ಲೇಖನ

ಹೀಗೊಂದು ಕ(ವ್ಯ)ಥೆ: ಲಿಯೋ ರೆಬೆಲ್ಲೋ

"ಅಮ್ಮ.. ಚಾರ್ಲಿ ಮಾಮ ಬಂದಿದ್ದಾರೆ"
ಅಕ್ಕನ ಮಗ ಸುಕೇಶ್ ಅಡಿಗೆಮನೆಯಲ್ಲಿದ್ದ ಅಮ್ಮನಿಗೆ ಕೂಗಿ ಹೇಳಿದ್ದು ಕಿವಿ ಮೇಲೆ ಬಿದ್ದಾಗ ಅವನ ಹ್ರದಯದಲ್ಲಿ ಕಸಿವಿಸಿಯಿಂದ ಆಗಲೇ ಸುನಾಮಿ ಅಲೆಗಳು ಆರಂಭಗೊಂಡಿದ್ದವು. ಮಕ್ಕಳ ಜೊತೆಜೊತೆಗೆ ಮೊಮ್ಮಕ್ಕಳೂ ತಾಯಿಗೆ ಅಮ್ಮ ಎಂದು ಕರೆಯುವುದು ಆ ಕುಟುಂಬದ ಅಭ್ಯಾಸ.

ಬಾಬೂ… ಚಾರ್ಲಿ ಬಂದಿದ್ದಾರೆ ಹೊರಡು, ಸಮಯವಾಗಿದೆ ಎಂದು ಅಮ್ಮ ಕೂಗೊಟ್ಟಾಗ ಕೋಣೆಯ ಮಂಚದ ಮೇಲೆ ಕುಳಿತವನ ಕಾಲುಗಳಿಗೆ ಬಲವಿಲ್ಲದಂತಾಗಿ ಮೇಲೇಳಲು ಸಾಧ್ಯವಾಗಲಿಲ್ಲ, ಕೆಲಕ್ಷಣಗಳ ನಂತರ ಸುಧಾರಿಸಿಕೊಂಡು ಹೊರಡುವ ವೇಳೆ ಕೈಯನು ಅದುಮಿಡಿದ ಅವಳು ಹೋಗಲೇ ಬೇಕಾ? ಎಂದಾಗ ಅವಳ ಕಣ್ಣುಗಳಲ್ಲಿ ಹರಿದ ಕಣ್ಣೀರ ಹೊಳೆಯ ಕಂಡಾಗ ಪರ್ಯಾಯವಿಲ್ಲದ ತನ್ನ ಜೀವನದ ಅನಿವಾರ್ಯತೆಯ ನೆನೆದು ಅಲ್ಲೇ ಕುಸಿಯಲು ಮನಃಪಟಲ 3 ತಿಂಗಳ ಹಿಂದೆ ಅವನನ್ನು ಕರೆದೊಯ್ದಿತ್ತು.

ಬಾಬು ಬಡಕುಟುಂಬದಲ್ಲಿ ಹುಟ್ಟಿಬೆಳೆದ ಹುಡುಗ ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡ ತಬ್ಬಲಿ, ಹಾಸ್ಟೆಲ್ಲಿನಲ್ಲಿದ್ದು ತನ್ನ ತಾಯಿಯ ಕೂಲಿಮಾಡಿ ಬಂದ ಆದಾಯದಲ್ಲಿ ಕಷ್ಟಪಟ್ಟು ಓದಿ ಪದವೀಧರನಾಗಿದ್ದ, ಪಧವಿಯ ಪರೀಕ್ಷೆಗಳು ಮುಗಿದ ನಂತರ ಅಲ್ಲಲ್ಲಿ ಕೆಲಸಕ್ಕೆ ಅಲೆದ ಅವನು ತಾನು ಪದವೀಧರನಾದರೂ ಒಳ್ಳೆಯ ಕಲಸ ಸಿಗುವ ತನಕ ಕೂಲಿ ಕೆಲಸಕ್ಕೆ ಹೋಗಲು ಹಿಂಜರಿಯಲಿಲ್ಲ, ಕೆಲಸದಲ್ಲಿ ಯಾವುದು ಕೀಳಲ್ಲ ಎಂಬ ಭಾವನೆ ಅವನದು. ಹೀಗೆ ತಂದೆಯನ್ನು ಬಾಲ್ಯದಲ್ಲೇ ಕಳೆದುಕೊಂಡು ಹಾಸ್ಟೇಲ್ನಲ್ಲೆ ಬೆಳೆದ ಅವನು ಆಪ್ತರ ಪ್ರೀತಿಯಿಂದ ವಂಚಿತನಾಗಿದ್ದ ತಂದೆ/ಮಗನ ಪ್ರೀತಿ, ತಾಯಿ/ಮಗನ ಪ್ರೀತಿ, ಒಡಹುಟ್ಟಿದವರ ಪ್ರೀತಿ ಏನೆಂದು ಅರಿಯದೆಯೆ ಯೌವನಾವಸ್ಥೆಯನ್ನು ತಲುಪಿದ್ದ, ಕಾಲೇಜಿನಲ್ಲಿ ವಯಸ್ಸಿಗನುಗುಣವಾಗಿ ಕೆಲ ಸುಂದರ ತರುಣಿಯರಿಂದ ಆಕರ್ಷಿತನಾದರೂ ಅವರೇ ಆಗಿ ಗೆಳೆತನದ ಹಸ್ತಗಳ ಚಾಚಿದರೂ "ಫ್ರೆಂಡ್ಶಿಪ್, ಡೇಟಿಂಗ್ ಇವೆಲ್ಲ ಬಡವರ ಮನೆಗಳಲ್ಲಿ ಹುಟ್ಟಿದವರಿಗಲ್ಲ" ಎಂದು ತೀರ್ಮಾನಿಸಿಕೊಂಡು ಇವೆಲ್ಲವುಗಳಿಂದ ದೂರ ಉಳಿದಿದ್ದ. ಹೀಗೆ ಜೀವನ ಸಾಗಿಸಿಕೊಂಡು ಹೋಗುತ್ತಿದ್ದವನಿಗೆ ಒಬ್ಬ ಸಂಭಂದಿಯ ಸಹಾಯದ ಮೇಲೆ ಸಿಕ್ಕ ಕೆಲಸದ ಮೇಲೆ ಗಲ್ಫ್'ಗೆ ಹೋದವನು 5 ವರ್ಷಗಳ ಕಾಲ ಶ್ರಮವಹಿಸಿ ದುಡಿದು ತನ್ನ ಹಳೆಯ ಮನೆಯನ್ನು ಕೆಡವಿ ಸಣ್ಣದೊಂದು ಮನೆಯನ್ನು ಕಟ್ಟಿಸಿ ಇದ್ದ ಅಲ್ಪ ಸ್ವಲ್ಪ ಸಾಲವನ್ನೂ ತೀರಿಸಿ ದೂರದ ಸಂಭಂದಿಯೊಬ್ಬರ ಮದುವೆಯಲ್ಲಿ ಕಂಡ ಅವಳನ್ನು ಮದುವೆಯಾದ ಮೇಲೆಯೆ ಪ್ರೀತಿಯ ಅರ್ಥವನ್ನು ಅರಿಯುವ ಪ್ರಯತ್ನದಲ್ಲಿದ್ದನು.

ಎರೆಡು ತಿಂಗಳ ರಜೆಗೆಂದು ಬಂದ ಬಾಬು ಅವಳೊಡನೆ ಮದುವೆಯ ತಾರೀಖು ಗಟ್ಟಿಯಾದಾಗ ಮೇಲಾಧಿಕಾರಿಯಲ್ಲಿ ಮನವಿ ಮಾಡಿ ಇನ್ನೊಂದು ತಿಂಗಳ ರಜೆಯನ್ನು ಗಿಟ್ಟಿಸಿಕೊಂಡಿದ್ದ, ಮದುವೆಯ ಒಂದೇ ವಾರದಲ್ಲಿ ಆಕೆಯೊಡನೆ ಗಾಢಬಂಧನದಲ್ಲಿ ಬಂಧಿತನಾಗಿದ್ದ ಅವನು, ಆಕೆಯೊಡನೆ ಕುಲು ಮನಾಲಿಯಲ್ಲಿ ಕಳೆದ ಹನಿಮೂನ್ ದಿನಗಳಂತು ಅವನಿಗೆ ಎಂದೂ ಮರೆಯಲಾರದ ಕ್ಷಣಗಳಾದವು, ಅಂದು ಮನಾಲಿಯ ಉಧ್ಯಾನದಲ್ಲಿ ಸಂಜೆಯ ಆ ಕೋರೆವ ಚಳಿಯಲ್ಲಿ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿರಲು ಅವಳ ಕೈಬೆರಳುಗಳು ತಲೆಕೂದಲನ್ನು ನೇವರಿಸುತ್ತಿರಲು ಆವರೆಗೆ ಎಂದೂ ಅರಿಯದ ಆ ಆನಂದದ ಅನುಭವದಿಂದ ಅದೇನೊ ಮಹತ್ತನ್ನು ಸಾಧಿಸಿದ್ದ. ತಾನು ಅಲ್ಲಿದ್ದ ಪ್ರತೀ ಕ್ಷಣವೂ ತನ್ನನ್ನು ಎಂದೂ ಬಿಟ್ಟಿರಲಾರದ ಅವಳನ್ನು ಕಂಡು ತನ್ನ ಜೀವನದಲ್ಲಿ ಏನೊ ಹೊಸತನ್ನು ಕಂಡುಕೊಂಡಿದ್ದ. ಕಳೆದ ವಾರದಲ್ಲಿ ಮರವಂತೆ ಬೀಚಿನಲ್ಲಿ ಇಬ್ಬರೆ ಅಪರಾತ್ರಿಯವರೆಗಿದ್ದು ತನ್ನ ಅಗಲುವಿಕೆಯ ಬಗ್ಗೆ ಚರ್ಚಿಸಿದಾಗ ಕೈ ಖಾಲಿಯಾಗಿದ್ದ ಪರಿಸ್ಥಿತಿಯನ್ನು ಅರಿತಿದ್ದ ಆಕೆ ಸಮ್ಮತಿಸಿದ್ದರೂ ಕಣ್ಣಂಚಿನಿಂದ ಹರಿದ ಹನಿಯೊಂದು ಅವನ ಕಣ್ಣಿಗೂ ಬಿದ್ದಿತ್ತು. ಮರಳಿ ಹೋಗಿ ಮೇಲಾಧಿಕಾರಿಗಳಲ್ಲಿ ಬೇಡಿ ವೀಸಾ ಪಡೆಯಲು ಪ್ರಯತ್ನಿಸುವುದಾಗಿ ಹೇಳಿ ಅವಳನ್ನು ಸಮಾಧಾನಿಸುವ ಪ್ರಯತ್ನ ಬಾಬು ಮಾಡಿದ್ದ.
ಭಾರವಾದ ಹ್ರದಯದಿಂದ ಕಾರನ್ನೇರಿ ಕುಳಿತಿದ್ದ ಅವನ ಕೈಯಲ್ಲಿ ಕೈಯಿಟ್ಟ ಅವಳ ಪರಿಸ್ಥಿತಿಯನ್ನರಿಯದ, ಸೂಟ್ ಕೇಸನ್ನು ಆಗಾಗಲೆ ತನ್ನಲ್ಲಿ ಹೇರಿಕೊಂಡ ಚಾರ್ಲಿಯ ಕಾರು ಅವಳ ಕಣ್ಣಿರಿಗೆ ಯಾವುದೇ ಬೆಲೆಕೊಡದೆ ಸೊಂಯ್ಯನೆ ವಿಮಾನ ನಿಲ್ದಾಣದೆಡೆಗೆ ಸಾಗಿತ್ತು.

-ಕಬಳೆಯಂವ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *