ಝಕೀರ್ ನದಾಫ್ ಗೆ ರಂಗ ಪ್ರಶಸ್ತಿ: ವೈ. ಬಿ. ಕಡಕೋಳ

ಇತ್ತೀಚಿಗಷ್ಟೇ ರಂಗ ಸಾಹಿತ್ಯಕ್ಕಾಗಿ ಸವದತ್ತಿ ತಾಲೂಕಿನ ಹೂಲಿ ಶೇಖರ್ ಅವರಿಗೆ ಪ್ರಶಸ್ತಿ ಗೌರವವನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ನೀಡಿರುವ ಬೆನ್ನಲ್ಲೇ ಹೊಸ ವರ್ಷದ ಮೊದಲ ವಾರ ಮತ್ತೊಂದು ಪ್ರತಿಭೆ ಝಕೀರ್ ನದಾಫ್ ರಿಗೆ ರಂಗ ಪ್ರಶಸ್ತಿ ಪ್ರಕಟವಾಗಿರುವುದು ಸವದತ್ತಿ ತಾಲೂಕಿನ ಹೆಮ್ಮೆ. ಏಣಗಿ ಬಾಳಪ್ಪನವರ ಮೂಲಕ ತಾಲೂಕು ತನ್ನದೇ ವಿಶೇಷತೆಯನ್ನು ರಂಗಪರಂಪರೆಯಲ್ಲಿ ಬೆಳಗಿದೆ. ಇಂತಹ ತಾಲೂಕಿನ ಹೂಲಿ ಶೇಖರ್ ಹುಟ್ಟೂರು ಹೂಲಿಯಾದರೆ ರಂಗ ಚಟುವಟಿಕೆಗಳಿಗೆ ಕರ್ಮ ಭೂಮಿಯಾಗಿದ್ದು ಉತ್ತರ ಕನ್ನಡ. ಬೆಂಗಳೂರು. ಆದರೆ ಏಣಗಿ ಬಾಳಪ್ಪನವರು ಸವದತ್ತಿ ತಾಲೂಕಿನಿಂದಲೇ ಬೆಳಗಿದವರು. ಇವರ ನಡುವೆ ಕಳೆದ 25 ವರ್ಷಕ್ಕಿಂತಲೂ ಹೆಚ್ಚು ಝಕೀರ್ ನದಾಫ್ ಸದ್ದಿಲ್ಲದೇ ತಮ್ಮಷ್ಟಕ್ಕೆ ತಾವು ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸ್ನೇಹಿತ ಬಳಗದೊಂದಿಗೆ ಬೆಳೆಯುತ್ತಿದ್ದವರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ. ಈಗ ಇದು ಸವದತ್ತಿ ಎಲ್ಲಮ್ಮಾ ವಿಧಾನ ಸಭಾ ಕ್ಷೇತ್ರವೆಂದೂ ಹೆಸರಾಗಿದೆ. ಇದು ಬೆಳಗಾವಿ ಜಿಲ್ಲಾ ಕೇಂದ್ರದಿಂದ 88 ಕಿ, ಮೀ, ಧಾರವಾಡ ಜಿಲ್ಲಾ ಕೇಂದ್ರದಿಂದ 38 ಕಿ. ಮೀ. ಅಂತರದಲ್ಲಿದ್ದು ತಾಲೂಕ ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಆಣೆಕಟ್ಟು. ಮುನವಳ್ಳಿ ಸಕ್ಕರೆ ಕಾರ್ಖಾನೆ, ಮುರಗೋಡ. ಸೊಗಲ. ಯರಗಟ್ಟಿ. ಇಂಚಲ, ದಂತಹ ಅನೇಕ ಪ್ರಸಿದ್ದ ತಾಣಗಳನ್ನು ಹೊಂದಿದ ತಾಲೂಕಾ ಕೆಂದ್ರ. ಇಂತಹ ಕ್ಷೇತ್ರದ ಸವದತ್ತಿ ನಾಟಕಕಾರ ನಟ ನಿರ್ದೇಶಕ ಝಕೀರ್ ನದಾಫ್ ಗೆ ಈ ವರ್ಷದ ಕರ್ನಾಟಕ ಸರ್ಕಾರ ನಾಟಕ ಅಕಾಡಮಿಯ ಪ್ರಶಸ್ತಿಯ ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆ ಮಾಡಿರುವ 25 ಕಲಾವಿದರಲ್ಲಿ ಝಕೀರ್ ಒಬ್ಬರು. ಇವರ ತಂದೆ ಮಕ್ತುಂಸಾಹೇಬ ತಾಯಿ ಜನ್ನತಭಿ. 1-10-1968 ರಲ್ಲಿ ಸವದತ್ತಿಯಲ್ಲಿ ಜನಿಸಿದ ಇವರು ಬಾಲ್ಯದ ಶಿಕ್ಷಣವನ್ನು ಸವದತ್ತಿಯಲ್ಲಿಯೇ ಮುಗಿಸಿದರು.

ಝಕೀರ್ ನದಾಫ್

ನನ್ನ ಬಾಲ್ಯದ ದಿನಗಳು ನನ್ನ ಮನೆಯ ಪಕ್ಕದ ಮನೆ. ಒಂದೇ ಬೀದಿ. ನಾನಾಗ ನಾಲ್ಕನೇ ತರಗತಿ ಓದುತ್ತಿದ್ದ ನೆನಪು 1979 ರ ಸಮಯ. ಝಕೀರ್ ಸಂಜೆಯಾಗುತ್ತಿದ್ದಂತೆ ಗೀಟಾರ್ ಬ್ಯಾಂಜೋಗಳನ್ನು ಬಳಸಿ ಹಾಡುಗಳನ್ನು ಹಾಡುತ್ತಿದ್ದ ನೆನಪು ಇಂದಿಗೂ ಇದೆ. ಅವರನ್ನು ಮಾತನಾಡಿಸಿ ಆ ಹಾಡುಗಳನ್ನು ಕೇಳುತ್ತಿದ್ದ ನನಗೆ ಅವರು ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜನೀಯರಿಂಗ ಶಿಕ್ಷಣ ಮುಗಿಸಿ ಎನ್. ಟಿ. ಟಿ. ಎಫ್ ಟ್ಯೂನ್ ಡಿಸೈನರ್ ಆಗಿ ಸೇವೆ ಸಲ್ಲಿಸಿ ನಂತರದ ದಿನಗಳಲ್ಲಿ ಬಾಲ್ಯದಿಂದ ಬೆಳೆಸಿಕೊಂಡು ಬಂದಿದ್ದ ರಂಗ ಪರಂಪರೆಯತ್ತ ತಮ್ಮನ್ನು ತೊಡಗಿಸಿಕೊಂಡು ಬೆಳೆದಿದ್ದು ಈಗ ಇತಿಹಾಸ. ನಾನು ಮುನವಳ್ಳಿಯಲ್ಲಿ ನೆಲೆಸಿದೆ. ವೃತ್ತಿಗಾಗಿ ಸವದತ್ತಿಯ ಸಂಪರ್ಕ ಹೊಸದೇನಲ್ಲ. ಇವರು ತಮ್ಮ ಪರಸಗಡ ನಾಟಕೋತ್ಸವದ ಪ್ರತಿ ವರ್ಷ ಜರಗುವ ನಾಟಕೋತ್ಸವಕ್ಕೆ ಮುಂಚಿತವಾಗಿ ನನಗೆ ಆಹ್ವಾನ ಪತ್ರಿಕೆಯನ್ನು ನೀಡುವ ಜೊತೆಗೆ ನಾಟಕಗಳನ್ನು ನೋಡಲು ಅವಕಾಶ ಒದಗಿಸುತ್ತಿರುವುದು ಮರೆಯಲಾರದು. ಝಕೀರ್ ಅವರಲ್ಲಿನ ಕಲಾವಿದ ಚಿಕ್ಕಂದಿನಲ್ಲಿಯೇ ಬೆಳೆಯುತ್ತಿರುವುದನ್ನು ಹತ್ತಿರದಿಂದ ನೋಡಿದವನು ನಾನು. ಅವರಿಗಿಂದು ಪ್ರಶಸ್ತಿ ಎಂಬ ಮಾಹಿತಿಯನ್ನು ಪತ್ರಿಕೆಗಳಲ್ಲಿ ನೋಡಿದಾಗ ಅವರ ಪರಿಶ್ರಮಕ್ಕೆ ಈಗ ಗೌರವ ಸಂದಿತು ಎಂಬ ಸಂತೋಷ ತುಂಬಿ ಬಂತು.

ಇವರು ತಾವೊಬ್ಬರೇ ಬೆಳೆಯಲಿಲ್ಲ ತಮ್ಮೊಟ್ಟಿಗೆ ಇತರರನ್ನು ಕಟ್ಟಿಕೊಂಡು ಬೆಳೆಯತೊಡಗಿದವರು. ಸವದತ್ತಿ ತಾಲೂಕಿನ ಬರಹಗಾರರ ಬರಹಗಳನ್ನು ಕೂಡ ನಾಟಕ ರಚಿಸಿ ನಾಟಕ ಮಾಡಿಸಿದ್ದು ಇವರ ಹೆಗ್ಗಳಿಕೆಯಲ್ಲೊಂದು. ನನ್ನ ಆತ್ಮೀಯ ಸ್ನೇಹಿತ ಆನಂದ ಬೋವಿ ರಚನೆಯ ಹಲವು ಕತೆಗಳು ಇವರ ನಾಟಕಗಳಾಗಿವೆ. ನಾಟಕ ರಚನೆ. ನಿರ್ದೇಶನ ನಟನೆಗಳಲ್ಲಿ ಸೈ ಎನಿಸಿಕೊಂಡ ಝಕೀರ್ 150 ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚನೆ. ಗಾಯಕ. ರಾಗಿ ಕಾರ್ಯ ನಿರ್ವಹಿಸಿರುವುರಲ್ಲದೇ ದೂರದರ್ಶನದ ನಾಟಕ ಧಾರವಾಹಿಗಳಲ್ಲಿ ನಟಿಸಿದ ಉತ್ತರ ಕರ್ನಾಟಕದ ಪ್ರತಿಭೆ. ಕಳೆದ 23 ವರ್ಷಗಳಿಂದ ಪರಸಗಡ ನಾಟಕೋತ್ಸವ ಸಂಘಟಿಸಿ ನಾಡಿನ ವಿವಿಧ ಹವ್ಯಾಸಿ ತಂಡಗಳ ಜೊತೆಗೆ ನೀನಾಸಂ. ಶಿವಸಂಚಾರ ಸಾಣೇಹಳಿ, ್ಳ ಜಮುರಾ ಸುತ್ತಾಟ ಚಿತ್ರದುರ್ಗ, ಕಲಾ ತರಂಗ(ರಿ) ಶಿವಮೊಗ್ಗ ಮೊದಲಾದ ತಂಡಗಳನ್ನು ಸವದತ್ತಿಗೆ ಬರುವಂತೆ ಮಾಡಿದ್ದು ಇವರ ಸಾಹಸಗಳಲ್ಲೊಂದು. ನಾವೆಲ್ಲ ಹೊರಗಿನ ತಂಡಗಳ ನಾಟಕಗಳನ್ನು ನಮ್ಮೂರಿನಲ್ಲಿ ನೋಡುವಂತೆ ಮಾಡಿದ್ದು ಝಕೀರ್ ಮತ್ತು ಅವರ ಸಂಘಟನೆ.

ನಾವೆಲ್ಲ ನಾಟಕಗಳನ್ನು ಥಿಯೇಟರ್ ಅಥವ ಟೆಂಟ್‍ಗಳಲ್ಲಿ ನಾಟಕ ನೋಡುವುದು ಸಾಮಾನ್ಯ ಸಂಗತಿ. ಆದರೆ ಸವದತ್ತಿಯ ರಂಗಾಸಕ್ತರು ಐತಿಹಾಸಿಕ ಕೋಟೆಯ ಒಳಗಿನ ಆವರಣವನ್ನು ತಮ್ಮ ರಂಗ ಚಟುವಟಿಕೆಗಳಿಗೆ ಪ್ರತಿ ವರ್ಷಕ್ಕೊಂದು ಸಲ ಬಳಕೆ ಮಾಡಿಕೊಂಡು ಕೋಟೆಯ ಚಾರಿತ್ರಿಕ ಹಿನ್ನಲೆಯನ್ನು ಕೂಡ ಜನ ಗಮನಿಸುವಂತೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಅದು ಕೂಡ ಕಳೆದ 23 ವರ್ಷದಿಂದ “ಪರಸಗಡ ನಾಟಕೋತ್ಸವ” ಮೂಲಕ ಈ ಪ್ರಕ್ರಿಯೆ ಜರುಗುತ್ತ ಬಂದಿದ್ದು ದಾಖಲಾರ್ಹ ಸಂಗತಿ.

ಸವದತ್ತಿಯ ರಂಗಾಸಕ್ತ ಮಿತ್ರರೆಲ್ಲ ವೃತ್ತಿರಂಗಭೂಮಿ ಶೈಲಿಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲಿ ಬದಲಾವಣೆ ಬಯಸಿ ಹವ್ಯಾಸಿ ನಾಟಕಗಳನ್ನು ಪ್ರಸ್ತುತಪಡಿಸಲು ನಿರ್ಧರಿಸಿ, 1997 ರಲ್ಲಿ ಹುಟ್ಟುಹಾಕಿದ ರಂಗಸಂಸ್ಥೆಯೇ ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ. ಈ ಸಂಘಟನೆಯ ಸದಸ್ಯರೆಲ್ಲ ರಂಗ ಚಟುವಟಿಕೆ ಹಿನ್ನಲೆಯಿಂದ ಬಂದವರಲ್ಲ. ಹವ್ಯಾಸಿ ಕಲಾವಿದರು. ಒಬ್ಬೊಬ್ಬರದು ಒಂದೊಂದು ವೃತ್ತಿ ಈ ತಂಡದಲ್ಲಿ ಉಪನ್ಯಾಸಕರಿದ್ದಾರೆ, ಶಿಕ್ಷಕರಿದ್ದಾರೆ, ಪರ್ತಕರ್ತರಿದ್ದಾರೆ. ವ್ಯಾಪಾರಿಗಳಿದ್ದಾರೆ. ವಿದ್ಯಾರ್ಥಿಗಳಿದ್ದಾರೆ ಹೀಗೆ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವರ್ಷಕ್ಕೊಮ್ಮೆ ಕೋಟೆಯ ಆವರಣದಲ್ಲಿ ರಂಗ ಆರಾದನಾ ಸಂಸ್ಥೆಯ ಮೂಲಕ ನಾಟಕಗಳನ್ನು ಮಾಡುತ್ತ ತಮ್ಮ ಹವ್ಯಾಸಕ್ಕೊಂದು ಇಂಬು ಕೊಡುತ್ತಿರುವರು.

ಇವರೆಲ್ಲರೂ ಸೇರಿ 1997 ರಲ್ಲಿ ರಂಗತಜ್ಞ ವಿನೋದ ಅಂಬೇಕರ ನಿರ್ದೇಶನದಲ್ಲಿ ಒಂದು ತಿಂಗಳ “ರಂಗ ತರಬೇತಿ ಶಿಬಿರ” ನಡೆಸಿ, “ಮೃಚ್ಛಕಟಿಕ” ನಾಟಕದ ಎರಡು ಪ್ರದರ್ಶನವನ್ನು ಇಲ್ಲಿ ನೀಡಿದರು. ಅದು ಜನರ ಗಮನ ಸೆಳೆಯಿತಲ್ಲದೇ ಅವರಿಂದ ಮತ್ತೆ ಮುಂದಿನ ವರ್ಷ ನಾಟಕ ಪ್ರದರ್ಶನ ನೀಡುವಂತೆ ಪ್ರೋತ್ಸಾಹ ಕೂಡ ದೊರೆಯಿತು. ಅದರ ಫಲವಾಗಿ 1998 ರಲ್ಲಿ ಮತ್ತೆ ಅದೇ ನಿರ್ದೇಶಕರಿಂದ “ಉದ್ಭವ” ನಾಟಕದ ಎರಡು ಪ್ರದರ್ಶನ ನೀಡಲಾಯಿತು. ಇದು ಕೂಡ ರಂಗಾಸಕ್ತರ ಗಮನ ಸೆಳೆಯಿತು.

1999 ರಲ್ಲಿ ವಿಭಿನ್ನ ರೀತಿಯಲ್ಲಿ ಸವದತ್ತಿಯ ಕೋಟೆಯ ಆವರಣವನ್ನೇ ರಂಗಸಜ್ಜಿಕೆ ಯನ್ನಾಗಿ ಪರಿವರ್ತಿಸಿ, ದೆಹಲಿ ನಾಟಕ ಶಾಲೆಯ ಪದವೀಧರ ದಿ. ಜಯತೀರ್ಥ ಜೋóಶಿಯವರ ನಿರ್ದೇಶನದಲ್ಲಿ “ಗುಲಾಮನ ಸ್ವಾತಂತ್ರ್ಯಯಾತ್ರೆ” ಎನ್ನುವ ನಾಟಕವನ್ನು ಪ್ರದರ್ಶಿಸಿದಾಗ, ನಾಡಿನ ಬಹುತೇಕ ರಂಗಾಸಕ್ತರು ಹಾಗೂ ರಂಗಕರ್ಮಿಗಳು ಬಂದು ನಾಟಕವನ್ನು ವೀಕ್ಷಣೆ ಮಾಡಿದ್ದು ಈ ತಂಡದ ಹೆಮ್ಮೆಯ ಸಂಗತಿ. ಮತ್ತು ಆ ನಾಟಕ 11 ಪ್ರದರ್ಶನಗಳನ್ನು ಕಂಡು, ಕಲಬುರಗಿಯ ದೂರದರ್ಶನ ಕೇಂದ್ರದಿಂದ ಪ್ರಸಾರಗೊಂಡಿತು.

2000ನೇ ಇಸ್ವಿಯಲ್ಲಿ “ಪರಸಗಡ ನಾಟಕೋತ್ಸವ” ಹೆಸರಿನಲ್ಲಿ ನಾಟಕೋತ್ಸವವನ್ನು ಪ್ರಾರಂಭಿಸಿ ಬೇರೆ ಬೇರೆ ನಾಟಕಗಳ ಪ್ರದರ್ಶನಗಳನ್ನು ಕೋಟೆಯ ಆವರಣದಲ್ಲಿ ಆಯೋಜಿಸಲಾಯಿತು. ಇದರಲ್ಲಿ ಧಾರವಾಡ, ಬೆಳಗಾವಿ, ಗದಗದ ಹವ್ಯಾಸಿ ಕಲಾ ತಂಡಗಳು ಭಾಗವಹಿಸಿದವು. ಹಾಗೂ ಹೆಗ್ಗೋಡಿನ ನೀನಾಸಂ, ಸಾಣೆ ಹಳ್ಳಿಯ ಶಿವಸಂಚಾರ, ಚಿತ್ರದುರ್ಗದ ಜಮುರಾ ಕಲಾಲೋಕ ತಂಡಗಳು ಕೂಡ ಇವರ ಕರೆಗೆ ಓಗೊಟ್ಟು ಇಲ್ಲಿನ ರಂಗಪ್ರೇಮಿಗಳಿಗೆ ತಮ್ಮ ಪ್ರಯೋಗಾತ್ಮಕ ನಾಟಕದ ಸವಿಯನ್ನು ಉಣಬಡಿಸಿದವು. ಇದರ ಪ್ರತಿಫಲ ಕಳೆದ 23 ವರ್ಷಗಳಿಂದ ಸಂಸ್ಥೆ ತನ್ನ ರಂಗಸೇವಾ ಕಾಯಕವನ್ನು ಮುಂದುವರೆಸಿದೆ.

ಪ್ರತಿ ವರ್ಷ ಹೊಸ ನಾಟಕ ತಯಾರಿಸುವ ಸಂಸ್ಥೆ ಇಲ್ಲಿಯ ವರೆಗೆ 21 ಬೇರೆ ಬೇರೆ ನಾಟಕಗಳ 45ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಸವದತ್ತಿ ಹಾಗೂ ಬೇರೆ ಊರುಗಳಲ್ಲಿ ನೀಡಿದೆ. ಹಾಗೂ ಹೊರಗಿನ ತಂಡಗಳ 60ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನವನ್ನು ಸವದತ್ತಿಯಲ್ಲಿ ಆಯೋಜಿಸಿದೆ.

ಪರಸಗಡ ನಾಟಕೋತ್ಸವದಲ್ಲಿ ಇದುವರೆಗೂ ಪ್ರದರ್ಶನಗೊಂಡ ಪ್ರಮುಖ ನಾಟಕಗಳು
1)ಮೃಚ್ಛಕಟಿಕ, 2) ಉದ್ಭವ, 3) ಗುಲಾಮನ ಸ್ವಾತಂತ್ರ್ಯ ಯಾತ್ರೆ, 4) ಮಿಂಚು, 5) ಮೆಟ್ಟಲೇರುವ ಗಡಿಬಿಡಿಯಲ್ಲಿ ಕೊಡೆ ಮರೆತವರು, 6) ಪ್ರತಿಶೋಧ, 7) ದಾರಿಯಾವುದಯ್ಯಾ ವೈಕುಂಠಕೆ, 8) ಹಸಿರೆಲೆ ಹಣ್ಣೆಲೆ, 9) ಚೋರ ಚರಣದಾಸ, 10) ಹಸ್ತಾಂತರ, 11) ಬಿಳುಪಿನ ಹೆಣ, 12) ತ್ಯಾಗವೀರ ಶಿರಸಂಗಿ ಲಿಂಗರಾಜರು, 13) ತೇರು, 14) ಗಾಂಧಿಯ ಅಂತಿಮ ದಿನಗಳು, 15) ಕಲ್ಲೂರ ವಾಡೆದಾಗ, 16) ಮಣ್ಣು, 17) ಶಿವರಾತ್ರಿ, 18) ಕದಡಿದ ನೀರು 19)À “ಗತಿ” 20) ಹುಚ್ಚರ ಸಂತೆ” 21) “ರುದ್ರಸರ್ಜನ ಪ್ರೇಮ ಪ್ರಸಂಗ” 22)“ಸಾಯೋಆಟ” 23)“ಮೋಳಿಗೆ ಮಾರಯ್ಯ” 24)“ಚೋರ ಚರಣದಾಸ” 25) “ಶರಣ ಪಥ ಕ್ರಾಂತಿ ಪಥ” 26) “ನವಿಲೂರ ನಿಲ್ದಾಣ” 27) À “ಆದರೇಶಿ ಪರದೇಶಿ ಆದ” ಇನ್ನೂ ಹತ್ತು ಹಲವು ಇವೆ.

ಹೊಸ ರೀತಿಯ ಪ್ರಯೋಗಾತ್ಮಕ ಜೊತೆಗೆ ಸ್ಥಳೀಯ ಲೇಖಕರ ಕಥೆಗಳನ್ನು ಕೂಡ ನಾಟಕಗಳನ್ನಾಗಿಸಿ ಅದಕ್ಕೊಂದು ಸ್ವರೂಪ ನೀಡುತ್ತಿರುವ “ರಂಗ ಆರಾಧನಾ ಸಂಸ್ಥೆ”ಯು ಇನ್ನೂ ಉತ್ತರೋತ್ತರವಾಗಿ ಬೆಳೆಯಬೇಕು ಇದಕ್ಕೆ ಸ್ಥಳೀಯ ಸಂಸ್ಥೆಗಳು ರಂಗಾಸಕ್ತರೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಲಿ. ಇಂದು ಅಳಿಯುತ್ತಿರುವ ರಂಗ ಚಟುವಟಿಕೆಗಳು ನಿರಂತರವಾಗಿ ಇಂತಹ ಪ್ರತಿಭೆಗಳ ಮೂಲಕ ರಂಗ ಕಲೆಯನ್ನು ಉಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಝಕೀರ್ ನದಾಫರಿಗೆ ಪ್ರಶಸ್ತಿ ಸಿಕ್ಕಿಂದು ನಿಜಕ್ಕೂ ಅಭಿನಂದನಾರ್ಹ. ಇವರ ಸಂಘಟನೆ ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ ಇವರಿಗೆ ಇನ್ನೂ ಹೆಚ್ಚು ಪ್ರಶಸ್ತಿ ಗೌರವಗಳು ಲಭಿಸುವಂತಾಗಲಿ ಎಂದು ಆಶಿಸುವೆ.

-ವೈ. ಬಿ. ಕಡಕೋಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x