ಅಂತರಾಗ್ನಿ (ಭಾಗ ೬): ಕಿರಣ್. ವ್ಹಿ

ಇಲ್ಲಿಯವರೆಗೆ

ರೂಮಿಗೆ ಬಂದ ಹರಿ, ಹೊಸ ಅನುಭವದಲ್ಲಿ ತೇಲಾಡುತ್ತಿದ್ದ. ಒಂದು ಬಗೆಯ ಎಲ್ಲದರಿಂದ ವಿಮುಕ್ತನಾದಂತಹ ಭಾವನೆ ಅವನಲ್ಲಿ ಮೂಡಿತ್ತು. ಅದೇ ವೇಳೆಗೆ, ಗೋಪಾಲ ವರ್ಮಾರನ್ನು ಎಷ್ಟೊಂದು ಬೈಕೊಂಡು ಬಿಟ್ಟೆ ಅಂತ ಬೇಜಾರಾದ. ನಿಜವಾಗಿಯೂ, ವರ್ಮಾರವರು ಅವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದರು. ಅದು ಹೇಳಲಾಗದಷ್ಟು ಗಾಢವಾದ ಪರಿಣಾಮ. ಆದರೂ, ಒಂದು ಮೂಲೆಯಲ್ಲಿ ಹಳೆಯ ನೆನಪು ಅವನನ್ನು ಕಾಡುತ್ತಿತ್ತು. ಒಂದೇ ದಿನಕ್ಕೆ ಹೋಗುವುದಿಲ್ಲ ನೋಡಿ, ಮತ್ತೆ ಅದೇ ಮೂಡ್ ಗೆ ಹೋಗಿಬಿಟ್ಟರೆ ಕಷ್ಟ ಎಂದು, ಬಿಯರ್ ಬಾಟಲ್ ಕೈಗೆತ್ತಿಕೊಂಡು ಕುಡಿಯುತ್ತ ಕುಡಿಯುತ್ತ ಬೇರೆ ಲೋಕಕ್ಕೆ ಹೋಗಿಬಿಟ್ಟ. ಹಾಗೆ ಮಲಗಿಬಿಟ್ಟ. ಎಲ್ಲವೂ ಟೀಪಾಯ್ ಮೇಲೆ ಹಾಗೆ ಇತ್ತು. ಚಳಿಯಾದದ್ದು ಕೂಡ ಗೊತ್ತಾಗಲಿಲ್ಲ ಅವನಿಗೆ. ಹಾಗೆ ಮಲಗಿಬಿಟ್ಟಿದ್ದ. ಬೆಳಗ್ಗೆ ಎಚ್ಚರವಾದದ್ದು ಒಮ್ಮೆಲೆ ವರ್ಮಾವರು ಬಾಗಿಲು ತಟ್ಟಿದಾಗ.

” ಹರಿ ಹರಿ ಎದ್ದೇಳು ಏಳು ಗಂಟೆ ಆಯ್ತು.” ಎಂದು ಜೋರಾಗಿ ಬಾಗಿಲನ್ನು ಬಾರಿಸತೊಡಗಿದರು. ದಡಕ್ಕನೆ ಎದ್ದು ಬಾಗಿಲು ತೆಗೆದ.

” ಓಹೋ ಇನ್ನೂ ಮಲಗಿದ್ದೀಯಾ.” ಎಂದು ಒಳಗೆ ಬಂದರು. ಬಾಟಲ್ಗಳು, ಚಿಪ್ಸ್ ಎಲ್ಲವೂ ಅಲ್ಲೆ ಬಿದ್ದಿದ್ದನ್ನು ನೋಡಿ, ” ನೆನ್ನೆ ಪಾರ್ಟಿ ಜೋರಾದಂಗಿದೆ. ನನ್ನನ್ನು ಕರೆಯೊದಿಲ್ವ.” ಎನ್ನುತ್ತಾ ಕಣ್ಣು ಹೊಡೆದರು.

” ಸಾರಿ ಅಂಕಲ್ ಲೇಟಾಯ್ತು, ಫ್ರೆಶ್ ಆಗಿ ಬರ್ತೀನಿ. ಟೆನ್ ಮಿನಿಟ್ಸ್ ಅಷ್ಟೇ.”

” ಓಕೆ ಓಕೆ, ವೇಟ್ ಮಾಡ್ತೀನಿ.” ಎಂದು ಹೊರಗಡೆ ಸಣ್ಣಪುಟ್ಟ ಎಕ್ಸಸೈಜ್ ಮಾಡುತ್ತಾ ನಿಂತರು. ಹತ್ತು ನಿಮಿಷದ ನಂತರ ಬಂದ ಹರಿ.

” ನಡಿರಿ ಅಂಕಲ್. ನಾನ್ ರೆಡಿ.”

” ಎಸ್.” ಎನ್ನುತ್ತ ನಡೆದರು.

” ನೆನ್ನೆ ಜಾಗಿಂಗ್ ಬದಲು ಬರೀ ಟಾಕಿಂಗ್ ಆಗಿದೆ. ಇವತ್ತು ಸ್ವಲ್ಪ ಜಾಸ್ತಿ ಜಾಗ್ ಮಾಡ್ಬೇಕು ಹರಿ.” ಎನ್ನುತ್ತಾ ಮುಂದೆ ನಡೆದರು. ಹಿಂಬಾಲಿಸಿದ ಹರಿ. ಒಂದೆರಡು ಕಿಲೋಮೀಟರ್ ಜಾಗ್ ಮಾಡಿದ ನಂತರ ಸ್ವಲ್ಪ ಹೊತ್ತು ಕುಳಿತರು. ಆಗ ಹರಿಯೇ ಮಾತನ್ನು ಪ್ರಾರಂಭಿಸಿದ.

” ಅಂಕಲ್ ನಿಮ್ಮನ್ನ ಒಂದು ಮಾತು ಕೇಳಲಾ?”

” ಓಹ್ ಎಸ್. ಕೇಳು ಹರಿ.”

” ಅಲ್ಲ ಅಂಕಲ್, ಕುಡಿಯುವುದು ತಪ್ಪು ಅಂತ ಗೊತ್ತಿದ್ದರೂ ನೀವ್ಯಾಕೆ ಒಂದು ಮಾತು ಕೂಡ ಹೇಳಲ್ಲ ನಂಗೆ?  ಅದರ ಬಗ್ಗೆ ಏನು ಮಾತನಾಡಲಿಲ್ಲ ನೀವು. ಯಾಕೆ?”

” ನೋಡು, ಈಗ ನಿನ್ನಲ್ಲೇ ಆ ತಪ್ಪಿತಸ್ಥ ಭಾವನೆ ಮೂಡಿದೆ. ಒಬ್ಬ ಮನುಷ್ಯನಿಗೆ ತನ್ನ ತಪ್ಪಿನ ಅರಿವಾದಗ ಕಲಿಯುವ ಪಾಠವನ್ನು ಬೇರೆ ಯಾರು ಕಿವಿ ಹಿಂಡಿ ಕಲಿಸಿದರು ಕಲಿಯಲಾರ. ಅದಕ್ಕೆ ಸುಮ್ಮನಿದ್ದೆ ಹರಿ.”

” ಸಾರಿ ಅಂಕಲ್. ನಿನ್ನೆ ನನ್ನನ್ನು ಕಂಟ್ರೋಲ್ ಮಾಡಿಕೊಳ್ಳೋಕೆ ಆಗಲಿಲ್ಲ.” ಎನ್ನುವಾಗ ಹರಿಯ ಮಾತಿನಲ್ಲಿ ಅಳುಕಿತ್ತು.

” ನನಗ್ಯಾಕೆ ಸಾರಿ ಕೇಳ್ತೀಯಾ. ನಿನಗೆ ನೀನೆ ಕೇಳ್ಕೋ. ಕಂಟ್ರೋಲ್ ಮಾಡ್ಕೋ ಹರಿ. ಇಷ್ಟೆಲ್ಲಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಿಕ್ಕ ವಯಸ್ಸಿನಲ್ಲಿ ಏನು ಗೊತ್ತಾಗುವುದಿಲ್ಲ, ಮುಂದೆ ಪಶ್ಚಾತ್ತಾಪ ಪಡಬೇಕಾದೀತು.”

” ಆಯ್ತು ಅಂಕಲ್. ಸಾರಿ ಇನ್ಮೇಲೆ ಹೀಗೆಲ್ಲ ಆಗಲ್ಲ”

” ಇರ್ಲಿ ಬಿಡು ಹರಿ. ಮತ್ತೇನು ಸಮಾಚಾರ?”

” ಅಂದ್ಹಾಗೆ ಅಂಕಲ್, ನಿಮ್ಮ ಸ್ಟಡಿ ಪ್ರಕಾರ ಮನುಷ್ಯ ಯಾಕೆ ಆಲ್ಕೋಹಾಲಿಕ್ ಆಗ್ತಾನೆ?”

” ನೋಡು ಹರಿ, ಅಲ್ಕೋಹೊಲಿಕ್ ಆಗೋದು ಬಿಡೋದು ಎಲ್ಲಾ ಒಬ್ಬ ಮನುಷ್ಯನ ಮೇಲೆ ಅವಲಂಬಿತವಾಗಿರುತ್ತೆ. ಆಲ್ಕೋಹಾಲಿಕ್ ಬೆವರೇಜಸ್ ಗಳನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಳಸುವುದು ರೂಢಿ. ಅಲ್ಲಿಯ ತಡೆಯಲಾರದ ಚಳಿಯಿಂದ ಕಾಪಾಡಿಕೊಳ್ಳಲು ಈ ವಿಧಾನವನ್ನು ಕಂಡುಕೊಂಡಿರಬಹುದು ಅನ್ಸತ್ತೆ. ನಮ್ಮ ದೇಶದಲ್ಲಿ ಕೇವಲ ಮತ್ತಿನಲ್ಲಿ ತೇಲಾಡುವ ಬಳಸುತ್ತೇವೆ. ಮೊದಲಿನಿಂದಲೂ ಇದರ ಬಳಕೆ ಉಂಟು ಬಿಡು. ಅಪರೂಪಕ್ಕೆ ಒಂದು ಸಾರಿ ಅಲ್ಕೋಹಾಲನ್ನು ಸೇವಿಸಿದರೆ ನಮ್ಮ ದೇಹಕ್ಕೆ ಒಳ್ಳೆಯದೇ. ಆದರೆ ಮಿತಿ ಮೀರಿ ಕುಡಿದರೆ ರೋಗಕ್ಕೆ ತುತ್ತಾಗುತ್ತವೆ ಅಷ್ಟೇ. ಎಚ್ಚರಿಕೆಯಿಂದ ಸೇವಿಸಬೇಕಾದದ್ದು ನಮ್ಮ ನಮ್ಮ ವಿವೇಚನೆಗೆ ಬಿಟ್ಟದ್ದು.”

” ಅಲ್ಲ ಅಂಕಲ್, ನಾವು ಅಂದ್ರೆ ಯೂತ್ಸ, ನಾನಾ ವಿಧದ ತೊಂದರೆಗಳನ್ನು ದೂರಮಾಡಲು, ಕುಡಿತ, ಸಿಗರೇಟ್ ಅಥವಾ ಇನ್ಯಾವುದೇ ಚಟಕ್ಕೆ ದಾಸರಾಗುತ್ತವೆ. ಇನ್ನು ಹಲವರು ಶೋಕಿಗಾಗಿ ಚಟಗಳಿಗೆ ದಾಸರಾಗುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?”

” ನೀನೆ ಹೇಳಿದಂತೆ, ನಮ್ಮಲ್ಲಿ ಎರಡು ಪ್ರಕಾರದ ಚಟಗಾರ ನೋಡಲು ಸಿಗುತ್ತಾರೆ. ಮೊದಲನೆಯ ಗುಂಪಿನವರು ತಮ್ಮ ನೋವೆ ದೊಡ್ಡದು ಹಾಗೂ ಅದನ್ನು ಮರೆಯಲು ನಾನು ಚಟಗಳು ಸಹಕಾರಿಯಾಗುತ್ತವೆ ಎಂದು ನಂಬಿದವರು. ಇಂಥವರನ್ನು ಮೂರ್ಖರೆಂದೆ ಕರೆಯುತ್ತೇನೆ. ಜಗತ್ತಿನಲ್ಲಿ ಎಲ್ಲ ಮನುಷ್ಯರಿಗೂ ದುಃಖವೆಂಬುದು ಇದ್ದುದೆ. ಇದರಿಂದ ಹೊರಬರಬೇಕೆ ವಿನಃ ಈ ಬಗೆಯ ಚಟಗಳನ್ನು ಅಂಟಿಸಿಕೊಳ್ಳಬಾರದು. ಚಟದಿಂದ ಎಲ್ಲವನ್ನು ಮರೆಯಬಹುದು, ಎಲ್ಲ ದುಃಖಗಳು ಕಣ್ಮರೆಯಾಗುತ್ತವೆ ಎಂದೇ ನಂಬುತ್ತಾರೆ. ಇದು ಅವರ ಮುಟ್ಟಾಳತನ. ಅಮಲಿನಿಂದ ಕೇವಲ ಆಹ್ಲಾದವನ್ನು ಅನುಭವಿಸಬಹುದು. ಎಲ್ಲವನ್ನು ಅಮಲಿನಲ್ಲಿ ತೇಲಿಬಿಟ್ಟು, ನನ್ನ ಕಷ್ಟಗಳನ್ನೆಲ್ಲ ಮರೆಯುತ್ತಿದ್ದೇನೆ ಎಂದು ಅಂದುಕೊಳ್ಳಬಹುದು. ಅದು ಕೇವಲ ಕ್ಷಣಿಕ. ಅಮಲಿನಿಂದ ಹೊರ ಬಂದ ನಂತರ ಯಥಾಸ್ಥಿತಿಗೆ ಮರಳುತ್ತೇವೆ ಎನ್ನುವುದನ್ನು ಅರಿತಿದ್ದರೂ ಇಂತಹ ಕೆಟ್ಟ ಕೆಲಸಗಳನ್ನು ಮಾಡಿ ಚಟಕ್ಕೆ ದಾಸರಾಗುತ್ತಾರೆ. ಇದು ಮುಂದೆ ಬೆಳೆಯುತ್ತಾ ಬಿಡಲಾಗದಂತಹ ಹಂತಕ್ಕೆ ತಲುಪುತ್ತದೆ. ಚಟವನ್ನು ಬಿಟ್ಟರೆ ಸತ್ತೆ ಹೋಗುತ್ತೇನೆಂಬ ಭಾವನೆ ಅವರಲ್ಲಿ ಮೂಡಿಬಿಡುತ್ತದೆ. ಇನ್ನು ಎರಡನೆಯ ಗುಂಪಿನವರು ಯುವಕರೇ ಆಗಿರುತ್ತಾರೆ. ಇವರು ಅದರಿಂದ ಏನಾಗುತ್ತದೆ, ಅದರ ಅನುಭವ ಹೇಗಿರುತ್ತದೆ ಎಂದು ನೋಡಲು ಇಂತಹ ದುಸ್ಸಾಹಸಕ್ಕೆ ಕೈ ಹಾಕಿ ಚಟಗಳನ್ನು ಅಂಟಿಸಿಕೊಂಡು, ಕೊನೆಗೆ ಬಿಟ್ಟು ಬದುಕಲಾಗದಂತಹ ಸ್ಥಿತಿಗೆ ಹೋಗಿಬಿಡುತ್ತಾರೆ. ಅವರ ಎಕ್ಸ್ಪೀರಿಮೆಂಟಲ್ ಮೈಂಡ್ ಸೆಟ್ ದೊಡ್ಡ ಶತ್ರುವಾಗಿಬಿಡುತ್ತದೆ ಈ ಹಂತದಲ್ಲಿ. ಇವರನ್ನೆಲ್ಲ ಮೊದಲಿನ ಹಾಗೆ ಮಾಡಲು ತುಂಬಾ ಶ್ರಮ ಪಡಬೇಕಾದೀತು. ನೀನು ಅಂತಹ ಅಪಾಯಕಾರಿ ಹಂತಕ್ಕೆ ತಲುಪಬಾರದು ಎನ್ನುವುದು ನನ್ನ ಆಶಯ. ನಿನ್ನಲ್ಲಿರುವ ಕೆಟ್ಟ ಗುಣಗಳನ್ನು, ಒಳ್ಳೆಯ ಗುಣಗಳನ್ನಾಗಿ ಪರಿವರ್ತಿಸುವಲ್ಲಿ ಕಾರ್ಯಪ್ರವೃತ್ತನಾಗು. ನಿನ್ನ ಜೀವನದಲ್ಲಿ ಕಳೆದು ಹೋದುದೆಲ್ಲ ಸಿಗುತ್ತದೆ. ಅನೂಷಾ ಸಿಗಲ್ಲ ಮತ್ತೆ….ಹ್ಹ….ಹ್ಹ..” ಎಂದು ಛೇಡಿಸುವಂತೆ ನಕ್ಕರು ವರ್ಮಾ. ಅವರಿಗೆ ಗೊತ್ತಿತ್ತು ಈ ಹಂತದಲ್ಲಿ ಅವನು ಮನಸ್ಸು ಅದನ್ನೆಲ್ಲ ಮರೆಯಲು ಪ್ರಯತ್ನಿಸುತ್ತಿದ್ದೆ. ಈಗ ಎಷ್ಟೊಪಟ್ಟು ಅದನ್ನು ಸಾಧಿಸಿಯೂ ಬಿಟ್ಟಿದ್ದ ಎಂದು.

” ಹ್ಹ…..ಹ್ಹ… ಅದು ನನಗೆ ಬೇಕಾಗಿಲ್ಲ ಅಂಕಲ್.” ಎನ್ನುತ್ತಲೇ ಇಬ್ಬರು ಮುಂದೆ ಸಾಗಿದರು.

” ಏನು ಹರಿ ಸೈಕಾಲಜಿ ಮೇಲೆ ತುಂಬಾನೇ ಇಂಟರೆಸ್ಟ್ ಬಂದಹಾಗಿದೆ…?”

” ಹೌದು ಅಂಕಲ್, ನಿಮ್ಮ ವ್ಯಾಖ್ಯಾನ, ನೀವಾಡುವ ಒಂದೊಂದು ಮಾತು ಕೂಡ ನಿಮ್ಮತ್ತ ಸೆಳೆಯುತ್ತವೆ. ಇನ್ನು ನಿಮ್ಮ ವಿಷಯದ ಕಡೆಗೆ ಸೆಳೆಯುವುದಿಲ್ಲವೆ?”

” ನನ್ನಲ್ಲೇನಿದೆ ಹರಿ ಎಲ್ಲ ವಿಷಯದ ಮಹಿಮೆ. ಎಂಥವರನ್ನೂ ಬೆರಗುಗೊಳಿಸುತ್ತದೆ. ಅದರ ಶಕ್ತಿ ಇದು”

” ಹೌದು ಅಂಕಲ್. Psychology is a wonderful subject” ಈ ಉದ್ಗಾರದ ನಂತರ ಸಣ್ಣ ಗ್ಯಾಪ್ ಕೊಟ್ಟು, ” ಅಂಕಲ್ ನಂಗೆ ಇನ್ನೊಂದಿಷ್ಟು ವಿಷಯಗಳನ್ನ ಅರ್ಥ ಮಾಡಿಸಬೇಕು ನೀವು.”

” ಯಾರ್ ಬೇಡ ಅಂತಾರೆ ಕೇಳು ಪ್ರಶ್ನೆಗಳನ್ನ.”

” ಓಕೆ ಅಂಕಲ್. ನನಗೆ ಈ ‘ನಾನು’ ಎನ್ನುವುದರ ಬಗ್ಗೆ ಸ್ವಲ್ಪ ವಿವರಣೆ ಕೊಡಿ. ನೆನ್ನೆ ಹೇಳಿದ್ದು ಅಷ್ಟೊಂದು ಕ್ಲಿಯರ್ ಆಗಿಲ್ಲ.”

” ಕೇಳು ಹರಿ. ‘ನಾನು’ ಅನ್ನೋದು ಬೇರೇನು ಅಲ್ಲ, ಅದೊಂದು ವ್ಯಕ್ತಿತ್ವ. ಆ ವ್ಯಕ್ತಿತ್ವದಲ್ಲಿ  ಹಲವಾರು ಗುಣಗಳು ಸೇರಿಕೊಂಡಿರುತ್ತವೆ. ಅದು ಪ್ರಮುಖ ಎರಡು ಅಂಶಗಳಿಂದ ಬೆಳೆದು ದೊಡ್ಡದಾಗಿ ಅಸ್ತಿತ್ವವನ್ನು ಪಡೆದಿರುತ್ತದೆ. ಅಂದರೆ ನೆನ್ನೆ ಹೇಳಿದಂತೆ ಸಣ್ಣ ವಯಸ್ಸಿನಿಂದ ಆಗುವ ಎಲ್ಲ ಅನುಭವಗಳನ್ನು ಸೆರೆಯಲ್ಲಿ ಇಟ್ಟುಕೊಂಡು, ಅದರಂತೆ ಕೆಲವೊಂದು ಗುಣಗಳು, ವಿಚಾರಧಾರೆಗಳು ಇತ್ಯಾದಿ ಮೂಡುತ್ತವೆ. ಇನ್ನು ಇದಕ್ಕೆ ಅಡಿಪಾಯ ಎಂದೇ ಹೇಳಬಹುದಾದ ಅಂಶವೆಂದರೆ, ಅದು ಒಬ್ಬ ವ್ಯಕ್ತಿಯ ಜೀನ್ಸ್ ಗಳ ಮೂಲಕ ಬಂದದ್ದು ಎನ್ನಬಹುದು. ಇದನ್ನು “Evolutionary memory” ಎಂದು ಹೆಸರಿಸುತ್ತೇವೆ. ಅಂದರೆ ಹುಟ್ಟುತ್ತಲೇ ಕೆಲವೊಂದಿಷ್ಟು ಗುಣಗಳು ನಮ್ಮಲ್ಲಿ ಅಸ್ತಿತ್ವವನ್ನು ಪಡೆದಿರುತ್ತವೆ. ಈ ಅಡಿಪಾಯದ ಮೇಲೆ ಜೀವನಾನುಭವದ ಅನುಸಾರ ವ್ಯಕ್ತಿತ್ವ ರೂಪುಗೊಳ್ಳುತ್ತ ಹೋಗುತ್ತದೆ.

Evolutionary memory ಎಂದು ಹೇಳಿದೆನಲ್ಲ, ಇದು ಎಂತಹ ಗುಣವನ್ನು ಅಸ್ತಿತ್ವಕ್ಕೆ ತರುತ್ತದೆ ಎಂದರೆ ‘ನಾನು’ ಎನ್ನುವುದು ಪ್ರಬಲವಾಗಿ ಬೆಳೆಯಬೇಕು, ತನ್ನ ಅಸ್ಥಿತ್ವವನ್ನು ಗಟ್ಟಿಗೊಳಿಸಬೇಕು ಎಂಬ ಮಹದಾಸೆಯನ್ನು ಬಿತ್ತುತ್ತದೆ. ಹೀಗಾಗಿ ಈ ಅಡಿಪಾಯದ ಮೇಲೆ ನಿರ್ಮಿತವಾದಂತಹ ಎಲ್ಲಾ ಗುಣಗಳು ಅದರ ಅನುಸಾರವೇ ಅಥವಾ ಅದೇ ಹಾದಿಯಲ್ಲಿ ನಡೆಯುವಂತಹವೆ ಆಗಿರುತ್ತವೆ. ನೂರರಲ್ಲಿ ತೊಂಭತ್ತೊಂಭತ್ತು ಜನ ಈ ‘ನಾನು’ ವಿನ ಪೋಷಣೆಯಲ್ಲಿ ತೊಡಗಿರುತ್ತಾರೆ. ಇನ್ನು ಉಳಿದ ಒಬ್ಬರು ಅಥವಾ ಇಬ್ಬರು ‘ನಾನು’ ವಿನ ಎಲ್ಲೆಗಳನ್ನು ಮೀರಿ ಬೆಳೆಯುತ್ತಾರೆ. ಈ ಮನೋಭಾವನೆ ಒಂದು ಪ್ರಾಯದಲ್ಲಿ ತುಂಬಾನೇ ಹೆಚ್ಚಿಗೆ ಇದ್ದರೂ ಇಳಿಯು ವಯಸ್ಸಿಗೆ ಬರುತ್ತಿದ್ದಂತೆ ಅದು ಕಡಿಮೆಯಾಗುತ್ತಾ ಬರುತ್ತದೆ. ಅಂದರೆ ಆ ವಯಸ್ಸಿನಲ್ಲಿ ಎಲ್ಲವನ್ನು ದಕ್ಕಿಸಿ ಕೊಂಡಿರುತ್ತಾನೆ, ಇಲ್ಲದಿದ್ದರೆ ನನ್ನಿಂದ ಇದು ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದು ಕೊರಗಿ ಕೊರಗಿ ಸಾಯುತ್ತಾನೆ. ಅಷ್ಟೇ.”

” ಅಂದರೆ ‘ನಾನು’ ಎಂಬುವುದನ್ನು ನಾಶಗೊಳಿಸಿ, ನಾನು, ನನ್ನದು ಎನ್ನುವ ಭಾವನೆಗಳಿಂದ ಹೊರಬರಲು ಸಾಧ್ಯವೇ ಇಲ್ಲವೇ?”

” ಯಾಕೆ ಸಾಧ್ಯವಿಲ್ಲ. ಎಲ್ಲವೂ ಸಾಧ್ಯವಿದೆ. ಆದರೆ ಅದನ್ನು ಅರ್ಥೈಸಿಕೊಳ್ಳುವ ಮನಸ್ಥಿತಿ ಹಾಗೂ ವಿವೇಚನೆ ಬೇಕು. ಒಬ್ಬ ಗುರುವಿನಿಂದ ಬೋಧಿಸಲ್ಪಡಬೇಕು. ಇಲ್ಲವಾದರೆ ಮನವನ್ನು ಪರಿವರ್ತಿಸುವ ಕೆಟ್ಟ ಘಟನೆಯೊಂದು ನಡೆಯಬೇಕು. ಆದರೆ ಸಂಪೂರ್ಣವಾಗಿ ಬಿಡುವುದು ಕಷ್ಟವಾದ ಸಂಗತಿ. ಬಿಟ್ಟರೆ ನೀನು ಎಲ್ಲವನ್ನು ತ್ಯಜಿಸಿದಂತೆ. ಅಂದರೆ ನೀನು ಬೈರಾಗಿ ಆದಂತೆ….! ಅದೊಂದು ತಪಸ್ಸು. ಅದು ಒಲಿಯುವುದು ಕೆಲವೇ ಕೆಲವು ಜನರಿಗೆ ಮಾತ್ರ. ನನ್ನನ್ನೇ ಉದಾಹರಣೆಗೆ ತಗೋ, ನಾನು ಇಷ್ಟೆಲ್ಲಾ ಭಾಷಣ ಮಾಡ್ತಾ ಇದೀನಲ್ಲ ನಾನೇನು ಎಲ್ಲವನ್ನು ತ್ಯಜಿಸಿ ನಿಂತವನೇ? ಹೆಂಡತಿ ಮಕ್ಕಳು ಅಂತ ಸಂಸಾರ ನಡೆಸುತ್ತಾ ಇಲ್ಲವೇ? ಇದೆಲ್ಲ ಕೇಳುವುದಕ್ಕೆ ಅಷ್ಟೇ ಚಂದ. ಅದರ ಅರಿವು ಮೂಡಿ ಅದನ್ನು ಪಾಲಿಸುವುದು ತುಂಬಾ ಕಷ್ಟ”

” ಅದೇನೊ ಹೌದು. ಈ ಮನಸ್ಸು ಅನ್ನೋದು ಎಷ್ಟೊಂದು ಜಟಿಲ. ಅದಕ್ಕೆ ಇದನ್ನ ಮರ್ಕಟಕ್ಕೆ ಹೋಲಿಸಿದ್ದು ಅನ್ಸುತ್ತೆ. ಹ್ಹ…..ಹ್ಹ….”

” ಹ್ಹ…..ಹ್ಹ… ”

” ಅಂಕಲ್, ಆಕ್ಚುವಲಿ ‘ನಾನು’ ಅನ್ನೋದು ಯಾಕೆ ಬೇಕು? ಅದರ ಅವಶ್ಯಕತೆಯಾದರೂ ಏನಿದೆ ಅನ್ನೋದು ತಿಳಿತಿಲ್ಲ ನನಗೆ.”

” ಮೊದಲೇ ನಾನು ನಿಂಗೆ ಇದರ ಬಗ್ಗೆ ಸ್ವಲ್ಪ ವಿವರಿಸಿದ್ದೆ ನೋಡು ಹರಿ. ಈ ಭೂಮಂಡಲದಲ್ಲಿ ಪ್ರತಿ ಜೀವಿಯು ಅದರ ಅಸ್ತಿತ್ವಕ್ಕಾಗಿ ಹೋರಾಡಲೇಬೇಕು. ಇದು ಜಗದ ನಿಯಮ. ಇದನ್ನು ಇಂಗ್ಲಿಷ್ನಲ್ಲಿ “struggle for existence” ಅಂತ ಹೇಳೋದು. ಪ್ರತಿಯೊಂದು ಜೀವಿಯು ಹುಟ್ಟಿದ ನಂತರ ಅನೇಕಾನೇಕ ವಿಪತ್ತುಗಳನ್ನು ಎದುರಿಸಬೇಕಾಗುತ್ತದೆ. ಅದು ಎದುರಾಳಿಯಿಂದಲೆ ಆಗಲಿ ಅಥವಾ ನೈಸರ್ಗಿಕವಾದದ್ದೇ ಆಗಲಿ. ಅವನ್ನೆಲ್ಲಾ ಎದುರಿಸಿ ಗೆದ್ದು ಬಂದಾಗ ಮಾತ್ರ, ಯಶಸ್ವಿಯಾಗಿ ಜೀವನ ನಡೆಸಿ, ಮುಂದಿನ ಪೀಳಿಗೆಗೆ ಕೊಡುಗೆಯನ್ನು ನೀಡಲು ಸಾಧ್ಯವಾಗುವುದು. ಅಂತಹ ಕೊಡುಗೆಯನ್ನು ನೀಡಲು ಶಕ್ತವಾದ ಜೀವಿ ಮಾತ್ರ ಈ ನಿಸರ್ಗದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವುದು. ಈಗ ಒಬ್ಬ ಮನುಷ್ಯನನ್ನೇ ಉದಾಹರಣೆಗೆ ತೆಗೆದುಕೊ. ಆತ ಹಸುಗೂಸಿನಿಂದ ಹಿಡಿದು ದೊಡ್ಡವನಾಗಿ, ಇಳಿವಯಸ್ಸಿನ ತನಕ ಬರುವ ಅನೇಕ ಕಷ್ಟಗಳನ್ನು ಎದುರಿಸಿದಾಗ ಮಾತ್ರ, ಮಕ್ಕಳಿಗೆ ಜನ್ಮ ನೀಡಿ, ಅವುಗಳನ್ನು ಯಶಸ್ವಿಯಾಗಿ ಸಾಕಲು ಸಾಧ್ಯ. ಇಲ್ಲವಾದರೆ ಅವು ನಾಶವಾಗುತ್ತವೆ. ಬೆಳೆಯುವ ಹಂತದಲ್ಲಿ ನಿಸರ್ಗದಿಂದ ಎದುರಾಗುವ ವಿಪತ್ತೆ ಇರಬಹುದು ಅಥವಾ ಬೇರೆ ಮನುಷ್ಯನಿಂದ ಎದುರಾಗುವ ಅಪಾಯವೆ ಇರಬಹುದು. ಅದರಲ್ಲಿ ಗೆಲ್ಲಬೇಕು. ಗೆದ್ದವನಿಗೆ ಮಾತ್ರ ಉಳಿಗಾಲ. ಅಂದರೆ ಒಂದು ಜೀವಿ Dominant  ಇನ್ನೊಂದು ಜೀವ Recessive ಅಂತಾಯ್ತು, ಅಲ್ವಾ. ಸೋತವನು ಒಂದಲ್ಲ ಒಂದು ದಿನ ನಾಶವಾಗಲೆಬೇಕು. ಈಗ ಮನುಷ್ಯ ಜಾತಿಯನ್ನ ಬೇರೊಂದು ಜಾತಿಯ ಪ್ರಾಣಿಗಳ ವಿರುದ್ಧ ದುರ್ಬಲ ಪ್ರಾಣಿಯಂತೆ ಕಲ್ಪಿಸಿಕೊಂಡು ಯೋಚಿಸು, ಅಂದ್ರೆ ಎದುರಾಳಿಯ ಜೊತೆಗೆ ಹೋರಾಡಿ ಹೋರಾಡಿ ಒಂದಲ್ಲ ಒಂದು ದಿನ ಮನುಷ್ಯ ಜಾತಿಯ ನಿರ್ಣಾಮವಾಗಿ ಹೋಗುತ್ತದಲ್ಲವೆ. ಹೀಗಾಗಿ ಇಲ್ಲಿ ಪ್ರತಿಯೊಂದು ಜೀವಿಯು ಮತ್ತೊಂದು ಜೀವಿಯ ವಿರುದ್ಧ ಪ್ರಬಲತೆಯನ್ನು ಸಾಧಿಸಲು ಹೋರಾಡುತ್ತಲೆ ಇರುತ್ತವೆ. ಪೈಪೋಟಿ ಇರುವವರೆಗೂ ಎಲ್ಲವೂ ಕ್ಷೇಮವಾಗಿರುತ್ತದೆ. ಯಾಕೆಂದರೆ ನಿಸರ್ಗ ಪ್ರತಿಜೀವಿಗೂ ಅವಕಾಶ ಕಲ್ಪಿಸಿಕೊಡುತ್ತದೆ. ಸದಾ ವಿಕಸನ ಹೊಂದಲು ಅನುಕೂಲ ಮಾಡಿಕೊಡುತ್ತಲೆ ಇರುತ್ತದೆ. ಹೀಗಾಗಿ Dominance ಮನೋಭಾವನೆ ಎಲ್ಲ ಜೀವಿಯಲ್ಲೂ ನೆಲೆಯೂರುತ್ತದೆ. ಆದ್ದರಿಂದಲೇ ನಾ ಮುಂದು ತಾ ಮುಂದು ಎನ್ನುವ ಪೈಪೋಟಿಯಲ್ಲಿ ‘ನಾನು’ ಎಂಬುವನ ಹುಟ್ಟು ಸಂಭವಿಸುತ್ತದೆ. ‘ನಾನು’ ಎಂಬುವನ ಅವಶ್ಯಕತೆ ಒಂದು ಘಟ್ಟದವರೆಗೂ ತುಂಬಾ ಇರುತ್ತದೆ. ಆದರೆ ಅದು ಮಿತಿ ಮೀರಬಾರದು. ಈಗ ನಮ್ಮನ್ನೇ ಉದಾಹರಣೆಗೆ ತಗೊಂಡ್ರೆ, ಪ್ರಾಬಲ್ಯ ಸಾಧಿಸುತ್ತಾ ಸಾಧಿಸುತ್ತಾ ಎಷ್ಟೊ ಜಾತಿಯ ಜೀವಿಗಳನ್ನೆ ನಾವು ನಾವೇ ಮಾಡಿದ್ದೇವೆ. ಅನೇಕ ಜಾತಿಯ ಜೀವಿಗಳು ಅಳಿವಿನಂಚಿನಲ್ಲಿವೆ. ಇದೆಲ್ಲವೂ ನಮ್ಮ ಈ ‘ನಾನು’ ಪ್ರಬಲನಾಗಬೇಕು  ಎಂಬ ಒಂದೇ ಒಂದು ಕೆಟ್ಟ ಆಸೆಯಿಂದ. ಇದು ಎಲ್ಲಿಯವರೆಗೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಹೀಗೆ. ಇದನ್ನು ತಡೆಗಟ್ಟಲು ಹಾಗೂ ಅದರಿಂದಾಗುವ ಅನಾಹುತವನ್ನು ತಡೆಯಲು ನಮ್ಮ ಪೂರ್ವಜರು ಹಾಗೂ ಇಂದಿಗೂ ಅನೇಕ ಮಹನೀಯರು ಶ್ರಮಿಸುತ್ತಲೆ ಇದ್ದಾರೆ.”

” ಪ್ರಾಬಲ್ಯತೆಯನ್ನು ಹೊಂದುವ ಓಟದಲ್ಲಿ, ನಡುವೆ ಈ ಪ್ರೀತಿ, ಪ್ರೇಮ ಎಲ್ಲಾ ಯಾಕೆ ಹುಟ್ಟಿಕೊಂಡವು ಅಂಕಲ್?”

” ನೀನು ಹೆಣ್ಣು-ಗಂಡಿನ ನಡುವಿನ ಪ್ರೀತಿಯ ಬಗ್ಗೆ ಕೇಳ್ತಿದ್ದೀಯಾ ಅನ್ಕೋತೀನಿ.”

” ಹೌದು ಅಂಕಲ್.”

” ಅದೆಲ್ಲವೂ ಮನಸ್ಸನ್ನು ಮತ್ತು ದೇಹವನ್ನು ಕೆರಳಿಸುವ ಹಾರ್ಮೋನ್ ಗಳ ಆಟ. ಇವುಗಳು ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗಿ ನಾನಾಬಗೆಯ ಭಾವನೆಗಳನ್ನು ಉಕ್ಕಿಸುವ ಕೆಮಿಕಲ್ಸ್ ಗಳು ಎಂದೆನ್ನಬಹುದು. ಗಂಡು-ಹೆಣ್ಣಿನ ಪ್ರೇಮದಲ್ಲಿ ಶೇಕಡ ತೊಂಭತ್ತೊಂಭತ್ತರಷ್ಟು ದೇಹದ ಅವಶ್ಯಕತೆಗಳನ್ನು ಪೂರೈಸುವ ಕಾರ್ಯವಾಗಿದ್ದರೆ, ಇನ್ನು ಒಂದು ಪರ್ಸೆಂಟ್ನಷ್ಟು ಸಾಂಗತ್ಯ, ಸ್ನೇಹ, ಪರಸ್ಪರ ಹೊಂದಾಣಿಕೆ, ಇತ್ಯಾದಿಗಳಿರುತ್ತವೆ. ನಮ್ಮ ದೇಶದಲ್ಲಿ ಸಾಂಗತ್ಯ, ಸ್ನೇಹ ಇತ್ಯಾದಿಗಳಿಗೆ ಪ್ರಮುಖವಾದ ಸ್ಥಾನವಿದ್ದರೂ, ಈಗಿನ ಯುವಜನತೆಯಲ್ಲಿ ಅದು ಕ್ಷೀಣಿಸುತ್ತಿದೆ. ಅದು ಸಂಪೂರ್ಣವಾಗಿ ತಪ್ಪು ಎಂದು ಹೇಳುವುದಕ್ಕಾಗುವುದಿಲ್ಲ. ಗೌರವ, ಸ್ನೇಹ ಹಾಗು ಎಲ್ಲವನ್ನೂ ಒಪ್ಪಿಕೊಂಡು ಸಂತೋಷದಿಂದ ಜೀವನ ನಡೆಸುವುದರಿಂದಲೆ ನಮ್ಮ ದೇಶದಲ್ಲಿ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತಿದ್ದವು. ಇಳಿವಯಸ್ಸಿನಲ್ಲಿಯೂ ಸಹ ಪತ್ನಿಯನ್ನ ಕಂಡರೆ ಅದೇ ಪ್ರೀತಿ ಉಕ್ಕುತ್ತಿತ್ತು. ಆದರೆ ಇವತ್ತು ಬಹುಬೇಗನೇ ಸಂಬಂಧಗಳು ಮುರಿದು ಬೀಳುತ್ತಿವೆ. ಇದಕ್ಕೆ ಕಾರಣ ಪಾಶ್ಚಾತ್ಯ ಸಂಸ್ಕೃತಿಯಡೆಗೆ ಮುಖ ಮಾಡಿ ಕುಳಿತಿರುವುದು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಮೊದಲು ತಮ್ಮ ಬಯಕೆಗಳಿಗೆ ಪ್ರಾಶಸ್ತ್ಯವನ್ನು ನೀಡುತ್ತಾರೆ. ಇಬ್ಬರಲ್ಲಿ ಒಬ್ಬರಿಗಾದರೂ ಹೊಂದಾಣಿಕೆಯಾಗದಿದ್ದರೆ, ಅವರು ಬೇರೆಯಾಗಲು ನಿರ್ಧರಿಸುತ್ತಾರೆ. ಅವರು ಮೊದಲಿನಿಂದಲೂ ಈ ಬಗೆಯ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಅವರಿಗೆ ಅದು ಚಂದವಾಗಿ ಕಾಣಿಸಬಹುದು. ಆದರೆ ನಮ್ಮವರು ಅದನ್ನು ಒಪ್ಪುವುದಿಲ್ಲ. ಒಬ್ಬಳನ್ನು ಕಟ್ಟಿಕೊಂಡರೆ ಅವಳ ಜೊತೆಗೆ ಜೀವನವನ್ನು ನಡೆಸಬೇಕು. ಇಲ್ಲದಿದ್ದರೆ ನಮ್ಮ ಸಮಾಜ ಅಂಥವರನ್ನು ಹಗುರವಾಗಿ ಕಾಣಲು ಪ್ರಾರಂಭಿಸುತ್ತದೆ.”

” ನಮ್ಮ ದೇಶದಲ್ಲಿ ಹೀಗ್ಯಾಕೆ? ಕಟ್ಟಿಕೊಂಡವಳು ಸರಿ ಇಲ್ಲದಿದ್ದರೆ ಅಥವಾ ನಮಗೆ ಅವರ ಜೊತೆ ಹೊಂದಾಣಿಕೆಯಾಗದಿದ್ದರೆ ಬಿಡುವ ಹಕ್ಕು ನಮಗೆ ಇರುವುದಿಲ್ಲವೇ?”

” ನೋಡು ಹರಿ ಮೊದಲೆಲ್ಲಾ ನಮ್ಮ ಸಮಾಜಗಳಲ್ಲಿ ಎಲ್ಲರೂ ಒಟ್ಟಿಗೆ ಇರುವ ಸಂಪ್ರದಾಯವಿತ್ತು. ಅಂದರೆ ಮನೆಯ ಹಿರಿಯರಿಂದ ಹಿಡಿದು ಮೊಮ್ಮಕ್ಕಳವರೆಗೂ ಎಲ್ಲರೂ ಒಂದೇ ಮನೆಯಲ್ಲಿ ಇರುತ್ತಿದ್ದರು. ಹೀಗಾಗಿ ಮನೆಯ ಹಿರಿಯನ ಹೆದರಿಕೆ ಎಲ್ಲರಲ್ಲೂ ಇರುತ್ತಿತ್ತು. ನಮ್ಮ ದೇಶದ ಸಂಸ್ಕೃತಿಯೆ ಹೀಗೆ. ಭಯ-ಭಕ್ತಿಯ ಮೇಲೆ ನಿಂತಂತಹದು. ಹಿರಿಯರ ಮಾತು ಪಾಲಿಸಲೆಬೇಕಾಗುತ್ತಿತ್ತು. ಮನೆಯ ಹಿರಿಯ, ಕೂಡಿ ಬಾಳಿದರೆ ಸುಖ. ಮನೆಯಲ್ಲಿ ಎಲ್ಲರ ನಡುವೆ ಹೊಂದಾಣಿಕೆ ಇರಬೇಕು ಎಂದು ನಂಬಿದವನಾಗಿರುತ್ತಿದ್ದ. ಹೀಗಾಗಿ ಮಕ್ಕಳು ಮೊಮ್ಮಕ್ಕಳು, ತಮಗೆ ಇಷ್ಟವಿಲ್ಲದಿದ್ದರೂ ಹೊಂದಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಎಲ್ಲ ಮನೆತನಗಳು ಹಾಗೆ ನಡೆದುಕೊಂಡು ಬರುತ್ತಿದ್ದರಿಂದ ಇಡೀ ಸಮಾಜವೇ ಈ ಒಂದು ನಂಬಿಕೆಯ ಮೇಲೆ ನಿಂತಿರುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಮನೆಗಳು ಮುರಿಯುತ್ತಿವೆ. ಮನೆ ಹಿರಿಯನ ಹೆದರಿಕೆ ಇರುವುದಿಲ್ಲ, ಏಕೆಂದರೆ ಎಲ್ಲರೂ ಸ್ವತಂತ್ರವಾಗಿ ದುಡಿದು ಲಕ್ಷಗಟ್ಟಲೆ ಸಂಪಾದಿಸುವವರೆ. ಹೀಗಾಗಿ ಎಲ್ಲವೂ ಬದಲಾಗುತ್ತಿದೆ. ಮುಂದೆ ಸಾಗಿದಂತೆ ಮತ್ತಷ್ಟು ಬದಲಾಗುತ್ತದೆ. ನೋಡುತ್ತಾ ಇರು.”

” ಹೌದು ಅಂಕಲ್.”

” ಅಂಕಲ್. ಈ unconditional love ಬಗ್ಗೆ ತಮ್ಮ ಅಭಿಪ್ರಾಯವೇನು?”

” ನನ್ನ ಪ್ರಕಾರ unconditional love  ಮನುಷ್ಯನಲ್ಲಿ ಕಂಡುಬರಲಿಕ್ಕೆ ಸಾಧ್ಯವೇ ಇಲ್ಲ. ಇದನ್ನು ನಾನು ಬಲವಾಗಿ ನಂಬುತ್ತೇನೆ ಕೂಡ. ಇದನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದು. ಅವುಗಳ ಮಧ್ಯದಲ್ಲಿ ಇರುವಂತಹದು ಯಾವಾಗಲೂ ಅತ್ಯಂತ ಶುದ್ಧವಾದ ಪ್ರೀತಿಯೆ ಆಗಿರುತ್ತದೆ ಎನ್ನುವುದು ನನ್ನ ನಂಬಿಕೆ.”

” ಮನುಷ್ಯರಲ್ಲಿ ಕಂಡುಬರುವುದಿಲ್ಲ ಅಂತ ಯಾಕೆ ಅನ್ಸತ್ತೆ ಅಂಕಲ್? ಕೇವಲ ಪ್ರಾಣಿಗಳಲ್ಲಿ ಕಂಡುಬರುತ್ತದೆ?”

” ನೋಡು ಹರಿ, ಒಂದು ಹಕ್ಕಿಯನ್ನು ಉದಾಹರಣೆಗೆ ತಗೋ. ಅದು ಮೊಟ್ಟೆಗಳನ್ನು ಇಟ್ಟ ನಂತರ, ಅದರ ರಕ್ಷಣೆ, ಪೋಷಣೆ, ಇತ್ಯಾದಿಗಳನ್ನು ಮಾಡಿ ಅದು ಮರಿಯಾದ ನಂತರ ಅದು ಸುರಕ್ಷಿತವಾಗಿರಬೇಕೆಂದು ಒಂದು ಗೂಡನ್ನು ಕಟ್ಟಿ, ಅದಕ್ಕೆ ಕಾಲಕಾಲಕ್ಕೆ ಸರಿಯಾದ ಆಹಾರವನ್ನು ನೀಡಿ, ಬೆಳೆಯುತ್ತಿದ್ದಂತೆ ಜೀವಿಸುವ ಬಗೆ, ಎಲ್ಲವನ್ನೂ ಹೇಳಿಕೊಡುತ್ತದೆ. ಒಂದು ಸಾರಿ ಅದು ದೊಡ್ಡದಾಗಿ ಸ್ವತಂತ್ರವಾಗಿ ಹಾರಾಡಿ, ಆಹಾರವನ್ನು ಸಂಗ್ರಹಿಸಿ ತನ್ನ ಜೀವನವನ್ನ ಕಟ್ಟಿಕೊಳ್ಳಬಹುದು ಎಂದು ನಂಬಿಕೆ ಬಂದರೆ, ತಾಯಿ ಹಕ್ಕಿ, ಅದನ್ನು ಗೂಡಿನಿಂದಾಚೆ ಹಾಕುತ್ತದೆ ಅಥವಾ ಮರಿ ಹಕ್ಕಿಯೇ ಹಾರಿಹೋಗುತ್ತದೆ. ದೊಡ್ಡದಾಯಿತು ಇನ್ನು ಅದೇ ನನ್ನನ್ನ ಸಾಕಬೇಕು ಎಂದು ಅಂದುಕೊಳ್ಳುವುದಿಲ್ಲ. ತಾನು ಸಾಯುವವರೆಗೆ ತನಗಾಗಿ ಬದುಕಿ, ಬೇರೆಯವರಿಗೆ ಹೊರೆಯಾಗದೆ ಸಾಯುತ್ತದೆ. ಇದು unconditional love ಅಲ್ಲವೆ? ಮರಿಗಳಿಂದ ಏನನ್ನೂ ಅಪೇಕ್ಷಿಸದ ಹಕ್ಕಿ, ಮರಿಗಳಿಗಾಗಿ ದುಡಿಯುತ್ತದೆ. ಇದನ್ನು ಮನುಷ್ಯರಲ್ಲಿ ಎಲ್ಲಿ ಕಾಣುತ್ತೇವೆ ಹೇಳು? ಅಲ್ಲೋ ಇಲ್ಲೋ ಒಬ್ಬೊಬ್ಬರನ್ನು ಕಾಣಬಹುದು. ಆದರೆ ನೂರಕ್ಕೆ ನೂರರಷ್ಟು ಹಾಗೆ ಇರಲು ಸಾಧ್ಯವೇ ಇಲ್ಲ.

ಅಮ್ಮನದು unconditional love ಅಂತ ಕರೆದರೂ, ಅದು ಸಂಪೂರ್ಣವಾಗಿರಲಿಕ್ಕೆ ಸಾಧ್ಯವಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ನಮ್ಮನ್ನು ಸಾಕಲಿ, ನನ್ನ ಮಕ್ಕಳು ಚೆನ್ನಾಗಿ ಬಾಳಬೇಕು ಎನ್ನುವ ಹಂಬಲ ಹಾಗೂ ನಿರೀಕ್ಷೆಗಳು ಇರುತ್ತವೆ. ಮನುಷ್ಯರನ್ನು ಹಕ್ಕಿಗಳಿಗೆ ಕಂಪೇರ್ ಮಾಡಲಾಗುತ್ತದೆಯೆ ? ಅಜಗಜಾಂತರ ವ್ಯತ್ಯಾಸ ಅಲ್ಲವೇ?”

” ಹೌದು ಅಂಕಲ್. ಅದೇನೊ ಸತ್ಯ. ಕಂಪೇರ್ ಮಾಡಲಿಕ್ಕಾಗುವುದಿಲ್ಲ.”

” ಮನುಷ್ಯ ತನ್ನನ್ನು ತಾನು ಬುದ್ಧಿ ಜೀವಿ ಎಂದು ಭಾವಿಸಿಕೊಂಡು, ಅದೇ ಬ್ರಮೆಯಲ್ಲಿ ಜೀವಿಸುತ್ತಿದ್ದಾನೆ. ಆದರೆ ಮನುಷ್ಯರಿಗಿಂತ ಪ್ರಾಣಿಗಳೇ ಅದೆಷ್ಟೋ ಪಾಲು ನಿಷ್ಕಲ್ಮಶ ಪ್ರೀತಿಯನ್ನು ನೀಡುವಲ್ಲಿ ಮುಂಚೂಣಿಯಲ್ಲಿವೆ.

ಇಷ್ಟೊತ್ತು ನೀನು ಕೇಳಿದ ಪ್ರಶ್ನೆಗಳು, ನಾನು ನೀಡಿದ ವ್ಯಾಖ್ಯಾನ, ಅನುಭವ, ಅನುಭವಕ್ಕೆ ನೀಡುವ ವ್ಯಾಖ್ಯಾನ, ಇತ್ಯಾದಿಗಳೆಲ್ಲವೂ ನಮ್ಮ ತಾರ್ಕಿಕ ಜ್ಞಾನದಿಂದ ಪಡೆದುಕೊಂಡದ್ದೆ ಹೊರತು ಯಾವ ಪ್ರಾಣಿಗಳಲ್ಲಿ ಕಂಡುಬರುವುದಿಲ್ಲ, ಅಥವಾ ಪ್ರಕೃತಿ ಮಾತೆ ನಮಗೆ ಬೋಧನೆ ಮಾಡಿಲ್ಲ. ಯಾವ ಪ್ರಾಣಿಗಳಿಗೆ ಗೊತ್ತಿರುತ್ತದೆ ಹೇಳು ತಾನು ಬದುಕುತ್ತಿರುವ ಬಾಳು ಅದ್ಭುತವಾದದ್ದು ಅಥವಾ ಬೇರೆ ಪ್ರಾಣಿಗಳಿಗಿಂತ ಉತ್ಕೃಷ್ಟವಾದದ್ದು ಎಂದು. ಅವುಗಳಲ್ಲಿ ಯಾವುದೇ ತುಲನಾತ್ಮಕ ಮನೋಭಾವನೆ ಇರುವುದಿಲ್ಲ. ಅವುಗಳು ಕೇವಲ ಅವುಗಳಿಗಾಗಿ ಜೀವಿಸುತ್ತವೆ. ನಾವುಗಳೆ ಎಲ್ಲವನ್ನು ತೆಗೆದುಕೊಂಡು ವಿಂಗಡಿಸಿ, ಇದು ಶ್ರೇಷ್ಠ, ಇದು ಕೀಳು. ಅದು ಸರಿ ಇಲ್ಲ, ಇದು ಸರಿ ಇದೆ. ಎನ್ನುವ ನಿರ್ಧಾರಗಳನ್ನು ಮಾಡುತ್ತೇವೆ. ಆದರೆ ನೆನಪಿಟ್ಟುಕೊ ಹರಿ, ಇಲ್ಲಿ ಯಾವುದೇ ಒಂದು ವಿಷಯ ನಿರ್ದಿಷ್ಟವಾಗಿ ಸರಿ ಅಥವ ತಪ್ಪು ಎಂದು ನಿರ್ಧರಿಸಲು ಸಾಧ್ಯವಿಲ್ಲ. ಯಾಕೆಂದರೆ ಅದು ಕೇವಲ ನಮ್ಮ ಮನಸ್ಸಿನಲ್ಲಿರುತ್ತದೆ. ನಮ್ಮ ತುಲನಾತ್ಮಕ ಮನೋಭಾವನೆ ಗಳಲ್ಲಿ ಇರುತ್ತದೆ. ಹೀಗಾಗಿ ಮನುಷ್ಯ ತನ್ನ ಈ ಗುಣವನ್ನು ಬಿಟ್ಟು ಎಲ್ಲವನ್ನೂ ಒಪ್ಪಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಂದಾಗಲೇ ಜೀವನ ತುಂಬ ಸೊಗಸಾಗಿರುತ್ತದೆ ಹಾಗು ಜೀವನಕ್ಕೊಂದು ಅರ್ಥ ಸಿಗುತ್ತದೆ.”

” ಅಂಕಲ್, ನೀವು ಇಷ್ಟು ದಿನ ನನ್ನ ಪ್ರಶ್ನೆಗಳಿಗೆ ಕೊಂಚವೂ ಸಿಟ್ಟಾಗದೆ ತಾಳ್ಮೆಯಿಂದ ಉತ್ತರಿಸಿದ್ದಕ್ಕೆ ತುಂಬಾನೆ ಥ್ಯಾಂಕ್ಸ್. ನನ್ನ ಅಜ್ಞಾನವನ್ನು ತೊಲಗಿಸಿವುದಕ್ಕೆ  ತುಂಬಾನೇ ಸಹಾಯ ಮಾಡಿದ್ದೀರಿ. ನಮ್ಮಲ್ಲಿ, ನನ್ನಂಥವರು ಎಷ್ಟೋ ಜನ ಸಿಗುತ್ತಾರೆ. ಅಜ್ಞಾನದಲ್ಲಿ ಮುಳುಗಿ ಏಳುತ್ತಾರೆ. ಅಂಥವರನ್ನೆಲ್ಲ ಸರಿಯಾದ ದಿಕ್ಕಿಗೆ ಕರೆದೊಯ್ಯಲು ನಿಮ್ಮಂಥವರ ಅಗತ್ಯ ತುಂಬಾನೇ ಇದೆ. ನಿಮ್ಮ ತಿಳುವಳಿಕೆಗೆ ಹಾಗೂ ಅಗಾಧ ಜ್ಞಾನಕ್ಕೆ ಹ್ಯಾಟ್ಸಾಫ್.  ಇಷ್ಟು ದಿನದಲ್ಲೆ ನನ್ನಲ್ಲಿ ಎಷ್ಟೊಂದು ಬದಲಾವಣೆಗಳಾಗಿವೆ. ನಿಮ್ಮ ಪ್ರಕಾರ ಸುಂದರವಾದ ಜೀವನವನ್ನು ಊಹಿಸಿಕೊಳ್ಳುವುದು ಮತ್ತು ಎಲ್ಲವನ್ನೂ ಸರಿದೂಗಿಸಿಕೊಂಡು ಜೀವನವನ್ನು ಸಾಗಿಸುವುದು ಹೇಗೆ?”

” ನೋಡು ಹರಿ ನಮ್ಮ ಬದುಕು ಸುಂದರವಾಗಿರಬೇಕು ಎಂದರೆ, ಮೊದಲಿಗೆ ನಮ್ಮ ಜೀವನದಲ್ಲಿ ಜರಗುವ ಪ್ರತಿಯೊಂದು ಘಟನೆಯನ್ನು ಒಪ್ಪಿಕೊಂಡು ಹಾಗು ಅಪ್ಪಿಕೊಂಡು ಸಾಗಬೇಕು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ನಂಬಿಕೆ ಒಂದಡೆಯಾದರೆ, ಮೊದಲೇ ಹೇಳಿದಂತೆ ಇಲ್ಲಿ ಕೆಟ್ಟದ್ದು ಒಳ್ಳೆಯದು ಎನ್ನುವುದೇ ಇಲ್ಲ. ಹೀಗಾಗಿ ಎಲ್ಲವನ್ನೂ ಒಪ್ಪಿಕೊಳ್ಳಬೇಕು. ಇನ್ನು ಒಂದು ಅದ್ಭುತವಾದ ಮತ್ತು ಅಮೂಲ್ಯವಾದ ಸಂಗತಿಯನ್ನು ನಾವೆಲ್ಲರೂ ತಿಳಿದುಕೊಳ್ಳಲೇಬೇಕು. ಅದೇನೆಂದರೆ, ಜಗತ್ತಿನಲ್ಲಿ ಪ್ರತಿಯೊಂದು ಅಣು ಅಣುವು ನನ್ನಲ್ಲಿರುವ ಅಣುವಿನಂತೆಯೇ ಇದೆ. ಎಲ್ಲದರಲ್ಲಿಯೂ ‘ಬ್ರಹ್ಮನ್’ ಎಂಬ ಚೈತನ್ಯವಿದೆ. ಇಲ್ಲಿ ಎಲ್ಲವೂ ಒಂದೇ, ನಾನು ತಾನು ಎಂಬ ಭೇದವಿಲ್ಲ ಎಂಬ ಸಂಗತಿಯನ್ನು ಅರ್ಥಮಾಡಿಕೊಂಡು, ನಮ್ಮ ಮನಸ್ಸಿಗೆ ಅರ್ಥೈಸಿ ಬಿಟ್ಟರೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ನಿರೀಕ್ಷೆಗಳು ಇರುವುದಿಲ್ಲ. ಅವುಗಳು ಹುಸಿಯಾಗುವ ಭಯವಿರುವುದಿಲ್ಲ. ದುಃಖಕ್ಕೆ ತುತ್ತಾಗುವುದಿಲ್ಲ. ಎಲ್ಲರಲ್ಲೂ ನಿನ್ನನ್ನ ಕಾಣುತ್ತೀಯ. ‘ನಾನು’ ಎಂಬುವವನ ನಿರ್ಣಾಣಮವಾಗುತ್ತದೆ. ನಿರ್ಲಿಪ್ತತೆ, ಮನಸ್ಸಿನಲ್ಲಿ ನೆಲೆಯೂರುತ್ತದೆ. ಮನುಷ್ಯ ಸಮಾಧಿಸ್ಥ ಜೀವನವನ್ನು ಸಾಗಿಸಲು ಪ್ರಾರಂಭಿಸುತ್ತಾನೆ. ಆಗಲೇ ಮನಸ್ಸು ಅರಳುವುದು. ಸಮತೋಲನದ ಜೀವನವನ್ನು ಸಾಗಿಸಲು ಸಹಕಾರಿಯಾಗುವುದು. ಸಮತೋಲನದ ಜೀವನವನ್ನು ಹೊಂದಿದ ಮಾನವನಿಗೆ ಎಲ್ಲವೂ ಒಂದು ಬಗೆಯ ಆಟದಂತೆ ಭಾಸವಾಗುತ್ತದೆ. ಏನನ್ನು ಬೇಕಾದರೂ ಸಾಧಿಸಬಲ್ಲ ಹಿಂದೆ ಇಲ್ಲದಿದ್ದರೂ, ಮುಂದೆ ಎಂದಾದರೂ ಸಾಧಿಸಬಲ್ಲೆ ಎಂಬ ಛಲ ಅವನಲ್ಲಿ ಮೂಡುತ್ತದೆ. ಅವನೊಬ್ಬ ಅದ್ಭುತ ಮನುಷ್ಯನಾಗಿ ಪರಿವರ್ತಿತನಾಗುತ್ತಾನೆ. ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯುತ್ತಾನೆ. ಅನಂತವನ್ನು ತಲುಪುತ್ತಾನೆ. ಆದರೆ ಅದು ಕೇವಲ ಕೇಳುವುದರಿಂದಾಗಲಿ ಅಥವಾ ಓದುವುದರಿಂದಾಗಲಿ ಆ ಅವಸ್ಥೆಯನ್ನು ತಲುಪಲು ಖಂಡಿತ ಸಾಧ್ಯವಿಲ್ಲ. ಕೇವಲ ದೀರ್ಘಾವಧಿಯ ತಪಸ್ಸಿನಿಂದ ಮಾತ್ರ ಸಾಧ್ಯ. ಎಲ್ಲರೂ ಅನಂತವನ್ನು ತಲುಪಲು ಸಾಧ್ಯವಿಲ್ಲ. ಆದರೆ ಆ ದಿಕ್ಕಿನಲ್ಲಿ ಪ್ರಯತ್ನಿಸಬೇಕು, ಅಂದಾಗ ಜೀವನ ಸಂತೋಷದಿಂದ ಕೂಡಿರುತ್ತದೆ. ಕೇವಲ ನೂರರಲ್ಲಿ ಇಪ್ಪತ್ತರಷ್ಟು  ಭಾಗ, ನಾನು ನನ್ನದು ಎನ್ನುವ ಭಾವನೆಯನ್ನು ಬಿಟ್ಟು ಬಾಳುವುದನ್ನು ಕಲಿತರೆ ಎಷ್ಟೊ ಪಾಲು ಸಂತೋಷವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಆದರೆ ಯಾರೂ ಅದರೆಡೆಗೆ ಪ್ರಯತ್ನಿಸುತ್ತಿಲ್ಲ. ಎಲ್ಲರೂ ನಾನು ಗೆಲ್ಲಬೇಕು, ನನಗೆ ಅದು ಬೇಕು, ಇದು ಬೇಕು ಎನ್ನುವ ಹುಚ್ಚು ಆಸೆಗಳನ್ನು ಹೊತ್ತು ಹೊರಡುವವರು ಆಗಿದ್ದಾರೆ. ಇಷ್ಟೆಲ್ಲಾ ಬೋಧನೆ ಮಾಡುವ ನಾನು, ಇದರಿಂದ ಹೊರತಾಗಿಲ್ಲ. ನಾನು ಪ್ರಯತ್ನಿಸುತ್ತಲೇ ಇದ್ದೇನೆ. ದಿನದಿಂದ ದಿನಕ್ಕೆ ಒಂದೊಂದೇ ಮೆಟ್ಟಿಲು ಹತ್ತುತ್ತಲೇ ಇದ್ದೇನೆ. ಇದೇ ಜೀವನ. ಇದೇ ಜೀವನದ ಗುಟ್ಟು.”

” ಅಂಕಲ್ ನೀವು ಎಷ್ಟೆಲ್ಲ ತಿಳಿದುಕೊಂಡಿದ್ದೀರಿ. ಬದಲಾಗುವ ನಿಟ್ಟಿನಲ್ಲಿ ನಾನೂ ಪ್ರಯತ್ನಿಸುತ್ತೇನೆ. ದಿನಕ್ಕೆ ಒಂದೊಂದೇ ಮೆಟ್ಟಿಲು ಹತ್ತುತ್ತೇನೆ.”

”  ಗುಡ್. ನಾವು ನಮ್ಮ ಮಾತುಕತೆಯ ಕೊನೆಯ ಹಂತ ತಲುಪಿದ್ದೇವೆ ಅನ್ಸತ್ತೆ ಹರಿ. ಮುಗಿಸೋಣ ಇನ್ನು. ಅಂದಹಾಗೆ ನಿನಗೊಂದು ಗುಡ್ ನ್ಯೂಸ್ ಇದೆ ಕಣಪ್ಪ.”

” ಏನದು ಅಂಕಲ್?”

” ನಾಳೆ ಬೆಳಗ್ಗೆ ನಾವು ಹೊರಡ್ತಾ ಇದ್ದೇವೆ. ನಿನ್ನ ತಲೆ ತಿನ್ನೋರು ಯಾರು ಇರಲ್ಲ ಇನ್ಮೇಲೆ ಆರಾಮಾಗಿ ಇರಬಹುದು .”

” ಅಂಕಲ್ ಪ್ಲೀಸ್, ಹಾಗೆಲ್ಲ ಮಾತಾಡಬೇಡಿ. ನೀವಿದ್ದರೆ ನನಗೆ ಅದೇನೋ ಖುಷಿ ಇರುತ್ತೆ. ನೀವು ಒಂದು ತರಹದ ಸ್ಪೂರ್ತಿ ನನಗೆ. ಇಷ್ಟು ಬೇಗ ಹೋಗಬೇಡಿ ಅಂಕಲ್. ಪ್ಲೀಸ್.”

” ಸಾರಿ ಹರಿ. ನಾನು ಹೋಗಲೇ ಬೇಕಾಗಿದೆ. ಅರ್ಜೆಂಟ್ ಕೆಲಸ ಒಂದು ಬಂದಿದೆ. ನೆಕ್ಸ್ಟ್ ಟೈಮ್ ಸಿಗೋಣ. ಮೈಸೂರಿಗೆ ಬಂದರೆ ಮರೀದೆ ನಮ್ಮ ಮನೆಗೆ ಬಾ. ತಗೋ ಈ ವಿಸಿಟಿಂಗ್ ಕಾರ್ಡ್.” ಎಂದು ಕಾರ್ಡನ್ನು ಕೊಟ್ಟರು.

” ಹಾ ಅಂಕಲ್. ನೀವು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬನ್ನಿ.”

” ಖಂಡಿತ ಬರ್ತೀನಿ. ಸರಿ ತುಂಬಾ ಲೇಟಾಯ್ತು ಹರಿ. ನಡಿ ಹೊರಡೋಣ. ಸಮಯ ಹತ್ತುವರೆಯಾಗಿಬಿಟ್ಟಿದೆ. ರೂಮಿಗೆ ಹೋಗಿ ತಿಂಡಿ ತಿಂದು, ರೆಡಿಯಾಗಿ, ಗೋಪಾಲ್ ವರ್ಮಾ ತಮ್ಮ ಫ್ಯಾಮಿಲಿ ಜೊತೆ ಕೊನೆಯ ದಿನವೆಂದು ಶಾಪಿಂಗಿಗೆ ಹೊರಟರು. ಹರಿ ತನ್ನ ರೂಮಿಗೆ ಬಂದು, ಪೆಚ್ಚುಮೋರೆ ಹಾಕಿಕೊಂಡು ಕುಳಿತ. ಅದೇನೊ ವಿವರಿಸಲಾಗದ ಬೇಸರ. ಕೇವಲ ಮೂರು-ನಾಲ್ಕು ದಿನಗಳ ಪರಿಚಯವೇ ಆಗಿದ್ದರು, ಅದೇನೋ ಗಾಢವಾದ ಬಾಂಧವ್ಯ ಅವರ ನಡುವೆ ಬೆಳೆದಿತ್ತು. ಮುಂದಿನ ಗುರಿ ಅವನಿಗೆ ಮುಸುಕಾಗಿ ಕಾಣಿಸುತ್ತಿತ್ತು.

ಮಾರನೆಯ ದಿನ, ಬೆಳಗ್ಗೆ ಬೇಗನೆ ಹೊರಟರೆ ಒಳ್ಳೆಯದೆಂದು ಗೋಪಾಲ್ ವರ್ಮಾ ಮತ್ತವರ ಫ್ಯಾಮಿಲಿ ಬೇಗನೆ ಸಿದ್ಧರಾದರು. ಅವರನ್ನು ಕಳುಹಿಸಲು ಹರಿಯೂ ತಯಾರಾಗಿ ನಿಂತ. ಅವನೂ ಒಂದಷ್ಟು ಲಗೇಜನ್ನು  ಕಾರಿನಲ್ಲಿ ಇಡಲು ಸಹಾಯ ಮಾಡಿದ.

” ಓಕೆ ಹರಿ, ನಾವಿನ್ನೂ ಹೊರಡ್ತೀವಿ. ಮಿಸ್ ಯು ಯಂಗ್ ಮ್ಯಾನ್. ಮತ್ತೆ ಭೇಟಿಯಾಗೋಣ. Wish you all the best.”

” ಥ್ಯಾಂಕ್ಯು ಅಂಕಲ್. ನಾನೂ ನಿಮ್ಮನ್ನು ಮಿಸ್ ಮಾಡ್ಕೊತೀನಿ. ಬಾಯ್ ಅಂಕಲ್, ಆಂಟಿ . ಬಾಯ್ ರಾಹುಲ್. ಬೆಂಗಳೂರಿಗೆ ಬಂದರೆ ಮನೆಗೆ ಬನ್ನಿ.”

” ಖಂಡಿತ ಬರ್ತೀವಿ.” ಎನ್ನುತ್ತಾ ಎಲ್ಲರೂ ಕೊನೆಯ ಬಾರಿಗೆ ಬಾಯ್ ಮಾಡಿದರು. ಕಾರು ಹೊರಟಿತು. ಹರಿಯ ಕಣ್ಣಂಚಲಿ ಮತ್ತೆ ಹನಿಗಳೊಡೆದವು. ಕೊಂಚ ದೂರ ಸಾಗುತ್ತಲೇ, ಕಾರು ಬುಸ್ಸೆಂದು ಸೌಂಡ್ ಮಾಡುತ್ತಾ ನಿಂತಿತು.

” ಹರಿ ಬಾಯಿಲ್ಲಿ.” ಎಂದು ಗೋಪಾಲ್ ವರ್ಮಾ ಕೂಗಿದರು. ಏನೆಂದು ಕೇಳಲು ಓಡಿಹೋದ ಹರಿ.

” ಹರಿ, ನಿನಗೆ ಇದನ್ನು ಕೊಡುವುದನ್ನೇ ಮರೆತುಬಿಟ್ಟಿದ್ದೆ. ತಗೋ ನನ್ನ ಕಡೆಯಿಂದ ಒಂದು ಸಣ್ಣ ಗಿಫ್ಟ್.” ಎಂದು ಗಿಫ್ಟ ಬಾಕ್ಸನ್ನು ಹರಿಯ ಕೈಯಲ್ಲಿಟ್ಟರು.

” ಅಯ್ಯೋ, ಇದೆಲ್ಲ ಯಾಕೆ ಅಂಕಲ್?. ಈಗಾಗಲೇ ದೊಡ್ಡ ಗಿಫ್ಟ್ ಅನ್ನೇ ಕೊಟ್ಟಿದ್ದೀರಿ. ಥ್ಯಾಂಕ್ಯು.!”

” ಇರ್ಲಿ ಇಟ್ಕೋ ನನ್ನ ನೆನಪಿಗಾಗಿ. ಬಾಯ್ ಯಂಗ್ ಮ್ಯಾನ್.”

” ಬಾಯ್  ಅಂಕಲ್.” ಎನ್ನುತ್ತಲೇ ಹೊರಟಿತು ಕಾರು. ನೋಡನೋಡುತ್ತಲೇ ದೂರ ಸಾಗಿತು. ಕೆಲಹೊತ್ತು ಅಲ್ಲೆ ನಿಂತುಬಿಟ್ಟ ಹರಿ. ಆ ಮೂರು ದಿನಗಳು ಎಷ್ಟು ಅದ್ಭುತವಾಗಿದ್ದವು. ಅವರ ಮಾತುಗಳು, ಅವುಗಳಲ್ಲಿ ಅಡಗಿದ್ದ ಸತ್ವ, ಎಲ್ಲವೂ ಎಂಥವರನ್ನಾದರೂ ಪರಿವರ್ತಿಸುತ್ತವೆ. ನಾನೆಂತಹ ಪುಣ್ಯವಂತ, ಇಂತಹ ಮಹಾನ್ ವ್ಯಕ್ತಿಯ ಜೊತೆಗೆ ಮೂರು ದಿನಗಳನ್ನು ಕಳೆದೆ. ಇವುಗಳನ್ನೆ ಟರ್ನಿಂಗ್ ಪಾಯಿಂಟ್ಸ್ ಎನ್ನುತ್ತಾರೆ ಎಂದೆನಿಸಿತು. ಹಲವಾರು ಯೋಚನೆಗಳ ಸರಮಾಲೆ. ಎಷ್ಟೊ ಹೊತ್ತಿನ ನಂತರ ಈ ಲೋಕಕ್ಕೆ ಮರಳಿದ. ಇಲ್ಲಿ ಇದ್ದಾದರು ಏನು ಮಾಡುವುದು. ನಾನು ಏನನ್ನು ಅರಸಿ ಬಂದಿದ್ದೆನೊ ಅದು ಸಿಕ್ಕಿತು. ಇಂತಹ ಮಹಾನುಭಾವನಿಂದ ಬೋಧಿಸಲ್ಪಟ್ಟೆ. ವಾಪಸ್ಸಾಗಬೇಕು ನನ್ನ ಗೂಡಿಗೆ ಎಂದೆನಿಸಿತು. ರೂಮಿಗೆ ಬಂದವನೇ ತನ್ನ ಬಟ್ಟೆಬರೆಗಳನ್ನು ಹಾಕಿಕೊಂಡ. ಸಮಯ ಏಳಾಗಿತ್ತು. ಈಗ ಹೊರಟರೆ ಹನ್ನೆರಡರ ಸುಮಾರಿಗೆ ತಲುಪಬಹುದೆಂದು ಬೇಗನೆ ಫ್ರೆಶ್ ಆಗಿ, ತಿಂಡಿ ತಿಂದ. ಥಟ್ಟನೆ ಗೋಪಾಲ್ ವರ್ಮಾ ಕೊಟ್ಟ ಗಿಫ್ಟ್ ನೆನಪಾಯಿತು. ತೆಗೆದು ನೋಡಿದರೆ ಅದರಲ್ಲೊಂದು ಪುಟ್ಟದಾದ ಬುದ್ಧನ ಮೂರ್ತಿ ಇತ್ತು. ತುಂಬಾ ಇಷ್ಟವಾಯಿತು ಹರಿಗೆ. ಅದರ ಜೊತೆಗೆ ಒಂದು ಲೆಟರ್ ಕೂಡ ಇತ್ತು. ತೆಗೆದು ಓದಲು ಪ್ರಾರಂಭಿಸಿದ.

” ಹಾಯ್ ಹರಿ. ಈ ಲೆಟರ್ನಲ್ಲಿ ಇರುವುದನ್ನೆಲ್ಲ ನಿನ್ನನ್ನು ಈ ಮೂರು ದಿವಸ ಗಮನಿಸಿದ ಆಧಾರದ ಮೇಲೆ ಬರೆಯುತ್ತಿದ್ದೇನೆ. ನಿನ್ನಲ್ಲಿ, ಅದೇನು ಒಂದು ಅದ್ಭುತವಾಗದ ಶಕ್ತಿ ಅಡಗಿದೆ. ಹಾಗೆ ನೋಡಿದರೆ, ಮನುಷ್ಯನಲ್ಲಿ ಅಗಾಧವಾದ ಶಕ್ತಿ ಅಡಗಿರುತ್ತದೆ. ಆದರೆ ನಿನ್ನಲ್ಲಿರುವ ಚೈತನ್ಯಕ್ಕೆ ವೈಶಿಷ್ಟತೆಯನ್ನು ನೀಡುವುದು, ಎಲ್ಲವನ್ನೂ ತಿಳಿಯಬೇಕೆಂಬ ಹಂಬಲ ಹಾಗೂ ತಪ್ಪನ್ನು ತಿದ್ದಿಕೊಂಡು ಕಲಿಯುವ ಗುಣ. ಇವುಗಳೆ ನಿನ್ನನ್ನು ಮುಂದೆ ಒಬ್ಬ ಮಹಾನ್ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತವೆ. ನಿನ್ನಲ್ಲಿ ಅಡಗಿರುವ ಅಂತರಾಗ್ನಿಯನ್ನ ಗುರುತಿಸಿ, ಅದನ್ನು ಮಹತ್ಕಾರ್ಯಕ್ಕಾಗಿ ಉಪಯೋಗಿಸು. ಜ್ವಾಲೆಯು ನೀನು ತೋರಿಸಿದ ದಿಕ್ಕಿನಲ್ಲಿ ಉರಿಯುತ್ತದೆ. ಅದನ್ನು ಮಹತ್ಕಾರ್ಯಕ್ಕಾಗಿ ಉಪಯೋಗಿಸು. ನಿನ್ನಲ್ಲಿ ಅಡಗಿರುವ ಶಕ್ತಿಯನ್ನು ಆವಿಷ್ಕರಿಸು.

ಇದನ್ನೆಲ್ಲಾ ಈ ಲೆಟರ್ನಲ್ಲಿ ಬರೆದುಕೊಡಲು ಕಾರಣ, ಈ ಅಕ್ಷರಗಳು ಸದಾ ನಿನ್ನೊಂದಿಗೆ ಇರಬೇಕು. ನಿನ್ನನ್ನು ಸದಾ ಹುರಿದುಂಬಿಸಬೇಕು ಎಂದು. ಹಾಗೆ ಆದ ಪಕ್ಷದಲ್ಲಿ ನನ್ನ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಂತಾಗುತ್ತದೆ. All the best Hari…!

ಇಂತಿ ನಿನ್ನ ಪ್ರೀತಿಯ,

ಗೋಪಾಲ್ ವರ್ಮಾ.”

ಲೆಟರನ್ನು ಓದಿ ಮುಗಿಸುತ್ತಲೇ, ಎಲ್ಲವನ್ನು ಸಾಧಿಸಬಲ್ಲೆನೆಂಬ ತೇಜಸ್ಸು ಅವನ ಕಣ್ಣು ಗಳಲ್ಲಿ ಮೂಡಿತ್ತು. ನೇರವಾಗಿ ಮ್ಯಾನೇಜರ್ ರವಿಯ ಬಳಿ ಹೋಗಿ, ದುಡ್ಡು ಕೊಟ್ಟು, ಕೀಲಿಯನ್ನು ವಾಪಸ್ಸು ಮಾಡಿದ.

” ಬರ್ತೀನಿ ರವಿ. ಮತ್ತೆ ಸಿಗೋಣ.” ಎಂದು ತನ್ನ ಬೈಕನ್ನು ಹತ್ತಿ ಹೊರಟ. ಕೆಲ ಕ್ಷಣಗಳಲ್ಲೆ ತನ್ನ ಪರಿವರ್ತನೆಗೆ ಸಾಕ್ಷಿಯಾದ ಸಪ್ತಗಿರಿಯ ಬೆಟ್ಟಗಳಲ್ಲಿ ಮರೆಯಾದ.

-ಕಿರಣ್. ವ್ಹಿ


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x