ವಾಸುಕಿ ಕಾಲಂ

ಸಿನಿಮಾ ಪ್ಯಾರಡಿಸೋ: ವಾಸುಕಿ ರಾಘವನ್

ಬಾಲ್ಯದಲ್ಲಿ ಸಿನಿಮಾ ನೋಡುವಾಗಿನ ಅನುಭವವೇ ಬೇರೆ ಇತ್ತು. ನನ್ನ ಬೆರಗುಗಣ್ಣಿಗೆ ಸಾಧಾರಣ ಚಿತ್ರಗಳೂ ಅದೆಷ್ಟು ಅಚ್ಚರಿ ಮಾಡಿಸುತ್ತಿದ್ದವು. ಈಗ ಬಹಳ ಸಿನಿಮಾ ನೋಡಿರುವುದರಿಂದಲೋ ಏನೋ, ಸಿನಿಮಾಪ್ರೇಮಿಯೊಡನೆ ಒಬ್ಬ ಸಿನಿಕನೂ ನನ್ನಲ್ಲಿ ಹುಟ್ಟಿದ್ದಾನೆ. ಈಗ ಬೇಕೆಂದರೂ ಆ ಮುಗ್ಧ ಮನಸ್ಥಿತಿ ಸಿಗುವುದಿಲ್ಲ. ಹಾಗಾಗಿ ಹತ್ತರಲ್ಲಿ ಒಂಭತ್ತು ಚಿತ್ರಗಳು ನಿರಾಶೆ ಮೂಡಿಸುತ್ತವೆ. ಆದರೆ ಆ ಒಂದು ಚಿತ್ರ ಇಷ್ಟ ಆಗುತ್ತೆ ನೋಡಿ, ಆ ಖುಷಿಯ ತೀವ್ರತೆ ಬೇರೆಯವರಿಗಿಂತ ಹೆಚ್ಚಾಗಿ ಅನುಭವಿಸುತ್ತೇನೆ!

ಈಗಿನ ವಿಮರ್ಶಾತ್ಮಕ ಮನಸ್ಥಿಯಲ್ಲೂ ಮೆಚ್ಚಿಸುವ ಚಿತ್ರಗಳು ಸಾಕಷ್ಟಿವೆ, ಆದರೇ ಕೆಲವೇ ಕೆಲವು ಚಿತ್ರಗಳು ಮಾತ್ರ ನಾನು ಈ  ಮನಸ್ಥಿತಿಯನ್ನು ಬದಿಗಿರಿಸಿ ಮತ್ತೆ ಆರು ವರ್ಷದ ಬಾಲಕನಂತೆ ಬೆರಗುಗಣ್ಣಿನಿಂದ ಸಿನಿಮಾ ನೋಡುವಂತೆ ಮಾಡುತ್ತವೆ. 1988ರಲ್ಲಿ ಬಂದ ಜುಸೆಪ್ಪೆ ತೋರ್ನೆತೋರೆ ನಿರ್ದೇಶನದ “ಸಿನಿಮಾ ಪ್ಯಾರಡಿಸೋ” ಅನ್ನೋ ಇಟಾಲಿಯನ್ ಚಿತ್ರ ಈ ಸಾಲಿಗೆ ಸೇರುತ್ತೆ.

ಕಥೆ ಹೀಗಿದೆ. ಸಲ್ವತೋರ್ ಅಲಿಯಾಸ್ ತೊತೊ ಸಿಸಿಲಿಯ ಒಂದು ಪಟ್ಟಣದಲ್ಲಿ ವಾಸಿಸುತ್ತಿರುವ ಆರು ವರ್ಷದ ಬಾಲಕ. ತನ್ನ ವಿಧವೆ ಅಮ್ಮ, ಪುಟ್ಟ ತಂಗಿಯೊಂದಿಗೆ ಇರುವ ಈತ ಮಹಾ ತುಂಟ, ಬಲು ಚೂಟಿ. ಊರಿನ ಏಕೈಕ ಥೀಯೇಟರ್ “ಸಿನಿಮಾ ಪ್ಯಾರಡಿಸೋ”ಗೆ ಪದೇಪದೇ ಭೇಟಿ ಕೊಡುವ ತೊತೊ ಅಲ್ಲಿನ ಪ್ರೊಜೆಕ್ಷನಿಸ್ಟ್ ಅಲ್ಫ್ರೆದೋ ಜೊತೆ ಸ್ನೇಹ ಬೆಳೆಸುತ್ತಾನೆ. ಮೊದಮೊದಲಿಗೆ ತೊತೊ ಬರುವಿಕೆಯಿಂದ ಕಿರಿಕಿರಿ ಅನುಭವಿಸಿದರೂ, ಬಹುಬೇಗ ಅಲ್ಫ್ರೆದೋಗೆ ತೊತೊ ಮೇಲೆ ಅಕ್ಕರೆ ಉಂಟಾಗುತ್ತೆ. ಸಿನಿಮಾ ಬಗ್ಗೆ ಅತ್ಯಂತ ಪ್ರೀತಿ ಹೊಂದಿರುವ ತೊತೊಗೆ ಅಲ್ಫ್ರೆದೋ ಪ್ರೊಜೆಕ್ಟರ್ ಓಡಿಸುವ ವಿಧಾನಗಳನ್ನು ಹೇಳಿಕೊಡುತ್ತಾನೆ. ಮುಂದೆ ಬೆಂಕಿ ಅಪಘಾತದಲ್ಲಿ ಅಲ್ಫ್ರೆದೋ ಕಣ್ಣಿನ ದೃಷ್ಟಿ ಕಳೆದುಕೊಂಡಾಗ, ವಿಧಿಯಿಲ್ಲದೇ ಈ ಪುಟ್ಟ ಹುಡುಗನೇ ಪ್ರೊಜೆಕ್ಷನಿಸ್ಟ್ ಆಗುತ್ತಾನೆ. ತೊತೊ ದೊಡ್ದವನಾದ ಮೇಲೂ ಅಲ್ಫ್ರೆದೋ ಅವನಿಗೆ ಸಲಹೆ ಕೊಡುತ್ತಾನೆ, ಮಾರ್ಗದರ್ಶಿಯಾಗುತ್ತಾನೆ. ದೀರ್ಘ ಕಾಲದ ಈ ಸ್ನೇಹ ತೊತೊ ಮುಂದೆ ತನ್ನ ಜೀವನವನ್ನ ರೋಪಿಸಿಕೊಳ್ಳೋದ್ರಲ್ಲಿ ಸಹಕಾರಿಯಾಗುತ್ತೆ.

 

ಪುಟ್ಟಪುಟ್ಟ ಇಟಾಲಿಯನ್ ಪಟ್ಟಣಗಳ ಕಥೆ ಹೇಳುವ ಚಿತ್ರಗಳು ನನಗೆ ತುಂಬಾನೇ ಇಷ್ಟ. ಅವುಗಳಲ್ಲಿ ವಿವರಿಸಲಾಗದ ಒಂದು “ಚಾರ್ಮ್” ಇರುತ್ತೆ. ಸಿನಿಮಾಗಳನ್ನು ನೋಡಿ ಆಕ್ಷೇಪಾರ್ಹ ಸೀನುಗಳನ್ನು ಕತ್ತರಿಸಿಸುವ ಪಾದ್ರಿ, ಗಲಾಟೆ ಮಾಡೋ ಮಕ್ಕಳನ್ನು ಬೀದಿಯಲ್ಲೇ ರಪರಪ ಹೊಡೆಯುವ ಒರಟ ಪೋಷಕರು, ಬಾಲ್ಕನಿ ಅಲ್ಲಿ ಕೂತು ಕೆಳಗಡೆ ಉಗಿಯುವ ಶ್ರೀಮಂತರು, ಕದ್ದು ಸಿನಿಮಾಗೆ ಹೋಗಿ ಅಲ್ಲಿ ಸಿಗರೆಟ್ ಸೇದುವ ಚಿಕ್ಕ ಹುಡುಗರು, ಸಿನಿಮಾ ನೋಡುತ್ತಾ ಅಲ್ಲೇ ಎಳೆಕಂದನಿಗೆ ಹಾಲುಕುಡಿಸುವ ಅಮ್ಮಂದಿರು, ಪಟ್ಟಣದ ಮುಖ್ಯಚೌಕ ನನ್ನದು ಎಂದು ಕೂಗಿಕೊಂಡು ಓಡಾಡುವ ಅರೆಹುಚ್ಚ – ಹೀಗೆ ಬಗೆಬಗೆಯ ವರ್ಣರಂಜಿತ ವ್ಯಕ್ತಿತ್ವಗಳ ಸಮಾವೇಶ ಈ ಪಟ್ಟಣ.

ಸಿನಿಮಾ ಬಗ್ಗೆ ಇರುವ ಸಿನಿಮಾಗಳ ಮೇಲೆ ನನಗೆ ಒಲವು ಹೆಚ್ಚು. ಮಕ್ಕಳಿಲ್ಲದ ಅಲ್ಫ್ರೆದೋ, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿರುವ ತೊತೊ ಇಬ್ಬರೂ ಸಿನಿಮಾ ದೆಸೆಯಿಂದ ತಂದೆ ಮಗನ ಪ್ರೀತಿಯನ್ನು ಒಬ್ಬರಿಂದೊಬ್ಬರು ಪಡೆದುಕೊಳ್ಳುತ್ತಾರೆ. ಅಲ್ಫ್ರೆದೋ ತೊತೊಗೆ ಬುದ್ಧಿಮಾತು ಹೇಳೋವಾಗಳೆಲ್ಲಾ ಯಾವಯಾವುದೋ ಫಿಲಂಗಳಲ್ಲಿ ಬರುವ ಡೈಲಾಗ್ ಅನ್ನು ಕೋಟ್ ಮಾಡ್ತಾನೆ! ಇಡೀ ಚಿತ್ರದಲ್ಲಿ ಹಳೆಹಳೆಯ ಚಿತ್ರಗಳ ಬೇಜಾನ್ ತುಣುಕುಗಳು ಕಾಣಸಿಗುತ್ತವೆ. ಸಿನಿಮಾಸಕ್ತರಿಗೆ ಈ ಚಿತ್ರ ಇನ್ನೂ ಹೆಚ್ಚು ಖುಷಿ ಕೊಡುತ್ತದೆ ಅಂತ ನನ್ನ ನಂಬಿಕೆ.

ಹಾಗಂತ ಇದು ಕೇವಲ ಸಿನಿಮಾದ ಸಿನಿಮಾ ಅಲ್ಲ. ಇದು ಬಾಲ್ಯದ ಚಿತ್ರ, ಮುಗ್ಧತೆಯ ಚಿತ್ರ, ಅವೆಲ್ಲಾ ಕಳೆದುಹೋಗುವಿಕೆಯ ಚಿತ್ರ. ಒಂದು ಪುಟ್ಟ ಪಟ್ಟಣಕ್ಕೆ ಸಿನಿಮಾ ಅನ್ನುವ ಮಾಯಾಜಾಲದ ಆಗಮನದಿಂದ ಹೇಗೆ ಜನರು, ಅವರ ಜೀವನದ ಮೇಲೆ ಪರಿಣಾಮ ಉಂಟಾಗುತ್ತೆ ಅನ್ನೋದನ್ನ ಬಹಳ ‘ರೋಮ್ಯಾಂಟಿಕ್’ ಆಗಿ ತೆಗೆದಿದ್ದಾರೆ. ಆ ಪುಟ್ಟ ಹುಡುಗನ ಮುಗ್ಧತೆ, ಆ ಊರ ಜನರಲ್ಲಿ ಇರುವ ಮುಗ್ಧತೆ ಅವರ ಸಿನಿಮಾ ವೀಕ್ಷಣೆಯಲ್ಲೂ ಕಂಡುಬರುತ್ತದೆ. ಹಲವು ದಶಕಗಳ ನಂತರ ತೊತೊ ರೋಮ್ ಅಲ್ಲಿನ ಒಬ್ಬ ಶ್ರೀಮಂತ ಚಿತ್ರ ನಿರ್ದೇಶಕ, ಆದರೆ ಆ ವೇಳೆಗೆ ಅವನಲ್ಲಾಗಲೀ, ರೋಮ್ ಅಲ್ಲಾಗಲೇ ಆ ಮುಗ್ಧತೆ ಸಿಗೋಲ್ಲ. ಎಷ್ಟೇ ಖ್ಯಾತಿ ಗಳಿಸಿದ್ದರೂ ಉಳಿಯುವುದು ಬರೀ ಯಾಂತ್ರಿಕತೆ, ಒಂಟಿತನ ಮತ್ತು ಏಕತಾನತೆ.

ಸಿನಿಮಾ ಅಂದರೆ ನನ್ನ ಪ್ರಕಾರ ಮ್ಯಾಜಿಕ್. ಅದರ ಬಗ್ಗೆ ತೆಗೆದಿರುವ ಉತ್ತಮ ಚಿತ್ರ ಅಂದಮೇಲೆ ಮ್ಯಾಜಿಕಲ್ ದೃಶ್ಯಗಳಿಲ್ಲದೇ ಇರಲು ಸಾಧ್ಯವೇ? ಥೀಯೇಟರ್ ಒಳಗೆ ಜಾಗ ಇಲ್ಲ, ಇನ್ನೊಂದು ಶೋ ನಡೆಸಲು ಲೇಟ್ ಆಗಿದೆ ಅಂತ ಗೊತ್ತಾದಾಗ ಊರ ಜನ ರಂಪ ಶುರುಮಾಡಿಬಿಡುತ್ತಾರೆ. ಅವರನ್ನು ಸಮಾಧಾನ ಪಡಿಸಲು ಅಲ್ಫ್ರೆದೋ ಎದುರು ಬಿಲ್ಡಿಂಗ್ ಗೋಡೆಯ ಮೇಲೆ ಚಿತ್ರ ಮೂಡಿಬರುವಂತೆ ಪ್ರೊಜೆಕ್ಟರ್ ಅನ್ನು ಅತ್ತ ತಿರುಗಿಸುತ್ತಾನೆ. ಈ ಸೀನ್ ನೋಡಿದ ಪ್ರತಿಬಾರಿಯೂ ನಾನು ಅಷ್ಟೇ ರೋಮಾಂಚಿತನಾಗಿದೀನಿ. ಇನ್ನೊಮ್ಮೆ ತೊತೊ ಓಪನ್-ಏರ್ ಶೋ ಏರ್ಪಡಿಸಿದಾಗ, ಕೆಲವು ಜನ ಟಿಕೆಟ್ ಕೊಳ್ಳದೆ, ಅದರ ಹತ್ತಿರ ಇರುವ ನದಿಯಲ್ಲಿ ದೋಣಿಯ ಮೇಲೆ ನಿಂತು ಕದ್ದು ಸಿನಿಮಾ ನೋಡ್ತಾರೆ. ಎಂಥ ಬ್ರಿಲಿಯಂಟ್ ಸೇನ್ ಇದು! ಇನ್ನು ಈ ಚಿತ್ರದ ಕ್ಲೈಮಾಕ್ಸ್ ಒನ್ ಆಫ್ ದಿ ವೆರಿ ಬೆಸ್ಟ್. ಅದರ ಬಗ್ಗೆ ಹೇಳಿದರೆ ನೋಡುವಾಗಿನ ಮಜಾ ಹೊರಟುಹೊಗುತ್ತೆ ಅಂತ ಅದರ ಬಗ್ಗೆ ವಿವರವಾಗಿ ಬರಿತಾ ಇಲ್ಲ. ಎನ್ಯೋ ಮೊರಿಕೋನೆ ಹಿನ್ನೆಲೆ ಸಂಗೀತ ಎಂದಿನಂತೆ ವಾವ್! ಚಿಕ್ಕ ಹುಡುಗ ತೊತೊ ಮತ್ತು ಅಲ್ಫ್ರೆದೋ ಪಾತ್ರ ಮಾಡಿರೋ ನಟರ ಅಭಿನಯ ಮನೋಜ್ಞ!

ಅಳಿಸುವುದು ಸುಲಭ, ನಗಿಸುವುದು ಕಷ್ಟ. ನಗಿಸುತ್ತಲೇ ಕಣ್ಣಲ್ಲಿ ನೀರು ಬರಿಸೋದು ಇದೆಯಲ್ಲಾ ಅದು ಆಲ್ಮೋಸ್ಟ್ ಅಸಾಧ್ಯ, ಅದೊಂದು ಅಪರೂಪದ ಕಲೆ. ಅಂತಹ ಒಂದು ಕಲಾಕೃತಿ ಇದು!

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಸಿನಿಮಾ ಪ್ಯಾರಡಿಸೋ: ವಾಸುಕಿ ರಾಘವನ್

 1. Bellessimo Alfredo:!!!! idu yaavaglu nanna kiviyali molaGuttiruttade., putta balakana beragu gaNNugaLannu nenapisutte..chendavaagi hELiddeeri cinema paradiso bagge, Vasuki
  ಹಾಗಂತ ಇದು ಕೇವಲ ಸಿನಿಮಾದ ಸಿನಿಮಾ ಅಲ್ಲ. ಇದು ಬಾಲ್ಯದ ಚಿತ್ರ, ಮುಗ್ಧತೆಯ ಚಿತ್ರ, ಅವೆಲ್ಲಾ ಕಳೆದುಹೋಗುವಿಕೆಯ ಚಿತ್ರ. ಒಂದು ಪುಟ್ಟ ಪಟ್ಟಣಕ್ಕೆ ಸಿನಿಮಾ ಅನ್ನುವ ಮಾಯಾಜಾಲದ ಆಗಮನದಿಂದ ಹೇಗೆ ಜನರು, ಅವರ ಜೀವನದ ಮೇಲೆ ಪರಿಣಾಮ ಉಂಟಾಗುತ್ತೆ ಅನ್ನೋದನ್ನ ಬಹಳ ‘ರೋಮ್ಯಾಂಟಿಕ್’ ಆಗಿ ತೆಗೆದಿದ್ದಾರೆ. ಆ ಪುಟ್ಟ ಹುಡುಗನ ಮುಗ್ಧತೆ, ಆ ಊರ ಜನರಲ್ಲಿ ಇರುವ ಮುಗ್ಧತೆ ಅವರ ಸಿನಿಮಾ ವೀಕ್ಷಣೆಯಲ್ಲೂ ಕಂಡುಬರುತ್ತದೆ. ಹಲವು ದಶಕಗಳ ನಂತರ ತೊತೊ ರೋಮ್ ಅಲ್ಲಿನ ಒಬ್ಬ ಶ್ರೀಮಂತ ಚಿತ್ರ ನಿರ್ದೇಶಕ, ಆದರೆ ಆ ವೇಳೆಗೆ ಅವನಲ್ಲಾಗಲೀ, ರೋಮ್ ಅಲ್ಲಾಗಲೇ ಆ ಮುಗ್ಧತೆ ಸಿಗೋಲ್ಲ. ಎಷ್ಟೇ ಖ್ಯಾತಿ ಗಳಿಸಿದ್ದರೂ ಉಳಿಯುವುದು ಬರೀ ಯಾಂತ್ರಿಕತೆ, ಒಂಟಿತನ ಮತ್ತು ಏಕತಾನತೆ. well summed up!
  nanagoo tumbaaaaa ishta vaada chitra…
  thank you
  malathi S

 2. ಎಲ್ಲಾ ಸಿನಿಕತೆಯನ್ನು ಅಳವಡಿಸಿಕೊ೦ಡ (ಗೊತ್ತಿದ್ದೂ, ಗೊತ್ತಿಲ್ಲದೆಯೂ ಅದನ್ನು ಜೀವನಕ್ಕೆ ಆಹ್ವಾನಿಸಿ ಅದರಿ೦ದ ನರಳುವ) ಮೇಲೆ, ಹಿ೦ತಿರುಗಲಾರದೆ, ದೂರದಿ೦ದಲೇ ಬಾಲ್ಯ, ಯೌವನದ ಮುಗ್ಧತೆಯ, ರೋಚಕತೆಯನ್ನು ನವಿರಾಗಿ ಹದವಾಗಿ ಕಥೆಯಾಗಿಸುವ ಪರಿ ಸೂಪರ್.ಪ್ರತಿಯೊ೦ದು ಸೀನು ನಮ್ಮದೇ ಬಾಲ್ಯದ ಹರಿದು ಹ೦ಚಿ, ಮನದ ಮೂಲೆಯಲ್ಲಿನ ಸಣ್ಣ ತು೦ಡಿನ೦ತೆ ಗಕ್ಕನೇ ಎದುರು ಬ೦ದು ಅಚ್ಚರಿ, ಆನ೦ದ ತರುತ್ತದೆ. ಒಳ್ಳೆಯ ಚಿತ್ರ. ಒಳ್ಳೆಯ ವಿಮರ್ಶೆ. ಮೂವಿ ಅಬೌಟ್ ಮೂವಿ ಮೇಕಿ೦ಗ್ 🙂

  1. ಈ ಚಿತ್ರ ನೋಡಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು!

 3. ಲೇಖನ ಮೆಚ್ಚಿದ ಈ ಚಿತ್ರದ ಎಲ್ಲಾ ಫ್ಯಾನುಗಳಿಗೆ ಧನ್ಯವಾದಗಳು!

Leave a Reply

Your email address will not be published. Required fields are marked *