಯಾಡಪಾ ಯಾಕ ಮರ್ಯಾದಿ ಕಳಕೋಬೇಕು ಎಂದು ನಮ್ಮಿಬ್ಬರ ಮೇಲಿನ ದೃಷ್ಟಿಯನ್ನು ಕಿತ್ತುಕೊಂಡು ಕಾಲ್ಕಿತ್ತರು. ‘ಹಲ್ಕಟ್ಟ ಬಾಡ್ಯಾಗಳು. ಅಂಜಿದ್ರ ಮೈಮ್ಯಾಲ ಬರತಾರ. ಹೆದರಿಸಿದರ ಮುಕಳ್ಯಾಗ ಬಾಲಾ ಇಟ್ಕೊಂಡು ನಾಯಿ ತರಾ ದೂರ ಓಡಿಹೋಕ್ಕಾರ' ಎಂದು ರೂಪಕ್ಕ ಗಂಡಸರ ಸ್ವಭಾವದ ಬಗ್ಗೆ ಸಿಡಿಮಿಡಿ ಗುಟ್ಟುತ್ತಿರುವುದು ಕೇಳಿಸಿತು. ಹಾಗೂ ಹೀಗೂ ದಾರಿ ಮಾಡ್ಕೊಂಡು ಸಂದಿಗೊಂದಿ ಬಳಸ್ಕೊಂಡು ಒಂದು ಮೂರು ಅಂತಸ್ತಿನ ಕಟ್ಟಡದ ಹತ್ತಿರ ಬಂದೆವು. ಅಕ್ಕಪಕ್ಕದ ಅಂಗಡಿಯವರು ರೂಪಕ್ಕಳನ್ನು ಗಮನಿಸಿದರೂ ರೂಪಕ್ಕ ಅವರಿಗೆ ಕ್ಯಾರೆ ಏನ್ನಲ್ಲಿಲ್ಲ. 
 
ಕಟ್ಟಡದ ಮುಂದೆ ಕೈ ಕಟ್ಟಿಕೊಂಡ ಯುವಕನೊಬ್ಬ ನಿಂತಿದ್ದ. ನಾವಿಬ್ಬರೂ ಬರುತ್ತಿದ್ದಂತೆ ಆ ಕಟ್ಟಡದ ಬಾಗಿಲನ್ನು ಹೋಳು ಮಾಡಿ ನಮಗೆ ಒಳಗೆ ಹೋಗಲು ಅನು ಮಾಡಿಕೊಟ್ಟ. ಎದುರಿಗೆ ಮೂರಾಳೆತ್ತರದವರೆಗೂ ಮೆಟ್ಟಿಲುಗಳು ಆ ಮೆಟ್ಟಿಲುಗಳನ್ನು ಹತ್ತಿ ಹೊಗಲು ಅಲ್ಲೊಂದು ಇಲ್ಲೊಂದು ಹಗ್ಗವನ್ನು ಇಳಿ ಬಿಟ್ಟಿದ್ದರು. ರೂಪಕ್ಕ ನನ್ನ ಕೈಲಿದ್ದ ಹಳೆಯ ಚೀಲವೊಂದನ್ನು ತೆಗೆದುಕೊಂಡು ಅವಸರವಾಗಿ ಮೇಲೇರತೊಡಗಿದಳು. ನಾನು ಮಗುವನ್ನು ಹೆಗಲಿಗೆ ಹಾಕಿಕೊಂಡು ಎದುಸಿರು ಬೀಡುತ್ತಾ ಮೇಲೆರತೊಡಗಿದೆ. ಕೊನೆಯ ಮೆಟ್ಟಿಲಲ್ಲಿ ದೊಡ್ಡ ಕನ್ನಡಿಯೊಂದನ್ನು ತೂಗು ಹಾಕಿದ್ದರು. ಆ ಕನ್ನಡಿಯ ಪಕ್ಕದ ಸಭಾಂಗಣದಲ್ಲಿ ಕುಳಿತಿದ್ದ ಸುಮಾರು 45 ವರ್ಷದ ಮಧ್ಯ ವಯಸ್ಕನೊಬ್ಬ ನಾವು ಹತ್ತಿ ಬರುವುದನ್ನು ನೋಡುತ್ತಿದ್ದ. ಮೇಲೆ ಹತ್ತಿ ಬರುವ ಯಾರಾದರೂ ಆ ಕನ್ನಡಿ ಮೂಲಕ ಕಾಣಿಸುತ್ತಿದ್ದುದರಿಂದ ಬರುತ್ತಿರುವವವರು ಪರಿಚಿತರೋ ಅಪರಿಚಿತರೋ ಎಂಬುದು ಆ ಮುದುಕನ ಸ್ಥಾನದಲ್ಲಿ ಕುಳಿತವರಿಗೆ ಸರಾಗವಾಗಿ ಗೊತ್ತಾಗುತ್ತಿತ್ತು. ನಾನು ಮೇಲೆ ಬರುವುದರೊಳಗೆ ರೂಪಕ್ಕ ಆ ಮುದುಕನೊಂದಿಗೆ ಏನನ್ನೋ ಮಾತಾಡುತ್ತಿದ್ದಳು. ಆ ಮೇಲೆ ನನಗೆ ಕೂಡಲು ಅಲ್ಲಿನ ಹಳೆಯ ಕುರ್ಚಿಯೊಂದನ್ನು ತೋರಿಸಿ ಒಳಗೆ ರತ್ನಮ್ಮಳ ಹತ್ತಿರ ಹೋಗಿ ಬರತೇನೆ ಸ್ವಲ್ಪ ಕುಂತಿರು ಎಂದು ಹೇಳಿ ಒಳ ಹೋದಳು. ನಾನು ಆಕೆ ತೋರಿಸಿದ ಕುರ್ಚಿಯ ಮೇಲೆ ಕುಳಿತುಕೊಂಡೆ.
 
ಅಲ್ಲಿ ಕುಳಿತಾದ ಮೇಲೆ ನನಗೆ ಎದುರಿನ ಕೊಠಡಿಗಳ ದರ್ಶನವಾದುದು. ಆ ಕೊಠಡಿಗಳ ಕಿಂಡಿಯಿಂದ ಕೆಲವೊಂದು ಹುಡುಗಿಯರು, ಹೆಂಗಸರು ನನ್ನನ್ನು ಗಮನಿಸತ್ತಿದ್ದರು. ನನ್ನ ಕೈಲಿದ್ದ ಮಗುವನ್ನು ಆಸೆಯಿಂದ ಅಕ್ಕರೆಯಿಂದ ನೋಡುತ್ತಾ ಕಣ್ಣಿನಲ್ಲಿಯೆ ಅದರೊಂದಿಗೆ ಆಟಕ್ಕೆ ಇಳಿದಿದ್ದರು. ಕೆಲವೊಂದು ರೂಮುಗಳ ಕದವಿಕ್ಕಿಕೊಂಡಿದ್ದು ಅವುಗಳ ಆಳದಿಂದ ಹೆಂಗಸರ ನರಳುವಿಕೆ ಗಂಡಸರ ಕೇಕೆಗಳು, ಗದರುವಿಕೆಗಳು, ಎಚ್ಚರಿಕೆ ಮುಂತಾದವುಗಳು ಆಗಾಗ ಕೇಳಿ ಇಡಿ ಕಟ್ಟಡವನ್ನೆ ಆವರಿಸುತ್ತಿದ್ದವು. ಈ ಶಬ್ದಗಳಿಂದ ನಾನು ಆಗಾಗ ದುಗುಡಗೊಳ್ಳುತ್ತಿದ್ದೆನಾದರೂ ಹುಚ್ಚು ದೈರ್ಯದಿಂದ ಸುಮ್ಮನೆ ಕುಳಿತಿದ್ದೆ.
ಅಷ್ಟರಲ್ಲಿ ಒಬ್ಬ ಗಿರಾಕಿ ಬಂದನೆಂದು ಎಲ್ಲ ಹುಡುಗಿಯರು ರೂಮಿನೊಳಕ್ಕೆ ತಮ್ಮನ್ನು ಬಚ್ಚಿಟ್ಟುಕೊಂಡರು. ನಾನು ದಂಗಾಗಿ ಹಂಗೆ ಗಮನಿಸುತ್ತಿದ್ದೆ. ಗಿರಾಕಿ ಈ ರತ್ನಮ್ಮನ ಹತ್ತಿರ ಇದೇ ಮೊದಲ ಸಲ ಬಂದವನಂತೆ ಅತ್ತ ಇತ್ತ ನೋಡುತ್ತಲೇ ನೇರವಾಗಿ ಒಳ ಹೋಗಲು ಹವಣಿಸಿದ. ಆದರೆ ಕುರ್ಚಿಯ ಮೇಲೆ ಕುಳಿತವ ಅವನನ್ನು ಒಳ ಹೋಗಲು ಬಿಡದೆ ‘ಏನು ಬೇಕಾಗಿತ್ತು' ಎಂದು ಪ್ರಶ್ನಿಸಿದ. ಗಿರಾಕಿ ನನಗ ಇಲ್ಲಿ ‘ಕಂಪೆನಿ ಬೇಕಾಗಿತ್ತು' ಎಂದು ತಬ್ಬಿಬ್ಬುಗೊಂಡು ಉತ್ತರಿಸಿದ. 
 
‘ಯಾವ ಕಂಪನಿ ಬೇಕಾಗಿತ್ತರಿ' ಎಂದು ವ್ಯಂಗ್ಯದಿಂದಲೆ ಪ್ರಶ್ನಿಸಿದ ಮಧ್ಯ ವಯಸ್ಕ.
‘ಹೆ ಹಂಗಲ್ಲರಿ ಹುಡುಗ್ಯಾರ ಕಂಪೆನಿ ಬೇಕಿತ್ತರಿ.'
'ಹಂಗ ಬಾರಪಾ ದಾರಿಗೆ ನಾಚಕೋತಿ ಯಾಕ. ಸರಿ ಎಷ್ಟೋತನಾ ಬೇಕಾಗಿತ್ತು'
‘ಹೇ ಅರ್ಧ ತಾಸಿಗೆ ಸಾಕ್ರಿ.'
‘ಹಂಗಾರ ಒಳಗ ಹೋಗಿ ಹುಡುಗ್ಯಾರನ್ನು ನೋಡ್ರಿ'
‘ಏ ರಾಮು ಇವರಿಗೆ ಹುಡುಗ್ಯಾರನ್ನು ತೋರಿಸು'
ವಠಾರದ ಬಾಗಿಲು ತೆರೆದು ಒಬ್ಬ ವ್ಯಕ್ತಿ ಹೊರ ಬಂದು ಗಿರಾಕಿಯನ್ನೇ ಕೆಕ್ಕರಿಸಿ ನೋಡುತ್ತಾ 'ತೆಗೀರಿ 20 ರೂಪಾಯಿ' ಎಂದ.
‘ಯಾಕ' ಅಂತು ಗಿರಾಕಿ.
 
‘ಇಲ್ಲಿ ಹುಡುಗ್ಯಾರ ಮುಖ ನೋಡಬೇಕಂದ್ರೂ ರೊಕ್ಕ ಬಿಚ್ಚಬೇಕು. ಯಾಕಂದ್ರ ನೋಡಿದಾದ ಮ್ಯಾಲ ಹುಡುಗ್ಯಾರ ಸರಿ ಬರಲಿಲ್ಲ ಅಂತ ನೀನು ಹೊಳ್ಳಿ ಹೋದ್ರ ನಾನೇನು ಇಲ್ಲಿ ಉಪ್ಪು ನೆಕ್ಕ ಬೇಕೇನು ಕೊಡು ಮೊದಲು ರೊಕ್ಕ' ಎಂದು ಬಂದ ಗಿರಾಕಿಯನ್ನು ದಬಾಯಿಸಿದಾಗ ನಿರ್ವಾಹವಿಲ್ಲದೆ ಗಿರಾಕಿ ತನ್ನ ಜೇಬಿನಿಂದ ಹತ್ತರ ಎರಡು ನೋಟುಗಳನ್ನು ತೆಗೆದು ರಾಮುವಿನ ಕೈಯಲ್ಲಿಟ್ಟ. ರಾಮು ಅವನ್ನು ತನ್ನ ಜೇಬಿನೊಳಕ್ಕೆ ತುರುಕಿ ಕೊಳ್ಳುತ್ತಾ ‘ಬರ್ರೇ, ಗಿರಾಕಿ ಬಂದೈತಿ ಹೊರಗ ಬರ್ರಿ' ಎಂದು ವಠಾರದೊಳಕ್ಕೆ ಹೋಗಿ ಮುಚ್ಚಿದ ರೂಮಿನ ಬಾಗಿಲುಗಳ ಮೇಲೆ ಬೆರಳಿನಿಂದ ಬಾರಿಸಿದ.
ತಲೆ ಹಿಕ್ಕುತ್ತಲೋ, ಪೌಡರ್ ಹಚ್ಚಿಕೊಳ್ಳುತ್ತಲೋ ಜಂಪರ್‍ಗಳ ಬಟನ್ ಹಾಕಿಕೊಳ್ಳುತ್ತಲೋ ಚೂಡಿ, ಮಿಡಿ ಮತ್ತು ಮಿಂಚುಳ್ಳ ಸೀರೆಯಲ್ಲಿದ್ದ ಹುಡುಗಿಯರು ಹೆಂಗಸರು ಮುಖದ ಮೇಲೆ ಕೃತಕ ನಗು ತಂದುಕೊಂಡು ಬಾಗಿಲು ತೆರೆದು ಹೊರಬಂದು ಗಿರಾಕಿಯನ್ನು ದಿಟ್ಟಿಸಿದ. ಕಣ್ಣಳತೆಯಲ್ಲಿಯೆ ಅವರೆಲ್ಲರ ಸೌಂದರ್ಯ ಅಳೆದ ಗಿರಾಕಿ ಮಿಡಿ ತೊಟ್ಟ ನೀಳಕಾಯದ ಹುಡುಗಿಯನ್ನು ನೋಡಿ ‘ಇಕೆ ಇರಲಿ’ ಎಂದ. ಅವಳು ಉಳಿದವರು ಉದಾಸೀನದಿಂದ ಮತ್ತೆ ರೂಮಿನೊಳಕ್ಕೆ ಹೋಗಿ ಬಾಗಿಲಿಕ್ಕಿಕೊಂಡರು. ರಾಮು ಮತ್ತೆ ಗಿರಾಕಿ ಹತ್ತಿರ ಹೋಗಿ 'ತೆಗೆರಿ ಇಪ್ಪತ್ತು ರೂ' ಎಂದಾಗ ಗಿರಾಕಿ ಮತ್ತೆ ತಬ್ಬಿಬ್ಬು. 'ಮುಖ ಏನು ನೋಡ್ತಿ. ಕಾಂಡೋಮ್ ಕೊಡ್ತಿನಿ ಕೊಡು ರೊಕ್ಕ' ಎಂದಾಗ ಗಿರಾಕಿ ರೂ. 20 ಕೊಡದೆ ವಿಧಿಯಿರಲಿಲ್ಲ. ಸರಕಾರಿ ದವಾಖಾನೆಗಳಲ್ಲಿ ಸಿಗುವ ಎರಡು ಕಾಂಡೋಮ್‍ಗಳನ್ನು ತುಗೊಂಡು ಒಂದು ರೂಮಿನೊಳಕ್ಕೆ ಕರೆದುಕೊಂಡು ಹೋದ. ಆ ರೂಮಿನಲ್ಲಿ ಸ್ವಲ್ಪ ಹೊತ್ತು ಲೈಟು ಉರಿದು ಮತ್ತೆ ಆರಿದ್ದು ಕಂಡು ಬಂತು. ಇದೆಲ್ಲವನ್ನು ನನ್ನ ಕಣ್ಣೆದುರೆ ನಡೆದದ್ದನ್ನು ನೋಡಿದ ನನಗೆ ನನ್ನ ಕೆಲಸವೆನೆಂಬುದನ್ನು ಸ್ಪಷ್ಟವಾಗಿ ಅರ್ಥವಾಗತೊಡಗಿತು.
 
ಒಳಗೆ ಹೋಗಿದ್ದ ರೂಪಕ್ಕ ನಗುಮೊಗದಿಂದಲೆ ನನ್ನ ಹತ್ತಿರ ಬಂದು ‘ನಿನ್ನ ವಿಷಯ ಎಲ್ಲ ರತ್ನಕ್ಕಗ ಹೇಳೆನಿ. ರತ್ನಕ್ಕ ಏನು ಕೇಳಿದರೂ ಹ್ಞೂನಕ್ಕ ಅನ್ನೋದಷ್ಟ ನಿನ್ನ ಕೆಲಸ' ಎಂದಳು. ಮತ್ತೆ ಸುಮ್ಮನಿರಲಿಕ್ಕಾಗದೆ ಚಡಪಡಿಸುತ್ತಲೇ ಏನನ್ನೋ ಧೇನಿಸಿದಳು. ಆಮೇಲೆ ಅಲ್ಲೆ ಬೆಂಚಿನ ಮೇಲೆ ಕೂಡಿಸಿಕೊಂಡು ಈ ದಂದೆ ಮನೆಗಳ ಕುರಿತು ಮತ್ತು ಘರವಾಲಿ ರತ್ನಮ್ಮಳ ಕುರಿತು ತನಗೆ ಗೊತ್ತಿದ್ದನ್ನು ಸಂಕ್ಷಿಪ್ತತೆವಾಗಿ ನನಗೆ ಪರಿಚಯಿಸತೊಡಗಿದಳು. 
 
‘ಈ ದಂದೆ ಮನೆಗಳ ಘರವಾಲಿ ಎಂದರೆ ನಗು, ಸಿಟ್ಟು, ಕ್ರೂರತೆ, ಛಲ, ತಂತ್ರಗಾರ್ತಿ, ಉಪಾಯಗಾರ್ತಿ ಹೀಗೆ ನವರಸಗಳನ್ನೇ ತನ್ನ ಬಂಡವಾಳಿಗಳು. ಪಾಪ, ತನ್ನದೆನೂ ತಪ್ಪಿಲ್ಲದ ಆಕೆಯೂ ಸಹ ಪರಿಸ್ಥಿತಿ ಕೂಸೆ ಆಗಿರತಾಳೆ. ಆತಂಕ, ದುಗುಡ, ಭಯಗಳು ಅವಳನ್ನು ಸದಾ ಕಾಡತಿರತವೆ. ಆಕೆ ಇಂತಹ ಪರಿಸ್ಥಿತಿಗಳಿಂದ ಪಾರಾಗಲು ತನ್ನದ್ದೆ ಆದ ಒಂದು ವ್ಯೂಹ ಮಾಡಿಕೊಂಡಿರುತ್ತಾಳೆ. ಮೊದ ಮೊದಲು ಅವಳ ರಕ್ಷಣೆಗೆಂದು ಇದ್ದ ಈ ವ್ಯೂಹ ಬರಬರುತ್ತಾ ಬ್ಲಾಕ್‍ಮೇಲ್ ಮಾಡುವ ಒಂದು ಚಕ್ರವ್ಯೂಹವಾಗಿ ಮಾರ್ಪಾಡಾಗುತ್ತಾ ಬೆಳೆಯುತ್ತದೆ. ಬ್ಲಾಕ್‍ಮೇಲ್, ಕಾನೂನುಬಾಹಿರ ಮತ್ತು ಕಾನೂನುರಿತ್ಯಾ ಎಲ್ಲಾ ಕಟ್ಟು ಕಟ್ಟಳೆಗಳನ್ನು ನೋಟಿನ ಕಟ್ಟುಗಳಿಂದಲೆ ಲೆಕ್ಕ ಹಾಕುತ್ತಾ, ನಮ್ಮನ್ನು ಸಾಕುವ ಆ ಘರವಾಲಿಯನ್ನು ಪೀಡಿಸುವ ಇನ್ನೊಂದು ಮುಖವೇ ಪೊಲೀಸ್ ಸ್ಟೇಷನ್ನಗಳು. ನಮ್ಮ ಮನೆ ಯಾವ ಪೊಲೀಸ್ ಠಾಣಾ ವ್ಯಾಪ್ತಿಯಳಗ ಬರುತ್ತೆಯೋ ಆ ಸ್ಟೇಷನ್ನಿನ ಪೊಲೀಸ್ ಪೇದೆಗಳಿಂದ ಹಿಡಿದು, ದೊಡ್ಡ ಸಾಹೆಬ್ರವರೆಗೆ ನಾವು ಮೈ ಮಾರಿಕೊಂಡ ಹಣದಲ್ಲಿ ಪಾಲು ಸಲ್ಲುತ್ತಿರುತ್ತದೆ.
 
ನಮ್ಮ ಈ ಮನೆಯ ಅಮ್ಮ ಪ್ರತಿ ತಿಂಗಳು ಸ್ಟೇಷನ್ನಿನವರು ಗೊತ್ತು ಮಾಡಿದ  'ಮಾಮೂಲಿ ಕಟ್ಟು' ತಲುಪಿಸುತ್ತಲೆ ಇರಬೇಕು. ವಿಶೇಷ ಅಧಿಕಾರಿಗಳು ಬಂದಾಗ ಅಥವಾ ಠಾಣೆಯ ಅಧಿಕಾರಿಗಳು, ಕಾನ್ಸ್‍ಟೇಬಲ್‍ಗಳಿಗೆ ತೆವಲುಗಳು ಮೈದುಂಬಿದಾಗ ಈ ಗೃಹದ ಹೆಂಗಸರ ದೇಹಗಳು, ಹುಳಿ ಹೆಂಡಗಳು, ಕುರಿ ಕೋಳಿಯೂಟಗಳು ಪುಕ್ಕಟೆ ಬಳುವಳಿಯಾಗಿ ನೀಡಬೇಕು. ಇವರಷ್ಟೆ ಅಲ್ಲದೆ ಈ ಗೃಹಕ್ಕೆ ಮಾಲುಗಳನ್ನು ತಂದೊದಗಿಸುವ ಬ್ರೋಕರ್‍ಗಳಿಗೆ, ಪಿಂಪ್‍ಗಳಿಗೆ, ಸ್ಥಳೀಯ ಪುಡಾರಿಗಳಿಗೆ ಸದಾ ಲಾಭದ ಒಂದಷ್ಟು ಪರ್ಸಂಟೇಜನ್ನು ಕೊಡುತ್ತಲೆ ಇರಬೇಕು.
 
ಇನ್ನು ಆಂತರಿಕ ಆಡಳಿತವೂ ಅಷ್ಟೇ ಸಂದಿಗ್ಧವಾದುದು. ಹುಡುಗಿಯರಿಗೆ ಕಾಲಕಾಲಕ್ಕೆ ಊಟ, ಅಲಂಕಾರ, ಬಟ್ಟೆ, ಆರೋಗ್ಯ ಮಕ್ಕಳಿದ್ದಲ್ಲಿ ಅವರ ಮಕ್ಕಳ ವ್ಯವಸ್ಥೆ, ಕೆಲವರಿಗೆ ಕುಡಿತ, ಡ್ರಗ್ಸ್ ಹೀಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಸ್ಪರ್ಧಾತ್ಮಕವಾದ ನವೀನವಾದ ಈ ವೃತ್ತಿಯಲ್ಲಿ ಸರಕುಗಳನ್ನು ಗಿಲೀಟು ಮಾಡಿ ಇಟ್ಟುಕೊಳ್ಳಬೇಕಾದ ಜವಾಬ್ದಾರಿ ಮಾಲಿಕರನ್ನು ಕಾಡುತ್ತಿರುತ್ತದೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಇವಳು 'ಆಶ್ರಯದಾತೆಯಾಗಿ' ಫೋಸ್ ಕೋಡುತ್ತಿರುತ್ತಾಳೆ. ಗಿರಾಕಿಗಳು ಇವಳ ಮಾಲುಗಳಿಗೆ ತೆತ್ತ ನೋಟುಗಳನ್ನು ಎದೆಯ ಸಂದಿಗೆ ತುರುಕಿಸುವ ಈ ಅಮ್ಮ ಎಲ್ಲವನ್ನು ಮರೆತು ಒಂದರೆಕ್ಷಣ ಆ ಧನಸ್ಪರ್ಶ ಸುಖ ಅನುಭವಿಸುತ್ತಾಳಷ್ಟೆ. 
 
ಹದಿಮೂರರ ಎಳೆಯ ಬಾಲೆಯರಿಂದ ಹಿಡಿದು ವರ್ಷದ ಮಕ್ಕಳಿಂದ ನಲವತ್ತು  ವರ್ಷದವೆರೆಗಿನ ಹತ್ತಾರು ಹೆಣ್ಣು ಮಕ್ಕಳೂ ಎಲ್ಲೆಲ್ಲಿಂದಲೋ ಬಂದವರು. ಯಾವುದೋ ಭಾಷೆ, ಸಂಸೃತಿ, ಹಿನ್ನೆಲೆಯಿಂದ ಬಂದರೂ ಇಲ್ಲಿ ಒಂದಾಗಿ ಏಕತೆ ಸಾಧಿಸುವುದು ನಮ್ಮಗಳ ಅನಿವಾರ್ಯತೆ. ಈ ಸಮುದಾಯದ ಮನೆಯಲ್ಲಿ ಹಂಚಿ ತಿನ್ನಬೇಕು. ಮೈ ಮುರಿಯುವಷ್ಟು ದುಡಿಯಬೇಕು, ಸಮಾನವಾಗಿ ಜವಾಬ್ದಾರಿ ಹಂಚಿಕೊಳ್ಳಬೇಕು. ಇಷ್ಟೇ ನಮ್ಮ ಕೆಲಸ. ಇಂತಹ ವೇಶ್ಯಾಗೃಹಗಳು ಪೋಲೀಸ್ ಕೃಪಾಕಟಾಕ್ಷದಿಂಲೇ ನಡೆಯುತ್ತವೆ. ಈ ಕೃಪೆ ಗಳಿಸಲು ಮನೆ ನಡೆಸುವವಳು ಪ್ರತಿ ತಿಂಗಳು ತಪ್ಪದೆ ತಪ್ಪು ಕಾಣಿಕೆ ಸಲ್ಲಿಸಬೇಕು. ಹೊಸ ಇನ್ಸಪೆಕ್ಟರ್ ಟ್ರಾನ್ಸಪರ್ ಆಗಿ ಬಂದಾಗ ಮಾಮೂಲಿ ಹಿಂದಿನದಕ್ಕೆ ಹೋಲಿಸಿ ಹೆಚ್ಚಿನ ರೇಟನ್ನು ಘರವಾಲಿಗಳೊಂದಿಗೆ ನಿರ್ಧಾರ ಮಾಡಿಕೊಳ್ಳುತ್ತಾನೆ. ಒಂದು ದಂಧೆ ಮನೆಯಿಂದ ಪ್ರತಿ ತಿಂಗಳು ಹತ್ತಾರು ಸಾವಿರ ರೂಪೈ ಪೊಲೀಸ್ ಠಾಣೆ ತಲುಪುತ್ತದೆ. ಕೆಲವೊಮ್ಮೆ ಇಷ್ಟೆಲ್ಲಾ ಒಪ್ಪಂದಗಳು ಏರುಪೇರಾಗಿ ಅಥವಾ ಹೊಸದಾಗಿ ಬಂದ ಅಧಿಕಾರಿ ಹೊಸದರಲ್ಲಿ ದರ್ಪ ತೋರಿಸಿ ನಿಜವಾಗಿಯೂ ಬಂಧಿಸಿದಾಗ ಘರ್‍ವಾಲಿ ದಂಡ ತೆರುತ್ತಾಳೆ ಅಥವಾ ತನ್ನ ಪರಿಚಯದ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಈ ಹೊಸ ಅಧಿಕಾರಿಯನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾಳೆ.
 
ಇನ್ನೂ ಬಗ್ಗದಿದ್ದಾಗ ಪುಕ್ಕಟೆ ಗುಂಡು, ಹೆಣ್ಣು   ಒದಗಿಸಿಯೂ ನೋಡುತ್ತಾಳೆ. ಆಗ ಎಂಥ ಸ್ಟ್ರಿಕ್ಟ ಪೊಲೀಸನಾದರೂ ಸೋತು ಬಿಡುತ್ತಾನೆ. ಎಷ್ಟೇ ಆದರೂ ಗಂಡಸು ಜಾತಿಯಲ್ಲವೇ?’ ಹೀಗೆ ದಂದೆ ಮನೆ, ಘರವಾಲಿ, ಪೊಲೀಸರ ಕಿರಿಕಿರಿಗಳ ಸಂಬಂಧಪಟ್ಟಂತೆ ಎಲ್ಲ ಮಾಹಿತಿ ನೀಡಿ ನನ್ನನ್ನು ಮಾನಸಿಕವಾಗಿ ತಯಾರುಗೊಳಿಸಿದ ಮೇಲೆಯೆ ರತ್ನಕ್ಕಳ ರೂಮಿಗೆ ಕರೆದುಕೊಂಡು ಹೋದಳು. ವಠಾರದ ಎದುರಿಗೆ ಇರೋದರಲ್ಲಿಯೆ ಸ್ವಲ್ಪ ಚಂದವಿದ್ದ ರೂಮು ರತ್ನಮ್ಮಳದಾಗಿತ್ತು. ನಾನು ಅಂಜುತ್ತಲೆ ರೂಮಿನೊಳಕ್ಕೆ ಕಾಲಿಟ್ಟೆ. ಕೆಂಪಾದ ತಾಂಬೂಲ ತುಂಬಿಕೊಂಡಿದ್ದ 45 ವರ್ಷದ ಕೋಲು ಮುಖದ, ಮೈ, ಮುಖಕ್ಕೆ ಸ್ವಲ್ಪ ಅತಿ ಎನಿಸುವಂತೆ ಅಲಂಕಾರ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ಅಲ್ಲಿ ಪಲ್ಲಂಗದ ಮೇಲಿನ ದಿಂಬಿಗೊರಗಿ ಕುಳಿತಿದ್ದಳು. ನನ್ನ ಬಗಲಲ್ಲಿ ಮಗುವನ್ನು ನೋಡಿದ ಕೂಡಲೆ ಮುಖ ಕೆಕ್ಕರಿಸಿ ಅಲ್ಲಿಯೆ ಇದ್ದ ತಾಟಿನಲ್ಲಿ ಬಾಯಲ್ಲಿನ ಕೆಂಪು ರೊಚ್ಚು ಉಗುಳಿದಳು. 'ಏ ರೂಪಿ ಸಣ್ಣ ಮಕ್ಕಳಿಗೆಲ್ಲ ಸೇರಿಸಿಕೊಳ್ಳಾಕ ಇದೇನೂ ಧರ್ಮಶಾಲಿ ಅಂತ ತಿಳಕೊಂಡಿ ಏನು ಹೊರಗ ಕರಕೊಂಡು ಹೋಗು ಈಕೀನ' ಎಂದು ರೂಪಕ್ಕನನ್ನು ದಬಾಯಿಸಿದಳು. 'ಹಂಗಲ್ಲಕ್ಕ ನಾನು ಎಲ್ಲ ಹೇಳೆನಿ. ಗಿರಾಕಿ ಮುಂದ ಮಕ್ಕಳ ವಿಷಯ ಎಲ್ಲಾ ಮಾತಾಡಬೇಡ ಅವರಿಗೆ ಮಗೂನ ತೋರಿಸಬೇಡ ಅಂತ ಎಲ್ಲ ಹೇಳಿನಿ. ಮಗು ಆಗಿದ್ರೂ ಮೈ ತುಂಬ ಖಂಡ ತುಂಬಕೊಂಡಾಳ. ನೀವು ಹಾಕೋ ಊಟಕ್ಕ ಮೋಸ ಇಲ್ಲಂತ ನನಗ ಅನಸತೈತಿ' ಎಂದು ರತ್ನಕ್ಕಳಿಗೆ ತಿಳಿಸಿ ಹೇಳುತ್ತಿರುವಾಗ ರತ್ನಕ್ಕ ನನ್ನ ಮೈಮೇಲಿನ ಉಬ್ಬು ತಗ್ಗುಗಳಳನ್ನು ಗಮನಿಸುತ್ತಲೆ 'ಕೂಸು ಗಂಡೋ ಹೆಣ್ಣೋ? ಎಂದು ಖಾರವಾಗಿಯೆ ಪ್ರಶ್ನಿಸಿದಳು.
 
ನನ್ನ ಕಣ್ಣಲ್ಲಿ ಬಳ ಬಳ ನೀರು ಇಳಿಯುತ್ತಿದ್ದುದರಿಂದ ನಾನು ಉತ್ತರಿಸಲು ಆಗದಿರುವುದನ್ನು ನೋಡಿ ರೂಪಕ್ಕಳೇ ‘ಹೆಣ್ಣು, ಬಾಳ ಚಂದೈತಿ’ ಎಂದು ಕಣ್ಣು ಮಿಟುಕಿಸಿದಳು. ಹೆಣ್ಣು ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೆ ಏನನ್ನೋ ಲೆಕ್ಕ ಹಾಕುವ ಮುಖಭಾವ ಹೊತ್ತ ರತ್ನಮ್ಮ ಒಳಗೆ ಕರಕೊಂಡು ಹೋಗು ಎಂದು ರೂಪಕ್ಕಗೆ ಕಣ್ಣಿನಲ್ಲಿಯೆ ಸೂಚಿಸಿದಳು. ನನ್ನ ಮಗಳು ರಾಜಿ ರತ್ನಮ್ಮಳನ್ನು ನೋಡಿ ನಗುತ್ತಿತ್ತು.
ನಾನು ಎದ್ದು ರೂಪಕ್ಕಳನ್ನು ಹಿಂಬಾಲಿಸಿದೆ. ನಾವಿಬ್ಬರು ವಠಾರದ ಕೊನೆಯಲ್ಲಿರುವ ಒಂದು ರೂಮಿನೊಳಕ್ಕೆ ಪ್ರವೇಶಿಸಿದವು. ಮಗುವಿಗೆ ಹೊದೆಸಿದ್ದ ಬಟ್ಟೆ ಒದ್ದೆಯಾಗಿದ್ದರಿಂದ ನಾನು ಅಲ್ಲಿಯೆ ಬಿದ್ದಿದ್ದ ಹಳೆಯ ಬಟ್ಟೆಯೊಂದನ್ನು ತೆಗೆದುಕೊಂಡು ಮಗಳ ನಡುವಿಗೆ ಸುತ್ತಿ ಮಗಳನ್ನು ಮೊಲೆಗೆ ಹಾಕಿಕೊಂಡೆ. ರೂಪಕ್ಕ ಅದೆಲ್ಲಿಂದಲೋ ಕಾಗದದ ಪೆÇಟ್ಟಣದಲ್ಲಿ ಪಲಾವ್ ಮತ್ತು ಚಟ್ನಿಯನ್ನು ಕಟ್ಟಿಸಿಕೊಂಡು ಬಂದು ನನ್ನ ಮುಂದೆ ಇಟ್ಟಳು. ಮೂರ್ನಾಲ್ಕು ದಿನದಿಂದ ಏನನ್ನು ತಿನ್ನದೆ ಇದ್ದ ನಾನು ಗಬ ಗಬನೆ ತಿನ್ನತೊಡಗಿದೆ.
 
ರೂಪಕ್ಕ ಅಲ್ಲಿಯ ವಾತಾವರಣ, ತಮ್ಮ ದಿನನಿತ್ಯದ ಬದುಕಿನ ಗೋಳು, ನಮ್ಮಂಥವರನ್ನು ಕಾಪಾಡುವ ಹೊಣೆ ಹೊತ್ತ ರತ್ನಮ್ಮಳ ಅಸಾಹಾಯಕತೆ, ತಂತ್ರಗಾರಿಕೆಯ ಬಗ್ಗೆ ಹೇಳತೊಡಗಿದಳು. ಅವಳ ಮಾತುಗಳಲ್ಲಿ ನನಗೆ ರತ್ನಮ್ಮಳೆಂಬ ಹೆಂಗಸು ಒಮ್ಮೆ ಮಮತಾಮಯಿಯಂತೆ, ಮತ್ತೊಮ್ಮೆ ನಾಟಕೀಯತೆಯ ನಾಯಕಿಯಂತೆ, ಕೆಲವೊಮ್ಮೆ ನಗು ಸಿಟ್ಟು, ಕ್ರೂರತೆ, ಛಲ, ತಂತ್ರಗಾರಿಕೆಯ ಉಪಾಯಗಾರ್ತಿ, -ಹೀಗೆ ನವರಸಗಳನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡು ಮಾನಸಿಕ ಪ್ರಕ್ಷೋಭೆ, ಪ್ರಲೋಭನೆಗಳೋಳಗಾಗಿ ಆ ಮನೆಯನ್ನು ನಡೆಸುವ ಅಂಬಿಗಳಂತೆ ಗೋಚರಿಸದಳು.
 ಇಲ್ಲಿಗೆ ಬರುವ ಗಿರಾಕಿಯಿಂದ ಮುನ್ನೂರು ರೂಪಾಯಿಯಿಂದ ಒಂದು ಸಾವಿರ ರೂಪಾಯಿವರೆಗೆ ವಸೂಲಿ ಮಾಡತಾರ. ಆದರೆ ನಮಗೆ ಸಿಗೋದು ಐವತ್ತರಿಂದ ನೂರು ರೂಪಾಯಿ ಅಷ್ಟೆ. ಹಾಗಂತ ಉಳಿದ ದುಡ್ಡನ್ನೆಲ್ಲ ರತ್ನಮ್ಮ ಇಟಕೊತಾಳಂತಲ್ಲ. ಉಳಿದ ಹಣದಲ್ಲಿ ಪೊಲೀಸರು, ರೌಡಿಗಳು, ಪಿಂಪ್‍ಗಳು, ರಾಜಕಾರಣಿಗಳಿಗೆಲ್ಲ ಕೊಡಬೇಕಾಕೈತಿ. ಇದನ್ನೆಲ್ಲ ಕೊಟ್ಟಾದ ಮೇಲೂ ಒಮ್ಮೊಮ್ಮೆ ಪೆÇಲೀಸರ ದಾಳಿಗಳಾಕ್ಕಾವು. ಇಲ್ಲಿ ಬರುವ ರಾಜಕೀಯ ಪುಡಾರಿಗಳನ್ನು ನಾವು ಸರಿಯಾಗಿ ಸಂಭಾಳಿಸದಿದ್ದರೆ ಅವರೇ ಹೊರ ಹೋದ ಮೇಲೆ ಪೆÇಲೀಸರಿಗೆ ಫೋನು ಮಾಡಿ ತಿಳಿಸ್ತಾರ, ರೂಪಕ್ಕ ಏನೇನೋ ಹೇಳುತ್ತಲೆ ಇದ್ದಳು. ನನಗೆ ಮೂರ್ನಾಲ್ಕು ದಿನದಿಂದ ಸರಿಯಾಗಿ ನಿದ್ದಿ ಇಲ್ಲದ ಕಣ್ಣುಗಳು ಎಳೆಯುತ್ತಿದ್ದುದರಿಂದ ಅಲ್ಲಿಯೆ ಅಡ್ಡಾಗಿದ್ದೆ. ನಿದ್ದೆ ಯಾವಾಗ ಬಂದಿತ್ತೊ ಗೊತ್ತಿರಲಿಲ್ಲ. 
(ಮುಂದುವರೆಯುವುದು)
* * *
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Ramachandra
Ramachandra
10 years ago

ಅಸಹಾಯಕತೆಯ ಚಿತೃಣ..ಇದೆಲ್ಲ ಏನು ಎಂದೊಮ್ಮೆ ಕೆಲವರಿಗೆ ಇದೇ ಈ ಸಮಾಜದ ಒಂದು ಅತೃಪ್ತ ಮುಖ..ಅನಿವಾರ್ಯತೆಯ ಒತ್ತಡಕ್ಕೆ ಸಿಕ್ಕಿ ಹೊರಬರಲಾರದೆ ಒದ್ದಾಡುವ ಅದೆಷ್ಟೊ ಹೆಣ್ಣು ಮಕ್ಕಳ ಅಳಲು ಇಲ್ಲಿ ಪೃತಿಬಿಂಬಿತಗೊಳ್ಳುತ್ತಿದೆ..ನೈಜತೆಯನ್ನೇ ಹೊರುವ ನಿರೂಪಣೆ ಅದರ ರೀತಿ ಓದಿಸಿಕೊಳ್ಳುತ್ತಾ ಹೋಗುತ್ತದೆ.ಧನ್ಯವಾದಗಳು

1
0
Would love your thoughts, please comment.x
()
x