ಪಂಜು-ವಿಶೇಷ

ಸೆಂಟ್ ನರಸಿಂಹ : ವಿ.ಆರ್.ಕಾರ್ಪೆಂಟರ್

ನಾನಾಗ ಎಂಟನೇ ತರಗತಿ ಓದುತ್ತಿದ್ದೆ. ನಮ್ಮ ಮನೆಯ ಪಕ್ಕದಲ್ಲಿರುವ ದುಬ್ಬಪ್ಪನ ಹೊಲ ಕಟಾವು ಮುಗಿಸಿ ಇನ್ನೊಂದು ಬಿತ್ತನೆ ಶುರುವಾಗುವವರೆಗೂ ಊರಿನ ತಿಪ್ಪೆಯಂತೆ ಕಂಗೊಳಿಸುತ್ತದೆ. ನಾನು ನನ್ನ ಸ್ನೇಹಿತರೊಡನೆ ಅಲ್ಲಿಯೇ ಕ್ರಿಕೆಟ್, ಗೋಲಿ, ಸೈಕಲ್ ರೇಸ್, ಚಿಲ್ಲೀ ದಾಂಡು, ಬಂಗ್ರ (ಬುಗರಿ), ಪ್ಯಾಕೇಟ್ (ಸಿಗರೇಟ್ ಪ್ಯಾಕ್), ಲಗೋರಿ ಆಡುತ್ತಲೇ ಅಲ್ಲಿನ ತಿಪ್ಪೆಗಳಲ್ಲಿ ಸಿಗುವ ನಾಣ್ಯ, ಕಬ್ಬಿಣ, ತಾಮ್ರದ ವಸ್ತುಗಳನ್ನು ತಡಕುತ್ತಿದ್ದೆವು. ಒಂದೊಂದು ಸಾರಿ ಇಡೀ ತಿಪ್ಪೆಯನ್ನೇ ಬುಡಮೇಲು ಮಾಡಿ! ಅದರಿಂದ ಸಿಗುವ ಹಣದಲ್ಲಿ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದೆವು. ಅಲ್ಲಿ ಒಂದು ಬಾರಿ ನನಗೆ ಮಂತ್ರಿಸಿದ ಸಣ್ಣ ಮಡಿಕೆ ಸಿಕ್ಕಿತು. ಆಗ ಇದ್ದದ್ದು ನಾನು ಮತ್ತು ನನ್ನ ಆತ್ಮೀಯ ಸ್ನೇಹಿತ (ಅವನೀಗ ಸೇನೆಯಲ್ಲಿ ಯೋಧನಾಗಿದ್ದಾನೆ) ಇಬ್ಬರೇ ಇದ್ದದ್ದು. ಆ ಮಡಿಕೆಯನ್ನು ನಾವು ಕೈಯಿಂದ ಮುಟ್ಟಲೇ ಇಲ್ಲ. ತುಂಬಾ ಭಯವಾಗಿತ್ತು. ಮಾಟ-ಮಂತ್ರದ ಬಗ್ಗೆ ನಮ್ಮ ಹಿರಿಯರು ಬೇಕಾದಷ್ಟು ಭಯ ತುಂಬಿದ್ದರು. ಆ ಮಡಿಕೆಗೆ ಒಂದು ಬಟ್ಟೆ ಸುತ್ತಿದ್ದರು. ಅದರ ಮಂತ್ರಕ್ಕೆ ನಾವೂ ಒಂದು ತಂತ್ರ ಮಾಡಿ; ಸಣ್ಣ ಕೋಲಿನಿಂದ ಅದನ್ನು ಎತ್ತಿ ನೆಲಕ್ಕೆ ಒಗೆದೆವು. ಅಬ್ಬಾ! ಅದು ಒಡೆದದ್ದೇ 10ರೂಪಾಯಿಗಳಷ್ಟು ನಾಣ್ಯಗಳು ಹೊರ ಚೆಲ್ಲಿದವು. ಹಣ ಸಿಕ್ಕ ಖುಷಿಯಲ್ಲಿ ಮಾಟ-ಮಂತ್ರದ ಅಪಾಯವನ್ನು ಧಿಕ್ಕರಿಸಿ, ಸಮನಾಗಿ ಹಂಚಿಕೊಂಡೆವು.

ಅದು ಚುನಾವಣೆಯ ಕಾಲ. ಊರಿನಲ್ಲಿ ಯಾವುದೋ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವರು ವಿಸ್ಕೀ ಸೀಸೆಗಳನ್ನು ಹಂಚುತ್ತಿದ್ದರು. ಊರಿನ ಬಹುತೇಕ ಎಲ್ಲರೂ ಕುಡಿದು ತೇಗಿ, ಖಾಲೀ ಸೀಸೆಗಳನ್ನು ಎಸೆಯುತ್ತಿದ್ದರು. ನಾವು ಅವುಗಳನ್ನು ಆರಿಸಿಕೊಂಡು ಹೋಗಿ ಗುಜರಿಗೆ ಹಾಕಿ ಹಣ ಪಡೆದುಕೊಳ್ಳುತ್ತಿದ್ದೆವು. ಒಂದು ಬಾರಿ ಮದ್ಯ ತುಂಬಿದ ಸೀಸೆ ಸಿಕ್ಕಿತು! ಅದನ್ನು ಚೆಲ್ಲುವುದಕ್ಕೆ ಮನಸ್ಸು ಬರಲಿಲ್ಲ. ಸರಿ ಏನಾಗುತ್ತದೋ ಆಗಲಿ ಒಂದು ಕೈ ನೋಡೇ ಬಿಡೋಣ ಎಂದು ಕುಡಿಯಲು ಶುರು ಮಾಡಿದೆವು. ಬಾಯಿಗೆ ಬೆಂಕಿ ಬಿದ್ದಂತೆ ಆದರೂ ಅಷ್ಟರಲ್ಲಾಗಲೇ ಅದು ನಮ್ಮ ಹೊಟ್ಟೆ ಸೇರಿಬಿಟ್ಟಿತ್ತು. ಅದೇ ಮೊದಲಬಾರಿಗೆ ನಾಲಗೆಯ ಆಕಾರ, ಗಂಟಲಿನ ವಿಸ್ತಾರ, ಅನ್ನನಾಳದ ವ್ಯಾಪ್ತಿ ಅರಿವಾದದ್ದು. ಎರಡು ಮೂರು ಗಂಟೆಗಳ ಕಾಲ ಯಾವ ಕ್ರಿಯೆಯು ಇಲ್ಲದೇ ಕಾಸೀ ಹುಲ್ಲಿನ ಪೊದೆಯಲ್ಲಿ ಅಮಲಿನಲ್ಲಿ ತೇಲಿದೆವು.

ಹೀಗೆ ಹುಡುಕುತ್ತಿರಬೇಕಾದರೆ, ಒಂದು ದಿನ ನನಗೆ ಯಾವುದೋ ಕಂಪೆನಿಯ ಸೆಂಟ್ ಸೀಸೆ ಸಿಕ್ಕಿತು! ಖಾಲೀ ಇರಬೇಕು ಎಂದು ಎತ್ತಿಕೊಂಡು ಅಲ್ಲಾಡಿಸಿದರೆ, ಅದರೊಳಗಿನ ಸೆಂಟ್ ಬಳುಕುತ್ತಿತ್ತು! ಜೇಬಿಗಿಳಿಸಿಕೊಂಡು ಬಂದೆ. ಅಂದಿನಿಂದ ಸೆಂಟ್ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದೆ. ಮೊದಮೊದಲು ಅದರ ವಾಸನೆಗೆ ತಲೆನೋವು ಬರುತ್ತಿತ್ತು. ಆದರೂ ಬಿಡದಿದ್ದರಿಂದ ಅದಕ್ಕೆ ಒಗ್ಗಿಕೊಂಡೆ. ಆಗ ಶಾಲೆಯಲ್ಲಿ ಎಸ್.ರಾಮಕೃಷ್ಣ ಎಂಬ ಗಣಿತದ ಮೇಷ್ಟ್ರಿದ್ದರು. ಅವರು ಒಂದೇ ಉಸಿರಿನಲ್ಲಿ ಪಾಠ ಮಾಡುತ್ತಿದ್ದರಿಂದ ನನ್ನನ್ನೂ ಸೇರಿದಂತೆ ನಮ್ಮ ತರಗತಿಯ ಎಷ್ಟೋ ವಿದ್ಯಾರ್ಥಿಗಳಿಗೆ ಇಂದಿಗೂ ಗಣಿತ ಕಬ್ಬಿಣದ ಕಡಲೆಯೇ ಸರಿ!

ಹೀಗಿದ್ದ ದಿನಗಳಲ್ಲಿ ಆ ಮೇಷ್ಟ್ರು ಮೂಗಿಗೆ ನನ್ನ ಸೆಂಟ್ ನ ಘಮಲು ಬಿದ್ದಿತ್ತಾದರೂ ಅದು ಯಾರಿಂದ ಹೊರಹೊಮ್ಮುತ್ತದೆಂಬುದು ತಿಳಿದಿರಲಿಲ್ಲ. ಒಂದು ದಿನ ಲೆಕ್ಕ ಮಾಡಲು ಸೀಮೆಸುಣ್ಣದ ಕಡ್ಡಿಯನ್ನು ಕೊಟ್ಟರು. ನಾನು ಸ್ವಲ್ಪ ಬೆವೆತುಕೊಂಡೇ ಬೋರ್ಡಿಗೆ ಮುಖ ಮಾಡಿ, ತಪ್ಪು ತಪ್ಪು ಲೆಕ್ಕ ಮಾಡುತ್ತಿದ್ದೆ. ಆ ಮೇಷ್ಟ್ರು ಸರಿ ಲೆಕ್ಕವನ್ನು ಮಾಡಲು ನನ್ನ ಹತ್ತಿರ ಬಂದವರೇ ಕಣ್ಣು ಹಿರಿದು ಮಾಡಿ, ‘ಓಹೋ! ನೀನೇನಾ ಸೆಂಟ್ ಹಾಕೋದು’ ಎಂದರು. ನಾನು ಸುಮ್ಮನೇ ನಿಂತೆ. ಅವರು ಮಾತು ಮುಂದುವರೆಸಿ… ‘ಯಾರ್ಯಾರು ಗಬ್ಬು ನಾರುತ್ತಾರೋ ಅವರೇ ಸೆಂಟ್ ಹಾಕುವುದು, ಫೇರ್ ಅಂಡ್ ಲವ್ಲೀ ಹಾಕುವುದು’ ಎಂದು ಕಿಚಾಯಿಸಿದರು ತರಗತಿಯಲ್ಲಿ ಗುಲ್ಲೆದ್ದಿತು. ಅಂದಿನಿಂದ ಕೆಲವು ದಿನಗಳ ಕಾಲ ನಾನು ಹುಡುಗರ ಬಾಯಿಗೆ ‘ಸೆಂಟ್ ನರಸಿಂಹ’ ಆಗಿದ್ದೆ. ಆದರೆ ಆ ಮೇಷ್ಟ್ರು ಕಿಚಾಯಿಸಿದ ದಿನವೇ ಸೆಂಟ್ ಸೀಸೆಯನ್ನು ನೀರು ಕಾಯಿಸುವ ಒಲೆಗೆ ಎಸೆದೆ. ಅದು ಭಗ್ಗನೆ ಹೊತ್ತಿಕೊಂಡ ಬೆಂಕಿಯ ಜ್ವಾಲೆಯಲ್ಲಿ ನನ್ನ ಸೆಂಟ್ ಆಸೆಯನ್ನು ಬೂದಿ ಮಾಡಿದೆ. ಅಂದಿನಿಂದ ಸೆಂಟ್ ನ ಘಮಲು ಕಂಡರೆ ತಲೆನೋವು ಬರುತ್ತದೆ! ಕ್ರಮೇಣ ಬೇರೆ ಬೇರೆ ಕಾರಣಗಳಿಗೆ ತಿಪ್ಪೆಯನ್ನು ಬುಡಮೇಲು ಮಾಡುವ ಕ್ರಿಯೆಯೂ ನಿಂತಿತು.

-ವಿ.ಆರ್.ಕಾರ್ಪೆಂಟರ್

ಕನ್ನಡದ ಬರಹಗಳನ್ನು ಹಂಚಿ ಹರಡಿ

20 thoughts on “ಸೆಂಟ್ ನರಸಿಂಹ : ವಿ.ಆರ್.ಕಾರ್ಪೆಂಟರ್

 1. ನಿಮ್ಮ ಬರಹ  ಓದಿ ವೆಂಕಟಾಲದ ನೆನೆಪು ಒತ್ತರಿಸಿ ಕಾಡುತ್ತಿದೆ ಗೆಳೆಯ ಚಲೋ ಬರೆದಿದ್ದಿರಿ

 2. ನಿಮ್ಮ ಬರಹದ  ಓದಿ ವೆಂಕಟಾಲದ ನೆನಪು ಒತ್ತರಿಸಿ ಬರುತ್ತಿದೆ ಗೆಳೆಯ. ಚಲೋ ಬರೆದಿದ್ದಿರಿ. ಈ ಸಲ ಬೆಂಗಳೂರಿಗೆ ಬಂದಾಗ ನಿಮ್ಮ ಮನೆಯಲ್ಲೆ ವಸ್ತಿ.

  1. ಖಂಡಿತಾ ಹನ್ಮಣ್ಣ, ಇತ್ತಾಕಡೆ ಬಂದಾಗ ನಮ್ಮನೆಗೆ ಬತ್ತೀನಿ ಅಂದಿದ್ದೂ ಚಲೋ! ಬರ್ರಲಾ!

 3. ಸೆಂಟು ಅಂದ್ ತಕ್ಷಣ ನೆನಪು ಬಂತು. ನಮ್ಮ ಸ್ನೇಹದಲ್ಲಿ ನಾವು ಐದು ಜನ ಇದ್ವಿ ಒಬ್ಳು ಇರುಳ್ಳಿ ತಿಂತಿದ್ಲು, ಅವಳ ಬಾಯೀ ಗಬ್ಬೆಂದು ಈರುಳ್ಳಿ ವಾಸಣೆ ಬರ್ತಿತ್ತು. ನನ್ನ ಹಿಂದೆ ಇರ್ತಿದ್ದ ಹುಡುಗಿರ್ನೆಲ್ಲ ಸೇರಿಸಿ ಅವಳನ್ನ ಹೀಯಳಿಸಿ ಮಜ ನೋಡ್ತಿದ್ದೆ. Pಪಾಪಾ ಆ ಹುಡುಗಿನ ಒಬ್ಬಳನ್ನೇ ಮಾಡಿ ಮಾತು ಬಿಡಿಸ್ತಿದ್ದೆ.
  ಆಗಾಗ ಅದನ್ನ ನೆನೆಸ್ಕೊಂಡು ತುಂಬ ವ್ಯಥೆ ಪಡ್ತೀನಿ. ಯಾಕಂದ್ರೆ ಆಗಾ ನಾನಾಡಿದ ಪರಿಗೆ ಆ ಹುಡುಗಿ ಅಳ್ತಿತ್ತು, ಅಷ್ಟೆಲ್ಲಾ ಮಾಡಿದ್ರೂ ನಾನೇ ಅವಳ ಆತ್ಮ ಗೆಳತಿ ಅಂತ ಪುಸ್ತಕದ ಮೇಲೆ ಕೂಡ ಬರ್ಕೊಂಡಿತ್ತು. ೩ ನೇ ಇಯತ್ತೆ ವರ್ಗೂ ಮಾತ್ರ ಜೊತೆ ಕಾಲಿತ್ವೀ.. ನಂತರ ಅವರೆಲ್ಲಿದಾರೋ ಹೆಂಗಿದಾರೋ ಗೊತ್ತಿಲ್ಲ. ಮುಖ ಕೂಡ ನೋಡಿಲ್ಲ. ನನ್ನ ಪಯಣ ಎಲ್ಲೆಲ್ಲಿಗೋ ನಡೆದಿತ್ತು. ಆದ್ರೆ ಆ ನೆನಪು ಮಾತ್ರ ಮನದ ಪುಟಗಳಲಿ ತನ್ನ ಅಚ್ಚೊತ್ತಿದೆ.

  1. ರುಕ್ಮಿಣಿ, ಆ ನೆನಪುಗಳನ್ನೆಲ್ಲಾ ಹಾಗೆ ವ್ಯಥೆಪಡಿಸಬಾರದು! ಸುಮ್ಮನೇ ಕೊಳೆಸಲೂ ಬಾರದು. ಬರೆದುಬಿಡಿ.

 4. ಬಲು ಸೊಗಸಾದ ಲೇಖನ. ನನ್ನನ್ನ ಬಾಲ್ಯಕ್ಕೆ ಕರೆದೊಯ್ಯಿತು. ಇಂತಹ ಕೀಟಲೆಗಳನ್ನ ನಾನು ಅದೆಷ್ಟು ಮಾಡಿದೀನಿ ಅದಕ್ಕೆಲ್ಲ ಲೆಕ್ಕಾನೇ ಇಲ್ಲ. ಗಂಡುಬೀರಿ ಅಂತ ಹೆಸರು ಬೇರೆ ಇಟ್ಟಿದ್ರು ನಂಗೆ..

  1. ನನ್ನ ಪ್ರಕಾರ ಗಂಡುಬೀರಿ ಪದ ಅತ್ಯಂತ ಕೆಟ್ಟಪದ. ಹೆಣ್ಣಿನ ಸಹಜವಾದ ನಡಾವಳಿಗಳಲ್ಲಿ ಒಂದಾದ ಧೈರ್ಯ, ಎದೆಗಾರಿಕೆಯನ್ನು ಪುರುಷರು ತಮ್ಮ ಸ್ವತ್ತೆಂದು ತಿಳಿದು ಈ ಪದವನ್ನು ಹುಟ್ಟುಹಾಕಿದ್ದಾರೆ! ಆದ್ದರಿಂದ ಅದು ಹೆಮ್ಮೆ ಪಡುವ ಪದವೇನಲ್ಲ!

 5. ಸರ್, ನಮ್ಮದೂ ತಿರುಗಾಡುವುದರಲ್ಲಿ ಎತ್ತಿದ ಕೈ, ಹಾಗೆ ಮನೆಯ ಕಡೆ ಬರುವಾಗ ಮಂತ್ರಿಸಿ ಬಿಸಾಡಿರುರಿದ್ದ ಕುಡಿಕೆ, ನಿಂಬೆ ಹಣ್ಣು, ಗೊಂಬೆಗಳನ್ನೆಲ್ಲಾ ಕಾಲಿನಲ್ಲಿ ಒದೆಯುತ್ತಾ ಸೀಟಿ ಹಾಕುತಿದ್ದೆವು ಮನೆಗೆ ಬಂದು ಹೀಗೆ ಮಾಡಿದೆನೆಂದು ಅಮ್ಮನೆದುರು ಹೇಳಿ ಬೀಗುತಿದ್ದೆ…… ನಿಮ್ಮ ಬರಹವನ್ನು ಓದುವಾಗ ಏನೆಲ್ಲ ನೆನಪಾಯಿತು,

  1. ಎಷ್ಟೇ ಆದರೂ ನೀವು ಬಂಡಾಯದ ಧ್ವನಿಯಲ್ಲವೇ, ಇದು ಸಹಜವೇ ಬಿಡಿ!

 6. ಮೆಚ್ಚಿಕೊಂಡು ಪ್ರತಿಕ್ರಿಯಿಸಿದ ಎಲ್ಲ ಗೆಳೆಯ-ಗೆಳತಿಯರಿಗೆ ಧನ್ಯವಾದಗಳು…
  ಹಾಗೆಯೇ ಇದರ ಎಲ್ಲ ಕ್ರೆಡಿಟ್ ಗಳೂ ಗೆಳೆಯ ನಟರಾಜ್ ಗೆ ಸಲ್ಲಬೇಕು!

Leave a Reply

Your email address will not be published. Required fields are marked *