ಬದುಕುವ ಹಕ್ಕಿದೆ ಎಂದು ಮತ್ತೊಬ್ಬರ ಬದುಕು ಕಿತ್ತೊಕೊಳ್ಳುವುದು ಎಷ್ಟು ಸಮಂಜಸ?: ನರಸಿಂಹಮೂರ್ತಿ ಎಂ.ಎಲ್

narasimha-murthy
ಇಂದಿನ ಮಾನವನ ಪ್ರಕೃತಿಯ ಮೇಲಿನ ದಾಳಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಂದು ರೀತಿಯ ಆಘಾತದ ಸಂಗತಿ. ಹಲವು ಬಗೆಯ ವರದಿಗಳು ಹಲವು ಸಲ ನಾವು ವಾಸಿಸುತ್ತಿರುವ ಪರಿಸರದಲ್ಲಿ ಮಾಲಿನ್ಯತೆಯ ಪ್ರಮಾಣದ ಬಗ್ಗೆ ಎಚ್ಚರಿಸುತ್ತಲೇ ಇವೆ.  ಇತ್ತೀಚೆಗೆ ವಾಯು ಮಾಲಿನ್ಯತೆಯ ಪ್ರಭಾವದಿಂದಾಗಿ ದೇಶ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳು ಶಾಲೆಗಳಿಗೆ ರಜೆಗಳನ್ನು ಘೋಷಿಸಲಾಗಿತ್ತು. ಇನ್ನು ನಮ್ಮ ಬೆಂಗಳೂರು ಇದಕ್ಕೆ ಹೊರತಾಗಿಲ್ಲ, ಅಷ್ಟು ಪ್ರಮಾಣ ಇಲ್ಲದಿದ್ದರೂ ಅದರ ಸಮೀಪದಲ್ಲಿದೆ. ಇದಕ್ಕೆಲ್ಲ ಕಾರಣಗಳು ನಮಗೆ ತಿಳಿದಿವೆ. ಹೆಚ್ಚಾದ ವಾಹನಗಳ ಸಂಖ್ಯೆ, ನಿಯಂತ್ರಣದಲ್ಲಿಲ್ಲದ ಕಾರ್ಖಾನೆಗಳ ತ್ಯಾಜ್ಯ. ಕೃಷಿಯೇತರ ಮತ್ತು ರಾಸಾಯನಿಕಗಳ ಬಳಕೆಯ ಪ್ರಮಾಣದಲ್ಲಿ ತೀವ್ರಗತಿ ಏರಿಕೆ. ಮತ್ತಿತರ ಕಾರಣಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚುತ್ತಳೇ ಹೋಗುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯಂತೆ ಮಾರ್ಪಟ್ಟಿದೆ. 

ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಇಲಾಖೆಗಳು ಮತ್ತು ಮಂಡಳಿಗಳಿದ್ದರೂ ಅವುಗಳ ಕಾರ್ಯ ವೈಖರಿಯಲ್ಲಿ ಸಂಶಯಗಳು ಮೂಡುತ್ತಿವೆ. ಒಂದು ನೂರು ವರ್ಷ ಬದುಕುವ ಮರವೊಂದು ತನ್ನ ಜೀವಿತಾವಧಿಯಲ್ಲಿ ಒಂದು ಕೋಟಿ ರೂಪಾಯಿಯಷ್ಟು ಅನುಕೂಲ ಮಾಡಿಕೊಡುತ್ತದೆ. ಹಾಗಯೇ 100 ಮರಗಳು ವರ್ಷಕ್ಕೆ 53 ಟನ್ ಇಂಗಾಲದ ಡೈ ಆಕ್ಸೈಡ್‍ನ್ನು ಮತ್ತು 430 ಪೌಂಡ್‍ಗಳಷ್ಟು ಇತರೆ ಮಾಲಿನ್ಯ ಕಾರಕಗಳನ್ನು ನಿರ್ಮೂಲಿಸುತ್ತದೆ. ಮತ್ತೊಂದು ವಿಷಯವೆಂದರೆ ಪ್ರೌಢಾವಸ್ತೆಯಲ್ಲಿನ ನೂರು ಮರಗಳ ಗುಂಪೊಂದು ವಾರ್ಷಿಕವಾಗಿ 139000ಗ್ಯಾಲನ್ ನೀರನ್ನು ಹಿಡಿದಿಟ್ಟುವ ಸಾಮಥ್ರ್ಯ ಹೊಂದಿವೆಯೆಂದು ವರದಿಯೊಂದು ತಿಳಿಸುತ್ತದೆ. ಅದು ಶುದ್ಧೀಕರಿಸುವ ಗಾಳಿ ಮತ್ತು ಮರದ ಬಹುಪಯೋಗಿ ಸಾಮಗ್ರಿಗಳನ್ನು ನೀಡುವ ಮೂಲಕ ಜನುಪಯೋಗಿ ಜೊತೆಗೆ ಪರಿಸರ ಸಮತೋಲನವನ್ನು ಕಾಪಾಡುತ್ತಿದೆ. ಆದರೆ ಅಭಿವೃದ್ಧಿ ಎಂಬ ನೆಪದಲ್ಲಿ ನೂರಾರು ವರ್ಷಗಳ ಮರಗಳಿಗೆ ಕೊಡಲಿ ಹಾಕಲಾಯಿತು. 2005ನೇ ಇಸವಿಯಲ್ಲಿ ನಾನು ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಹೋಗಬೇಕಾದರೆ ಮಂಚೇನಹಳ್ಳಿಯಿಂದ ಹಿರೇಬಿದನೂರಿನವರೆಗೂ ಒಂದು ರೀತಿ ನಂದನವನದಲ್ಲಿ ಬಸ್ಸು ಹೋಗುತ್ತಿದ್ದಂತೆ ಮೃದು ಅನುಭವ ನೀಡಿತು. ರಸ್ತೆಯ ಇಬ್ಬದಿಯಲ್ಲೂ ಸ್ವರ್ಗದ ಉಯ್ಯಾಲೆಗಳು ತೂಗುವಂತೆ ಆ ಬೃಹತ್ ಗೋಣಿ ಮತ್ತು ಆಲದ ಮರಗಳಿದ್ದವು. ಆದರೆ ಇತ್ತೇಚೆಗೆ ಅದೇ ರಸ್ತೆ ಕಂಡಾಗ ದುಖ ತಡೆಯಲಾಗಿಲ್ಲ. ಇಂತಹ ಹಲವು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ರಸ್ತೆ ಅಗಲೀಕರಣ ಪ್ರಸಂಗಗಳಲ್ಲಿ ಸಾವಿರಾರು ಮರಗಳು ನಾಶವಾಗಿವೆ. ಇದು ಬೆಂಗಳೂರಿನಲ್ಲೂ ನಡೆಯುತ್ತಿದ್ದು ಉದ್ಯಾನನಗರಿಯು ಉಸಿರಾಟಕ್ಕೆ ಮಾರಕ ಎಂಬ ಹಣೆಪಟ್ಟಿಕಟ್ಟಿಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಹಲವು ಬೀದಿಗಳಲ್ಲಿ ನೆರಳನ್ನು ಹಬ್ಬಿದ್ದ ಮರಗಳನ್ನು ಬ್ರಿಡ್ಜ್ಗಳ ನೆಪದಲ್ಲಿ, ರಸ್ತೆ ಅಗಲೀಕರಣ, ಒಳಚರಂಡಿ ಮತ್ತಿತರ ಕಾರಣಗಳಿಂದ ಕಡಿಯಲಾಯಿತು.  

ಹಾಗೇಯೇ ಗಣಿಗಾರಿಕೆ ಎಂಬ ಭೂತದ ಬೆನ್ನತ್ತಿರುವ ದಂದೆಗಳಿಗೆ ಕಡಿವಾಣ ಹಾಕುವ ಬದಲು ಕಾನೂನುಗಳನ್ನು ತಿದ್ದಲು ಪ್ರಯತ್ನಿಸುತ್ತಿರುವುದು ಭವಿಷ್ಯವನ್ನು ಬೇಗ ಮುಗಿಸಿ ಎನ್ನುವಂತಿದೆ. ಅದಿರು ಗಣಿಗಾರಿಕೆಗಳಿಂದ ನಾಶವಾದ ಅರಣ್ಯ ಪ್ರದೇಶಗಳು ಮರುಅರಣ್ಯೀಕರಣವಾಗಲೇ ಇಲ್ಲ. ಹಾಗಯೇ ಅರಣ್ಯ ನಾಶವಾಗುತ್ತಿರುವುದು ಮಾತ್ರ ನಿಲ್ಲಲಿಲ್ಲ.  ವರ್ಷದಿಂದ ವರ್ಷಕ್ಕೆ  ಸರ್ಕಾರಗಳಿಗೆ ತೆರೆಗೆಯ ಹಣಬೇಕು, ವ್ಯಾಪಾರಿಗಳಿಗೆ ಬದುಕು ಸುಲಭವಾಗಬೇಕು. ಆ ವ್ಯಾಪಾರ ದೃಷ್ಟಿಯು ಪರಿಸರ ಮೇಲೇಕೆ ಹೆಚ್ಚು ಒಲವು ಮೂಡುತ್ತಿದೆ, ಇದರಿಂದ ಸುಲಭವಾಗಿ ಸಂಪಾಧಿಸಬಹುದೆಂಬ ಲೆಕ್ಕಾಚಾರದಿಂದಾಗಿ ಆತಂಕದ ಸಂದೇಶವನ್ನು ಪ್ರಕೃತಿಯಿಂದಲೇ ವಿವಿಧ ರೂಪಕಗಳಲ್ಲಿ ವ್ಯಕ್ತವಾಗುತ್ತಿದೆ.  ಅದು ಬರಗಾಲವಾಗಿರಬಹುದು, ಕುಡಿಯುವ ನೀರಿನ ತೀವ್ರತರದ ಅಭಾವವಾಗಿರಬಹುದು, ಆಹಾರದ ಅಭದ್ರತೆ, ಅತಿವೃಷ್ಟಿ, ಅನಾವೃಷ್ಟಿ, ಕಾಡ್ಗಿಚ್ಚು, ಪ್ರವಾಹ ಇನ್ನಿತರೆ ಜೀವಹಾನಿ ಪ್ರಮಾಧಗಳು ನಡೆಯುತ್ತಲೇ ಸಾಗಿವೆ. ನಾವು ಅಂಕಿ ಅಂಶಗಳಲ್ಲಿ ದೇಶದ ಅಭಿವೃದ್ಧಿ , ರಾಜ್ಯದ ಸ್ಥಾನಮಾನಗಳ ಬಗ್ಗೆ ಪ್ರತಿನಿತ್ಯವೂ ಒಂದಲ್ಲ ಒಂದು ರೀತಿಯ ಸುದ್ಧಿಗಳನ್ನು ಸುಧ್ಧಿ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. 

ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಬೆಟ್ಟಗಳು ಇರುವ ಜಿಲ್ಲೆ ಅದರಲ್ಲೂ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಹೆಚ್ಚು. ಈ ತಾಲ್ಲೂಕುಗಳಲ್ಲಿ ಗ್ರಾಮಗಳ ಸಂಖ್ಯೇಯೂ ಹೆಚ್ಚಾಗಿಯೇ ಇದ್ದು ಅವರ ಜೀವನೋಪಾಯಕ್ಕಾಗಿ ಕುರಿಮೇಕೆ, ಹಸುಗಳ ಸಾಕಾಣೆಯನ್ನೆ ಅವಲಂಭಿಸಿದ್ದಾರೆ. ತಮ್ಮ ಗ್ರಾಮಗಳ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಲಭ್ಯವಾಗುವ ಹುಲ್ಲು, ಸೊಪ್ಪುಗಳಿಂದ ಸುಲಭವಾಗಿ ಜಾನುವಾರ ಸಾಕಾಣೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಬೆಟ್ಟಗುಡ್ಡಗಳು ಇತ್ತೀಚಿನ ಅರ್ಧ ದಶಕದಿಂದ ಒಂದೊಂದೆ ನಶಿಸಿ ಹೊಗುತ್ತಿರುವುದು ಗ್ರಾಮೀಣ ಭಾಗದ ಅನಕ್ಷರಸ್ಥರಲ್ಲಿ ಆತಂಕ ಮೂಡಿದೆ. ಕಲ್ಲುಗಣಿಗಾರಿಕೆಯಿಂದಾಗಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ , ಚಿಂತಾಮಣಿ ತಾಲ್ಲುಕಿನ ಕೆಲ ಭಾಗಗಳಲ್ಲಿನ ಬೆಟ್ಟಗಳು ವಿನಾಶವಾಗಿದ್ದು ಮತ್ತಷ್ಟು ಅದೇ ದಾರಿಯಲ್ಲಿ ಸಾಗಿವೆ. ಯಾರೋ ಒಬ್ಬ ಗಣಿದಣಿಗಳು ಬದುಕಲು ನೂರಾರು ಗ್ರಾಮೀಣ ಜನರ ಬದುಕುಗಳಿಗೆ ಬೆಂಕಿ ಇಡುವುದು ಎಷ್ಟು ಸಮಂಜಸ ಎನ್ನುವುದು ನಿಸ್ಸಾಹಕ ಪರಿಸ್ಥಿತಿಯಲ್ಲಿರುವ ಮುಗ್ಧ ಜನರ ಅಂತರಾಳದ ಅಳುಕವಾಗಿದೆ. ಈ ಸಮಸ್ಯೆಗಳ ಬಗ್ಗೆ ಶಾಸಕರ, ಜಿಲ್ಲಾಧಿಕಾರಿಗಳ, ಉಸ್ತುವಾರಿ ಸಚಿವರಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಹಲವು ಪ್ರತಿಭಟನೆಗಳನ್ನು ಮಾಡಲಾಗಿದೆ. ಆದರೂ ಇವ್ಯಾವು ಪರಿಗಣನೆಗೆ ಬರಲಿಲ್ಲ ನಮ್ಮ ಪರಿಸ್ಥಿತಿಗಳು ಇನ್ನಷ್ಟು ಭೀಕರತೆಗೆ ಒಡ್ಡಲಾಗುತ್ತಿದೆ. ಬೆಟ್ಟಗಳಲ್ಲಿನ ಸಸ್ಯ ಸಂಪತ್ತು ನಾಶವಾಯಿತು. ಪ್ರಾಣಿಪಕ್ಷಿಗಳು ಪ್ರಬೇಧಗಳು ಅಳವಂಚಿಗೆ ಬಂದಿವೆ. ಕಾಡನ್ನು ಬೆಳಸುವಲ್ಲಿ ಹಿನ್ನಡೆಯಾಗಿದೆ. ಸತತವಾಗಿ ಬರಪೀಡಿತ ಪ್ರದೇಶವೆಂಬ ಪಟ್ಟದಿಂದ ಹೊರಬರಲಾಗುತ್ತಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಕೆ¯ವೇ ವರ್ಷಗಳಲ್ಲಿ ರಾಜಸ್ಥಾನದ ಮರುಭೂಮಿಯಗುವುದರಲ್ಲಿ ಸಂಶಯವಿಲ್ಲ. ಏಳು ನದಿಗಳ ಉಗಮಸ್ಥಾನ ನಂದಿ ದುರ್ಗ ಈಗ ನೀರಿಗಾಗಿ ಪರತಪಿಸುತ್ತಿದೆ. ಹೀಗೆ ಮುಂದುವರೆದರೆ. ನಂದಿಬೆಟ್ಟದ ಜಿಲ್ಲೆಯ ಇತಿಹಾಸ ಮತ್ತೊಂದು ರೀತಿಯಲ್ಲಿ ಬರೆಯಬೇಕಾದಿತು.! 

-ನರಸಿಂಹಮೂರ್ತಿ ಎಂ. ಎಲ್.



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x