ಮನೆ ಮಂದಿಯೆಲ್ಲಾ ಔತಣಕ್ಕೆಂದು ಹೊರ ಹೋಗಿದ್ದರು. ಅದ್ಯಾಕೋ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಹಾಡುವ ಉಮೇದು, ನಾಟಕದ ಡೈಲಾಗುಗಳನ್ನು ದೊಡ್ಡದಾಗಿ ಹೇಳುವ ಉತ್ಸಾಹ ನನ್ನೊಳಗಿನಿಂದ ಉಕ್ಕಿ ಬರುತ್ತದೆ. ಯಾಕೆಂದರೆ ನನ್ನ ಹಾಡು ಕೂಡಾ ’ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಅನ್ನುವ ಮಾದರಿಯದ್ದು. ಇವತ್ತಂತೂ ಯಾವ ಹಾಡು ಕೂಡಾ ಎರಡು ಗೆರೆಯಷ್ಟುದ್ದಕ್ಕೆ ನೆನಪಿಗೇ ಬರಲಿಲ್ಲ. ಕೊನೆಗೆ ’ಯಾವ ಹಾಡ ಹಾಡಲೀ.. ಎಂದು ಯೋಚಿಸುವಾಗಲೇ ಮುಂದಿನ ಲೈನ್ ನೆನಪಿಗೆ ಬಂದು ’ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲೀ..’ ಅಂತ ಧ್ವನಿ ತೆಗೆದು ಹಾಡಿದೆ. ’ಸದ್ಯಕ್ಕೆ ನೀನು ಬಾಯಿ ಮುಚ್ಚಿದರೆ ನೆಮ್ಮದಿ’ ಅನ್ನುವವರು ಯಾರೂ ಇಲ್ಲದ ಕಾರಣ ನನ್ನ ಧ್ವನಿ ಏರು ಶೃತಿಯಲ್ಲಿ ಏರಿಳಿಯುತ್ತಿತ್ತು. ಆದರೆ ಬರೀ ಹಾಡುತ್ತಾ ಕುಳಿತರೆ ಸಾಕೇ .. ಕೆಲಸವೂ ಸಾಗಬೇಡವೇ.. ಅಂಗಳದ ಸುತ್ತ ಮುತ್ತ ಇದ್ದ ಹೂವಿನ ಗಿಡದ ಕಳೆ ತೆಗೆಯುತ್ತಿದ್ದೆ. ’ಹಾ..ಇದೇನಿದು ಘೋರ ಅನ್ಯಾಯ.. ಹೀಗಾಗುವುದುಂಟೇ.. ಅಕಟಕಟಾ ಅಯ್ಯೋ..’ ಎಂಬ ನಾಟಕದ ಉದ್ಗಾರ ನನ್ನ ಗಂಟಲಿನಿಂದ ಅನಾಯಾಸವಾಗಿ ಹೊರ ಬಿತ್ತು. ಮೊನ್ನೆಯಷ್ಟೇ ಗೆಳತಿಯೊಬ್ಬಳ ಮನೆಯಿಂದ ಬಹಳ ಅಪರೂಪದ್ದೆಂದು ತಂದು ನೆಟ್ಟ ಸುಂದರ ಹೂವುಗಳನ್ನು ಬಿಡುವ ಗಿಡ ಒಂದು ಇದ್ದಕ್ಕಿದ್ದಂತೆ ಕಾಣೆಯಾಗಿತ್ತು.
ನಮ್ಮ ತುಂಟ ನಾಯಿ ಒಮ್ಮೊಮ್ಮೆ ಗಿಡಗಳ ಹತ್ತಿರ ಹಾರಾಡುವ ಕೀಟಗಳನ್ನು ಹಿಡಿಯಲೆಂದು ಹಾರಿ ಹೂ ಕುಂಡಗಳನ್ನು ಬೀಳಿಸುವುದೋ, ಇಲ್ಲಾ.. ಸಣ್ಣ ಕಡ್ಡಿಯಂತಿರುವ ಗಿಡವಾದರೆ ಅದನ್ನು ಕಿತ್ತು ಜಗಿಯುತ್ತಾ ಕೂರುವುದೋ ಮಾಡುತ್ತಿತ್ತು. ಹಾಗೇನಾದರೂ ಆಗಿದ್ದರೆ ಆ ಗಿಡದ ಕಳೇಬರ ಆದರೂ ಕಾಣಬೇಕಲ್ಲ..ಅತ್ತಿತ್ತ ನೋಡಿದೆ.. ಎಲ್ಲಾದರು ಬುಡ ಸಮೇತ ಕಿತ್ತು ಬಿದ್ದಿದೆಯಾ.. ಉಹುಂ.. ಎಲ್ಲೂ ಇಲ್ಲ. ಜೊತೆಗೆ ಆ ಗಿಡವನ್ನು ನೆಟ್ಟ ಹೂವಿನ ಕುಂಡ ಕೂಡಾ ಇಟ್ಟ ಜಾಗದಿಂದ ಕೊಂಚವೂ ಕದಲದೆ ಅಲ್ಲೇ ಇತ್ತು. ಹಾಗಿದ್ದರೆ ಇದು ನಾಯಿಯ ಕೆಲಸವಲ್ಲ ಎಂದು ನನ್ನ ಶೆರ್ಲಾಕ್ ಹೋಮ್ಸ್ ನಿಂದಲೂ ಪ್ರಖರವಾದ ಪತ್ತೇದಾರಿ ಬುದ್ಧಿ ತೀರ್ಮಾನ ಕೊಟ್ಟಿತು.
ನಾಯಿ ಅಲ್ಲದಿದ್ದರೆ ಮತ್ಯಾರು..? ಮನೆಯಲ್ಲಿ ಗಿಡಗಳ ಬುಡಕ್ಕೆ ಬಂದು ಅವುಗಳ ಕಾಳಜಿ ವಹಿಸುವವರು ಅಂದರೆ ನಾನು ಮತ್ತು ನನ್ನತ್ತೆ ಮಾತ್ರ. ಪತಿರಾಯರು ಗಿಡಗಳನ್ನು ಮನೆಗೆ ತಂದು ಹಾಕುವಷ್ಟರ ಮಟ್ಟಿಗೆ ಹೂಗಿಡಗಳ ಪ್ರೇಮಿ. ಮತ್ತೆ ಅದರ ಬಳಿ ಸುಳಿಯುವುದು ಅದರಲ್ಲಿ ಹೂ ಬಿಟ್ಟಾಗಲೇ.. ಮಾವನಂತೂ ಈಗಿನ ಹೊಸ ತರದ ಹೂವುಗಳನ್ನೋ, ಹೂಗಿಡಗಳನ್ನೊ ನೋಡುತ್ತಲೇ ಇರಲಿಲ್ಲ. ಅವರ ಕಣ್ಣಿಗೆ ಹೂಗಳೆಂದರೆ ಪೂಜೆಗೆ ದೊರೆಯುವ ದಾಸವಾಳ, ಕೇಪಳ.ಕಣಗಿಲೆಯಂತವು ಮಾತ್ರ. ಅವರೆಲ್ಲಾ ಕೆಲವು ದಿನಗಳಿಂದ ಗಿಡಗಳ ಸುದ್ದಿಗೇ ಬಂದಿರಲಿಲ್ಲ. ಹಾಗಾಗಿ ಅವರನ್ನು ಕೇಳಿಯೂ ಪ್ರಯೋಜನ ಇಲ್ಲ. ಈಗ ಕಾಣೆಯಾಗಿದ್ದ ಗಿಡ ಬಹಳ ನಾಜೂಕಿನದ್ದಾಗಿತ್ತು. ಬಹುಷಃ ನಾನು ದಿನಾ ಅದನ್ನು ನೋಡದೇ ಅದು ಚಟ್ಟಿಯಲ್ಲಿ ಕೊಳೆತು ಮಣ್ಣಾಗಿ ಹೋಯಿತೇನೋ.. ಇನ್ನು ಮುಂದೆ ದಿನಕ್ಕೊಮ್ಮೆಯಾದರೂ ಗಿಡಗಳ ಅಟೆಂಡೆನ್ಸ್ ತೆಗೆಯಬೇಕೆಂದು ತೀರ್ಮಾನ ಮಾಡಿ ಬಹಳ ಬೇಸರದ ಮುಖ ಹೊತ್ತು ಕಳೆ ತೆಗೆಯುವ ಕೆಲಸ ಮುಂದುವರಿಸಿದೆ.
ಹಿಂದಿನಿಂದ ಇದ್ದಕ್ಕಿದ್ದಂತೆ ’ ಇದ್ದೀಯಾ’ ಎಂಬ ಸ್ವರ ಕೇಳಿತು.ತಿರುಗಿ ನೋಡಿದರೆ ಪಕ್ಕದ ಮನೆಯ ಶಾಲಿನಿ .. ಅರ್ರೇ.. ನನ್ನನ್ನು ಕಂಡ ಮೇಲೂ ಇದ್ದೀಯಾ ಎಂದು ಪ್ರಶ್ನೆ ಹಾಕುತ್ತಾಳೆ ಅಂದರೆ ನಾನು ಅವಳ ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಜೀವಿಯಾಗಿರಬೇಕು. ಅಂದರೆ ಇದರರ್ಥ ನಾನು ಮಾಡುತ್ತಿದ್ದ ಡಯಟ್ ಫಲಕಾರಿ.. ಅಥವಾ ಅವಳ ಕಣ್ಣುಗಳ ಕನ್ನಡಕದ ಪವರ್ ಕಡಿಮೆಯಾಗಿದೆಯೋ ಏನೋ.. ಯಾವುದಕ್ಕೂ ತಿಳಿದುಕೊಳ್ಳುವುದು ಒಳ್ಳೆಯದು ಎಂದುಕೊಂಡು ಅವಳ ಕಡೆ ತಿರುಗಿ ಯಾಕೇ ಇಷ್ಟು ದೊಡ್ಡ ಜೀವ ಕಾಣಿಸ್ತಾ ಇಲ್ವಾ ನಿಂಗೆ’ ಎಂದೆ.. ಅದಕ್ಕವಳು ’ಕಾಣಿಸದೇ ಏನು? ನೀನು ಮಂಡಿಯೂರಿ ಗಿಡದ ಬುಡಕ್ಕೆ ತಲೆ ಇಟ್ಟಿದ್ದು ನೋಡಿ ಇದ್ದೀಯಾ.. ಅಂತ ಕನ್ ಫರ್ಮ್ ಮಾಡೋಕೆ ಕೇಳಿದ್ದು .. ಈಗೆಲ್ಲ ಚಿಕ್ಕ ಚಿಕ್ಕ ಪ್ರಾಯಕ್ಕೇ ಏನೋನೋ ಆಗುತ್ತಮ್ಮ’ ಎಂದು ಅಪಶಕುನ ನುಡಿದಳು ಈ ಶಕುನದ ಹಕ್ಕಿ …
ಅವಳು ಹಾಗೆ ಹೇಳುವಾಗಲೇ ನನಗೆ ನೆನಪಿಗೆ ಬಂದಿದ್ದು.. ನನ್ನ ಹೂಕುಂಡದಿಂದ ಮಾಯವಾದ ಎಳೆ ಹರೆಯದ ಹಸಿರೆಲೆಗಳ ಹೂವಿನ ಗಿಡ.. ಶೋಕವನ್ನು ಹೇಳಿಕೊಳ್ಳಲು ಒಂದು ಕಿವಿ ದೊರಕಿತು ಅಂತಾದರೆ ಮನುಷ್ಯನಿಗೆ ದುಃಖದ ಮೂಟೆಗಳೆಷ್ಟಿದ್ದರೂ ಸಂತೋಷವೇ.. ಶುರು ಆಯ್ತು ನನ್ನ ಬೈರಿಗೆ.. ಮೊದಲಿಗೆ ನನ್ನ ಗಿಡದ ವರ್ಣನೆ ಮಾಡಿದೆ..ಅದನ್ನು ನಾನು ಸಂಪಾದಿಸಲು ಬಂದ ಕಷ್ಟ.. ಅದರ ಲಾಲನೆ ಪಾಲನೆಯಲ್ಲಿ ಕಳೆದ ಸಮಯ ಇದೆಲ್ಲವನ್ನೂ ಹೇಳುತ್ತಾ ಹೋದೆ.
ಅವಳು ಬಹು ದೊಡ್ಡ ಸಸ್ಯಪ್ರೇಮಿ.. ಅಂದರೆ ಬೇರೆಯವರ ಮನೆಯಲ್ಲಿ ಯಾವ ಸಸ್ಯ ಕಂಡರೂ ಅವಳಿಗೆ ಪ್ರೇಮ ಉಕ್ಕಿ ಆ ಗಿಡದಿಂದ ಗೆಲ್ಲು ತುಂಡು ಮಾಡಿ ಹೊತ್ತೊಯ್ಯುತ್ತಾಳೆ. ಅದಕ್ಕಾಗಿ ಗಿಡ ನೆಟ್ಟವರ ಅನುಮತಿಯ ಅಗತ್ಯವೂ ಅವಳಿಗಿಲ್ಲ. ಹಾಗೇನಾದರೂ ನೀವು ಅದರ ಬಗ್ಗೆ ಪ್ರಶ್ನೆ ಮಾಡಿದಿರೋ .. ಅವಳು ಕೂಡಲೇ ತತ್ವಜ್ಞಾನಿಯಾಗುತ್ತಾಳೆ. ಮಾನವ ಹುಟ್ಟುವ ಮೊದಲೇ ಹುಟ್ಟಿದ ಸಸ್ಯಗಳ ಒಡೆತನ ಮಾನವನಿಗೆ ಬರುವುದುಂಟೇ.. ಹಾಗಾಗಿ ಅವುಗಳು ಪ್ರಕೃತಿಯ ಶಿಶುಗಳು.. ಯಾರು ಬೇಕಾದರೂ ಲಾಲನೆ ಪಾಲನೆ ಮಾಡಬಹುದು ಎಂಬ ಥಿಯರಿಯನ್ನು ಅವರು ತಮ್ಮ ಕಿವಿಬಾಯಿಗಳನ್ನು ಮುಚ್ಚುವವರೆಗೂ ಹೇಳುತ್ತಲೇ ಇರುತ್ತಾಳೆ. ಹಾಗಾಗಿ ಯಾರೂ ಅವಳ ಸಸ್ಯಪ್ರೇಮಕ್ಕೆ ಎದುರಾಡುವವರಿರಲಿಲ್ಲ.
ಈಗ ನನ್ನ ಮಾತನ್ನು ಆಸಕ್ತಿಯಿಂದಲೇ ಕೇಳುತ್ತಿದ್ದಳು.
ಮಾತೆಲ್ಲ ಮುಗಿದ ಮೇಲೆ ಅವಳ ಬಾಯಿಯಿಂದ ಹನಿಯೊಂದು ಜಾರಿತು. ಅಂತಿಂತಾ ಹನಿಯಲ್ಲ ಅದು ಮುತ್ತಿನಂತಹ ಹನಿ.. ’ಅಯ್ಯೋ ಆ ಗಿಡಾನಾ.. ಅದು ನಮ್ಮಲ್ಲಿದೆ ಬಿಡು.. ಮೊನ್ನೆ ನಿಮ್ಮ ಮನೆಗೆ ಬಂದಿದ್ದೆ.. ನೀನು ಇರಲಿಲ್ಲ.. ನಿಮತ್ತೆಯ ಹತ್ತಿರ ಮಾತಾಡ್ತಿರಬೇಕಾದ್ರೆ ಅವ್ರು ಆ ಗಿಡ ತೋರಿಸಿದರು… ಬದಿಯಿಂದ ಒಂದು ಗೆಲ್ಲು ತೆಗಿಯೋಣಾ ಅಂತ ಗಿಡ ಮುಟ್ಟಿದೆ.. ಅಷ್ಟೇ.. ಅದು ಬೇರು ಸಮೇತ ಕಿತ್ಕೊಂಡು ಬಂದು ಬಿಡ್ತು.. ಹೇಗೂ ನಮ್ಮನೇಲಿ ಬದುಕುತ್ತಲ್ಲ. ಆಗ ನಿಂಗೂ ಗಿಡ ಕೊಟ್ಟರಾಯ್ತು ಅಂತ ಹಾಗೇ ತೆಗೊಂಡು ಹೋಗಿದ್ದೆ ಅಷ್ಟೇ.. ಅದರಲ್ಲಿ ಇನ್ನೊಂದು ಹೊಸ ಗೆಲ್ಲು ಬರ್ಲಿ.. ಆಗ ನಿಂಗೂ ಕೊಡ್ತೀನಿ ಎಂದಳು ಕೊಡುಗೈ ದಾನಿಯಂತೆ.. ನನ್ನದೇ ಗಿಡವನ್ನು ಕೇಳದೇ ಕಿತ್ತೊಯ್ದಿದ್ದು ಅಲ್ಲದೇ ನನಗೇ ಅದರ ಗೆಲ್ಲನ್ನು ದಾನ ಮಾಡುವ ಅವಳ ಉದಾರ ಚಿಂತನೆಗೆ ನಗಬೇಕೋ ಅಳಬೇಕೋ ತಿಳಿಯದೆ ’ ಹೂವು ಹೊರಳುವುದು ಸೂರ್ಯನ ಕಡೆಗೆ ನಮ್ಮ ದಾರಿ ಈಗ ಶಾಲಿನಿ ಮನೆಗೆ’ ಅಂತ ಹಾಡು ಗುನುಗುತ್ತಾ ಎದ್ದು ನಿಂತೆ.
*****
ಬರಹ ಚೆಂದ ಇದೆ.
ಬರಹ ಚೆಂದವಿದೆ….. ಇಷ್ಟವಾಯಿತು…….ಅಭಿನಂದನೆಗಳು…
Hi Ani,
Nice Article 🙂
ನಿಮ್ಮ ಮನೆ, ನಿಮ್ಮ ಮನೆಯ ಹೊ-ಗಿಡ-ಮರಗಳು ನೆನಪಾದವು 🙂
ಹೆಸರು ಸೂಕ್ತವಾಗಿದೆ "ಸಸ್ಯ ಪ್ರೇಮಿ: ಅನಿತಾ ನರೇಶ್ ಮಂಚಿ"…. 🙂
ಚೆನ್ನಾಗಿದೆ ಮೇಡಂ ನಿಮ್ಮ ಲೇಖನ ಅದರಲ್ಲೂ ಈ ಸಾಲು ನನಗೆ ತುಂಬಾ ಇಷ್ಟವಾಯಿತು ನನ್ನದೇ ಗಿಡವನ್ನು ಕೇಳದೇ ಕಿತ್ತೊಯ್ದಿದ್ದು ಅಲ್ಲದೇ ನನಗೇ ಅದರ ಗೆಲ್ಲನ್ನು ದಾನ ಮಾಡುವ ಅವಳ ಉದಾರ ಚಿಂತನೆಗೆ ನಗಬೇಕೋ ಅಳಬೇಕೋ ತಿಳಿಯದೆ