ಲಲಿತ ಪ್ರಬಂಧ

ಸಾಲದ ವಿಷಯ (ಭಾಗ 1): ಸೂರಿ ಹಾರ್ದಳ್ಳಿ


ಕೆಲವರಿದ್ದಾರೆ, ಅವರಿಗೆ ಒಣ ಪ್ರತಿಷ್ಠೆ. ಯಾವುದೇ ಕಿವಿ ಸಿಕ್ಕರೂ, ಅದು ಮರದ್ದೇ ಆಗಿರಬಹುದು, ಮಣ್ಣಿನದ್ದೇ ಆಗಿರಬಹುದು, ಬೊಗಳೆ ಬಿಡುತ್ತಾರೆ: ತಾನು ಯಾವ ಸಾಲವನ್ನೂ ಮಾಡಿಲ್ಲ, ಹಾಲಪ್ಪನಿಂದ ಕೂಡಾ. ಹಾಗಾಗಿ ಸಾಲ ಕೊಟ್ಟವರು ಯಾರೂ ತನ್ನ ಮನೆಯ ಬಾಗಿಲನ್ನು ತಟ್ಟುವಂತಿಲ್ಲ, ಎಂದು, ಎದೆ ತಟ್ಟಿಕೊಂಡು, ತಲೆ ಎತ್ತಿಕೊಂಡು! ಆದರೆ ಹಾಗೆ ಯಾರೂ ಹೇಳುವಂತಿಲ್ಲ. ಯಾಕೆಂದರೆ ಸಿನೆಮಾ ಹಾಡೊಂದು ಹೇಳುತ್ತದೆ, ‘ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯಾ ಜನ್ಮವ ತಳೆದು…’ ಎಂದು. ಸಾಲ ತೀರಿದ ನಂತರವೇ ಮರುಜನ್ಮದ ಸರಣಿಯಿಂದ ಬಿಡುಗಡೆ ಎಂಬುದು ನಂಬಿಕೆ. ಆದರೆ ನಾವು ಅದೆಷ್ಟು ಸಾಲ ಮಾಡಿದ್ದೇವೆ, ಯಾರಿಂದ ಸಾಲ ಪಡೆದಿದ್ದೇವೆ, ಬಡ್ಡಿ-ಚಕ್ರಬಡ್ಡಿ ಎಷ್ಟು, ಎಂದು ಸಾಲ ತೀರುತ್ತದೆ, ಯಾವ ಅಕೌಂಟಿಗೆ ಹಣ ಕಟ್ಟಬೇಕು ಎಂಬ ದಾಖಲಾತಿಗಳು ನಮಗೆ ಲಭ್ಯವಾಗುವುದಿಲ್ಲ. ಅಂತೂ ಸಾಯುವ ತನಕವೂ ಸಾಲ ಮರುಪಾವತಿ ಮಾಡುತ್ತಲೇ ಇರಬೇಕು: ಒಂದು ರೀತಿಯ ಜೀತದಾಳುಗಳ ಹಾಗೆ. ಸರಕಾರ ಜೀತಪದ್ಧತಿಯನ್ನು ಕಾನೂನಿನಂತೆ ಬಹಿಷ್ಕರಿಸಿದರೂ ದೇವರ ಸಾಲವನ್ನು ತೀರಿಸುವ ವಿಧಾನವನ್ನು ತಿಳಿಸಿಲ್ಲ. ನಾವು ತೀರಿಸಲಾಗದ ಸಾಲವನ್ನು ನಮ್ಮ ಹೆಂಡತಿಯೋ, ಮಗನೋ, ಅಥವಾ ನಮ್ಮ ಉತ್ತರಾಧಿಕಾರಿಯೋ ತೀರಿಸಬಹುದೇ? ಅದೂ ವಿಷದವಾಗಿಲ್ಲ. ಅಂತೆಯೇ ನಮ್ಮ ಸುಪ್ರೀಂ ಕೋರ್ಟು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ, ಗಂಡ ಮಾಡಿದ ಸಾಲವನ್ನು ಅವನ ಕುಟುಂಬದವರು ತೀರಿಸಬೇಕೆಂದೇನೂ ಇಲ್ಲ, ಎಂದು ಸ್ಪಷ್ಟಪಡಿಸಿದೆ. 

ನಾವು ನಮಗರಿವಿಲ್ಲದಂತೆ ಸಾಲದ ಕಂತುಗಳನ್ನು ಕಟ್ಟುತ್ತಲೇ ಇರುತ್ತೇವೆ: ಇಂಡೈರೆಕ್ಟ್ ಟ್ಯಾಕ್ಸ್ ಅನ್ನುತ್ತಾರಲ್ಲ, ಹಾಗೆ. ಕಂತುಗಳನ್ನು ಪಡೆಯುವ ಕಂತುಪಿತರ ಕ್ಯೂನಲ್ಲಿ ಹೆತ್ತವರು, ಮಕ್ಕಳು, ಹೆಂಡತಿ/ಗಂಡ, ನಮ್ಮ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಹೀಗೆ. ಕಂತುಗಳನ್ನು ಕಟ್ಟುವಾಗ ನಾವು ಕೊಡುವ ನಾಮಧೇಯಗಳು ವಿವಿಧ: ತೆರಿಗೆ, ಸಹಾಯ, ಋಣ, ಹೀಗೆ.

ಮತ್ತೆ ಸಿನೆಮಾ ಹಾಡಿಗೆ ಬರೋಣ. ನಾವು ಸಾಲ ತೀರಿಸುವ ವಿಧಾನವಾದರೂ ಏನು? ಹಿಂದಿನ ಸಾಲ ಎಂದರೆ ಹಿಂದಿನ ಜನ್ಮದ ಸಾಲ ಎಂದು ನಾವು ಅರ್ಥೈಸಬಹುದಾದರೆ ನಾವು ಹಿಂದಿನ ಜನ್ಮದತ್ತ, ಅದಕ್ಕಿಂತ ಹಿಂದಿನ ಜನ್ಮಗಳತ್ತ ಒಂದು ಇಣುಕುನೋಟ ಬೀರಬೇಕು. ಕುತೂಹಲಿಯಾದ ನಾನು ಗಡ್ಡಬಿಟ್ಟವರೊಬ್ಬರ ಹತ್ತಿರ ಹೋಗಿ, ‘ನೋಡಿ ರಾಯರೇ, ನಾನು ನನ್ನ ಹಿಂದಿನ ಜನ್ಮಕ್ಕೆ ಕರೆದೊಯ್ಯಿರಿ. ಟಿವಿಗಳಲ್ಲಿ ನಾನು ನೋಡಿದ್ದೇನೆ. ಪೂರ್ವಜನುಮದಲ್ಲಿ ನಾನು ಯಾರು ಯಾರಿಂದ ಸಾಲ ತೆಗೆದುಕೊಂಡಿದ್ದೇನೆ, ಯಾರಿಗೆ ಸಾಲ ಕೊಡಬೇಕು, ಯಾರು ನನಗೆ ಸಾಲದ ಬಾಕಿ ಉಳಿಸಿಕೊಂಡಿದ್ದಾರೆ, ದಯವಿಟ್ಟು ತಿಳಿಸಿ, ನಾನು ಇವುಗಳಿಂದ ಋಣಮುಕ್ತನಾಗಬೇಕಿದೆ,’ ಎಂದು ವಿನಂತಿಸಿಕೊಂಡೆ. ಅವರು ನನ್ನಿಂದ ಒಂದಿಷ್ಟು ಹಣ ಕಿತ್ತುಕೊಂಡರು. ನನ್ನನ್ನ ಮಲಗಿಸಿ, ಅದೇನೇನೋ ಹೇಳಿದರು, ಮಾಡಿದರು. ಸುಮಾರು ಹೊತ್ತಿನ ನಂತರ ಎಂದರು, ‘ನೀನು ಹಿಂದಿನ ಜನ್ಮದಲ್ಲಿ ಶ್ವಾನವಾಗಿದ್ದೆ. ಬೇರೆಯವರನ್ನು ಕಂಡರೆ ಬೊಗಳುವ, ಕಚ್ಚುವ ಬುದ್ಧಿ ಇತ್ತು. ಬರೀ ಜಗಳಗಂಟ ನಾಯಿ ನೀನು. ನಿನ್ನ ಆಹಾರವನ್ನು ನೀನೂ ತಿನ್ನುತ್ತಿರಲಿಲ್ಲ, ಬೇರೆಯವರಿಗೂ ತಿನ್ನಲು ಬಿಡುತ್ತಿರಲಿಲ್ಲ. ಆ ಕಾಲು ಕೆದರಿ ಹೊಡೆದಾಟಕ್ಕೆ ಹೋಗುವ ಬುದ್ಧಿಯಿಂದಾಗಿಯೇ ನೀನು ಇಂದಿನ ಜನ್ಮದಲ್ಲಿ ಬೇರೆವರನ್ನು ವಿಡಂಬಿಸುವ, ಕೆದಕಿ, ಕೆದಕಿ ದೋಷ ಹುಡುಕುವ, ತಮಾಷೆ ಮಾಡುವ, ಹಾಸ್ಯಾಸ್ಪದ, ಅಲ್ಲಲ್ಲ, ಹಾಸ್ಯಬರೆಹಗಾರನಾಗಿದ್ದೀಯ,’ ಎಂದು ವಿವರಿಸಿದರು. ನಾನು ಬಾಲ ಮುದುರಿಕೊಂಡು ಅಲ್ಲಿಂದ ಹೊರಬಂದೆ.

ಎಲ್ಲಾ ನಗೆಬರೆಹಗಾರರೂ ಹಿಂದಿನ ಜನ್ಮದಲ್ಲಿ ನಾಯಿಯೇ ಆಗಿರಬೇಕಂದೇನೂ ಇಲ್ಲ, ಮಾತ್ರವಲ್ಲ, ಇಂದಿನ ಜನ್ಮದಲ್ಲಿ ನಾಯಿಯಾಗಿದ್ದು ಮುಂದಿನ ಜನ್ಮದಲ್ಲಿ ಹಾಸ್ಯಲೇಖಕನಾಗುತ್ತಾನೆ ಎಂದೂ ಹೇಳಲಾಗದು. ಕೆಲವರು ಹಿಂದಿನ ಜನ್ಮದಲ್ಲಿ ಕತ್ತೆಯೂ ಆಗಿರಬಹುದು, ಹಂದಿಯೂ ಆಗಿರಬಹುದು, ಅಥವಾ…. ಬಿಡಿ, ಇದು ನನ್ನ ಲೇಖನದ ವಿಷಯವಲ್ಲ. ಹಾಗಾಗಿ ನೀವು ಇದನ್ನು ಓದದಿದ್ದರೂ ಪರವಾಗಿಲ್ಲ.

ಅಂದರೆ ನಮ್ಮ ಪೂರ್ವಜನ್ಮವು ಮನುಷ್ಯಜನ್ಮವಾಗಿರಲೇಬೇಕೆಂದೇನೂ ಇಲ್ಲ. ಮುಂದಿನ ಜನ್ಮದಲ್ಲಿ ಕೂಡಾ ಲಿಂಗ ಬೇರೆಯಾಗಬಹುದು, ಪ್ರಾಣಿಗಳೂ ಆಗಬಹುದು ಎಂದು ತಿಳಿದಾಗ ನನಗೆ ಸಾಲ ತೀರಿಸುವ ವಿಷಯ ಮತ್ತಷ್ಟು ಗೋಜಲಾಗತೊಡಗಿತು.

ನಾನು ಆನಂತರ ಗಜಗಂಭೀರವಾಗಿ ಯೋಚಿಸತೊಡಗಿದೆ. ‘ನಾನೀಗ ಸೀರಿಯಸ್ ಥಿಂಕಿಂಗ್‍ನಲ್ಲಿದ್ದೇನೆ, ವಿಸಿಟರ್ಸ್ ಇರಲಿ, ನೀನೂ ಕೂಡಾ ಬಂದು ಡಿಸ್ಟರ್ಬ್ ಮಾಡಬಾರದು,’ ಎಂದು ಹೆಂಡತಿಗೆ ಆರ್ಡರಿಸಿದೆ. ಅವಳು ಎಂದಿನಂತೆ ಹೂಂಕರಿಸಿದಳು, ‘ಶುರುವಾಯ್ತು ಇವರದ್ದು,’ ಎಂದು, ಎಂದಿನಂತೆ. ಅವಳು ಮೊದಲು ಹಂದಿಯಾಗಿರಬಹುದು, ಆ ಹಂದಿಯ ಗುಣಗಳು ಇಂದಿನ ಜನ್ಮದಲ್ಲಿಯೂ ಮುಂದುವರಿದಿರಬಹುದು, ಎಂದು ನಾನು ಅರ್ಥಮಾಡಿಕೊಂಡೆ. ಕತ್ತಲೆಯ ಕೋಣೆಯಲ್ಲಿ ಕುಳಿತು, ಮೂಗು ತುರಿಸಿಕೊಂಡು, ತಲೆ ಕೆದರಿಕೊಂಡು, ಕಣ್ಣು ಮುಚ್ಚಿಕೊಂಡು ಯೋಚಿಸಿದೆ, ಯೋಚಿಸಿದೆ, ಮಿದುಳಿಗಿಷ್ಟು ಚಿಂತನಾ ಆಹಾರ ಒದಗಿಸಿದೆ, ನಾನು ಯಾರು ಯಾರ ಋಣ ತೀರಿಸಬೇಕು ಎಂದು. ನಾನು ನನ್ನ ಸಮಾಜದ ಋಣಕ್ಕೆ ಭಾದ್ಯ, ಅದರಲ್ಲಿಯೂ ವಿದ್ಯೆ ಕಲಿಸಿದ ನನ್ನ ಗುರುಗಳ ಋಣಕ್ಕೆ. ಯಾವ ಬ್ರಾಕೆಟಿನಲ್ಲಿ ಬರುವ ಗುರುಗಳು? ಅಕ್ಷರ ಮಾತ್ರಂ ಕಲಿಸಿದಾತಂ ಗುರುಃ ಎನ್ನುತ್ತಾರೆ. ಅಂತೆಯೇ ನಾನು ನನ್ನ ಹೆತ್ತವರ ಋಣಗಳನ್ನು ತೀರಿಸಲು ಅಸಾಧ್ಯ; ಮುಂದಿನ ಜನ್ಮದಲ್ಲಿಯೂ ಕೂಡಾ, ನಾನು ಮತ್ತೆ ಮಾನವ ಜೀವಿಯಾಗಿಯೇ ಹುಟ್ಟಿದಲ್ಲಿ. ಹೀಗೆಲ್ಲಾ ಯೋಚಿಸಿದಾಗ ಕಾರ್ಲೈಲ್ ಹೇಳಿದ ಮಾತು ನೆನಪಿಗೆ ಬಂತು, ‘ಸಾಲವೆಂಬುದು ತಳವಿಲ್ಲದ ಸಮುದ್ರ,’ ಎಂಬುದು ಅದು. ಒಳಗಿಳಿದರೆ ಕೆಳಗೆ, ಕೆಳಗೆ, ಪಾತಾಳಕ್ಕೆ ಹೋದರೂ ಕೊನೆಯಿಲ್ಲ. ಎಲ್ಲರೂ ಸಾಲದು, ಸಾಲದು ಎನ್ನುತ್ತಾ ಕೈಗಡ ಕೇಳುತ್ತಾ, ಇರುವವರೇ. ನಮ್ಮ ಮನೆಯಲ್ಲಿಯೇ ಸಾಲದ ಪ್ರವೃತ್ತಿ ಬೀಜಾಂಕುರವಾಗುತ್ತದೆ. ಪಕ್ಕದ ಮನೆಯಿಂದ ಕಾಫಿಪುಡಿ ಸಾಲ, ಚಾಕು ಸಾಲ, ಸಕ್ಕರೆ ಸಾಲ, ಹೀಗೆ ಕೆಲವೊಮ್ಮೆ ಮರುಪಾವತಿಸಲಾಗದ, ಕೆಲವೊಮ್ಮೆ ಮರೆಯಬಹುದಾದ, ಸಾಲದ ಶೂಲಕ್ಕೆ ಪಾದಾರ್ಪಣೆ ಮಾಡುತ್ತೇವೆ. ಅದು ಬೆಳೆದು ಹೆಮ್ಮರವಾಗುತ್ತದೆ.

ಅದಕ್ಕಾಗಿಯೇ ಈ ಸಿನೆಮಾ ಹಾಡು, ‘ಸಾಕು ಎನ್ನುವವನೆ ಸಾಹುಕಾರನು, ಇನ್ನೂ ಬೇಕು ಎನ್ನುವ ಧನಿಕ ಬಡವ ಭಿಕಾರಿ,’ ಎಂಬುದದು. ಬ್ಯಾಂಕಿನವರು ತೀರಿಸಬೇಕಾಗದ ಸಾಲ ಕೊಡುತ್ತಾರೆ, ಅದನ್ನು ಪೂಜಾರಿ ಸಾಲ ಎಂದು ಕರೆಯುತ್ತಾರೆ, ರೇಶನ್ ಕಾರ್ಡ್ ಸಾಲ ಎಂದೂ ಹೇಳುತ್ತಾರೆ. ಅದರ ಲಾಭ್ಯದ ಲಭ್ಯತೆ ಲಕ್ಕಿದ್ದವರಿಗೆ ಮಾತ್ರ ಆಗುತ್ತದೆ. ತೋಡದ ಬಾವಿಗೆ ಬಾವಿ ಇದೆ ಎಂದು ಸರ್ಟಿಫಿಕೇಟ್ ಕೊಟ್ಟು, ಕೊಟ್ಟ ಸಾಲದ ಅರ್ಧ ಹಣ ನುಂಗಿದ ಬ್ಯಾಂಕ್ ಮೆನೇಜರನು ಆ ಸಾಲ ಪಡೆದ ರೈತ ತನ್ನ ಬಾವಿ ಕಳವಾಗಿದೆ ಎಂದು ಪೊಲೀಸರಿಗೆ ದೂರುಕೊಟ್ಟು ಪಜೀತಿಗೆ ಎಲ್ಲರನ್ನೂ ಸಿಲುಕಿಸಿದ ಕತೆ ನೀವು ಓದಿದ್ದೀರಿ.

ಸಾಲ ಎಂದಾಕ್ಷಣ ನೀವು ಮೂಗು ಮುರಿಯಬೇಕಿಲ್ಲ. ಅಂತಹ ವೇಂಕಟರಮಣ ಸ್ವಾಮಿಯೇ ಜಗತ್ತಿನ ಬಹು ದೊಡ್ಡ ಸಾಲಗಾರ. ಅವನು ಕುಬೇರನಿಂದ ಮಾಡಿದ ಸಾಲ ಇನ್ನೂ ತೀರೇ ಇಲ್ಲ, ಎಂದಾದರೂ ತೀರೀತೆಂಬ ಆಸೆಯೂ ಇಲ್ಲ! ಸಂತೋಷವಾಯಿತೇ? ನಮ್ಕ ಸರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಸಾಲದ ವಿಷಯ ಕೇಳಿದರೆ ಎದೆ ಬಡಿತ ನಿಂತರೂ ನಿಂತೀತೇ!

ನಾನಿರುವ ಲೇಔಟ್‍ನ ಗೋಡೆಗಳಲ್ಲಿ, ವಿದ್ಯುತ್ ಕಂಬಗಳ ಮೇಲೆ ಸ್ವಲ್ಪ ದಿನ ಪೋಸ್ಟರುಗಳು ಕಾಣಿಸುತ್ತಿದ್ದವು. ‘ನೀಡ್ ಲೋನ್’ ಎಂದು. ಕೆಳಗೆ ಹತ್ತು ಸಂಖ್ಯೆಗಳ ಫೋನ್ ನಂಬರ್ ಇತ್ತು. ನನ್ನ ಹಿಂದಿನ ಜನ್ಮದ ಬುದ್ಧಿ ಜಾಗೃತವಾಯಿತು. ಆ ಸಂಖ್ಯೆಗೆ ದೂರವಾಣಿ ಮಾಡಿ, ‘ಎಷ್ಟು ಸಾಲ ಬೇಕು, ಯಾವ ಶ್ಯೂರಿಟಿ ಕೊಡುವಿರಿ,’ ಎಂದೆಲ್ಲ ವಿಚಾರಿಸಿದೆ. (ಕಂಪನಿಯ ಫೋನ್ ಬಳಸಿ, ಸ್ವಂತದ್ದಲ್ಲ). ‘ಇಲ್ಲ ಸರ್, ನಾವೇ ನಿಮಗೆ ಸಾಲ ಕೊಡುತ್ತೇವೆ, ಬೇಕಿದ್ದರೆ ಕೇಳಿ,’ ಎಂದುತ್ತರ ಬಂತು. ಅವನಿಗೆ ಭಾಷಾ ಜ್ಞಾನ ‘ಸಾಲ’ದು. ಇಲ್ಲವಾದರೆ ಸಾಲ ಬೇಕಾಗಿದೆಯೇ? ಎಂದು ಪೋಸ್ಟರ್ ಅಂಟಿಸುತ್ತಿದ್ದ. ಸಾಲದ ವೃತ್ತದಲ್ಲಿ ಸಾಲಿಗ ಗಟ್ಟಿಯಾಗಿದ್ದರೆ ವಸೂಲಿ ಮಾಡಿಕೊಳ್ಳುತ್ತಾನೆ, ಸಾಲ ತೆಗೆದುಕೊಂಡವನು ಜೋರಾಗಿದ್ದರೆ ಕೊಟ್ಟವನಿಗೆ ಚೆಂಬು, ಹಣೆಯ ಮೇಲೆ ಮೂರು ಅಡ್ಡ ಗೆರೆಗಳ ನಾಮ!

ಟಿವಿಯಲ್ಲಿ ಬಂದ ಒಂದು ಕಿರು ಚಿತ್ರ. ಒಬ್ಬನ ಸಂದರ್ಶನ ನಡೆಯುತ್ತಿತ್ತು. ‘ನಿಮ್ಮ ಪರಿಚಯ ಮಾಡಿಕೊಡಿ,’ ಎಂದರು ಸಂದರ್ಶನಕಾರರು.

ಮುಂದಿರುವ ಮೇಜಿನ ಮೇಲೆಯೇ ಕಾಲು ಚಾಚಿ ಕುಳಿತು ಆ ವ್ಯಕ್ತಿ ಎಂದ, ‘ನಾನು ಮೂರು ಪೂರ್ತಿ ಕೊಲೆ ಮಾಡಿದ್ದೇನೆ, ಹತ್ತು ಅರ್ಧ ಕೊಲೆ ಮಾಡಿದ್ದೇನೆ, ಎಂಟು ಜನರ ಕಾಲು ಮುರಿದಿದ್ದೇನೆ’ ಎಂದು.

ಸಂದರ್ಶನಕಾರರು ತೃಪ್ತರಾಗಿ ಎನ್ನುತ್ತಾರೆ, ‘ವೆರಿ ಗುಡ್. ನಿಮ್ಮ ಗುಣಗಳು ನಮಗೆ ಸಂತೋಷ ತಂದಿವೆ. ನಿಮ್ಮನ್ನು ಈಗಲೇ ನಮ್ಮ ಬ್ಯಾಂಕಿನ ರಿಕವರಿ ಏಜೆಂಟರೆಂದು ನೇಮಕ ಮಾಡಿಕೊಳ್ಳುತ್ತೇನೆ,’ ಎಂದು.

ಎಂತಹ ಕಾಲ ಬಂತು? ಸಾಲ ಮಾಡಿ, ಸಾಲ ಮಾಡಿ ಎಂದು ಉತ್ತೇಜಿಸು, ನಮ್ಮನ್ನು ಸಾಲದ ಶೂಲಕ್ಕೆ ಸಿಲುಕಿಸುವವರೇ ಅಧಿಕರಾಗಿದ್ದಾರೆ ಈಗ. ಯಾರು ಸಾಲಗಾರರಲ್ಲ? ನಮ್ಮ ದೇಶವೇ ಸಾಲದಲ್ಲಿ ಮುಳುಗಿರುವಾಗ ದೇಶವಾಸಿಗಳಾದ ನಾವೇನು ಕಡಿಮೆಯೇ? ಶಿಶುಪಾಲ ವಧೆಯಲ್ಲಿ ಇರುವ ಸಂಸ್ಕøತದ ಒಂದು ಮಾತು ನೆನಪಿಗೆ ಬಂತು, ‘ಯಾವಜ್ಜೀವೇತ್ ಸುಖಂ ಜೀವೇತ್ ಋಣಂ ಕೃತ್ವಾ ಘೃತಂ ಪಿಬೇತ್. ಭಸ್ಮೀಭೂತಸ್ಯ ದೇಹಸ್ಯ, ಪುನರಾಗಮನಃ ಕುತಃ,’ ಎಂಬುದು. ಸುಖವಾಗಿ ಇರೋಕೆ ಕಲಿತುಕೊಳ್ಳಿ, ಸಾಲಮಾಡಿಯಾದರೂ ತುಪ್ಪ ತಿನ್ನಿ. ಸುಟ್ಟು ಹಿಡಿ ಬೂದಿಯಾಗುವ ದೇಹವು ಪುನಃ ಹುಟ್ಟುತ್ತದೆ ಎಂದೇಕೆ ನಂಬುತ್ತೀರಿ? ಆಗ ತುಪ್ಪ ತಿನ್ನುವುದೇ ವೈಭವದ ಸಂಕೇತವಾಗಿತ್ತು. ಆದರೆ ಈಗ? ಸೈಟುಗಳು (ಲವ್ ಎಟ್ ಫಸ್ಟ್ ಸೈಟ್ ಎನ್ನುವುದೊಂದು ಮಾತು, ಆದರೆ ಈಗ ಕಾಲ ಬದಲಾಗಿದೆ. ಮೊದಲು ಸೈಟ್, ನಂತರ ಲವ್), ಕಾರು, ಮನೆ, ವಿದೇಶ ಪ್ರಯಾಣ, ಅಧಿಕಾರ, ಹಸುಗಳ ಆಹಾರ, ಪಿಜ್ಜಾ, ಹೀಗೆ ಎಲ್ಲವನ್ನೂ ತಿನ್ನುವವರಿದ್ದಾರೆ. ತಿನ್ನುವ ಈ ರೀತಿಯ ಸುಖವನ್ನೂ ಹಣದಿಂದಲೇ ಪಡೆಯಬಹುದು. ಕುರುಡು ಕಾಂಚಾಣ ಕುಣಿಯುವ, ಕಾಲಿಗೆ ಬಿದ್ದೋರ ತುಳಿಯುವ ಕಲಿಗಾಲ ಇದು.

ನಾವು ಮರೆಯುವುದು ಸರ್ವಜ್ಞನ ಈ ಮಾತುಗಳನು, ‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಬಂತು ಸೆಳೆವಾಗ ಕಿಬ್ಬದಿಯ ಕೀರು ಮುರಿದಂತೆ,’ ಎಂಬುದನ್ನು.

ಸಾಲದ ಹಣ ಕೈಗೆ ಬರುವ ಮೊದಲೇ ತಿರುಕನ ಕನಸನ್ನು ಕಾಣುತ್ತೇವೆ. ಕೈಗೆ ಚೆಕ್/ಕ್ಯಾಷ್ ತಲುಪುವುದೆಂದು ತಿಳಿಯುತ್ತಲೇ ಮೊತ್ತ ಮೊದಲು ಮಾಡಬೇಕಾದುದೇನು ಎಂದು ಲೆಕ್ಕ ಹಾಕುತ್ತೇವೆ. ತನ್ನ ಗಂಡ ಸಂಜೆ ಹೊಸ ಸೀರೆ ತರುತ್ತಾನೆಂದು ಹಳೆಯ ಸೀರೆಯನ್ನು ಸುಟ್ಟುಹಾಕಿದ ಗೃಹಿಣಿಯಂತೆ ಆಡುತ್ತೇವೆ. ಕೈಯಲ್ಲಿ ಕಾಂಚಾಣ ಬಿದ್ದರೆ ನಮ್ಮ ಗತ್ತೇ ಬೇರೆ, ನಮ್ಮ ವರ್ತನೆಯೇ ಬೇರೆ, ನಮ್ಮ ಮಾತಿನ ದಾಟಿಯೇ ಬೇರೆ, ನಡಿಗೆಯ ಠೀವಿಯೇ ಬೇರೆ!

ಕಾಸು ಖರ್ಚಾಗಲು ಸಮಯ ಬೇಕೇ? ‘ಬೇಡಿಕೆ’ ಎಂಬ ಬಕಾಸುರ ಬಾಯಿ ತೆರೆದುಕೊಂಡೇ ಇರುತ್ತಾನೆ. ನೋಡನೋಡುತ್ತಿದ್ದಂತೆಯೇ ಕೈ ಖಾಲಿ. ಆದರೆ ಬಕಾಸುರನ ಹೊಟ್ಟೆ ತುಂಬಿಲ್ಲ. ಅಂದಿನಿಂದ ಸಾಲದ ಮರುಪಾವತಿ ಶುರು. ಎಷ್ಟು ಕಾಲ ಕಳೆದರೂ ಅದರ ಅವಧಿ ವರ್ಧಿಸುತ್ತಿರುವಂತೆನಿಸುತ್ತದೆಯೇ ವಿನಃ ಮುಗಿಯುವುದಿಲ್ಲ. ಸಾಲ ತೀರಿಸಲು ಮತ್ತೆ ಸಾಲ ಮಾಡಬೇಕು, ಕೊಡುವವರಿದ್ದರೆ!

ಸಾಲ ರಕ್ಕಸನ ಹೊಸ ಅವತಾರಗಳಲ್ಲಿ ಕ್ರೆಡಿಟ್ ಕಾರ್ಡ್ ಕೂಡಾ ಒಂದು. ಇದನ್ನು ಪ್ಲಾಸ್ಟಿಕ್ ಮನಿ ಎಂದು ಕರೆಯುತ್ತಾರೆ. ಜೇಬು ಖಾಲಿಯಿರುವಾಗಲೂ ನಾವು ವೆಚ್ಚ ಮಾಡಬಹುದೆಂಬುದು ಕ್ರೆಡಿಟ್ ಕಾರ್ಡುಗಳು ತೋರಿಸಿಕೊಡುತ್ತವೆ. ನಾವು ಈ ಕಾರ್ಡುಗಳನ್ನು ಕೊಂಡು ನಾವು ಹೇಗೆ ಸಾಲದ ಬಲೆಯಲ್ಲಿ ಹೇಗೆ ಬೀಳುತ್ತೇವೆ ಎಂಬುದಕ್ಕೆ ಈ ಕೆಳಗಿನದನ್ನು ಓದಿ.

ನಿಮ್ಮ ಟೆಲೆಫೋನ್ ಗುಣುಗುಣಿಸುತ್ತದೆ (ವಿಶೇಷವಾಗಿ ನೀವು ರಾಜ್ಯದ ಹೊರಗಿದ್ದು, ರೋಮಿಂಗ್ ಚಾರ್ಜನ್ನು ಕಟ್ಟುವ ಸಂದರ್ಭದಲ್ಲಿ), ಮೃದು ದನಿಯ ಮಹಿಳೆಯೊಬ್ಬಳು ನಿಮ್ಮನ್ನು ಹಾರೈಸಿ, ನಿಮಗೆ ಈ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡನ್ನು ಕೊಡುತ್ತೇವೆ, ನಿಮ್ಮ ಅಮೂಲ್ಯವಾದ ಸಮಯದಲ್ಲಿ ಕೆಲ ನಿಮಿಷಗಳನ್ನು ನಮಗಾಗಿ ಕೊಡಬಲ್ಲಿರಾ? ಎಂದು.

ನೀವು ಹೂಂ ಎಂದರೆ ಸಾಕು, ಸ್ವರ್ಗವೇ ನಿಮ್ಮ ಕಣ್ಣೆದುರು ಬಂದಿಳಿಯುತ್ತದೆ. ಒಂದು ಕಾರ್ಡು ನಿಮಗೆ, ಇನ್ನೊಂದು ನಿಮ್ಮ ಪತ್ನಿಗೆ, ವಿದೇಶದಲ್ಲಿ ಕೂಡಾ ಬಳಸಬಹುದು, ಕ್ರೆಡಿಟ್ ಪಾಯಿಂಟ್ ಕೊಡುತ್ತೇವೆ, ಕಡಿಮೆ ಬೆಲೆಯಲ್ಲಿ ಅನೇಕ ವಸ್ತುಗಳನ್ನು ಕೊಳ್ಳಬಹುದು, ಉಚಿತ ವಿಮಾನ ಪ್ರಯಾಣ ಟಿಕೆಟ್, ರೆಸಾರ್ಟ್‍ಗಳಲ್ಲಿ ಡಿಸ್ಕೌಂಟ್, ಇತ್ಯಾದಿ. ಅಬ್ಬಬ್ಬಾ, ಕೊನೆಗೂ ಬ್ಯಾಂಕುಗಳಿಗೆ ಜನಸೇವೆಯ ಬುದ್ಧಿ ಬಂದಿದೆ ಎಂದುಕೊಳ್ಳಬೇಡಿ. ನೀವು ಸಕಾಲದಲ್ಲಿ ಹಣ ಪಾವತಿಸದಿದ್ದರೆ ಅವರು ವಿಧಿಸುವ ದಂಡ ಅಥವಾ ಶುಲ್ಕ ಅಥವಾ ಬಡ್ಡಿಯೇ ಅವರ ಲಾಭ. ಹಾಗಾಗಿ ನನ್ನಂಥವರಿಂದ ಅವರಿಗೆ ಕಮಾಯಿ ಇಲ್ಲ. ನಮಗೆ ಕೊಡುವ ಕಾರ್ಡುಗಳು ವ್ಯರ್ಥ! 

*****

(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಸಾಲದ ವಿಷಯ (ಭಾಗ 1): ಸೂರಿ ಹಾರ್ದಳ್ಳಿ

Leave a Reply

Your email address will not be published. Required fields are marked *