ಆಸ್ಥಾ: ನನ್ನ ಮೆಚ್ಚಿನ ರೇಖಾಳ ‘ಗೃಹಿಣಿ’ ಪಾತ್ರ:ವಾಸುಕಿ ರಾಘವನ್

 

ನಿಮ್ಮ ಡ್ರೀಮ್ ಪಾತ್ರ ಯಾವುದು ಅಂತ ನಟಿಯರನ್ನ ಕೇಳಿ ನೋಡಿ. ಶರಪಂಜರದಲ್ಲಿ ಕಲ್ಪನಾ ಮಾಡಿದ ಪಾತ್ರ ಅಂತಾರೆ. ಇಲ್ಲ ಅಂದ್ರೆ ಜೀವನದಲ್ಲಿ ತುಂಬಾ ಕಷ್ಟ, ನೋವುಗಳನ್ನು ಅನುಭವಿಸೋ ದುರಂತ ಪಾತ್ರ ಅಥವಾ ಯಾವುದಾದರೂ ಪೌರಾಣಿಕ, ಐತಿಹಾಸಿಕ ಪಾತ್ರ ಅಂತಾರೆ. “ಥಿಯೇಟ್ರಿಕ್ಯಾಲಿಟಿ” ಗೆ ತುಂಬಾ ಅವಕಾಶ ಇರೋ ಪಾತ್ರಗಳೇ ಉತ್ತಮ ಪಾತ್ರಗಳು ಮತ್ತು ಆ ಪಾತ್ರಗಳಲ್ಲಿ ಅಭಿನಯಿಸಿದರೆ ಅದು ಆಟೋಮ್ಯಾಟಿಕ್ ಆಗಿ ಒಳ್ಳೆಯ ನಟನೆ ಅನ್ನೋ ತಪ್ಪು ಅಭಿಪ್ರಾಯ ಇದೆ. ನಿಜವಾಗಿ ತುಂಬಾ ಸವಾಲೊಡ್ಡುವ ಪಾತ್ರ ಅಂದರೆ ಹೊರನೋಟಕ್ಕೆ ಸಿಂಪಲ್ ಅನ್ನಿಸೋ, ನಮ್ಮ ನಿಮ್ಮಂತೆ ಇರುವ, ಆದರೆ ಒಳಪದರಗಳಲ್ಲಿ ಸಂಕೀರ್ಣತೆ ತುಂಬಿರುವ ಪಾತ್ರಗಳು. 

ಹಿಂದಿಯಲ್ಲಿ ರೇಖಾಳಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ ಇನ್ನೊಬ್ಬ ನಟಿ ಇಲ್ಲ. “ಖೂನ್ ಭರೀ ಮಾಂಗ್” ಅಂತಹ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರಗಳಿರಲೀ, “ಕಲಿಯುಗ್” ಮತ್ತು “ಇಜಾಜತ್” ಮುಂತಾದ ಎಂಭತ್ತರ ದಶಕದ ಪ್ಯಾರಲಲ್ ಸಿನಿಮಾ ಆಗಿರಲೀ, “ಉಮ್ರಾವ್ ಜಾನ್” ಹಾಗು “ಉತ್ಸವ್” ತರಹದ ಪಿರಿಯಡ್ ಮೂವಿ ಇರಲೀ – ಯಾವುದಕ್ಕಾದರೂ ಸರಿ ಹೊಂದುವ ನಟಿ ರೇಖಾ. ಆದರೆ ನನಗೆ ರೇಖಾ ತುಂಬಾ ಇಷ್ಟ ಆಗೋದು ಬಹಳ ಸಾಧರಣ ಅನ್ನಿಸೋ ಗೃಹಿಣಿ ಪಾತ್ರಗಳಿಗೆ ಒಂದು ನಂಬಲರ್ಹ, ಮಾನವೀಯ,  ಮನಮುಟ್ಟುವ ಆಯಾಮ ಕೊಡುವುದರಲ್ಲಿ – ಉದಾಹರಣೆ ಅಂದರೆ ನನ್ನ ಫೇವರಿಟ್ ಚಿತ್ರಗಳಲ್ಲಿ ಒಂದಾದ “ಆಸ್ಥಾ”. ಪಾಪ, ಎಲ್ಲಾ ಅಸಾಧಾರಣ ಸುಂದರಿಯರಿಗೆ ಆಗೋ ಅನ್ಯಾಯ ರೇಖಾಗೂ ಆಗಿದೆ. “ಈಗಲೂ ಎಷ್ಟು ಚನ್ನಾಗಿದ್ದಾಳೆ ನೋಡಿ” ಅನ್ನೋ ಅರ್ಧದಷ್ಟು ಜನ “ಎಂಥಾ ಅದ್ಭುತ ನಟಿ ಆಲ್ವಾ” ಅಂತ ಹೇಳಲ್ಲ!

ಆಸ್ಥಾ 

ಬಸು ಭಟ್ಟಾಚಾರ್ಯ ನಿರ್ದೇಶನದ 1997ರ ಈ ಚಿತ್ರ ಮಧ್ಯವಯಸ್ಸಿನ ದಾಂಪತ್ಯ ಜೀವನದ ಅತ್ಯಂತ ನೈಜ ಚಿತ್ರಣ. ಗಂಡಹೆಂಡತಿ ಸಂಬಧದ ಡೈನಾಮಿಕ್ಸ್ ಬಗ್ಗೆ ಕಾಣಸಿಗೋ ಈ ನಿರ್ಭಿಡ ಒಳನೋಟ ಬಹಳ ಅಪರೂಪ. ಅಮರ್ ಕಾಲೇಜ್ ಪ್ರೊಫೆಸರ್. ಹೆಂಡತಿ ಮಾನಸಿ ಗೃಹಿಣಿ. ಇವರಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ. ಅರ್ಥಿಕ ಸಂಕಷ್ಟಗಳೇನೂ ಇಲ್ಲ, ಆದರೆ ಲಕ್ಷುರಿಗೆ ಬೇಕಾಗೋ ಅಷ್ಟು ಹಣ ಇಲ್ಲ. ಅಮರ್ ಮಾನಸಿ ಮಧ್ಯೆ ತುಂಬಾ ಅನ್ಯೋನ್ಯತೆ ಇದೆ, ಲೈಂಗಿಕ ಜೀವನ ಕೂಡ ಚನ್ನಾಗೇ ಇದೆ. ಒಂದು ದಿನ ಮಗಳಿಗೆ ಒಳ್ಳೆಯ ಶೂ ಕೊಂಡುಕೊಳ್ಳಲು ಹೋಗುವ ಮಾನಸಿ ಅದರ ದುಬಾರಿ ಬೆಲೆ ಕೇಳಿ ಕೊಳ್ಳದಿರಲು ನಿರ್ಧರಿಸುತ್ತಾಳೆ. ಆ ಸಮಯದಲ್ಲಿ ಅಲ್ಲೇ ಇದ್ದ ಹೆಂಗಸೊಬ್ಬಳು ಬಲವಂತ ಮಾಡಿ ಶೂ ಕೊಡಿಸುತ್ತಾಳೆ ಇವಳಿಗೆ. ನಂತರ ತಿಳಿಯುವುದು ಅವಳು ಒಬ್ಬ ಹೈ ಸೊಸೈಟಿ ‘ಪಿಂಪ್’ ಅಂತ. ಅವಳ ಪ್ರಭಾವಕ್ಕೆ ಒಳಗಾಗಿ ಮಾನಸಿ ವ್ಯಭಿಚಾರಕ್ಕೆ ಇಳಿಯುತ್ತಾಳೆ. 

ಒಂದು ದೀರ್ಘಕಾಲದ ದಾಂಪತ್ಯದಲ್ಲಿನ ಸಲುಗೆ, ಅದರ ಜೊತೆಯಲ್ಲೇ ಬರೋ ಏಕತಾನತೆ – ಈ ವೈರುಧ್ಯವನ್ನು ರೇಖಾ ಬಿಂಬಿಸಿರುವ ರೀತಿ ನಿಜಕ್ಕೂ ಅಮೋಘ. ಕೇವಲ ಒಂದು ಶೂ ಇಂದ ಶುರು ಆಗುವ ಈ ಪಯಣ “ಕನ್ಸ್ಯೂಮರಿಸ್ಟಿಕ್” ಪ್ರಪಂಚದಲ್ಲಿ ಹೇಗೆ ಎಲ್ಲರೂ “ವಸ್ತು”ಗಳಾಗಿ ಬದಲಾಗಿ ಹೋಗ್ತಾರೆ ಅಂತ ಹೇಳುತ್ತೆ. ವ್ಯಭಿಚಾರಕ್ಕೆ ಇಳಿದ ಮೇಲೆ ಈ ಅನುಭವದಿಂದ ತಾನು ಲೈಂಗಿಕ ಸಂತೃಪ್ತಿಯನ್ನು ಪಡೆಯುತ್ತಿದ್ದೇನೆ ಅನ್ನುವ ಅಚ್ಚರಿ ಒಂದು ಕಡೆ, ತಪ್ಪಿತಸ್ಥ ಭಾವನೆಯ ಭಾರ ಇನ್ನೊಂದೆಡೆ. ಜೊತೆಗೆ ಸಿಗುತ್ತಿರುವ ಆರ್ಥಿಕ ಸ್ವಾತ್ರಂತ್ಯ ಅವಳನ್ನು ಈ ಸುಳಿಯಿಂದ ಹೊರಬರಲು ಬಿಡೋದಿಲ್ಲ. ಮನಸ್ಸಿನಾಳದ ಭಾವನೆಗಳು, ಸಮಾಜದ ನಿರೀಕ್ಷೆಗಳ ನಡುವೆ ನಿರಂತರ ಯುದ್ಧ. 

ಕಡೆಗೆ ಅಮರ್ ವಿದ್ಯಾರ್ಥಿನಿ ಒಬ್ಬಳ ಕೈಯಲ್ಲಿ ಸಿಕ್ಕಿಬೀಳೋ ಮಾನಸಿ ತನ್ನೆಲ್ಲಾ ಭಾವನೆಗಳನ್ನೂ, ತುಮುಲಗಳನ್ನೂ ಅವಳ ಮುಂದೆ ತೆರೆದಿಡುತ್ತಾಳೆ. ಅಷ್ಟು ಕ್ಲೋಸ್ ಆಗಿರೋ ಗಂಡನ ಬಳಿ ಹೇಳಲಾಗದ ಎಷ್ಟೋ ವಿಷಯಗಳನ್ನ ಆಲ್ಮೋಸ್ಟ್ ಅಪರಿಚಿತಳಾದ ಗಂಡನ ವಿದ್ಯಾರ್ಥಿನಿ ಹತ್ತಿರ ಹೇಳಿಕೊಳ್ಳುತ್ತಾಳೆ. ಸಂಸಾರದಲ್ಲಿ ಮೊದಮೊದಲು ಎಲ್ಲವನ್ನೂ ಹಂಚಿಕೊಳ್ಳುತ್ತೇವೆ, ಬರಬರುತ್ತಾ ಒಬ್ಬರ ಜೊತೆ ಇನ್ನೊಬ್ಬರು ಕೇವಲ ತಮ್ಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತೀವಿ ಅಷ್ಟೇ ಎಂದು ನಿಟ್ಟುಸಿರು ಬಿಡುತ್ತಾಳೆ. 

ಚಿತ್ರದ ಕೊನೆಯಲ್ಲಿ ಬರೋ ಒಂದು ಮನೋಜ್ಞ ದೃಶ್ಯ ಇದೆ. ಮಾನಸಿ ಭಾವನೆಗಳ ತೊಯ್ದಾಟದಿಂದ ಬಳಲಿ ಹಾಸಿಗೆಯ ಮೇಲೆ ಸುಸ್ತಾಗಿ ಮಲಗಿರುತ್ತಾಳೆ. ಮನೆಗೆ ಬರುವ ಅಮರ್ ಹೇಗಿದ್ದೀಯ ಅಂತ ವಿಚಾರಿಸುತ್ತಾನೆ. ಏನೋ ಸ್ವಲ್ಪ ಹುಷಾರಿಲ್ಲ ಅನ್ನುತ್ತಾಳೆ ಮಾನಸಿ. ಏನಾದ್ರೂ ಔಶಧಿ ತಗೋ ಅಥವಾ ಇನ್ನೇನಾದ್ರೂ ಬೇಕಾ ಅಂತ ಕೇಳ್ತಾನೆ ಅಮರ್. ಮಾನಸಿ ಏನೂ ಬೇಡ ಅಂದಾಗ ಅವಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ ಅಂತ ಅಮರ್ ರೂಮಿಂದ ಹೊರನಡಿತಾನೆ. ಮಾನಸಿ ಮುಖದಲ್ಲಿ ವಿವರಿಸಲಾಗದ ಎಷ್ಟೋ ಭಾವನೆಗಳು. ತನ್ನ ಬಗ್ಗೆ ವಿಚಾರಿಸಿಕೊಂಡ ಗಂಡನ ಬಗ್ಗೆ ಸಂತಸ ಇತ್ತಾ, ಅಥವಾ “ಏನೂ ಬೇಡ” ಅಂದ ಮೇಲೂ ಪಕ್ಕ ಕುಳಿತು ಇನ್ನೊಮ್ಮೆ ಕೇಳಬೇಕಿತ್ತು ಅನ್ನೋ ಚಡಪಡಿಕೆ ಇತ್ತಾ, ಗೊತ್ತೇ ಆಗೋದಿಲ್ಲ. 

‘ಗೃಹಿಣಿ’ ಪಾತ್ರಗಳನ್ನು ಇಷ್ಟು ನ್ಯಾಚುರಲ್ ಆಗಿ ನಿರ್ವಹಿಸುವ ರೇಖಾ ಎಂಬ ಸದಾಸುಂದರಿಗೆ ನಿಜಜೀವನದಲ್ಲಿ ಅದೇ ತರಹದ ಅವಕಾಶ ಸಿಗದೇ ಹೋಗಿದ್ದು ಎಂಥ ದುರಂತ ಆಲ್ವಾ?

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
hipparagi Siddaram
hipparagi Siddaram
11 years ago

ಜೀವನವೇ ಹಾಗೆ….ಬಯಸಿದ್ದು ನಿಜ ಜೀವನದಲ್ಲಿ ಕೆಲವೊಮ್ಮೆ ಸಿಗೋದೆ ಇಲ್ಲ….ಅಂತಹ ದುರಂತ ನಟಿಯರ ಸಾಲಿನಲ್ಲಿ ನಿಲ್ಲುವ ಚಿರಯೌವ್ವನದ ಸ್ನಿಗ್ದ ಸುಂದರಿ ರೇಖಾಳಿಗೆ ಆಗಿದ್ದು ಸಹ ಬೆಂಗಾಡಿನ ಜೀವನವೇ ಸರಿ !

Santhoshkumar LM
11 years ago

good one!!

2
0
Would love your thoughts, please comment.x
()
x