ಹಣಬು ಸುಡುವುದು: ರಾಜೇಂದ್ರ ಶೆಟ್ಟಿ


ಹತ್ತು ವರ್ಷಗಳು! ಹೇಗೆ ಕಳೆದು ಹೋದವು. ಅಂದು, ಇಂತಹದೇ ಬಸ್ಸಿನಲ್ಲಿ ಮುಂಬಾಯಿಗೆ ಓಡಿ ಹೋಗಿದ್ದೆ. ಇಂದು ರಜಾದಲ್ಲಿ ಹಿಂದೆ ಬರುತ್ತಿದ್ದೇನೆ. ಈ ಹತ್ತು ವರ್ಷಗಳಲ್ಲಿ ಊರಲ್ಲಿ ಏನೇನು ಆಗಿದೆಯೋ, ಯಾರು ಇದ್ದಾರೋ, ಯಾರು ಇಲ್ಲವೋ ಯಾರಿಗೆ ಗೊತ್ತು. ಇಷ್ಟೊಂದು ದಿನಗಳಲ್ಲಿ ಊರಿಗೆ ಪತ್ರವನ್ನೇ ಬರೆದಿಲ್ಲ. ಊರಿಗೆ ಬರುವುದು ಸಹ ಯಾರಿಗೂ ಗೊತ್ತಿಲ್ಲ. ಜೀವನದಲ್ಲಿ ಎಷ್ಟೊಂದು ತಿರುವುಗಳು!

ಅಪ್ಪನ ಕಿಸೆಯಿಂದ ಹಣ ತೆಗೆದಿದ್ದೆ –ಐಸ್ ಕ್ಯಾಂಡಿ ತಿನ್ನಲು. ಅದು ಕಳ್ಳತನವೆಂದು ಅಪ್ಪ ಎಷ್ಟು ಹೊಡೆದಿದ್ದ. ಆವಾಗ ನನ್ನ ವಯಸ್ಸಾದರೂ ಎಷ್ಟಿತ್ತು, ಹತ್ತೋ… ಹನ್ನೊಂದೋ…. ನಾಯಿಗೆ ಹೊಡೆವಂತೆ ಬಡಿದಿದ್ದ. ಅದೇ ಸಿಟ್ಟಿನಲ್ಲಿ, ರಾತ್ರಿ ನೂರಾರು ರೂಪಾಯಿ ಕದ್ದು ಮುಂಬಾಯಿಗೆ ಓಡಿ ಬಂದಿದ್ದೆ.

ಕುಂದಾಪುರದಲ್ಲಿ ಮುಂಬಾಯಿ ಬಸ್ ಹಿಡಿಯುವಾಗ, ಯಾರಿಗೂ ನನ್ನ ಗುರುತು ಸಿಕ್ಕಿರಲಿಲ್ಲ. ಈ ಚಿಕ್ಕ ಹುಡುಗ ಮುಂಬಾಯಿಯಂತಹ ಶಹರಕ್ಕೆ ಒಬ್ಬನೇ ಹೋಗುತ್ತಿದ್ದಾನೆಂದು ಯಾರೂ ಯೋಚಿಸಿರಲಿಲ್ಲ. ಬಸ್ಸಿನಲ್ಲಿದ್ದ ಮಂಗಳೂರಿನ ಶೆಟ್ಟರಿಗೆ ಗೊತ್ತಾಗಿತ್ತು ನನ್ನ ಗುಟ್ಟು. ನನ್ನ ಗೆಳೆತನ ಬೆಳಸಿ, ಮುಂಬಾಯಿಯ ತಮ್ಮ ಹೋಟೇಲಿನಲ್ಲಿ ನನ್ನನ್ನು ಇರಿಸಿದರು. ಮೊದ ಮೊದಲು ಆ ಹೋಟೇಲಿನಲ್ಲಿ ಕೆಲಸಕ್ಕಿದ್ದ ಊರಿನ ಮಾಣಿಗೆ ಹೆದರಿ, ಅವನ ಬಯಕೆಗೆ ನನ್ನ ಮೈ ಕೊಟ್ಟೆ. ದಿನ ದಿನವೂ ನನ್ನನ್ನು ಹೆದರಿಸಿ, ತನ್ನ ಸಲಿಂಗ ಕಾಮಕ್ಕೆ ಬಲಿ ಪಶು ಮಾಡಿದ. ಒಂದು ದಿನ ಅವನ ಕಾಟ ತಾಳಲಾರದೆ, ಆತನ ಮುಖಕ್ಕೆ ಗುದ್ದಿದೆ – ರಕ್ತ ಬರುವ ಹಾಗೆ.

ಮರು ದಿನ ಧನಿಗಳ ಮಗ, ನನ್ನ ಧೈರ್ಯ ಮೆಚ್ಚಿದರು.  ಮುಂದೆ ನಾನು ಅವರ ಅಚ್ಚು ಮೆಚ್ಚಿನ ಕೆಲಸಗಾರನಾದೆ. ಅವರು ನನ್ನನ್ನು ಅಲ್ಲಿನ ಕನ್ನಡ ರಾತ್ರಿ ಶಾಲೆಗೆ ಹಾಕಿ ವಿದ್ಯೆ ಕಲಿಸಿದರು. ಹಗಲಿನಲ್ಲಿ ಹೋಟೇಲಿನಲ್ಲಿ ಕೆಲಸ, ರಾತ್ರಿ ಶಾಲೆಯಲ್ಲಿ ಓದು. ನನ್ನಂತೆ ಅಲ್ಲಿ ಅನೇಕರು ಹಗಲಲ್ಲಿ ಕೆಲಸ ಮಾಡಿ ರಾತ್ರಿ ಓದುತ್ತಿದ್ದರು. ಅವರಲ್ಲಿ ಹೆಚ್ಚಿನವರು ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದರು – ಹಗಲಿನ ದುಡಿತದ ಆಯಾಸದಿಂದ. ನಾನೋ ಹೋಟೇಲಿನ “ದಾದ”. ಹಗಲು ಕಡಿಮೆ ದುಡಿತ, ಹಾಗಾಗಿ ಶಾಲೆಯಲ್ಲಿ ನಿದ್ದೆ ಮಾಡುತ್ತಿರಲಿಲ್ಲ. ಕಲಿಯುವುದರಲ್ಲೂ ಜಾಣನಾಗಿದ್ದೆ. ಅದೇ ಶಾಲೆಯಲ್ಲಿ ಎಸ್ ಎಸ್ ಸಿ ಯಲ್ಲಿ, ಆ ಶಾಲೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತೀರ್ಣನಾದೆ. ನಮ್ಮ ಆ ಶಾಲೆಯಲ್ಲಿ, ಈ ಹಿಂದೆ ಯಾರೂ ನನ್ನಷ್ಟು ಅಂಕಗಳಿಸಿರಲಿಲ್ಲವಂತೆ. 

ನನ್ನ ಚಿಕ್ಕ ಧಣಿಗೂ ಬಹು ಖುಶಿ – ತನ್ನಿಂದಾಗಿ ಒಬ್ಬ ಹುಡುಗನ ಬದುಕಿನಲ್ಲಿ ಬೆಳಕು ಕಂಡಿತು ಎಂದು. ರಾತ್ರಿ ಕಾಲೇಜಿಗೂ ಸೇರಲು ಹುರಿದುಂಬಿಸಿದರು. ಹೋಟೆಲಿನ ಮ್ಯಾನೇಜರ್ ಆಗಿ ಮಾಡಿದರು. ಈಗ ಅವರೇ ಅಪ್ಪ, ಅಮ್ಮನನ್ನು ಮರೆಯದಿರು ಎಂದು ಹೇಳಿ, ಕೈಯಲ್ಲಿ ಒಂದಿಷ್ಟು ಹಣ ಕೊಟ್ಟು ನನ್ನನ್ನು ಊರಿಗೆ ಕಳುಹಿಸುತ್ತಿರುವುದು. 

“ಕುಂದಾಪುರ…ಕುಂದಾಪುರಾ…” ಕ್ಲೀನರ್ ನ ಕಿರುಚಲು ಧ್ವನಿಗೆ ನಿದ್ದೆಯ ಮಂಪರಿನಿಂದ ಎಚ್ಚರ ಆಗುತ್ತದೆ. ನನ್ನ ಊರು ಬಂತು. ಇನ್ನು ಕೆಲವೇ ನಿಮಿಷದಲ್ಲಿ ಸಾಲಿಗ್ರಾಮ. ಉದ್ವೇಗ. ಈವಾಗ ಮನೆ ಹೇಗಿರ ಬಹುದು. ತಂಗಿ ಎಷ್ಟು ಎತ್ತರ ಬೆಳೆದಿರಬಹುದು. ಅಪ್ಪ ನನ್ನನ್ನು ಮಾತನಾಡಿಸಬಹುದೇ? ಅಮ್ಮ ಕಣ್ಣೀರು ಹಾಕ ಬಹುದೆ? ಎಲ್ಲದಕ್ಕಿಂತ ಮೊದಲು ಅವರಿಗೆ ನನ್ನ ಪರಿಚಯ ಸಿಕ್ಕೀತೇ? ಬಸ್ಸಿನ ಹೊರಗೆ ನೋಡುತ್ತೇನೆ – ಊರು ಎಷ್ಟೊಂದು ಬದಲಾಗಿದೆ. ಹಸಿರು ಕಡಿಮೆ ಆಗಿದೆ. ರಸ್ತೆಯ ಬದಿಯಲ್ಲಿ ಬರೇ ಬಂಗ್ಲೆಗಳು. 

ಬಸ್ಸು ಸಾಲಿಗ್ರಾಮದಲ್ಲಿ ನಿಲ್ಲುತ್ತದೆ. ನನ್ನ ಪೆಟ್ಟಿಗೆ ಹಿಡಿದುಕೊಂಡು ಇಳಿಯುತ್ತೇನೆ. ರಿಕ್ಷಾದವರು ನನ್ನನ್ನು ಸುತ್ತುವರಿಯುತ್ತಾರೆ. ನನ್ನ ಮುಖ ನೋಡುತ್ತಾರೆ. ಅಪರಿಚಿತ. “ಎಲ್ಲಿ ಹೋಯ್ಕ್?” ಕುಂದಾಪುರ ಕನ್ನಡ! ಮರೆತೇ ಬಿಟ್ಟಿದ್ದೆ. ಹತ್ತು ವರ್ಷದ ನಂತರ ಈ ಕನ್ನಡ ಕೇಳುತ್ತಿದ್ದೇನೆ. ರೋಮಾಂಚನ ಆಗುತ್ತದೆ. ಈ ಹತ್ತು ವರ್ಷದಲ್ಲಿ ಕೇಳಿದ್ದು, ಕಲಿತದ್ದು ಮಂಗಳೂರು ಕನ್ನಡ, ತುಳು, ಹಿಂದಿ, ಮರಾಠಿ ಮತ್ತು ಬಟ್ಲರ್ ಇಂಗ್ಲೀಷ್. ನನ್ನಿಂದ ಇಲ್ಲಿನ ಕನ್ನಡ ಮಾತನಾಡಲು ಸಾಧ್ಯವೇ?

“ಜೋಡು ಕೆರೆ” ಎಂದು ಹೇಳಿ ಒಂದು ರಿಕ್ಷಾದಲ್ಲಿ ಕುಳಿತುಕೊಳ್ಳುತ್ತೇನೆ. ಆತ ಏನೇನೋ ಮಾತನಾಡುತ್ತಾನೆ. ಸಂಪೂರ್ಣ ಅರ್ಥವಾಗುವುದಿಲ್ಲ. ಹಾಂ..ಹೂಂ…ಅನ್ನುತ್ತಾ, ಅರ್ಥವಾದವರಂತೆ ನಸು ನಗುತ್ತಾ ಇರುತ್ತೇನೆ. ಸ್ವಲ್ಪ ದೂರದಲ್ಲಿ ಮನೆ ಕಾಣುತ್ತದೆ. ಅಲ್ಲಿಗೆ ಈ ಹಿಂದೆ ರಸ್ತೆ ಇದ್ದಿರಲಿಲ್ಲ. ಗದ್ದೆಯ ಮೂಲಕವೇ ಹೋಗಬೇಕಿತ್ತು. ರಿಕ್ಷಾ ನಿಲ್ಲಿಸಿ ಇಳಿಯುತ್ತೇನೆ. ಆತ ಐವತ್ತು ರೂಪಾಯಿ ಕೇಳುತ್ತಾನೆ. ಎರಡು – ಎರಡೂವರೆ ಕಿಲೋ ಮೀಟರ್ ಗೆ ಇಷ್ಟೊಂದು ಹಣ ಕೇಳುವಾಗ ಸಿಟ್ಟು ಬರುತ್ತದೆ. ಮುಸುಡಿಗೆ ಬಾರಿಸುವ ಅನಿಸುತ್ತದೆ – ಮುಂಬಾಯಿಯ ಹೋಟೇಲಿನಲ್ಲಿ ಮಾಡುತ್ತಿದ್ದ ದಾದಾಗಿರಿಯ ಪ್ರಭಾವ. ಸಾಯಲಿ ಬೇನ್ ಚೂ…. ಎಂದು ಮನಸ್ಸಿನಲ್ಲಿ ಬೈಯುತ್ತಾ ಹಣ ಕೊಟ್ಟು ನಡೆಯುತ್ತೇನೆ.

ಗದ್ದೆಯ ಹುಣಿಯಲ್ಲಿ ನಡೆಯುತ್ತಿದ್ದೇನೆ. ಎಲ್ಲಾ ಬಂಜರು ಭೂಮಿ. ಆವಾಗ ಹಸಿರಿನಿಂದ ಕಂಗೊಳಿಸುತ್ತಿದ್ದ ಹೊಲಗಳು ಇಂದು ಕಂದು ಬಣ್ಣಕ್ಕೆ ತಿರುಗಿವೆ. ಮುಂದೆ ನಡೆಯುತ್ತೇನೆ. ಒಂದು ಬದಿಯಲ್ಲಿ ಹೊಲ – ಇನ್ನೊಂದು ಬದಿಯ ಹೊಲದಲ್ಲಿ ಅಗಲವಾದ ಹಾಗೂ ಆಳವಾದ, ಒಣ ಕೆರೆಯ ತರಹದ ಹೊಂಡ. ಇದೇನು? ಅರ್ಥವಾಗುವುದಿಲ್ಲ. ಎಚ್ಚರದಿಂದ ನಡೆಯುತ್ತೇನೆ. ಮನೆ ಹತ್ತಿರ ಬರುತ್ತಿದ್ದಂತೆಯೇ, ಎಲ್ಲಿಯೋ ಮಲಗಿದ್ದ ನಾಯಿ ಬೊಗಳುತ್ತದೆ. ಮನೆಯತ್ತ ನೋಡುತ್ತೇನೆ. ಸ್ವಲ್ಪ ರಿಪೇರಿ ಆದ ಹಾಗೆ ಕಾಣುತ್ತದೆ. ಹದಿನಾರು ಹದಿನೇಳು ವರ್ಷದ ಹುಡುಗಿ ಬಾಗಿಲು ತೆರೆಯುತ್ತಾಳೆ. ತಂಗಿ, ನಸು ನಗುತ್ತಾಳೆ. “ಅಮ್ಮಾ, ಯಾರೋ ಗೊತ್ತಿಲ್ಲೆ” ಅನ್ನುತ್ತಾಳೆ. ಅಮ್ಮ ಅಪ್ಪ ಇಬ್ಬರೂ ಹೊರ ಬರುತ್ತಾರೆ.  “ಹ್ವಾಯ್, ಎಲ್ಲಿ ಹೋಯ್ಕ್?” ಅನ್ನುತ್ತಾರೆ. ಆತ ನಸು ನಗುತ್ತಾನೆ. ಅಮ್ಮ, “ ನಿನ್ನ ಎಲ್ಲೊ ಕಂಡಾಂಗ್ ಇತ್” ಅನ್ನುತ್ತಾಳೆ. ನಂತರ, “ಇಂವ ನಂ ಗಿರಿ ಅಲ್ದಾ…” ಅನ್ನುತ್ತಾ ಆತನನ್ನು ಅಪ್ಪಿಕೊಳ್ಳುತ್ತಾಳೆ. ತಂಗಿ ಓಡೋಡಿ ಬರುತ್ತಾಳೆ. ಅಪ್ಪ ನಗುತ್ತಾ ಮುಂದೆ ಬರುತ್ತಾನೆ, “ಏಗಳ್ ಬಂದದ್ದು” ಅನ್ನುತ್ತಾನೆ.

ಮುಂದೆ ಅವರ ಮೂವರ ಮಾತು ಕಥೆ ಎಲ್ಲಾ ಮಂಗಳೂರು ಕನ್ನಡ ಮಿಶ್ರಿತ ಕುಂದಾಪುರ ಕನ್ನಡದಲ್ಲಿ, ನನ್ನದು ತುಳು, ಹಿಂದಿ ಮಿಶ್ರಿತ ಮಂಗಳೂರು ಕನ್ನಡದಲ್ಲಿ. 

ಮನೆಯ ಹೊರಗೆ ನಿಂತರೆ, ಮೊದಲಿನ ಹಸಿರು ಗದ್ದೆ ಕಾಣುವುದಿಲ್ಲ. ಅರೆ ಸತ್ತ ತೆಂಗಿನ ಮರಗಳು, ಅಲ್ಲೊಂದು, ಇಲ್ಲೊಂದು ಯಾವುದೋ ಮರಗಳು. ಮನೆಯ ಸುತ್ತ ಕೆಂಪು ಧೂಳು. ಬಾವಿಯಲ್ಲಿ ನೀರಿದೆ. ನೀರು ಸಹ ಸ್ವಲ್ಪ ಕೆಂಪು ಕಾಣಿಸುತ್ತದೆ. ಸೊರಗಿದ ಹೂವಿನ ಗಿಡಗಳು. ಅವೂ ಕೆಂಪು ಮಣ್ಣಿನಿಂದ ಆವರಿಸಿಕೊಂಡಿವೆ. ಅಮ್ಮ ಮತ್ತು ತಂಗಿ ಹೊರ ಬರುತ್ತಾರೆ. “ಚಾ ತಿಂಡಿಗೆ ಒಳ ಬಾ” ಅನ್ನುತ್ತಾರೆ. ಕೆಂಪು ಮಣ್ಣು ತೋರಿಸುತ್ತೇನೆ. ಅಮ್ಮ, “ ಅವು ರಾಲಿಗಳು” ಅಂದಾಗ ತಂಗಿ ನಗುತ್ತಾಳೆ. 

“ ಅಮ್ಮ, ರಾಲಿ ಅಲ್ಲ, ಲಾರಿ” ಅನ್ನುತ್ತಾಳೆ. “ಮೊದಲು ಚಾ ಕುಡಿ, ಆಮೇಲೆ ಹೇಳುತ್ತೇನೆ” ಅನ್ನುತ್ತಾಳೆ.

ಊರಲ್ಲಿ ಹಂಚಿನ ಕಾರ್ಖಾನೆ ಬಂದಿದೆ. ಅವುಗಳಿಗೆ ಮಣ್ಣು ಕೊಂಡು ಹೋಗುವ ಲಾರಿಗಳ ಪ್ರಭಾವದಿಂದ ಈ ಕೆಂಪು ಬಣ್ಣದ ಸಿಂಗಾರ ಅನ್ನುತ್ತಾಳೆ ತಂಗಿ. ಇತ್ತೀಚೆಗೆ ಗಲಾಟೆಯಾಗಿ ಆ ಲಾರಿಗಳ ಓಡಾಟ ಕಡಿಮೆಯಾಗಿದೆ ಎಂದು ಅಪ್ಪ ಹೇಳುತ್ತಾರೆ. ಲಾರಿ ಮಾಲೀಕರು, ಕಾರ್ಖಾನೆಯ ಮಾಲೀಕರು ರಾಜಿ ಪಂಚಾಯಿತೆಗೆ ಬಂದದ್ದು, ಊರ ಯುವಕರು ಅದಕ್ಕೆ ಒಪ್ಪದೇ ಇದ್ದದ್ದು ಎಲ್ಲವನ್ನೂ ಅಪ್ಪ ಹೇಳುತ್ತಾರೆ.

ಸಾಯಂಕಾಲ ಪೇಟೆಗೆ ತಿರುಗಾಡಲು ಹೋಗುವ ಅನಿಸುತ್ತದೆ – ಪುನಃ ಬೇಡ ಅನಿಸುತ್ತದೆ, ಯಾರೂ ಪರಿಚಯದವರಿಲ್ಲವೆಂದು. ತಂಗಿಯ ಜೊತೆ ಹೊಲದಲ್ಲಿ ನಡೆಯುತ್ತೇನೆ. ಆಕೆ ತನ್ನ ಶಾಲೆಯ ಬಗ್ಗೆ, ತನ್ನ ಗೆಳತಿಯರ ಬಗೆಗೆ ಏನೇನೋ ಹರಟುತ್ತಾಳೆ. ನಾನೋ ನಸುನಗುತ್ತಾ ಎಲ್ಲವನ್ನೂ ಕೇಳುತ್ತೇನೆ. ಮಾತನಾಡುತ್ತಾ ಮಾತನಾಡುತ್ತಾ ನಾವಿಬ್ಬರೂ ಹೊಲದ ಬದಿಗೆ ಬರುತ್ತೇವೆ. ಆಚೆ ಹೊಂಡ. “ಇದೇನು?” ಕೇಳುತ್ತೇನೆ.

“ಊರವರಲ್ಲಿ ಹೆಚ್ಚಿನವರು ತಮ್ಮ ಗದ್ದೆಯ ಮಣ್ಣನ್ನು ಹಂಚಿನ ಕಾರ್ಖಾನೆಯವರಿಗೆ ಮಾರಿದ್ದಾರೆ. ಹೊಲ ಮಾರಿಲ್ಲ, ಬರೇ ಮಣ್ಣು ಮಾತ್ರ. ಜೇಡಿ ಮಣ್ಣು. ಕೆಲವರ ಹೊಲದಲ್ಲಿ ಇಪ್ಪತ್ತು ಅಡಿಯವರೆಗೆ ಮಣ್ಣು ಸಿಕ್ಕರೆ, ಕೆಲವರ ಹೊಲದಲ್ಲಿ ಹತ್ತು ಅಡಿಯವರೆಗೆ ಮಣ್ಣು ಸಿಕ್ಕಿದೆ. ಸ್ವಲ್ಪ ವರ್ಷಗಳ ನಂತರ ಮಳೆಯ ಸಮಯದಲ್ಲಿ ಮಣ್ಣು ಪುನಃ ತುಂಬುತ್ತದೆ. ಆಮೇಲೆ ಬೆಳೆ ಬೆಳೆಯಬಹುದು.”

“ಹಾಗಾದರೆ, ಈವಾಗ ಗದ್ದೆ ಫಸಲು ಮಾಡುವುದಿಲ್ಲವೇ?”

“ಬೇಸಾಯಕ್ಕೆ ಜನ ಎಲ್ಲಿ ಸಿಗುತ್ತಾರೆ? ಅವರು ಕೇಳಿದಷ್ಟು ಹಣ ಕೊಡಲು ಸಾಧ್ಯವೇ? ಈಗ ಅವರದೇ ಮರ್ಜಿ…” ಆಕೆ ಏನೇನೋ ಹೇಳುತ್ತಾಳೆ. ಈ ಹಳ್ಳಿಗಳಲ್ಲೂ ಎಷ್ಟೊಂದು ಬದಲಾವಣೆ ಆಗಿದೆ. ಬೆಳಿಗ್ಗೆ ರಿಕ್ಷಾದವನಿಗೆ ಕೊಟ್ಟ ಹಣದ ನೆನಪಾಗುತ್ತದೆ. ಜನರಿಗೆ ಬೆವರಿಳಿಸಿ ಹಣ ಸಂಪಾದಿಸಲು ಇಚ್ಚೆ ಇಲ್ಲ – ಸುಲಭದಲ್ಲಿ ಹಣಬೇಕು.

ರಾತ್ರಿ, ಅಪ್ಪ ತಾವೂ ತಮ್ಮ ಎರಡು ಗದ್ದೆಯ ಮಣ್ಣನ್ನು ಹಂಚಿನ ಕಾರ್ಖಾನೆಯವರಿಗೆ ಮಾರಿದ್ದನ್ನು ಹೇಳುತ್ತಾರೆ. “ಏನು ಮಾಡುವುದು, ಬೇಸಾಯಕ್ಕೆ ಜನ ಸಿಗುವುದಿಲ್ಲ. ಸಿಕ್ಕರೂ ಅವರು ಕೇಳಿದಷ್ಟು ಹಣ ಕೊಡಲಾಗುವುದಿಲ್ಲ. ಭೂಮಿ ಬಂಜರು ಬಿಡುವುದಕ್ಕಿಂತ ಇದೇ ಒಳ್ಳೆಯದು” ಅನ್ನುತ್ತಾರೆ.

“ಮಳೆಗಾಲದಲ್ಲಿ ಅದರಲ್ಲಿ ನೀರು ತುಂಬುವುದಿಲ್ಲವೇ?”

ಅಮ್ಮ, “ನೀರು ತುಂಬುತ್ತದೆ. ಕೆರೆಯ ಹಾಗೆ ಕಾಣುತ್ತದೆ. ಗದ್ದೆ ಯಾವುದು, ಕೆರೆ ಯಾವುದು ಗೊತ್ತಾಗುವುದಿಲ್ಲ. ಹೋದ ಮಳೆಗಾಲದಲ್ಲಿ ಅದರಲ್ಲಿ ಮೂರು ಜನ ಮುಳುಗಿ ಸತ್ತರು. ಪಾಪ, ಕೊರಗರು ಹೊಣೆ ಮೀನು ಕೊಲ್ಲಲು ಕತ್ತಿ ಹಿಡಿದು ಬಂದಿದ್ದರು. ಕೆರೇನೂ ಗದ್ದೆ ಅಂತ ತಿಳಿದು ನೀರಿಗೆ ಬಿದ್ದರು. ಮರು ದಿನ ಹೆಣ ತೇಲುವಾಗಲೇ ಗೊತ್ತಾದದ್ದು ಈ ಕಥೆ. ಅಪ್ಪ, ಮಗ, ಚಿಕ್ಕಪ್ಪ ಸತ್ತರು.”

ರಾತ್ರಿ ತುಂಬಾ ಹೊತ್ತು ಅವರು ತಮ್ಮ ಸುಖ ಕಷ್ಟ ಮಾತನಾಡುತ್ತಾರೆ. ನಾನೂ ನನ್ನ ಕಥೆಯನ್ನೂ ಹೇಳುತ್ತೇನೆ.


ನಾಳೆ ಶಿವರಾತ್ರಿ. ಶಿವರಾತ್ರಿಯ ಮರುದಿನ ಕಾಮ ದಹನದ ರೀತಿ ಏನೋ ಮಾಡುತ್ತಿದ್ದ ನೆನಪು. ಕಂಭಕ್ಕೆ ತೆಂಗಿನ ಗರಿ, ಹಳೆ ಬಟ್ಟೆ, ಹಳೆ ಸಾಮಾನು, ಹುಲ್ಲು ಸುತ್ತಿ ಬೆಂಕಿ ಕೊಡುತ್ತಿದ್ದ ನೆನಪು. ಅದರ ಮೊದಲು ಪೂಜೆ. ನಂತರ ಪ್ರಸಾದ. ರಾತ್ರಿ ಬೆಂಕಿಯ ಬಳಿ ಕುಣಿಯುತ್ತಾ ಇರುತ್ತಿದ್ದ ನೆನಪು. ಆದರೆ ಈ ಸಲ ಆ ಗೌಜಿ ಕಾಣುವುದಿಲ್ಲ.ಏನಾಯಿತು? ರಾತ್ರಿ ಅಪ್ಪ ಅಮ್ಮನ ಬಳಿ ಅದರ ಮಾತು ಎತ್ತುತ್ತೇನೆ. ಅಮ್ಮ, “ ಹಣಬು ಸುಡುವುದು” ಅನ್ನುತ್ತಾರೆ. ಅಪ್ಪ, “ಮೊದಲೆಲ್ಲಾ ಜನರಿಗೆ ಹಬ್ಬದ ಉತ್ಸಾಹ ಇತ್ತು.ಈಗೆಲ್ಲಿದೆ?ವಾರಕ್ಕೆ ಮೊದಲೇ ಜನ ವಂತಿಗೆಗೆ ಬರುತ್ತಿದ್ದರು.ಅಕ್ಕಿ, ಬೆಲ್ಲ, ತೆಂಗಿನಕಾಯಿ, ಅವಲಕ್ಕಿ, ಹಣ ಏನು ಕೊಟ್ಟರೂ ನಡೆಯುತ್ತಿತ್ತು.ಬೆಂಕಿ ಕೊಟ್ಟ ನಂತರ, ರಾತ್ರಿ ಎಲ್ಲಾ ಬೆಂಕಿ ಕಾಯ ಬೇಕಿತ್ತು.ದೊಡ್ಡವರು, ಸಣ್ಣವರು ಎಲ್ಲಾ ಸೇರಿ ಬೆಂಕಿಯನ್ನು ಜೋಪಾನವಾಗಿ ಕಾಯುತ್ತಿದ್ದೆವು.”

ನಾನು ಮಧ್ಯದಲ್ಲಿ, “ಬೆಂಕಿ ಯಾಕೆ ಕಾಯುವುದು?”

“ ಅದನ್ನು ಪರ ಊರವರು ಕದ್ದುಕೊಂಡು ಹೋಗ ಕೂಡದು. ಒಮ್ಮೆ ಬೆಂಕಿ ನಮ್ಮ ಊರಿನ ಗಡಿ ದಾಟಿದರೆ, ಮುಂದೆ ನಮಗೆ ಹಣಬೆ ಸುಡಲು ಇಲ್ಲ. ಮುಂದೆ ಅದನ್ನು ಆ ಊರವರೇ ಮಾಡಬೇಕು.ನಮ್ಮ ಊರಿನ ಮರ್ಯಾದೆ ಹೋದಂತೆ.ಊರ ದೇವರಿಗೂ ಸಿಟ್ಟು ಬರುತ್ತದೆ.”

ತಂಗಿ, “ ಅಣ್ಣ, ಈವಾಗ ನಮ್ಮ ಊರವರಿಗೂ ಹಣಬು ಸುಡಲು ಇಲ್ಲ. ಎರಡು ವರ್ಷದ ಹಿಂದೆ, ನಮ್ಮ ಪಕ್ಕದ ಊರವರು,ರಾತ್ರಿ ಬೆಂಕಿ ಕದ್ದುಕೊಂಡು ಹೋದರು.”

ನಾನು, ಮುಂಬಾಯಿಯ ದಾದಾನ ಗತ್ತಿನಿಂದ, “ ಈ ವರ್ಷ ಆ ಬೆಂಕಿಯನ್ನು ಕದ್ದು ಹಿಂದೆ ತರುವಾ. ಯಾರು ಅಡ್ಡ ಬರುತ್ತಾರೆಂದು ಒಂದು ಕೈ ನೋಡುವಾ” ಅನ್ನುತ್ತೇನೆ.

ಅಮ್ಮ, “ ಯಾಕೆ ಬೇಕು ಅದೆಲ್ಲಾ. ನೀನು ಅದನ್ನು ತಂದರೂ, ಇಲ್ಲಿ ಅದನ್ನು ಪುನಃ ಮಾಡುವವರು ಯಾರು?ಊರಲ್ಲಿ ಯಾರು ಇದ್ದಾರೆ.ಯಾರಿಗೆ ಆ ಉಮೇದು ಇದೆ ಮಗ.ಆ ಊರವರು ನಮ್ಮ ಬೆಂಕಿ ಕದ್ದದ್ದಲ್ಲ, ಅವರು ಕದ್ದದ್ದು ನಮ್ಮ ಕಷ್ಟವನ್ನು.ನಮ್ಮ ಕಷ್ಟ ಅವರಿಗೆ ಹೋಯಿತು. ಬೆಂಕಿ ಅಲ್ಲಿಯೇ ಇರಲಿ”

ತಂಗಿ ಜೋರಾಗಿ ನಗುತ್ತಾಳೆ.


( ಹಣಬು ಸುಡುವ ಮಾಹಿತಿ, ಕುಂದಾಪುರದ ಸುತ್ತ ಮುತ್ತ ನಡೆಯುತ್ತಿರುವ ಬದಲಾವಣೆಯ ವಿವರಣೆ ನೀಡಿದ ನನ್ನ ಆತ್ಮೀಯ ಮಿತ್ರ ಹಾಗೂ ಸಹೋದ್ಯೋಗಿಃ ಶ್ರೀಯುತ ಸುರೇಂದ್ರ ಎಂ.  ಅವರಿಗೆ ಕೃತಜ್ಞತೆಗಳು)

 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

16 Comments
Oldest
Newest Most Voted
Inline Feedbacks
View all comments
Sunil
11 years ago

ಕಥೆಯ ಚಿತ್ರಣ , ಹಳ್ಳಿಯ ದೃಷ್ಯಗಳು ಕಣ್ಣು ಮುಂದೆ ಕಟ್ಟಿದ ಹಾಗೆ ಭಾಸವಾಯಿತು. ಕುಂದಾಪುರ ಭಾಷೆಯ ಸೊಗಡು ಕೂಡಾ ಚೆನ್ನಾಗಿದೆ. ಹಣಬು ಸುಡುವುದು ಇದರ ಬಗ್ಗೆ ಮಾಹಿತಿ ಅಷ್ಟೊಂದು ಇಲ್ಲ, ತಿಳಿದುಕೊಳ್ಳಬೇಕು ಎಂಬ ಆಸೆ ಇದೆ. ಕಥೆ ಚೆನ್ನಾಗಿದೆ. ಮತ್ತೆ ಮತ್ತೆ ಹೊಸ ಕಥೆಗಳನ್ನು ಬರೆದು ತಿಳಿಸಿರಿ ಓದುತ್ತೇವೆ.

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  Sunil

ನಿಮ್ಮ ಪ್ರೋಯ್ಸಾಹದ ನುಡಿಗಳಿಗೆ ಧನ್ಯವಾದಗಳು ಸುನಿಲ್ ರವರೆ.

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  Sunil

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು, ಸುನಿಲ್ ರವರೆ.

vijaykumar. A. G.
11 years ago

ಸರ್. ನಿಮ್ಮ ಕಥೆ ತುಂಬಾ ಚನ್ನಾಗಿದೆ. ಅಂತ್ಯದವರೆಗೂ ಓದಿಸಿಕೊಂಡು ಹೊಗುವ ಕಥಾ ಸಾರಾಂಶ ಮೆಚ್ಚವಂತಹದು. ಕುಂದಾಪುರದ ಭಾಷಾ ಸೊಬಗು ಕೇಳಲು ತುಂಬಾ ಚನ್ನಾಗಿರುತ್ತೆ. ಆದರೆ ನಮ್ಮ ಕಡೆಯವರೆಗೆ ಮಾತನಾಡಲು ಬರುವುದಿಲ್ಲ. ಇನ್ನೂ ಹೆಚ್ಚು ಹೆಚ್ಚು ನಿಮ್ಮ ಕಥೆಗಳು ಬರಲಿ ಎಂಬ ಹಾರೈಕೆಯೊಂದಿಗೆ. ನಿಮ್ಮ. 

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಧನ್ಯವಾದಗಳು ವಿಜಯಕುಮಾರರವರೆ. ಕುಂದಾಪುರದ ಕನ್ನಡ ನನಗೂ ಗೊತ್ತಿಲ್ಲ. ಅಲ್ಲಲ್ಲಿ, ಆ ಭಾಷೆ ಸೇರಿಸಲು ಸ್ನೇಹಿತನ ಮತ್ತು ಹೆಂಡತಿಯ ಸಹಾಯ ತೆಗೆದುಕೊಂಡೆ.

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

ಸರ್, ಕಥೆ ಚೆನ್ನಾಗಿದೆ….

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ನಿಮ್ಮ ಚುಟುಕಿನ ಮೆಚ್ಚುಗೆಗೆ ಧನ್ಯವಾದಗಳು ಸಿದ್ದರಾಮ್ ರವರೆ.

mamatha keelar
mamatha keelar
11 years ago

ಅಧುನಿಕರಣದಿಂದ ಈಗ ಹಳ್ಳಿಗಳಲ್ಲಿ ನಡೆಯುವ ಹಬ್ಬಗಳ ಸಂಭ್ರಮಾಚರಣೆ ಬರಿ ಕಥೆ ಯಲ್ಲಿ ಕೆಳುವದೆ ಆಗಿದೆ. 

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  mamatha keelar

ಸಮಯದೊಂದಿಗೆ ಬದಲಾವಣೆ ಅನಿವಾರ್ಯ ಅನಿಸುತ್ತದೆ. ಕೆಲವು ಸಂಪ್ರದಾಯಗಳನ್ನು ಕಳಕೊಳ್ಳುವಾಗ ನೋವಾಗುತ್ತದೆ.  ಅವುಗಳನ್ನು ನೆನೆಸಿ ಕೊಳ್ಳುವಾಗ, ನಮ್ಮ ಮಕ್ಕಳಿಗೆ ಅವುಗಳನ್ನು ತೋರಿಸಲು ಅಸಾಧ್ಯ ಅನಿಸಿದಾಗ ಬೇಸರವಾಗುತ್ತದೆ. ಈಗಿನ ಮಕ್ಕಳಿಗೆ ಆ ಬಗ್ಗೆ ಹೆಚ್ಚಿನ ಆಸಕ್ತಿಯೂ ಇಲ್ಲ.

parthasarathyn
11 years ago

 ಯಾಕೆ ಬೇಕು ಅದೆಲ್ಲಾ. ನೀನು ಅದನ್ನು ತಂದರೂ, ಇಲ್ಲಿ ಅದನ್ನು ಪುನಃ ಮಾಡುವವರು ಯಾರು?ಊರಲ್ಲಿ ಯಾರು ಇದ್ದಾರೆ.ಯಾರಿಗೆ ಆ ಉಮೇದು ಇದೆ ಮಗ.ಆ ಊರವರು ನಮ್ಮ ಬೆಂಕಿ ಕದ್ದದ್ದಲ್ಲ, ಅವರು ಕದ್ದದ್ದು ನಮ್ಮ ಕಷ್ಟವನ್ನು.ನಮ್ಮ ಕಷ್ಟ ಅವರಿಗೆ ಹೋಯಿತು. ಬೆಂಕಿ ಅಲ್ಲಿಯೇ ಇರಲಿ”
ಈ ಸಾಲುಗಳೆ ನಿಜ , ಈಗ ಎಲ್ಲವನ್ನು ಕಷ್ಟ ಅಂದುಕೊಳ್ಳುತ್ತ  ಎಲ್ಲ ಪದ್ದತಿಗಳು ಕಾಣೆಯಾಗುತ್ತಿವೆ

Rajendra B. Shetty
11 years ago
Reply to  parthasarathyn

When I heard that  last line from my friend, it inspired me to write this imaginary story.
Sorry, due to some technical reasons, I am responding in English.
Thanks for the response.

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  parthasarathyn

ನನ್ನ ಸ್ನೇಹಿತ ಈ ಕಥೆಯ ಕೊನೆಯ ಮಾತನ್ನು ಹೇಳಿದಾಗಲೇ ನನಗೆ ಈ ಕಥೆ ಬರೆಯಲು ಸ್ಪೂರ್ತಿ ಸಿಕ್ಕಿದ್ದು. ಹಣಬು ಸುಡುವುದು ಮತ್ತು ಹೊಲದ ಮಣ್ಣನ್ನು ಮಾರುವುದು ನನ್ನ ಮಿತ್ರ ತಿಳಿಸಿದಾಗ ಈ ಬಗ್ಗೆ ಬರೆಯಬೇಕು ಅನಿಸಿತು. ಅದಕ್ಕೊಂದು ಕಥಾ ರೂಪ ಕೊಟ್ಟೆ. ಮುಂಬಾಯಿಯ ರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಿದ್ರೆ ಮಾಡುವುದು ಕಂಡಿದ್ದೆ. ಅಲ್ಲಿ ಓದಿ, ಮುಂದೆ ಬಂದವರ ಕಥೆ ಕೇಳಿದ್ದೆ. ಇವೆಲ್ಲವನ್ನೂ ಸೇರಿಸಿ ಕಥೆ ಮೂಡಿ ಬಂತು.
ನಿಮ್ಮ ಅನಿಸಿಕೆಗೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

gaviswamy
11 years ago

ಒಳ್ಳೆಯ ಕಥೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ನಿಮ್ಮ ಸೀಮೆಯ ಭಾಷೆ,ಸಂಸ್ಕೃತಿ ಮತ್ತು ಆಚರಣೆಗಳನ್ನು ಇನ್ನೂ ಹೆಚ್ಚು ಹೆಚ್ಚು ಪರಿಚಯಿಸುತ್ತೀರೆಂದು ಆಶಿಸುತ್ತೇನೆ.

hoping a lot more stories

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  gaviswamy

ಧನ್ಯವಾದಗಳು, ಗವಿಸ್ವಾಮಿಯವರೆ. ನಿಮ್ಮ ಆಶಯ ನೆರವೇರಲಿ ಎಂದು ನಾನೂ ಆಶಿಸುವೆ.

sharada moleyar
sharada moleyar
11 years ago

 
ಅಮ್ಮ, “ ಯಾಕೆ ಬೇಕು ಅದೆಲ್ಲಾ. ನೀನು ಅದನ್ನು ತಂದರೂ, ಇಲ್ಲಿ ಅದನ್ನು ಪುನಃ ಮಾಡುವವರು ಯಾರು?ಊರಲ್ಲಿ ಯಾರು ಇದ್ದಾರೆ.ಯಾರಿಗೆ ಆ ಉಮೇದು ಇದೆ ಮಗ.ಆ ಊರವರು ನಮ್ಮ ಬೆಂಕಿ ಕದ್ದದ್ದಲ್ಲ, ಅವರು ಕದ್ದದ್ದು ನಮ್ಮ ಕಷ್ಟವನ್ನು.ನಮ್ಮ ಕಷ್ಟ ಅವರಿಗೆ ಹೋಯಿತು. ಬೆಂಕಿ ಅಲ್ಲಿಯೇ ಇರಲಿ”

ಪರಂಪರಾಗತ ಆಚರಣೆ ಮಾಡಲೂ ಈಗ ಜನ ಕಷ್ಟ ಎಂದೇ ಭಾವಿಸುವ ಕಾಲ.
ಮಾಡುವ  ಪರಂಪರಾಗತ  ಕೆಲಸದಲ್ಲಿ ಸಂತಸ ಪಡಲಾರರು ಈಗಿನ ಜನ
nicely written
readable story

Pooja J Shetty
Pooja J Shetty
11 years ago

Good story mama.

16
0
Would love your thoughts, please comment.x
()
x