ಕಲಿಕೆ ಮತ್ತು ಶಿಕ್ಷಣ: ನಾರಾಯಣ ಎಂ.ಎಸ್.

     
ಬೆಳಗಿನ ಕಾಫಿಯೊಂದಿಗೆ ಭಾನುವಾರದ ವೃತ್ತ ಪತ್ರಿಕೆ ಓದುವ ಮಜವೇ ಬೇರೆ ಎಂದುಕೊಳ್ಳುತ್ತಾ ಪೇಪರ್ ಕೈಗೆತ್ತಿಕೊಂಡೆ. “ಖಾಸಗೀ ಕಾಲೇಜುಗಳಲ್ಲಿನ್ನು ಸರ್ಕಾರೀ ಸೀಟುಗಳಿಲ್ಲ, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಬರೆ” ಎಂಬ ತಲೆಬರಹ ನೋಡಿ ಗಾಬರಿಯಾಯಿತು. ವಿದ್ಯಾರ್ಥಿಗಳಿಗೆ ಎಲ್ಲಿಯ ಬರೆ, ಬರೆಯೇನಿದ್ದರೂ ವಿದ್ಯಾರ್ಥಿಗಳ ಪೋಷಕರಿಗೆ ತಾನೆ, ಎಂದು ಕೊಳ್ಳುತ್ತಾ ಲೇಖನದ ವಿವರಗಳತ್ತ ಕಣ್ಣಾಡಿಸಿದೆ. ನಿಯಮಗಳಲ್ಲಿ ಈಗ ಮಾಡಲಾಗುತ್ತಿರುವ ಬದಲಾವಣೆಯಿಂದ ಪ್ರಸಕ್ತ ನಲವತ್ತೈದು ಸಾವಿರವಿರುವ ವಾರ್ಷಿಕ ಶುಲ್ಕ ಮುಂದಿನ ವರುಷದಿಂದ ಕನಿಷ್ಟ ಮೂರು ಪಟ್ಟು ಹೆಚ್ಚುವುದಾಗಿ ಬರೆದಿದ್ದರು. ಹಾಗಾಗಿ ಮಧ್ಯಮ ವರ್ಗದವರಿಗಿನ್ನು ವೃತ್ತಿ ಶಿಕ್ಷಣವು ಗಗನ ಕುಸುಮವಾಗಲಿದೆಯೆಂದು ತಿಳಿಸಿದ್ದರು. ಕುಡಿಯುತ್ತಿದ್ದ ಕಾಫಿಯೇಕೋ ಕಹಿಯೆನಿಸಿತು. ಹಾಗೆ ನೋಡಿದರೆ ನನಗೂ ಈ ವರದಿಗೂ ನೇರ ಸಂಬಂಧವೇನೂ ಇಲ್ಲ. ನನ್ನ ದೊಡ್ಡ ಮಗಳಿನ್ನೂ ಮೊದಲ ಪೀಯೂಸಿ ಓದುತ್ತಿದ್ದಾಳಷ್ಟೆ. ಹಾಗಾಗಿ ಸದ್ಯಕ್ಕೆ ವೈಯುಕ್ತಿಕವಾಗಿ ನನಗೆ ಈ ವರದಿ ಅಪ್ರಸ್ತುತವಾದ್ದರಿಂದ ಯಾವುದೇ ಚಿಂತೆಗೆ ಕಾರಣವಿಲ್ಲ. ಆದರೆ ತತ್ವಙ್ಞಾನಿಗಳು ಹೇಳುವಂತೆ ಯಾವಾಗಲೂ ವರ್ತಮಾನದಲ್ಲಿಯೇ ಜೀವಿಸಬೇಕೆಂದು ಎಷ್ಟೇ ಸಂಕಲ್ಪ ಮಾಡಿಕೊಂಡರೂ ಅದೇಕೋ ನನ್ನಿಂದ ಅದು ಸಾಧ್ಯವೇ ಆಗುವುದಿಲ್ಲ. ಅಭೂತಪೂರ್ವ ಹಣದುಬ್ಬರದ ಈ ಕಾಲದಲ್ಲಿ ಬಹುಶಃ, ನನ್ನಂತೆ ಒಬ್ಬನ ಸಂಪಾದನೆಯಲ್ಲಿ ಎರಡು ಹೆಣ್ಣು ಮಕ್ಕಳಿರುವ ಸಂಸಾರವನ್ನು ತೂಗಿಸಬೇಕಾದ ಜವಾಬ್ದಾರಿಯಿರುವ ಯಾವುದೇ ಮಧ್ಯಮವರ್ಗಿಗೂ ಕೇವಲ ವರ್ತಮಾನದಲ್ಲಿ ಜೀವಿಸಲು ಸಾಧ್ಯವಾಗಲಾರದೇನೋ! ಇಂಥಾ ವರದಿಗಳನ್ನು ನೋಡಿದೊಡನೆ ಮನಸ್ಸನ್ನು ಭವಿಷ್ಯದ ಭೂತದ ಭೀತಿ ಕಾಡಲಾರಂಭಿಸಿ ಬಿಡುತ್ತದೆ, ಅನ್ನಿಸಿತು. ಒಡನೆ, ಇತ್ತೀಚಿನ ಭೂತದಲ್ಲಿ ಇಂಥದೇ ಭೂತವೊಂದು ಎದುರಾದಾಗ ಭವಿಷ್ಯವನ್ನು ನೆನೆದು ಸಾಂತ್ವನ ಕಂಡುಕೊಂಡಿದ್ದದ್ದು ನೆನಪಾಯಿತು. 

ಮಗಳನ್ನು ಕೆಲ ತಿಂಗಳುಗಳ ಕೆಳಗೆ ಕಾಲೇಜಿಗೆ ಸೇರಿಸುವಾಗ ಎರಡು ವರುಷದ ಪೀಯೂಸಿಗೆ ವರುಷಕ್ಕೆ ತಲಾ ಒಂದು ಲಕ್ಷದಂತೆ ಶುಲ್ಕ ಪೀಕಬೇಕೆಂದು ತಿಳಿದಾಗ ಸಣ್ಣಗೆ ಬೆವೆತು, ಕಾಲೇಜಿನ ಆಫೀಸಿನವರಿಂದ ಸ್ವಲ್ಪ ನೀರು ಕೇಳಿ ಕುಡಿದು ಸುಧಾರಿಸಿಕೊಂಡಿದ್ದೆ. ಹಠಾತ್ ಆಘಾತದಿಂದ ಸ್ವಲ್ಪ ಮಂಜಾದಂತಿದ್ದ ಕಣ್ಗಳನ್ನೊರೆಸಿಕೊಂಡು, ಕತ್ತೆತ್ತಿ ನೋಡಿದರೆ ಆಯಕಟ್ಟಿನ ಜಾಗದಲ್ಲಿ, ಆಡಳಿತ ಮಂಡಳಿಯವರು ಆಲೋಚನಾ ಪೂರ್ವಕವಾಗಿ ಪ್ರದರ್ಶಿಸಿದ್ದ ಫಲಕವೊಂದು ಕಣ್ಣಿಗೆ ಬಿದ್ದಿತ್ತು. ಆ ಫಲಕದಲ್ಲಿ, “If you think education is expensive, try ignorance” (ನಿಮಗೆ ಶಿಕ್ಷಣವು ದುಬಾರಿಯೆನಿಸಿದಲ್ಲಿ ಅಜ್ಞಾನವನ್ನು ಪ್ರಯತ್ನಿಸಿ ನೋಡಿ) ಎಂಬ ಸವಾಲು ಹಾಕುವಂಥಾ ವಾಕ್ಯವನ್ನು ಬರೆದಿದ್ದರು. ದಿಕ್ಕು ತೋಚದೇ, ಚೆಕ್ಕು ಕೊಟ್ಟು ತೆಪ್ಪಗೆ ಬಂದಿದ್ದೆ. ತನ್ನ ಮಗನ ಅಡ್ಮಿಷನ್ ಮಾಡಿಸಲೆಂದು ನನ್ನ ಜೊತೆಯಲ್ಲಿ ಬಂದಿದ್ದ  ಹೆಚ್ಚೂಕಮ್ಮಿ ನನ್ನದೇ ಸ್ಥಿತಿಗತಿಯ ಸಹೋದ್ಯೋಗಿ ಮಿತ್ರ, “ಈ ಇಂಟೆಗ್ರೇಟೆಡ್ ಸ್ಕೀಮಿನಲ್ಲಿ ಬೇರೆ ಟ್ಯೂಷನ್ನಿಗೇನೂ ಹಾಕ್ಬೇಕಿಲ್ಲ ಗುರೂ, ಹಾಗಾಗಿ ಇವತ್ತಿನ ಲೆಕ್ಕಕ್ಕೆ ಇದು ತುಂಬಾ ದುಬಾರಿಯೇನೂ ಅಲ್ಲಾಮ್ಮಾ, ಪೀಯೂಸಿ ಎರಡ್ವರ್ಷ ಮಾತ್ರ ಸ್ವಲ್ಪ ಎಕ್ಸ್ಪೆನ್ಸಿವ್ ಅಷ್ಟೇ ಕಣಮ್ಮಾ, ಆಮೇಲೆ ಇಂಜನಿಯರಿಂಗ್ ಮೆರಿಟ್ ಸೀಟ್ ತಗೊಂಡ್ರೆ ಅಷ್ಟೇನೂ ಪ್ರಾಬ್ಲಂ ಆಗಲ್ಲ, ಹ್ಯಾಗೋ ಮ್ಯಾನೇಜ್ ಮಾಡಿಬಿಡಬೋದು” ಎಂದು ಸಾಂತ್ವನ ಹೇಳಿದ್ದ. ನಾನೂ ಇರಬಹುದೆಂದುಕೊಂಡು ಸಮಾಧಾನ ಪಟ್ಟುಕೊಂಡಿದ್ದೆ. ಆದರೆ ಈಗ ನೋಡಿದರೆ ಈ ಪತ್ರಿಕೆಯವರು ಬೇರೆ ಈ ರೀತಿ ವರದಿ ಪ್ರಕಟಿಸಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವುದನ್ನು ಕಂಡು ಬೇಸರವೆನಿಸಿತು. ನನ್ನ ಇಡೀ ಶಿಕ್ಷಣಕ್ಕೆಂದು ನಮ್ಮಪ್ಪ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚು ಹಣವನ್ನು ಪ್ರತಿ ವರುಷದ ಶುಲ್ಕವಾಗಿ ತೆತ್ತಬೇಕಾಗಿರುವ ನನ್ನ ಪರಿಸ್ಥಿತಿಯನ್ನು ನೆನೆದು ನನ್ನಪ್ಪನ ಮೇಲೆ ಸಣ್ಣದಾದ ಈರ್ಷೆಯೂ ಉಂಟಾಯಿತು. ಒಂದೇ ಪೀಳಿಗೆಯಲ್ಲಿ ಯಾಕಿಷ್ಟೊಂದು ಬದಲಾವಣೆಗಳಾಗಿ ಹೋಯಿತೆಂದು ಮನಸ್ಸು ಪ್ರಸಕ್ತ ಪರಿಸ್ಥಿತಿಯ ಕಾರ್ಯ ಕಾರಣಗಳ ಪರಾಮರ್ಶೆಯಲ್ಲಿ ಮುಳುಗಿಬಿಟ್ಟಿತು.  

‘ಒಂದಾನೊಂದು ಕಾಲದಲ್ಲಿ, ಅಂದರೆ ಶಿಲಾಯುಗದಲ್ಲಿ ಬಾಹುಬಲಕ್ಕೆ ಎಲ್ಲಿಲ್ಲದ ಪ್ರಾಶಸ್ತ್ಯವಿತ್ತಂತೆ. ಭಕ್ತಿಯಿಂದಲ್ಲದಿದ್ದರೂ ಕೇವಲ ಭಯದಿಂದಲಾದರೂ ಜನ ಬಾಹುಬಲಿಗಳನ್ನು ಗೌರವಿಸುತ್ತಿದ್ದರಂತೆ. ನಂತರ, ನಿಧಾನವಾಗಿ ನಾಗರೀಕತೆ ಬೆಳೆದು, ಖಾಸಗಿ ಆಸ್ತಿಯೆಂಬ ಪರಿಕಲ್ಪನೆ ಮೂಡಿದ ಮೇಲೆ ಸಮಾಜದಲ್ಲಿ ಸಂಪನ್ಮೂಲಗಳ ಕ್ರೋಡೀಕರಣದ ಪರಿಪಾಠ ಪ್ರಾರಂಭವಾಗಿರಬೇಕು. ಸಹಜವಾಗಿ ಅದರ ಹಿಂದೆಯೇ ಹಣವಂತರು ಬಾಹುಬಲಿಗಳನ್ನು ಬಾಡಿಗೆ ಗೂಂಡಾಗಳಂತೆ ಬಳಸಿಕೊಳ್ಳುವ ಸಂಸ್ಕೃತಿಯೂ ಶುರುವಾಯಿತೆಂದು ಕಾಣುತ್ತದೆ. ತತ್ಪರಿಣಾಮ ಸಮಾಜದ ಶಕ್ತಿ ಕೇಂದ್ರವು ಬಾಹುಬಲದಿಂದ ಶ್ರೀಮಂತಿಕೆಗೆ ಸ್ಥಿತ್ಯಂತರಗೊಂಡಿದ್ದೀತು. ‘ದುಡ್ಡಿದ್ದವನೇ ದೊಡ್ಡಪ್ಪ’ ಎಂಬ ಪರಿಸ್ಥಿತಿ ನಿರ್ಮಾಣಗೊಂಡ ಮೇಲೆ ಬಹು ಕಾಲ ಅದೇ ಸ್ಥಿತಿ ಮುಂದುವರೆದಿರಬೇಕೆಂದು ಕಾಣುತ್ತದೆ. ಆದರೆ ಕಾಲಕ್ರಮೇಣ, ಅದರಲ್ಲೂ ವಿಶೇಷವಾಗಿ ಕಳೆದೆರಡು ದಶಕಗಳಲ್ಲಿ ವಿಜ್ಞಾನ ಹಾಗೂ ತಂತ್ರ ಜ್ಞಾನಗಳ ಕ್ಷೇತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆ ಉಂಟಾಯಿತಲ್ಲ! ಸರಿಯಾಗಿ ಅದೇ ಕಾಲಕ್ಕೆ ವಿಶ್ವದ ಅನೇಕ ದೇಶಗಳಲ್ಲಿ ಆರ್ಥಿಕ ಉದಾರೀಕರಣ ನೀತಿಗಳೂ ರೂಪುಗೊಂಡವು. ಇವೆಲ್ಲದರ ಒಟ್ಟು ಪರಿಣಾಮವಾಗಿ ಇಡೀ ವಿಶ್ವವೇ ಒಂದು ಜಾಗತಿಕ ಗ್ರಾಮವಾಗಿ ಪರಿವರ್ತನೆಯಾಗಿ ಹೋಗಲಿಲ್ಲವೇ?, ಪರಿವರ್ತನೆ ಜಗದ ನಿಯಮವೆನ್ನುವುದು ಅನಾದಿಕಾಲದ ಸತ್ಯವಾದರೂ, ಈ ಆಧುನಿಕ ಪ್ರಪಂಚದಲ್ಲಿ ಬದಲಾವಣೆಯೆನ್ನುವುದು ಹಿಂದೆಂದೂ ಇಲ್ಲದ ಅತಿ ವೇಗವನ್ನು ಪಡೆದು ಬಿಟ್ಟಿತು. ನೋಡನೋಡುತ್ತಲೇ, ಬದಲಾವಣೆಯ ತೀವ್ರಗತಿಯ ಜೊತೆ ಸೆಣಸಲಾಗದವರು ಪಳೆಯುಳಿಕೆಗಳಾಗಿ ಪ್ರಗತಿ ಪಥದ ಇಕ್ಕೆಲಗಳಲ್ಲೂ ಉದುರಿಹೋಗುವಂಥಾ ಪರಿಸ್ಥಿತಿ ಉದ್ಭವವಾಗಿಹೋಯಿತಲ್ಲ!. ಬದಲಾದ ಪರಿಸ್ಥಿತಿಯಲ್ಲಿ ನಿರಂತರ ಪ್ರಗತಿಯ ವೇಗದೊಂದಿಗೆ ಯಶಸ್ವಿಯಾಗಿ ಏಗಲು ಸತತವಾದ ಜ್ಞಾನದ ನವೀಕರಣ ಅನಿವಾರ್ಯವೆಂಬತಾಗಿ ಹೋಯಿತು. ಹಿಂದೆಲ್ಲಾ ಕೇವಲ ಶ್ರೀಮಂತರನ್ನಷ್ಟೇ ಗೌರವಿಸುತ್ತಿದ್ದ ಸಮಾಜದಲ್ಲಿ ವಿದ್ಯಾವಂತರಿಗೂ ಮನ್ನಣೆ, ಆದರಗಳು ದೊರೆಯುವಂತಾಯಿತು. 

ಎಷ್ಟೇ ದುಡ್ಡಿರುವ ದೊಡ್ಡಪ್ಪನೂ ಬದುಕಿನ ಸಂಕಷ್ಟಗಳನ್ನೆದುರಿಸಲು ನಿಜವಾದ ಜ್ಞಾನಿಗಳ ಸಹಕಾರಕ್ಕಾಗಿ ಹಾತೊರೆಯುವಂತಾಗಲಿಲ್ಲವೇ? ಹಾಗಾಗಿ ವರ್ತಮಾನದಲ್ಲಿ ಜ್ಞಾನಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ ದೊರೆತು, ಸಹಜವಾಗಿ, ಜ್ಞಾನವು ಆಧುನಿಕ ಸಮಾಜದ ಹೊಸ ಶಕ್ತಿ ಕೇಂದ್ರವಾಗಿ ಸ್ಥಾಪಿತವಾಯಿತು. ಈ ಬೆಳವಣಿಗೆಯ ನೇರ ಫಲಶ್ರುತಿಯಾಗಿ ಶಿಕ್ಷಣ ಕ್ಷೇತ್ರದ ವ್ಯಾಪಕ ವ್ಯಾಪಾರೀಕರಣವೂ ಆಗಿಹೋಯಿತು. ಯಾವುದೇ ನಿರ್ದಿಷ್ಟ ಹೊಣೆಗಾರಿಕೆಯಿಲ್ಲದೇ, ಸರಕು ಪೂರೈಕೆಗೂ ಮೊದಲೇ ಶುಲ್ಕ ವಸೂಲಿಯಾಗುವ ಶಿಕ್ಷಣ ರಂಗವನ್ನು ಕಂಡ ಬಂಡವಾಳಶಾಹಿಗಳ ಬಾಯಲ್ಲಿ ಜೊಲ್ಲು ಸುರಿಯಲಾರಂಭಿಸಿತು. ಯಾವುದೇ ಬದ್ಧತೆಯಿಲ್ಲದ ಶುದ್ಧ ವ್ಯಾಪಾರೀ ಮನೋಭಾವದ ಪಟ್ಟಭದ್ರ ಶಕ್ತಿಗಳೆಲ್ಲಾ ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆಯಿಟ್ಟುಬಿಟ್ಟವು. ಕೇವಲ ಹಣ ದೋಚುವ ಏಕೈಕ ಉದ್ದೇಶ ಹೊಂದಿದ ಅಕ್ಷರದಂಗಡಿಗಳು ಎಲ್ಲೆಲ್ಲೂ ನಾಯಿಕೊಡೆಗಳಂತೆ ತಲೆಯೆತ್ತಿಬಿಟ್ಟವು. ಒಟ್ಟಾರೆ ಒಂದು ಕಾಲದಲ್ಲಿ ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಡುತ್ತಿದ್ದ ಶಿಕ್ಷಣ ರಂಗ ಬಹುತೇಕ ಗಬ್ಬೆದ್ದು ನಾರುವಂತಾಗಿ ಹೋಯಿತು.

ಈ ಸಂದರ್ಭದಲ್ಲಿ ಅಮೇರಿಕದ ಪ್ರಸಿದ್ಧ ಹಾಸ್ಯಗಾರ ಮಾರ್ಕ್ ಟ್ವೈನನ ವ್ಯಂಗ್ಯೋಕ್ತಿಯ ನೆನಪಾಗುತ್ತಿದೆ. “ I have never let my schooling interfere with my education”. (ನಾನೆಂದೂ ನನ್ನ ಶಿಕ್ಷಣದಲ್ಲಿ ನನ್ನ ಶಾಲಾ ವಿದ್ಯಾಭಾಸವನ್ನು ಹಸ್ತಕ್ಷೇಪ ಮಾಡಗೊಡಲಿಲ್ಲ) ಎಂಬ ತಮಾಷೆಯ ಈ ಮಾತು ಪ್ರಸಕ್ತ ಸನ್ನಿವೇಶವನ್ನು ನಿಭಾಯಿಸಲು ಸೂಕ್ತವಾದ ದಾರಿದೀಪದಂತಾಗಿ ಹೋಗಿದೆ! ಶಿಕ್ಷಣ ವ್ಯವಸ್ಥೆ ಹದಗೆಟ್ಟ ಮಾತ್ರಕ್ಕೆ ನಾವು ನಮ್ಮ ಕಲಿಕೆಯನ್ನು ನಿರ್ಲಕ್ಷಿಸಲಾದೀತೆ? ಅದೂ, ಈ ಜ್ಞಾನಯುಗದಲ್ಲಿ ಹೊಟ್ಟೆಪಾಡಿಗಾಗಿಯಾದರೂ ನಮ್ಮ ಜ್ಞಾನಾರ್ಜನೆ ನಮಗೆ ಅನಿವಾರ್ಯವಲ್ಲವೇ? ಈ ಹಿನ್ನಲೆಯಲ್ಲಿ ಕಲಿಕೆಯ ಕುರಿತು ಆಳವಾದ, ಉಪಯುಕ್ತ ಒಳನೋಟವನ್ನೊದಗಿಸುವ ಒಂದು ಸ್ವಾರಸ್ಯಕರ ದೃಷ್ಟಾಂತವನ್ನು ನೋಡೋಣ.

ಒಂದೂರಿನ ಪ್ರಸಿದ್ಧ ದೇಗುಲದಲ್ಲಿ ವಾಡಿಕೆಯಂತೆ ವಿಜೃಂಭಣೆಯ ರಥೋತ್ಸವ ನಡೆಯುತ್ತಿತ್ತಂತೆ. ಅಲ್ಲಿನ ಸಂಪ್ರದಾಯದಂತೆ ಆ ರಥೋತ್ಸವಕ್ಕೆಂದು ಆನೆಗಳನ್ನು ಕರೆಸಲಾಗಿತ್ತಂತೆ. ದೇಗುಲದ ಬಳಿ ಆನೆಗಳನ್ನು ಕಟ್ಟಿಹಾಕಿದ್ದ ಮಾವುತನು ಅವುಗಳಿಗೆ ಮೇವು ಹಾಕಿ ತನ್ನ ವೈಯುಕ್ತಿಕ ಕಾರ್ಯಗಳಿಗೆಂದು ಅಲ್ಲಿಯೇ ಎಲ್ಲಿಗೋ ಹೋಗಿದ್ದನಂತೆ. ಆಗ ಆ ಊರಿನ ಪ್ರಜ್ಞಾವಂತ ಪ್ರಜೆಯೊಬ್ಬ ಅಕಸ್ಮಾತ್ತಾಗಿ ಆನೆಗಳನ್ನು ಕಟ್ಟಲಾಗಿದ್ದ ಸರಪಳಿಗಳನ್ನು ಗಮನಿಸಿ, ಅಲ್ಲೊಂದು ಮಹಾ ಅಚಾತುರ್ಯವೇ ನಡೆದು ಹೋಗಿರುವುದನ್ನು ಗುರುತಿಸಿದನಂತೆ. ಅಲ್ಲಿನ ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಾವುತನು ಅಲ್ಲಿದ್ದ ಸಣ್ಣ ಮರಿಯಾನೆಯನ್ನು ಗಜಗಾತ್ರದ ಸರಪಳಿಯಿಂದ ಬಿಗಿದು, ಪಕ್ಕದಲ್ಲಿದ್ದ ಭಾರೀ ಸಲಗವನ್ನು ಒಂದು ಅತಿ ಸಪೂರವಾದ ಚೈನಿನಿಂದ ಕಟ್ಟಿಹಾಕಿ ಬಿಟ್ಟಿದ್ದಾನೆ! ಸರಪಳಿಗಳು ಅದಲು ಬದಲಾಗಿರುವುದನ್ನು ಕ್ಷಣಮಾತ್ರದಲ್ಲಿ ಗ್ರಹಿಸಿದ ಆ ಜವಾಬ್ದಾರಿಯುತ ಪ್ರಜ್ಞಾವಂತ ಪ್ರಜೆಯು ಗಾಬರಿಯಿಂದ ಅಲ್ಲೆಲ್ಲಾ ಓಡಾಡಿ ಕೊನೆಗೂ ನಾಪತ್ತೆಯಾಗಿದ್ದ ಮಾವುತನನ್ನು ಪತ್ತೆಮಾಡಿ, ಸಿಟ್ಟಿನಿಂದ “ ಏನು ಬೇಜವಾಬ್ದಾರೀ ಮನುಷ್ಯನಯ್ಯಾ ನೀನು, ಆನೆಗಳ ಸರಪಳಿಗಳು ಬದಲಾಗಿ ಹೋಗಿವೆ, ಆ ಭಾರೀ ಸಲಗವನ್ನು ಆ ಮರಿಯಾನೆಯ ಸಣ್ಣ ಚೈನಿನಿಂದ ಕಟ್ಟಿಬಿಟ್ಟಿದ್ದೀಯೆ,  ಏನೋ, ನಾನು ಸೂಕ್ತ ಸಮಯದಲ್ಲಿ ಗಮನಿಸಿದ್ದರಿಂದ ಸರಿಹೋಯಿತು, ಇಲ್ಲದಿದ್ದರೆ ಉತ್ಸವಕ್ಕೆಂದು ಇಷ್ಟೆಲ್ಲಾ ಜನ ಸೇರಿರುವಾಗ ಏನಾದರೂ ಅನಾಹುತ ಸಂಭವಿಸಿ ಪ್ರಾಣ ಹಾನಿ ಆಗಿಬಿಟ್ಟಿದ್ದರೇನು ಗತಿ? ಮೊದಲು ಬಂದು ಆ ಸರಪಳಿಗಳನ್ನು ಬದಲಿಸು” ಎಂದು ರೇಗಿದನಂತೆ. ಅದಕ್ಕೆ ಮಾವುತನು ಶಾಂತನಾಗಿ ನಗುತ್ತಾ “ಸುಮ್ನೆ ದಿಗಿಲಾಗ್ಬೇಡ ಕಣಣ್ಣೋ, ಅಂಗೇನಾಗಕ್ಕಿಲ್ಲ, ಆದ್ರೆ ನೀನ್ ಸೀದಾ ನನ್ನುಡೀಕಂಬಂದ್ ಒಳ್ಳೇ ಕೆಲ್ಸ ಮಾಡ್ದೆ ನೋಡಪ್ಪಾ. ಗಾಬ್ರೀಲಿ ನೀನೇ ಏನಾರೂ ಸರಪ್ಣಿ ಗಿರಪ್ಣಿ ಬದ್ಲಾಯಿಸ್ಬುಟ್ಟಿದ್ದಿದ್ರೆ ಮರಿ ಆನೆ ರಾಂಗಾಗಿ ಎಲ್ಲಾ ಯಡವಟ್ಟಾಗೋಗಿರೋದು, ಸದ್ಯ ದೇವ್ರು ದೊಡ್ಡೋನು” ಅಂದನು. ಆಗ ಗೊಂದಲಕ್ಕೊಳಗಾದ ಪ್ರಜ್ಞಾವಂತನು, “ಏನಯ್ಯಾ ನಿನ್ನ ಮಾತಿನ ಅರ್ಥ?” ಎಂದು ಕೇಳಲು, ಮಾವುತನು, “ನೋಡಣ್ಣಾ, ಒಂದ್ವಯ್ಸ್ ಗಂಟ ಮರಿ ಆನೇ ಪುಂಡಾಟ ತಡ್ಯಾಕಾಗಲ್ಲ, ಆಗ ಅದನ್ನ ಅದ್ಬಸ್ತ್ನಾಗಿಡ್ಬೇಕಾದ್ರೆ ಮಜಬೂತಾಗಿರೋ ಸರಪ್ಣೀನೇ ಬೇಕು. ತನ್ಸಕ್ತೀ ಎಲ್ಲಾ ಬುಟ್ ಸರಪ್ಣಿ ತುಂಡ್ ಮಾಡ್, ತಪ್ಪುಸ್ಕೋಳಕ್ ನೋಡ್ತುದೆ. ಆಮೇಲಾಮೇಲೆ ಬಲ್ಕೆ ಬಂದಂಗೆ ಆನೆ, ಇದ್ ತನ್ಕೈಲಾಗದ್ ಕೆಲ್ಸಾ ಅಂತನ್ಕಂದು ಸೋಲೊಪ್ಕಂಬುಡ್ತದೆ. ಅಂಗಾದ್ಮೇಲೆ ಸುಮ್ಕೆ ಎಸುರ್ಗೆ ಒಂದ್ಸಣ್ ಅಗ್ಗನೇ ಕಟ್ಟುದ್ರೂ  ಆನೆ  ಬಿಡುಸ್ಕೋಳೋ ಯೇಚ್ನೇನೂ ಮಾಡಕ್ಕಿಲ್ಲ, ಎಷ್ಟ್ ಇಚಿತ್ರ ಅಲ್ವಾ” ಎಂದು ವಿವರಿಸಿದನು.

ಸ್ವಲ್ಪ ವಯಸ್ಸು ಬಲಿಯುತ್ತಿದ್ದಂತೆ ಬುದ್ಧಿ, ಮೈ ಮನಸ್ಸುಗಳು ಜಡ್ಡುಗಟ್ಟಲು ತೊಡಗುವ ಈ ಪ್ರಕ್ರಿಯೆಯು ಕೇವಲ ಆನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮನುಷ್ಯನ ವರ್ತನೆಯ ವೈಖರಿಯೇನೂ ಇದಕ್ಕಿಂತ ತುಂಬಾ ಭಿನ್ನವಾಗಿಲ್ಲ. ನಮಗೆ ವಯಸ್ಸಾದಂತೆಲ್ಲಾ ನಮ್ಮ ಕಲಿಕಾ ಸಾಮರ್ಥ್ಯ ಕುಂಠಿತಗೊಳ್ಳುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಇದಕ್ಕೆ ಪುರಾವೆ ಹುಡುಕುವುದೇನೂ ಕಷ್ಟದ ಕೆಲಸವಲ್ಲ. ಉದಾಹರಣೆಗೆ ನಿಮ್ಮ ಪರಿಚಿತ ವಲಯಗಳಲ್ಲಿ ಯಾವುದಾದರೂ ಅನ್ಯ ಪ್ರದೇಶದಿಂದ ಉದ್ಯೋಗಕ್ಕಾಗಿ ವಲಸೆ ಬಂದಂತಹ ಪರ ಭಾಷಿಕ ಕುಟುಂಬವೋ ಅಥವಾ ಪರಸ್ಥಳದಿಂದ ವರ್ಗಾವಣೆಯಾಗಿ ಬಂದ ಕೇಂದ್ರ ಸರ್ಕಾರದ ನೌಕರರ ಕುಟುಂಬಗಳೋ ಇದ್ದ ಪಕ್ಷದಲ್ಲಿ, ಅಂತಹ ಕುಟುಂಬದ ಸದಸ್ಯರನ್ನು ಸ್ವಲ್ಪ ಹತ್ತಿರದಿಂದ ಗಮನಿಸಿ. ಸಾಮಾನ್ಯವಾಗಿ ಅಂಥಾ ಕುಟುಂಬಗಳ ಮಕ್ಕಳು ಹೊಸ ಪರಿಸರಕ್ಕೆ ಬಲು ಬೇಗ ಹೊಂದಿಕೊಂಡು ಕೆಲವೇ ತಿಂಗಳುಗಳಲ್ಲಿ ಸ್ಥಳೀಯ ಭಾಷೆಯನ್ನು ಸ್ಥಳೀಯರಂತೆಯೇ ನಿರರ್ಗಳವಾಗಿ ಮಾತನಾಡಲು ಕಲಿತು ಬಿಡುತ್ತಾರೆ. ಆದರೆ ಅದೇ ಮಕ್ಕಳ ಸ್ವಲ್ಪ ವಯಸ್ಸಾದ ಪೋಷಕರು ಮಾತ್ರ ಹೊಸ ಜಾಗಕ್ಕೆ ಬಂದು ವರುಷಗಳೇ ಕಳೆದರೂ ಸ್ಥಳೀಯ ಭಾಷೆಯಲ್ಲಿ ಕನಿಷ್ಟ ಸಂವಹನ ನಡೆಸಲೂ ಪರದಾಡುತ್ತಿರುತ್ತಾರೆ. ಹಾಗೆಯೇ, ಕಂಪ್ಯೂಟರ್, ಮೊಬೈಲ್ ಮುಂತಾದ ಹೊಸ ವಿದ್ಯುನ್ಮಾನ ಉಪಕರಣಗಳನ್ನು ಆಗಿನ್ನೂ ಮನೆಗೆ ತಂದಿರುತ್ತೇವಷ್ಟೆ, ಅಷ್ಟರಲ್ಲಾಗಲೇ ಅದಾವುದೋ ಮಾಯದಲ್ಲಿ ಮಕ್ಕಳಿಗೆ ಅವುಗಳನ್ನು ಬಳಸುವ ಕೌಶಲ್ಯಗಳು ಕರಗತವಾಗಿ ಬಿಟ್ಟಿರುತ್ತದೆ. ಇನ್ನೂ ನೆನ್ನೆಯಷ್ಟೇ ಬಿಡುಗಡೆಯಾದ ಹೊಸ ಚಿತ್ರಗೀತೆಯ ಸಾಹಿತ್ಯ, ಮಕ್ಕಳಿಗೆ ಒಂದೇ ದಿನದಲ್ಲಿ ಪೂರ್ಣ ಕಂಠಪಾಠವಾಗಿ ಬಿಡುವುದು ಹಿರಿಯರಿಗೊಂದು ಪವಾಡದಂತೆ ಕಂಡರೆ ಅಚ್ಚರಿಯೇನಿಲ್ಲ. ನಮ್ಮ ದೈನಂದಿನ ಪರಿಸರದಲ್ಲಿ ಇಂತಹ ವಿಷಯಗಳು ನಮ್ಮೆಲ್ಲರ ಗಮನಕ್ಕೆ ಬರುತ್ತಲೇ ಇರುತ್ತದೆ.

ಆಗಾಗ ಕೆಲವೊಮ್ಮೆ, ಸಂದರ್ಭ ಬಂದಾಗ ನಾನು ಹವ್ಯಾಸಿ ಭಾಷಣಕಾರನ ಪಾತ್ರವನ್ನೂ ನಿರ್ವಹಿಸುತ್ತಿರುತ್ತೇನೆ. ಅಂತಹ ಸಂದರ್ಭಗಳಲ್ಲಿ ಅನೇಕ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಮತ್ತಿತರ ವೇದಿಕೆಗಳಲ್ಲಿ ಯುವ ಶ್ರೋತೃಗಳನ್ನು ಕುರಿತು ಮಾತನಾಡುವಾಗ, ನಾನು ಈ ಮೇಲಿನ ಆನೆಯ ಕಥೆಯನ್ನು ಬಳಕೆ ಮಾಡಿಕೊಂಡಿರುವುದುಂಟು. ನಾನು ತಿಳಿದಂತೆ ಒಬ್ಬ ಸಹೃದಯೀ ಭಾಷಣಕಾರನು, ಈ ಕಥೆಯ ಬಳಕೆಯಿಂದ ಬಾಲ್ಯ ಹಾಗೂ ಯೌವ್ವನದಲ್ಲಿ ನಮ್ಮ ಕಲಿಕಾ ಸಾಮರ್ಥ್ಯವು ಉತ್ತುಂಗದಲ್ಲಿರುವಾಗಲೇ ಅದರ ಸಂಪೂರ್ಣ ಉಪಯೋಗ ಪಡೆಯುವಂತೆ ವಿದ್ಯಾರ್ಥಿಗಳನ್ನು ಪ್ರಚೋದಿಸಬೇಕು. ಮಾನವ ಜೀವನ ಚಕ್ರದ, “ಹುಟ್ಟು-ಬೆಳವಣಿಗೆ-ಕೊಳೆಯುವಿಕೆ-ಸಾವು” ಎಂಬ ವಿವಿಧ ಹಂತಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಕೊಡಬೇಕು. ನಮ್ಮ ಪ್ರಜ್ಞಾಪೂರ್ವಕ‘ ಪ್ರಯತ್ನದಿಂದ ನಾವು `ಬೆಳವಣಿಗೆ’ ಎಂಬ ಹಂತದ ಪರಿಣಾಮಕಾರೀ ಕಲಿಕಾ ಅವಧಿಯನ್ನು ಇನ್ನೂ ಹತ್ತಾರು ವರುಷಗಳವರೆಗೆ ವಿಸ್ತರಿಸಬಹುದೆಂದು ಹೇಳಿ ಹದಿನೆಂಟಿಪ್ಪತ್ತರ ಆಸುಪಾಸಿನ ಯುವಕರನ್ನು, ಪ್ರೇರೇಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ನಾವು ಓದಲು ಕಲಿತರೆ, ನಂತರದ ಬದುಕಿನಲ್ಲಿ ನಾವು ಕಲಿಯಲು ಓದಬೇಕೆಂಬ ಸತ್ಯವನ್ನು ತಿಳಿಹೇಳಬೇಕು. ಕಲಿಯಲು ಓದದಿದ್ದ ಮೇಲೆ ಓದಲು ಕಲಿತದ್ದೇ ವ್ಯರ್ಥವೆಂದು ಮಕ್ಕಳಿಗೆ ಮನವರಿಕೆ ಮಾಡಿ ಕೊಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಲು ಹುರಿದುಂಬಿಸಬೇಕು.          

(ಮುಂದುವರೆಯುವುದು..)

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
padma bhat
padma bhat
10 years ago

khushyyy aaytu nim baraha odi…

narayana.M.S.
narayana.M.S.
10 years ago

Thankyou, ನಿಮ್ಮ ವಿಜಯವಾಣಿಯ ಲೇಖನ ತುಂಬಾ ಚೆನ್ನಾಗಿತ್ತು ಪದ್ಮ ಅವರೆ.

Suman
Suman
10 years ago

Prastuta vartamanakke samanjasavada Lekhana… Bhal cholo barediri… samajika kalakaliya lekhana…..

narayana.M.S.
narayana.M.S.
10 years ago

ಥ್ಯಾಂಕ್ಸ್ ಸುಮನ್ ಜೀ

5
0
Would love your thoughts, please comment.x
()
x