ಕಣ್ಣರಿಯದ ವಿಜ್ಞಾನ, ಈ ನ್ಯಾನೋ ತಂತ್ರಜ್ಞಾನ: ರೋಹಿತ್ ವಿ. ಸಾಗರ್

ಆಟೋ ರಿಕ್ಷಾಗಳ ರೀತಿ ಸದ್ದು ಮಾಡುತ್ತಾ, ಹಳ್ಳಿಯಿಂದ ದಿಲ್ಲಿವರೆಗಿನ ರಸ್ತೆಗಳಲ್ಲಿ ಇಲಿಮರಿಗಳಂತೆ ಓಡಾಡುತ್ತಿರುವ, ಹೆದ್ದಾರಿಗಳಲ್ಲಿ ಇನ್ನೇನು ಲಾರಿಗಳ ಅಡಿಯಲ್ಲೇ ದಾಟಿ ಬಿಡುತ್ತವೇನೋ ಎಂಬ ಕಲ್ಪನೆಗಳನ್ನ ಹುಟ್ಟುಹಾಕಿದ ನ್ಯಾನೋ ಎಂಬ ಕಾರುಗಳ ಬಗ್ಗೆ ಖಂಡಿತವಾಗ್ಯೂ ಕೇಳಿಯೇ ಇರುತ್ತೀರಿ. ಆ ಕಾರಿನ ಆಕಾರ ಕುಬ್ಜ ರೀತಿಯದ್ದು ಎಂಬುದನ್ನು ಸಾರಿ ಹೇಳಲಿಕ್ಕೆ ನ್ಯಾನೋ ಎಂಬ ಹೆಸರನ್ನು ಟಾಟಾ ಕಂಪನಿ ಬಳಸಿಕೊಂಡಿತು. ಗ್ರೀಕ್ ಬಾಷೆಯ ಪದವಾಗಿರುವ ಈ ’ನ್ಯಾನೊ’ದ ಅರ್ಥ ’ಕುಬ್ಜ’ ಎಂದು, ಆದರೆ ನಮ್ಮ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ ಕುಬ್ಜ ಎನ್ನಲಿಕ್ಕೆ ಮಾತ್ರ ನ್ಯಾನೋ ಎಂಬ ಪದ ಬಳಸುವುದಿಲ್ಲ. ಇಲ್ಲಿ ನ್ಯಾನೋ ಎಂದರೆ ಶತಕೋಟಿಯಲ್ಲಿ ಒಂದು ಭಾಗ (ಅಂದರೆ ೧೦-೯ )ಎಂದು. ಒಂದು ಕ್ಷಣ ಯೋಚಿಸಿ ಅದೆಷ್ಟು ಚಿಕ್ಕದ್ದಿರಬಹುದು, ಅದನ್ನೆ ಅನ್ವಯಿಸಿದ ನ್ಯಾನೋಮೀಟರ್ ಎಂಬ ಅಳತೆಯ ಮಾನವೊಂದಿದೆ. ಅಂದರೆ ಒಂದು ಮೀಟರ್ ಉದ್ದದ ಸ್ಕೇಲೊಂದನ್ನು ಒಂದು ಶತಕೋಟಿ ಭಾಗಗಳನ್ನಾಗಿ ತುಂಡು ಮಾಡಿದರೆ, ಅದರಲ್ಲಿನ ಒಂದು ತುಂಡಿನ ದಪ್ಪವಿದೆಯಲ್ಲ ಅದನ್ನ ಒಂದು ನ್ಯಾನೋ ಮೀಟರ್ ಎಂದು ಕರೆಯುತ್ತಾರೆ. ಇನ್ನೂ ಅರ್ಥವಾಗಬೇಕೆಂದರೆ ನಮ್ಮ ತಲೆಯ ಕೂದಲಿನ ಒಂದು ಎಳೆಯನ್ನು ಇಪ್ಪತ್ತು ಸಾವಿರ ಭಾಗಗಳನ್ನಾಗಿ ಉದ್ದುದ್ದ ಸೀಳಿದರೆ ಬರುವ ಒಂದು ಭಾಗದ ದಪ್ಪ (ವ್ಯಾಸ) ೧ ನ್ಯಾನೋ ಮೀಟರ್‌ನಷ್ಟಿರುತ್ತದೆ. ಈ ನ್ಯಾನೋ ಮೀಟರ್ ಎಂಬ ಆಕಾರ ಊಹಿಸಲೂ ಸಾಧ್ಯವಿಲ್ಲದಷ್ಟು ಸಣ್ಣದು ಎಂಬುದನ್ನು ಈಗ ನೀವು ಒಪ್ಪಿಕೊಳ್ಳುತ್ತೀರಿ, ಅಲ್ಲವೆ.

ಕನಿಷ್ಟ ಪಕ್ಷ ಒಂದು ದಿಕ್ಕಿನಲ್ಲಾದರೂ ನ್ಯಾನೋ ಮೀಟರ್ ಅಳತೆಯುಳ್ಳ ಅತೀ ಚಿಕ್ಕ ವಸ್ತುಗಳನ್ನು ಉತ್ಪಾದಿಸುವ, ಅಭ್ಯಸಿಸುವ ಮತ್ತು ಬಳಸುವ ಅಸಾಧಾರಣ ತಂತ್ರಜ್ಞಾನವನ್ನೆ ನ್ಯಾನೋ ತಂತ್ರಜ್ಞಾನ ಎಂದು ಕರೆಯುವುದು. ನಮ್ಮ ಭಾರತೀಯರು ತಮಗರಿವಿಲ್ಲದೆಯೇ ಕ್ರಿ ಪೂ ೩೦೦ ರಲ್ಲಿಯೇ ’ವೂಟ್ಜ್’ ಎಂಬ ಉಕ್ಕನ್ನು ನ್ಯಾನೋತಂತ್ರಜ್ಞಾನದ ಬಳಕೆಯಿಂದ ತಯಾರಿಸಿದ್ದರು, ಈ ಉಕ್ಕಿನಿಂದಲೇ ’ಡಮಾಸ್ಕಸ್’ ಎಂಬ ಅತ್ಯಂತ ಹರಿತವಾದ, ಕಲ್ಲುಗಳನ್ನೂ ತುಂಡರಿಸುವಷ್ಟು ಶಕ್ತವಾಗಿದ್ದ ಖಡ್ಗಗಳನ್ನು ತಯಾರಿಸಲಾಗುತ್ತಿತ್ತೆಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಈ ಖಡ್ಗಗಳನ್ನು ಸಂಶೋಧನೆಗೊಳಪಡಿಸಿದಾಗ ಅಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆಯನ್ನು ವಿಜ್ಞಾನಿಗಳು ಧೃಡಪಡಿಸಿದ್ದಾರೆ. ಅಂದರೆ ಈ ನ್ಯಾನೋ ತಂತ್ರಜ್ಞಾನ ತೀರಾ ಹೊಸದಲ್ಲದಿದ್ದರೂ ಆ ತಂತ್ರಜ್ಞಾನದ ವಿಸ್ಮಯಗಳು ಇತ್ತೀಚಿಗೆ ಬೆಳಕಿಗೆ ಬರಲಾರಂಭಿಸಿವೆ ಅಷ್ಟೆ.

ನ್ಯಾನೋ ಪ್ರಪಂಚದ ವಸ್ತುಗಳು ತೀರಾ ಸಣ್ಣದಾಗಿರುತ್ತವೆ ಮತ್ತು ಅವುಗಳ ಅಳತೆಯು ಅಣು, ಪರಮಾಣುಗಳ ಗಾತ್ರಗಳಿಗೆ ಸಮನಾಗಿರುತ್ತವೆ. ಆದ್ದರಿಂದ ಅವುಗಳ ನಡುವೆ ಗುರುತ್ವ ಮತ್ತು ಜಡತ್ವ ಬಲಗಳ ಪ್ರಾಬಲ್ಯ ಕಡಿಮೆ ಇರುತ್ತದೆ. ಆದರೆ ಗಾತ್ರ ನ್ಯಾನೋಗಳಷ್ಟು ಕಡಿಮೆಯಾಗುತ್ತಾ ಹೋದಂತೆ ವಸ್ತುಗಳ ಗುಣ ಧರ್ಮಗಳ ಬದಲಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಅಸಾಧಾರಣವಾದ, ವಿಶೇಷ ಹೊಸ ಗುಣಗಳನ್ನೂ ಪಡೆದುಕೊಂಡು ಅಚ್ಚರಿ ಹುಟ್ಟಿಸುತ್ತವೆ. ತೀರಾ ಸಣ್ಣಗಿರುವ ಇವುಗಳನ್ನು ಕಣ್ಣಿನಿಂದ ಹಾಗಿರಲಿ ಸಾಮಾನ್ಯ ಸೂಕ್ಷ್ಮ ದರ್ಶಕಗಳಿಂದಲೂ ನೋಡಲು ಸಾಧ್ಯವಿಲ್ಲ, ಅದಕ್ಕಾಗಿ ಸಂವಹನ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಥವಾ ಪರಮಾಣು ಬಲ ಸೂಕ್ಷ್ಮದರ್ಶಕಗಳನ್ನು ಉಪಯೋಗಿಸಬೇಕಾಗುತ್ತದೆ.

ಈ ನ್ಯಾನೋ ಪ್ರಪಂಚದ ವಸ್ತುಗಳನ್ನು ಅವುಗಳ ಆಕಾರಕ್ಕನುಗುಣವಾಗಿ ೧-೧೦೦ ನ್ಯಾನೋ ಮೀಟರ್‌ದಪ್ಪವಿರುವ ಹಾಳೆಗಳಾದ ನ್ಯಾನೋ ಹಾಳೆಗಳು, ಕೆಲವೇ ನ್ಯಾನೋ ಮೀಟರ್‌ಗಳಷ್ಟು ವ್ಯಾಸ ಹೊಂದಿರುವ ನ್ಯಾನೋ ಕೊಳವೆಗಳು ಮತ್ತು ನ್ಯಾನೋ ಗಾತ್ರದ ನ್ಯಾನೋ ಸ್ಫಟಿಕಗಳು ಎಂದು ವಿಂಗಡಿಸಬಹುದು.

ಈ ನ್ಯಾನೊ ಪ್ರಪಂಚದಲ್ಲಿ ತುಂಬಾ ಹೆಸರು ಮಾಡಿರುವ ಮೂಲ ವಸ್ತುವೆಂದರೆ ಅದು ಕಾರ್ಬನ್ (ಇಂಗಾಲ). ಜಪಾನ್‌ನ ಎಂಡೋ ಮತ್ತು ಎಜಿಮಾ ಎಂಬ ವಿಜ್ಞಾನಿಗಳಿಬ್ಬರು ೧೯೭೬ರಲ್ಲಿ ಕಾರ್ಬನ್ ನ್ಯಾನೋ ಕೊಳವೆಗಳನ್ನು ಜಗತ್ತಿಗೆ ಪರಿಚಯಿಸಿದರು. ಕೊಳವೆಯಾಕಾರದಲ್ಲಿರುವ ಇವು ಎರೆಡೂ ತುದಿಗಳಲ್ಲಿ ಅರ್ಧಳಾಕೃತಿ ಹೊಂದಿದ್ದು ಮೂಲತಃ ಫುಲ್ಲರಿನ್ ಎಂಬ ಕುಟುಂಬಕ್ಕೆ ಸೇರುತ್ತವೆ. ಇವುಗಳ ವ್ಯಾಸ ೧-೧೦ ನ್ಯಾನೋ ಮೀಟರ್ ಆಗಿದ್ದು ಸಾಕಷ್ಟು ಉದ್ದವಿರುತ್ತವೆ. ರಚನೆಯ ಆಧಾರದ ಮೇಲೆ ಇವು ವಾಹಕ ಅಥವಾ ಅರೆವಾಹಕಗಳಂತೆ ವರ್ತಿಸುತ್ತವೆ ಅವುಗಳಲ್ಲೇ ಕೆಲವು ರಚನೆಗಳು ತಮ್ಮ ಸುತ್ತಲಿನ ವಾತಾವರಣದಲ್ಲಾಗುವ ಅತೀ ಸಣ್ಣ ವಿದ್ಯುತ್ಕಾಂತೀಯ ಬದಲಾವಣೆಗಳನ್ನ ಗ್ರಹಿಸಬಲ್ಲ ಅತೀ ಸೂಕ್ಷ್ಮ ಸಂವೇದನಾ ಶಕ್ತಿಯನ್ನು ಪಡೆದಿರುತ್ತವೆ. ಅದೇ ರೀತಿ ಕಾರ್ಬನ್ ಇನ್ನೊಂದು ರೂಪವಾದ ಗ್ರಾಫೈಟ್‌ನ ಕೇವಲ ಒಂದು ಪರಮಾಣು ದಪ್ಪದ ಪದರವನ್ನು ಬೇರೆಯಾಗಿ ತೆಗೆದಲ್ಲಿ ಅದೊಂದು ನ್ಯಾನೋ ಹಾಳೆಯಗಿರುತ್ತದೆ. ಅದನ್ನು ಗ್ರಾಫೀನ್ ಎಂದು ಕರೆಯುತ್ತಾರೆ. ಸುಲಭವಾಗಿ ದೊರೆಯುವ ಇವುಗಳನ್ನು ಮಹತ್ವದ ಅಡಿಗಲ್ಲುಗಳಾಗಿಟ್ಟುಕೊಂಡು ನ್ಯಾನೋತಂತ್ರಜ್ಞಾನ ಬೆಳೆಯುತ್ತಿದೆ ಎಂದರೆ ತಪ್ಪಗಲಾರದು.

ಇಷ್ಟೆಲ್ಲಾ ಕಷ್ಟಪಟ್ಟು ನೋಡಲಾಗದ್ದನ್ನ ನೋಡಿ, ಹಿಡಿಯಲಾಗದ್ದನ್ನ ಹಿಡಿದು, ತಿಳಿದು ಮಾಡುವುದಾದರೂ ಏನು ಎಂದು ಕೇಳುವ ಮೊದಲೇ ಈ ನ್ಯಾನೋ ತಂತ್ರಜ್ಞಾನದ ಉಪಯೋಗಗಳು ನಮ್ಮನ್ನ ಬೆಕ್ಕಸ ಬೆರಗಾಗಿಸುತ್ತವೆ. ಇದೇ ತಂತ್ರಜ್ಞಾನದ ನ್ಯಾನೋ ಬಟ್ಟೆಗಳು ಈಗಾಗಲೇ ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ, ಈ ನ್ಯಾನೋ ಬಟ್ಟೆಗಳು ನ್ಯಾನೋ ರಚನೆಗಳಿಂದ ಮಾಡಲ್ಪಟ್ಟಿದ್ದು. ಕೆಸುವಿನ ಸೊಪ್ಪಿನಂತೆ, ನೀರು ಬಿದ್ದರೆ ಒದ್ದೆಯಾಗದೆ, ಆ ನೀರನ್ನು ಜಾರಿಸಿಬಿಡುತ್ತದೆ, ಧೂಳಿನ ಕಣಗಳು ಅವಿತು ಕೂರುವಷ್ಟು ಸ್ಥಳಾವಕಾಶವೂ ಇಲ್ಲದಷ್ಟು ಒತ್ತೊತ್ತಾದ ನ್ಯಾನೋ ನಾರಿನಿಂದ ಮಾಡಿರುವ ಆ ಬಟ್ಟೆಯ ಮೇಲೆ ಕೂತ ದೂಳು ಸುಮ್ಮನೆ ಕೊಡವಿದರೂ ಮಾಯವಾಗಿಬಿಡುತ್ತದೆ. ಅಷ್ಟೇ ಅಲ್ಲ ಆ ಬಟ್ಟೆ ಸುಕ್ಕಾಗುವುದೂ ಇಲ್ಲ, ಕಲೆಯಾಗುವುದೂ ಇಲ್ಲ.

ನ್ಯಾನೋ ಸ್ಥಿತಿಯಲ್ಲಿ ಸೂಕ್ಷ್ಮ ಸಂವೇದನೆಯ ಗುಣ ಪಡೆದುಕೊಳ್ಳುವ ವಸ್ತುಗಳಿಂದ ತಯಾರಿಸಲಾಗುತ್ತಿರುವ ನ್ಯಾನೋ ಸಂವೇದಕಗಳು ವಾತಾವರಣದಲ್ಲಾದ ಅತೀ ಚಿಕ್ಕ ಭೌತಿಕ, ರಾಸಾಯನಿಕ ಬದಲಾವಣೆಯನ್ನೂ ಗ್ರಹಿಸಬಲ್ಲವಾಗಿವೆ. ಉದಾಹರಣೆಗೆ ಹೇಳುವುದಾದರೆ ಒಂದು ಅತೀದೊಡ್ಡ ನೀರಿನ ಟ್ಯಾಂಕಿಗೆಒಂದು ಸಣ್ಣ ಹನಿ ವಿಷ ಬಿದ್ದರೂ ಅದನ್ನೂ ಗ್ರಹಿಸಬಲ್ಲ ನ್ಯಾನೋ ಸಂವೇದಕಗಳು ತಯಾರಾಗುತ್ತಿವೆ. ಇದೇ ರೀತಿಯಲ್ಲಿ ಬೆಳ್ಳಿಯ ನ್ಯಾನೋ ಕಣಗಳಿಂದ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದೆಂಬ ಹೊಸ ಸಂಶೋಧನೆಯು ಇತ್ತೀಚಿಗೆ ಪ್ರಾಯೋಗಿಕವಾಗಿ ಬೆಳಕಿಗೆ ಬಂದಿದೆ.

ವೈದ್ಯಕೀಯ ಕ್ಷೇತ್ರದಲ್ಲಿಯೂ ನ್ಯಾನೋ ತಂತ್ರಜ್ಞಾನ ಹೊಸ ಶಕೆಯನ್ನು ಆರಂಭಿಸಿದೆ. ನ್ಯಾನೋ ರೋಬೋಟ್‌ಗಳನ್ನು ಸಿಂರಿಜ್‌ಗಳ ಮೂಲಕ ರಕ್ತನಾಳದೊಳಕ್ಕಿಳಿಸಿ ಹೃದಯಾಘಾತ, ಕ್ಯಾನ್ಸರ್ ಮುಂತಾದ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತದೆ. ಅಷ್ಟೇ ಅಲ್ಲ ನ್ಯಾನೊ ಕೊಳವೆಗಳನ್ನ ಹೆಣೆದು ತಯಾರಿಸಿದ ಹಗ್ಗದಂತಹ ರಚನೆಗಳು ವಜ್ರಕ್ಕಿಂತಲೂ ಹೆಚ್ಚು ಗಟ್ಟಿತನವನ್ನು ತೋರಿಸುತ್ತವೆ, ಅವುಗಳ ಸಹಾಯದಿಂದ ಉಪಗ್ರಹಗಳ ಉಡ್ಡಯನಕ್ಕೆ ಎಲಿವೇಟರ್‌ಗಳನ್ನು ನಿರ್ಮಿಸಿದರೆ, ಕೋಟಿಗಳಲ್ಲಿ ವೆಚ್ಚ ಮಾಡಿ ರಾಕೆಟ್ಟುಗಳನ್ನು ಪದೆ ಪದೆ ಉತ್ಪಾದಿಸುವ ಅವಶ್ಯಕತೆಯೇ ಬೀಳುವುದಿಲ್ಲ. ಈ ರೀತಿ ಕಾರ್‍ಯ ನಿರ್ವಹಿಸುವ ನ್ಯಾನೊ ಎಲಿವೇಟರ್‌ಗಳ ನಿರ್ಮಾಣದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.  ಯೋಚಿಸಿ ರಾಕೆಟ್ಟಿನ ಬದಲು ಈ ನ್ಯಾನೋ ಎಲಿವೇಟರ್‌ಗಳನ್ನು ಬಳಸಿ ಬೇಕಾದಾಗಲೆಲ್ಲ ಉಪಗ್ರಹಗಳನ್ನ ಕಕ್ಷೆಗೆ ತಲುಪಿಸಬಹುದು, ಜೊತೆಗೆ ಮೊದಲಿನಂತೆ ಸುಟ್ಟು ಹೋಗುವ ರಾಕೆಟ್ಟಿನ ಬದಲು ಈ ಎಲಿವೇಟರ್ ಹಿಂದಿರುಗಿ ಬರುತ್ತದೆ. 

ಅಬ್ಬಾ…!ಇವೆಲ್ಲವೂ ಸಾಧ್ಯವೇ ಮೂಗಿನ ಮೇಲೆ ಬೆರಳಿಡಬೇಡಿ, ಈ ಕಣ್ಣರಿಯದ ವಿಜ್ಞಾನ, ಕಲ್ಪನೆಗೂ ಅರಿಯದ ಜೀವನವನ್ನು ನಿಮ್ಮ ಮುಂದಿಡಲಿದೆ, ಆದಷ್ಟು ಬೇಗ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x