ಗುಲಾಬಿ ಟಾಕಿಸ್ – ಅರಕಳಿಯಾದ ಅಂತರಂಗ: ಮಹದೇವ ಹಡಪದ್


ಹೆಣ್ಣಿನ ಸುತ್ತ ಹಾಕಿರುವ ಬೇಲಿಯನ್ನು ಮೀರುವ ಹಂಬಲದ ಕತೆ ಸಿನಿಮಾ ಆಗುವಾಗ ಸಂಕುಚಿತವಾಗಿದೆ. ವ್ಯವಸ್ಥೆಯೇ ಬೇಲಿಯಾಗಿರುವಾಗ ಗುಲಾಬಿ ತನ್ನಿಚ್ಛೆಯಂತೆ ತಾನು ಬದುಕುತ್ತಿದ್ದಳು… ಆಕೆಯೂ ತಲಾಖ್ ಕೊಡಲಾರದ ಗಂಡನಿಗಾಗಿ ಬದುಕಿದ್ದಾಳೆ. ಮಲಮಗನ ಮೇಲಿನ ಹಂಬಲದಲ್ಲಿ ಜೀವಿಸುತ್ತಿದ್ದಾಳೆ. ಹೊಸ ಸಿನಿಮಾಗಳು ಹೇಳುವ ಬಗೆಬಗೆಯ ಕತೆಗಳನ್ನು ನೋಡುವ ಆತುರದಲ್ಲಿದ್ದಾಳೆ. ತೀರ ಸಾಮಾನ್ಯನ ಬದುಕಿನಲ್ಲಿ ಒಂದು ಕಲಾತ್ಮಕ ಆವರಣ ಇದ್ದೆ ಇರುತ್ತದೆ. ಆ ಆವರಣವನ್ನು ಲಿಲ್ಲಿಬಾಯಿಯ ಜೀವನದಲ್ಲಿ ಕಾಣುತ್ತೇವೆ. ಆದರೆ ಗುಲಾಬಿ ಟಾಕೀಸ್ ಸಿನೆಮಾದ ಕೆಲವು (ಶಾಟ್)ಚಿತ್ರಿಕೆಗಳಲ್ಲಿ ಕಾಣಿಸಿದರೂ ಇನ್ನುಳಿದಂತೆ ಅದೊಂದು ಉದ್ಧೇಶಪೂರ್ವಕ ನಿರ್ಧರಿಸಲ್ಪಟ್ಟ ಕಥನದ ತಂತ್ರವಾಗಿ ಕಾಣಿಸುತ್ತದೆ. ಪೋಸ್ಟರ್ ಅಂಟಿಸುವವನ ಸೈಕಲ್ಲಿನಿಂದ ಪೋಸ್ಟರ್ ಕದ್ದು ತಂದು ತನ್ನ ಗುಡಿಸಿಲಿಗೆ ಅಂಟಿಸಿಕೊಳ್ಳುವ ಗುಲಾಬಿ ಇಷ್ಟವಾಗುತ್ತಾಳೆ. ಅದೆ ಗುಡಿಸಲಿನಲ್ಲಿ ಊರಿನ ಮಕ್ಕಳನ್ನೆಲ್ಲ ಕೂಡಿಸಿಕೊಂಡು ತಿಂಡಿ ಕೊಡಿಸಿ ಟಿವಿ ತೋರಿಸುವ ಗುಲಾಬಿ ಕೃತಕಳೆನಿಸುತ್ತಾಳೆ. ಬಟ್ಟೆ ತೊಳೆಯಲು ಹೋದಲ್ಲಿ ಮಾತಾಡುವ ನೇತ್ರು ಗುಲಾಬಿಯರ ಸಂಭಾಷಣೆ ಉಂಟುಮಾಡುವ ಪರಿಣಾಮ ಮಹಿಳೆಯರ ಅಂತರಂಗದ್ದಾಗಿದ್ದರೆ, ಟಿವಿ ನೋಡಿ ಪ್ರೇರಣೆ ಪಡೆಯುವ ನೇತ್ರು ಕೃತಕಳಾಗಿ ಕಾಣಿಸುತ್ತಾಳೆ. ಇಂಥದೆ ಹಲವು ಕೃತಕ ಕಥನದ ಅಂಶಗಳನ್ನುಳ್ಳ ಈ ಚಿತ್ರದ ಸಾಧ್ಯತೆಗಳಲ್ಲಿ ವ್ಯವಸ್ಥೆಯು ಪೇಲವವಾಗಿ ಕಾಣಿಸಿದೆ.

ಮನುಷ್ಯನ ದುರ್ಬಲ ಮನಸ್ಸನ್ನು ಸೆಳೆಯುವ ಸಾಧನಗಳು ಜನತೆಯ ವರ್ತನೆಗಳನ್ನು ಬದಲಿಸುತ್ತವೆ ನಿಜ. ಆದರೆ ಬದಲಾಗುವ ಹಪಹಪಿ ಕಾಣದಾಗಿದೆ. ನೈತಿಕತೆಯನ್ನು ಬಲವಂತದಿಂದ ರೂಢಿಸಿಕೊಳ್ಳುವುದು ಬೇರೆ ನೈತಿಕ ಬಾಳನ್ನು ಸಹನೆಯಿಂದ ಕಟ್ಟಿಕೊಳ್ಳುವುದು ಬೇರೆ. ಅದನ್ನು ಲೋಕಧರ್ಮದಲ್ಲಿ ಕಂಡಾಗ ಸಿಗುವ ಅಂಶಗಳು ಅಸಂಗತವಾಗಿ ತೋರುತ್ತವೆ. ಸಿನೆಮಾದಲ್ಲಿ ಆ ಅಸಂಗತತೆ ಮಾಯವಾಗಿರುವುದರಿಂದ ಹಸೀನಾ ಕಟ್ಟಿಕೊಡುವ ಸಂಧಿಗ್ಧತೆ, ನಾಯಿನೆರಳು ಸಿನೆಮಾದ ಕರ್ಮಸಿದ್ಧಾಂತ, ಘಟಶ್ರಾದ್ಧದ ಮೌಢ್ಯ ಜೀವನದ ಅನಿಷ್ಟ, ಕನಸಿನ ಭ್ರಮೆ, ನಂಬಿಕೊಂಡ ತತ್ವಗಳ ಸುಳ್ಳು-ಸತ್ಯಗಳ ದ್ವಂದ್ವ ಹೀಗೆ ಗಿರೀಶ ಕಾಸರವಳ್ಳಿಯವರ ಇತರ ಚಿತ್ರಗಳಲ್ಲಿ ಮೂಡಿಬರುವ “ಅಮೂರ್ತಭಾವಗಳು ಹುಟ್ಟಿಸುವ ಆತಂಕಗಳು” ಗುಲಾಬಿಟಾಕಿಸ್ ಸಿನಿಮಾದಲ್ಲಿ ಕಾಣುವುದೇ ಇಲ್ಲ.

ಇಷ್ಟು ಸರಳವಾಗಿ ಇವತ್ತಿನ ಮಾಧ್ಯಮ, ರಾಜಕೀಯ ನೀತಿಗಳನ್ನು, ಸಮೂಹಸನ್ನಿಗೊಳಪಡುವ ಜನರನ್ನು ಚಿತ್ರದಲ್ಲಿ ತೋರಿಸಲು ಸಾಧ್ಯವಾಗುವುದೆ ಆದರೆ ಈ ಚಿತ್ರದಲ್ಲಿ ಗಿರೀಶರು ಬೇರೆ ಏನನ್ನೋ ಎಳೆಯಾಗಿ ಚಿತ್ರಿಸಲು ಹಂಬಲಿಸಿ ಸೋತಿದ್ದಾರೆ ಅನಿಸುತ್ತದೆ. ಕುದ್ರುದ್ವೀಪದಲ್ಲಿ ಯಾವ ಜಾತಿ ಮುಲಾಜಿಗೂ ಸಿಕ್ಕಲಾರದೆ ಸ್ವಚ್ಛಂದವಾಗಿ ವಾಸಿಸುವ ಗುಲಾಬಿ, ಏಕಾಏಕಿ ಸಂಘಟನೆಯ ಉಡಾಫೆ  ಹುಡುಗನಿಗೆ ಗುಲ್ನಬಿ ಆಗಿ ಕಾಣಿಸುವಳು. ಹಾಗೆ ಕಾಣಿಸುವ ಮೊದಲೂ ಆಕೆಯನ್ನು ಬೂಬಮ್ಮ ಎಂದೇ ಗುರುತಿಸುವ ಮನಃಸ್ಥಿತಿಗಳು ಬೆತ್ತಲಾಗುವುದೇ ಇಲ್ಲ. ಹಾಗೆ ನೋಡಿದರೆ ಕಾಸರವಳ್ಳಿಯವರ ಇತರ ಚಿತ್ರಗಳಿಗಿಂತ ಈ ಚಿತ್ರಕತೆ ತೀರ ಬ್ಲ್ಯಾಕ್ & ವೈಟ್ ಆಗಿದೆ.

ಊರಿಗೆ ಬರುವ ಹೊಸ ಸಿನೆಮಾಗಳನ್ನು ನೋಡುವ ಹುಚ್ಚಿನ ಗುಲಾಬಿ ಚಕ್ಲಿಮೀನಿಗಾಗಿ ಪೇಟೆ ತಿರುಗುತ್ತಿದ್ದಾಳೆ. ಅದು ತನ್ನ ಮಲಮಗನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡುವ ಧಾವಂತ ಅವಳಲ್ಲಿದೆ. ಆಕೆ ಊರಿನಲ್ಲಿ ಸಸೂತ್ರವಾಗಿ ಹೆರಿಗೆ ಮಾಡಿಸುವ ಸೂಲಗಿತ್ತಿಯೂ ಹೌದು. ಆಕೆ ಸಿನಿಮಾಕ್ಕೆ ಹೊರಟಳೆಂದರೆ ಊರಿನವರು ಗಂಟೆ ಎಷ್ಟಾಯಿತು ಎಂದು ನಿರ್ಧರಿಸುವಷ್ಟು ಗುಲಾಬಿಯ ಸಿನಿಮಾ ಪ್ರೀತಿ ಚಿರಪರಿಚಿತ. ಕತ್ತಲಾಗುತ್ತಿದ್ದಂತೆ ಹೊಸ ಸಿನಿಮಾ ಕಾಣಲು ಗುಲಾಬಿ ಹೋಗುತ್ತಾಳೆ.  ಬಾಂಬೆ ಕಲ್ಯಾಣಕ್ಕನ ಮಗಳಿಗೆ ಹೆರಿಗೆ ನೋವು ಸುರುವಾದಾಗ ಗುಲಾಬಿ ಹೊಸ ಸಿನಿಮಾ ಬಿಟ್ಟು ಬರಲು ಒಪ್ಪುವುದಿಲ್ಲ. ಅವರು ಒತ್ತಾಯದಿಂದ ಟಾಕೀಸಿನಿಂದ ಹೊತ್ತುತಂದಾಗ ಗುಲಾಬಿ ಸಿನಿಮಾ ತಪ್ಪಿತಲ್ಲ ಎಂಬ ಕೊರಗಿನಲ್ಲಿದ್ದಾಳೆ. ಕಲ್ಯಾಣಕ್ಕ ಬಣ್ಣದ ಟಿ.ವಿ ಮತ್ತು ಡಿಶ್ ಕೊಡುವುದಾಗಿ ಹೇಳುತ್ತಾಳೆ. ಹೆರಿಗೆ ಸಸೂತ್ರವಾದ್ದರಿಂದ ಗುಲಾಬಿ ಮನೆಗೆ ಮಾರನೇದಿನ ಟಿ.ವಿ. ಮತ್ತು ಡಿಶ್ ಬರುತ್ತವೆ. ಬಣ್ಣದಪರದೆ ಟಿ.ವಿ. ಗುಲಾಬಿ ಮನೆಯನ್ನು ಪ್ರವೇಶಿಸಿದ್ದೇ ಆಕೆಯ ಬದುಕಿನ ಚಕ್ರಗತಿ ಕೊಂಚ ಬದಲಾಗುತ್ತದೆ. ಊರಿನ ಜನ ಅವಳ ಮನೆಗೆ ಬರತೊಡಗುತ್ತಾರೆ. ಅವಳ ಮಲಮಗ ತಾನಾಗಿಯೇ ಬರುತ್ತಾನೆ. ಬಿಟ್ಟಿದ್ದ ಗಂಡ ಮೂಸಾ ಸಹಿತ ಇವಳ ಮನೆಗೆ ಬಂದು ಇರತೊಡಗುತ್ತಾನೆ. ದೂರದ ದುಬೈನಲ್ಲಿರುವ ಗಂಡನ ಬಿಟ್ಟು ಒಂಟಿಯಾಗಿರುವ ನೇತ್ರುಗೆ ಗುಲಾಬಿ ಕನಸು ಹೊಸ ಚೈತನ್ಯವನ್ನು ನೀಡುತ್ತದೆ. ಹೀಗೆ ಹೆಂಗಸರ ಅಂತರಂಗ ಮತ್ತು ದುಡಿಮೆಗಾರರ ಸಣ್ಣಪುಟ್ಟ ಘರ್ಷಣೆಗಳಲ್ಲಿ ಚಿತ್ರ ಸಾಗುತ್ತದೆ.

ಮೂಸಾ ದುಬೈನ ಸುಲೇಮಾನ್ ಸಾಹುಕಾರನ ಯಾಂತ್ರೀಕೃತ ಬೋಟ್ ಮೂಲಕ ಮೀನುಗಾರಿಕೆ ಮಾಡುತ್ತಿರುತ್ತಾನೆ. ಇದು ಸ್ಥಳಿಯ ಮಿನುಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿರುತ್ತದೆ. ಗುಲಾಬಿಯ ಗೆಳತಿ ನೇತ್ರು ಒಂದು ದಿನ ಕಾಣೆಯಾಗುತ್ತಾಳೆ. ಆಗ ಮೂಸಾ ಮಾಯವಾಗಿರುವುದು ಹಲವು ಅನುಮಾನಗಳಗೆ ಕಾರಣವಾಗುತ್ತದೆ. ಅದೆ ಸರಿಸುಮಾರಿಗೆ ಕಾರ್ಗಿಲ್ ಯುದ್ಧವೂ ಆರಂಭವಾಗಿರುತ್ತದೆ. ನೈತಿಕಪೋಲಿಸಗಿರಿ ಸ್ಥಳೀಯ ರಾಜಕೀಯ ಮತ್ತು ವ್ಯವಹಾರಿಕ ವಲಯಗಳನ್ನು ಪ್ರವೇಶಿಸಿ ಎಲ್ಲವನ್ನೂ ನಿಯಂತ್ರಣದಲ್ಲಿಡುವ ಹುಮ್ಮಸ್ಸಿನಲ್ಲಿರುತ್ತದೆ. ಇಲ್ಲಿ ಸುಲೆಮಾನ್ ಅಂಕೆಗೆ ಸಿಕ್ಕದ ವ್ಯಕ್ತಿಯಾಗಿ ಯಾರ ಕಣ್ಣಿಗೂ ಬೀಳದ ನಿಯಂತ್ರಕನಾಗಿ ತೋರಿಸಲಾಗಿದೆ. ಚಿತ್ರದಚೌಕಟ್ಟಿನಲ್ಲಿ ಅಸಹನೆ, ಅನುಮಾನ, ಸಿಟ್ಟು-ಸೆಡುವುಗಳ ನಡುವೆ ಸಹಬಾಳ್ವೆ ಮಾಯವಾಗುತ್ತ ಹೋದಂತೆ ಗುಲಾಬಿ ಒಂದು ನಡುಗಡ್ಡೆಯಾಗಿ ಕಾಣಿಸುತ್ತಾಳೆ.

ಸೂಲಗಿತ್ತಿಯ ಗುಲಾಬಿ ಟಾಕೀಸ ಕುದ್ರುವಿನ ಶಕ್ತಿಕೇಂದ್ರದಂತೆ ಕಾಣಿಸಿ ಕ್ಷಣದಲ್ಲಿ ಅದು ಸಹಿಸಲಸಾಧ್ಯದ ಊರಿನ ಕೆಲ ಸಂಕುಚಿತ ಮನಸ್ಸುಗಳಿಗೆ ಆಡಂಬರವಾಗಿ ಕಾಣುತ್ತದೆ. ಮನುಷ್ಯನ ಸಣ್ಣತನಗಳು ವೈರತ್ವಕ್ಕೆ ನಾಂದಿಯಾಗುತ್ತವೆ. ದ್ವೇಷ-ಅಸೂಯೆಗಳು ಒಟ್ಟಾಗಿ ಬಾಳುವ ಸಹನೆಯನ್ನು ಕೆಡಿಸುತ್ತವೆ. ಒಂದು ಸಣ್ಣ ದ್ವೀಪ ಪ್ರದೇಶದಲ್ಲಿ ವಾಸಿಸುವ ಜನಗಳ ನಡುವೆ ಗುಲ್ನಬಿ ಗುಲಾಬಿಯಾಗಿಯೇ ಬದುಕಿದ್ದವಳು. ಸುತ್ತಲಿನ ಎಷ್ಟೋ ಹೆರಿಗೆಗಳಿಗೆ ಸಾಕ್ಷಿಯಾಗಿದ್ದವಳು. ಚಿತ್ರದ ಕೊನೆಯಲ್ಲಿ ಬಲವಂತವಾಗಿ ದ್ವೀಪದಿಂದ ಹೊರಹಾಕಲ್ಪಡುತ್ತಾಳೆ. 1999ರಲ್ಲಿ ಯಾಂತ್ರಿಕೃತ ಮೀನುಗಾರಿಕೆಗೆ ಪರವಾನಿಗೆ ಕೊಟ್ಟ ಸರಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಣ್ಣದ ಟಿವಿಯನ್ನು ಮನೆಮನೆಗೆ ನೀಡಲಾಯಿತು ಎಂಬುದು ಹಾಸ್ಯಾಸ್ಪದದ ಮಾತಾಗಿದೆ. ಭಾರತವೆಂಬುದುಕಿಂತ ಇಂಡಿಯಾ ಹೆಚ್ಚು ನಿರ್ಭಿಡೆಯಿಂದ ವಾಸಿಸುತ್ತಿರುವುದಕ್ಕೆ ರಾಜಕೀಯದವರು ಇಂಥ ಹಲವಾರು ಆಟಗಳನ್ನು ಪಂದ್ಯಕಟ್ಟಿ ಆಡುವುದು ಹೊಸದೇನೂ ಅಲ್ಲ. ಒಟ್ಟುಚಿತ್ರದ ಪರಿಣಾಮ ತೂಕದ್ದಾಗಿಲ್ಲ.

ಉಮಾಶ್ರೀಯವರು ಗುಲಾಬಿಯಾಗಿ ಕಾಣಿಸಿಕೊಂಡಿದ್ದಾರೆ.  ಅವರ ಯಾವತ್ತಿನ ಅಭಿನಯದ ವರಸೆಗಳಿಂದ ಗುಲಾಬಿ ಪಾತ್ರವು ಭಿನ್ನವಾಗಿ ಮೂಡಿಬಂದಿಲ್ಲ. ಕುಂದಾಪೂರ ಕನ್ನಡವನ್ನು ಬಳಸಿರುವುದು ಹೆಚ್ಚು ನೈಜವಾಗಿದ್ದರಿಂದ ಇಲ್ಲಿನ ಗುಲಾಬಿ ಜಾಗದಲ್ಲಿ ಇನ್ನಾವುದೇ ಹೆಸರನ್ನಿಟ್ಟಿದ್ದರು ಚಿತ್ರದ ಪರಿಣಾಮದಲ್ಲಿ ಯಾವ ಬದಲಾವಣೆಯೂ ಕಾಣಲಾರದು. ರಾಮಚಂದ್ರ ಐತಾಳರ ಛಾಯಾಗ್ರಹಣ ದೃಶ್ಯ ಶ್ರೀಮಂತಗೊಳಿಸಿದೆ. ರಾತ್ರಿ ದೃಶ್ಯಕ್ಕಾಗಿ ಡೇ ಫಾರ್ ನೈಟ್ ಬಳಸಿರುವುದು ಅಷ್ಟು ಸಶಕ್ತವಾಗಿಲ್ಲ. ಕುಟುಪಲ್ಲಿಯವರ ಸಂಗೀತವೂ ಚಿತ್ರದ ಶಕ್ತಿಯಾಗಿದೆ. ಇನ್ನುಳಿದಂತೆ ಎಂ.ಡಿ.ಪಲ್ಲವಿ ಅವರ ಅಭಿನಯ ಮನೋಜ್ಞವಾಗಿದೆ. ಅನುಮಾನಗಳು ಹುಟ್ಟಿಸುವ ಆತಂಕದ ಹೊರತಾಗಿ ಸಿನಿಮಾ ಹೆಚ್ಚು ಸಂಕೀರ್ಣವಾಗಿಲ್ಲ.

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶರಣು ಶಟ್ಟರ್

ಸರ್ ನಾ ಈ ಪಿಚ್ಚರ್ ನೋಡಿನ್ರಿ ರೀ ಆದ್ರ ಅರ್ಥ ಮಾಡಿ ಕೋಳ್ಳೊ ಗೋಜಿಗೆ ಹೋಗಿಲ್ಲ್ ರೀ ಆದ್ರ ನೀವು ಬರದಿರುವ ಲೇಖನ ಮಾತ್ರ ಬಾಳ ಚೋಲೊ ಇದೆ ರೀ………

 

1
0
Would love your thoughts, please comment.x
()
x