ಸುಟ್ಟೇಬಿಡುವ ಸಿಟ್ಟು: ಪ್ರಶಸ್ತಿ ಪಿ.

ಅವನಿಗೆ ಮೂಗಿನ ತುದಿಗೇ ಕೋಪ, ಇವ ದೂರ್ವಾಸ ಮುನಿಯ ಅಪರಾವತಾರ ಅಂತ ಹೆಚ್ಚೆಚ್ಚು ಸಿಟ್ಟು ಮಾಡಿಕೊಳ್ಳೋ ಜನರ ಬಗ್ಗೆ ಮಾತನಾಡೋದು ಎಲ್ಲಾದ್ರೂ ಕೇಳೇ ಇರ್ತೇವೆ. ಕ್ಷಣ ಕ್ಷಣಕ್ಕೂ ಕೋಪ ಮಾಡಿಕೊಳ್ಳೋ ಜನರಿರೋ ತರ ಸಾಮಾನ್ಯವಾಗಿ ಶಾಂತ ಸ್ವಭಾವದ ಜನರೂ ಕೆಲಸಲ ಇದ್ದಕ್ಕಿದ್ದಂತೆ ಕೋಪಗೊಳಗಾಗುತ್ತಾರೆ. ಸಾತ್ವಿಕ ಸಿಟ್ಟು, ಜಗಳ ವಿಪರೀತಕ್ಕೊಳಗಾಗಿ ಮಿತ್ರರನ್ನೇ ಕೊಲ್ಲೋ ಸಿಟ್ಟು, ಕೆಲಸ ಮಾಡಿಸಲೋಸುಗ ತೋರೋ ಹುಸಿ ಸಿಟ್ಟು .. ಹಿಂಗೆ ಸಿಟ್ಟನ್ನು ಹಲಪರಿಯಲ್ಲಿ ವಿಂಗಡಿಸಬಹುದಾದ್ರೂ ಸಿಟ್ಟಿಂದ ಆಗಬಹುದಾದ ಲಾಭಗಳಿಗಿಂತ ಒದಗೋ ಅಪಾಯಗಳೇ ಹೆಚ್ಚೆಂದು ಕಾಣಿಸುತ್ತವೆ. ಕ್ಷುಲಕ ಕಾರಣಕ್ಕೆ ಶುರುವಾದ ಜಗಳದಿಂದ ಮಾರಾಮಾರಿ, ಸಣ್ಣ ವಿಷಯದಿಂದ ಶುರುವಾದ ಜಗಳದಿಂದ ಮನನೊಂದು ವರ್ಷಗಟ್ಟಲೇ ದೂರಾದ ಸ್ನೇಹಿತರು.. ಇಂತಹ ಎಷ್ಟೋ ಸನ್ನಿವೇಶಗಳು ಕಣ್ಣಮುಂದೆ ಪದರ ಪದರಗಳಾಗಿ ಬಿಚ್ಚಿಕೊಳ್ಳುತ್ತವೆ ಸಿಟ್ಟಿನ ವಿಷಯ ಬಂದಾಗಲೆಲ್ಲಾ.

ಭಾನುವಾರದ ಭಾರತ, ಆಫ್ರಿಕಾ ವಿಶ್ವಕಪ್ ಮ್ಯಾಚ್ ನೋಡೋದ್ರ ಜೊತೆಗೆ ಅವತ್ತಿನ ಸುದ್ದಿಯನ್ನೂ ಓದೋಣ ಅಂತ ಮುಂಬಾಗಿಲು ತೆರೆದುಕೊಂಡು ಅಲ್ಲೇ ಪೇಪರ್ ಹಾಸಿಕೊಂಡು ಟೀವಿ ನೋಡ್ತಾ ಕೂತಿದ್ದೀರ. ಅಷ್ಟರಲ್ಲೇ ಬಂದ ನಿಮ್ಮ ರೂಂಮೇಟು ಚೆನ್ನಾಗಿ ಬೆಳಕು ಬರುತ್ತಿದ್ದ ಬಾಗಿಲು ಹಾಕಿ ಟ್ಯೂಬ್ ಲೈಟ್ ಆನ್ ಮಾಡುತ್ತಾನೆ. ನೈಸರ್ಗಿಕ ಬೆಳಕಿನಲ್ಲಿ ಪೇಪರ್ ಓದುತ್ತಿದ್ದ ನಿಮ್ಮ ಕ್ರಿಯೆಗೆ ಅಡ್ಡಿಯೊಡ್ಡಿದ ಅವನ ಮೇಲೆ ವಿಪರೀತ ಕೋಪ ಬರುತ್ತೆ. ಆದ್ರೂ ತಡ್ಕೋತೀರ. ನೈಸರ್ಗಿಕ ಬೆಳಕಿದ್ದಾಗ ಟ್ಯೂಬ್ಲೈಟ್ ಯಾಕೆ ಬಳಸಬೇಕು ಅನ್ನೋದು ನಿಮ್ಮ ಅಭಿಪ್ರಾಯ. ಅದನ್ನೇ ಅವನಿಗೂ ಶಾಂತವಾಗಿ ತಿಳಿಸೋಕೆ ಹೋಗ್ತೀರ. ಹಿಂದಿನ ದಿನ ಓನರ್ರೂ ಹಗಲಿನಲ್ಲಿ ಲೈಟ್ ಬಳಸೋದ್ರ ಬಗ್ಗೆ ಎಚ್ಚರಿಸಿದ್ದನ್ನು ತಿಳಿಸಿ , ನೋಡಪ್ಪಾ ಹಗಲಲ್ಲಿ , ಪ್ರಾಕೃತಿಕ ಬೆಳಕಿರುವಾಗ ಲೈಟ್ ಯಾಕೆ ಬಳಸ್ತೀಯ ? ಬಾಗಿಲು ತೆರದ್ರೆ ಸಹಜವಾದ ಬೆಳಕೇ ಬರುತ್ತಲ್ಲಾ ? ಮತ್ಯಾಕೆ ಲೈಟು ಅಂದ್ರೆ ಅವ್ನು ಒಪ್ಪೋಕೆ ತಯಾರಿರೋಲ್ಲ. ನಿಮ್ಮ ಯಾವ ಮಾತನ್ನೂ ಕೇಳೋಕೆ ತಯಾರಿರದಂತೆ ಇರ್ಲಿ ಬಿಡೋ, ಇರ್ಲಿ ಬಿಡೋ ಅನ್ನೋದೊಂದೆ ಅವ್ನ ವಾದ. ನ್ಯಾಷನಲ್ ವೇಶ್ಟು, ಲೈಟಿಗೆ ಪರದಾಟ್ತಿರೋ ಸಾವಿರ ಜನ ಹಳ್ಳಿಗಳಲ್ಲಿರ್ತಾರೆ ಅನ್ನೋ ಆಲೋಚನೆಗಳಿಗೆಲ್ಲಾ ಅವ್ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸರಿ, ಬಿಡಪ್ಪ. ನಿನ್ನಿಷ್ಟ ಅಂತ ಸುಮ್ನಾಗ್ತೀರಿ ಸಿಟ್ಟು ಮಾಡ್ಕೊಂಡ್ರೆ ಸುಮ್ನೇ ನಿಮ್ಮ ಶಕ್ತಿಯೇ ವ್ಯರ್ಥ ಅಂತ. 

ವಿಷಯ ಇಲ್ಲಿಗೇ ಮುಗಿಯೋಲ್ಲ. ಇನ್ನೆರಡು ನಿಮಿಷದ ನಂತ್ರ ಅವ್ನು ಟೀವಿ ಆಫ್ ಮಾಡ್ತಾನೆ. ಯಾಕಪ್ಪಾ ಆಫ್ ಮಾಡಿದೆ ಅಂದ್ರೆ ಇದ್ನ ಯಾರೂ ನೋಡ್ತಿಲ್ಲವಲ್ಲ. ಇದು ನ್ಯಾಷನಲ್ ವೇಶ್ಟಲ್ಲವೇ ಅಂತ ಏರಿದ ದನಿಯಲ್ಲಿ ಉತ್ತರಿಸುತ್ತಾನೆ. ಮತ್ತೆ ಸಿಟ್ಟು ನೆತ್ತಿಗೇರುತ್ತದೆ. ಮೊದಲಿಂದಲೂ ಶಾಂತ ರೀತಿಯಲ್ಲೇ ಮಾತಾಡ್ತಿದ್ರೂ, ಅವನ ಅಭಿಪ್ರಾಯಕ್ಕೆ ಬೆಲೆ ಕೊಟ್ರೂ  ಇವ ಈಗ ಮುಯ್ಯಿಗೆ ಮುಯ್ಯಿ ಅನ್ನೋ ತರದಲ್ಲಿ ಮಾತಾಡ್ತಿದ್ದಾನಲ್ಲ ಇವ್ನ ಸುಮ್ಮನೇ ಬಿಡಬಾರದು ಅನಿಸಿಬಿಡುತ್ತೆ. ಹಾಗಂತಾ ಸಿಟ್ಟಿಗೆ ಬಾಯಿ, ಕೈ ಕೊಟ್ಟಿರೋ ಅನರ್ಥವಾದಂತೆಯೇ. ಸದ್ಯಕ್ಕೆ ಮ್ಯಾಚ್ ಆಸಕ್ತಿಕರ ಸ್ಥಿತಿಯಲ್ಲೇನಿಲ್ಲ. ಸ್ವಲ್ಪ ಹೊತ್ತು ಬಿಟ್ಟು ನೋಡ್ಕೊಂಡ್ರಾಯ್ತು. ಆಮೇಲಿಂದಾಮೇಲೆ ಅಂತ ನಿಮ್ಮ ಉಳಿದ ಕೆಲಸಗಳ ಕಡೆಗೆ ಗಮನ ಹರಿಸಿಬಿಡ್ತೀರ. ಅದ ಬಿಟ್ಟು ಜಗಳವಾಡಿದ್ದಿದ್ರೆ ಆ ಒಂದು ಘಂಟೆ ಅಥವಾ ಇಡೀ ದಿನದ ಮೂಡ್ ಹಾಳಾಗೋ ಸಾಧ್ಯತೆಗಳಿರ್ತಿತ್ತು. ಮತ್ತೆ ಒಂದು ಲೈಟ್ ಮತ್ತೊಂದು ಟೀವಿಯ ಕಾರಣ ಒಂದೇ ರೂಮಲ್ಲಿರೋ ವ್ಯಕ್ತಿಯನ್ನ ಅಜನ್ಮ ಶತ್ರುವಿನ ರೀತಿ ಕಾಣಬೇಕಾದ ಪರಿಸ್ಥಿತಿಯೂ ಬರಬಹುದಿತ್ತು.  ಈ ಸಿಟ್ಟನ್ನೋದು ಕ್ಷಣಿಕ. ಆದ್ರೆ ಆ ಕ್ಷಣದಲ್ಲಿ ನಮ್ಮ ಬುದ್ದಿಯನ್ನು ಸ್ವಾಧೀನದಲ್ಲಿಟ್ಟುಕೊಳ್ಳದಿದ್ದರೆ ಆಗೋ ಅನಾಹುತಗಳು ಮಾತ್ರ ಶಾಶ್ವತ. ಆ ಕ್ಷಣಕ್ಕೆ ಸಿಟ್ಟು ಮಾಡಿಕೊಳ್ಳದೇ ಮತ್ತೊಬ್ಬ ಆ ತರದಲ್ಲಿ ಯಾಕೆ ವ್ಯವಹರಿಸುತ್ತಿದ್ದಾನೆ ಅಂತೇನಾದ್ರೂ ಕೊಂಚ ಚಿಂತಿಸಿದ್ರೂ, ಆ ವಿಚಾರಧಾರೆಯನ್ನು ಕೊಂಚ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ರೂ ಸಾಕು, ಸಿಟ್ಟಿನಿಂದಾಗೋ ಅನಾಹುತಗಳು ಅದೆಷ್ಟೋ ಪಾಲು ಕಮ್ಮಿಯಾಗುತ್ತದೆ.

ಈ ಸಿಟ್ಟನ್ನೋದು ಬೇಸಿಗೆಯಲ್ಲಿ ದಿಢೀರನೆ ಬಂದು ಜನಜೀವನ ಅಸ್ತವ್ಯಸ್ಥಗೊಳಿಸಿ ಮತ್ತೆ ತನ್ನ ಸುಳಿವೂ ಇರದಂತೆ ಮಾಯವಾಗೋ ಮಳೆಯಂತೆ. ಕೆಲವರಿಗೆ ಬಂದ ಸಿಟ್ಟು ಕೆಲ ನಿಮಿಷಗಳಲ್ಲೇ ಝರ್ರನೆ ಇಳಿದರೆ ಕೆಲವರು ಬೂದಿಮುಚ್ಚಿದ ಕೆಂಡದಂತೆ ಅದರಲ್ಲೇ ಘಂಟೆಗಳ, ದಿನಗಳ ಕಾಲ ಬುಸುಗುಡುತ್ತಿರುತ್ತಾರೆ ! ಕೊನೆಗೂ ಸಿಟ್ಟು ನಿಧಾನವಾಗಿ ತಣ್ಣಗಾದ ಮೇಲೆ ನಿಜವಾಗ್ಲೂ ನಾನಷ್ಟು ಸಿಟ್ಟುಗೊಳ್ಳೋ ಅಗತ್ಯವಿತ್ತಾ ಅಂತ ಅವರೇ ಯೋಚಿಸಿ ಪರಿತಪಿಸಿದ ಉದಾಹರಣೆಗಳೆಷ್ಟೊ. ಇಂತಾ ಹಲವೆಂಟು ಘಟನೆಗಳು ನಿಮ್ಮ ಜೀವನದಲ್ಲೂ ನಡೆದಿರಬಹುದು. ಒಂದಿಷ್ಟು ಘಂಟೆಗಳ ಅಥವಾ ಇಡೀ ದಿನದ ನೆಮ್ಮದಿ ಕೆಡಿಸಿರಲೂಬಹುದು. ಆದ್ರೆ ಸಿಟ್ಟಿಗೆಂತ ಮೂಗು ಕೊಯ್ಕಂಡು ಆಮೇಲೆ ಪರಿತಪಿಸೋ ಬದಲು ಸಿಟ್ಟಿನ ಸಮಯದಲ್ಲಿನ ಆತ್ಮನಿಗ್ರಹವೇ ಒಳಿತೆನಿಸುತ್ತೆ. 

ಸಿಟ್ಟೇ ಮಾಡಿಕೊಳ್ಳಲ್ಲ ಈ ಮನುಷ್ಯ ಅನ್ನೋದು ಅವನ ದೌರ್ಬಲ್ಯ ಅಂತ ಅರ್ಥೈಸೋ ಅಪಾಯವಿರೋದಿಲ್ವೇ ಅಂತ ಅನೇಕರ ಮನದಲ್ಲೀಗ ಅನಿಸುತ್ತಿರಬಹುದು. ಮನುಷ್ಯನೊಬ್ಬ ಸಿಟ್ಟು ಮಾಡಿಕೊಳ್ಳಲ್ಲ ಅಂದ್ರೆ ಅವ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ, ಅವನತ್ರ ಏನು ಮಾಡಿದ್ರೂ ನಡೆದೀತು ಅಂತ್ಯಾಕೆ ಅರ್ಥೈಸಬೇಕು ? ಹೇಳಬೇಕಾದ ವಿಚಾರವನ್ನು ಶಾಂತ ರೀತಿಯಲ್ಲೂ ಹೇಳಬಹುದಲ್ಲಾ ? ಸಿಟ್ಟಿನ ಭರದಲ್ಲಿ ಒಂದೇ ಉಸಿರಲ್ಲಿ ಹೇಳಹೊರಟಾಗ ಆ ಉದ್ವೇಗದಲ್ಲಿ ಹೇಳಬೇಕಾದ ಅಂಕಿ ಅಂಶಗಳು ಮಿಸ್ಸಾಗಬಹುದು. ಕೆಲವು ಮರೆತೇ ಹೋಗಬಹುದು. ಕೇಳುಗನ ದೃಷ್ಟಿಯಲ್ಲಿ ನಮ್ಮ ಸ್ಥಾನವನ್ನೂ ಕಳೆದುಕೊಳ್ಳಬಹುದು. ಕೇಳಿಸಿಕೊಳ್ಳುವವ ನಮ್ಮ ಸಿಟ್ಟನ್ನು ತಡೆದುಕೊಳ್ಳುತ್ತಿದ್ದಾನೆ, ನಮಗಿಂತ ಹೆಚ್ಚಿನ ಸಿಟ್ಟಲ್ಲಿ ಪ್ರತಿಕ್ರಿಯಿಸುತ್ತಿಲ್ಲ ಅಂದ್ರೆ ಅದು ನಮ್ಮ ಸದ್ಯದ ಸ್ಥಾನದ ದೆಸೆಯಿಂದಾಗಿರಬಹುದು ಅಥವಾ ಅವರಿಗೆ ನಮ್ಮ ಮೇಲಿನ ಪ್ರೀತಿಯಿಂದಾಗಿರಬಹುದು. ಆದ್ರೆ ಈ ಸ್ಥಾನ, ಪ್ರೀತಿ, ಪರಿಸ್ಥಿತಿಗಳು ಯಾವಾಗ್ಲೂ ಒಂದೇ ರೀತಿಯಲ್ಲಿರುವುದಿಲ್ಲ. ಉದಾಹರಣೆಗೆ ನಿಮ್ಮಮ್ಮನೋ ಪತ್ನಿಯೋ ಅಥವಾ ನಿಮ್ಮ ಮನೆ ಕೆಲಸದವನೋ, ಕೆಲಸದವಳೋ ನಿಮಗೆ ದಿನಾ ಬೆಳಗ್ಗೆ ಏಳಕ್ಕೆ ರುಚಿರುಚಿಯಾದ ತಿಂಡಿ ಮಾಡಿಕೊಡುತ್ತಾರೆ. ಒಂದಿನ ಏಳೂಹತ್ತಾದ್ರೂ ತಿಂಡಿ ರೆಡಿಯಾಗಿಲ್ಲ. ನಿಮಗೆ ಆಫೀಸಿಗೆ ಬೇರೆ ಲೇಟಾಗ್ತಿದೆ. ನಿಮಗೆ ವಿಪರೀತ ಸಿಟ್ಟು ಬಂದು ವಿಪರೀತ ಕೂಗಾಡಿಬಿಡ್ತೀರ ಅವ್ರ ಮೇಲೆ. ಅವ್ರು ಆ ಕ್ಷಣದಲ್ಲಿ ಏನೂ ಪ್ರತ್ಯುತ್ತರ ನೀಡದಿದ್ರೂ ಅದು ಅವ್ರ ಮೇಲೆ ಇಡೀ ದಿನ ಅದೆಂತಾ ಪರಿಣಾಮ ಬೀರಬಹುದೆಂದು ಅವ್ರ ಸ್ಥಾನದಲ್ಲಿ ನಿಂತು ಯೋಚಿಸಿದ್ದೀರ ? ಮತ್ತೆ ಒಂದು ದಿನದ ಬೈಗುಳ ಮಾಸದ ಗಾಯದಂತೆ ಅದೆಷ್ಟೋ ದಿನಗಳ ಕಾಲ ಅವರನ್ನು ಕಾಡುತ್ತಲೇ ಇರಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ತಿಂಡಿಯೇನೋ ಲೇಟಾಯ್ತು ಅಥವಾ ರುಚಿಯಿರ್ಲಿಲ್ಲ ಅಂದ್ರೆ ಮಾಡಿದವ್ರನ್ನ ಬಯ್ಯೋ ಬದ್ಲು ಏನಾಯ್ತು ಅಂತ ಶಾಂತವಾಗಿ ಒಮ್ಮೆ ಕೇಳಿದ್ರೆ ಏನಾಗ್ತಿತ್ತು ? ಗ್ಯಾಸ್ ಖಾಲಿಯಾಗಿ ಹೊಸ ಸಿಲಿಂಡರಿಗೆ ಅಳವಡಿಸೋದ್ರಲ್ಲಿ ಲೇಟಾದ ಸಂಗತಿಯನ್ನೋ ಹಿಂದಿನ ರಾತ್ರಿಯಿಡೀ ನಿದ್ರೆ ಬರದೆ ಬೆಳಗ್ಗೆ ಲೇಟಾಗೆದ್ದ ಸಂಗತಿಯನ್ನೋ ಅಥವಾ ಇನ್ನೊಂದು ಮತ್ತೊಂದನ್ನೊ ತಿಳಿಸೋ ಸಾಧ್ಯತೆಯಿತ್ತು. ಇಲ್ಲಿ ಆಗಬೇಕಾಗಿದ್ದೇನಪ್ಪಾ ? ನಿಮಗೆ ಲೇಟಾಗ್ತಿರೋ ಸಂಗತಿ ಅವರಿಗೆ ತಿಳಿಯಬೇಕಾಗಿದೆ ಅಥವಾ ಲೇಟಾಗಿ ಹೋಗಿರೋದಕ್ಕೆ ಬೇರೆ ಪರ್ಯಾಯಗಳ ಹುಡುಕಬೇಕಾಗಿದೆ ಅಷ್ಟೆ. ಸಿಟ್ಟಿನಿಂದ ಇದರಲ್ಲಿ ಯಾವುದಾದ್ರೂ ಆಗುತ್ತಾ ? ಇಲ್ಲವೆಂದ ಮೇಲೆ ಸಿಟ್ಯಾಕೆ ? ಅದರಿಂದ ಆಗೋ ಮೂಡೌಟ್ಯಾಕೆ ? 

ಕೆಲಸದವ ರೂಮನ್ನು ಸರಿಯಾಗಿ ಕ್ಲೀನ್ ಮಾಡಿಲ್ಲ. ದುಡ್ಡಿಸ್ಕೊಂಡ ಫ್ರೆಂಡು ಕೊಡ್ತೀನಿ ಅಂದ ದಿನಕ್ಕೆ ವಾಪಾಸ್ ಕೊಡ್ಲಿಲ್ಲ, ಆಫೀಸ್ ಬಸ್ಸು ಹೊತ್ತಿಗೆ ಸರಿಯಾಗಿ ಬಂದಿಲ್ಲ. ನಲವತ್ತು ರೂಪಾಯಿ ಕೇಜಿಯ ಒಳ್ಳೆ ಅಕ್ಕಿ ಅಂತ ಕೊಟ್ಟ ಅಕ್ಕಿಯಲ್ಲಿ ಪೂರಾ ಕಲ್ಲು, ಅಂಗಡಿಯವನ ಮಾತೆಲ್ಲಾ ಸುಳ್ಳೇ ಸುಳ್ಳು .. ಹೀಗೆ ನಿತ್ಯ ಬೆಳಗಾಗೆದ್ದರೆ ಸಿಟ್ಟುಕೊಳ್ಳೋಕೆ ನೂರು ಕಾರಣ ಸಿಗುತ್ತೆ.ಆದ್ರೆ ಇವೆಲ್ಲಕ್ಕೂ ಉಗ್ರಾವೇಷದಿಂದ ಹರಿಹಾಯೋ ಬದ್ಲು ಶಾಂತವಾದ ವರ್ತನೆಗಳಲ್ಲೂ ಪರಿಹಾರ ಸಾಧ್ಯವಿದೆ. ವಿಪರೀತ ಕೋಪ ಬರ್ತಿದೆ ಅಂದ್ರೆ ಹೇಳೆ ಬಿಡಬೇಕು ಅಂತ ಬಾಯಿಗೆ ಬಂದಿರೋ ಕೆಟ್ಟ ಮಾತನ್ನೂ ಒಂದೆರಡು ಕ್ಷಣ ತಡೆದುಕೊಳ್ಳಿ. ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಅನ್ನುವಂತೆ ನೀವಾಡಿದ ಮಾತನ್ನು, ಮಾಡಿದ ಕೆಲಸವನ್ನು ಹಿಂತೆಗೆದುಕೊಳ್ಳೋಕೆ ಸಾಧ್ಯವಿಲ್ಲ. ಎರಡು ಕ್ಷಣಗಳ ನಂತರವೂ ಸರಿಯೆನಿಸಿದ ಮಾತುಗಳನ್ನೇ ಆಡಿ. ಯಾರೇನೇ ಮಾಡಿದ್ರೂ ಕೈಲಾಗದಂತೆ ಸುಮ್ಮನಿರು ಅಂತಲ್ಲ. ನಮ್ಮ ಸಿಟ್ಟನ್ನೋದು ಬೆಂಕಿಕಡ್ಡಿಯ ತುಡಿಯಲ್ಲಿನ ಮದ್ದಿನ ತರಹ ಇರಬೇಕು. ಬೆಳಕು ಬೇಕಾದಾಗ ಗೀರಿ ಮತ್ತೆ ನಂದಿಹೋಗೋ ಅದರ ಬದಲು ಸದಾ ಗೀರುತ್ತಲೇ ಇರುತ್ತೀನೆಂದರೆ ಒಂದು ಪಟ್ಟಣದ ಅಷ್ಟೂ ಕಡ್ಡಿಗಳು ಕೆಲ ಹೊತ್ತಿನಲ್ಲಿ ಖಾಲಿಯಾಗುತ್ತವೆ. ಅದೇ ತರಹ ನಮ್ಮ ಜೀವನದಲ್ಲಾಗಬೇಕಾದ ಅತ್ಯಮೂಲ್ಯ ಸಂಗತಿಗಳೆಲ್ಲವೂ ಸಿಟ್ಟಿನಲ್ಲಿ ನಮ್ಮನ್ನು ಸುಟ್ಟುಕೊಳ್ಳೋದ್ರಲ್ಲೇ ದಹಿಸಿಹೋಗುತ್ತವೆ .

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
raghavendra bellary
raghavendra bellary
9 years ago

good article..will adopt this tq

Akhilesh Chipli
Akhilesh Chipli
9 years ago

ಆಯ್ತು ಸಿಟ್ಟೂ, ಈ ಲೇಖನ ಓದಿದ ಮೇಲೆ ನನ್ನ ಹತ್ತಿರ ಬರಬೇಡ!! ಚೆನ್ನಾಗಿದೆ ಪ್ರಶಸ್ತಿ.

2
0
Would love your thoughts, please comment.x
()
x