ಹನಿ ನೀರಿಗೆ ಸಮುದ್ರದಷ್ಟು ಪ್ರೀತಿ ..: ಅನಿತಾ ನರೇಶ್ ಮಂಚಿ


 ಇಡೀ ಮಳೆಗಾಲ  ಇವರು ಬಾರದೇ ಇದ್ದಾಗ ಸಿಟ್ಟು ಉಕ್ಕೇರುತ್ತಿತ್ತು. ಅಲ್ಲಾ.. ದೂರದಲ್ಲಿ ಕಂಡರೂ ಗುರುತಿಲ್ಲದವರಂತೆ ಕತ್ತು ಕೊಂಕಿಸಿ, ಮುಖ ಕುಣಿಸಿ ಮಾಯವಾಗುತ್ತಿದ್ದರಲ್ಲದೇ ಮನೆ ಕಡೆಗೆ ಸುಳಿಯುತ್ತಿರಲಿಲ್ಲ.. ಎಷ್ಟು ಸೊಕ್ಕು ಅಂದುಕೊಂಡರೂ ಹಾಗೇನಿರಲಾರದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಲೂ ಇದ್ದೆ. ಅಯ್ಯೋ.. ನಿಮಗೆ ಇವರು ಯಾರು ಅಂತ ಮೊದಲು ಪರಿಚಯ ಮಾಡಿಕೊಡದೆ ನನ್ನ ಗೋಳು ತೋಡ್ಕೊಳ್ತಾ ಇದ್ದೀನಲ್ಲಾ.. ಇವರು ಅಂದರೆ ಹಕ್ಕಿಗಳು ಸ್ವಾಮೀ.. ಮಳೆಗಾಲದಲ್ಲಿ ಹೊರಗೆ ನೀರಿನ ಲಭ್ಯತೆ ಇರುವ ಕಾರಣ ಇವರ ಹಾರಾಟ ಕೂಗಾಟವೆಲ್ಲಾ ದೂರದಲ್ಲೇ .. 
ಬಿಸಿಲಿನ ಝಳ ಹೆಚ್ಚುತ್ತಿದ್ದ ಹಾಗೆ ಮನೆಯ ಅಡುಗೆ ಕೋಣೆಯ ಹತ್ತಿರ ಬಂದು ಗಲಾಟೆ ಶುರು ಮಾಡುತ್ತಿದ್ದವು. ಅಡುಗೆ ಕೋಣೆಯ ಕಿಟಕಿಯ ನೇರಕ್ಕೆ ಒಂದು ಪುಟ್ಟ ನೀರಿನ ಹೊಂಡ ಇವರ ಆಕರ್ಷಣೆಯ ಕೇಂದ್ರ. ಅದಕ್ಕೆ ನೀರಿನ ಟ್ಯಾಂಕಿನಿಂದ ಹೊರ ಚೆಲ್ಲಿದ ನೀರು ಬಂದು ತುಂಬಿಕೊಂಡು ಅದೊಂದು ಪುಟ್ಟ ಕೊಳವಾಗಿ ಪರಿವರ್ತನೆಗೊಳ್ಳುತ್ತಿತ್ತು.  ಈ ಸಲ ಯಾಕೋ ಅಲ್ಲಿಯೂ ಹಕ್ಕಿಗಳ ಸುಳಿವಿಲ್ಲ ಅನ್ನಿಸಿದಾಗಲೇ ನಾನು ಆ ಕಡೆಗೆ ಗಮನ ಕೊಡಲು ಹೊರಟೆ. 

ನೀರಿನ ಹೊಂಡ, ಪಕ್ಕದಲ್ಲಿದ್ದ  ಬರೆ ಜರಿದ ಕಾರಣ ಬಿದ್ದ ಮಣ್ಣಿನಿಂದ ತುಂಬಿಕೊಂಡಿತ್ತು. ಅದರಲ್ಲಿ ನೀರು ನಿಲ್ಲುತ್ತಲೇ ಇರಲಿಲ್ಲ. ಸುತ್ತ ಮುತ್ತಲಿನ ಕಳೆಗಿಡಗಳನ್ನೆಲ್ಲಾ ತೆಗೆದು ಸ್ವಚ್ಚತಾ ಆಂಧೋಲನ ನಡೆಸಿ ನೀರಿನ ಗುಂಡಿಯ ಹೂಳೆತ್ತುವಿಕೆಯ ಕಾಮಗಾರಿ ನಡೆಯಿತು. ಇನ್ನು ಎಲ್ಲಾ ಸರಿಯಾದೀತು ಎಂದು ನೆಮ್ಮದಿಯಿಂದ ಇದ್ದೆ. ಮರುದಿನ ಬೆಳಗ್ಗೆ ಸ್ವಲ್ಪ ಹೊತ್ತು ಹಕ್ಕಿಗಳು ಕಾಣಿಸಿದರೂ ಮತ್ತೆ ಬಂದವುಗಳೆಲ್ಲಾ ನಿರಾಶೆಯಿಂದ ಹಾರುತ್ತಿರುವಂತೆ ಕಾಣಿಸಿತು.

ಅರ್ರೇ.. ಮತ್ತೇನು ಹೊಸಾ ಸಮಸ್ಯೆ ಎಂದು ತಲೆ ಕೆರೆದುಕೊಂಡು ಸ್ಥಳ ಪರಿಶೀಲನೆ ನಡೆಸಿದೆ. ಹೋಗಿ ನೋಡಿದರೆ ಅಲ್ಲಿ ಏಡಿಯೋ, ಹೆಗ್ಗಣವೋ ಕೊರೆದ ಬಿಲದೊಳಗೆ ನೀರು ನುಗ್ಗಿ ಬೇಗನೇ ಇಂಗಿ ಹೋಗುತ್ತಿತ್ತು. ಹಕ್ಕಿಗಳು ಬಿಸಿಲೇರಿದ ನಂತರವೇ ಬರುವವುಗಳಾಗಿದ್ದರಿಂದ ಅವು ಬರುವಾಗ ನೀರಿಲ್ಲದ ಹೊಂಡವಷ್ಟೇ ಸ್ವಾಗತಿಸುತ್ತಿದ್ದುದು. 

ಈ ಸಮಸ್ಯೆಯ ಪರಿಹಾರಕ್ಕಾಗಿ ಅದೇ ದಿನ ಸಂಜೆ  ಸ್ವಲ್ಪ ಮಣ್ಣು ತಂದು ಆ ಬಿಲಗಳನ್ನೆಲ್ಲಾ ಮುಚ್ಚಿದ್ದಾಯಿತು.  ಬೆಳಗ್ಗೆ ಹೋಗಿ ನೋಡಿದರೆ ಮುಚ್ಚಿದ್ದ ಅಷ್ಟೂ ಮಣ್ಣು ಮತ್ತೆ ಕೆದರಿಕೊಂಡು ಹೊರಬಿದ್ದು ಯಥಾಪ್ರಕಾರ ಬಿಲ ಕಾಣಿಸುತ್ತಿತ್ತು.  ಈ ಸಲ ಸ್ವಲ್ಪ ಗಟ್ಟಿಯಾದ ಕಲ್ಲುಗಳನ್ನು ಜಡಿದು ಕೂರಿಸಿ ಮತ್ತೊಮ್ಮೆ ಮಣ್ಣಿನ ತೇಪೆ ಹಾಕಿ ಅದನ್ನು ಮುಚ್ಚಿ ಸಮಾಧಾನದ ಉಸಿರು ಬಿಟ್ಟೆ. ಮರುದಿನ ನೋಡಿದರೆ  ಕಲ್ಲು ಮಣ್ಣು ಹೊರ ಚೆಲ್ಲಿದ್ದು ಮಾತ್ರವಲ್ಲದೆ ಬಿಲದ ಬಾಯಿಯೂ ದೊಡ್ಡದಾಗಿತ್ತು.

ಇದಕ್ಕೊಂದು ಕೊನೆ ಕಾಣಿಸಲೇ ಬೇಕು ಕಾವಲು ಕಾದಾದರೂ ಆ ಹೆಗ್ಗಣವನ್ನು ಬಡಿಯುತ್ತೇನೆ ಎಂದೆಲ್ಲಾ ರಾಜಾರೋಷವಾಗಿ ಭಾಷಣ ಬಿಗಿದು ಆ ದಿನ ರಾತ್ರಿ ಸರ್ವ ಸನ್ನದ್ಧಳಾಗಿ ನಿಂತೆ. 
ಯಾವ ಪ್ರಾಣಿಯೂ ಸದ್ದು ಮಾಡದೇ ಬರುವುದಿಲ್ಲ ತಾನೇ? ಮತ್ತು ನಾವು ಎದುರಿದ್ದರೂ ಬರಲಾರದು. ಹಾಗಾಗಿ ಅಡುಗೆ ಕೋಣೆಯನ್ನೇ ನನ್ನ ಅಡಗುತಾಣವಾಗಿ ಮಾಡಿಟ್ಟುಕೊಂಡು, ಕಾಯುವ ಕೆಲಸವಿದ್ದಾಗ ನಿದ್ರೆ ಬಾರದಿರಲಿ ಎಂದು ಲ್ಯಾಪ್ ಟಾಪ್, ಮೊಬೈಲ್, ಹುರಿಗಾಳು, ಚಕ್ಕುಲಿ, ಚಿಪ್ಸುಗಳಿಂದ ಸರ್ವಸಜ್ಜಿತಳಾಗಿ ಕುಳಿತೆ. ನನ್ನ ಪ್ರಯತ್ನ ಪಲಿಸಿತು. ಆ ಬದಿಯಿಂದ ಪರ ಪರನೆ ಮಣ್ಣನ್ನು ಕೆರೆಯುವ ಶಬ್ಧ ಕೇಳಿಸತೊಡಗಿತು. ಟಾರ್ಚ್ ಬೆಳಕಿಗೆ ಮಾಯವಾದರೆ ಎಂಬ ಹೆದರಿಕೆಯಿಂದ ಪರಿಚಿತ ಜಾಗವಾದ ಕಾರಣ ಕತ್ತಲಲ್ಲೇ ಹೆಜ್ಜೆ ಹಾಕಿ ಹತ್ತಿರ ಹೋಗಿ  ಅದರ ಮುಖ ದರ್ಶನ ಮಾಡೋಣವೆಂದು ಬೆಳಕು ಚೆಲ್ಲಿದೆ. ಅಲ್ಲಿ ಬಾಲವಾಡಿಸುತ್ತಾ ಮಣ್ಣು ಕೆರೆಯುತ್ತಿದ್ದುದು ನಮ್ಮನೆ ನಾಯಿ ಟೈಗರ್. ಅದು ಕತ್ತಲಿನಲ್ಲಿ ಹೆಗ್ಗಣ ಇಲಿಗಳನ್ನು ಬೇಟೆಯಾಡಿ ಹೊತ್ತು ತಂದು ಮನೆಯೆದುರಿನ ಅಂಗಳದಲ್ಲಿ ಹಾಕಿ ನಮ್ಮ ಶಹಬ್ಬಾಸ್ ಗಿರಿ ಪಡೆಯುವುದರಲ್ಲಿ ನೈಪುಣ್ಯ ಹೊಂದಿದ ನಾಯಿ.  ಸ್ವಲ್ಪ ಸಂಶಯ ಬಂದರೂ ಸಾಕು ಈ ಮಹಾಶಯ ಉದ್ದುದ್ದ ಕನ್ನ ಕೊರೆಯುವುದರಲ್ಲಿ ನಿಸ್ಸೀಮ. ಅದನ್ನು ತಡೆಯುವುದಂತೂ ಸಾಧ್ಯವಿಲ್ಲದ ಮಾತು. 

ಹಕ್ಕಿಗಳ ನೀರಿನ ಸಮಸ್ಯೆಗೆ ಬೇರೇಯೇ ವ್ಯವಸ್ಥೆ ಮಾಡುವ ಅನಿವಾರ್ಯತೆಯೀಗ ನನಗೆ.
ಅಗಲ ಬಾಯಿಯ ಪ್ಲಾಸ್ಟಿಕ್ ಟಬ್ ಒಂದನ್ನು ಕೊಂಡುತಂದು ಅದರೊಳಗೆ ನೀರು ತುಂಬಿ ಅಲ್ಲೇ ಮೇಲ್ಭಾಗದಲ್ಲಿ ಇಟ್ಟಾಯಿತು. ಇದರಲ್ಲಿ ಸೋರುವಿಕೆಯ ಸಮಸ್ಯೆ ಇಲ್ಲದ್ದುದರಿಂದ ನೀರಿಗಿನ್ನು ತೊಂದರೆಯಿಲ್ಲ ಎಂದು ನಿರಾಳವಾದೆ. ಆದರೆ  ಹಕ್ಕಿಗಳು ನೀರಿನ ಹೊಂಡಕ್ಕೆ ಸುತ್ತು ಹೊಡೆಯುವುದಲ್ಲದೆ ಈ ನೀರಿನ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಅರ್ರೇ.. ಇದೇನಪ್ಪಾ ಈ ಹೊಂಡವೇನು ತಮ್ಮ ಸ್ವಂತದ್ದು ಅಂದುಕೊಂಡು ಬಿಟ್ಟಿದ್ದಾವೋ ಎಂದು ತಲೆ ಬಿಸಿ ಆಯ್ತು. 

ಆಗಲೇ ಅತ್ಯದ್ಭುತ ಆಲೋಚನೆಯೊಂದು ಹೊಳೆಯಿತು. ಆ ಹೊಂಡವನ್ನೇ ಸ್ವಲ್ಪ ಅಗಲ ಮಾಡಿ, ಅದರೊಳಗೆ ಈ ಪ್ಲಾಸ್ಟಿಕ್ ಟಬ್ಬನ್ನು ಹೂತರೆ.. ಕೂಡಲೇ ಕಾರ್ಯಗತವಾಯಿತು ಈ ಹೊಸಾ ಉಪಾಯ.ಅದೇ ಜಾಗದಲ್ಲಿ ತುಂಬಿದ ಸ್ವಚ್ಚ ನೀರು ಈಗ ಹಕ್ಕಿಗಳನ್ನಾಕರ್ಷಿಸಿದವು. ದೊಡ್ಡ ಹಕ್ಕಿಗಳು ಚಿಂವ್ ಚಿಂವ್ ಎನ್ನುತ್ತಾ, ಅತ್ತಿತ್ತ ನೋಡುತ್ತಾ ನಾಚಿಕೆಯಿಂದ  ಹತ್ತಿರ ಬಂದು ನೀರು ಕುಡಿಯ ತೊಡಗಿದವು  ಆದರೆ ಪುಟ್ಟ ಹಕ್ಕಿಗಳು ನೀರಿನ ಆಳಕ್ಕೆ ಹೆದರಿ ಅಲ್ಲೇ ಬದಿಯಲ್ಲಿರುವ ಬಸಳೆ ಚಪ್ಪರದಲ್ಲಿ ಸಾಲಾಗಿ ಕುಳಿತುಕೊಳ್ಳುತ್ತಿದ್ದವು.  ಮತ್ತೆ ಮತ್ತೆ ಅವು ಮಾಡುತ್ತಿದ್ದ ನೀರಿಗಿಳಿಯುವ ಪ್ರಯತ್ನ ಫಲಕಾರಿಯಾಗುತ್ತಲೇ ಇರಲಿಲ್ಲ. ಸ್ವಲ್ಪ ತಲೆ ಓಡಿಸಿ ನೀರಿನಿಂದ ಮೇಲಕ್ಕೆ ಕಾಣುವಂತಿರುವಷ್ಟು ದೊಡ್ಡದಾದ ಕಲ್ಲನ್ನು ಓರೆಯಾಗಿ ನೀರಿನೊಳಗೆ ಮುಳುಗಿಸಿಟ್ಟೆ. ಅದರ ಬದಿಯಿಂದಾಗಿ ನಿಂತರೆ ಅವುಗಳಿಗೆ ನೀರಿಗಿಳಿಯಲು ಸಾಧ್ಯವಾಗಬಹುದು ಎಂಬ ನನ್ನ ಆಲೋಚನೆ ಸರಿಯಾಯಿತು. ಮರುದಿನದಿಂದ ಒಬ್ಬೊಬ್ಬರಾಗಿ ನೀರಿಗಿಳಿದವು. ಗುಂಪು ಗುಂಪಾಗಿಯೂ ಇಳಿದವು. ಕೆಲವಂತೂ ಇಡೀ ದಿನ ಸ್ನಾನ ಮಾಡುವುದನ್ನೇ ಕೆಲಸ ಮಾಡಿಕೊಂಡವು. ದೊಡ್ಡ ಹಕ್ಕಿಗಳು ಬಂದಾಗ ಗೌರವಕ್ಕೋ, ಹೆದರಿಕೆಗೋ ಕೊಂಚ ದೂರ ಹಾರಿ ಅವು ಹೋದೊಡನೇ ಮತ್ತೆ ನೀರಿನ ಸುತ್ತ ಪಟ್ಟಾಂಗ ಶುರು ಮಾಡುತ್ತಿದ್ದವು. 
ಈಗ ನನ್ನ ಅಡುಗೆ ಮನೆ ಮತ್ತೆ ಹಕ್ಕಿ ವೀಕ್ಷಣಾ ತಾಣ ವಾಗಿ ಬದಲಾಗಿದೆ.  ಹಗಲಿನ ಇಡೀ ಹೊತ್ತು ಅವುಗಳ ಕಚ್ಚಾಟ, ಪ್ರೀತಿ, ಹುಚ್ಚಾಟವನ್ನು ನೋಡುತ್ತಾ ಕಾಲ ಕಳೆಯಬಹುದು. ಬೇಸಿಗೆಯ ಬಿಸಿಯಲ್ಲೂ ಅವರ ಆಟ ನೋಡುತ್ತಾ ಕಣ್ಣು ತಂಪಾಗಿಸಬಹುದು. 

ಇದು ನಾವು ಹಕ್ಕಿಗಳಿಗೆ ಮಾಡಬಹುದಾದ ಮಹದುಪಕಾರ ಎಂದು ಬೆನ್ನು ತಟ್ಟಿಕೊಳ್ಳಬೇಕಿಲ್ಲ. ಇವುಗಳ ಕಲರವ ಕೇಳುವುದರಿಂದ, ಇವುಗಳ ಆಟವನ್ನು ನೋಡುವುದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯುವುದರ ಜೊತೆಗೆ ನಮಗೀಗ ತುಂಬಾ ಅಗತ್ಯವಾಗಿರುವ ಮಾನಸಿಕ ನೆಮ್ಮದಿಯನ್ನು ಇವುಗಳಿಂದ ಪಡೆಯಬಹುದು. ಅವಸರದ ಬದುಕಿನಲ್ಲಿ ಒಂದಿಷ್ಟು ಇಂತಹ ಸಂತಸದ ಗಳಿಗೆಗಳು ಇಡೀ ಜೀವನದ ಸವಿ ನೆನಪಿನ ಬುತ್ತಿಯಾಗಿ ಕೊನೆಯವರೆಗೂ ನಮ್ಮೊಡನೆ ಉಳಿದುಬಿಡುತ್ತವೆ. 

 ಕೊನೆ ಹನಿ : ಪ್ರಾಕೃತಿಕವಾಗಿ ಸಿಗುತ್ತಿದ್ದ ನೀರಿನ ಸೆಲೆಗಳು ನಮ್ಮಿಂದಾಗಿ ಅವುಗಳ ಅಗತ್ಯ ಇರುವ, ಅವುಗಳ ಹಕ್ಕುದಾರರೂ ಆದ ಪ್ರಾಣಿ ಪಕ್ಷಿಗಳಿಗೆ ಸಿಗುತ್ತಿಲ್ಲ. ಸಾಧ್ಯವಾದಷ್ಟೂ ಪರಿಸರ ಹಾಳು ಮಾಡದೇ ಅವುಗಳನ್ನು ಉಳಿಸುವುದಕ್ಕೆ ಪ್ರಯತ್ನಿಸಿ. ಕೊನೇ ಪಕ್ಷ ಹನಿ ನೀರು ನೀಡಿ ಸಮುದ್ರದಷ್ಟು ಪ್ರೀತಿ ಪಡೆಯಬಹುದಾದ ಇಂತಹ ಪುಟ್ಟ ಕೆಲಸಗಳನ್ನಾದರೂ ಮಾಡಿ. 
-ಅನಿತಾ ನರೇಶ್ ಮಂಚಿ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

good work! great job!!! by ani madam.

 

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ತುಂಬಾ ಒಳ್ಳೆಯ ಕೆಲಸ…….. ಮೇಡಂ..

ಅನಿತಾ ನರೇಶ್ ಮಂಚಿ
ಅನಿತಾ ನರೇಶ್ ಮಂಚಿ
9 years ago

ವಂದನೆಗಳು ಅಮರ್ ದೀಪ್  ಮತ್ತು ಅಖಿಲೇಶ್.. ಆದರೆ ಇದರಲ್ಲಿ ನನ್ನ ಹೆಚ್ಚುಗಾರಿಕೆಯೇನು ಇಲ್ಲ.. ಬೇಸಿಗೆಕಾಲದಲ್ಲಿ ನೀರಿಲ್ಲದೆ ಪಶು ಪಕ್ಷಿಗಳು ತೊಳಲಾಡುವಾಗ ಮೂಖ ಪ್ರಾಣಿಗಳಿಗೆ ನಮ್ಮಿಂದಾದಷ್ಟು ಎಲ್ಲರೂ ಸಹಾಯ ಮಾಡಲೇ ಬೇಕಾದ್ದು ನಮ್ಮ ಕರ್ತವ್ಯ.

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಮೇಡಂ, ನನ್ನ ಹಿರಿಯ ನಿವೃತ್ತ ಸಹುದ್ಯೋಗಿಯೊಬ್ಬರ ಸರಿ ಸುಮಾರು ಮುವ್ವತ್ತೈದು ವರ್ಷಗಳಿಂದ ತಮ್ಮ ಮನೆಯ ಮೇಲೆ ಪಕ್ಷಿಗಳಿಗೆಂದೇ ಸಣ್ಣ ಸಣ್ಣ ಪಾಟ್ ಗಳನ್ನಿಟ್ಟು ಪ್ರತಿ ದಿನ ನೀರು, ಒಂದಷ್ಟು ಕಾಳು ದಿನಿಸು ಇಡುತ್ತಾರೆ.  ಅದು ಜ್ಞಾಪಕವಾಯ್ತು…

V.L.Upadya,Retd Professor
V.L.Upadya,Retd Professor
9 years ago

First time seeing your magazine. Panju was a student of Bhandarkars College Kundapura. I had the good fortune of teaching him some zoology. I am a birder now and my photos can be seen in Face Book and in Flickr-www.flickr.com/photos/22022208

 

5
0
Would love your thoughts, please comment.x
()
x