ಕುಂದ್ಲಳ್ಳಿ ಕೆರೆ: ಪ್ರಶಸ್ತಿ

ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ಸುರುವಿ ಅದನ್ನೂ ಹಾಲಾಹಲವಾಗಿಸುತ್ತಿರುವ ಸಮಸ್ಯೆ ಇನ್ನೊಂದೆಡೆ. ವೈಟ್ ಫೀಲ್ಡೆಂಬ ಏರಿಯಾವನ್ನೇ ತಗೊಂಡ್ರೆ ಸುತ್ತಲ ಏಳೆಂಟು ಕೆರೆಗಳಿದ್ದಿದ್ದನ್ನ ಕಾಣಬಹುದು(ಚಿತ್ರ:lakes around whitefield).ಇದ್ದಿದ್ದು ಅಂತ್ಯಾಕೇ ಹೇಳ್ತಿದೀನಾ ? ಇನ್ನೂ ಇಲ್ವಾ ಆ ಕೆರೆಗಳು ಅಂತ ಅಂದ್ರಾ ? ನಕಾಶೆಯಲ್ಲಿ ಅಷ್ಟು ದೊಡ್ಡ ಕಾಣೋ ಆ ಕೆರೆಗಳ ನಿಜಸ್ಥಿತಿ ಅರಿಯೋಕೆ ಅವಿದ್ದ ಜಾಗಕ್ಕೇ ಹೋಗಬೇಕು.  ಗ್ರಾಫೈಟ್ ಇಂಡಿಯಾ ಸಿಗ್ನಲ್ ಹತ್ತಿರ ಇರೋ ಪೆಟ್ರೋಲ್ ಬಂಕಿನಿಂದ ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್ ಕಡೆ ಹೋಗೋ ರಸ್ತೆಯಲ್ಲಿ ಸಿಗೋ ವೈಟ್ ಫೀಲ್ಡ್ ಕೆರೆ, ಎಸ್.ಎ.ಪಿ, ಆರ್.ಎಂಜೆಡ್ ಕಟ್ಟಡಗಳ ಹಿಂಬದಿಯಲ್ಲಿರೋ ನೆಲ್ಲೂರಳ್ಳಿ ಕೆರೆ ಮುಂತಾದವುಗಳು ಕಳೆ,ಪಾಚಿಗಳಿಂದ ತುಂಬಿಯೋ, ಅರ್ಧಕ್ಕರ್ಧ ಒಣಗಿಯೋ ಉಳಿಸಲಾರೆಯಾ ನೀಯೆನ್ನ,ನಿನ್ನುಳಿಸಿದ ನೀರಸೆಲೆಯ ಅಂತ ದೀನವಾಗಿ ಬೇಡುತ್ತಿರುವಂತೆ ಭಾಸವಾಗುತ್ತದೆ.

ಆ ಕೆರೆಗಳ ಮಧ್ಯೆ ಆಕಾರದಲ್ಲಿ ತೀರಾ ದೊಡ್ಡದಲ್ಲದಿದ್ದರೂ ಈಗಲೂ ಒಂಚೂರು ಸ್ವಚ್ಛತೆಯನ್ನು ಉಳಿಸಿಕೊಂಡು ದೊಡ್ಡ ಮತ್ತು ಸಣ್ಣ ಜಾತಿಯ ಕ್ಯಾರಾಮೌಂಟ್, ಕೊಕ್ಕರೆಗಳಲ್ಲದೇ ಊರ ಹಕ್ಕಿಗಳಾದ ಗೂಬೆ, ಕಾಗೆ, ಗುಬ್ಬಚ್ಚಿಗಳಿಗೆ ಆಸರೆಯಿತ್ತು, ತನ್ನ ಸುತ್ತಲಿನ ಹಸಿರ ಸಸ್ಯಗಳಲ್ಲಿ ಹಲವು ಜಾತಿಯ ಚಿಟ್ಟೆಗಳಿಗೆ ಆಸರೆಯಿತ್ತು ನೋಡುಗರ ಕಣ್ಣಿಗೆ ಒಂಚೂರು ಖುಷಿ ಕೊಡುತ್ತಿರುವುದು ಕುಂದ್ಲಳ್ಳಿ ಕೆರೆ. ಇದನ್ನ ಸ್ಯಾಂಕಿ ಟ್ಯಾಂಕಿನ ತರವೋ, ಹಲಸೂರ ಕೆರೆಯ ತರವೋ ಬೇಲಿ ಹಾಕಿ ಅಭಿವೃದ್ಧಿ ಪಡಿಸಿಲ್ಲ ಅಂದ್ರೆ ಈ ಕೆರೆಯೂ ಸುತ್ತಲಿನ ಜನರ ದುರಾಸೆಗೆ ಸತ್ತೇಹೋಗಬೇಕಿತ್ತಲ್ಲ, ಇನ್ನೂ ಬದುಕಿದ್ದು ಪವಾಡ ಅನ್ನುತ್ತಿರೇನೋ ನೀವು . ಅದಕ್ಕೆ ಕಾರಣ ಅದಿರೋ ಪರಿಸರ. ಇದರ ಒಂದು ಮೂಲೆಯಲ್ಲಿರೋದು ಕುಂದಲಹಳ್ಳಿಯಲ್ಲೇ ತಲೆತಲಾಂತರಗಳಿಂದ ವಾಸವಾಗಿರೋ ಜನರು ಮತ್ತು ಬೇರೆ ರಾಜ್ಯಗಳಿಂದ ಇಲ್ಲಿ ಬಂದಿರೋ ಒಂದಿಷ್ಟು ಬಡಬಗ್ಗರ ಜೋಪಡಿಗಳು. ಮತ್ತುಳಿದ ಮೂಲೆಗಳಲ್ಲೆಲ್ಲಾ ಇದನ್ನು ಸುತ್ತುವರಿದಿರೋದು ರಸ್ತೆ. ಆ ರಸ್ತೆಯಾಚೆ ಮತ್ತೆ ಕಸ ಸುರಿಯೋ ಜಾಗವೋ ಐಟಿ ಕಟ್ಟಡಗಳೋ ಇರೋದರಿಂದ ಯಾರೋ ಬಂದು ಕೆರೆಯನ್ನು ಒತ್ತುವರಿ ಮಾಡೋ ಸಮಸ್ಯೆ ಇಲ್ಲಿಯವರೆಗೂ ಎದುರಾಗಿಲ್ಲ. ಈ ಕೆರೆಯಲ್ಲೇ ಸ್ನಾನ ಮಾಡೋ, ಬಟ್ಟೆ ತೊಳೆಯೋ, ಆಗಾಗ ದೋಣಿಯಲ್ಲಿ ಬಲೆ ಬೀಸಿ ಮೀನು ಹಿಡಿಯೋ ಜನರಿಂದಲೋ, ಟ್ಯಾಂಕರುಗಳ ತಂದು ನಿಲ್ಲಿಸಿ ನೀರು ತುಂಬಿಕೊಂಡು ಹೋಗೋ ಜನರಿಂದಲೋ ಅಪಾಯವಿಲ್ಲ ಈ ಕೆರೆಗೆ. ಆದ್ರೆ ಅಪಾಯವಿರೋದು ಇದರ ಸುತ್ತಲಿರೋ ಟೆಕ್ ಪಾರ್ಕುಗಳಿಂದ ! ಇದಕ್ಕೆ ಬೇಲಿಯಿಲ್ಲ, ಕಾಯೋ ಕಾನೂನಿಲ್ಲವೆಂಬ ಕಾರಣಕ್ಕೆ ಈಗಲೂ ಇದರ ಸುತ್ತಮುತ್ತಲಿನ ಕಟ್ಟಡಗಳ ದ್ರವ ತ್ಯಾಜ್ಯ ಇದಕ್ಕೆ ಬಂದು ಸೇರೋದುಂಟು ! ಕೊಳಕು ನೀರು, ಪ್ಲಾಸ್ಟಿಕ್ಕು, ತೇಲೋ ಬೆಂಡಿನ ತುಂಡುಗಳನ್ನ ಜನರ್ಯಾಕೆ ತಂದು ಕೆರೆಗೆ ಸುರೀತಾರೆ ? ಕುಡಿಯೋಕೆ ಮಾತ್ರ ಸ್ವಚ್ಛ ನೀರೇ ಬೇಕು, ಆದ್ರೆ ಅದೇ ನೀರನ್ನ ಸ್ವಚ್ಛವಾಗಿ ಕಾಪಿಡಬೇಕೆಂಬ ಕನಿಷ್ಟಪ್ರಜ್ಞೆಯೂ ಏಕೆ ಬೇಡವೆಂಬ ಪ್ರಶ್ನೆ ಮತ್ತೆ ಮತ್ತೆ ಕಾಡುವಂತೆ ಮಾಡುತ್ತೆ ಈ ಕುಂದಲಳ್ಳಿ ಕೆರೆ. 

ವರ್ತೂರು ಕೆರೆಯಲ್ಲಿ ಹಾಲಾಹಲದ ನೊರೆಯೇ ಹರಿದು ರಸ್ತೆ ಮೇಲೆ ಬರುತ್ತಿದ್ದ ನಾಗರೀಕರ ಮೈಮೇಲೂ ಹಾರಿದ್ದು ಆ ಕೆರೆಯಲ್ಲಿ ಮನುಷ್ಯರ ಬಗ್ಗೆ ಇರಬಹುದ ರೋಷವನ್ನು ತೋರಿಸಿರಬಹುದು ! ಬೆಳ್ಳಂದೂರು ಹತ್ತಿರದ ಕೆರೆಯಲ್ಲಿನ ನೊರೆಗೆ ಬೆಂಕಿ ಹತ್ತಿ ಉರಿದ ಸುದ್ದಿಯನ್ನೂ ನೀವು ಓದಿರಬಹುದು. ಕೆಂಗೇರಿಯಲ್ಲಿ ಹರಿಯುತ್ತಿದ್ದ ಹೊಳೆ ಹೋಗಿ ಕೆಟ್ಟ ಕೊಳೆ ಎನ್ನೋದಕ್ಕೆ ಕೆಂಗೇರಿ ಮೋರಿ ಅಂತ ಕರೆಯೋ ಪರಿಸ್ಥಿತಿ ಬಂದಿದೆ ಅಂದ್ರೆ ಬೆಂಗಳೂರಲ್ಲಿನ ಜಲ ಮಾಲಿನ್ಯ ಮುಟ್ಟಿರೋ ಅಪಾಯಕಾರಿ ಮಟ್ಟವನ್ನು ಊಹಿಸಬಹುದೇನೋ. ಬೇಲಿ ಸಿಕ್ಕಿರೋ, ಬೋಟಿಂಗು ಇತ್ಯಾದಿ ಪ್ರವಾಸಿ ಚಟುವಟಿಕೆಗಳನ್ನ ಕಾಣುತ್ತಿರೋ ಕೆಲವೇ ಕೆಲವು ಕೆರೆಗಳನ್ನು ಬಿಟ್ಟರೆ ಉಳಿದೆಲ್ಲಾ ಕೆರೆಗಳದ್ದೂ ಮೂಕ ರೋದನ. ಅರಸೀಕೆರೆಯ ಮೇಲಿಂದ ಬೆಂಗಳೂರಿನ ಕಡೆ ಬರುವವರು ಬಸ್ಟಾಂಡಿನ ಪಕ್ಕದಲ್ಲೇ ಇರೋ ಅಲ್ಲಿನ ಕೆರೆಗಳನ್ನ ನೊಡಿರಬಹುದು. ಕೆಲ ವರ್ಷಗಳ ಹಿಂದೆ ಸಾಯೋ ಹಾಗಿದ್ದ ಆ ಕೆರೆಯ ಹೂಳೆತ್ತಿ, ಸುತ್ತಲೊಂದು ರಕ್ಷಣಾ ಬೇಲಿ ನಿರ್ಮಿಸಿ ಬೇಸಿಗೆಯಲ್ಲೂ ಊರ ನೀರಡಿಕೆ ಇಂಗಿಸುವಷ್ಟರ ಮಟ್ಟಿಗೆ ತಂದು ನಿಲ್ಲಿಸಿರುವುದನ್ನ ನೋಡೋಕೆ ಖುಷಿಯಾಗುತ್ತೆ.ಅದೇ ತರಹ ಉಳ್ಳಾಲ ಉಪನಗರದ ಕೆರೆ ಪುನರ್ಜೀವ ಕೊಟ್ಟ ಪರಿಯೂ ನೋಡೋಕೆ ಖುಷಿ ಕೊಡುತ್ತೆ. ಆ ಪರಿಯ ರಕ್ಷಣೆ ಸಿಕ್ಕದಿದ್ದರೂ ಕುಂದಲಹಳ್ಳಿಯ ಕೆರೆಯ ಸುತ್ತಮುತ್ತಲಿನ ಕೆಲ ಜಾಗ ಈ ಕುಂದಲಹಳ್ಳಿ ಗ್ರಾಮಸ್ಥರಿಗೆ ಸೇರಿದ ಸ್ಮಶಾನ ಅನ್ನೋದೊಂದೇ ಈ ಕೆರೆಗೆ ಸದ್ಯಕ್ಕಿರುವ ಶ್ರೀ ರಕ್ಷೆ. ಇದೇ ಈ ತ್ಯಾಜ್ಯಗಳ ತಂದು ಸುರಿದು ಇದನ್ನೂ ಮತ್ತೊಂದು ಅಪಾರ್ಟ್ ಮೆಂಟುಗಳ ಸೈಟಾಗಿಸದಂತೆ ಕಾದಿದೆ ಅಂದರೆ ತಪ್ಪಾಗಲಾರದೇನೋ.

ಸುತ್ತಲಿನ ಕಂಪೆನಿಗಳಿಗೆ ಹೋಗೋಕೆ ಅತೀ ಹತ್ತಿರದ ದಾರಿ ಅಂತ ಅದೆಷ್ಟೊ ಜನ ಕೆರೆಯ ಮೇಲಿನ ಹಾದಿಯಲ್ಲಿ ನಡೆದು ಹೋಗೋದಿದೆ. ಕೆರೆಯ ಮತ್ತೊಂದು ಬದಿಯ ಸ್ವಲ್ಪ ಸುತ್ತಾದ ಹಾದಿಯಿಂದ ಬೈಕಲ್ಲಿ ಹೋಗೋರೂ ಇದ್ದಾರೆ. ಹೊಗೆಯುಗುಳೋ ಟ್ರಾಫಿಕ್ಕಿನಲ್ಲಿ ಗಂಟೆಗಟ್ಟಲೇ ಕಳೆಯೋ ಗೋಳ್ಯಾರಿಗೆ ಬೇಕು ಅನ್ನೋದ್ರ ಜೊತೆಗೆ ದಿನಾ ಎರಡು-ಮೂರು ಕಿ.ಮೀ ನಡೆದ್ರೆ ಆರೋಗ್ಯವೂ ಸುಧಾರಿಸುತ್ತೆ ಅನ್ನೋದು ಇನ್ನೊಂದು ಕಾರಣ. ಕೆರೆಯಲ್ಲಿ ತೇಲಿ ಮುಳುಗುತ್ತಾ ನೀರಾಳದಿಂದ ಕೊಕ್ಕಲ್ಲಿ ಮೀನು ಕಚ್ಚಿಕೊಂಡು ಮೇಲೇಳೋ   ಕ್ಯಾರಾಮೌಂಟುಗಳ ನೋಡೋದೇ ಒಂದು ಚಂದ. ಆಗಾಗ ಹಾರಿಬರೋ ಗಿಳಿಗಳ ಸಾಲು, , ಮರದ ಮೇಲೆ ಮಲ್ಲಿಗೆ ಚೆಲ್ಲಿದಂತೆ ಕಾಣೋ ಬೆಳ್ಳಕ್ಕಿಗಳ ಹಿಂಡು ನೋಡೋದು ಇನ್ನೊಂದು ಖುಷಿ. ನೀರಿಗೆ ಸಮಾನಾಂತರವಾಗಿ ಹಾರೋ ಹಕ್ಕಿಗಳು ಎಲ್ಲಿ ನೀರಿಗೆ ಬಿದ್ದಾವೋ ಎನ್ನುವಷ್ಟರಲ್ಲಿ ಎಲ್ಲೋ ಮುಳುಗಿ ಮತ್ತೆಲ್ಲೋ ಮೀನು ಕಚ್ಚಿ ಮೇಲೋಳೋ ಅವುಗಳ ಚಾಕಚಕ್ಯತೆ ಗಮನಸೆಳೆಯುತ್ತೆ. ಆಚೆ ದಡದ ಕಟ್ಟಡಗಳ, ಸಾಗುತ್ತಿರೋ ಚಾಲಕರ ಪ್ರತಿಬಿಂಬಗಳನ್ನ ಕೆರೆಯ ನಿಂತ ನೀರಿನ ಶಾಂತಿಯಲ್ಲಿ ನೋಡೋ ಆನಂದವನ್ನೆಂತೂ ಅಲ್ಲಿ ಬಂದೇ ಸವಿಯಬೇಕು. 

ಈ ಕೆರೆಯ ಮೇಲೆ ಕೂರಲ್ಲು ಕಟ್ಟೆಗಳಿರದಿದ್ದರೂ ಕೆರೆಯ ಸುತ್ತು ಹಾಕಿ ಬರೋಕೆ ತೆಗೆದುಕೊಳ್ಳೋ ಸಮಯ ಅನೇಕ ಪ್ರೇಮಿಗಳ ಪಾಲಿನ ರಸ ಸಮಯ. ಆಫೀಸಲ್ಲಿನ ಯಾರ ಮೇಲಿನ ಸಿಟ್ಟನ್ನೋ, ಹೇಳಲಾಗದ ಮಾತುಗಳನ್ನು ನಡೆದಾಟಕ್ಕೆ ಜೊತೆಯಾಗೋ ತಂಗಾಳಿ ಬಗೆಹರಿಸುತ್ತೆ.. ಈ ಕೆರೆಯ ಮೇಲೆ ಖುಷಿಖುಷಿಯಾಗಿ,ಲವಲವಿಕೆಯಿಂದ ಮಾತಾಡುತ್ತಾ ಸಾಗೋ ಸಹೋದ್ಯೋಗಿಗಳ ಗುಂಪುಗಳನ್ನ ನೋಡಿದ ಯಾರಿಗಾದರೂ ತಮ್ಮ ಹೈಸ್ಕೂಲ, ಕಾಲೇಜಿನ ಗ್ಯಾಂಗು ನೆನಪಾದರೆ ಅಚ್ಚರಿಯಿಲ್ಲ ! ಟಾರ ರಸ್ತೆಯಿಲ್ಲ, ಬರೀ ಕಲ್ಲಿನ ರಸ್ತೆಯಲ್ಲಿ ಸಾಗಿ ಸ್ಲಮ್ಮಿನಂತಹ ಜಾಗದ ಮೂಲಕ ಹೊರಬರಬೇಕು, ರಾತ್ರೆಯಾದರೆ ಲೈಟಿಲ್ಲ ಅಂತ ಗೊಣಗೋ ಜನರ ಮಧ್ಯೆಯೂ ಹಗಲ ಹೊತ್ತಲ್ಲಿ ಈ ರಸ್ತೆಯಲ್ಲೇ ಸಾಗೋ ಟೆಕ್ಕಿಗಳ ಸಂಖ್ಯೆ ಕಡಿಮೆಯಿಲ್ಲ. ಸಂಜೆ ಎಂಟು, ಒಂಭತ್ತರ ಹೊತ್ತಿಗೂ ಒಬ್ಬೊಬ್ಬರೇ ಈ ಕೆರೆಯ ಹಾದು ಬರೋ ಹುಡುಗಿಯರಿಗೆ ಹಿಂದೆ ಬರುತ್ತಿರೋ ಮತ್ಯಾವುದೋ ಗುಂಪು ಟ್ರಾಫಿಕ್ಕಿನಿಂದ ತುಂಬಿರೋ ರಸ್ತೆಗಿಂತ ಸುರಕ್ಷಾ ಭಾವ ಮೂಡಿಸಿರುತ್ತೆ. ರಾತ್ರಿಯ ಕಟ್ಟಡಗಳ ದೀಪಗಳು ಕೆರೆಯ ನೀರಲ್ಲಿ ಪ್ರತಿಬಿಂಬಿಸುವುದನ್ನು ನೋಡೋದು ಮತ್ತೊಂದು ಪರಿಯ ಖುಷಿ. ನೀರಿನ ಅಲೆಗಳಲ್ಲಿ ಮೂಡಿದ ಪ್ರತಿಬಿಂಬವೂ ಚಲಿಸಿ ಬೆಳಕು ನೀರಲ್ಲಿ ಹೊಯ್ದಾಡೋ ಪರಿಯನ್ನು , ಅದರ ಮೇಲೆ ಹಾಯ್ದ ತಂಗಾಳಿಯ ಸವಿಯಲೆಂದೇ ಇಲ್ಲಿನ ಸುತ್ತಮುತ್ತಲ ಪೀಜಿಗಳಲ್ಲಿನ ಕೆಲ ಹುಡುಗರು ಫೋನ ನೆಪದಲ್ಲಿ ಟೆರೇಸ್ ಮೇಲೇ ಇರುತ್ತಾರೆ. ಬಿರುಬೇಸಿಗೆಗಳಲ್ಲೆಂತೂ ಕೆರೆಯ ತಂಗಾಳಿಯ ಕಾರಣಕ್ಕೆ ಟಾರಸಿಯ ಮೇಲೇ ಚಾಪೆ ಹಾಸಿ ಮಲಗುವವರೂ ಉಂಟು!

ಈ ಕೆರೆಯ ಹಾದಿಯಲ್ಲಿ ನಡೆದಾಡುವವರ ಬಹುಮುಖ್ಯ ಕಂಪ್ಲೇಂಟು ಅಂದ್ರೆ ಇಲ್ಲಿನ ಜನರಿಗೆ ಇಲ್ಲದ ಸ್ವಚ್ಛತೆಯ ಪರಿಕಲ್ಪನೆ ಬಗ್ಗೆ. ಬೆಳಿಗ್ಗೆ ಹತ್ತೂವರೆ ಹನ್ನೊಂದು ಘಂಟೆ ಹೊತ್ತಿಗೆ ಈ ಹಾದಿಯಲ್ಲಿ ಬಂದ್ರೂ  ಹಾದಿ ಬದಿಯಲ್ಲೋ, ಪೊದೆಗಳ ಸಂದಿಯಲ್ಲೋ ಶೌಚಕ್ಕೆ ಕೂತ ಜನ ಕಾಣಿಸುತ್ತಾರೆ ! ರಸ್ತೆಗಳ ಬದಿಯಲ್ಲೇ ಮಲವಿಸರ್ಜನೆ ಮಾಡೋ ಜನರ ಮನೆಗಳಲ್ಲಿ ಶೌಚಾಲಯ ಇರೋಲ್ವಾ ಅನ್ನೋದು ಇವರಲ್ಲಿ ಕೆಲವರ ಪ್ರಶ್ನೆ.   ಆ ಭಾಗ್ಯ, ಈ ಭಾಗ್ಯವೆಂದು ಬಡಜನರ ಕಲ್ಯಾಣಕ್ಕಾಗಿ ದುಡಿಯುತ್ತಿರೋ ಸರ್ಕಾರದ ಕೃಪಾ ಕಟಾಕ್ಷ ಇನ್ನೂ ಇವರ ಮೇಲೆ ಬಿದ್ದಂತಿಲ್ಲ. ಶೌಚಾಲಯ ಭಾಗ್ಯ ದಕ್ಕದ ಜನತೆ ನೈಸರ್ಗಿಕ ಕರೆಗೆ ಹೋಗೋದಾದರೂ ಎಲ್ಲಿಗೆ ? ಒಂದೆಡೆ ಬಹುಮಹಡಿ ಕಟ್ಟಡಗಳು, ಮತ್ತೊಂದೆಡೆ ಬಯಲಿನಲ್ಲೇ ಶೌಚಕ್ಕೆ ತೆರಳಬೇಕಾದ ದುಸ್ಥಿತಿಯಲ್ಲಿರೋ ಜೋಪಡಿಗಳು !. ಸಾಮಾಜಿಕ ನ್ಯಾಯದ ಕೂಗಾಟ, ಧಿಕ್ಕಾರಗಳಿಗೂ ತಮಗೂ ಸಂಬಂಧವಿಲ್ಲದಂತೆ ತಣ್ಣಗಿದ್ದಾರೆ ಇಲ್ಲಿನ ಜನ. ಇಲ್ಲಿನ ಮಕ್ಕಳು ಬೆಳಗ್ಗೆ ಮುಂಚೆಯಾದ್ರೆ ಇದೇ ಕೆರೆಯಲ್ಲಿ ಮಿಂದೇಳುತ್ತಿರುತ್ತವೆ, ಸ್ವಲ್ಪ ಹೊತ್ತಿನ ನಂತರ ನೋಡಿದ್ರೆ ಸಮವಸ್ತ್ರ ಧರಿಸಿ ಸಮೀಪದಲ್ಲಿರೋ ಶಾಲೆಗೆ ತೆರಳುತ್ತಿರುತ್ತೆ. ಮಕ್ಕಳನ್ನು ಓದಿಸಬೇಕು, ಸಮಾಜದಲ್ಲೊಂದು ಒಳ್ಳೆಯ ಸ್ಥಾನಕ್ಕೆ ತೆರಳಬೇಕೆಂಬ ಕನಸುಗಳಿವೆ ಇಲ್ಲಿನ ಹರಕು ಬಟ್ಟೆಯಲ್ಲಿ ಕೆರೆಯ ಬಳಿಯಲ್ಲಿ ಬಟ್ಟೆಯೊಗೆಯುತ್ತಿರುವ ಅಮ್ಮಂದಿರಲ್ಲಿ. ಆದರೇನು ಮಾಡೋದು ? ಮರ್ಯಾದೆ ಪ್ರಶ್ನೆಯಾದರೂ ನೈಸರ್ಗಿಕ ಕರೆಗೆ ಕೆರೆದಡವೇ ಗತಿ. ಮನೆಗೊಂದು ಶೌಚಾಲಯದ ಯೋಜನೆಗಳು ಇಲ್ಲಿನ ಜೋಪಡಿಗಳಿಗೂ ತಲುಪುವಂತಾದರೆ ಕೆರೆಯ ಕಳೆಯೂ, ಅದರ ಸುತ್ತಮುತ್ತಲಿನ ವಾಸನೆಗಳ ಕಲೆಯೂ ಮಾಯವಾದೀತು. ಸುತ್ತಲಿನ ಜನರ ಆತ್ಮಗೌರವದ ಜೊತೆಗೆ ಕೆರೆಯ ಸೌಂದರ್ಯವೂ ಇನ್ನೊಂದಿಷ್ಟು ಕಳೆಗಟ್ಟೀತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x