ಸುರಿಯುವ ಫುಕೊಶಿಮ-ಎರವಾಗಲಿರುವ ಕೊಡಂಕುಳಂ: ಅಖಿಲೇಶ್ ಚಿಪ್ಪಳಿ ಅಂಕಣ

ಫುಕೊಶಿಮ ಅಣು ದುರಂತದ ಬೆನ್ನಲ್ಲೆ ಬಹಳಷ್ಟು ಅವಘಡಗಳು ಅಲ್ಲಿ ಸಂಭವಿಸುತ್ತಿವೆ. ಇದೀಗ ಹೊಸದಾಗಿ ಸೇರ್ಪಡೆಯೆಂದರೆ, ಅಣು ರಿಯಾಕ್ಟರ್‍ಗಳ ಬಿಸಿಯನ್ನು ತಣ್ಣಗಾಗಿಸುವ ನೀರಿನ ಭದ್ರವಾದ ಟ್ಯಾಂಕ್‍ಗಳ ಸೋರಿಕೆ. ಬಳಕೆಯಾದ ವಿಕಿರಣಯುಕ್ತ ನೀರಿನ ಟ್ಯಾಂಕ್ ಸೋರಿಕೆಗೊಂಡು ಪೆಸಿಫಿಕ್ ಸಮುದ್ರಕ್ಕೆ ಸೇರಿದೆ. 2011ರ ಬೀಕರ ಸುನಾಮಿ ಮತ್ತು ಭೂಕಂಪ ಜಪಾನಿನ ಪುಕೊಶಿಮಾದ ಅಣು ಸ್ಥಾವರಗಳನ್ನು ಹಾಳುಗೆಡವಿ ಅಂತಾರಾಷ್ಟ್ರೀಯ ಬಿಕ್ಕಟ್ಟನ್ನುಂಟುಮಾಡಿತ್ತು. ಈಗಾಗಲೇ 8 ಟ್ಯಾಂಕಿನಿಂದ ಸುಮಾರು 300 ಟನ್‍ಗಳಷ್ಟು ವಿಕಿರಣಯುಕ್ತ ನೀರು ಸೋರಿಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೋರಿಕೆಯಾದ ಜಾಗದಿಂದ 50 ಮೀಟರ್ ದೂರ ಒಂದು ಗಂಟೆ ಇದ್ದರೂ ಮನುಷ್ಯನ ದೇಹದಲ್ಲಿನ ವಿಕಿರಣ ಪ್ರಮಾಣ ಅಪಾಯ ಮಟ್ಟಕ್ಕಿಂತ 5 ಪಟ್ಟು ಹೆಚ್ಚಾಗುತ್ತದೆ ಎಂಬುದನ್ನು ಇಂಟರ್‍ನ್ಯಾಷನಲ್ ಆಟೋಮಿಕ್ ಎನರ್ಜಿ ಏಜನ್ಸಿ ಹೇಳಿದೆ. ಅಣು ಕಸ ಮತ್ತು ವಿಕಿರಣಯುಕ್ತ ನೀರು ವಿಲೇವಾರಿ ಮಾಡುವ ಕೆಲಸಗಾರರಲ್ಲಿ ಈಗಾಗಲೇ ಬಿಳಿರಕ್ತಕಣಗಳ ಸಂಖ್ಯೆ ಇಳಿಮುಖವಾಗಿದೆ.

ಟೆಪ್ಕೋ ಎಂಬ ಕಂಪನಿ ಪುಕೋಶಿಮ ಪ್ರದೇಶದವನ್ನು ಅಣು ವಿಕಿರಣ ಮುಕ್ತಗೊಳಿಸುವ ಕೆಲಸದಲ್ಲಿ ತೊಡಗಿದೆ. ಏನೇ ಹರಸಾಹಸ ಮಾಡಿದರೂ ಸ್ವಚ್ಛಗೊಳಿಸುವ ಕೆಲಸಕ್ಕೆ ಹಿನ್ನೆಡೆಯಾಗುತ್ತಿದೆ. ಈ ಕೆಲಸಕ್ಕೆ ಅಪಾರ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಬೇಕಾಗುತ್ತದೆ. ಕೆಲಸಗಾರರ ದೇಹದಲ್ಲಿ ವಿಕಿರಣ ಪ್ರಮಾಣವನ್ನು ಕಾಲಕಾಲಕ್ಕೆ ಪರೀಕ್ಷಿಸಿ, ಸುರಕ್ಷಿತ ಪ್ರಮಾಣವನ್ನು ಗಮನಿಸಿ, ವಿಕಿರಣ ಪ್ರಮಾಣ ಹೆಚ್ಚಾದಲ್ಲಿ ಅವರನ್ನು ಆ ಸ್ಥಳದಿಂದ ದೂರ ಕಳುಹಿಸಿ ಬೇರೆ ಕೆಲಸಗಾರರನ್ನು ನಿಯಮಿಸಿಕೊಳ್ಳಬೇಕಾಗುತ್ತದೆ. ಈಗ ವಿಕಿರಣಯುಕ್ತ ನೀರೂ ಸೋರಿಯಾಗುತ್ತಿದೆಯಾದ್ದರಿಂದ, ಕಂಪನಿ ಹೆಚ್ಚು-ಕಡಿಮೆ ಕೈ-ಕಟ್ಟಿ ಕೂರಬೇಕಾದ ಪರಿಸ್ಥಿತಿಯಿದೆ. ಜಪಾನಿನ ಪ್ರಧಾನಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸ ಮಾಡಲು ಆದೇಶಿಸಿದ್ದಾರೆ. ಏನೇ ಆದರೂ ಕಾಣದ ಅದೃಶ್ಯ ಶಕ್ತಿಯ ವಿರುದ್ಧ ಹೋರಾಡುವ ಕೆಲಸಗಾರರ ಜೀವ ಸುರಕ್ಷಿತವಾಗಿಲ್ಲ ಎಂಬುದು ವೇದ್ಯ. ಇನ್ನು ಸಮುದ್ರದ ಜೀವಿಗಳ ಮೂಲಕ ವಿಕಿರಣ ಎಲ್ಲೆಲ್ಲಿಗೆ ತಲುಪುವುದು ಎಂಬುದನ್ನು ಊಹಿಸುವುದು ಕಷ್ಟ. ಜಪಾನ್ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ.

ಇನ್ನು ಇಪ್ಪತ್ತು ದಿನಗಳ ಒಳಗೆ ತಮಿಳುನಾಡಿನ ಕೊಡಂಕುಳಂ ಅಣುಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಫುಕೊಶಿಮಾ ಅಣುದುರಂತದ ನಂತರದಲ್ಲಿ ಪ್ರಾರಂಭವಾಗಲಿರುವ ಮೊದಲ ಅಣು ಸ್ಥಾವರ ಇದಾಗಿದೆ. ಫುಕೊಶಿಮ ಅಣು ದುರಂತದ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳು ತಮ್ಮಲ್ಲಿನ ಅಣು ಸ್ಥಾವರಗಳನ್ನು ಮುಚ್ಚಲು ಕ್ರಮ ಕೈಗೊಂಡಿದ್ದಾವೆ. ಜರ್ಮನಿಯಂತು ಫುಕೊಶಿಮ ದುರಂತದ ಮಾರನೇ ದಿನವೇ ತನ್ನ ಎಲ್ಲಾ 17 ಅಣುಸ್ಥಾವರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಭವ್ಯ ಭಾರತದಲ್ಲಿ ದೇಶದ 21ನೇ ಅಣುಸ್ಥಾವರ ಉದ್ಘಾಟನೆಯ ಹಂತದಲ್ಲಿದೆ. 1988ರಲ್ಲೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ರಷ್ಯಾದ ಅಧ್ಯಕ್ಷ ಗೊರ್ಬಚೇವ್ ಅಣು ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಭಾರತದಲ್ಲಿ ಎರೆಡು ಅಣು ಸ್ಥಾವರವನ್ನು ನಿರ್ಮಿಸಲು ಅಡಿಗಲ್ಲು ಹಾಕಿದ್ದರು. ರಷ್ಯಾದ ಮಹಾಪತನ ಮತ್ತು ರೂಪಾಯಿ-ರೂಬಲ್‍ಗಳ ವ್ಯತ್ಯಾಸದಿಂದಾದ ಬದಲಾವಣೆ ಯೋಜನೆಯನ್ನು ಮುಂದೂಡಲು ಸಹಾಯ ಮಾಡಿದವು. 

ಬಲವಂತವಾಗಿ ಹೇರಲ್ಪಡುವ ಎಲ್ಲಾ ಸರ್ಕಾರಿ ಯೋಜನೆಗಳಂತೆ, ಪ್ರಥಮವಾಗಿ ಸ್ಥಳೀಕರನ್ನು ಓಲೈಸಲು ಸರ್ಕಾರಿ ಸ್ವಾಮ್ಯದ ಅಣು ಇಲಾಖೆ ಪ್ರಯತ್ನ ನಡೆಸಿತು. ಕಡಿಮೆಯೆಂದರೆ, 10 ಸಾವಿರ ಜನರಿಗೆ ಅತ್ಯುತ್ತಮ ದರ್ಜೆಯ ಕೆಲಸ ನೀಡಲಾಗುವುದು ಎಂಬ ಹುಸಿ ಆಶ್ವಾಸನೆಯನ್ನು ನೀಡಿದ್ದರಿಂದ, ಕೊಡಂಕುಳಂ ಅಣುವಿರೋಧಿ ಹೋರಾಟಕ್ಕೆ ತಕ್ಕ ಬೆಂಬಲ ಸಿಗಲಿಲ್ಲ. ಕೊಡಕುಳಂ ಅಣುಸ್ಥಾವರದಿಂದ 30 ಕಿ.ಮಿ. ಆಸುಪಾಸಿನಲ್ಲಿ ಸುಮಾರು 10 ಲಕ್ಷ ಜನ ಮೀನುಗಾರು ಮತ್ತು ಇತರೆ ಜನರು ವಾಸಿಸುತ್ತಿದ್ದಾರೆ. ಏನಾದರೂ ಭೂಮಿ ಮೈಕೊಡವಿ ಅಣುಸ್ಥಾವರಕ್ಕೆ ಹಾನಿಯಾದರೆ, ಇಷ್ಟು ಸಂಖ್ಯೆ ಜನರನ್ನು ಸ್ಥಳಾಂತರಿಸಲು ಸಮಯವೆಲ್ಲಿರುತ್ತದೆ? ಅಲ್ಲದೆ ಭಾರತದಂತಹ ದೇಶದಲ್ಲಿ ಸಾಮೂಹಿಕವಾಗಿ ಸಂತ್ರಸ್ಥರನ್ನು ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥಳಾಂತರಿಸುವಷ್ಟರಲ್ಲಿ ಅವಘಡಗಳು ಆಗಿಹೋಗಿರುತ್ತವೆ. ವಿಕಿರಣದ ಅಪಾಯ ಎಲ್ಲರನ್ನೂ ತಟ್ಟುತ್ತದೆ. ಭೋಪಾಲ್ ದುರಂತ ಸಂತ್ರಸ್ಥರೇ ಪರಿಹಾರ ಸಿಗದೆ ಇನ್ನೂ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವಾಗ, ಕೊಡಂಕುಳಂ ದುರಂತ ಸಂಭವಿಸಿದರೆ ಅಲ್ಲಿನ ಜನ ಮತ್ತು ಪರಿಸರದ ಕತೆ ಏನಾಗಬಹುದು ಎಂಬುದು ಊಹೆಗೂ ನಿಲುಕದು. 

ಸರ್ಕಾರ ಹಾಗೂ ಅಣು ಇಲಾಖೆಯ ಪ್ರಕಾರ ಕೊಡಂಕುಳಂನಲ್ಲಿ ನಿರ್ಮಿಸುತ್ತಿರುವ 1000 ಮೆಗಾವ್ಯಾಟ್ ಸಾಮಥ್ರ್ಯದ ಎರಡು ಸ್ಥಾವರಗಳು ಪ್ರಪಂಚದಲ್ಲೇ ಅತ್ಯಂತ ಸುರಕ್ಷಿತವಾದದು. ನೈಸರ್ಗಿಕ ಪ್ರಕೋಪವನ್ನು ಮೀರಿ ಇಲ್ಲಿನ ಸ್ಥಾವರಗಳು ಯಾವುದೇ ಅಡೆ-ತಡೆಯಿಲ್ಲದೆ ಕಾರ್ಯನಿರ್ವಹಿಸಲು ಶಕ್ತವಾಗಿದೆ. ನಿರ್ಮಾಣದ ಪ್ರತಿ ಹೆಜ್ಜೆಯಲ್ಲೂ ವಿಶೇಷ ನಿಗಾ ವಹಿಸಿ ಸ್ಥಾವರವನ್ನು ನಿರ್ಮಿಸಲಾಗಿದೆ. ಅಷ್ಟಕ್ಕೂ ಕೊಡಂಕುಳಂ ಪ್ರದೇಶವೇನೂ ನೈಸರ್ಗಿಕ ಪ್ರಕೋಪದ ಸ್ಥಳವೇನಲ್ಲ ಎನ್ನುತ್ತಾರೆ. 2004ರಲ್ಲಿ ಇದೇ ಸ್ಥಳದಲ್ಲಿ ಸುನಾಮಿಯಪ್ಪಳಿಸಿತ್ತು ಎಂಬುದನ್ನು ಮುಚ್ಚಿ ಹಾಕುತ್ತವೆ. 

1922ರಲ್ಲಿ ಗಾಂಧಿಜೀಯ ವಿರುದ್ಧ ಬ್ರೀಟಿಷ್ ಸರ್ಕಾರ ಒಂದು ಮೊಕದ್ದಮೆಯನ್ನು ದಾಖಲಿಸಿ ಕೋರ್ಟಿಗೆಳೆದಿತ್ತು. ಗಾಂಧಿಜೀ ಸಂಪಾದಕತ್ವದ “ಯಂಗ್ ಇಂಡಿಯಾ”ದಲ್ಲಿ ಬರೆದ ಒಂದು ಲೇಖನವನ್ನು ದೇಶದ್ರೋಹ ಎಂಬರ್ಥ ಬರುವ ಕಾಯ್ದೆಯಡಿಯಲ್ಲಿ ಗಾಂಧಿಜೀಯನ್ನು ಬಂಧಿಸಿ ಕೋರ್ಟಿಗೆಳೆದಿತ್ತು. ಇದೇ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡ ಸರ್ಕಾರ ಕೊಡಂಕುಳಂ ಅಣು ಸ್ಥಾವರದ ವಿರೋಧಿ ಹೋರಾಟಗಾರರನ್ನು ಬಂಧಿಸುತ್ತಿದೆ. ಆಗ ಗಾಂಧೀಜಿಯವರು ಒಂದು ಮಾತು ಹೇಳಿದ್ದರು, “ಸರ್ಕಾರದ ಕಾನೂನಿನ ಪ್ರಕಾರ ಪ್ರತಿಭಟನೆ ಮಾಡುವುದು ಕ್ಷಮಿಸಲಾರದ ತಪ್ಪು ಆಗಬಹುದು. ಆದರೆ ನನ್ನ ಪ್ರಕಾರ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಪ್ರತಿಯೊಬ್ಬ ದೇಶವಾಸಿಯ ಪರಮ ಕರ್ತವ್ಯ”. ಗಾಂಧಿಯನ್ನು ಮುಂದಿಟ್ಟುಕೊಂಡು ದೇಶವನ್ನಾಳುವ ಸರ್ಕಾರಕ್ಕೆ ಗಾಂಧಿಯ ಈ ಮಾತು ಏಕೆ ಅರ್ಥವಾಗುತ್ತಿಲ್ಲವೋ?

ಪೀಪಲ್ಸ್ ಮೋವ್‍ಮೆಂಟ್ ಎಗೆನಸ್ಟ್ ನ್ಯೂಕ್ಲಿಯರ್ ಎನರ್ಜಿ ಸಂಘಟನೆಯ ಮುಖ್ಯಸ್ಥ ಶ್ರೀ ಎಸ್.ಪಿ.ಉದಯಕುಮಾರ್ ಮೇಲೂ ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸಿದ, ಸರ್ಕಾರಿ ಆಸ್ತಿ-ಪಾಸ್ತಿ ಹಾಳು ಮಾಡಿದ ಹಲವಾರು ಮೊಕದ್ದಮೆಗಳನ್ನು ದಾಖಲಿಸಿ ಹೋರಾಟವನ್ನು ಧಮನಿಸುವ ವ್ಯವಸ್ಥಿತ ಪಿತೂರಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿವೆ. ಆರಂಭದಲ್ಲಿ ಅಣು ಸ್ಥಾವರದ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದ, ತಮಿಳುನಾಡಿನ ಅಮ್ಮ ಕು.ಜಯಲಲಿತ ಇದೀಗ ತಮ್ಮ ಪ್ಲೇಟನ್ನು ಮಗುಚಿ ಹಾಕಿದ್ದಾರೆ. ಇಡೀ ತಮಿಳುನಾಡಿನಲ್ಲಿ ವಿದ್ಯುತ್ ಬರ ಇದೆ. ಅಣುಸ್ಥಾವರ ಈ ಬರವನ್ನು ಕೊಂಚ ಮಟ್ಟಿಗೆ ಹೋಗಲಾಡಿಸಬಹುದು ಎಂಬ ಆಸೆ ಈ ಅಮ್ಮನಿಗೆ.

ಇತ್ತ ಅಣುಸ್ಥಾವರವ ನಿರ್ಮಿಸುವುದನ್ನು ವಿರೋಧಿಸಲು ಮೀನುಗಾರರು ಹಲವು ತರಹದ ಪ್ರತಿಭಟನೆಯನ್ನು ಮಾಡಿದರು. ಸಮುದ್ರದಲ್ಲಿ ಬೆಳಗಿನಿಂದ ಸಂಜೆಯವರೆಗೂ ಕುತ್ತಿಗೆತನಕ ನೀರಿನಲ್ಲಿ ಮುಳುಗಿಕೊಂಡು ಪ್ರತಿಭಟಿಸಿದರು. ರಸ್ತೆಯ ಮೇಲೆ ನಡೆದು ಹೋಗುತ್ತಿರುವಂತೆ ಅಡ್ಡ ಬಿದ್ದು ಸತ್ತಂತೆ ನಟಿಸುವುದನ್ನೂ ಮಾಡಿದರು. ಯಾವ ತರಹದ ಹೋರಾಟಗಳು ಪ್ರತಿಫಲ ಕಾಣುತ್ತಿಲ್ಲ. ಪಿ.ಎಮ್.ಎ.ಎನ್.ಎ. ಸಂಘಟನೆಯು ಅತ್ತ ಚೆನೈ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದೊಮೆಯನ್ನು ಹಾಕಿದೆ. ಸರ್ವೋಚ್ಛ ನ್ಯಾಯಾಲಯದ ಕದವನ್ನು ತಟ್ಟಿ ಬಂದಿದ್ದಾರೆ. ಸವೋಚ್ಛ ನ್ಯಾಯಾಲಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸಲು ಅಡ್ಡಿಯಿಲ್ಲ ಎಂದಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಿಂದ ವಿವಿಧ ರೀತಿಯ ಕಮಿಟಿಗಳನ್ನು ಮಾಡಿ ಸುರಕ್ಷತೆಯ ಬಗ್ಗೆ ವರದಿ ನೀಡಲು ಕೋರಿಕೊಂಡರು. ಸರ್ಕಾರಿ ಕೃಪಾಪೋಷಿತ ಸುರಕ್ಷತ ಸಮಿತಿಯ ತಜ್ಞರು ಸರ್ಕಾರಕ್ಕೆ ಅನುಕೂಲವಾಗುವಂತೆಯೇ ತಮ್ಮ ವರದಿಗಳನ್ನು ನೀಡಿದರು.

ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿ ಒಬ್ಬ ಮೀನುಗಾರನನ್ನು ಬಲಿ ತೆಗೆದುಕೊಂಡಾಗಿದೆ. ಪ್ರಜಾಪ್ರಭುತ್ವ ಸರ್ಕಾರದ ಲಕ್ಷಣಗಳನ್ನು ಗಾಳಿಗೆ ತೂರಿ ಬರೀ ಧಮನಕಾರಿ ನೀತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ರಷ್ಯಾವಂತೂ 1986 ಚೆರ್ನೊಬಿಲ್ ದುರಂತದ ನಂತರ ಯಾವುದೇ ಹೊಸ ಅಣುಘಟಕವನ್ನು ಪ್ರಾರಂಭಿಸಿಲ್ಲ. ಅಲ್ಲಿ ಬೇಡವಾದ ವಸ್ತುವನ್ನು ಭಾರತಕ್ಕೆ ಸಾಗ ಹಾಕಲು ತಾನೇ ಖುದ್ದು ಸಾಲವನ್ನು ನೀಡುತ್ತಿದೆ. ಮೂಲವಾಗಿ 6000 ಕೋಟಿ ರೂಪಾಯಿಗಳ ಯೋಜನೆ ಇದೀಗ ಪೂರ್ಣಗೊಳ್ಳುವಷ್ಟರಲ್ಲಿ 17000 ಕೋಟಿ ರೂಪಾಯಿಗೆ ಮುಟ್ಟಿದೆ. ಈ ಹದಿನೇಳು ಸಾವಿರ ಕೋಟಿ ರೂಪಾಯಿಗಳಲ್ಲಿ ನೂರಿನ್ನೂರು ಕೋಟಿ ರೂಪಾಯಿಗಳು ಅತ್ತಿತ್ತಲಾದರೆ ಯಾರಿಗೆ ತಿಳಿಯುತ್ತದೆ. 

ಭಾರತದಲ್ಲಿ ಅಣುಸ್ಥಾವರದ ವಿಚಾರ ಬಂದಾಗ ಮೊದಲು ಸಾಯುವುದು ಸತ್ಯ ಮತ್ತು ಪ್ರಜಾಪ್ರಭುತ್ವ ಎಂದು ಹೇಳಲಾಗಿದೆ. ಏಕೆಂದರೆ, ಅಣುಸ್ಥಾವರದಂತಹ ಅವಘಡಗಳನ್ನು ನಿರ್ಮಿಸುವಾಗ ವಿರೋಧ ಬಂದಲ್ಲಿ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಸರ್ಕಾರಗಳು ಜನರ ಅಹವಾಲುಗಳನ್ನು ಕೇಳಬೇಕಾಗುತ್ತದೆ. ಸಾರ್ವಜನಿಕ ನಂಬಿಕೆಯನ್ನು ಭದ್ರಗೊಳಿಸಿ ದೇಶದ ಯೋಜನೆಗಳನ್ನು ಜಾರಿ ತರಬೇಕಾಗುತ್ತದೆ. ಕೊಡಂಕುಳಂ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆಗಳಿಗೂ ಪ್ರವೇಶ ನಿಷಿದ್ಧ. ಅಧಿಕಾರ ವಿಕೇಂದ್ರಿಕರಣದಿಂದ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಬೆಲೆ ಬರುತ್ತದೆ ಎಂಬ ಸದುದ್ದೇಶದಿಂದ ಗ್ರಾಮಪಂಚಾಯ್ತಿಗಳಿಗೆ ಪರಮಾಧಿಕಾರ ನೀಡಬೇಕು ಎಂಬ ಪ್ರಸ್ತಾವನೆಯನ್ನು ಧಿಕ್ಕರಿಸಿದಂತೆ ಕೊಡಂಕುಳಂನ 4 ಗ್ರಾಮ ಪಂಚಾಯ್ತಿಗಳು ಅಣು ಸ್ಥಾವರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಠರಾವು ಹೊರಡಿಸಿವೆಯಾದರೂ, ಪಂಚಾಯ್ತಿಯ ತೀರ್ಮಾನ ಸರ್ಕಾರದ ಕಿವಿಗೆ ತಲುಪಿಲ್ಲ. ಹೀಗೆ ಅಣುಸ್ಥಾವರ ಘಟಕವನ್ನು ಗುಟ್ಟು-ಗುಟ್ಟಾಗಿ ನಿರ್ಮಿಸಿ ದೇಶಕ್ಕೆ ಸಮರ್ಪಿಸುವ ಕೆಲಸ ನಡೆದಿದೆ. ತನ್ಮಧ್ಯೆ ಅಣುಸ್ಥಾವರದ ವಿರೋಧಿ ಹೋರಾಟಗಾರರು ಅಮೇರಿಕಾದ ಏಜಂಟರು ಎಂದು ಖುದ್ದು ಪ್ರಧಾನಿಗಳೇ ಮಾಧ್ಯಮದೆದಿರು ಅಪರೂಪಕ್ಕೆ ಬಾಯಿ ಬಿಟ್ಟಿದ್ದಾರೆ. ಇನ್ನು ಮುಂದೆ ನಿರ್ಮಿಸಲಿರುವ ಅಣು ಸ್ಥಾವರಗಳನ್ನು ಅಮೇರಿಕನ್ ಮೂಲದ ಕಂಪನಿಗಳೇ ನಿರ್ವಹಿಸುತ್ತವೆ ಮತ್ತು ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಒಪ್ಪಂದ ಪತ್ರಗಳು ವಿನಿಮಯವಾಗಿವೆ. ಅದೇ ಅಮೇರಿಕ ಕಂಪನಿಗಳು ನಮ್ಮ ಕಾನೂನು ರೂಪಿಸುವವರನ್ನು ಕೊಳ್ಳುತ್ತವೆ, ಜೈತಾಪುರ, ಕೊಡಂಕುಳಂ ಹೀಗೆ ದೇಶದಾದ್ಯಂತ ಅಸುರಕ್ಷಿತ ಅಣುಸ್ಥಾವರಗಳನ್ನು ನಿರ್ಮಿಸಲು ಹಣವನ್ನು ಅಮೇರಿಕಾ ನೀಡುತ್ತದೆ. ನಮ್ಮ ಬಡಪಾಯಿ ಮೀನುಗಾರರು, ರೈತರು ಸಂತ್ರಸ್ಥರಾಗುತ್ತಾರೆ. ಈ ಹೊತ್ತಿನಲ್ಲೊಂದು ಡಿ.ವಿ.ಜಿ.ಯವರ ಬರೆದ ಸಾಲು ನೆನಪಾಗುತ್ತದೆ. . .


ಸರಕಾರ ಹರಿಗೋಲು

ತೆರೆಸುಳಿಗಳತ್ತಿತ್ತ

ಸುರೆ ಕುಡಿದ ಕೆಲರು ಹುಟ್ಟು ಹಾಕುವರು

ಉರುಳದಿಹದಚ್ಚರಿಯೋ ಮಂಕುತಿಮ್ಮ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x