ಸಾವು ಮತ್ತು ನಾವು: ಸಹನಾ ಪ್ರಸಾದ್

“ಅಯ್ಯೋ, ಪದ್ದಮ್ಮ ಹೋಗಿಬಿಟ್ರು ಕಣ್ರೀ, ರಾತ್ರಿ ಮಲಗಿದವರು ಬೆಳಗ್ಗೆ ಏಳಲೇ ಇಲ್ಲವಂತೆ. ಪಾಪ “ ಒಬ್ಬಾಕೆಯ ಉವಾಚ. ಮತ್ತೊಬ್ಬರದು ಜೋಡಣೆ. “ಸುಖವಾದ ಸಾವು, ಬಿಡ್ರೀ. ಎಷ್ಟು ಜನಕ್ಕೆ ಲಭ್ಯ, ಹೇಳಿ? ಒಂದು ದಿನ ನರಳಲಿಲ್ಲ, ಹಾಸಿಗೆ ಹಿಡಿಯಲಿಲ್ಲ. ಒಬ್ಬರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ. ಹೀಗೆ ಅಚಾನಕವಾಗಿ ಹೋಗೋದು ಪುಣ್ಯ ಅಲ್ಲದಿದ್ರೆ ಮತ್ತೇನು?” ಮಾತು ಒಬ್ಬರಿಂದ ಒಬ್ಬರಿಗೆ ದಾಟಿ ಅನೇಕ ಭಾವಗಳನ್ನು ತೋರಿ ಎಲ್ಲೋ ಒಂದು ಕಡೆ “ ಹೋಗಲಿ ಬಿಡಿ, ಅವರು ಪಡೆದುಕೊಂಡು ಬಂದಿದ್ದಷ್ಟೇ, ಭೂಮಿಯ ಋಣ ಮುಗೀತು, ಹೋದ್ರು!” ಎನ್ನುವಲ್ಲಿಗೆ ಮುಕ್ತಾಯಗೊಂಡಿತು.

ಸಾವಿನ ಸುದ್ದಿಯನ್ನು ಮಾತಾಡುವುದು, ಚರ್ಚೆ ಮಾಡುವುದು ಕಷ್ಟ. ನಮ್ಮ ಮನೆಯಲ್ಲೇ ಆಗಲಿ, ನೆರೆಮನೆಯದ್ದೇ ಇರಲಿ, ಆಸುಪಾಸಿನಲ್ಲಿ, ದೂರದಲ್ಲಿ, ಎಲ್ಲೇ ಆಗಲಿ ಅದೊಂದು ಹಿಂಸೆಯ ವಿಷಯ. ಹೋದವರು ವಯಸ್ಸಾದವರಾಗಿದ್ದರೆ ಅಂದೊಂದು ಸ್ವಲ್ಪ ಸಹನೀಯ. “ಪಾಪ, ವಯಸ್ಸಾಗಿತ್ತು. ಇನ್ನೆಷ್ಟು ದಿನ ಆಯುಸ್ಸಿದ್ದೀತು?” ಎಲ್ಲೋ ಸಮಾಧಾನದ ಉಸಿರು. ಚಿಕ್ಕವರಾಗಿದ್ದರೆ ಹಲಬುವುದು ಜಾಸ್ತಿ “ಛೇ, ಇನ್ನು ಸಣ್ಣ ವಯಸ್ಸು. ಪಾಪ, ಬಾಳಿ ಬದುಕಬೇಕಾದ ಜೀವ. ದೇವರು ನಿಷ್ಕರುಣಿ. ಇವನಿಗೆ ಈ ಸಣ್ಣ ವಯಸ್ಸಿನವರ ಮೇಲೇಕೆ ಕಣ್ಣು. ಅವರು ನೋಡಿ, ವಯಸ್ಸಾಗಿದೆ, ನರಳುತ್ತಾ ಇದ್ದಾರೆ. ಅವರನ್ನು ಕರೆದೊಯ್ಯುವ ಬದಲು ಈ ಜೀವಕ್ಕೆ ಹೊಂಚು ಹಾಕಿತಲ್ಲ, ಸಾವು!”

ಇನ್ನು ಹೊಸದಾಗಿ ಮಾಡುವೆಯಾಗಿದ್ದರೆ, ಸಣ್ಣ ಸಣ್ಣ ಮಕ್ಕಳಿದ್ದಾರೆ, ಮನಸ್ಸು ಬಲು ಭಾರ. ಕೆಲವು ವರುಷದ ಮುನ್ನ ವಿಧವೆಯನ್ನು ಕಾಣುವ ದೃಷ್ಟಿಯೇ ಬೇರೆ. “ಇಷ್ಟು ಚಿಕ್ಕ ವಯಸ್ಸಿನಲ್ಲಿ ಗಂಡ ಹೋಗಿಬಿಟ್ಟನಲ್ಲ. ಇನ್ನು ಇವಳ ಗತಿಯೇನು. ಮಕ್ಕಳನ್ನು ನೋಡಿಕೊಂಡು,ಅವಳಾಸೆಯನ್ನೆಲ್ಲಾ ಅದುಮಿ ಬಾಳಬೇಕು” ಎಂದಾದರೆ, ಮಕ್ಕಳಿಲ್ಲದವರಿಗೆ “ ಒಂದು ಮಗುವಾದರೂ ಇದ್ದಿದ್ರೆ ಚೆನ್ನಾಗಿತ್ತು. ಅದರ ಮುಖ ನೋಡಿ ಬದುಕು ಸಾಗಿಸುತ್ತಿದ್ದಳು” ಎಂಬ ಉದ್ಗಾರ. ಇನ್ನು ವಿಧುರನಾದರೆ, “ ಅಯ್ಯೋ, ಈ ಚಿಕ್ಕ ಮಕ್ಕಳನ್ನು ಹೇಗೆ ಸುಧಾರಿಸುತ್ತಾನೋ, ಆದಷ್ಟು ಬೇಗ ಈ ಮಕ್ಕಳಿಗೆ ಇನ್ನೊಂದು ತಾಯಿ ಬಂದರೆ ವಾಸಿ. ಆಫೀಸು, ಮನೆ, ಮಕ್ಕಳು ಎಲ್ಲ ಈ ಗಂಡಸಿನ ಕೈಲಿ ಸುಧಾರಿಸಕ್ಕೆಆಗೋಲ್ಲ. ಆದರೆ ಬರುವಾಕೆ ಒಳ್ಳೆಯವಳಿರಬೇಕು, ಅಷ್ಟೇ. ಮಲತಾಯಿಯ ತರಹ ವರ್ತಿಸದೆ, ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಗಮನಿಸುವವಳು ಬೇಕು” ಇನ್ನು ಮಕ್ಕಲಿಲ್ಲದಿದ್ದರೆ, “ಅಯ್ಯೋ, ಚಿಕ್ಕ ವಯಸ್ಸು. ಒಂದು ಮಗುವಾಗಿದ್ದಿದ್ದರೆ ಅವಳ ನೆನಪಾದರೂ ಉಳಿಯುತ್ತಿತ್ತು. ಹೋಗಲಿ, ಒಂದು ತರಹ ಒಳ್ಳೆಯದೇ ಆಯಿತು. ಬರುವವಳು ಹೇಗಿರುತ್ತಾಳೋ ಏನೋ!”

ಈಗಿನ ಕಾಲದಲ್ಕಿ, ಹೆಣ್ಣಿಗೂ, ಗಂಡಿಗೂ ಜಾಸ್ತಿ ವ್ಯತ್ಯಾಸವೆನಿಲ್ಲ. ಅದರಲ್ಲೂ ಪೇಟೆಗಳಲ್ಲಿ. ಓದಿ, ಬದುಕನ್ನು ಅರ್ಥ ಮಾಡಿಕೊಂಡಿರುವವರಲ್ಲಿ. ಮದುವೆಯಾದ ಹೆಣ್ಣು ಹೋದರೆ ಒಂದು ರೀತಿ ವಿಧಾನಗಳು, ಮದುವೆಗಾಗದಿದ್ದರೆ ಬೇರೇನೋ.

ಇನ್ನು ಸಾವಾಗಿದ್ದ ರೀತಿ ಕೂಡ ವಿವಿಧ ಮಾತುಗಳಿಗೆ ಅನುವು ಮಾಡಿಕೊಡುತ್ತದೆ. ಪದ್ದಮ್ಮನ ರೀತಿ ಹೋದವರದೊಂದು ಕತೆಯಾದರೆ, ದೀರ್ಘಕಾಲ ನರಳಿದವರದೊಂದು ಕತೆ.” ಅಯ್ಯೋ, ಎಷ್ಟು ನರಳುತ್ತಿದ್ದರು. ಅವರಿಗೂ ಕಷ್ಟ, ಮನೆಯವರಿಗೂ ಸಹ. ಮಾಡಿಸಿಕೊಳ್ಳುವವರಿಗೆ ಒಂದು ರೀತಿಯಾದರೆ, ಮಾಡುವರಿಗೆ ಇನ್ನೊಂದು ರೀತಿ. ಇಬ್ಬರಿಗೂ ಮುಕ್ತಿ ಸಿಕ್ಕಿತು, ಬಿಡಿ” ಕೇಳಿಸಿಕೊಳ್ಳಲು ಹಿಂಸೆಯಾದರೂ, ಮನದ ಮೂಲೆಯಲ್ಲಿ ಹೌದಲ್ವಾ ಅನಿಸುವುದು ಸುಳ್ಳಲ್ಲ. ಕಷ್ಟ ಪಡುತ್ತಿದ್ದವರಿಗೆ ಏನೂ ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿ ಮನೆಯವರದ್ದು. ನಾವು ಮಾಡುತ್ತಿದ್ದು ಸಾಕೋ, ಇನ್ನಷ್ಟು ಮಾಡಬೇಕಿತ್ತೋ ಏನೋ ಎನ್ನುವ ನೋವು ಬಾಧಿಸುತ್ತಲೇ ಇರುತ್ತದೆ. ಈ ರೀತಿಯ ಮಾತುಗಳು ಸ್ವಲ್ಪ ನೋವು, ಸ್ವಲ್ಪ ಸಾಂತ್ವಾನ ಸಿಗುವುದು ಸುಳ್ಳಲ್ಲ.
ಇನ್ನು ಅಪಘಾತಕ್ಕೆ ಈಡಾಗಿ ಮರಣ ಹೊಂದಿದವರು ಕೆಲವೂಮ್ಮೆ ಪುಣ್ಯವಂತರು (“ಹೋಗಲಿ ಬಿಡಿ, ಇಷ್ಟೊಂದು ಗಾಯವಾಗಿ ಬದುಕುಳಿದಿದ್ದರೆ ಎಷ್ಟು ತ್ರಾಸವಾಗುತ್ತಿತ್ತು. ಆ ರೀತಿ ಬಾಳುವುದಕ್ಕಿಂತ ಹೋಗಿದ್ದೇ ಒಳ್ಳೆಯದಾಯಿತು) ಕೆಲವೊಮ್ಮೆ ನತದೃಷ್ಟರು ( ಪಾಪ, ಸಾಯುವಂತಹುದ್ದೇನೂ ಆಗಿರಲಿಲ್ಲ, ಬಿಡಿ. ಇನ್ನು ಗಾಯಗೊಂಡಿರುವರು ಬದುಕುಳಿಯಲಿಲ್ಲವೇ).

ಒಟ್ಟಿನಲ್ಲಿ ಯಾವ ರೀತಿಯ ಸಾವಾಗಲಿ, ಮಾತು ಒಂದೊಂದು ರೀತಿ. ಇನ್ನು ಸಾಂತ್ವಾನ ಹೇಳುವವರಿಗೂ ಬಲು ಕಷ್ಟ. ಯಾವ ರೀತಿಯ ಸಾವಿರಲಿ, ಸತ್ತವರ ವಯಸ್ಸು, ಸ್ಥಿತಿ ಎಂತಹುದ್ದೇ ಇರಲಿ, ಅದು ಸಂಬಂಧಪಟ್ಟವರಿಗೆ ತುಂಬಲಾಗದ ನಷ್ಟ. “ದೇವರಿಚ್ಛೆ”, “ಅವರ ಭೂಮಿಯ ಋಣ ಇದ್ದಿದ್ದೇ ಇಷ್ಟು”, “ ದೇವರ ಪಾದದಲ್ಲಿ ನೆಮ್ಮದಿಯಾಗಿದ್ದಾರೆ ಬಿಡಿ”, “ಸದ್ಗತಿ ಸಿಗಲಿ”, “ಮುಕ್ತಿ ದೊರಕಲಿ” ಇತ್ಯಾದಿ ಪದಗಳು ಕೇವಲ ಬಾಯಿ ಮಾತಲ್ಲ. ಆ ನಿಮಿಷದಲ್ಲಿ ಮನಸ್ಸಿಗೆ ತೋಚಿದ್ದು, ಕೇಳುಗರಿಗೆ ನೆಮ್ಮದಿ ಕೊಡುವಂತಹುದ್ದು ಎಂಬುದು ಸುಳ್ಳಲ್ಲ.

ಕೊನೆಗೆ ಉಳಿಯುವುದು ಒಂದು ಸತ್ಯ- ಕಾಲನ ಕರೆಯ ಮುಂದೆ ಯಾರೂ ಇಲ್ಲ. ಈ ಪ್ರಪಂಚದಲ್ಲಿ ಅದನ್ನು ಮೀರಿದವರು, ಶಾಶ್ವತವಾಗಿ ಉಳಿದವರು ಒಬ್ಬರು ಸಹ ಇಲ್ಲ. ಉಳಿಯುವುದು ನಾವು ಮಾಡಿದ ಕೆಲಸಗಳು, ಆಡಿದ ಒಳ್ಳೆಯ ಮಾತುಗಳು, ಹಿತ ತಂದ ನಮ್ಮ ವರ್ತನೆಗಳು ಮಾತ್ರ!

ಸಹನಾ ಪ್ರಸಾದ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x