ಸ್ತ್ರೀ ಸಾಮಥ್ರ್ಯಹರಣ-ಲಿಂಗತ್ವ ರಾಜಕಾರಣ: ನಾಗರೇಖಾ ಗಾಂವಕರ

nagarekha

“I am the commodity you traded in,
my chastity, my motherhood, my loyalty
now it is time for me to flower free
The woman on that poster, half naked, selling socks and shoes-
No.no I am not that woman”

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿ ಕಣ್ಣಿಗೆ ಕಟ್ಟುವಂತೆ ಪಾಕಿಸ್ತಾನಿ ಕವಯತ್ರಿ ಕೀಶ್ವರ ನಯೀದ ಬಣ್ಣಿಸಿದ ಪರಿ ಅನುಪಮ.ಆಕೆಯನ್ನು ಸರಕಂತೆ ಬಳಸುವ  ಆಕೆಯ ತಾಯ್ತನ, ಘನತೆ ನಿಷ್ಟೆಗಳ ಮಾರಿ ಹೆಸರು ಹಣದ ಆಮಿಷಕ್ಕೆಳೆಸಿ ರೂಪದರ್ಶಿಯಾಗಿಸಿ ಅಂಗಾಗಗಳ ಪ್ರದರ್ಶನಕ್ಕೆಳೆಸಿ ಸ್ತ್ರೀತ್ವವ ಸೆರೆಯಾಳಾಗಿಸಿದ ಪರಿಪರಿಯ ಚಿತ್ರಣವನ್ನು ನೀಡಿ ತಾನು ಆ ಹೆಣ್ಣಲ್ಲ ಎಂಬ ದಿಟ್ಟ ಮನೋಧೈರ್ಯವನ್ನು ಕಠೋರ ತೀಕ್ಷ್ಣ ವಿರೋಧವನ್ನು ವ್ಯಕ್ತಗೊಳಿಸಿ, ಪುರುಷನ ದೌರ್ಜನ್ಯವನ್ನು I am not that woman ಕವನದಲ್ಲಿ ಖಂಡಿಸುತ್ತಾರೆ.

ಮಹಿಳಾ ಸಾಹಿತ್ಯವ ಕೇಂದ್ರವಾಗಿ ತೆಗೆದುಕೊಂಡರೆ ಸ್ತ್ರೀ ವಾದದ ಮೂಲ ಬೇರು ಇರುವುದೇ ಇಂತಹ ಸಾಹಿತ್ಯ ತನ್ನ ಸ್ತ್ರೀತ್ವದ ಮೂಲನೆಲೆಯನ್ನು ಬಿಂಬಿಸುವ ರೀತಿಯಲ್ಲಿ. ಇದು ಬರೀಯ ಸಂವೇದನೆಯಲ್ಲ. ಸಂವೇದನೆಯಿಂದ ತಾರತಮ್ಯವನ್ನು ದಬ್ಬಾಳಿಕೆಯನ್ನು ಹೋಗಲಾಡಿಸಲಾಗದು. 

ಪುರುಷ ಪ್ರಾತಿನಿಧ್ಯತೆ ಬಗ್ಗೆ “ಬೈಬಲ್” ನಲ್ಲೂ ಹೀಗೆ ಬರುತ್ತದೆ. ದೇವರು ತನ್ನ ಕಲ್ಪನೆಯಂತೆ ಗಂಡನ್ನು ಸೃಷ್ಟಿಸಿದ. ಮತ್ತು ಆತನನ್ನು ಗಾಢ ನಿದ್ದೆಗೆ ದೂಡಿ ಆತನ ಒಂದು ಮಗ್ಗುಲಿನ ಎಲುಬನ್ನು ತೆಗೆದು ಅದಕ್ಕೆ ಪುನಃ ಮಾಂಸದ ತಡಿಕೆ ಹೊದಿಸಿ ಹೆಣ್ಣಾಗಿಸಿದ.ಮತ್ತು ಅವಳನ್ನು ಗಂಡಿಗೆ ನೀಡಿದ.ಅದಕ್ಕೆಂದೆ ಆದಮ್  ಹೇಳುತ್ತಾನೆ “ ಇದು ನನ್ನ ಮೂಳೆಯಿಂದ ಮೂಡಿದ ಮೂಳೆ, ನನ್ನ ರಕ್ತದಿಂದ ಬಂದ ರಕ್ತ .ಅದಕ್ಕೆ ಆಕೆ ಹೆಣ್ಣು. ಗಂಡಿನ ದೇಹದಿಂದಲೇ ರೂಪ ಪಡೆದಳು.” ಅದಕ್ಕಾಗಿ ಅವರಿಬ್ಬರೂ ನಾಚಿಕೆಯ ಬದಿಗೊತ್ತಿ ನಗ್ನರಾದರು.ಇದು ಪಾಶ್ಚಾತ್ಯ ದೇಶಗಳಲ್ಲೂ ಇರುವ ಪುರುಷ ಪ್ರಧಾನ ಸಿಧ್ದಾಂತಕ್ಕೆ ಸ್ಪಷ್ಟ ಉದಾಹರಣೆ. ದೇವರ ಕಲ್ಪನೆಯ ಮೂಲಕ ಚಾಣಾಕ್ಷತೆಯಿಂದ ಕಥೆ ಹೆಣೆದು ಹೆಣ್ಣಿಗೆ ಎರಡನೇಯ ಸ್ಥಾನ ನೀಡಿ ಸಹಚರಣಿಯಾಗಿಸಿದ ಪುರುಷ ವೈವಸ್ಥೆಯ ಹುನ್ನಾರ.

 ಆದರೆ ಪುರುಷನಿಗೆ ಸಮಾನವಾದ ಸ್ವಾಯತ್ತತೆ, ಗುರುತು, ಇತ್ಯಾದಿಗಳ ಅಗತ್ಯತೆಯೆಡೆಗೆ ಸ್ತ್ರೀ ವಾದ ಪ್ರತಿಪಾದಿಸುತ್ತಿದೆ.ಹೆಣ್ಣು ಗಂಡಿನಿಂದ ಬಂದವಳಲ್ಲ.ಆತನ ಸೃಷ್ಟಿಗೆ ಮೂಲ ಹೆಣ್ಣು. ಇನ್ನೊಂದು ಜೀವವನ್ನು ಸೃಜಿಸುವಿಕೆ ಆಕೆಯಿಂದ  ಮಾತ್ರ ಸಾಧ್ಯ.ಆದಮ್ ತನ್ನ  ಪತ್ನಿಯನ್ನು ಈವ್ ಎಂದು ಕರೆದ. ಆತನೇ ಸೃಷ್ಟಿಸಿದ ದೇವರು ಕೂಡ ಗಂಡೇ.ದೇವನಿಂದ ಮೊದಲು ಹುಟ್ಟಲ್ಪಟ್ಟ ಆದಮ್ ಕೂಡಾ ಗಂಡೇ.ಇದರಿಂದಲೇ ಅಲ್ಲಿಂದಲೇ ಫಾಶ್ಚಾತ್ಯ ಪರಂಪರೆಯಲ್ಲೂ ತಾರತಮ್ಯ ಹುಟ್ಟಿತು.ಶಬ್ದಗಳನ್ನು ಆಳಬಲ್ಲ ಗಂಡು ಜಗತ್ತನ್ನು ಆಳಿದ.ಹೀಗಾಗಿ ಎಲ್ಲ ಐತಿಹಾಸಿಕ, ಭೌದ್ಧಿಕ ಸಮಗ್ರ ಸಂಪುಟಗಳೆಲ್ಲ ಆಳವಾದ ಲಿಂಗತ್ವ ಪಕ್ಷಪಾತಿ ದೋರಣೆಯಿಂದಲೇ ತುಂಬಿ ತುಳುಕಾಡುತ್ತಿವೆ.

ಲಿಂಗವು ಜೈವಿಕವಾದದ್ದು.ಲಿಂಗತ್ವವೂ ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ನಿರ್ಧರಿತವಾಗುವುದು.ಜೈವಿಕ ಮತ್ತು ಮಾನಸಿಕ ಸ್ಥಿತಿಗಳನ್ವಯ ಸ್ತ್ರೀ ಪುರುಷ ಸಂವೇದನೆ ಗೃಹಿಸಲ್ಪಡುವುದು.ಮಾನವೀಯ ಸಂವೇದನೆಗಳು ಗಂಡು ಹೆಣ್ಣಿಗೆ ದೇಹ ಪ್ರಕೃತಿಗೆ ಅನುಗುಣವಾಗಿ ಸ್ವಲ್ಪ ಭಿನ್ನವಾದರೂ ಅವು ತೀರಾ ವೈರುಧ್ಯಕಾರಕ ಭಾವಗಳಲ್ಲ.ಮನೋವ್ಯಾಪಾರಗಳು,ಮಧುರ ಭಾವನೆಗಳೂ, ದೈಹಿಕ ಆಕಾಂಕ್ಷೆಗಳು ಇವೆಲ್ಲವೂ ಸರ್ವೇಸಾಮಾನ್ಯ ಎಲ್ಲರಲ್ಲೂ ಇರುವಂತಹುಗಳೇ.ಹಾಗಾಗಿ.ಮುಖ್ಯವಾಗಿ ಸ್ತ್ರೀವಾದದ ಕೇಂದ್ರವೆಂದರೆ ಪಿತೃಪ್ರಧಾನ ವ್ಯವಸ್ಥೆ.ಸ್ತ್ರೀ ಪುರುಷನಿಗೆ ಸಮಾನಳಲ್ಲ. ಗಂಭಿರ ಚಿಂತನೆಗೆ ಅಸಮರ್ಥಳು ಎಂಬ ಅಭಿಪ್ರಾಯ ಮೆಟ್ಟಿನಿಲ್ಲಬೇಕಾದಲ್ಲಿ  ಸಂವೇದನೆಯ ಹೊರತಾಗಿಯೂ ಸ್ತ್ರೀ ವಾದ ತನ್ನದೇ ಸ್ವಂತಿಕೆಯನ್ನು ಸಾಧಿಸಿಕೊಳ್ಳುವ,ಸ್ವಾಯತ್ತವಾದವಾಗಿ ಬೆಳೆಯುವ ಮತ್ತು ಪುರುಷನಿಗೆ ಸಮಾನ ಹೆಗೆಲೆಣೆಯಾಗಿ ಬೆಳೆಯುವ ಹಂಬಲ ಹೊಂದಬೇಕಾಗಿದೆ.

ಇನ್ನು ಸಾಂಪ್ರದಾಯಿಕ, ಪಟ್ಟಭದ್ರ, ಸಂಕುಚಿತ ಮನೋಭಾವದ, ಪುರುಷ ಪ್ರಾತಿನಿಧ್ಯ ಇತ್ಯಾದಿ ಹಿನ್ನೆಲೆ ಹೊಂದಿರುವ ಭಾರತದಂತಹ ವ್ಯವಸ್ಥೆಗೆ ಕೆಲವು ವಿಚಾರಗಳಲ್ಲಿ ಆಧುನಿಕತೆ ಜೀರ್ಣಿಸಿಕೊಳ್ಳಲಾಗದ ಸಂಗತಿ.ಹಾಗೆಂದು ಆಧುನಿಕತೆ ಎಂದರೆ ಸ್ವೇಚ್ಛೆಯಿಂದ ಬದುಕುವುದು ಎಂದಲ್ಲ.ಇನ್ನು ಹೆಣ್ಣಿನ ವಿಷಯಕ್ಕೆ ಬಂದರೆ ಹೆಣ್ಣು ಸೋಷಿಯಲ್ಲಾಗಿ ವ್ಯವಸ್ಥೆಗೆ ತೆರೆದುಕೊಂಡರೆ ಅದನ್ನು ತಪ್ಪೆಂದು ಸಾಂಪ್ರದಾಯಿಕರು ಭಾವಿಸುವುದು, ಸ್ರ್ತೀವಾದಿಗಳು ಅದನ್ನು ಸಮಕಾಲೀನ ಜಗತ್ತಿನ ವಾಸ್ತವತೆ ಎಂದು ಸಮರ್ಥಿಸುವುದು ಸಾಮಾನ್ಯ. 

ಮಹಿಳಾ ಸಾಹಿತ್ಯದ ಸೃಷ್ಟಿಯಲ್ಲೂ ಸ್ತ್ರೀಯನ್ನು ದೇವತೆಯ ಅಥವಾ ಮಾರಿಯ ರೂಪಕೊಟ್ಟು ಚಿತ್ರಿಸುವ ಅಗತ್ಯವಿದೆಯೇ? ಆಕೆ ಕೂಡ ತನ್ನದೇ ಆದ ಆಶೋತ್ತರಗಳ ಹೊಂದುವ ಹಕ್ಕುಳ್ಳ ತೊಗಲುಧಾರಿಯಲ್ಲವೇ?ಅವಳಿಗೆ ದೈವತ್ವವ ಆರೋಪಿಸಿ ಪೂಜಿಸುವ ಇಲ್ಲವೇ ಅನೈತಿಕತೆಯ ಮುಡಿಕಟ್ಟಿ ಧಮನಿಸುವ ಪಾತ್ರಗಳು ಪುರುಷ ಹಾಗೂ ಸ್ತ್ರೀ ಸಾಹಿತ್ಯ ಲೋಕದಲ್ಲಿ ಹೇರಳವಾಗಿ ಕಂಡು ಬರುತ್ತವೆ.ಇದರಲ್ಲಿ ಪುರುಷ ಪಕ್ಷಪಾತ ಆ ಕೈಗಳ ಮೇಲಾಟ ಸುಸ್ಪಷ್ಟ. ಸಿನೇಮಾ ಧಾರವಾಹಿಗಳಲ್ಲೂ ಕೂಡಾ ಇದೇ  ವೈಭವೀಕರಣ.ಅದು ಮುಂದೆ ಕೂಡ ರೋಗಗ್ರಸ್ತ ದುರ್ಬಲ ಅವಲಂಬಿತ ಸ್ತ್ರೀ ಸಂಕುಲವನ್ನೂ ಇನ್ನೂ ಜೀವಂತವಾಗಿಡುವ ಹುನ್ನಾರದಂತಿದೆ.

ಸ್ತ್ರೀಪರ ಚಿಂತನೆಗಳು ಪ್ರಪಂಚದ ಶ್ರೇಷ್ಟ ಸಾಹಿತ್ಯದಲ್ಲಿ ಬರುವ  ಮಹಿಳಾ ವಿಪರೀತ ಆದರ್ಶ ಅಲಂಕೃತ ಪಾತ್ರಗಳ ಇಲ್ಲವೇ ದುಷ್ಟ ಪಾತ್ರಗಳ ಪರಿಗಣಿಸಿ ಹೊರಟರೆ ಆಂಗ್ಲ ಸಾಹಿತ್ಯದ ಕಲಾ ದೇವತೆಯಾದ ಮಡೊನ್ನಾ,ಮನೆದೇವತೆ ಪರಿಶುದ್ಧ ಮುಗ್ಧ ಕನ್ಯೆ ಬೀಟ್ರೈಸ್ ಉದಾತ್ತ ಸ್ತ್ರೀ ಪಾತ್ರಗಳಾದರೆ, ಪಂಡೋರಾ, ದೆಲಿಲ್ಹಾ ದುಷ್ಟ ರಾಕ್ಷಸಿ ಪ್ರವೃತ್ತಿಗೆ ಸಾಂಕೇತಿಕವಾಗಿ ಸೃಷ್ಟಿಸಲ್ಪಟ್ಟಿರುವುದು ವಿಪರ್ಯಾಸ. ಇನ್ನು ಮಹಾಭಾರತದ ಆದರ್ಶ ಸ್ತ್ರೀ ದ್ರೌಪದಿ, ಕುಂತಿ ಗಾಂಧಾರಿಯರಾದರೆ, ರಾಮಾಯಣದ ಸೀತೆ ಹೀಗೆ ಹಲವು ಪಾತ್ರಗಳು ಅದಕ್ಕೆ ತತ್ವಿರುದ್ಧವಾಗಿ ಶೂರ್ಪನಖಿ,ಮ ಂಥರೆ, ಕೈಕೇಯಿ, ಇನ್ನೂ ಹತ್ತು ಹಲವು ಪಾತ್ರಗಳು ಇದ್ದು ಎಲ್ಲಿಯೂ ಆಕೆಗೆ ಸ್ವತಂತ್ರ ಸ್ವಾಯತ್ತ ವ್ಯಕ್ತಿತ್ವವಿಲ್ಲಧೇ ಗಂಡಿಗೆ ಪೂರಕ ಅದೀನ ವಶವರ್ತಿ ಪಾತ್ರಗಳಾಗಿವೆ. ಮಹಾಭಾರತ ,ರಾಮಾಯಣ, ಯುಲಿಸಿಸ್, ಇಡಿಪಸ್ ರೆಕ್ಸ ಇತ್ಯಾದಿಗಳೆಲ್ಲ ಪುರುಷ ಕೇಂದ್ರೀತ ಕೃತಿಗಳೇ ಆಗಿವೆ.ಪುರುಷ ವಿರಚಿತ ಸಾಹಿತ್ಯಗಳೆಲ್ಲ ಈ ಮೇಲ್ಪದರ ಸವಿಗಾಗಿಯೇ ಸೃಷ್ಟಿಸಲ್ಪಟ್ಟಂತಿವೆ. “One is not born, but rather becomes a woman”  ಅಂತೆ ಇಂದಿನ ಜಾಗೃತ ಸ್ತ್ರೀ ಚಿಂತನೆ ಪ್ರಕಾರ ಲಿಂಗತ್ವ ಪುರುಷ ಪ್ರಧಾನ ವೈವಸ್ಥೆಯ ಸಾಮಾಜಿಕ ಸಂರಚನೆ

ಮಹಿಳಾ ಸ್ಥಾನಮಾನ ಸ್ಥಿತಿಗತಿ ಬದಲಾವಣೆಯ ಬಗ್ಗೆ ಚರ್ಚಿಸುವುದು  ಇಂದಿನ ದಿನಮಾನದ ಅಗತ್ಯತೆ.ಮಹಿಳೆಯ ಪಾರಂಪಾರಿಕ ಚಿತ್ರಣ ತನ್ನ ಮೂಲ ಸ್ವರೂಪದಿಂದ ಬದಲಾಗುತ್ತ ಹೊಸ ದಿಕ್ಕಿನತ್ತ ಪಲ್ಲಟಿಸುತ್ತಿದೆ.ಒಂದು ಸಾಮಾನ್ಯ ಉದಾಹರಣೆ ಎರಡು ತಲೆಮಾರುಗಳ ಹಿಂದೆ ಹೆಣ್ಣು  ದುಡಿದು ¨ರುವ ಗಂಡನ ದಾರಿ ಕಾಯುತ್ತ ಮನೆಯ ತಲೆ ಬಾಗಿಲಲ್ಲಿ  ತಲೆ ತುಂಬಾ ಸೆರೆಗೆಳೆದುಕೊಂಡು ಒಳಬಾಗಿಲ ದಾಟುವ ಮುನ್ನ ಕೈಯಲ್ಲಿ ತಂಬಿಗೆ ಕೊಟ್ಟು ಆತನ ಸೇವೆ ಶಿರಬಾಗಿ ಸಿದ್ದಳಿದ್ದ ಚಿತ್ರಣ. ಇಂದಿಗೂ ಅಲ್ಲಲ್ಲಿ ಹಳ್ಳಿ ಬದುಕಿನಲ್ಲಿ ಸಹಜ ಎಂಬಂತೆ ರೂಢಿಯಲ್ಲಿದೆ. ಆ ನಂತರದ  ತಲೆಮಾರಿನ ಪರಿಸ್ಥಿತಿ ಸ್ವಲ್ಪವಷ್ಟೇ ಭಿನ್ನ.ಗಂಡಿನ ಬರುವಿಕೆಗೆ ದಾರಿ ಕಾಯುತ್ತ ,ಮನೆಗೆಲಸಗಳ ಮುಗಿಸಿ ಮನೆಯಲ್ಲಿ ಟಿ.ವಿಗಳಿದ್ದರೆ ಅದರಲ್ಲಿ ಮಗ್ನರಾಗಿ ಇಲ್ಲವೇ ಹೊಲದ ಕೆಲಸಗಳಲ್ಲಿ ಗಂಡಿನ ಸಮನಾಗಿ ದುಡಿದು ಮನೆಗೆ ಬಂದು ಅಲ್ಲಿಯೂ ಅವಳಿಗೆಂದೆ ಮೀಸಲಿದೆ ಎಂಬ ಅಸಂವಿಧಾನಾತ್ಮಕ ಕಾನೂನು ಪಾಲನೆಯ ಮನೆಗೆಲಸದ ಹೊರೆಹೊತ್ತು ಬಳಲುವ ತಾಯಂದಿರು.ದುಡಿದು ಬಂದ ಪತಿ ಮನೆಗೆ ಬಂದೊಡನೆ ತನ್ನೆಲ್ಲಾ ಒತ್ತಡಗಳಿಂದ ಮುಕ್ತನಾಗಿ ಆರಾಂ ಅನುಭವಿಸಿದರೆ ಅದೇ ಹೆಣ್ಣು ತನ್ನ ಹೊಟ್ಟೆಯ ಕೂಗನ್ನು ಮೀರಿ ಅವನ ಹೊಟ್ಟೆಗೆ ತಂಪು ಮಾಡುವ ಕೈಂಕೈರ್ಯದಲ್ಲಿ ತೊಡಗಲೇ ಬೇಕು.ಇಲ್ಲದಿದ್ದರೆ ಆಕೆ ಭಜಾರಿ ಹೆಣ್ಣು.ಗಂಡನಿಗೆ ಸರಿಯಾಗಿ ಅಡುಗೆ ಮಾಡಿ ಹಾಕದ ನೀತಿ ಇಲ್ಲದಾಕೆ ಎಂಬೆಲ್ಲ ಅವಮಾನಗಳ ಕೇಳಬೇಕು.

ಅದೇ ಸ್ವಲ್ಪ ಮಟ್ಟಿನ ಬೆಳವಣಿಗೆ ಎಂದರೆ ಇಂದಿನ ಪೀಳಿಗೆಯ ಹೆಣ್ಣುಗಳು ಜಾಗತೀಕರಣದ ಕಾರಣದಿಂದಲೋ ಈ ಹಂತಕ್ಕೆ ಬಂದಾಗ ಪುರುಷನಿಗೆ ಹೆಗೆಲೆಣೆಯಾಗಿ ಆರ್ಥಿಕ ದುಡಿಮೆಯ ಹೆಣ್ಣುಗಳು ಮನೆಗೆ ಬೀಗ ಜಡಿದೇ ಹೋಗಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ವಿಭಕ್ತ ಕುಟುಂಭ ವೈವಸ್ಥೆಯಲ್ಲಿ ಇದು ಸಾಮಾನ್ಯವಾಗುತ್ತಿದೆ ಅದರಲ್ಲೂ ಪಟ್ಟಣವಾಸಿಗಳಲ್ಲಿ ಇದೇ ಸರ್ವೇಸಾಮಾನ್ಯ ಸಂಗತಿ.ಅಂತಹ ಕುಟುಂಬಗಳಲ್ಲಿ ಆಪರೂಪಕ್ಕೆ ಬೇಗನೇ ಮನೆಗೆ ಬರುವ ಗಂಡ ತಾನೇ ಬಾಗಿಲು ತೆಗೆದು ಒಳಹೊಕ್ಕು ಆಸರಿಕೆಯ ತಾನೇ ಮಾಡಿ ಪಡೆಯಬೇಕಾದ ಅನಿವಾರ್ಯತೆಯೂ ಇಲ್ಲದಿಲ್ಲ.ಹಾಗೆಂದು ಅಪರೂಪಕ್ಕೆ ಸಹೃದಯಿಯಾದ ಗಂಡಂದಿರ ಬಿಟ್ಟು ಇಲ್ಲವೇ ಆಗಾಗ ಕೆಲವೊಮ್ಮೆ ಗಂಡಲ್ಲಿ ಉಕ್ಕುವ ಪ್ರೇಮಾನುರಾಗ ಹೊರತು ಪಡಿಸಿ ಹೆಚ್ಚಿನ ಪುರುಷರೂ ಹೊರಗೆ ತನ್ನಂತೆ ದುಡಿದು ಬರುವ ಹೆಂಡತಿಗಾಗಿ ಚಹಾ ತಿಂಡಿಯ ಮಾಡಿ ಕಾಯುವುದು ಅಪರೂಪದಲ್ಲಿ ಅಪರೂಪ. ಭಾರತದಂತಹ ಪಟ್ಟಭದ್ರ ಸಂಪ್ರದಾಯಸ್ಥ ಪುರುಷ ಮೇಲ್ಮೈ ಬುದ್ಧಿಯ ಗಂಡುಗಳು ಬದಲಾಗುವ ದಿನಗಳ ಕಾದು ನೋಡಬೇಕಷ್ಟೇ!

-ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x